ಮರ್ಫಿ ಚಿತ್ರವು ಭಾವನಾತ್ಮಕ ಪಯಣದ ಮೂಲಕ ಪ್ರೇಕ್ಷಕರಿಗೆ ಸಿಹಿ ನೆನಪುಗಳನ್ನು ನೀಡುತ್ತದೆ. ಬಿಎಸ್‌ಪಿ ವರ್ಮಾ ನಿರ್ದೇಶನದಲ್ಲಿ ಪ್ರಭು ಮುಂಡ್ಕೂರ್ ಹಾಗೂ ರೋಶಿಣಿ ಪ್ರಕಾಶ್ ಅಭಿನಯದ ಈ ಚಿತ್ರವು ಟೈಮ್ ಟ್ರಾವೆಲ್ ಮೂಲಕ ಎರಡು ಕಾಲಘಟ್ಟಗಳ ಕಥೆಯನ್ನು ಹೇಳುತ್ತದೆ. ಪ್ರೀತಿ, ನೋವು, ಮತ್ತು ಜೀವನದ ಆಯ್ಕೆಗಳ ಬಗ್ಗೆ ಪ್ರೇಕ್ಷಕರಿಗೆ ಯೋಚನೆ ಮೂಡಿಸುವ ಈ ಚಿತ್ರವು ಮನಸ್ಸಿಗೆ ಹತ್ತಿರವಾಗುತ್ತದೆ.
ಬಿಎಸ್‌ಪಿ ವರ್ಮಾ ನಿರ್ದೇಶಿಸಿ ಪ್ರಭು ಮುಂಡ್ಕೂರ್ ನಾಯಕನಾಗಿ ಹಾಗೂ ರೋಶಿಣಿ ಪ್ರಕಾಶ್ ಹಾಗೂ ಇಳಾ ವೀರಮಲ್ಲ ಅಭಿನಯಿಸಿರುವ ಮರ್ಫಿ ಸಿನಿಮಾ ಈ ವಾರ ತೆರೆಗೆ ಬಂದಿದೆ. ಮರ್ಫಿ ಸಿನಿಮಾ ಭಾವನಾತ್ಮಕ ಪಯಣದ ಗಾಢವಾದ ಅನುಭವ ನೀಡುತ್ತದೆ.
ಟೈಮ್ ಟ್ರಾವೆಲ್ ಕುರಿತಂತೆ ಈ ಹಿಂದೆ ಸಾಕಷ್ಟು ಸಿನಿಮಾಗಳು ಬಂದಿವೆ, ಆದರೆ ಮರ್ಫಿ ಹೊಸತರಂತೆ ಕಾಣುತ್ತದೆ, ಟೈಮ್ ಟ್ರಾವೆಲ್ ಜೊತೆ ಹಿಂದೆ ನಡೆದ ಮತ್ತೆ ಮುಂದೆ ನಡೆಯುವ ಘಟನಾವಳಿಗಳ ಬಗ್ಗೆ ತಿಳಿದುಕೊಳ್ಳುವ ಕಥೆಯಾಗಿದೆ. ಮರ್ಫಿ ಸಿನಿಮಾದಲ್ಲಿ ಕೆಟ್ಟು ನಿಂತ ರೇಡಿಯೋ ನಾಯಕನ ಜೀವನದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ.
2017 ರಲ್ಲಿ ಗೋವಾದಲ್ಲಿ ಪ್ರಾರಂಭವಾಗುವ ಕಥೆ, ಅಲ್ಲಿ ರೇಡಿಯೊ ರಿಪೇರಿ ತಜ್ಞರ ಮೂಲಕ ಸಿನಿಮಾ ಆರಂಭವಾಗುತ್ತದೆ. ಈ ರೇಡಿಯೋ ಮರ್ಫಿ ಕುಟುಂಬದ ತಲೆಮಾರುಗಳ ನೆನಪುಗಳಿಗೆ ಕರೆದೊಯ್ಯುತ್ತದೆ. ಟೈಮ್ ಲೈನ್ ಭೂತ, ವರ್ತಮಾನ ಮತ್ತು ಭವಿಷ್ಯವನ್ನು ವಿಲೀನಗೊಳಿಸುತ್ತದೆ. ರೇಡಿಯೊದಂತೆಯೇ ನಮ್ಮ ಜೀವನವು ಪರಸ್ಪರ ಸಂಬಂಧ ಹೊಂದಿದೆ ಮತ್ತು ನಿರಂತರವಾಗಿ ಬದಲಾಗುತ್ತಿದೆ ಎಂಬುದನ್ನು ತಿಳಿಸುವ ಪ್ರಯಾಣವು ತೆರೆದುಕೊಳ್ಳುತ್ತದೆ.
ಗೋವಾದ ಅಲ್ಡೋನಾದಲ್ಲಿ ನಮ್ಮ ನಾಯಕನ ಕತೆ ಆರಂಭವಾಗುತ್ತದೆ. ಡೇವಿಡ್ (ಪ್ರಭು ಮುಂಡ್ಕೂರ್), ಕಾಲೇಜು ವಿದ್ಯಾರ್ಥಿ, ಅಪ್ಪ-ಅಮ್ಮನಿಲ್ಲದ ಆತ ಅಜ್ಜನ ಗರಡಿಯಲ್ಲಿ ಬೆಳೆಯುತ್ತಾನೆ. ಅಜ್ಜ ರಿಚಿ (ದತ್ತಾತ್ರೇಯ) ಮೊಮ್ಮಗನ ಆಗು-ಹೋಗುಗಳನ್ನು ನೋಡಿಕೊಳ್ಳುತ್ತಿರುತ್ತಾನೆ, ಜೊತೆಗೆ ಕಟ್ಟು ನಿಟ್ಟಾಗಿ ಶಿಸ್ತಿನಲ್ಲಿ ಬೆಳೆಸಿರುತ್ತಾನೆ. ಈ ವೇಳೆ ಜಸ್ಸಿ (ಇಳಾ ವೀರಮಲ್ಲ) ಸ್ನೇಹ ಬೆಳೆಯುತ್ತದೆ. ಆದರೂ ಆತನಿಗೆ ಜೀವನದಲ್ಲಿ ಏನೋ ಅಪೂರ್ಣತೆಯಿದೆ ಎಂದುಕೊಳ್ಳುತ್ತಾನೆ. ಹುಡುಗಾಟಿಕೆ ಜೀವನದಲ್ಲಿ ಒಂದು ಮಳೆ ಬಂದ ರಾತ್ರಿ ಹಳೇ ರೇಡಿಯೋ ಸಿಗುತ್ತದೆ. ಈ ರೇಡಿಯೋಗೆ ಇದ್ದಕ್ಕಿದ್ದಂತೆ ಜೀವ ಬರುತ್ತದೆ. ರೇಡಿಯೋ ಮಾತನಾಡುತ್ತದೆ.ಅಲ್ಲಿಂದ ಡೇವಿಡ್ ನನ್ನು 1996 ಕಾಲಘಟ್ಟಕ್ಕೆ ಕರೆದೊಯ್ಯುತ್ತದೆ. ಡೇವಿಡ್ ಜೊತೆ ಮಾತನಾಡುತ್ತಿರುವವರು ಯಾರು, ಇಲ್ಲಿಂದ ಮುಂದೇನಾಗುತ್ತದೆ ಎಂಬುದು ಚಿತ್ರದ ಕತೆ.
ಸಿನಿಮಾದಲ್ಲಿ ರೇಡಿಯೋವನ್ನು ಮುಖ್ಯ ಪಾತ್ರಧಾರಿಯನ್ನಾಗಿ ಮಾಡಿಕೊಂಡು ನಿರ್ದೇಶಕ ಬಿ ಎಸ್ ಪ್ರದೀಪ್ ವರ್ಮಾ ಎರಡು ಕಾಲಘಟ್ಟದ ಕತೆಯನ್ನು ಹೇಳಿರುವ ಪರಿ ಅದ್ಭುತವಾಗಿದೆ. ಮಾತು-ಮೌನಗಳ ನಡುವೆ ಮರ್ಫಿ ಪ್ರೇಕ್ಷಕನಿಗೆ ಬರ್ಫಿಯಂತೆ ಸಿಹಿ ನೆನಪುಗಳನ್ನು ಬಿಚ್ಚಿಡುತ್ತದೆ. ಮರ್ಫಿಯು ಪ್ರೀತಿ ಪ್ರೇಮ, ಪ್ರಣಯದ ಕತೆ ಹೇಳುತ್ತದೆ. ಯೌವ್ವನದಲ್ಲಿ ನಡೆದ ನೋವುಗಳು, ಸಿನಿಮಾ ನೋಡುವವರಿಗೆ ಇದು ತಮ್ಮ ಸ್ವಂತ ಜೀವನದ ಅನುಭವದಂತೆ ಮನಸ್ಸಿಗೆ ಹತ್ತಿರವಾಗುತ್ತದೆ. ಪ್ರೀತಿಸಿ ಕಳೆದುಕೊಂಡವರನ್ನು ಮತ್ತೆ ಪಡೆಯಲು ಸಾಧ್ಯವೇ, ನಮ್ಮ ಜೀವನವನ್ನು ಬದಲಾಯಿಸಬಹುದೇ ಅಥವಾ ಮಾಡಿಕೊಂಡಿರುವ ಆಯ್ಕೆಯ ಜೊತೆಯಲ್ಲಿಯೇ ಬದುಕಲು ಕಲಿಯಬೇಕೆ ಎಂಬ ಜಿಜ್ಞಾಸೆ ಮೂಡಿಸುತ್ತದೆ.
ಚಿತ್ರಕ್ಕೆ ನಾಯಕ ಪ್ರಭು ಮಂಡ್ಕೂರ್ ಕತೆ ಬರೆದಿದ್ದಾರೆ, ಹೀಗಾಗಿ ಅವರ ಅಭಿನಯ ಮತ್ತಷ್ಟು ಆಪ್ಯಾಯಮಾನ ಎನಿಸುತ್ತದೆ. ಪ್ರಭು ಮಂಡ್ಕೂರ್ ಭಾವಾನಾತ್ಮಕ ದೃಶ್ಯಗಳಲ್ಲಿ ಮನೋಜ್ಞವಾಗಿ ನಟಿಸಿದ್ದಾರೆ. ಎಮೋಷನಲ್ ಪಾತ್ರಕ್ಕೆ ಬೇಕಾದ ನ್ಯಾಯ ಒದಗಿಸಿದ್ದಾರೆ, ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಭರವಸೆಯ ನಾಯಕ ಎನ್ನಿಸುವಂತಿದ್ದಾರೆ. ರೋಶಿನಿ ಪ್ರಕಾಶ್ ಮತ್ತು ಇಳಾ ವೀರಮಾಲಾ ಅವರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ಹಿಡಿದಿಡುತ್ತಾರೆ. ಸಿನಿಮಾ ಮುಗಿದ ಮೇಲೂ ಪಾತ್ರಗಳು ಅಚ್ಚಳಿಯದೆ ಮನಸ್ಸಿನಲ್ಲಿ ಉಳಿಯುವಂತಹ ಪಾತ್ರಗಳು. ಹಿರಿಯ ನಟ ದತ್ತಣ್ಣ ಅವರ ಅಭಿನಯದ ಬಗ್ಗೆ ಮಾತನಾಡುವಂತಿಲ್ಲ. ಎಂದಿನಂತೆ ಅದ್ಭುತವಾಗಿ ನಟಿಸಿದ್ದಾರೆ. ಹಿನ್ನೆಲೆ ಸಂಗೀತ ಸಿನಿಮಾವನ್ನು ಮತ್ತಷ್ಟು ಕಾವ್ಯಮಯವನ್ನಾಗಿಸಿದೆ. ಸಿನಿಮಾಟೋಗ್ರಫಿ ಅದ್ಭುತವಾಗಿದೆ. ಅರ್ಜುನ್ ಜನ್ಯ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳು ಮನಸ್ಸಿಗೆ ಮುದ ನೀಡುತ್ತವೆ.
ಇಷ್ಟೆಲ್ಲಾ ಇದ್ದರೂ ಸಿನಿಮಾದಲ್ಲಿ ಕೆಲವು ನ್ಯೂನತೆಗಳಿವೆ, ಚಿತ್ರದಲ್ಲಿ ಲಾಜಿಕ್ ನಿರೀಕ್ಷಿಸುವಂತಿಲ್ಲ, ಸಿನಿಮಾದ ದ್ವಿತೀಯಾರ್ಧದಲ್ಲಿ ಕೆಲವು ದೃಶ್ಯಗಳು ಪುನಾರಾವರ್ತನೆಯಾದಂತೆ ಎನಿಸುತ್ತದೆ. ಕೆಲವು ಕಡೆ ಅನಾವಶ್ಯಕವಾಗಿ ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ ಎನ್ನುವಂತಿದೆ. ಕೆಲವು ಕಡೆ ಕಥೆ ಎಳೆದಂತಿದೆ ಎನ್ನುವ ಭಾವನೆ ಮೂಡುತ್ತದೆ. ಆದರೆ ಸಿನಿಮಾ ಭಾವಾನಾತ್ಮಕ ಪಯಣದ ಅನುಭೂತಿ ನೀಡುತ್ತದೆ. ಒಟ್ಟಾರೆ ಕೌಟುಂಬಿನ ಮನರಂಜನೆಯ ಸಿನಿಮಾವಾಗಿದೆ ಮರ್ಫಿ.
ಚಿತ್ರ: ಮರ್ಫಿ
ನಿರ್ದೇಶನ: ಬಿ ಎಸ್ ಪ್ರದೀಪ್ ವರ್ಮ
ಕಲಾವಿದರು: ಪ್ರಭು ಮುಂಡ್ಕೂರ್, ರೋಶಿನಿ ಪ್ರಕಾಶ್, ದತ್ತಣ್ಣ, ಇಳಾ ವೀರಮಲ್ಲ.