'ಕೆಂಡಸಂಪಿಗೆ' ಸಿನೆಮಾ ವಿಮರ್ಶೆ 
ಸಿನಿಮಾ ವಿಮರ್ಶೆ

ಬೂದಿ ಮುಚ್ಚಿದ ಕೆಂಡ; ಕೆಂಡವಿದೇಕೊ, ಸಂಪಿಗೆ ಇದೇಕೊ

ಕನ್ನಡದ ಜಾಣ್ಮೆಯ ನಿರ್ದೇಶಕರಲ್ಲಿ ಒಬ್ಬರಾದ ಸೂರಿ ತಳವೂರಿದ ಜನಪ್ರಿಯ ನಟರ ಬಲೆಯಿಂದ ಹೊರಬಂದು ಮತ್ತೆ ಹೊಸಬರ (ನಟರ) ಒಡಗೂಡಿ ಥ್ರಿಲ್ಲರ್ ರೋಡ್ ಸಿನೆಮಾ...

ಕನ್ನಡದ ಜಾಣ್ಮೆಯ ನಿರ್ದೇಶಕರಲ್ಲಿ ಒಬ್ಬರಾದ ಸೂರಿ ತಳವೂರಿದ ಜನಪ್ರಿಯ ನಟರ ಬಲೆಯಿಂದ ಹೊರಬಂದು ಮತ್ತೆ ಹೊಸಬರ (ನಟರ) ಒಡಗೂಡಿ ಥ್ರಿಲ್ಲರ್ ರೋಡ್ ಸಿನೆಮಾ 'ಕೆಂಡಸಂಪಿಗೆ ಪಾರ್ಟ್ ೨ ಗಿಣಿಮರಿ ಕೇಸ್' ನಿರ್ದೇಶಿಸಿದ್ದಾರೆ. ಏನಿದು ಪಾರ್ಟ್ ೨ ಎಂಬ ಪ್ರಶ್ನೆಗೂ ಉತ್ತರ ನೀಡಿದ್ದಾರೆ. ಸಾಮಾನ್ಯವಾಗಿ ಹುಡುಕಾಟ, ನುಣುಚಿಕೊಳ್ಳುವುದು, ತಲೆತಪ್ಪಿಸಿಕೊಳ್ಳುವುದು ರೋಡ್ ಸಿನೆಮಾಗಳ ಪ್ರಧಾನ ವಸ್ತು. ಸೂರಿ ತಮ್ಮ ಸಿನೆಮಾದಲ್ಲಿ ಆಯ್ಕೆ ಮಾಡಿಕೊಂಡಿರುವ ವಸ್ತು ಯಾವುದು? ಈ ಪ್ರಯಾಣದಲ್ಲಿ ನೂತನ ಕಥೆಯನ್ನೇನಾದರೂ ನಿರ್ದೇಶಕರು ಹೇಳಿದ್ದಾರೆಯೇ? ಪ್ರೇಕ್ಷಕನನ್ನು ಪ್ರಯಾಣದಲ್ಲಿ ಜೊತೆಜೊತೆಗೆ ಕೊಂಡೊಯ್ದಿದ್ದಾರೆಯೇ? ಪ್ರಯಾಣ ಸುಖಕರವಾಗಿದೆಯೇ? ವಿಷಮವಾಗಿದೆಯೇ?

ಎರಡು ಟ್ರ್ಯಾಕ್ ಗಳಲ್ಲಿ ನಡೆಯುವ ಕಥೆಗಳನ್ನು ಬೆಸೆದಿರುವ ನಿರ್ದೇಶಕನ ಜಾಣ್ಮೆ ಸಿನೆಮಾದಲ್ಲಿ ಎದ್ದು ಕಾಣುತ್ತದೆ. ನಕಲಿ ಎನ್ಕೌಂಟರ್ ಸ್ಪೆಷಲಿಸ್ಟ್ ಡಿಸಿಪಿ ಸೂರ್ಯಕಾಂತ್ (ಪ್ರಕಾಶ್ ಬೆಳವಾಡಿ)ನೇತೃತ್ವದಲ್ಲಿ ಡ್ರಗ್ ಮಾಫಿಯಾದ ಮೇಲೆ ದಾಳಿ ನಡೆಸಿ, ವಶಪಡಿಸಿಕೊಂಡ ಮಾಲಿನಲ್ಲಿ ಬಹಳಷ್ಟು ಕಬಳಿಸಿ ಡೀಲ್ ಮಾಡುವ ಮೂವರು ಪೊಲೀಸರ ತಂಡ ಹಣವನ್ನು ಬಚ್ಚಿಡಲು ಯತ್ನಿಸುತ್ತದೆ. ಆದರೆ ಅವರಲ್ಲಿ ಒಬ್ಬ ಎಸ್ ಐ, ಡಿಸಿಪಿ ವಿರುದ್ಧ ಮಾತನಾಡಿ ಅವರ ಕೆಂಗಣ್ಣಿಗೆ ಗುರಿಯಾಗುತ್ತಾನೆ. ಮತ್ತೊಂದು ಎಳೆಯಲ್ಲಿ ಸಿರಿವಂತೆ ಶಂಕುತಲಾ ಶೆಟ್ಟಿ, ಮಗಳು ಗೌರಿ(ಮಾನ್ವಿತಾ) ಮತ್ತು ತನ್ನ ಕಚೇರಿಯಲ್ಲೇ ಕೆಲಸ ಮಾಡುವ ಬಡ ನೌಕರ ಯುವಕ ರವಿ (ವಿಕ್ಕಿ) ಜೊತೆಗಿನ ಪ್ರೀತಿಯನ್ನು ಸಹಿಸದೆ, ಡಿಸಿಪಿ ಸೂರ್ಯಕಾಂತ್ ಗೆ ಇದಕ್ಕೆ ಅಂತ್ಯ ಹಾಡಲು ಸೂಚಿಸುತ್ತಾಳೆ. ಡಿಸಿಪಿ ಕುತಂತ್ರದಿಂದ ರವಿ ಬಂಧನಕ್ಕೊಳಗಾಗುತ್ತಾನೆ. ಆದರೆ ತಪ್ಪಿಸಿಕೊಳ್ಳುವ ಧಾವಂತದಲ್ಲಿ ಎಸ್ ಐ ಒಬ್ಬನನ್ನು ಕೊಲೆ ಮಾಡಿ ಓಡಿಹೋಗಲು ಗೌರಿಯ ಸಹಾಯ ಕೇಳುತ್ತಾನೆ. ಗೌರಿ, ರವಿಗೆ ಸಹಾಯ ಮಾಡಲು ಜೊತೆಗೂಡಿ ಇಬ್ಬರೂ ಊರಿಂದೂರಿಗೆ ತಲೆತಪ್ಪಿಕೊಂಡು ಓಡುತ್ತಾರೆ. ರವಿ ನಿಜವಾಗಿಯೂ ಅಪರಾಧ ಮಾಡಿದ್ದಾನ? ರವಿಗೆ-ಗೌರಿಗೆ ಏನಾಗುತ್ತದೆ?

ಬಿಗಿಯಾದ ಥ್ರಿಲ್ಲರ್ ಚಿತ್ರಕಥೆಯನ್ನು ಹೆಣೆದಿರುವ ಸೂರಿ ಅದನ್ನು ಅಷ್ಟೇ ವೇಗವಾಗಿ ನಿರೂಪಿಸುತ್ತಾ ಸಾಗುತ್ತಾರೆ. ಈ ಬ್ರೆತ್ ಲೆಸ್ ನಿರೂಪಣೆ ಎಷ್ಟು ವೇಗವಾಗಿದೆಯೆಂದರೆ ಪೋಲಿಸರಿಂದ ತಪ್ಪಿಸಿಕೊಂಡು ಚಿತ್ರದುರ್ಗ, ದಾವಣಗೆರೆ, ಬೆಳಗಾವಿ ಹೀಗೆ ಊರೂರು ಅಲೆಯುವ ರವಿ ಮತ್ತು ಗೌರಿಯವರ ಜರ್ನಿ ಪ್ರೇಕ್ಷನಿಗೆ ಅಷ್ಟು ಸುಲಭವೇ ಎಂದೆನಿಸಿದರು ಮತ್ತೆ ಯೋಚನೆಗೆ ಅವಕಾಶವೇ ನೀಡದಂತೆ ಸಿನೆಮಾ ಮುಂದುವರೆಯುತ್ತದೆ. ಗನ್ ತೋರಿಸಿ ಲೀಲಾಜಾಲವಾಗಿ ಕಾರುಗಳನ್ನು ಕದಿಯುವ ಗೌರಿ, ಹೋಟೆಲ್ ನಲ್ಲಿ ಜಾಗ ಸಿಗಲು ಕಷ್ಟವಾದರೂ ಹೇಗೋ ಕೊನೆಗೆ ಹೋಟೆಲ್ ಒಂದಕ್ಕೆ ಹೊಕ್ಕುವುದು, ನೈಜತೆಗೆ ಸ್ವಲ್ಪ ದೂರವಾಯಿತೆಲ್ಲವೇ ಎಂದು ಯೋಚಿಸುವ ವೇಳೆಗೆ ಮತ್ತೆ ಯಾವುದೋ ಹೊಸ ಊರಿಗೆ ಅವರಿಬ್ಬರ ಆಗಮನವಾಗಿರುತ್ತದೆ. ಈ ಜರ್ನಿಯಲ್ಲಿ ಪೊಲೀಸರು ಹುಡುಕುವುದು (ಇವರನ್ನು) ಅಥವಾ ಇವರಿಬ್ಬರೂ  ಹೋಟೆಲ್ ಹುಡುಕುವುದು ಬಿಟ್ಟರೆ, ಸಾಮಾನ್ಯವಾಗಿ ರೋಡ್ ಸಿನೆಮಾದಲ್ಲಿ ಕಾಣಬರುವ ಬೆರಗಿನ-ಅನಿರೀಕ್ಷಿತ ಘಟನೆಗಳು ಯಾವೂ ಕಂಡುಬರದೆ ಕೆಂಡಸಂಪಿಗೆಯ ಘಮಲ ಕ್ಷೀಣಿಸುತ್ತಾ ಹೋಗುತ್ತದೆ. ಹೀಗೆಂದುಕೊಳ್ಳುವ ಹೊತ್ತಿಗೆ ಸತ್ಯ ಹೆಗಡೆಯವರ ಕೈಚಳಕವೋ, ನಿಜ ಸ್ಥಳಗಳಲ್ಲಿ ಅಂದರೆ ಕೊಚ್ಚೆ ಮೋರಿಗಳಲ್ಲಿ, ಬೆಟ್ಟದ ಮೇಲೆ ಚಿತ್ರೀಕರಣ ನಡೆಸುವ ಸೂರಿಯವರ ಸಿನೆಮಾ ವೃತ್ತಿಪರತೆಯೋ ಮುಂದೇನಾಗಬಹುದು ಎಂಬ ನಿರೀಕ್ಷೆಗೆ ಪ್ರೇಕ್ಷಕನನ್ನು ಜಾರಿಸುತ್ತದೆ. ರೋಡ್ ಸಿನೆಮಾಗೆ ಆಯ್ಕೆ ಮಾಡಿಕೊಂಡ ಹಿನ್ನಲೆಯ ಕಥಾವಸ್ತು ಅಥವಾ ಪೊಲೀಸ್ ವ್ಯವಸ್ಥೆಯನ್ನು ಸಿನೆಮಾದಲ್ಲಿ ನಿರ್ವಹಿಸಿರುವ ರೀತಿ ಅಪೂರ್ಣವಾಗಿದೆಯಲ್ಲವೇ ಎಂದು ಚಿಂತಿಸುವಷ್ಟರಲ್ಲಿ, ದೀಪು ಎಸ್ ಕುಮಾರ್ ಅವರ ಎಡಿಟಿಂಗ್ ಕೈಚಳಕವೇನೊ, ಇವರಿಬ್ಬರು ಕೊನೆಯ ಊರು ಬೆಳಗಾವಿಗೆ ಬಂದಿರುತ್ತಾರೆ. ಮತ್ತೆ ಹಿನ್ನಲೆಯಲ್ಲಿ ಮೂಡುವ ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಗೀತರಚನೆಯ ಹರಿಕೃಷ್ಣ ಸಂಗೀತದ ಹಾಡುಗಳು ಮನಸ್ಸಿಗೆ ಮುದ ನೀಡುತ್ತಾ ಸಾಗುತ್ತವೆ. ಅಲ್ಲದೆ ಈ ವೇಗದಲ್ಲಿ ಮಾನ್ವಿತಾ ಮತ್ತು ವಿಕ್ಕಿ ಇವರ ನಟನೆ ಮಂಕಾಗಿ ಕಾಣುತ್ತದೆ. ಕೊಲೆ ಮಾಡಿ ಪೊಲೀಸರಿಂದ ತಪ್ಪಿಸಿಕೊಂಡ ಹೋಗುವ ಮುಗ್ಧರಲ್ಲಿ ಮೂಡಬೇಕಾದ ಆ ಭಯ, ಆಘಾತದ ಭಾವನೆಗಳು ಅಷ್ಟಾಗಿ ಪರಿಣಾಮಕಾರಿಯಾಗಿಲ್ಲ. ಆದರೂ ಹೀಗೆ ಬಹಳ ಚತುರತೆಯಿಂದ, ತಂತ್ರಜ್ಞರನ್ನು ಬಳಸಿಕೊಂಡು, ಯಾವ ಕ್ಷಣಕ್ಕೂ ಕುತೂಹಲದಿಂದ ಪ್ರೇಕ್ಷಕರು ವಿಚಲಿತರಾಗದಂತೆ, ಉಸಿರು ಬಿಗಿ ಹಿಡಿದು ನೋಡುವಂತೆ, ಯೋಚನೆ ಮಾಡಲು ಪ್ರೇರೇಪಿಸದಂತೆ ಬಹಳ ಜಾಣ್ಮೆಯಿಂದ ನಿರ್ದೇಶಕ ಸೂರಿ ಸಿನೆಮಾ ಕಟ್ಟಿಕೊಡುತ್ತಾರೆ. ಇದು ಸೂರಿಯವರ ಅತ್ಯಂತ ಪ್ರಯೋಗಾತ್ಮಕ ಪ್ರಯತ್ನ ಎನ್ನುವುದರಲ್ಲಿ ಎರಡು ಮಾತಿಲ್ಲ. ಸೂರಿಯ ಫ್ಯಾನ್ ಗಳು ಕೆಂಡದಲ್ಲೂ ಸಂಪಿಗೆಯಲ್ಲೂ ತಂಪಾಗಬಹುದು.

ಮುಗ್ಧ ಪ್ರೇಮ, ಅದಕ್ಕೆ ತಡೆಯಾಗುವ ವರ್ಗ ತಾರತಮ್ಯ ಮತ್ತು ಭ್ರಷ್ಟ ಅಧಿಕಾರಶಾಹಿ ಭಾರತೀಯ ಚಿತ್ರರಂಗದ ಅತಿ ನೆಚ್ಚಿನ ಕಥಾವಸ್ತು. ಮೂರನ್ನು ಬೆಸೆದು ಥ್ರಿಲ್ಲರ್ ರೋಡ್ ಸಿನೆಮಾ ನೀಡುವಲ್ಲಿ ಸೂರಿ ಯಶಸ್ಸು ಕಂಡಿದ್ದರೂ, ಈ ವೇಗದ-ಉಸಿರು ಬಿಗಿ ಹಿಡಿದ ನಿರೂಪಣೆಯಲ್ಲಿ ರೋಡ್ ಸಿನೆಮಾಗಳಲ್ಲಿ ಅಥವಾ ಯಾವುದೇ ಸಿನೆಮಾಗಳಲ್ಲಿ ಅಗತ್ಯವಾದ ಆ 'ಮೌನ' ಬಲಿಯಾಗುತ್ತದೆ. ಭ್ರಷ್ಟ ಪೊಲೀಸರೆಂದರೆ ಕೇವಲ ಕೆಟ್ಟ ಮಾತುಗಳಲ್ಲಿ, ಕನ್ನಡದಲ್ಲಿ ಬೈದುಕೊಂಡು, ಕಿರುಚಾಡುವವರೇ ಎಂದು ಸಾಮಾನ್ಯವಾಗಿ ಚಿತ್ರಿಸಲ್ಪಡುವ ಸಂಪ್ರದಾಯವನ್ನು ಮುರಿದಿರುವ ಸೂರಿ ನಯ ನಾಜೂಕಿನ, ಇಂಗ್ಲಿಶ್ ಮಾತನಾಡುವ ಕ್ರೂರಿ ಡಿಸಿಪಿ (ಪ್ರಕಾಶ್ ಬೆಳವಾಡಿ) ಪಾತ್ರವನ್ನು ಚಿತ್ರಿಸುತ್ತಾ ಇಷ್ಟವಾದರೆ, ಪ್ರೇಮದ ವಿಷಯಕ್ಕೆ ಬಂದಾಗ ಅದೇ ಸಾಂಪ್ರದಾಯಕ ಪಾತ್ರಗಳಿಗೆ ಜೋತು ಬಿದ್ದಿದ್ದಾರೆ. ಅಲ್ಲದೆ ಸಿನೆಮಾ ಮಂದಿರದಿಂದ ಹೊರಬಿದ್ದಾಗ ಅಪೂರ್ಣತೆಯ ಭಾವ ಆವರಿಸಿಕೊಳ್ಳುತ್ತದೆ ಅಥವಾ ಇದು ಬೇಕಂತಲೇ ೨೦೧೬ ರಲ್ಲಿ ಬರಲಿರುವ 'ಕೆಂಡಸಂಪಿಗೆ - ಪಾರ್ಟ್ ೧ ಕಾಗೆಬಂಗಾರ ಕೇಸ್' ನೋಡಲೆಂದು ಮಾಡಿರುವ ಜಾಣತನವೇನೋ!

ಎಷ್ಟೇ ಜಾಣತನವಿದ್ದರೂ  ಕಮರ್ಷಿಯಲ್ಲಾಗಿ ಈ ಚಿತ್ರದ ಭವಿಷ್ಯವೇನು ಎಂಬುದು ಕೆಂಡದಂಥ ಪ್ರಶ್ನೆ...

- ಗುರುಪ್ರಸಾದ್
guruprasad.n@kannadaprabha.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ ಆರೋಪಿ ಬಂಧನ, NIA ವಿಚಾರಣೆ

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

SCROLL FOR NEXT