ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ಸ್ಟಿಲ್ 
ಸಿನಿಮಾ ವಿಮರ್ಶೆ

Ibbani Tabbida Ileyali Movie Review: ಪರಿಚಿತ ಸರಳ ಕತೆಯ ಪ್ರೇಮ ಕಾವ್ಯ; ನವಿರಾದ ಪ್ರೀತಿಯ ಮಧುರ ಅನುಭಾವ!

Shilpa D

ಚಂದ್ರಜಿತ್‌ ಬೆಳ್ಳಿಯಪ್ಪ ನಿರ್ದೇಶನದ 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರವು ಪ್ರೇಮ, ಕಾಳಜಿ ಮತ್ತು ಜೀವನದ ಸಂಕೀರ್ಣತೆಯ ಸುತ್ತಮುತ್ತ ಹೆಣೆಯಲ್ಪಟ್ಟಿದೆ. ವಿಹಾನ್, ಅಂಕಿತಾ ಅಮರ್ ಮತ್ತು ಮಯೂರಿ ಅಭಿನಯದ ಈ ಚಿತ್ರವು ಪ್ರೀತಿಯ ನಿಜವಾದ ಅರ್ಥವನ್ನು ಹುಡುಕುವ ಸಿದ್ ಮತ್ತು ರಾಧಾ ಅವರ ಜೀವನದ ಕಥೆಯನ್ನು ತೆರೆದಿಡುತ್ತದೆ. ಚಿತ್ರದಲ್ಲಿ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತವು ವಿಶೇಷ ಆಕರ್ಷಣೆ.

ಚಂದ್ರಜಿತ್‌ ಬೆಳ್ಳಿಯಪ್ಪ ನಿರ್ದೇಶನದ ಪ್ರೇಮಕಾವ್ಯ "ಇಬ್ಬನಿ ತಬ್ಬಿದ ಇಳೆಯಲಿ" ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ರಕ್ಷಿತ್ ಶೆಟ್ಟಿ ಅವರ ಪರಂಮಾವ್ ಸ್ಟುಡಿಯೋಸ್ ನಿರ್ಮಿಸಿರುವ ಸಿನಿಮಾದಲ್ಲಿ ವಿಹಾನ್ , ಅಂಕಿತಾ ಅಮರ್ ಮತ್ತು ಮಯೂರಿ ನಟಿಸಿದ್ದಾರೆ.

ಸಿನಿಮಾವು ಸಾಂಪ್ರದಾಯಿಕ ಕುಟುಂಬದ ವಿವಾಹದೊಂದಿಗೆ ಪ್ರಾರಂಭವಾಗುತ್ತದೆ, ತನಗಿಂತ ಹತ್ತು ವರ್ಷ ಕಿರಿಯವಳಾದ ರಾಧಾ (ಮಯೂರಿ ನಟರಾಜ)ಳನ್ನು ಮದುವೆಯಾಗಬೇಕೆ ಅಥವಾ ಬೇಡವೇ ಎಂಬ ಸಂದಿಗ್ಧತೆಯೊಂದಿಗೆ ಒತ್ತಡದಲ್ಲಿ ಸಿಲುಕಿರುವ ಯುವ ಉದ್ಯಮಿ ಸಿದ್ (ವಿಹಾನ್) ಪರಿಚಯವಾಗುತ್ತದೆ. ಕಾಳಜಿ ಮತ್ತು ಪ್ರೀತಿಯ ನಡುವಿನ ಸೂಕ್ಷ್ಮ ಸಂವೇದನೆ ಬಗ್ಗೆ ಸಿನಿಮಾ ಕಥೆ ಹೆಣೆಯಲಾಗಿದೆ. ವ್ಯಕ್ತಿಯು ಒಬ್ಬರನ್ನು ಪ್ರೀತಿಸಲು ಸಾಧ್ಯವಾಗದಿದ್ದರೆ ಅವರನ್ನು ಮದುವೆಯಾಗುವುದು ನ್ಯಾಯವೇ ಎಂದು ಪ್ರಶ್ನಿಸುವ ಮೂಲಕ ಸಿನಿಮಾ ಕತೆ ತೆರೆದುಕೊಳ್ಳುತ್ತದೆ.

ಕನ್ನಡಿಗರಲ್ಲದ, ಹಿಂದಿ ಮಾತನಾಡುವ ಹುಡುಗಿ ಅನಾಹಿತಾ (ಅಂಕಿತಾ ಅಮರ್) ಪರಿಚಯವಾಗುತ್ತದೆ, ಆಕೆಯನ್ನು ನೋಡಿದ ಮೇಲೆ ಸಿದ್‌ನ ಜೀವನದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗುತ್ತದೆ. ಕ್ರಿಕೆಟ್‌ ಕುರಿತು ಮಹಾತ್ವಕಾಂಕ್ಷೆ ಹೊಂದಿರುವ ಸಿದ್ದಾರ್ಥ್‌ ಅಶೋಕ್‌ ಬಿಸಿರಕ್ತದ ಯುವಕ. ಜೂನಿಯರ್‌ ಹುಡುಗಿಯನ್ನು ಭೇಟಿಯಾದ ಸಂದರ್ಭದಲ್ಲಿ ಆಕೆಯ ಆಕರ್ಷಣೆಗೆ ಒಳಗಾಗುತ್ತಾನೆ. ಅವಳು ಯಾರೆಂದು ತಿಳಿಯಲು ಮತ್ತು ಅವರಿಬ್ಬರ ನಡುವಿನ ಸಂಬಂಧ ಏನೆಂದು ಅರ್ಥ ಮಾಡಿಕೊಳ್ಳಲು ಈತನಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಈತನ ಕೋಪವೇ ಪ್ರೀತಿಗೆ ಶಾಪವಾಗುತ್ತದೆ. ಈತನ ಆಂಗ್ರಿಮ್ಯಾನ್‌ ಅವತಾರದಿಂದಾಗಿ ಇಬ್ಬರೂ ದೂರವಾಗುತ್ತಾರೆ.

ರಾಧಾ ನಿಷ್ಕಲ್ಮಶ ಮನಸ್ಸಿನ ಶಾಂತಿಯುತ ಯುವತಿ. ಸಿದ್‌ನೊಂದಿಗೆ ವಿವಾಹವಾಗಿ ಸುಂದರ ಜೀವನದ ಕನಸುಗಳನ್ನು ಕಾಣುತ್ತಿರುವ ಹುಡುಗಿ. ವಯಸ್ಸಿನ ಅಂತರದ ಹೊರತಾಗಿಯೂ, ಸಿದ್‌ನನ್ನು ಮದುವೆಯಾಗಲು ರಾಧಾ ನಿರ್ಧರಿಸುತ್ತಾಳೆ. ಪ್ರೀತಿಯು ಅಸ್ತಿತ್ವದಲ್ಲಿಲ್ಲದ ಸ್ಥಳದಲ್ಲಿ ಬೆಳೆಯಬಹುದು ಎಂಬ ಭರವಸೆ ಹೊಂದಿರುವ ಹುಡುಗಿ.ಆಕೆಯ ನಂಬಿಕೆ ನಿಜವಾಗುವುದೇ ಎಂಬುದೇ ಯಕ್ಷ ಪ್ರಶ್ನೆ. ಚಿತ್ರದ ಕಥೆಯನ್ನು ಹಲವು ಸಂಕೇತಗಳ ಮೂಲಕ ನಿರ್ದೇಶಕರು ಹೇಳಹೊರಟಿದ್ದಾರೆ. ಸಿದ್‌ನ ನಿಜವಾದ ಭಾವನೆಗಳು ಹೊರಹೊಮ್ಮಲು ಪ್ರಾರಂಭಿಸಿದಾಗ ಉದ್ವೇಗವು ಶುರುವಾಗುತ್ತದೆ. ಭಾವನೆಗಳನ್ನು ವ್ಯಕ್ತಪಡಿಸಲು ಸಿದ್ ಹೆಣಗಾಡುತ್ತಾನೆ. ಆದರೆ ರಾಧಾ, ಅವನ ನಡೆಯನ್ನು ತಪ್ಪಾಗಿ ಅರ್ಥೈಸುತ್ತಾಳೆ, ಕೆಲವು ವಿಷಯಗಳಲ್ಲಿ ಆತನನ್ನು ತಮಾಷೆಯಾಗಿ ನೋಡುತ್ತಾಳೆ, ಇದು ಅವರ ಸಂಬಂಧದ ಸಂಕೀರ್ಣತೆಯನ್ನು ಹೆಚ್ಚಿಸುತ್ತದೆ.

ಫ್ಲ್ಯಾಶ್‌ಬ್ಯಾಕ್‌ಗಳ ಮೂಲಕ, ಚಿತ್ರದಲ್ಲಿ ಸಿದ್‌ನ ಹಿಂಜರಿಕೆಗೆ ಕಾಣವನ್ನು ತೆರೆದಿಡಲಾಗುತ್ತದೆ. ಮದುವೆಯಲ್ಲಿ ಚಿಕ್ಕ ಮಗುವೊಂದು ಬಳಸಿದ ಸಣ್ಣ ಕ್ಯಾಮೆರಾ, ಸಿದಾರ್ಥ್ ಗೆ ಹಿಂದಿನ ನೆನಪನ್ನು ಕಾಡುತ್ತದೆ. ತನ್ನ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ಸೆರೆಹಿಡಿಯಲು ಒಮ್ಮೆ ಪೋಲರಾಯ್ಡ್ ಕ್ಯಾಮೆರಾವನ್ನು ಬಳಸಿದ ಅವನ ತಾಯಿಯನ್ನು ನೆನಪಿಸಿಕೊಳ್ಳುತ್ತಾನೆ. ಸಿದ್ ತನ್ನ ಮನಸ್ಸಿನ ಆಂತರಿಕ ಘರ್ಷಣೆಯಿಂದಾಗಿ ಮದುವೆಯನ್ನು ರದ್ದುಗೊಳಿಸುತ್ತಾನೆ, ಇದು ಆತನ ಕ್ರೌರ್ಯವೇ ಅಥವಾ ಪ್ರಾಮಾಣಿಕತೆಯ ಪ್ರಜ್ಞೆಯೋ ಎಂಬ ಸಂದೇಹಕ್ಕೆ ಪ್ರೇಕ್ಷಕರನ್ನು ದೂಡುತ್ತದೆ.

ಅನಾಹಿತಳ ನೆನಪು ರಾಧಾಳ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ. ಸಿದ್ ಭೂತ ಮತ್ತು ವರ್ತಮಾನದ ನಡುವೆ ಸಿಲುಕಿಕೊಳ್ಳುತ್ತಾನೆ. ಸಿದ್ ಅನಾಹಿತಾಳ ಜೊತೆಗಿದ್ದ ಕ್ಷಣಗಳನ್ನು ಸ್ಮರಿಸುತ್ತಾನೆ.7 ವರ್ಷಗಳ ಬಳಿಕ ಅನಾಹಿತ ಮತ್ತು ಸಿದ್ ಬೇರೆಯದ್ದೇ ಆದ ಸಂದರ್ಭಗಳಲ್ಲಿ ಸಂಪರ್ಕಿಸುತ್ತಾರೆ. ಈ ನಡುವೆ ರಾಧಾ ಮತ್ತು ಅನಾಹಿತಾ ನಡುವಿನ ಹೋಲಿಕೆ ಅನಿವಾರ್ಯವಾಗುತ್ತದೆ. ಆದರೆ ತಾನು ಅನಾಹಿತ ಮರಳಬೇಕೆಂದು ಬಯಸುತ್ತಿಲ್ಲ, ಆಕೆಯ ನೆನಪನ್ನು ಅಳಿಸಿಹಾಕಲು ಪ್ರಯತ್ನಿಸುತ್ತಿರುವುದಾಗಿ ಆಕೆಗೆ ಮನದಟ್ಟು ಮಾಡಿಕೊಡಲು ಯತ್ನಿಸುತ್ತಾನೆ.ಇದೆಲ್ಲದರಿಂದ ಹೊರ ಬರಲು ಆತ ಗೋವಾ ಪ್ರಯಾಣ ಕೈಗೊಳ್ಳುತ್ತಾನೆ.

ಕಥೆಯು ತೆರೆದುಕೊಳ್ಳುತ್ತಾ ಹೋದಂತೆ, ಸಿದ್ ಕೇವಲ ರಾಧೆಯ ಮೇಲಿನ ಭಾವನೆಗಳೊಂದಿಗೆ ಹೋರಾಡುತ್ತಿಲ್ಲ, ಆದರೆ ತನ್ನ ಮನಸ್ಸಿನಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಅನಾಹಿತಾಳ ಗತಕಾಲದ ನೆನಪುಗಳೊಂದಿಗೆ ಹೋರಾಡುತ್ತಿದ್ದಾನೆ ಎಂಬುದು ಸ್ಪಷ್ಟವಾಗುತ್ತದೆ. ಉತ್ತರಗಳನ್ನು ಹುಡುಕುತ್ತಾ ಗೋವಾಕ್ಕೆ ಹೋಗುವ ಆತನ ಪ್ರಯಾಣವು ತನ್ನ ಭೂತಕಾಲವನ್ನು ತನ್ನ ವರ್ತಮಾನದೊಂದಿಗೆ ಸಂಪರ್ಕಿಸುತ್ತದೆ. ಸಿನಿಮಾದಲ್ಲಿ ಸಿದ್ ತಾಯಿಯ ಕನಸಿನ ಬಗ್ಗೆ ತೋರಿಸಲಾಗಿದೆ. ಸಿದ್ ಕ್ರಿಕೆಟರ್ ಆಗಬೇಕೆಂದು ಆಕೆ ತಾಯಿಯ ಕನಸು, ಆದರೆ ಒಂದು ಕಾರಣಕ್ಕಾಗಿ ಸಿದ್ ಕ್ರಿಕೆಟ್ ತ್ಯಜಿಸುತ್ತಾನೆ. ಕ್ರಿಕೆಟ್ ತೊರೆಯಲು ಏನು ಕಾರಣ, ಅನಾಹಿತಾ ನೆನಪು ಸಿದ್ ಜೀವನದಿಂದ ಅಳಿಸಿಹೋಗುತ್ತದೆಯೇ, ರಾಧಾಳಿಗೆ ಸಿದ್ ನ್ಯಾಯ ನೀಡುತ್ತಾನಾ ಎಂಬುದನ್ನು ತಿಳಿದುಕೊಳ್ಳಲು ಸಿನಿಮಾ ನೋಡಬೇಕು.

ಸಿನಿಮಾದಲ್ಲಿ ಕತೆ ಹೇಳಲು ಹೆಚ್ಚು ಪ್ಲಾಶ್ ಬ್ಯಾಕ್ ಬಳಸಲಾಗಿದೆ. ಸಿನಿಮಾ ಕಥೆಯು ಸರಳ ಹಾಗೂ ಪರಿಚಿತವೆನಿಸುತ್ತದೆ.ಮಧುರ ಪ್ರೇಮದ ಜೊತೆಗೆ ಪ್ರಕೃತಿಯ ರಮ್ಯ ಮನೋಹರ ದೃಶ್ಯ ಕಾವ್ಯ ಮನಸ್ಸಿಗೆ ಮುದ ನೀಡುತ್ತದೆ. ಕಳೆದು ಹೋದ ಪ್ರೀತಿಯನ್ನು ಮತ್ತದೆ ಜಾಗದಲ್ಲಿ ಪಡೆಯಬಹುದೇ ಪ್ರೀತಿ ಇಲ್ಲದೆ ಮದುವೆಯಾಗುವುದು ಸರಿಯೇ? ಕಾಳಜಿ ಮತ್ತು ನಿಜವಾದ ಪ್ರೀತಿಯನ್ನು ಅರಿಯುವುದು ಹೇಗೆ ಎಂಬೆಲ್ಲಾ ಪ್ರಶ್ನೆಗಳು ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ ನಮ್ಮಲ್ಲಿ ಮೂಡಿಸುತ್ತದೆ.

ನಿರ್ದೇಶಕರ ದೃಷ್ಟಿಕೋನಕ್ಕೆ ಕಲಾವಿದರು ಸಂಪೂರ್ಣ ನ್ಯಾಯ ಸಲ್ಲಿಸಿದ್ದಾರೆ. ಅಂಕಿತಾ ಅಮರ್, ವಿಹಾನ್ ಮತ್ತು ಮಯೂರಿ ಅಭಿನಯ ಉತ್ತಮವಾಗಿ ಮೂಡಿ ಬಂದಿದೆ. ಛಾಯಾಗ್ರಾಹಕ ಶ್ರೀವತ್ಸನ್ ಸೆಲ್ವರಾಜನ್ ಅವರ ಕಾವ್ಯಾತ್ಮಕ ದೃಶ್ಯಗಳು, ಗಗನ್ ಬಡೇರಿಯಾ ಅವರ ಹಿತವಾದ ಹಿನ್ನೆಲೆ ಸಂಗೀತ, ಕೆಲವು ಸುಮಧುರ ಹಾಡುಗಳು ಸಿನಿಮಾವನ್ನು ಮತ್ತಷ್ಟು ಸುಂದರವಾಗಿಸಿವೆ.

ಚಿತ್ರ: ಇಬ್ಬನಿ ತಬ್ಬಿದ ಇಳೆಯಲಿ

ನಿರ್ದೇಶಕ: ಚಂದ್ರಜಿತ್ ಬೆಳ್ಳಿಯಪ್ಪ

ತಾರಾಗಣ: ಅಂಕಿತಾ ಅಮರ್, ವಿಹಾನ್, ಮಯೂರಿ ನಟರಾಜ ಮತ್ತು ಗಿರಿಜಾ ಶೆಟ್ಟರ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT