ಸಿನಿಮಾ ವಿಮರ್ಶೆ

ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಲ್ಲ!!!

Guruprasad Narayana

'ನಕಲಿ ಮಾಡಬೇಡಿ' ಎಂಬ ಅಡಿಬರಹದೊಂದಿಗೆ, ಇದು ದೀಪಕ್ ಮಧುವನಹಳ್ಳಿ 'ಥ್ರಿಲ್ಲರ್' ಎಂಬ ಪ್ರಚಾರದೊಂದಿಗೆ ಬಿಡುಗಡೆಯಾದ 'ಭಾಗ್ಯರಾಜ್' ಕುತೂಹಲ ಮೂಡಿಸಿದ್ದು ಸುಳ್ಳಲ್ಲ. ಮಹೇಶ್ ಮತ್ತು ಜಾಹ್ನವಿ ನಟನೆಯ ಈ ಚಿತ್ರ ಆ ಕುತೂಹಲವನ್ನು ಕಾಯ್ದುಕೊಳ್ಳಲು ಸಾಧ್ಯವಾಗಿದೆಯೇ?

ರಾಮಪಟ್ನಂ ಊರಿನಲ್ಲಿ ಬೆಳೆದ ರಾಜ್ (ಮಹೇಶ್), ಝೆರಾಕ್ಸ್ ಅಂಗಡಿಯಲ್ಲಿ ಕೆಲಸ ಮಾಡುವವ. ಕೇಬಲ್ ಆಪರೇಟರ್ ಭಾಗ್ಯಳ (ಜಾಹ್ನವಿ) ಜೊತೆಗೆ ಪ್ರೀತಿಯಲ್ಲಿ ಬೀಳುವ ರಾಜ್, ಅವಳ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಲು ಹಣವಿಲ್ಲದೆ ನರಳುತ್ತಾನೆ. ಅದಕ್ಕಾಗಿ ಅಡ್ಡದಾರಿ ಹಿಡಿಯುವ ರಾಜ್, ನಕಲಿ ನೋಟನ್ನು ಚಲಾಯಿಸುತ್ತಾನೆ. ಭಾಗ್ಯಳಿಗೆ ತನ್ನ ಮಾವನಿಂದ ಒದಗಿಬರಬಹುದಾದ ತೊಂದರೆಯಿಂದ ತಪ್ಪಿಸಲು ಅವಳನ್ನು ಓಡಿಸಿಕೊಂಡು ಹೋಗಲು ಮುಂದಾಗುತ್ತಾನೆ. ಆದರೆ ಅದಕ್ಕೆ ಬೇಕಾದ ಸಂಪನ್ಮೂಲಗಳಿಗಾಗಿ ಗೆಳೆಯ ಸಜ್ಜನನ ಜೊತೆಗೂಡಿ ಬ್ಯಾಂಕ್ ದರೋಡೆ ಮಾಡಿದ ನಂತರದ ತಿರುವುಗಳೇನು?

ಭರವಸೆಯ ಪ್ರಾರಂಭ ನೀಡುವ 'ಭಾಗ್ಯರಾಜ್' ಸಿನೆಮಾ, 'ಸುಬ್ರಮಣ್ಯಪುರಂ' ನಂತರವಾಗಿ ತಮಿಳಿನಲ್ಲಿ ಯಥೇಚ್ಚವಾಗಿ ಮೂಡಿ ಬಂದ, ಹಳ್ಳಿಯ ಪರಿಸರದ ಹಿನ್ನಲೆಯಲ್ಲಿ, ಸರಳ ನಾಯಕ-ನಾಯಕಿ ಕಥೆ ಹೇಳುವ ಸಿನೆಮಾಗಳನ್ನು (ಕನ್ನಡದ್ದೇ 'ಲವ್ ಇನ್ ಮಂಡ್ಯ' ಕೂಡ) ನೆನಪಿಗೆ ತರುತ್ತದೆ. ಹಿನ್ನಲೆಯಲ್ಲಿ ತನ್ನ, ತನ್ನ ಊರಿನ, ಗೆಳೆಯರ ಮತ್ತಿತರನ್ನು ಪರಿಚಯಿಸುತ್ತಾ ಹೋಗುವ ರೀತಿ ಮುಂದೇನಾಗಬಹುದು ಎಂಬ ಕುತೂಹಲ ಮೂಡಿಸುತ್ತಾ ಹೋದರೂ ಒಂದು ಹಂತದಲ್ಲಿ ನಿರಾಶೆ ಮೂಡಿಸುವ ಈ ಸಿನೆಮಾ ಮತ್ತೆ ಚೇತರಿಸಿಕೊಳ್ಳುವುದೇ ಇಲ್ಲ. ತನ್ನ ಪ್ರೇಯಸಿಗಾಗಿ ಕಲರ್ ಝೆರಾಕ್ಸ್ ನಲ್ಲಿ ನಕಲಿ ನೋಟುಗಳನ್ನು ಸೃಷ್ಟಿಸುವುದು, ನಂತರ ಅತಿ ಸುಲಭವಾಗಿ ಬ್ಯಾಂಕ್ ಹಣವನ್ನು ದರೋಡೆ ಮಾಡುವುದು ಹೀಗೆ ಬರವಣಿಗೆಯಲ್ಲಿ ಎಡವಿರುವ ಸಿನೆಮಾ ಹತ್ತು ಹಲವು ತಿರುವುಗಳನ್ನು ಪಡೆಯುತ್ತಾ ಹೋಗಿ ಒಂದೆರಡು ಅನಗತ್ಯ ಸಾವುಗಳನ್ನು ಪ್ರೇಕ್ಷಕನ ಮುಂದಿಡುತ್ತದೆ. ಮೊದಲಿನಿಂದಲೂ ಅಗತ್ಯಕ್ಕಿಂತಲೂ ಹೆಚ್ಚು ವೇಗವಾಗಿ ಓಡುವ ಸಿನೆಮಾ, ಬಹಳ ಸರಳ-ಜಾಳು ನಿರೂಪಣೆಯಿಂದ ಸೊರಗಿ, ಪ್ರೆಡಿಕ್ಟಿಬಲ್ ಆಗಿ ಕಂಡು ಎಲ್ಲೂ ಇದೊಂದು ಥ್ರಿಲ್ಲರ್ ಎಂದೆನಿಸುವುದಿಲ್ಲ. ನಕಲಿ ನೋಟುಗಳನ್ನು ತಯಾರಿ ಮಾಡುವುದಾಗಲಿ, ಅಥವಾ ಬ್ಯಾಂಕ್ ದರೋಡೆಯಾಗಲೀ ಇನ್ನು ತುಸು ವಿವರವಾಗಿ, ಸಾವಧಾನವಾಗಿ, ತುಸು ಹೆಚ್ಚು ನಂಬುಗೆ ಮೂಡುವಂತೆ ಕಟ್ಟಿಕೊಟ್ಟಿದ್ದರೆ, ಬಹುಷಃ ಪ್ರೇಕ್ಷಕನಿಗೂ ಒಳ್ಳೆಯ ಸಿನೆಮಾ ಅನುಭವದ ಭಾಗ್ಯ ದೊರಕುತ್ತಿತ್ತೇನೋ. ನಟನೆಯಲ್ಲಿ ಮಹೇಶ್, ಜಾಹ್ನವಿ ಮತ್ತು ಇತರ ಎಲ್ಲ ಪೋಷಕ ನಟರೂ ಉತ್ತಮವಾಗಿ ನಟಿಸಿ, ಯಾವುದೇ ಅತಿರೇಕವಿಲ್ಲದಿರುವುದೇ ಸಮಾಧಾನ. ಅನೂಪ್ ಸೀಳಿನ್ ಅವರ ಸಂಗೀತದಲ್ಲಿ ಮೂಡಿ ಬಂದಿರುವ ಒಂದೆರಡು ಹಾಡುಗಳು ಚೆನ್ನಾಗಿವೆ. 'ಗೀಯ ಗೀಯ' ಹಾಡು ಇಂಪಾಗಿದ್ದು ತಮಿಳಿನ ಸುಬ್ರಮಣ್ಯಪುರಂ ಸಿನೆಮಾದ 'ಕಣ್ಗಲ್ ಇರಂಧಾ' ಹಾಡನ್ನು ನೆನಪಿಸುತ್ತದೆ. ಆದರೆ ಹಿನ್ನಲೆ ಸಂಗೀತದ ಅಬ್ಬರ ಅನಗತ್ಯವಾಗಿ ಅಪ್ಪಳಿಸುತ್ತದೆ. ಮಂಜುನಾಥ್ ಛಾಯಾಗ್ರಹಣ ಕೂಡ ಊರಿನ ಚಿತ್ರಣವನ್ನು ಕಟ್ಟಿಕೊಡುವುದರಲ್ಲಿ, ಚಿತ್ರದ ಮೂಡ್ ನಿರ್ಮಿಸುವುದರಲ್ಲಿ ಸಹಕರಿಸಿದೆ. ತಾಂತ್ರಿಕವಾಗಿ ಸಿನೆಮಾ ಗುಣಮಟ್ಟವನ್ನು ಕಾಯ್ದುಕೊಂಡರೂ, ಗಟ್ಟಿಯಾದ ಕಥೆ ಕಟ್ಟುವಲ್ಲಿ-ಬರವಣಿಗೆಯಲ್ಲಿ, ನಿರೂಪಣೆಯಲ್ಲಿ ಸೋಲುವ ದೀಪಕ್ ಮಧುವನಹಳ್ಳಿ ಸಿನೆಮಾ ನಿರಾಶೆ ಉಂಟುಮಾಡುತ್ತದೆ.

ಕನ್ನಡ ಮುಖ್ಯವಾಹಿನಿ ಸಿನೆಮಾಗಳಲ್ಲಿ ಸೈಕಲ್ ಹೊಡೆಯುವ ನಾಯಕರು, ಯಾವುದಾದರೂ ಕೆಲಸ ಮಾಡುವ ನಾಯಕ-ನಾಯಕಿಯರು ಕಾಣುವುದೇ ಅಪರೂಪ. ನಾಯಕ ನಾಯಕಿಯರಿಗೆ ಅಂತಹ ಎಸ್ಟಾಬ್ಲಿಶ್ಮೆಂಟ್ ಇರುವ ಇಂತಹ ಅಪರೂಪದ ಸಿನೆಮಾಗಳು ಮೂಡಿಬಂದಾಗ ಸಂಭ್ರಮಿಸುವಂತೆ ಪ್ರೇರೇಪಿಸಿದರು, ಸಿನೆಮಾದ ತಿರುವಿಗಾಗಿ ಗಟ್ಟಿತನದ ಘಟನೆಯನ್ನು ಕಟ್ಟಿಕೊಡಲು ವಿಫಲವಾಗಿ, ಪಾತ್ರಗಳು ಇನ್ನೂ ಗಟ್ಟಿಯಾಗಿ ರೂಪಿಸುವುದರಲ್ಲಿ ಎಡವಿಯೋ ಇಡಿಯಾದ ಸಿನೆಮಾ ಅನುಭವನ್ನು ಹಾಳುಗೆಡವಿದಂತಾಗಿ ಕಟ್ಟಿದ ಮಂಟಪ ಕುಸಿದು ಬಿದ್ದ ಅನುಭವವಾಗುತ್ತದೆ. ಭಾಗ್ಯರಾಜ್ ನದ್ದು ಅದೇ ಕಥೆಯೇ!

SCROLL FOR NEXT