Urvi Kannada Movie Review
ಅತಿ ಹೆಚ್ಚಾಗಿ ದೇವತೆಗಳನ್ನು ಪೂಜಿಸುವ, ಶಕ್ತಿ ದೇವತೆಗಳ ಪುರಾಣಗಳನ್ನು ನಂಬಿ ಹೆದರುವ ನಮ್ಮ ದೇಶದಲ್ಲಿ, ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಮಿತಿಯೇ ಇಲ್ಲ ಎಂಬ ಅಂಶ ಯಾವುದೇ ಪ್ರಬುದ್ಧನಿಗೆ ಅಹಿತಕರ ಭಾವನೆ ಉಂಟುಮಾಡಬಲ್ಲದು. ಈ ನಿಟ್ಟಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ವೇಶ್ಯಾವಾಟಿಕೆಗೆ ಬಲಾತ್ಕಾರದಿಂದ ನೂಕಲ್ಪಡುವ ಮಹಿಳೆಯರ ವಿಷಯ ಹಲವು ಸಿನೆಮಾ ನಿರ್ದೇಶಕರಿಗೆ ಮನಕಲಕಿದೆ. ವಂಚನೆ-ದೌರ್ಜನ್ಯಗಳ ವ್ಯೂಹದಿಂದ ಹೊರಬರಲು ದೇವಿ ಪುರಾಣಗಳು ಮಹಿಳೆಯರಲ್ಲಿ ಆತ್ಮವಿಶಾವಸ ತುಂಬಬಲ್ಲವು ಎಂಬುದು ಕೆಲವರ ಮತ. ಕಾಳಿ ದೇವತೆಯ ಹೆಸರು ಹೊತ್ತ ಬಿ ಎಸ್ ಪ್ರದೀಪ್ ವರ್ಮಾ ನಿರ್ದೇಶನದ 'ಉರ್ವೀ' ಇಂದು ತೆರೆ ಕಂಡಿದೆ. ಯುವನಟಿಯರೇ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಸಿನೆಮಾ ಮತ್ತೆ ಅಂತಹುದೇ ಒಂದು ಕಥೆಯನ್ನು ಹೇಳಹೊರಟಿದೆ.
ಅದೊಂದು ಅದ್ದೂರಿ ವೇಶ್ಯಾವಾಟಿಕಾ ಗೃಹ. ಭಾಬಿ (ಭವಾನಿ ಪ್ರಕಾಶ್) ಇದರೊಡತಿ. ಸೂಸಿ (ಶ್ರದ್ಧಾ ಶ್ರೀನಾಥ್), ಡೈಸಿ (ಶ್ವೇತಾ ಪಂಡಿತ್) ಎಂಬ ಒಳ್ಳೆಯ ಅಂತಃಕರಣದ ಯುವತಿಯರು ಅಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ವ್ಯೂಹವೊಂದರಲ್ಲಿ ಸಿಕ್ಕಿಹಾಕಿಕೊಂಡು ಆಶಾ (ಶ್ರುತಿ ಹರಿಹರನ್) ಎಂಬ ವೈದ್ಯಕೀಯ ವಿದ್ಯಾರ್ಥಿನಿ ಆ ನರಕಕ್ಕೆ ಬಂದು ಬೀಳುತ್ತಾಳೆ. ಪ್ರತಿಭಟಿಸುತ್ತಾಳೆ. ಉಳಿದವರಿಗೆ ಆಶಾ ಆಶಾಕಿರಣವಾಗಬಲ್ಲಳೇ?
ವೇಶ್ಯಾವಾಟಿಕೆಯಲ್ಲಿ ಸಿಲುಕುವ ಸಂತ್ರಸ್ತ ಯುವತಿಯರ ಮೇಲಿನ ಅನುಕಂಪ, ಕರುಣೆ ಮತ್ತು ಕಾಳಜಿಯಿಂದ ಹಾಗು ಇದಕ್ಕೆ ಕುಮ್ಮಕ್ಕು ನೀಡುವ ಶಕ್ತಿಗಳ ವಿರುದ್ಧದ ಆಕ್ರೋಶದಿಂದ, ನಿರ್ದೇಶಕ ಒಂದು ತೆಳು ಕಥೆಯನ್ನು ರಚಿಸಿ, ಒಂದಷ್ಟು ಘಟನೆಗಳನ್ನು ಪೋಣಿಸಿ ಹೆಣೆದಿರುವ ಈ ಸಿನೆಮಾ, ಈ ಎಲ್ಲ ಬದ್ಧತೆಗಳನ್ನು ಮೆರೆದಿದ್ದರು, ತಾಜಾತನ, ಅಥೆಂಟಿಸಿಟಿ ಮತ್ತು ನೈಜ ಭಾವಕೋಶವನ್ನು ತೆರೆದಿಡಲು ವಿಫಲವಾಗಿ ನಿರಾಶೆಯ ಭಾವನೆಯನ್ನು ಉಳಿಸಿಬಿಡುತ್ತದೆ.
ವೇಶ್ಯಾವಾಟಿಕೆಯ ಒಡತಿ, ಮೂವರು ಯುವತಿಯರು ಮತ್ತು ಇದನ್ನು ನಡೆಸುವ ದೇವರಕೊಂಡ (ಅಚ್ಯುತ್ ಕುಮಾರ್) ಇವರುಗಳ ಸುತ್ತಲೇ ಹೆಚ್ಚು ಸುತ್ತುವ ಕಥೆ ಈ ದಂಧೆಯ ಬೇರೆ ವಿವರಗಳಿಗೆ ಹೆಚ್ಚು ಒತ್ತು ಕೊಡುವುದಿಲ್ಲ. 'ಯುವತಿಯರು ತಿರುಗಿ ಬೀಳುವ ಕಥೆಗೆ' ಎಡೆಮಾಡಲೆಂದೇ ಹಲವು ಘಟನೆಗಳನ್ನು ಪೋಣಿಸುತ್ತಾ ಹೋದರು, ಯಾವುವು ಸರಾಗವಾಗಿಲ್ಲದೆ, ತ್ರಾಸದಾಯಕವಾಗಿ ಕಥೆ ಕಟ್ಟುತ್ತಿದ್ದಾರೆ ಎಂದೆನಿಸುತ್ತ ಮುಂದುವರೆಯುತ್ತದೆ. ಉದಾಹರಣೆಗೆ ವೈದ್ಯಕೀಯ ವಿದ್ಯಾರ್ಥಿನಿ ಆಶಾ ವೇಶ್ಯಾವಾಟಿಕೆಗೆ ಬಂದು ಬೀಳುವ ಘಟನೆ ಕೂಡ ಕನ್ವಿನ್ಸ್ ಆಗುವಂತೆ ಮೂಡಿಬಂದಿಲ್ಲ. ವೇಶ್ಯಾವಾಟಿಕೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಸಿಕ್ಕಿಹಾಕಿಕೊಳ್ಳುವ ಘಟನೆಗಳು ನಂತರ ಮುಂದುವರೆಯುವ ಸಂಭಾಷಣೆ ಎಲ್ಲವು ಪ್ರೆಡಿಕ್ಟೇಬಲ್ ಮಾದರಿಯಲ್ಲಿರುವುದು ಬೋರು ಹೊಡೆಸುತ್ತದೆ. ವೇಶ್ಯಾಗೃಹದ ಯುವತಿಯರ ನಡುವೆ ಮೂಡಿರಬಹುದಾದ ಭಾವನಾತ್ಮಕ ಸಂಬಂಧಗಳನ್ನು ಕೂಡ ಗಹನವಾಗಿ ಶೋಧಿಸದೆ, ಬಹಳ ಲೌಡ್ ಎನ್ನಿಸುವಂತೆ ಮಾತು-ಸಂಭಾಷಣೆಯ ಉಚ್ಛ್ರಾಯದಲ್ಲಿ ಸಿನೆಮಾ ಮುಂದುವರೆಯುತ್ತದೆ. ವೇಶ್ಯಾವಾಟಿಕೆಯಲ್ಲಿ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಾಗ ಕೂಡ ನೋವಿನ ಭಾವತೀವ್ರತೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲು ಸಾಧ್ಯವಾಗಿಲ್ಲ.
ಸಿನೆಮಾದ ಅಂತ್ಯಕ್ಕೆ, ಈ ವೇಶ್ಯಾವಾಟಿಕೆ ಗೃಹದ ರೂವಾರಿ ಸಾವುಕಾರ ದೇವರಕೊಂಡ ಮತ್ತು ಪುತ್ರಿಯನ್ನು ಎದುರು ಬದುರು ಮಾಡಿ, ಕಟ್ಟುವ ದೀರ್ಘ ದೃಶ್ಯವೊಂದು ಮತ್ತೆ ಬೋಧನಪ್ರಧಾನವಾಗಿ, ಏರು ಧ್ವನಿಯ ಮಾತಿನಲ್ಲಿಯೇ ನಡೆದರೂ, ತಂದೆಯನ್ನು ಕೊಲ್ಲುವದಕ್ಕಿಂತಲೂ 'ತಿರಸ್ಕಾರ' ಹೆಚ್ಚು ಪರಿಣಾಮಕಾರಿ ಎಂಬ ಅರೆತೀರ್ಮಾನ ಆಪ್ತವಾಗುತ್ತದೆ. ಇನ್ನು ಸಿನೆಮಾದ ಸಂಪೂರ್ಣ ಅಂತ್ಯ-ತೀರ್ಮಾನ ಎಲ್ಲವು ಉತ್ಪ್ರೇಕ್ಷೆಯಿಂದಲೇ ಮುಂದುವರೆದು, ಸಿನೆಮಾ ಬಿಡುಗಡೆಗೆ ಮುಂಚಿತವಾಗಿ ಹುಟ್ಟಿಸಿದ್ದ ಕುತೂಹಲಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವಾಗದೆ ಅಂತ್ಯಗೊಳ್ಳುತ್ತದೆ.
ಅಚ್ಯುತ್ ಕುಮಾರ್, ಭವಾನಿ ಪ್ರಕಾಶ್, ಶ್ರದ್ಧಾ ಶ್ರೀನಾಥ್, ಶ್ರುತಿ ಹರಿಹರನ್ ಮತ್ತು ಶ್ವೇತಾ ಪಂಡಿತ್ ಅಚ್ಚುಕಟ್ಟಾದ ನಟನೆ ನೀಡಿದ್ದರು, ಹೆಚ್ಚು ಸಂಭಾಷಣೆಗೆ ಒತ್ತು ಕೊಟ್ಟಿರುವುದರಿಂದಲೋ ಏನೋ, ಭಾವನಾತ್ಮವಾಗಿ ತೀವ್ರವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಿಲ್ಲ. ನಿರ್ದೇಶಕರೇ ಕಲಾವಿದನಾಗಿದ್ದು ಎಲ್ಲವನ್ನು ಸ್ಟೈಲಿಶ್ ಆಗಿ ತೋರಿಸುವ ತವಕದಲ್ಲಿ, ಒಂದು ವೇಶ್ಯಾಗೃಹದಲ್ಲಿ ಇರಬಹುದಾದ ತಲ್ಲಣಗಳನ್ನು ಅಧಿಕೃತವಾಗಿ ಕಟ್ಟಿಕೊಡಲು ಸಾಧ್ಯವಾಗಿಲ್ಲವೇನೋ! ಮನೋಜ್ ಜಾರ್ಜ್ ಸಂಗೀತ ನಿರ್ದೇಶನದಲ್ಲಿ ಒಂದೆರಡು ಹಾಡುಗಳು (ಉತ್ತಮ ನೃತ್ಯ ನಿರ್ದೇಶನ ಒಳಗೊಂಡ ಅಧರ ಮಧುರ ಸೇರಿದಂತೆ) ಇಂಪಾಗಿ ಮೂಡಿವೆ. ಕಲಾ ನಿರ್ದೇಶನ ಅಲ್ಲಲ್ಲಿ ಸೂಕ್ತವಾಗಿದೆ. ಛಾಯಾಗ್ರಹಣ ಮತ್ತು ಸಂಕಲನ ಕೂಡ ಪೂರಕವಾಗಿವೆ.
ಹಿತಚಿಂತನೆಯ ಆಶಯವಿದ್ದರೂ, ಕಥೆ ಕಟ್ಟುವಲ್ಲಿ, ನಿರೂಪಿಸುವಲ್ಲಿ ತಾಜಾತನದ, ನೈಜತೆಯ, ಅಧಿಕೃತತೆಯ ಕೊರತೆಯಿಂದ, ಕೆಲವು ಅನಗತ್ಯ ಪಾತ್ರಗಳನ್ನೂ ಪೋಷಿಸಿ, ಉತ್ಪ್ರೇಕ್ಷತೆಯ, ಮಾತಿನ ಭರದಲ್ಲಿ ಭಾವನೆಗಳನ್ನು ಸೊರಗಿಸಿರುವುದರಿಂದ, ಪ್ರದೀಪ್ ವರ್ಮಾ ನಿರ್ದೇಶನದ 'ಉರ್ವೀ' ನಿರಾಶೆ ಮೂಡಿಸುತ್ತದೆ. ಮಹಿಳಾ ಕೇಂದ್ರಿತ ವಸ್ತು, ಸಮಾಜದ ಒಳಿತಿನ ಬಗೆಗಿನ ಚಿಂತನೆಯಿದೆ ಎಂಬ ಮಾನದಂಡಕ್ಕಾದರೆ ಒಮ್ಮೆ ನೋಡಬಹುದು.