ಸಿನಿಮಾ ಪೋಸ್ಟರ್ 
ಸಿನಿಮಾ ವಿಮರ್ಶೆ

ಕನ್ನಡಿಗರ ಕಣ್ಮಣಿ ಡಾ. ರಾಜಕುಮಾರ್ ಈ ಸಿನಿಮಾ ನೋಡಿದ್ದಿದ್ದರೆ ಬಡವ ರಾಸ್ಕಲ್ ಅಂದುಬಿಡೋರು: ಬಡವ ರಾಸ್ಕಲ್ ಚಿತ್ರವಿಮರ್ಶೆ

ಅಣ್ಣಾವ್ರು, ತಮ್ಮ ಸಿನಿಮಾಗಳಲ್ಲಿ ಕುಡುಕರು, ಸ್ಮೋಕ್ ಮಾಡುವವರು ಹಾಗೂ ಪೋಕರಿಗಳತ್ತ ಒಮ್ಮೆ ಮೇಲಿಂದ ಕೆಳಕ್ಕೆ ಕೆಂಗಣ್ಣು ಬೀರಿ 'ಬಡವ ರಾಸ್ಕಲ್' ಎಂದು ಗದರಿಸುತ್ತಿದ್ದರು. ಅದಕ್ಕೆ ತಕ್ಕನಾಗಿ ನಟಿಸಿರುವ ನಾಯಕ ನಟ ಧನಂಜಯ್, 'ಬಡವ ರಾಸ್ಕಲ್' ಪದಗುಚ್ಚಕ್ಕೆ ನ್ಯಾಯ ಒದಗಿಸಿದ್ದಾರೆ. ಈ ಸಿನಿಮಾ ಮೂಲಕ ಆ ಬೈಗುಳವೂ ಜೋಗುಳವಾಗಲಿದೆ. 

ಚಿತ್ರವಿಮರ್ಶೆ: ಹರ್ಷವರ್ಧನ್ ಸುಳ್ಯ

ಕೊರಿಯರ್ ಬಾಯ್ ಆಗಿ ಮನೆ ಮನೆಗೆ ಪಾರ್ಸೆಲ್ ಡೆಲಿವರಿ ಮಾಡಿದ್ದ ಶಂಕರ್ ಗುರು ಇದೀಗ ಮೊದಲ ಬಾರಿಗೆ ನಿರ್ದೇಶಕರ ಕ್ಯಾಪ್ ಧರಿಸಿ 'ಬಡವ ರಾಸ್ಕಲ್' ಎನ್ನುವ ಫುಲ್ ಮೀಲ್ಸ್ ಮಾಸ್ ಸಿನಿಮಾವನ್ನು ಕನ್ನಡ ಪ್ರೇಕ್ಷರೆದುರು ಡೆಲಿವರಿ ಮಾಡಿದ್ದಾರೆ. ಸ್ನೇಹಿತರೇ ಜಗತ್ತು ಎನ್ನುವ ಭಗ್ನಪ್ರೇಮಿ, ಕನಸು ಬಿತ್ತಿದ ಹುಡುಗಿ, ದೇವರ ಸಮಾನ ಹೆತ್ತವರು, ಮಗನ ಜೊತೆ ಎಣ್ಣೆ ಹಾಕೋ ಅಪ್ಪ, ಎಲ್ಲಾ ಖರ್ಚುಗಳಿಗೂ ಸ್ಪಾನ್ಸರ್ ಮಾಡುವ ಗೆಳೆಯ, ತಂದಿಕ್ಕುವ ಸ್ವಭಾವದ ಪಾಲಿಟಿಷಿಯನ್ ಅತ್ತೆ, ಸಹಾಯ ಮಾಡೋ ಮಿತ್ರಬಳಗ ಹೀಗೆ ಮಾಸ್ ಎಲಿಮೆಂಟು ಎಂದು ಕರೆಸಿಕೊಳ್ಳುವ ಅಂಶಗಳು ಈ ಸಿನಿಮಾದಲ್ಲಿದೆ. ಎಣ್ಣೆ ಸಾಂಗು, ಟಪ್ಪಾಂಗುಚ್ಚಿ ಸ್ಟೆಪ್ಪು, ಕುರ್ಚಿ ಕೋಲುಗಳು ಲಟ ಲಟನೆ ಮುರಿಯುವ ಫೈಟು ಎಕ್ಸೆಟ್ರಾ ಎಲ್ಲವೂ ಬೋನಸ್ಸು. 

ಕುಟುಂಬವರ್ಗವೇ ನೋಡಬಹುದಾದ ಸಿನಿಮಾಗಳನ್ನು ಮಾಡಿಕೊಂಡು ಬಂದವರವರು ಅಣ್ಣಾವ್ರು. ಬಡವ ರಾಸ್ಕಲ್ ಸಿನಿಮಾ ಪುರುಷ ಪ್ರಧಾನ ಸಿನಿಮಾ ಎಂದು ಕರೆಸಿಕೊಳ್ಳುವ ಅಪಾಯವನ್ನು ಎದುರಿಸುತ್ತದೆ. ನಿರ್ದೇಶಕರು ಈ ಸಿನಿಮಾದುದ್ದಕ್ಕೂ ನೀತಿಪಾಠದ ಮೆಸೇಜುಗಳನ್ನು ಪುಂಖಾನುಪುಂಖವಾಗಿ ಹೇಳಿಸುವುದರ ಜೊತೆಗೆ ಪಾತ್ರ ಪೋಷಣೆಯಲ್ಲಿ ಕೊಂಚ ಸೂಕ್ಷ್ಮತೆಯನ್ನೂ ಮೆರೆದಿದ್ದರೆ ಬಡವ ರಾಸ್ಕಲ್ ಪರಿಪೂರ್ಣ ಫ್ಯಾಮಿಲಿ ಚಿತ್ರವಾಗುತ್ತಿತ್ತು. 

ರಿಕ್ಷಾ ಚಾಲಕರಿಗೊಂದು ಪರಾಕು

ಸಿನಿಮಾದ ಕಥಾ ನಾಯಕ ಶಂಕರ ಬೆಂಗಳೂರು, ಬಸವನಗುಡಿ, ಶ್ರೀನಗರ ನಿವಾಸಿ, ವೃತ್ತಿಯಲ್ಲಿ ಆಟೋ ಡ್ರೈವರ್. ತಂದೆ ತಾಯಿಗೆ ಏಕೈಕ ಸುಪುತ್ರ. ತಂದೆ ರಂಗಾಯಣ ರಘು ಆಟೊ ಡ್ರೈವರ್, ತಾಯಿ ತಾರಾ ಗೃಹಿಣಿ.  ಕನ್ನಡಿಗರ ಮಟ್ಟಿಗೆ ಆಟೊ ಡ್ರೈವರ್ ಪ್ರೀತಿ ಗಳಿಸಿದವರಲ್ಲಿ ಮೊದಲು ನೆನಪಾಗುವ ಹೆಸರು ಶಂಕರ್ ನಾಗ್. ವಿಷ್ಣುವರ್ಧನ್, ರವಿಚಂದ್ರನ್ ಕೂಡಾ ಆಟೊ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಧನಂಜಯ್ ಅವರು ರಿಕ್ಷಾ ಡ್ರೈವರುಗಳಿಗೆ ಇಷ್ಟವಾಗುವ ಸಾಧ್ಯತೆ ಬಡವ ರಾಸ್ಕಲ್ ಸಿನಿಮಾದಿಂದ ದಟ್ಟವಾಗಿದೆ. ಮುಂದಿನ ದಿನಗಳಲ್ಲಿ ಕರುನಾಡಿನ ಆಟೋಗಳ ಹಿಂದುಗಡೆ ಶಂಕರ್ ನಾಗ್ ಜೊತೆಗೆ ಡಾಲಿ ಧನಂಜಯ್ ಚಿತ್ರವೂ ಅಚ್ಚಾದರೆ ಅಚ್ಚರಿಯೇನಿಲ್ಲ.

ನಾಯಕ ಶಂಕರ ಸಂಗೀತಾ ಎನ್ನುವ ಹುಡುಗಿಯ ಜೊತೆ ಪ್ರೀತಿಯಲ್ಲಿ ಬೀಳುತ್ತಾನೆ. ಶಂಕರ ಬಡತನ ಹಿನ್ನೆಲೆ ಉಳ್ಳವನಾದರೆ, ಸಂಗೀತ ಶ್ರೀಮಂತೆಯ ಮಗಳು. ಹಾಲಿವುಡ್ ನಲ್ಲಿ ಈ ಬಗೆಯ ಸಿನಿಮಾಗಳನ್ನು princess and stable boy story ಪ್ರಕಾರಕ್ಕೆ ಸೇರಿದ ಸಿನಿಮಾ ಎನ್ನುವರು. ಕುದುರೆ ಲಾಯದಲ್ಲಿ ಕೆಲಸ ಮಾಡುವ ಹುಡುಗ ರಾಜಕುಮಾರಿಯನ್ನು ಪ್ರೀತಿಸುವ ಅನಾದಿ ಕಾಲದ ಕಥೆಯನ್ನು ಆಧರಿಸಿ ಅಸಂಖ್ಯ ಸಿನಿಮಾಗಳು ಹಾಲಿವುಡ್ ಸೇರಿದಂತೆ ಜಗತ್ತಿನ ಹಲವು ಚಿತ್ರರಂಗದಲ್ಲಿ ಬಂದಿವೆ. ಪ್ರೀತಿಸಿದ ಹುಡುಗಿ ನಾಯಕನನ್ನು ಮದುವೆ ವಿಚಾರ ಮಾತನಾಡಲೆಂದು ಅವಳ ಬಂಗಲೆಗೆ ಕರೆಸಿ ಅವಮಾನಿಸುತ್ತಾಳೆ. ಅಲ್ಲಿಂದ ಇಬ್ಬರೂ ದೂರಾಗುತ್ತಾರೆ. ಜೀವದಂತೆ ಪ್ರೀತಿಸಿದ ಹುಡುಗಿ ಹಾಗೇಕೆ ಮಾಡಿದಳು, ಕುಡಿತಕ್ಕೆ ಬಿದ್ದು ಲೈಫು ಹಾಳು ಮಾಡಿಕೊಳ್ಳುತ್ತಿರುವ ಹುಡುಗ ಒಂದೆಡೆಯಾದರೆ, ಅವನಿಂದಾಗಿ ನರಳುತ್ತಿರುವ ಮನೆಯವರು ಇನ್ನೊಂದೆಡೆ. ಅವೆಲ್ಲವೂ ಎಲ್ಲಿ ಅಂತ್ಯವಾಗುತ್ತದೆ, ಅಸಲಿ ವಿಲನ್ ಯಾರು ಎನ್ನುವುದರಲ್ಲೇ ಸಿನಿಮಾದ ಸ್ವಾರಸ್ಯವಿದೆ. 

ಪುರುಷ ಪ್ರಧಾನ ಚಿತ್ರ ಎನ್ನುವ ತೂಗುಗತ್ತಿ

ಬಡವ ರಾಸ್ಕಲ್ ಸಿನಿಮಾ ಪುರುಷ ಪ್ರಧಾನವಾಗಿದೆ ಎನ್ನುವುದಕ್ಕೆ ಅದರಲ್ಲಿನ ಪಾತ್ರ ಪೋಷಣೆಯೇ ಸಾಕ್ಷ್ಯ ನುಡಿಯುತ್ತದೆ. ನಾಯಕನ ತಾಯಿ ಪಾತ್ರದಲ್ಲಿ ನಟಿಸಿರುವ ತಾರಾ, ನಾಯಕಿ ಅಮೃತಾ ಅಯ್ಯಂಗಾರ್ ಮತ್ತು ಆಕೆಯ ತಾಯಿ ರೇಖಾ ಬಿಟ್ಟರೆ ಸಿನಿಮಾದುದ್ದಕ್ಕೂ ಮಹಿಳಾ ಪಾತ್ರಗಳೇ ಕಾಣಸಿಗುವುದಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ಪುರುಷ ಪಾತ್ರಗಳ ಸಂಖ್ಯೆ ಮಾತ್ರ ದಂಡಿಯಾಗಿ ನೂರಾರು ಸಂಖ್ಯೆಯಲ್ಲಿ ಕಾಣಸಿಗುತ್ತವೆ. ಪ್ರೀತಿಸಿದ ಹುಡುಗಿ ಕೈಕೊಟ್ಟಾಗ ನಾಯಕ ಅವಳನ್ನು ಶಪಿಸಿ ತಿರುಗಾಡುವುದನ್ನು ತೋರಿಸಲು ಪಟ್ಟ ಶ್ರಮ ಮತ್ತು ವ್ಯಯಿಸಿದ ಸಮಯದಲ್ಲಿ ನಿರ್ದೇಶಕರು ಕಿಂಚಿತ್ತಾದರೂ ನಾಯಕಿಯ ಮನೋಸ್ಥಿತಿಯನ್ನು ತೋರ್ಪಡಿಸುವಲ್ಲಿ ವಹಿಸಿದ್ದರೆ ಸಿನಿಮಾ ಬೇರೆ ಲೆವೆಲ್ಲಿಗೆ ಹೋಗಿರುತ್ತಿತ್ತು. 

ಟಗರು ಸಿನಿಮಾದ ಡಾಲಿ ಪಾತ್ರವ ಮುಂದುವರಿದ ಭಾಗವಾಗಿ ಬಡವ ರಾಸ್ಕಲ್ ನಾಯಕ ಶಂಕರ ತೋರುತ್ತಾನೆ. ಇನ್ನೂ ನಿಖರವಾಗಿ ಹೇಳಬೇಕೆಂದರೆ ಶಂಕರ, 'ರತ್ನನ್ ಪ್ರಪಂಚ' ರತ್ನಾಕರನಷ್ಟು ಸಾಚಾ ಅಲ್ಲ, ಡಾಲಿಯಷ್ಟು ಕೆಟ್ಟೂ ಹೋಗಿಲ್ಲ. ಅವೆರಡೂ ಪಾತ್ರಗಳ ನಡುವೆ ಬಡವ ರಾಸ್ಕಲ್ ಸಿನಿಮಾ ನಾಯಕ ಶಂಕರ ಬ್ಯಾಲೆನ್ಸ್ ಕಾಯ್ದುಕೊಳ್ಳುತ್ತಾನೆ. ಚಿತ್ರದ ಕಥೆ ತುಂಬಾ ಸರಳವಾಗಿದ್ದು, ದೃಶ್ಯಗಳೇ ಸಿನಿಮಾದ ಜೀವಾಳ. 

ಇಷ್ಟವಾಗುವ ಇಕ್ಕಟ್ ನಾಗಭೂಷಣ್

ಬಡವ ರಾಸ್ಕಲ್ ಆಗಿ ಕಾಣಿಸಿಕೊಂಡಿರುವ ಡಾಲಿ ಧನಂಜಯ್ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಮಾಸ್ ಅಪೀಲನ್ನು ಭದ್ರಪಡಿಸಿಕೊಂಡಿದ್ದಾರೆ. ಅಡುಗೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಎನ್ನುವಂತೆ ನಾಯಕಿ ಅಮೃತಾ ಅಯ್ಯಂಗಾರ್ ಸಿನಿಮಾದ ಹದಕ್ಕೆ ತಕ್ಕಂತೆ ಅಭಿನಯ ನೀಡಿದ್ದಾರೆ. ರಂಗಾಯಣ ರಘು- ತಾರಾ ಜೋಡಿ ಮನ ಮಿಡಿಯುವಂತೆ ನಟಿಸಿದ್ದಾರೆ. ಜೀವದ ಗೆಳೆಯನ ಪಾತ್ರದಲ್ಲಿ ನಟಿಸಿರುವ ಇಕ್ಕಟ್ ನಾಗಭೂಷಣ್ ನಗೆಯುಕ್ಕಿಸುತ್ತಾರೆ, ಇಷ್ಟವಾಗುತ್ತಾರೆ. ಇಕ್ಕಟ್ ಸಿನಿಮಾದಲ್ಲಿ ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಿರುವ ನಾಗಭೂಷಣ್ ಅವರತ್ತ ಕನ್ನಡ ಚಿತ್ರರಂಗ ಕೃಪಾದೃಷ್ಟಿ ಬೀರಬೇಕಿದೆ. ಸಿದ್ಲಿಂಗು ನಿರ್ದೇಶಕ ವಿಜಯಪ್ರಸಾದ್ ಮತ್ತು ಮಠ ಗುರುಪ್ರಸಾದ್ ಸಿನಿಮಾದಲ್ಲಿ ಅಥಿತಿ ಪಾತ್ರಗಳಲ್ಲಿ ನಟಿಸಿದ್ದಾರೆ. ಮಠ ಗುರು ಪ್ರಸಾದ್ ಅವರಿಗೆ ಇನ್ನಷ್ಟು ಮೊನಚಾದ ಡಯಲಾಗನ್ನು ನೀಡಬಹುದಿತ್ತು. 

ಸಂಗೀತ ನಿರ್ದೇಶಕ ವಾಸುಕಿ ವೈಭವ್ ಪ್ರೌಢಿಮೆಗೆ ಬಡವ ರಾಸ್ಕಲ್ ಸಿನಿಮಾದ ಕಿಕ್ ಕೊಡೋ ಹೀರೋ ಬಿಜಿಎಂ ಕೇಳಿದರೆ ಸಾಕು. ಪಂಚಿಂಗ್ ಡಯಲಾಗುಗಳು, ಹಾಸ್ಯ ಚಟಾಕಿಗಳು, ಡಬಲ್ ಮೀನಿಂಗ್ ಜೋಕ್ಸ್, ಆರ್ದ್ರ ಮಾತುಗಳು ಎಲ್ಲವನ್ನೂ ಸಂಭಾಷಣೆ ಒಳಗೊಂಡಿದೆ. ನಿರಂಜನ್ ದೇವರಮನೆ ಎಡಿಟಿಂಗ್ ಪ್ರಶಂಸಾರ್ಹ. ಮಾಸ್ ಸಿನಿಮಾದ ಲುಕ್ ಮತ್ತು ಫೀಲ್ ಗೆ ಅಗತ್ಯವಾಗಿ ಬೇಕಿರುವ ಬಹು ಮುಖ್ಯ ingredient ಅನ್ನು ಸಿನಿಮೆಟೊಗ್ರಾಫರ್ ಪ್ರೀತಾ ಜಯರಾಮನ್ ಒದಗಿಸಿದ್ದಾರೆ. ನಿರ್ದೇಶಕ ಮಣಿರತ್ನಂ ಅವರ ಮೆಚ್ಚಿನ ಸಿನಿಮೆಟೊಗ್ರಾಫರ್ ಆಗಿರುವ ಪಿ.ಸಿ. ಶ್ರೀರಾಮ್ ಅವರ ಸಂಬಂಧಿ ಪ್ರೀತಾ ಎನ್ನುವುದು ವಿಶೇಷ. ಬಡವ ರಾಸ್ಕಲ್ ಸಿನಿಮಾ ಪಡ್ಡೆ ಹುಡುಗರಿಗೆ ಹೇಳಿ ಮಾಡಿಸಿದಂತಿದ್ದರೂ, conditions applied ಎನ್ನುವ ಕರಾರಿನೊಂದಿಗೆ ಕುಟುಂಬಸಮೇತರಾಗಿಯೂ ನೋಡಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT