ಕಿರಿಕ್ ಪಾರ್ಟಿ ಸಿನೆಮಾ ವಿಮರ್ಶೆ 
ಸಿನಿಮಾ ವಿಮರ್ಶೆ

ಪ್ರಾಯದ ಆಟ -ಆ ಹುಡುಗಾಟ -ಇನ್ನು ಮಾಸಿಲ್ಲ

ಶುಭಮಂಗಳ' ಚಿತ್ರದ ಹಾಡನ್ನು ತುಸು ಬದಲಾಯಿಸಿ ಹೇಳುವುದಾದರೆ 'ಕಿರಿಕ್ ಪಾರ್ಟಿ'ಯಲ್ಲಿ ಪ್ರಾಯದ ಆಟ ಆ ಹುಡುಗಾಟ ಇನ್ನು ಮಾಸಿಲ್ಲ, ರೋಷದಿ ಚಿತ್ರಿಸಿದ ಭಾಗ ಮಾತ್ರ ಅಷ್ಟು ರುಚಿಸೋಲ್ಲ!

ವಯೋಮಾನ ಸಹಜವಾಗಿ ಕಳೆದುಕೊಳ್ಳುವ ಪ್ರಾಯ ಗೀಳಾಗಿ ಕಾಡುತ್ತದೆ. ಆ ಹುಡುಗಾಟದ ಗೀಳು ಒಬ್ಬನನ್ನು ಹುಡುಕಾಟಕ್ಕೆ ಹಚ್ಚಬಹುದು. ಆತ್ಮೀಯರ ಮೂಲಕ ಆ ಹುಡುಕಾಟ ಸಾಧ್ಯವಾಗಬಹುದು. ಕೆಲವೊಮ್ಮೆ ಕಲೆ ಕೂಡ ಆ ಹುಡುಕಾಟದ ಹಂಬಲವನ್ನು ಹೆಚ್ಚಿಸಬಹುದು. ಸ್ವತಃ ಕಲೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕವೂ ಅಥವಾ ಕಲೆಯನ್ನು ಆರಾಧಿಸುವ ಮೂಲಕವೂ. ಬಾಲ್ಯ-ಪ್ರಾಯವನ್ನು ನೆನಪಿಸಲು ಸಿನೆಮಾ ಸಶಕ್ತ ಮಾಧ್ಯಮವಂತೂ ಹೌದು. ಇಂತಹ ಕಾಲೇಜು ಹುಡುಗಾಟವನ್ನು ಕಟ್ಟಿಕೊಡುವ ಭರವಸೆ ಮೂಡಿಸಿದ್ದ ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಇಂದು ಬಿಡುಗಡೆಯಾಗಿದೆ. ಇದಕ್ಕೆ ಪ್ರೇಕ್ಷಕನ ಜೊತೆ ಬೆಸೆದುಕೊಳ್ಳಲು ಹೇಗೆ ಸಾಧ್ಯವಾಗಿದೆ?
ಕರ್ಣ (ರಕ್ಷಿತ್ ಶೆಟ್ಟಿ) ಕಾಲೇಜಿನ ಕೊನೆಯ ಬೆಂಚಿನ ಎಂಜಿನಿಯರಿಂಗ್ ವಿದ್ಯಾರ್ಥಿ. ತರ್ಲೆ ತಾಪತ್ರಯಗಳಲ್ಲಿ ಹದಿಹರೆಯದ ಜೀವನವನ್ನು ಹಸಿರಾಗಿ ಅನುಭವಿಸುವ ಈ ಪಡ್ಡೆ ಯುವಕನ ಜೀವನದಲ್ಲಿ ಭಾರಿ ಬದಲಾವಣೆಯಾಗಿ, ಗಂಭೀರನಾಗಿಬಿಡುತ್ತಾನೆ. ಆಗತಾನೆ ಚಿಗುರೊಡೆದಿದ್ದ ಪ್ರೀತಿಯ ಗೆಳತಿ ಸಾನ್ವಿ ಜೋಸೆಫ್ ಳ(ರಶ್ಮಿಕಾ ಮಂದಣ್ಣ) ಅಕಾಲಿಕ ಸಾವು ಇದಕ್ಕೆ ಕಾರಣ. ಗಂಭೀರನಾದ ಕರ್ಣನ ಜೀವನದಲ್ಲಿ ಮತ್ತೆ ಬದಲಾವಣೆಯೇ ಗಾಳಿ ಬೀಸುವುದೆಂತು? 
ಕಾಲೇಜು ದಿನಗಳ ಸಂತಸದ ಸಂಗತಿಗಳನ್ನು ಬಹಳ ಲವಲವಿಕೆಯಿಂದ ಕಟ್ಟಿಕೊಟ್ಟಿರುವುದು 'ಕಿರಿಕ್ ಪಾರ್ಟಿ'ಯ ಆಪ್ತ ಸಂಗತಿಗಳಲ್ಲೊಂದು. ಸಿನೆಮಾದ ಮೊದಲಾರ್ಧದಲ್ಲಿ ಮಲಯಾಳಂನ 'ಪ್ರೇಮಂ'ನ ದಟ್ಟ ಛಾಯೆ ವ್ಯಕ್ತವಾದರೂ, ಕರ್ಣ ಮತ್ತು ಸಾನ್ವಿಯ ನಡುವಿನ ರೊಮ್ಯಾಂಟಿಕ್ ಕ್ಷಣಗಳು ಪ್ರೇಕ್ಷಕನ ಅನುಭವಗಳು ಕೂಡ ಆಗುತ್ತವೆ. ಆ ಮಟ್ಟಿಗೆ ಈ ದೃಶ್ಯಗಳನ್ನು ಪ್ರೇಕ್ಷಕನಿಗೆ ದಾಟಿಸಲು ಸಿನೆಮಾ ಸಶಕ್ತವಾಗಿದೆ. ಬುದ್ಧಿ ಬಲಿತಂತೆ ಪ್ರಾಯದ ಚೇಷ್ಟೆಗಳನ್ನು ಕಳೆದುಕೊಳ್ಳುವ, ನಂತರ ಮತ್ಯಾರಿಂದಲೋ-ಮತ್ಯಾವುದರಿಂದಲೋ ಅವುಗಳನ್ನು ಕಂಡುಕೊಳ್ಳುವ ಸಂಘರ್ಷದ ನಡುವೆ ಸಾಗುವ ಸಿನೆಮಾ, ದ್ವಿತೀಯಾರ್ಧಕ್ಕೆ ಗಂಭೀರತೆ ಪಡೆದುಕೊಳ್ಳುತ್ತದೆ. ಕರ್ಣ ಗಂಭೀರನಾಗಲು ಆರೋಪಿಸುವ ಕಾರಣ ಮತ್ತು ಆ ಕಾರಣವನ್ನು ಆರೋಪಿಸಿ ಅರ್ಥ ಮಾಡಿಸುವ ನಿರ್ದೇಶಕನ-ಕಥೆಗಾರನ ತವಕ, ಸಿನೆಮಾ ಎಲ್ಲೋ ಹಳಿ ತಪ್ಪಿದಂತೆ ಭಾಸವಾಗಲು ಕಾರಣವಾಗುತ್ತದೆ. ದ್ವಿತೀಯಾರ್ಧ ನಾಯಕನಟ ಕರ್ಣನ ವೈಭವೀಕರಣಕ್ಕೆ ಮೀಸಲಾಗಿ ಹತ್ತರಲ್ಲಿ ಹನ್ನೊಂದನೆಯ ಸಿನೆಮಾವಾಗಿ ಮಾರ್ಪಾಡಾಗುವ ಅಪಾಯಕ್ಕೆ ಸಿಲುಕುತ್ತದೆ. ಕರ್ಣನ ಜೀವನದಲ್ಲಿ ಮತ್ತೊಬ್ಬ ಯುವತಿ ಆರ್ಯಳ (ಸಂಯುಕ್ತ ಹೆಗಡೆ) ಪ್ರವೇಶ, ಕರ್ಣನ ವ್ಯಕ್ತಿತ್ವಕ್ಕಾಗಿ ಅವಳು ತೆಗೆದುಕೊಳ್ಳುವ ಆಸ್ಥೆ, ಕಾಲೇಜು ರಾಜಕಾರಣ ರಣರಂಗದಲ್ಲಿ ಕರ್ಣನ ಸುಲಭ ಜಯಭೇರಿ, ಎದುರಾಳಿಗಳನ್ನು ಪುಡಿಗುಟ್ಟುವುದು, ತನ್ನ ಹಳೆ ಪ್ರೇಯಸಿಯ ನೆನಪು ಮರುಕಳಿಸುವುದು ಹೀಗೆ ಪ್ರೆಡಿಕ್ಟಬಲ್ ಘಟನೆಗಳಿಂದ ತುಂಬಿದ ದ್ವಿತೀಯಾರ್ಧ ತುಸು ನಿರಾಸೆ ತಂದರು, ಬಹುಷಃ ಮತ್ಯಾವ ಅತಿರೇಕದ-ಅನಗತ್ಯ ಹಾಸ್ಯವನ್ನು ಒಳಗೊಳ್ಳದೆ ಇರುವುದು, ಅಲ್ಲಲ್ಲಿ ಮೂಡುವ ನವಯವ್ವನದ ಹಾಡುಗಳು ಈ ನಿರಾಸೆಗೆ ಪರಿಹಾರ ನೀಡುತ್ತವೆ. ನಾಯಕನಟನ ವ್ಯಕ್ತಿತ್ವದ ಬದಲಾವಣೆಗೆ ಅಥವಾ ಅವನ ಅರಿವಿಗೆ ಆ ತೀವ್ರವಾದ ಕಾರಣಗಳನ್ನು ಆರೋಪಿಸದೆಯೂ, ಅದನ್ನು ಬಿಡಿಬಿಡಿಯಾಗಿ ವಿವರಿಸುವ ಗೋಜಿಗೆ ಹೋಗದೆಯು ಇನ್ನು ಸ್ವಾಭಾವಿಕವಾಗಿ ಕಟ್ಟಿಕೊಟ್ಟಿದ್ದಲ್ಲಿ ಸಿನೆಮಾ ಇನ್ನಷ್ಟು ಆಪ್ತವಾಗುತ್ತಿತ್ತೇನೋ!
ರಕ್ಷಿತ್ ಶೆಟ್ಟಿ ನಟನೆಯಲ್ಲಿ ತಮ್ಮ ಹಿಂದಿನ ಸಿನೆಮಾಗಳಿಗಿಂತಲೂ ಸಾಕಷ್ಟು ಉತ್ತಮಗೊಂಡಿದ್ದಾರೆ. ಕಾಲೇಜು ಯುವಕನ ರೋಮ್ಯಾನ್ಸ್ ದೃಶ್ಯಗಳಲ್ಲಿ ಪಡ್ಡೆ ಯುವಕರು ಶಿಳ್ಳೆ ಹೊಡೆದು ಸಂಭ್ರಮಿಸುವಂತೆ ನಟಿಸಿದ್ದಾರೆ. ಚೊಚ್ಚಲ ಚಿತ್ರದಲ್ಲೇ ಭರವಸೆ ಮೂಡಿಸಿರುವುದು ರಶ್ಮಿಕಾ ಮಂದಣ್ಣ. ತಮ್ಮ ಪಾತ್ರದಲ್ಲಿ ನಿಖರವಾದ ನಟನೆ ನೀಡಿದ್ದಾರೆ, ಮತ್ತೊಬ್ಬ ನಟಿ ಸಂಯುಕ್ತ ಹೆಗಡೆ ಕೂಡ ಅಚ್ಚುಕಟ್ಟಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್ ಎಂದಿನಂತೆ ತಮ್ಮ ನಟನೆಯಿಂದ ಸಿನೆಮಾಗೆ ಬಲ ತುಂಬಿದ್ದಾರೆ ಮತ್ತು ಇತರ ಪೋಷಕನಟರ ಕೊಡುಗೆ ಕೂಡ ಗಮನಾರ್ಹ. ಪ್ರಾಯದ ಪರಿಸರವನ್ನು ಪರಿಣಾಮಕಾರಿಯಾಗಿಸಲು ಕರ್ಮ್ ಚಾವ್ಲಾ ಅವರ ಕ್ಯಾಮರಾ, ಅಜನೀಶ್ ಲೋಕನಾಥ್ ಅವರ ಸಂಗೀತ ಕೂಡ ಸಹಕರಿಸಿದೆ. ತಾಂತ್ರಿಕ ಗುಣಮಟ್ಟವನ್ನು ಕಾಯ್ದುಕೊಂಡಿರುವುದು ಚಿತ್ರಕಥೆಯ ಕೆಲವು ಬೇಸರದ ಆಯಾಮಗಳನ್ನು ಬದಿಗೆ ಸರಿಸಿ ಸರಿಪಡಿಸಲು ಪೂರಕವಾಗಿ ಸಹಾಯ ಮಾಡಿವೆ. 
'ಪ್ರೇಮಂ' ಸೇರಿದಂತೆ ಒಂದೆರಡು ಸಿನೆಮಾಗಳನ್ನು ನೆನಪಿಸುವ, ಮತ್ತು ಅವುಗಳಿಂದ ಉತ್ತಮವಾದದ್ದನ್ನು ಆಯ್ದುಕೊಂಡು ಮತ್ತೊಂದು ಕಥೆ ಕಟ್ಟಿ, ಪ್ರಾಯದ ಚೇಷ್ಟೆಗಳನ್ನು ಅಪ್ಯಾಯಮಾನವಾಗಿ ಕಟ್ಟಿಕೊಟ್ಟು, ಬಹುಷಃ ಪಡ್ದೆಯುವಕರನ್ನು ಗುರಿಯಾಗಿಸಿಕೊಂಡು ಹೀರೊ ವೈಭವವನ್ನು ಕೂಡ ತುಸು ಹೆಚ್ಚೇ ಎನ್ನುವಂತೆ ಚಿತ್ರಿಸಿ, ಇನ್ನಿತರ ಅತಿರೇಕಗಳನ್ನು ತಗ್ಗಿಸಿ, ತಾಂತ್ರಿಕ ಆಯಾಮಗಳಲ್ಲಿ ಎಡವದೆ ನಿರ್ದೇಶಕ ರಿಷಬ್ ಶೆಟ್ಟಿ ವರ್ಷದ ಅಂತ್ಯದ ಪಾರ್ಟಿಗೆ ನಾಂದಿ ಹಾಡಿದ್ದಾರೆ. 'ಶುಭಮಂಗಳ' ಚಿತ್ರದ ಹಾಡನ್ನು ತುಸು ಬದಲಾಯಿಸಿದರೆ 'ಕಿರಿಕ್ ಪಾರ್ಟಿ'ಯಲ್ಲಿ ಪ್ರಾಯದ ಆಟ ಆ ಹುಡುಗಾಟ ಇನ್ನು ಮಾಸಿಲ್ಲ, ರೋಷದಿ ಚಿತ್ರಿಸಿದ ಭಾಗ ಮಾತ್ರ ಅಷ್ಟು ರುಚಿಸೋಲ್ಲ!  
-ಗುರುಪ್ರಸಾದ್ 
guruprasad.n@kannadaprabha.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!