ಭೈರತಿ ರಣಗಲ್ ಚಿತ್ರವು ಶಿವರಾಜ್‌ಕುಮಾರ್ ಅವರ ಮಾಸ್ ಅಭಿಮಾನಿಗಳಿಗೆ ಸೀಟಿ ಮಾರ್ ಪರ್ಫಾರ್ಮೆನ್ಸ್ ನೀಡುತ್ತದೆ. ಚಿತ್ರದಲ್ಲಿ ಶಿವಣ್ಣ ವಕೀಲನಾಗಿ ಕಾಣಿಸಿಕೊಂಡು, ತನ್ನ ಗ್ರಾಮವನ್ನು ರಕ್ಷಿಸಲು ಕಾನೂನು ಕೈಗೆತ್ತಿಕೊಳ್ಳುವ ಕಥೆ ಹೊಂದಿದೆ. ಚಿತ್ರದಲ್ಲಿ ನವೀನ್ ಕುಮಾರ್ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ, ಮತ್ತು ಚೇತನ್ ಡಿಸೋಜಾ ಸಾಹಸ ನಿರ್ದೇಶನವು ಚಿತ್ರಕ್ಕೆ ಹೊಸ ರೂಪ ನೀಡಿದೆ.
ಡಾ. ಶಿವರಾಜ್‌ಕುಮಾರ್ ಅವರ ಬಹು ನಿರೀಕ್ಷಿತ ಕನ್ನಡ ಚಿತ್ರ, ಭೈರತಿ ರಣಗಲ್, ಹಲವು ವಿಳಂಬಗಳ ನಂತರ ಅಂತಿಮವಾಗಿ ನವೆಂಬರ್ 15 ರಂದು ಬಿಡುಗಡೆಯಾಗಿದೆ. ಸ್ಯಾಂಡಲ್ ವುಡ್ ನಲ್ಲಿ ಶಿವಣ್ಣ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕನ್ನಡ ಸಿನಿ-ಲೆಜೆಂಡ್ 2017 ರಲ್ಲಿ ತೆರೆಕಂಡ ಸೂಪರ್-ಹಿಟ್ ಕನ್ನಡ ಚಲನಚಿತ್ರ ಮಫ್ತಿಯಲ್ಲಿನ ಪಾತ್ರದ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಈಗ ಮತ್ತೊಮ್ಮೆ ಭೈರತಿ ರಣಗಲ್ ಮೂಲಕ ಶಿವಣ್ಣ ತಮ್ಮ ಸಾಂಪ್ರದಾಯಿಕ ಪಾತ್ರ ಮುಂದುವರಿಸಿದ್ದಾರೆ. ಮಫ್ತಿ ಮತ್ತು ಭೈರತಿ ರಣಗಲ್ ಎರಡೂ ಸಿನಿಮಾಗಳಿಗೂ ನರ್ತನ್ ನಿರ್ದೇಶಕ.
ಸಿನಿಮಾ ಕಥೆ ರಮೇಶ್ ಅರವಿಂದ್ ಹಿನ್ನೆಲೆ ಧ್ವನಿಯಲ್ಲಿ ಆರಂಭ ಆಗುತ್ತದೆ, ಭೈರತಿ ರಣಗಲ್ ಪಾತ್ರಪರಿಚಯವಾಗುತ್ತದೆ. ರಣಗಲ್‌ನ ಬಾಲ್ಯದ ಕಥೆಯಿಂದ ಸಿನಿಮಾ ಶುರುವಾಗುತ್ತದೆ. ಮಾಸ್ ಸಿನಿಮಾ ಆದ್ರೂ ಯಾವುದೇ ಆ್ಯಕ್ಷನ್ ಇಲ್ಲದೇ ಶಿವರಾಜ್‌ಕುಮಾರ್ ಪಾತ್ರ ಎಂಟ್ರಿ ನೀಡುತ್ತದೆ. ಲಾಂಗು, ಮಚ್ಚು ಬದಲು ಪುಸ್ತಕ ಹಿಡಿದು ಕಾಣಿಸಿಕೊಳ್ಳುತ್ತಾರೆ ಶಿವಣ್ಣ. ವಕೀಲನಾಗಿದ್ದ ಭೈರತಿ ರಣಗಲ್ ನಂತರ ಕಾನೂನು ಕೈಗೆತ್ತಿಕೊಳ್ಳುವ ವ್ಯಕ್ತಿ ಆಗಿದ್ದು ಹೇಗೆ ರಣಗಲ್ ನಲ್ಲಿ ತನ್ನ ಸಾಮ್ರಾಜ್ಯ ಸ್ಥಾಪಿಸಿದ್ದು ಹೇಗೆ ಎಂಬುದನ್ನು ಚಿತ್ರದ ಮೊದಲಾರ್ದದಲ್ಲಿ ತೋರಿಸಲಾಗುತ್ತದೆ.
ರೋಣಾಪುರ ಎಂಬ ಊರಿನಲ್ಲಿ 1985ರಲ್ಲಿ ಚಿತ್ರದ ಕಥೆ ಆರಂಭವಾಗುತ್ತದೆ. ಗ್ರಾಮದ ಜನ ಹನಿ ನೀರಿಗೂ ಒದ್ದಾಡುತ್ತಿರುತ್ತಾರೆ. ಭೈರತಿ ರಣಗಲ್ ಇದೇ ಊರಿನ ಬಾಲಕ. ಆತನ ತಂದೆ ಗ್ರಾಮಕ್ಕೆ ನೀರಿನ ಸೌಕರ್ಯ ಒದಗಿಸಲು ಸರ್ಕಾರಕ್ಕೆ ಪ್ರತಿನಿತ್ಯವೂ ಮನವಿ ಸಲ್ಲಿಸುತ್ತಿರುತ್ತಾರೆ. ಇದಕ್ಕೆ ಸೂಕ್ತ ಪ್ರತಿಕ್ರಿಯೆ ದೊರಕದಿದ್ದಾಗ ‘ರಣಗಲ್’ ಒಂದು ದಿನ ಸರ್ಕಾರಿ ಕಛೇರಿಗೆ ಬಾಂಬ್ ಇಟ್ಟು ಆರು ಅಧಿಕಾರಿಗಳನ್ನು ಹತ್ಯೆ ಮಾಡುತ್ತಾನೆ. ಆನಂತರ ಆತನನ್ನು ಬಾಲಾಪರಾಧಿಯಾಗಿ ಜೈಲಿನಲ್ಲಿ ಶಿಕ್ಷಣ ಕಲಿಯುತ್ತಾನೆ, ವಕೀಲ ವೃತ್ತಿ ಅಧ್ಯಯನ ಮಾಡುತ್ತಾನೆ. 21 ವರ್ಷದ ಶಿಕ್ಷೆ ಅನುಭವಿಸಿ ‘ರಣಗಲ್’(ಶಿವರಾಜ್‌ಕುಮಾರ್) ಹೊರಬಂದ ನಂತರ ಕಥೆಯ ಆರಂಭವಾಗುತ್ತದೆ. ಆತ ಜೈಲಿನಿಂದ ಹೊರಬಂದಾಗ ತಮ್ಮ ಗ್ರಾಮದಲ್ಲಿ ತಲೆ ಎತ್ತಿರುವ ಗಣಿಗಾರಿಕೆ ವಿರುದ್ಧ ರಣಗಲ್ ಸಮರ ಆರಂಭವಾಗುತ್ತದೆ. ವಕೀಲನಾಗಿದ್ದ ‘ಭೈರತಿ ರಣಗಲ್’ ಅದಿರು ಸಾಮ್ರಾಜ್ಯದ ‘ಪರಾಂಡೆ’(ರಾಹುಲ್ ಬೋಸ್) ಎಂಬಾತನನ್ನು ಎದುರು ಹಾಕಿಕೊಂಡಾಗ ಕಥೆಗೆ ತಿರುವು ಸಿಗುತ್ತದೆ. ಜನರ ರಕ್ಷಕನಾಗಿದ್ದ ‘ಭೈರತಿ ರಣಗಲ್’ ಏಕೆ ರಾಕ್ಷಸನಾಗಿ ತನ್ನ ‘ರಣಗಲ್ ಸಾಮ್ರಾಜ್ಯ’ವನ್ನು ವಿಸ್ತರಿಸಿದ ಎನ್ನುವುದೇ ಉಳಿದ ಕಥೆಯಾಗಿದೆ.
ಸಿನಿಮಾದ ಮೊದಲಾರ್ದ ನಿಧಾನವಾಗಿಯೇ ತೆರೆದುಕೊಳ್ಳುತ್ತದೆ. ಇಡೀ ಫಸ್ಟ್‌ಹಾಫ್‌ನಲ್ಲಿ ಇರುವುದು ಒಂದೇ ಫೈಟಿಂಗ್ ಸೀನ್. ಅತಿಯಾಗಿ ಆ್ಯಕ್ಷನ್ ಬಯಸುವ ಪ್ರೇಕ್ಷಕರಿಗೆ ಇದು ಕೊರತೆ ಎನಿಸಬಹುದು. ಶಿವರಾಜ್‌ಕುಮಾರ್ ಕಪ್ಪು ಕೋಟು ತೆಗೆದಿಟ್ಟು, ಲಾಯರ್ ಕೆಲಸ ಬದಿಗಿಟ್ಟು ಲಾಂಗ್ ಹಿಡಿದ ನಂತರವೇ ಸಿನಿಮಾದಲ್ಲಿ ಮಾಸ್ ಎಲಿಮೆಂಟ್ ಕಾಣಿಸೋದು ಫಸ್ಟ್ ಹಾಫ್ ಕೊನೆಯಲ್ಲಿ.
ಇಡೀ ಸಿನಿಮಾವನ್ನು ಪೂರ್ತಿಯಾಗಿ ಶಿವಣ್ಣ ಆವರಿಸಿಕೊಂಡಿದ್ದಾರೆ. ಡಾ. ವೈಶಾಲಿ (ರುಕ್ಮಿಣಿ ವಸಂತ್) ಪಾತ್ರ ಹೀಗೆ ಬಂದು ಹಾಗೆ ಹೋಗಿದೆ. ಮಫ್ತಿ ಸಿನಿಮಾದಲ್ಲಿ ಭೂಗತ ಜಗತ್ತಿನ ಕಥೆಯ ಜೊತೆಗೆ ಅಣ್ಣ-ತಂಗಿ ಸೆಂಟಿಮೆಂಟ್ ಕೂಡ ಹೈಲೈಟ್ ಆಗಿತ್ತು. ಆದರೆ ‘ಭೈರತಿ ರಣಗಲ್’ ಚಿತ್ರದಲ್ಲಿ ತಂಗಿ ಪಾತ್ರ (ಛಾಯಾ ಸಿಂಗ್) ಕಾಣಿಸಿಕೊಳ್ಳುವುದು ಕೆಲವು ದೃಶ್ಯಗಳಲ್ಲಿ ಮಾತ್ರ. ತಮಗೆ ಸಿಕ್ಕ ಪಾತ್ರವನ್ನು ಗೋಪಾಲಕೃಷ್ಣ ದೇಶಪಾಂಡೆ ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ. ವಿಲನ್ ಪಾತ್ರದಲ್ಲಿ ನಟಿಸಿರುವ ಅವಿನಾಶ್ ಭೈರತಿ ರಣಗಲ್ ಚಿತ್ರದಲ್ಲಿ ತಮ್ಮ ಗೆಟಪ್ ಸ್ವಲ್ಪ ವಿಭಿನ್ನವಾಗಿ ಬದಲಿಸಿಕೊಂಡಿದ್ದಾರೆ.
ತಂಗಿ ಹಾಗೂ ನಾಯಕಿಯ ಪಾತ್ರದ ಬರವಣಿಗೆಯನ್ನು ಗಟ್ಟಿಗೊಳಿಸಬಹುದಿತ್ತು. ಉಳಿದ ನಟರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಸಿನಿಮಾದಲ್ಲಿ ಹಾಸ್ಯವಿಲ್ಲ, ಕೆಲವು ಸನ್ನಿವೇಶಗಳಲ್ಲಿ ಲಾಜಿಕ್ ಮರೆತು ಸಿನಿಮಾ ನೋಡಬೇಕಾಗುತ್ತದೆ. ಮಫ್ತಿಗೆ ಹೋಲಿಸಿದರೆ ತಾಂತ್ರಿಕವಾಗಿ ಈ ಸಿನಿಮಾ ತುಂಬಾ ಚೆನ್ನಾಗಿದೆ. ನವೀನ್ ಕುಮಾರ್ ಛಾಯಾಚಿತ್ರಗ್ರಹಣ ಮತ್ತು ರವಿ ಬಸ್ರೂರು ಸಂಗೀತ, ಗುಣ ಕಲಾನಿರ್ದೇಶನ, ಚೇತನ್ ಡಿಸೋಜಾ ಸಾಹಸ ನಿರ್ದೇಶನ ಚಿತ್ರಕ್ಕೆ ಹೊಸ ರೂಪವನ್ನೇ ನೀಡಿದೆ. ಶಿವಣ್ಣನ ಅಭಿಮಾನಿಗಳಿಗೆ ಸಿನಿಮಾದಲ್ಲಿ ಬರುವ ಕೆಲವು ಪಂಚಿಂಗ್ ಡೈಲಾಗ್ ರಸದೌತಣ ನೀಡಿವೆ.
ಚಿತ್ರ : ಭೈರತಿ ರಣಗಲ್
ನಿರ್ದೇಶಕ: ನರ್ತನ್
ಕಲಾವಿದರು: ಶಿವರಾಜ್‌ಕುಮಾರ್, ರುಕ್ಮಿಣಿ ವಸಂತ್, ರಾಹುಲ್ ಬೋಸ್, ಅವಿನಾಶ್ ಮುಂತಾದವರು