ಎಪಿ ಅರ್ಜುನ್ ನಿರ್ದೇಶನದ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ 11 ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಕಥೆಯು ಪಾಕಿಸ್ತಾನದಲ್ಲಿ ಸಿಕ್ಕಿಬಿದ್ದ ಭಾರತೀಯ ವ್ಯಕ್ತಿಯ ಸುತ್ತ ಸುತ್ತುತ್ತದೆ. ಆ್ಯಕ್ಷನ್ ದೃಶ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ, ಆದರೆ ಕಥೆ ಬಲವಿಲ್ಲ. ಧ್ರುವ ಸರ್ಜಾ ಅಭಿಮಾನಿಗಳಿಗೆ ಮಾತ್ರ ಈ ಸಿನಿಮಾ ರಸದೌತಣ.
ಮೂರು ವರ್ಷಗಳ ಕಾಲ ಸುದೀರ್ಘವಾಗಿ ತಯಾರಾದ ಮಾರ್ಟಿನ್ ಸಿನಿಮಾ ಬಿಡುಗಡೆಯಾಗಿದೆ. ಎಪಿ ಅರ್ಜುನ್ ನಿರ್ದೇಶನದ ಧ್ರುವ ಸರ್ಜಾ ನಟನೆಯ ಸಿನಿಮಾ 11 ಭಾಷೆಗಳಲ್ಲಿ ರಿಲೀಸ್ ಆಗಿದೆ. ಮಾರ್ಟಿನ್ ಸಿನಿಮಾಗೆ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ. ಧ್ರುವ ಸರ್ಜಾ ಸಿನಿಮಾ ಎಂದ ಮೇಲೆ ಆ್ಯಕ್ಷನ್ ದೃಶ್ಯಗಳಿಗೆ ಕಡಿಮೆ ಇರುವುದಿಲ್ಲ, ಹೀಗಾಗಿ ಮಾರ್ಟಿನ್ ಸಿನಿಮಾದ ಹೊಡೆದಾಟ ಬಡಿದಾಟಕ್ಕೆ ಸೀಮಿತವಾಗಿದೆ.
ಪಾಕಿಸ್ತಾನದಲ್ಲಿ ಭಾರತೀಯ ವ್ಯಕ್ತಿಯೊಬ್ಬ (ಧ್ರುವ ಸರ್ಜಾ) ಸಿಕ್ಕಿಬೀಳುತ್ತಾನೆ. ಇಂಡಿಯನ್ ಎಂಬ ಟ್ಯಾಟೂ ಹಾಕಿಕೊಂಡು ಎಲ್ಲರ ಹುಟ್ಟಡಗಿಸುವ ಬಲಶಾಲಿ. ಗಾಯಗೊಂಡಿರುವ ಅವನಿಗೆ ಅಲ್ಲಿನ ಮಿಲಿಟರಿ ಪಡೆ ಚಿಕಿತ್ಸೆ ನೀಡಿ, ನಂತರ ಬಂಧಿಸುತ್ತದೆ. ಆದರೆ ಅಮ್ನೇಶಿಯಾದಿಂದಾಗಿ ಆತನಿಗೆ ತಾನು ಯಾರೆಂಬುದು ತಿಳಿದಿರುವುದಿಲ್ಲ. ತನ್ನ ಗುರುತನ್ನು ತಾನೇ ಪತ್ತೆ ಮಾಡುವ ದೊಡ್ಡ ಸವಾಲು ಎದುರಾಗುತ್ತದೆ. ತನಗೆ ಅಡ್ಡ ಬಂದವರನ್ನು ಹೊಸಕಿ ಹಾಕಿ ಮುಂದೆ ಸಾಗುವ ಆತನಿಗೆ ತಾನು ಯಾರೆಂಬುದೇ ದೊಡ್ಡ ಪ್ರಶ್ನೆ! ಅಂತಿಮವಾಗಿ ಆತನಿಗೆ ಉತ್ತರ ಸಿಗುತ್ತದೆ. ಸಿನಿಮಾದಲ್ಲಿ ಅರ್ಜುನ್ ಮತ್ತು ಮಾರ್ಟಿನ್ ಎಂಬ ಎರಡು ಪಾತ್ರಗಳಲ್ಲಿ ಧ್ರುವ ಸರ್ಜಾ ನಟಿಸಿದ್ದಾರೆ. ಅರ್ಜುನ್ ಮತ್ತು ಮಾರ್ಟಿನ್ ಇಬ್ಬರ ಬಗ್ಗೆ ವಿವರಿಸುತ್ತಾ ಸಾಗುತ್ತದೆ ಈ ಸಿನಿಮಾದ ಕಥೆ.ಎರಡು ಶೇಡ್ ನಲ್ಲಿ ಧ್ರುವ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಅಧಿಕಾರಿ ಮಾರ್ಟಿನ್ ಅಪರಾಧಿ, ಮಾರ್ಟಿನ್ ಹಾವ-ಬಾವ ಒಂದು ರೀತಿ ಪ್ರಾಣಿಗಳ ರೀತಿಯಲ್ಲಿದೆ.
ಮಾರ್ಟಿನ್‌ನಲ್ಲಿ, ಕಥೆಯು ಮಾರ್ಟಿನ್ ಮತ್ತು ಅರ್ಜುನ್ ಎಂಬ ಎರಡು ಪಾತ್ರಗಳ ಸುತ್ತ ಸುತ್ತುತ್ತದೆ, ಅರ್ಜುನ್ ಮಂಗಳೂರಿನ ಅನಾಥ,ಕಷ್ಟದಲ್ಲಿ ಸಿಲುಕಿಕೊಳ್ಳುತ್ತಾನೆ. ಆದರೆ ಮಾರ್ಟಿನ್ ಹಿನ್ನೆಲೆ ಬಗ್ಗೆ ಸಿನಿಮಾದಲ್ಲಿ ತೋರಿಸಿಲ್ಲ, ಅವನೊಬ್ಬ ಗ್ಯಾಂಗ್ ಸ್ಟರ್ ದೇಶಕ್ಕಾಗಿ ಹೋರಾಡುವಾತ ಎಂಬುದು ಕೊನೆಯಲ್ಲಿ ತಿಳಿಯುತ್ತದೆ, ಆದರೆ ಆರಂಭದಿಂದಲೂ ಮಾರ್ಟಿನ್ ನನ್ನು ಅಪರಾಧಿಯಂತೆಯೆ ಸಿನಿಮಾ ಕಥೆಯಲ್ಲಿ ತೋರಿಸಲಾಗಿದೆ.
ಮಾರ್ಟಿನ್ ಒಂದು ಔಟ್ ಆ್ಯಂಡ್ ಔಟ್ ಆಕ್ಷನ್ ಸಿನಿಮಾ. ಮಾಸ್ ಸಿನಿಮಾ ಪ್ರಿಯರು ಸನ್ನಿವೇಶಗಳು ಹೆಜ್ಜೆ ಹೆಜ್ಜೆಗೂ ಇಲ್ಲಿ ಸಿಗುತ್ತವೆ. ನಿರ್ದೇಶಕ ಎಪಿ ಅರ್ಜುನ್ ಕಥೆಗಿಂತ ಕೇವಲ ಆ್ಯಕ್ಷನ್ ದೃಶ್ಯಗಳಿಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಸಿನಿಮಾ ಆರಂಭದಿಂದಲೂ ಅಂತ್ಯದವರೆಗೂ ಫೈಟಿಂಗ್ ದೃಶ್ಯಗಳದ್ದೇ ಕಾರು ಬಾರು, ನಾಯಕಿ ವೈಭವಿ ಶಾಂಡಿಲ್ಯ ಪಾತ್ರಕ್ಕೆ ಹೆಚ್ಚಿನ ಮನ್ನಣೆ ನೀಡಿಲ್ಲ, ಉಳಿದಂತೆ ಕೆಲವೊಂದು ಡೈಲಾಗ್ ಗಳನ್ನು ಧ್ರುವ ಸರ್ಜಾ ಅಭಿಮಾನಿಗಳನ್ನುರಂಜಿಸಲೆಂದು ಬರೆಯಲಾಗಿದೆ, ಸಂಭಾಷಣೆಯಲ್ಲಿ ಬಿಗಿ ಹಿಡಿತವಿಲ್ಲ. ಚಿತ್ರದಲ್ಲಿ ಅದ್ಧೂರಿ ಮೇಕಿಂಗ್ ಇದೆ, ಆ್ಯಕ್ಷನ್ ಪ್ರಿನ್ಸ್ ಎಂಬ ಹೆಸರು ಉಳಿಸುವ ಸಲುವಾಗಿ ಫೈಟಿಂಗ್ ಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಚಿಕ್ಕಣ್ಣ ಇದ್ದರೂ ಒಂದೂ ಕಾಮಿಡಿ ದೃಶ್ಯವಿಲ್ಲ, ಹಿರಿಯ ನಟ ಅಚ್ಯುತ ಕುಮಾರ್ ಅವರ ಪಾತ್ರವನ್ನು ಚಿತ್ರದಲ್ಲಿ ಸೂಕ್ತವಾಗಿ ಬಳಸಿಕೊಂಡಿಲ್ಲ.
ಸಿನಿಮಾ ಕಥೆಯನ್ನು ಮತ್ತಷ್ಚು ಉತ್ತಮವಾಗಿ ರೂಪುಗೊಳಿಸುವಲ್ಲಿ ನಿರ್ದೇಶಕ ಅರ್ಜುನ್ ಎಡವಿದ್ದಾರೆ. ಉಳಿದ ಎಲ್ಲಾ ಅಂಶಗಳಿಗೂ ನಿರ್ದೇಶಕರು ಗಮನ ಹರಿಸಿದ್ದಾರೆ. ಸಿನಿಮಾ ಅದ್ಧೂರಿಯಾಗಿ ಮೂಡಿ ಬರಲೆಂದು ಯಥೇಚ್ಛವಾಗಿ ಹಣ ಖರ್ಚು ಮಾಡಲಾಗಿದೆ ಎಂಬುದನ್ನು ಸಿನಿಮಾದ ದೃಶ್ಯಗಳು ತೋರಿಸುತ್ತವೆ. ಹಾಡುಗಳು ರಿಚ್ ಆಗಿ ಮೂಡಿ ಬಂದಿವೆ. ರವಿ ಬಸ್ರೂರು ಹಿನ್ನೆಲೆ ಸಂಗೀತ ತಕ್ಕಮಟ್ಟಿಗಿದೆ, ನಿರೀಕ್ಷಿತ ಮಟ್ಟದಲ್ಲಿ ಗ್ರಾಫಿಕ್ಸ್ ಚೆನ್ನಾಗಿ ಮೂಡಿ ಬಂದಿಲ್ಲ. ಕೆಲವು ಪಾತ್ರಗಳು ಹೀಗೆ ಬಂದು ಹಾಗೆ ಹೋಗಲಷ್ಟೇ ಸೀಮಿತವಾಗಿವೆ. ಇಡೀ ಸಿನಿಮಾವನ್ನು ಧ್ರುವ ಆವರಿಸಿಕೊಂಡಿದ್ದಾರೆ.
ಮೂರು ವರ್ಷಗಳಿಂದ ಸಿನಿಮಾ ನಿರ್ಮಾಣದಿಂದಲೇ ಮಾರ್ಟಿನ್ ಸದ್ದು ಮಾಡಿತ್ತು, ಈ ಹಿಂದೆ ಭರ್ಜರಿ, ಅದ್ದೂರಿ ಯಂತ ಹಿಟ್ ಸಿನಿಮಾ ನೀಡಿದ್ದ ಎಪಿ ಅರ್ಜನ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ಬಗ್ಗೆ ಭಾರೀ ಕುತೂಹಲವಿತ್ತು ,ಆದರೆ ಮಾರ್ಟಿನ್ ಬಗ್ಗೆ ಅತಿ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದವರಿಗೆ ನಿರಾಶೆ ಆಗಿರುವುದಂತು ಖಚಿತ, ಫ್ಯಾಮಿಲಿ ಫ್ರೇಕ್ಷಕರನ್ನು ಸೆಳೆಯುವಂತಹ ಯಾವುದೇ ಅಂಶಗಳು ಸಿನಿಮಾದಲ್ಲಿಲ್ಲ, ಆ್ಯಕ್ಷನ್ ಪ್ರಿಯರಿಗೆ ಮಾತ್ರ ಸಿನಿಮಾ ರಸದೌತಣ.