ಯುದ್ಧಕಾಂಡ ಸಿನಿಮಾ ಸ್ಟಿಲ್ 
ಸಿನಿಮಾ ವಿಮರ್ಶೆ

Yuddhakaanda Chapter 2 Movie Review: ಮಹಿಳಾ ದೌರ್ಜನ್ಯದ ವಿರುದ್ಧ ಅಜೇಯ್ ರಾವ್‌ ವಾರ್; ಕೋರ್ಟ್​ರೂಮಿನ ಎಮೋಷನಲ್​ ಥ್ರಿಲ್ಲರ್

Shilpa D

ಪವನ್ ಭಟ್ ನಿರ್ದೇಶಿಸಿ ಅಜಯ್ ಕುಮಾರ್ ಅಭಿನಯಿಸಿರುವ ಯುದ್ಧಕಾಂಡ ಸಿನಿಮಾ ರಿಲೀಸ್ ಆಗಿದೆ. ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ- ದೌರ್ಜನ್ಯ ಕುರಿತಾದ ಕಥೆಯಾಗಿದೆ. ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ವಿಚಾರವನ್ನೇ ಹೈಲೈಟ್ ಮಾಡಿ, 'ಯುದ್ಧಕಾಂಡ' ಸಿನಿಮಾ ಮಾಡಲಾಗಿದೆ.

ಅತ್ಯಾಚಾರ-ಕೊಲೆಯಂತಹ ಪ್ರಕರಣದ ಕಥೆಗಳು ಈಗಾಗಲೇ ಸಾಕಷ್ಟು ಬಂದಿವೆ, ಕನ್ನಡದ ಪಾಲಿಗೆ ಇದೊಂದು ಹೊಸ ಪ್ರಯತ್ನ ಎಂದೇ ಹೇಳಬಹುದಾಗಿದೆ. ಅತ್ಯಾಚಾರ ಪ್ರಕರಣವೊಂದು ನ್ಯಾಯಾಲಯದ ಮೆಟ್ಟಿಲು ಏರಿದಾಗ ಏನೆಲ್ಲ ಆಗಬಹುದು ಎಂಬುದನ್ನು ನಿರ್ದೇಶಕ ಪವನ್‌ ಭಟ್‌ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಇಡೀ ಚಿತ್ರ ಕೋರ್ಟ್‌ ರೂಂ ಡ್ರಾಮಾವಾದರೂ, ಭಾವುಕ ಅಂಶಗಳು ಹೆಚ್ಚಿವೆ.

ನಿವೇದಿತಾ (ಅರ್ಚನಾ ಜೋಯಿಸ್) ಎಂಬ ಮಹಿಳೆ ಕೋರ್ಟ್ ಆವರಣದಲ್ಲೇ ಶಾಸಕ ಜನಾರ್ಧನ್ ಅವರ ಸಹೋದರ ಜಾಕಿಯನ್ನು ಗುಂಡಿಟ್ಟು ಹತ್ಯೆ ಮಾಡುತ್ತಾಳೆ. ಹೀಗೆ ಸಾರ್ವಜನಿಕವಾಗಿ ನಡೆದ ಈ ಹತ್ಯೆ ಕೇಸ್‌ನಲ್ಲಿ ನಿವೇದಿತಾ ಅರೆಸ್ಟ್ ಆಗುತ್ತಾಳೆ.

ಕೊಲೆ ಮಾಡಿದ ನಿವೇದಿತಾಗೆ ಶಿಕ್ಷೆ ಆಗಬೇಕು' ಎಂಬುದು ಎಲ್ಲರ ವಾದ. ಆದರೆ ಆಗತಾನೇ ಎಲ್‌ಎಲ್‌ಬಿ ಮುಗಿಸಿರುವ ಲಾಯರ್ ಭರತ್ (ಅಜಯ್ ರಾವ್) ಈ ಕೇಸನ್ನು ಕೈಗೆತ್ತಿಕೊಂಡು ನಿವೇದಿತಾಳನ್ನು ಈ ಮರ್ಡರ್ ಕೇಸ್‌ನಿಂದ ಬಚಾವ್ ಮಾಡುವುದಕ್ಕೆ ಮುಂದಾಗುತ್ತಾನೆ. ಹಾಗಾದರೆ, ಭರತ್ ಈ ಕೇಸ್‌ನ ಗೆಲ್ತಾನಾ? ಎಂಬುದೇ ಯುದ್ಧಕಾಂಡ' ಸಿನಿಮಾ. ಈ ಕೊಲೆ ಕೇಸಿನಿಂದ ಆಕೆಯನ್ನು ಭರತ್‍ ಉಳಿಸುವುದಕ್ಕೆ ಸಾಧ್ಯವಾ? ಸಾಧ್ಯವಾದರೂ ಹೇಗೆ? ಎಂದು ನೋಡಬೇಕಿದ್ದರೆ ‘ಯುದ್ಧಕಾಂಡ’ ಚಿತ್ರವನ್ನು ನೋಡಬೇಕು.

ಯುದ್ಧಕಾಂಡ' ಸಿನಿಮಾದಲ್ಲಿ ಸಂದೇಶದ ಜೊತೆಗೆ ಎಚ್ಚರಿಕೆಯ ಮಾತುಗಳು ಇವೆ. ಪ್ರಸ್ತುತ ಸಮಾಜದಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರೂ ಮಹಿಳೆಯರು, ಬಾಲಕಿಯರ ಮೇಲಿನ ದೌರ್ಜನ್ಯಗಳು ಕಮ್ಮಿ ಆಗುತ್ತಿಲ್ಲ. ಆ ಬಗ್ಗೆ ಈ ಸಿನಿಮಾದಲ್ಲಿ ಬೆಳಕು ಚೆಲ್ಲಿದೆ. ಜೊತೆಗೆ ಕಾನೂನಿನ ಪಾಠವನ್ನು ಕೂಡ ಮಾಡಲಾಗುತ್ತದೆ. ಯಾವೆಲ್ಲಾ ರೀತಿಯ ಕಾನೂನುಗಳಿವೆ ಎಂಬುದನ್ನು ವಿವರವಾಗಿ ತಿಳಿಸಲಾಗಿದೆ.

ಭರತ್ ಪಾತ್ರದಲ್ಲಿ ಅಜಯ್ ರಾವ್ ಹೊಸ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಲಾಯರ್ ಆಗಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅದೇ ರೀತಿ ಎದುರಾಳಿ ಲಾಯರ್ ಆಗಿ ಪ್ರಕಾಶ್ ಬೆಳವಾಡಿ ಅವರದ್ದು ತೂಕದ ನಟನೆ. ಪ್ರಕಾಶ್‍ ಬೆಳವಾಡಿ ಅವರಿಗೆ ಇಂಥದ್ದೊಂದು ಪಾತ್ರ ಹಿಂದೆ ಯಾವ ಕನ್ನಡ ಚಿತ್ರದಲ್ಲೂ ಸಿಕ್ಕಿರಲಿಲ್ಲ. ಅವರು ತಮ್ಮ ತೂಕದ ಅಭಿನಯದಿಂದ ಇಷ್ಟವಾಗುತ್ತಾರೆ.

ನಿವೇದಿತಾ ಪಾತ್ರವನ್ನ ನಟಿ ಅರ್ಚನಾ ಜೋಯಿಸ್ ಜೀವಿಸಿದ್ದಾರೆ. ಜಡ್ಜ್ ಆಗಿ ನಾಗಾಭರಣ, ಭರತ್ ಗೆಳತಿಯಾಗಿ ಸುಪ್ರೀತಾ ಸತ್ಯನಾರಾಯಣ್, ಸೀನಿಯರ್ ಲಾಯರ್ ಆಗಿ ನಾಗೇಂದ್ರ ಶಾ ಅವರು ಪಾತ್ರ ಉತ್ತಮವಾಗಿ ನಿರ್ವಹಿಸಿದ್ದಾರೆ. ಕೋರ್ಟ್ ರೂಮ್ ಡ್ರಾಮಾ ಎಂದಾಗ, ಹೆಚ್ಚಾಗಿ ಫೋರ್ಸ್ ಇರುವ ಸಂಭಾಷಣೆ ಅಗತ್ಯವಿತ್ತು ಎಂದೆನಿಸುತ್ತದೆ.

ಕಮರ್ಷಿಯಲ್‍ ಸಿನಿಮಾದಲ್ಲಿ ಮಾಡುವ ಹೀರೋಗಳು ತಮ್ಮ ಚೌಕಟ್ಟು ಬಿಟ್ಟು ಬೇರೆ ತರಹದ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಆರೋಪಗಳ ನಡುವೆಯೇ ಅಜಯ್ ಕುಮಾರ್ ಈಗ ‘ಯುದ್ಧಕಾಂಡ’ ಚಿತ್ರದ ಮೂಲಕ ತಮ್ಮ ಚೌಕಟ್ಟು ಬಿಟ್ಟು ಹೊಸ ಪ್ರಯೋಗ ಮತ್ತು ಪ್ರಯತ್ನ ಮಾಡಿದ್ದಾರೆ. ಭರತ್‌ ಆಗಿ ಅಜಯ್‌ ರಾವ್‌ ಇಷ್ಟವಾಗುತ್ತಾರೆ. ಆದರೆ ಕ್ಲೈಮ್ಯಾಕ್ಸ್‌ ಹಂತದಲ್ಲಿ ಅವರ ನಟನೆ ಸ್ವಲ್ಪ ಕೃತಕ ಎನ್ನಿಸುತ್ತದೆ.

ಇಲ್ಲಿ ಹಾಡು, ಫೈಟು, ಕಾಮಿಡಿ ಎಂದು ಯಾವುದನ್ನೂ ಅನಾವಶ್ಯಕವಾಗಿ ತೂರಿಸದೆ, ನೇರವಾಗಿ ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಪವನ್‍ ಭಟ್‍. ಚಿತ್ರ ಅಲ್ಲಲ್ಲಿ ಸ್ವಲ್ಪ ನಿಧಾನವಾಗಿದೆ ಮತ್ತು ಅಂತ್ಯದಲ್ಲಿ ಡ್ರಾಮಾ ಜಾಸ್ತಿಯಾಗಿದೆ ಎನ್ನುವುದು ಬಿಟ್ಟರೆ, ಪ್ರಾಮಾಣಿಕವಾಗಿ ಕಥೆ ಹೇಳಿದ್ದಾರೆ.

ಸಿನಿಮಾ: ಯುದ್ಧಕಾಂಡ

ನಿರ್ದೇಶನ: ಪವನ್​ ಭಟ್​

ಕಲಾವಿದರು: ಕೃಷ್ಣ ಅಜೇಯ್​ ರಾವ್​, ಅರ್ಚನಾ ಜೋಯಿಸ್​, ಪ್ರಕಾಶ್​ ಬೆಳವಾಡಿ, ಟಿ.ಎಸ್​. ನಾಗಾಭರಣ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

Kabaddi World Cup 2025: ವಿಶ್ವಕಪ್ ಗೆದ್ದ ಭಾರತದ ವನಿತೆಯರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಶ್ಲಾಘನೆ

SCROLL FOR NEXT