ನಟ ನಾಗಭೂಷಣ್, ಮಲೈಕಾ ವಸುಪಾಲ್, ಗರುಡಾ ರಾಮ್ ಹಾಗೂ ಡಾಲಿ ಧನಂಜಯ್ ನಟನೆಯ 'ವಿದ್ಯಾಪತಿ' ಸಿನಿಮಾ ರಿಲೀಸ್ ಆಗಿದೆ. ಡಾಲಿ ಧನಂಜಯ್ ನಿರ್ಮಿಸಿರುವ ಈ ಸಿನಿಮಾಗೆ 'ಇಕ್ಕಟ್' ಡೈರೆಕ್ಟರ್ ಹಸೀನ್ ಖಾನ್ ಹಾಗೂ ಇಶಾಮ್ ಖಾನ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಯಾವುದೇ ಕೆಲಸ ಮಾಡದೆ ಆರಾಮವಾಗಿ ತಿಂದುಂಡು ಓಡಾಡಿಕೊಂಡಿರಬೇಕು ಎಂಬ ಉದ್ದೇಶ ಹೊಂದಿರುವ ನಾಯಕ ಸಿದ್ದು( ನಾಗಭೂಷಣ್) ಚಿತ್ರ ನಟಿ ಸೂಪರ್‌ಸ್ಟಾರ್ ವಿದ್ಯಾ(ಮಲೈಕಾ ವಸುಪಾಲ್ )ಗೆ ಸುಳ್ಳಿನ ಕಂತೆ ಹೇಳಿ ಮದುವೆಯಾಗುತ್ತಾನೆ.
ನಟಿ ವಿದ್ಯಾ ವೇಷ ಬದಲಿಸಿಕೊಂಡು ರಸ್ತೆ ಬದಿಯಲ್ಲಿ ಪಾನಿ ಪೂರಿ ತಿನ್ನಲು ಬರುವ ದೃಶ್ಯದಿಂದ ಸಿನಿಮಾ ಆರಂಭವಾಗುತ್ತದೆ. ಅಲ್ಲಿ ರಸ್ತೆಯಲ್ಲಿ ಮಹಿಳೆಗೆ ಕಿರುಕುಳ ನೀಡಲಾಗುತ್ತಿರುತ್ತದೆ. ಇದನ್ನು ತಪ್ಪಿಸಲು ಹೀರೋ ಸಿದ್ದು ಎಂಟ್ರಿಯಾಗುತ್ತದೆ. ಅಲ್ಲಿಂದ ವಿದ್ಯಾಳನ್ನು ಇಂಪ್ರೆಸ್ ಮಾಡಲು ಸಿದ್ದು ಪಡುವ ಪಾಡು ಅಷ್ಟಿಷ್ಟಲ್ಲ. ಬಾಕ್ಸ್ ಆಫೀಸ್ ರಾಣಿಯಾಗಿದ್ದ ವಿದ್ಯಾಳ ಪ್ರೀತಿ ಗೆಲ್ಲಲು ಹುಟ್ಟು ಸೋಮಾರಿ ಸಿದ್ದು ಹಲವು ಉಪಾಯ ಮಾಡಿ ಆಕೆಯ ಮನಸ್ಸು ಗೆದ್ದು ಮದುವೆಯಾಗುತ್ತಾನೆ. ಹೆಂಡತಿ ದುಡ್ಡಿನಲ್ಲಿ ರಾಯಲ್ ಜೀವನ ನಡೆಸಿಕೊಂಡು ಮಜಾ ಮಾಡುತ್ತಾನೆ. ಸಿದ್ದು ಬಾಳಲ್ಲಿ ಬಿರುಗಾಳಿಯಾಗಿ ಜಗ್ಗುವಿನ (ಗರುಡ ರಾಮ್) ಪ್ರವೇಶವಾಗುತ್ತದೆ. ನಂತರ ಸಿದ್ದು ನಸೀಬ್ ಖರಾಬ್ ಆಗುತ್ತದೆ.
ಈ ಜಗ್ಗು ಏಕೆ ಸಿದ್ದುಗೆ ತೊಂದರೆ ಕೊಡ್ತಾನೆ? ದೈತ್ಯ ಜಗ್ಗು ವಿರುದ್ಧ ಸಿದ್ದು ಗೆಲ್ಲುತ್ತಾನಾ? ಎಂಬುದೇ ಸಿನಿಮಾ ಕಥೆ, ಇದೆಲ್ಲವನ್ನ ಹಾಸ್ಯಮಯವಾಗಿ ತೋರಿಸಲು ಪ್ರಯತ್ನಿಸಿದ್ದಾರೆ ನಿರ್ದೇಶಕರು, ವಿದ್ಯಾಪತಿ ಸಿದ್ಧು ಪಾತ್ರದಲ್ಲಿ ನಾಗಭೂಷಣ ಕಾಮಿಡಿ ಮೂಲಕ ಕಮಾಲ್ ಮಾಡಿದ್ದಾರೆ. ಮಲ ಮಗನಾಗಿ, ಗಂಡನಾಗಿ, ತಿಳಿ ಹಾಸ್ಯ, ವಿಶಿಷ್ಟ ಮ್ಯಾನರಿಸಂ ನಾಗಭೂಷಣ ಮೂಲಕ ಗಮನ ಸೆಳೆಯುತ್ತಾರೆ. ಪ್ರತಿ ಸೀನ್‌ನಲ್ಲೂ ನಾಗಭೂಷಣ ಕಾಣಿಸಿಕೊಳ್ಳುತ್ತಾರೆ. ಆದರೂ ಜನರನ್ನು ನಗಿಸುವಲ್ಲಿ ಹಿಂದೆ ಬಿದ್ದಿಲ್ಲ. ಹಾಗೇ ಭಾವನಾತ್ಮಕವಾಗಿ ಗಮನ ಸೆಳೆಯುತ್ತಾರೆ.
ಇನ್ನು ನಾಯಕಿ ಮಲೈಕಾ ವಸುಪಾಲ್ ತೆರೆಮೇಲೆ ಸುಂದರವಾಗಿ ಕಾಣಿಸುತ್ತಾರೆ. ಆದರೆ ಚಿತ್ರದಲ್ಲಿ ಇವರಿಗೆ ಸ್ಕ್ರೀನ್ ಸ್ಲೇಸ್ ಕಡಿಮೆಯಿದೆ. ಖಳನಾಯಕನ ಪಾತ್ರದಲ್ಲಿ ಗರುಡ ರಾಮ್ ಇಷ್ಟವಾಗುತ್ತಾರೆ, ಇಲ್ಲಿವರೆಗೂ ಸಿಕ್ಕಾಪಟ್ಟೆ ರಗಡ್ ಆಗಿ ಕಾಣಿಸಿಕೊಂಡಿದ್ದ ಗರುಡ ರಾಮ್ ವಿಶಿಷ್ಟ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ. ಅನಕೊಂಡ ಪಾತ್ರದಲ್ಲಿ ಎಂಟ್ರಿ ಕೊಡುವ ಡಾಲಿ ಧನಂಜಯ್ ವಿಶಿಷ್ಟ ಲುಕ್ ಅವರ ಅಭಿಮಾನಿಗಳಿಗೆ ಇಷ್ಟ ಆಗುತ್ತೆ. ಸಿನಿಮಾಗೆ ಡಾಲಿ ಧನಂಜಯ ಬೂಸ್ಟ್ ನೀಡಿದ್ದಾರೆ.
ವಿದ್ಯಾಪತಿ'ಯಲ್ಲೂ ಹಾಸ್ಯವೇ ಹೈಲೈಟ್ ಮಾಡಲಾಗಿದೆ. ಹೀರೋ ಸಂಕಟಪಟ್ಟರೂ, ಸಂತೋಷಪಟ್ಟರೂ ಪ್ರೇಕ್ಷಕನನ್ನು ಮನಸಾರೆ ನಗಿಸಲು ಯತ್ನಿಸಿದ್ದಾರೆ ನಿರ್ದೇಶಕರು. ಹಾಸ್ಯ–ಆ್ಯಕ್ಷನ್–ಭಾವನೆಗಳ ಹದವಾದ ಮಿಶ್ರಣವಿದೆ. ಎರಡಕ್ಕೂ ನಾಗಭೂಷಣ್ ನ್ಯಾಯ ಒದಗಿಸಿದ್ದಾರೆ. ಸಿನಿಮಾದ ಮೊದಲಾರ್ಧದಲ್ಲಿ ನಿರೂಪಣೆ ಸ್ವಲ್ಪ ನಿಧಾನವೆನಿಸುತ್ತದೆ. ಆನಕೊಂಡ(ಡಾಲಿ ಧನಂಜಯ) ಪ್ರವೇಶದ ನಂತರ ಚಿತ್ರದ ವೇಗ ಪಡೆದುಕೊಳ್ಳುತ್ತದೆ. ಸಂಭಾಷಣೆಯ ಮೇಲೆ ಮತ್ತಷ್ಟು ಹಿಡಿತವಿರಬೇಕಿತ್ತು ಎನಿಸುತ್ತದೆ. ಹಿನ್ನೆಲೆ ಸಂಗೀತ
ಕೂತು ಉಂಡರೆ ಕುಡಿಕೆ ಹೊನ್ನು ಸಾಲದು, ದುಡಿದು ತಿನ್ನಬೇಕು, ಅವನ ಯುದ್ಧ ಅವನೇ ಹೋರಾಟ ಮಾಡಿ ಗೆಲ್ಲಬೇಕು ಎಂಬ ಸಂದೇಶವನ್ನು ಸಿನಿಮಾ ಮೂಲಕ ನೀಡಿದ್ದಾರೆ. ಹೀರೋ ಗೆಳೆಯನಾಗಿ ನಟಿಸಿರುವ ಶ್ರೀವತ್ಸ ಉತ್ತಮ ಹಾಸ್ಯ ನಟ ಎಂದರೆ ತಪ್ಪಾಗಲಾರದು. ಒಟ್ಟಾರೆ ವಿದ್ಯಾಪತಿ ಸಿನಿಮಾ ಕೌಟುಂಬಿಕ ಹಾಸ್ಯ ಪ್ರಧಾನ ಸಿನಿಮಾವಾಗಿದ್ದು, ಮನರಂಜನೆಗೆ ಮೋಸವಿಲ್ಲ.
ಸಿನಿಮಾ- ವಿದ್ಯಾಪತಿ
ನಿರ್ದೇಶನ- ಹಸೀನ್ ಖಾನ್ ಹಾಗೂ ಇಶಾಮ್ ಖಾನ್
ಕಲಾವಿದರು- ನಾಗಭೂಷಣ್, ಮಲೈಕಾ ವಸುಪಾಲ್, ಡಾಲಿ ಧನಂಜಯ, ಗರುಡ ರಾಮ್ ಮತ್ತಿತರರು