ಚಿತ್ರೀಕರಣಕ್ಕೂ ಮತ್ತು ಬಿಡುಗಡೆಗೂ ದೀರ್ಘ ವಿಳಂಬವಾದ ಸಿನೆಮಾಗಳನ್ನು ಪ್ರೇಕ್ಷಕರು ತುಸು ಅನುಮಾನದಿಂದಲೇ ನೋಡುವುದು ವಾಡಿಕೆ. ಆದರೆ ನಾಯಕನಟ ಗಣೇಶ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ ಎಂದು ಪ್ರಚಾರ ಪಡೆದಿದ್ದ 'ಸ್ಟೈಲ್ ಕಿಂಗ್' ನಟನ ಅಭಿಮಾನಿಗಳಿಗಾಗಲೀ ಉಳಿದ ಸಿನಿ ರಸಿಕರಿಗಾಗಲೀ ಮುದ ನೀಡುವಂತಹುದು ಏನಾದರೂ ಇದೆಯೇ?
ಬಂಧೂಕಿನಿಂದ ಗುಂಡು ಧೀನಾ ಎಂಬ ಡ್ರಗ್ ಲಾರ್ಡ್ ಕಡೆಯವರನ್ನು ಕೊಂದು ಕೋಟ್ಯಾನುಕೋಟಿ ಬೆಲೆ ಮಾಡುವ ಕೊಕೇನ್ ಬ್ಯಾಗಿಗೆ ಇಳಿಸಿ ಕಾಶಿ (ಗಣೇಶ್) ಪರಾರಿಯಾಗುತ್ತಾನೆ. ಆ ಬ್ಯಾಗ್ ಅನ್ನು ಸಂರಕ್ಷಿಸುವ ಮತ್ತು ಇವನನ್ನು ಪೊಲೀಸರು ಮತ್ತು ಡ್ರಗ್ ಡೀಲರ್ಸ್ ಹುಡುಕುವ ಟ್ರ್ಯಾಕ್ ಒಂದು ಬದಿಗಾದರೆ, ಕೆಲಸ ಇಲ್ಲದೆ ಆಪ್ಪನ (ರಂಗಾಯಣ ರಘು) ಸಾಲ ತೀರಿಸಲು ಅಲೆದಾಡುವ ಕಾರ್ತಿಕ್ (ಗಣೇಶ್ ದ್ವಿಪಾತ್ರ). ಕೆಲಸ ಇಲ್ಲವೆಂದು ಮತ್ತು ಇತರ ಹಣಕಾಸಿನ ಮುಗ್ಗಟ್ಟಿನಿಂದ ತನ್ನ ಪ್ರೇಯಸಿ ರಮ್ಯ (ರೇಮ್ಯ ನಂಬೀಸನ್) ಜೊತೆಗಿನ ಮದುವೆಗೆ ಭಾವಿ ಮಾವನಿಂದ (ಸುಂದರರಾಜ್) ಅಡ್ಡಿ. ಇದು ಇನ್ನೊಂದು ಟ್ರ್ಯಾಕ್. ಕೊನೆಗೆ ಆ ಕೊಕೇನ್ ಬ್ಯಾಗ್ ಕಾರ್ತಿಕ್ ಬಳಿಗೂ ಸುಳಿದು ಗೊಂದಲವಾಗಿ ಮುಂದುವರೆಯುವ ಕಥೆ ಬಗೆಹರಿಯುವುದು ಹೇಗೆ?
ಡ್ರಗ್ ಮಾಫಿಯಾದ ಬಗ್ಗೆ ಹಿನ್ನಲೆಯಲ್ಲಿ ಕಥೆ ಹೇಳುವ ಮೂಲಕ ಪ್ರಾರಂಭವಾಗುವ ಸಿನೆಮಾ, ಯಾವುದೋ ಒಳ್ಳೆಯ ಕ್ರೈಮ್ ಕಥೆಯನ್ನು ನಮ್ಮ ಮುಂದೆ ಇಡಬಹುದೇನೊ ಎಂಬ ನಿರೀಕ್ಷೆ ತಳೆದರೆ ಆ ನಿರೀಕ್ಷೆ ಮೇಲೆ ಕಲ್ಲು ಚಪ್ಪಡಿ ಎಳೆಯುತ್ತದೆ ಕಥೆ ಮುಂದುವರೆದಂತೆ. ದ್ವಿಪಾತ್ರ, ಅದರಿಂದಾಗುವ ಗೊಂದಲ, ಅತಿರಂಜಿತ ಹಿರೋಯಿಸಂ, ಕಳಪೆ ಮಟ್ಟದ ಹಾಸ್ಯ, ವಿಪರೀತ ಎನ್ನುವ ಘಟನೆಗಳು ಇವುಗಳೇ ತುಂಬಿರುವ ಈ ಸಿನೆಮಾದ ಕಥೆ ಈಗಾಗಲೇ ಬಂದು ಹೋಗಿರುವ ಸುಮಾರು ಸಿನೆಮಾಗಳ ಕಲಸೋಗರ. ಈ ಕಲಸೋಗರವನ್ನು ಅತಿ ಕೆಟ್ಟ ರೀತಿಯಲ್ಲಿ ನಿಭಾಯಿಸಿ ನಿರೂಪಿಸಿದ್ದಾರೆ ನಿರ್ದೇಶಕ. ಆ ಖಳನಾಯಕ ಗಣೇಶ್ ಪಾತ್ರಕ್ಕೆ ಗೊತ್ತು ಗುರಿಯೇ ಇಲ್ಲ. ಎಲ್ಲಿಂದಲೋ ಉದ್ಭವಿಸಿರುವ ಈ ಪಾತ್ರಕ್ಕೆ ಒಂದು ಸಣ್ಣ ಎಸ್ಟಾಬ್ಲಿಶ್ಮೆಂಟ್ ಮಾಡುವ (ಕೊನೆ ಪಕ್ಷ ಸಿನೆಮಾದ ಕೊನೆಯಲ್ಲಾದರೂ ಸ್ಪಷ್ಟೀಕರಿಸಬಹುದಿತ್ತು) ಗೋಜಿಗೂ ಹೋಗಿಲ್ಲ ನಿರ್ದೇಶಕ. ಇನ್ನು ಉಡಾಫೆ-ಒಳ್ಳೆಯ ಗಣೇಶ್ ಪಾತ್ರವನ್ನು ಹತ್ತಾರು ಸಿನೆಮಾಗಳಲ್ಲಿ ನೋಡಿರುವಂತದೇ. ಅದೇ ಮಾಮೂಲಿ ಚೇಸ್ ಗಳು, ಪೊಲೀಸ್ ರನ್ನು ಕೇಡಿಗಳಾಗಿ ಚಿತ್ರಿಸುವ ಘಟನೆಗಳು, ಹೀರೋ ವೈಭವೀಕರಣಕ್ಕಾಗಿಯೇ ರೂಪಿಸಿದ ಕಳಪೆ ಫೈಟ್ ಗಳು ಇವುಗಳ ಜೊತೆಗೆ ರಂಗಾಯಣ ರಘು ಮತ್ತು ಸಾಧು ಕೋಕಿಲಾ ಇವರ ಅತಿರೇಕದ ನಟನೆ ಮತ್ತು ಗಲೀಜು ಸಂಭಾಷಣೆಗಳನ್ನು ಸಹಿಸಿಕೊಳ್ಳುವ ನರಕಯಾತನೆ ಪ್ರೇಕ್ಷಕನಿಗೆ. ಇದರ ಜೊತೆಗೆ ಸುಂದರ್ ರಾಜ್ ಕೂಡ ತಮ್ಮ ಇತರ ಸಿನೆಮಾಗಳಿಗೆ ವಿರುದ್ಧವಾದ ಅತಿರೇಕದ ನಟನೆಯನ್ನು ನೀಡಿದ್ದಾರೆ. ಇನ್ನು ಹಾಡುಗಳಲ್ಲಿ ಮತ್ತೊಂದೆರಡು ದೃಶ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ರೇಮ್ಯ ನಂಬೀಸನ್ ಅವರದ್ದು ಸುಮ್ಮನೆ ಬಂದು ಹಾದುಹೋಗುವ ಸಪ್ಪೆ ಪಾತ್ರ! ಅರ್ಜುನ್ ಜನ್ಯ ಸಂಗೀತದಲ್ಲಿ ಮೂಡಿರುವ ಹಾಡುಗಳು ಸಿನೆಮಾವನ್ನು ಇನ್ನೂ ಲಂಬಿಸಿ ಪ್ರೇಕ್ಷಕನ ತಾಳ್ಮೆಗೆ ಸವಾಲಾಗುತ್ತವೆ. ಕ್ಲೀಶೆ ಕಥೆಯೊಂದನ್ನು ಹೇಳಹೊರಟ ನಿರ್ದೇಶಕ ಪಿ ಸಿ ಶೇಖರ್, ಅದರ ಜೊತೆಗೆ ಕನ್ನಡ ಚಿತ್ರರಂಗದಲ್ಲಿ ಸಾಮಾನ್ಯವಾಗಿ ಕಾಣಬರುವ ಎಲ್ಲ ಅತಿರೇಕಗಳನ್ನು ತುಂಬಿಸಿ-ಜೋಡಿಸಿ ಸಿನೆಮಾ ಮುಗಿಸುವುದಕ್ಕು ಪ್ರಯಾಸ ಪಟ್ಟು ಪ್ರೇಕ್ಷಕನಿಗೂ ಪ್ರಯಾಸ ತರಿಸುತ್ತಾರೆ.
ಕನ್ನಡ ಚಿತ್ರರಂಗಕ್ಕೆ ಆತ್ಮಾವಲೋಕನದ ಕಾಲ ಒದಗಿ ಬಂದಿದೆ. ಈ ವರ್ಷದ ಕಾಲು ಭಾಗಕ್ಕೂ ಹೆಚ್ಚು ಕಳೆದಿದ್ದರೂ ಪ್ರೇಕ್ಷಕನ ಮನರಂಜನೆಗೆ ದಕ್ಕಿರುವುದು ಮೂರು ಮುಕ್ಕಾಲು ಸಿನೆಮಾ ಅಥವಾ ಅದಕ್ಕೂ ಕಡಿಮೆ! ಕನ್ನಡ ಪ್ರೇಕ್ಷಕ ಚಿತ್ರಮಂದಿರಕ್ಕೆ ಬರುವುದಿಲ್ಲ, ಕನ್ನಡ ಚಿತ್ರಗಳಿಗೆ ಪ್ರೋತ್ಸಾಹ ನೀಡುವುದಿಲ್ಲ ಎಂಬಿತ್ಯಾದ ಹುರುಳಿಲ್ಲದ ದೂರುಗಳಿಂದ ದೂರವುಳಿದು ಅತ್ಯುತ್ತಮ ಕಂಟೆಂಟ್ ಉಳ್ಳ ಡೀಸೆಂಟ್ ಸಿನೆಮಾಗಳನ್ನು ನೀಡುವತ್ತ ಕನ್ನಡ ಚಿತ್ರರಂಗ ಗಮನ ಹರಿಸುವುದು ಒಳಿತು.