ಮ್ಯಾಕ್ಸ್ ಚಿತ್ರದಲ್ಲಿ ಸುದೀಪ್ ಅವರ ಸ್ಟೈಲ್ ಮತ್ತು ಸಂಭಾಷಣೆಗಳು ಚಿತ್ರಕ್ಕೆ ಹೊಸ ರೂಪ ನೀಡಿವೆ. ಒಂದು ರಾತ್ರಿಯಲ್ಲಿ ನಡೆಯುವ ಕಥೆ, ರಾಜಕೀಯ ಪಿತೂರಿ, ಅಪರಾಧ ಮತ್ತು ವೈಯಕ್ತಿಕ ಲಾಭಕ್ಕೆ ನಡೆಯುವ ಅವ್ಯವಹಾರಗಳನ್ನೊಳಗೊಂಡಿರುವ ಮ್ಯಾಕ್ಸ್, ಪ್ರೇಕ್ಷಕರಿಗೆ ತೃಪ್ತಿದಾಯಕ ಅನುಭವ ನೀಡುತ್ತದೆ. ಚಿತ್ರದಲ್ಲಿ ಸುದೀಪ್ ಅವರ ಆಕ್ಷನ್ ಪರ್ಫಾರ್ಮೆನ್ಸ್ ಪ್ರೇಕ್ಷಕರನ್ನು ರಂಜಿಸುತ್ತದೆ.
ಬಹು ನಿರೀಕ್ಷಿತ ಕನ್ನಡದ ಆಕ್ಷನ್-ಥ್ರಿಲ್ಲರ್, ಮ್ಯಾಕ್ಸ್, ಕ್ರಿಸ್ಮಸ್‌ನಲ್ಲಿ ಥಿಯೇಟರ್‌ಗಳಲ್ಲಿ ರಿಲೀಸ್ ಆಗಿದೆ. ಸುಮಾರು ಎರಡು ವರ್ಷಗಳ ನಂತರ ಕಿಚ್ಚ ಸುದೀಪ್ ಮುಖ್ಯ ಪಾತ್ರದಲ್ಲಿ ದೊಡ್ಡ ಪರದೆಗೆ ಮರಳಿದ್ದಾರೆ. ಚಿತ್ರವನ್ನು ವಿಜಯ್ ಕಾರ್ತಿಕೇಯನ್ ನಿರ್ದೇಶಿಸಿದ್ದಾರೆ. ಈ ಸುದೀರ್ಘ ಕಾಯುವಿಕೆಯ ನಂತರ ಮ್ಯಾಕ್ಸ್ ತೃಪ್ತಿದಾಯಕ ಸಿನಿಮೀಯ ಅನುಭವವನ್ನು ನೀಡುತ್ತದೆಯೇ?
ಒಳ್ಳೆಯ ಕೆಲಸ ಮಾಡಿದಕ್ಕೂ ಪದೇಪದೇ ಸಸ್ಪೆಂಡ್ ಎಂಬ ಶಿಕ್ಷೆ ಅನುಭವಿಸಿರುವ ಅರ್ಜುನ್ ಮಹಾಕ್ಷಯ್ ಅಲಿಯಾಸ್ ಮ್ಯಾಕ್ಸ್ (ಸುದೀಪ್) ಹಳೆಯ ಪೊಲೀಸ್ ಸ್ಟೇಷನ್‌ವೊಂದಕ್ಕೆ ಹೊಸದಾಗಿ ಇನ್ಸ್‌ಪೆಕ್ಟರ್ ಆಗಿ ಚಾರ್ಜ್ ತೆಗೆದುಕೊಳ್ಳಬೇಕಿರುತ್ತದೆ. ಆದರೆ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳುವ ಹಿಂದಿನ ರಾತ್ರಿಯೇ ಆಗಬಾರದ್ದೆಲ್ಲಾ ಆಗಿಹೋಗುತ್ತದೆ. ಕೆಲಸಕ್ಕೆ ಹಾಜರಾಗುವ ದಿನದ ಹಿಂದಿನ ಸಂಜೆ ಆತ ಪೊಲೀಸ್ ಠಾಣೆ ಇರುವ ಊರಿಗೆ ಬರುತ್ತಾನೆ. ಅದೇ ಸಂದರ್ಭದಲ್ಲಿ ರಾಜಕಾರಣಿಗಳಿಬ್ಬರ ಮಕ್ಕಳು ಕುಡಿದು ಕಾರು ಚಾಲನೆ ಮಾಡಿ, ರಸ್ತೆಯಲ್ಲಿ ಗಸ್ತಿನಲ್ಲಿದ್ದ ಪೊಲೀಸರ ಮೇಲೆ ಕೈ ಮಾಡುತ್ತಾರೆ. ಇದನ್ನು ತಡೆಯುವ ನಾಯಕ ಅವರಿಬ್ಬರನ್ನು ಹಿಡಿದು ಪೊಲೀಸ್ ಠಾಣೆಗೆ ಕರೆದೊಯ್ದು ಎಫ್‌ಐಆರ್ ಹಾಕಲು ಹೇಳುತ್ತಾನೆ. ಇಲ್ಲಿಂದ ಕಥೆ ತೆರೆದುಕೊಳ್ಳುತ್ತದೆ, ಒಂದಿಡೀ ರಾತ್ರಿಯಲ್ಲಿ ಏನೆಲ್ಲಾ ಅವಘಡಗಳು ನಡೆಯುತ್ತವೆ ಮತ್ತು ಅದನ್ನು ಅರ್ಜುನ್ ಮಹಾಕ್ಷಯ್ ಹೇಗೆಲ್ಲಾ ಎದುರಿಸುತ್ತಾನೆ ಎಂಬುದನ್ನು ರೋಚಕವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ವಿಜಯ್ ಕಾರ್ತಿಕೇಯ.
ಮೈಮೇಲೆ ಖಾಕಿ, ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಸುದೀಪ್ ಮಸ್ತ್ ಆಗಿ ಪ್ರೇಕ್ಷಕರನ್ನು ರಂಜಿಸಿ ಅಭಿಮಾನಿಗಳಿಗೆ ಮೃಷ್ಠಾನ್ನ ಬಡಿಸಿದ್ದಾರೆ. ನಿರ್ದೇಶಕ ವಿಜಯ್ ಕಾರ್ತಿಕೇಯ ಅವರು ಮ್ಯಾಕ್ಸ್‌ನೊಂದಿಗೆ ಚೊಚ್ಚಲ ಸಿನಿಮಾದಲ್ಲಿ ಭರವಸೆ ಮೂಡಿಸಿದ್ದಾರೆ. ಕಥೆ ವಿಚಾರಕ್ಕೆ ಬಂದರೆ, ವಾವ್ ಎನ್ನಿಸುವ ಟ್ವಿಸ್ಟ್‌ಗಳಿವೆ. 'ಮ್ಯಾಕ್ಸ್' ಸಿನಿಮಾವನ್ನು ಪ್ರೆಸೆಂಟ್ ಮಾಡಿರುವ ರೀತಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತದೆ. ಒಂದೇ ರಾತ್ರಿಯಲ್ಲಿ ನಡೆಯುವ ಕಥೆಗಳನ್ನು ತೆರೆಗೆ ತರುವುದು ಸಾಮಾನ್ಯ ವಿಷಯವಲ್ಲ. ಸಿನಿಮಾ ಮೊದಲರ್ಧ ಮುಗಿದಿದ್ದೇ ಗೊತ್ತಾಗುವುದಿಲ್ಲ. ಕಥೆ ಅಷ್ಟೊಂದು ವೇಗವಾಗಿ ಸಾಗಿಸಿಕೊಂಡು ಹೋಗುತ್ತದೆ.
ದ್ವಿತೀಯಾರ್ಧದಲ್ಲಿ ಮಾಸ್ ಅಭಿಮಾನಿಗಳನ್ನು ಕೇಂದ್ರೀಕರಿಸಿ ಕಥೆ ಹೆಣೆಯಲಾಗಿದೆ. ಸಿನಿಮಾ ಕಥೆಗೆ ನಾಯಕಿಯಿಲ್ಲ, ಅನಗತ್ಯ ಹಾಡುಗಳಿಲ್ಲ, ಎಳೆದಾಟವಿಲ್ಲ. ಸಿನಿಮಾದಲ್ಲಿ ಸೆಂಟಿಮೆಂಟ್ ಇಲ್ಲ, ಕೇವಲ ಆ್ಯಕ್ಷನ್. ಸುದೀಪ್ ಅವರು ತಮ್ಮ ಬ್ಯಾರಿಟೋನ್ ಧ್ವನಿಯಲ್ಲಿ ಹಾಡಿರುವ 'ಬಾ ಬಾ ಬ್ಲ್ಯಾಕ್ ಶೀಪ್' ಆಸಕ್ತಿದಾಯಕ ಅಂಶವಾಗಿದೆ. ಇದು ಚಿತ್ರಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ. ಸುದೀಪ್ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲಿ ಅವರ ಸ್ಟೈಲ್, ಸಂಭಾಷಣೆಗಳು ‘ಮ್ಯಾಕ್ಸ್’ಗೆ ಹೊಸ ರೂಪ ನೀಡಿದ್ದು ಇಡೀ ಸಿನಿಮಾ ಒನ್ ಮ್ಯಾನ್ ಶೋ ನಂತೆ ಭಾಸವಾಗುತ್ತದೆ. ಕನ್ನಡದ ನಿರ್ದೇಶಕರಿಗಿಂತ ಚೆನ್ನಾಗಿ ಸುದೀಪ್ ಅವರನ್ನು ಹೇಗೆ ಬಳಸಿಕೊಳ್ಳಬೇಕು ಎಂದು ತಿಳಿದಿರುವ ನಿರ್ದೇಶಕ ವಿಜಯ ಕಾರ್ತಿಕೇಯ ಸುದೀಪ್ ವಿಶ್ವರೂಪ ದರ್ಶನ ಮಾಡಿಸಿದ್ದಾರೆ.
ಮ್ಯಾಕ್ಸ್‌ನಲ್ಲಿ ವರಲಕ್ಷ್ಮಿ ಶರತ್‌ಕುಮಾರ್, ಸಂಯುಕ್ತಾ ಹೊರ್ನಾಡ್, ಪ್ರಮೋದ್ ಶೆಟ್ಟಿ, ಸುನಿಲ್ ಸೇರಿದಂತೆ ಹಲವರು ನಟಿಸಿದ್ದಾರೆ. ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಪ್ರತಿ ಪಾತ್ರಕ್ಕೂ ಅರ್ಹ ಸ್ಕ್ರೀನ್ ಸ್ಪೇಸ್ ನೀಡಲಾಗಿದೆ. ಆದರೆ ಸುನಿಲ್ ಅವರ ಚಿತ್ರಣವು ಅವರ ಪುಷ್ಪಾ ಪಾತ್ರವಾದ ಮಂಗಳಂ ಶ್ರೀನುವನ್ನು ನೆನಪಿಸುತ್ತದೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತದ ಮೂಲಕ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಮ್ಯಾಕ್ಸ್ ಕೇವಲ ಆ್ಯಕ್ಷನ್ ಗೆ ಸೀಮಿತವಾಗಿಲ್ಲ. ನೈತಿಕ ಅಸ್ಪಷ್ಟತೆ, ಅಧಿಕಾರದ ಭ್ರಷ್ಟಾಚಾರ ಮತ್ತು ನ್ಯಾಯದ ನಿರಂತರ ಶೋಧನೆಯ ಕಥೆಯಾಗಿದೆ. ರಾಜಕೀಯ ಪಿತೂರಿ, ಅಪರಾಧ ಮತ್ತು ವೈಯಕ್ತಿಕ ಲಾಭಕ್ಕಾಗಿ ನಡೆಯುವ ಅವ್ಯವಹಾರ ಸೇರಿದಂತೆ ಎಲ್ಲಾ ಅಂಶಗಳನ್ನು ಒಟ್ಟಿಗೆ ತರುತ್ತದೆ. ಸಿನಿಮಾ ಕ್ಲೈಮ್ಯಾಕ್ಸ್ ಪ್ರೇಕ್ಷಕರ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರುತ್ತದೆ. ಒಟ್ಟಾರೆ 2024 ರ ಅಂತ್ಯಕ್ಕೆ ಪ್ರೇಕ್ಷಕ ಮಹಾಪ್ರಭುಗಳಿಗೆ ಒಂದೊಳ್ಳೆ ಸಿನಿಮಾ ಸಿಕ್ಕಂತಾಗಿದೆ.
ಸಿನಿಮಾ: ಮ್ಯಾಕ್ಸ್
ನಿರ್ದೇಶಕ: ವಿಜಯ್ ಕಾರ್ತಿಕೇಯನ್
ತಾರಾಗಣ: ಸುದೀಪ್, ವರಲಕ್ಷ್ಮಿ ಶರತ್‌ಕುಮಾರ್, ಸಂಯುಕ್ತ ಹೊರ್ನಾಡ್, ಸುಕೃತಾ ವಾಗ್ಲೆ, ಸುನೀಲ್ ಮುಂತಾದವರು.