ನವನೀತ್ ನಿರ್ದೇಶನದ ಛೂ ಮಂತರ್ ಹಾರರ್ ಕಾಮಿಡಿ ಸಿನಿಮಾ ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತದೆ. ಶರಣ್-ಚಿಕ್ಕಣ್ಣನ ಹಾಸ್ಯ, ಕಥೆಯಲ್ಲಿನ ಅನಿರೀಕ್ಷಿತ ತಿರುವುಗಳು ಚಿತ್ರಕ್ಕೆ ಜೀವ ತುಂಬುತ್ತವೆ. ಮಾರ್ಗನ್ ಹೌಸ್ ನಲ್ಲಿ ನಡೆಯುವ ಆತ್ಮಗಳ ಕತೆ, ಡಿಕೋಸ್ಟಾ ಕುಟುಂಬದ ರಹಸ್ಯ, ಪ್ರೇಕ್ಷಕರನ್ನು ರಂಜಿಸುತ್ತದೆ.
ಕರ್ವ ನಿರ್ದೇಶಕ ನವನೀತ್ ಆ್ಯಕ್ಷನ್ ಕಟ್ ಹೇಳಿ ಶರಣ್-ಚಿಕ್ಕಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಛೂ ಮಂತರ್ ಹಾರರ್ ಕಾಮಿಡಿ ಸಿನಿಮಾ ಬಿಡುಗಡೆಯಾಗಿದೆ. ಕಥೆಯಲ್ಲೊಂದು ಕಥೆ, ಆ ಕಥೆಯಲ್ಲಿ ಮತ್ತೊಂದು ಕಥೆ, ಇಂತಹ ರೀತಿಯಲ್ಲಿ ಸಿನಿಮಾ ಆರಂಭದಿಂದ ಅಂತ್ಯವರೆಗೆ ಸಾಕಷ್ಟು ಕುತೂಹಲವನ್ನು ಹುಟ್ಟಿಸುತ್ತಾ ಸಾಗುತ್ತದೆ. ಈ ಸಿನಿಮಾದಲ್ಲಿ ಯಾವುದನ್ನೂ ಊಹಿಸಲು ಸಾಧ್ಯವಿಲ್ಲ. ಹಾಗೆ ಕಥೆಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಬರುತ್ತದೆ.
ಡೈನಮೊ (ಶರಣ್), ಆರ್ ಜೆ (ಚಿಕ್ಕಣ್ಣ), ಆಕಾಂಕ್ಷಾ (ಅದಿತಿ) ಮತ್ತು ನಕುಲ್ ಛೂಮಂತರ್ ಆ್ಯಂಡ್ ಕಂಪನಿ ಎಂಬ ಘೋಸ್ಟ್ ಹಂಟರ್ ತಂಡ ಕಟ್ಟಿಕೊಂಡು, ಆತ್ಮಗಳ ಬೇಟೆ ನಡೆಸುತ್ತಿರುತ್ತಾರೆ. ಅವರಿಗೆ ಭಾರತದ ಟಾಪ್ 10 ಹಾಂಟೆಡ್ ಹೌಸ್ ಗಳ ಸಾಲಿಗೆ ಉತ್ತರಾಖಂಡದ ನೈನಿತಾಲ್ ನಲ್ಲಿರುವ ಮಾರ್ಗನ್ ಹೌಸ್ ಸೇರ್ಪಡೆಯಾಗಿರುವ ವಿಷಯ ತಿಳಿಯುತ್ತದೆ. ಅಲ್ಲಿ ಬ್ರಿಟಿಷರ ಕಾಲದ ನಿಧಿ ಇರುವುದು ಗೊತ್ತಾಗಿ, ಅದರ ಬೆನ್ನತ್ತಿ ಹೊರಡುತ್ತಾರೆ. ಅಲ್ಲಿಂದ ಕಥೆ ತೆರೆದುಕೊಳ್ಳುತ್ತದೆ. ಆ ಬಂಗಲೆಯಲ್ಲಿ ಬಿದ್ದ ಹೆಣಗಳೆಷ್ಟು? ಅಲ್ಲಿರುವ ಅತೃಪ್ತ ಆತ್ಮಗಳೆಷ್ಟು? ಈ ದೆವ್ವವನ್ನು ಗೌತಮ್ (ಡೈನಮೊ ಮತ್ತೊಂದು ಹೆಸರು) ಹೇಗೆ ಓಡಿಸುತ್ತಾನೆ? ಈ ಮನೆಗೂ ಅವರಿಗೂ ಇರುವ ಕನೆಕ್ಷನ್ ಏನು ಎಂಬಿತ್ಯಾದಿ ವಿಚಾರಗಳನ್ನು ನಿರ್ದೇಶಕರು ಹಂತ ಹಂತವಾಗಿ ತೆರೆದಿಡುತ್ತಾ ಹೋಗುತ್ತಾರೆ. ತಂಡವು "ಆಪರೇಷನ್ ಕಮಲಿ" ಯಲ್ಲಿ ಇಳಿಯುತ್ತಿದ್ದಂತೆ ಭಯಾನಕ ಹಾಗೂ ಹಾಸ್ಯಮಯ ಕ್ಷಣಗಳು ಚಿತ್ರ ವಿಚಿತ್ರ ಮೋಡಿಯಿಂದ ರಂಜಿಸುತ್ತವೆ.
ಮಾರ್ಗನ್ ಹೌಸ್ ನಲ್ಲಿ ಅತೀಂದ್ರೀಯ ಶಕ್ತಿಗಳು ಕಾಟಕೊಡತೊಡಗುತ್ತವೆ. ಅದಕ್ಕೆ ಕಾರಣ ಹುಡುಕಿ ಹೊರಟಾಗ ಕಥೆಯಲ್ಲಿ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ. ಲಂಡನ್‌ಗೆ ಅನಿರೀಕ್ಷಿತ ಮಾರ್ಗವನ್ನು ತೆಗೆದುಕೊಳ್ಳುತ್ತದೆ, ಅಲ್ಲಿ ಮಾರ್ಗನ್ ಹೌಸ್‌ನೊಂದಿಗೆ ನಿಗೂಢವಾಗಿ ಸಂಬಂಧ ಹೊಂದಿರುವ ವಿಕ್ಟರ್ ಡಿ ಕೋಸ್ಟಾ (ಶ್ರೀನಿವಾಸ್ ಪ್ರಭು), ತನ್ನ ಮಗ ಅಲೆಕ್ಸ್ ಡಿ ಕೋಸ್ಟಾ (ಪ್ರಭು ಮುಂಡ್ಕೂರ್), ಪತ್ನಿ ಕ್ಯಾಥರೀನ್ (ಮೇಘನಾ ಗೋಂಕರ್) ಮತ್ತು ಅವರ ಚಿಕ್ಕ ಮಗಳು ಸೇರಿದಂತೆ ತನ್ನ ಕುಟುಂಬವನ್ನು ಭಾರತದಲ್ಲಿರುವ ಮಾರ್ಗನ್ ಹೌಸ್ ಗೆ ಕಳುಹಿಸುತ್ತಾನೆ. 2004ರಲ್ಲಿ ಅಲ್ಲಿಗೆ ಬಂದ ಡಿಕೋಸ್ಟಾ ಕುಟುಂಬ ಏನಾಯಿತು? ಅಲ್ಲಿ ನಿಜವಾಗಲೂ ದೆವ್ವದ ಕಾಟವಿದೆಯಾ? ಅಥವಾ ಎಲ್ಲವೂ ಭ್ರಮೆಯಾ? ಎಂಬುದನ್ನು ತಿಳಿದುಕೊಳ್ಳಲು ಛೂಮಂತರ್ ಸಿನಿಮಾ ನೋಡಬೇಕು.
ಬಹಳ ದಿನಗಳ ನಂತರ ಕನ್ನಡದಲ್ಲಿ ಒಂದು ಉತ್ತಮವಾದ ಹಾರರ್ ಕಾಮಿಡಿ ಸಿನಿಮಾ ತೆರೆ ಕಂಡಿದೆ. ಶರಣ್ ಮತ್ತು ಚಿಕ್ಕಣ್ಣ ಪಾತ್ರಗಳೇ ಹೈಲೈಟ್, ಇಬ್ಬರ ನಟನೆ ಪ್ರೇಕ್ಷಕರನ್ನು ನಕ್ಕು ನಲಿಸುತ್ತದೆ. ಮೂರು ಕಾಲಘಟ್ಟಗಳ ಕಥೆ ಸಿನಿಮಾದಲ್ಲಿದೆ. ಮೇಘನಾ ಗಾಂವ್ಕರ್ ಮತ್ತು ಅದಿತಿ ಪ್ರಭುದೇವ ಅವರ ಪಾತ್ರಗಳು ಚಿತ್ರದಲ್ಲಿ ಅನಿರೀಕ್ಷಿತ ಟ್ವಿಸ್ಟ್ ನೀಡುತ್ತವೆ. ಹಾಗೆಂದ ಮಾತ್ರಕ್ಕೆ ಸಿನಿಮಾದಲ್ಲಿ ಏರಿಳಿತಗಳಿಲ್ಲ ಎಂದಲ್ಲ, ನಿರ್ದೇಶಕರು ಹಲವೆಡೆ ಎಡವಿದ್ದಾರೆ. ಕೆಲವು ಕಡೆ ಒಂದಕ್ಕೊಂದು ಲಿಂಕ್ ಮಿಸ್ ಆಗಿದೆ ಎನಿಸುತ್ತದೆ. ಹಾರರ್ ಸಿನಿಮಾ ಎಂದ ಕೂಡಲೇ ಭಯಂಕರವಾಗಿರುವ ದೆವ್ವ ಭೂತದ ನಿರೀಕ್ಷೆಯಲ್ಲಿ ಹೋಗುವವರಿಗೆ ಸ್ವಲ್ಪ ನಿರಾಶೆಯಾಗಲಿದೆ, ಏಕೆಂದರೆ ಸಿನಿಮಾದಲ್ಲಿ ದೆವ್ವ ಅಷ್ಟೊಂದು ಭಯಂಕರವಾಗಿಲ್ಲ, ಕಾಮಿಡಿ ರೂಪದಲ್ಲಿ ಹಾರರ್ ಕಥೆಯನ್ನು ತಂದಿದ್ದಾರೆ ನಿರ್ದೇಶಕ ನವನೀತ್.
ಸಿನಿಮಾ ಇನ್ನೇನು ಮುಗಿಯುತ್ತದೆ ಎಂದು ಎಲ್ಲರಿಗೂ ಅನಿಸುವಾಗ ಕಥೆಯಲ್ಲಿ ಇನ್ನೊಂದು ತಿರುವು ಎದುರಾಗುತ್ತದೆ. ಸಿನಿಮಾದ ಕೊನೆಯಲ್ಲಿ ನಟ ವಿಷ್ಣುವರ್ಧನ್ ಧ್ವನಿ ಮತ್ತು ಅವರೇ ಅಭಿನಯಿಸುತ್ತಿದ್ದಾರೆ ಎಂಬಷ್ಟು ನೈಜವಾದ ಚಿತ್ರಣ ಕಟ್ಟಿಕೊಟ್ಟಿದ್ದು ಇದು ಅಭಿಮಾನಿಗಳಲ್ಲಿ ಖುಷಿ ತಂದಿದೆ.
ಸಿನಿಮಾಗೆ ಅವಿನಾಶ್ ಬಸತ್ಕೂರ್ ಉತ್ತಮ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಂದನ್ ಶೆಟ್ಟಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ‘ಛೂ ಮಂತರ್’ ಹಾಡು ಗಮನ ಸೆಳೆಯುತ್ತದೆ. ಛಾಯಾಗ್ರಹಣ ಕೂಡ ಸಿನಿಮಾ ಶ್ರೀಮಂತಿಗೆ ಹೆಚ್ಚು ಸಹಕಾರಿ ಆಗಿದೆ. ಗ್ರಾಫಿಕ್ಸ್ ಅತ್ಯದ್ಭುತವಾಗಿ ಮೂಡಿ ಬಂದಿದೆ. ಪ್ರಶಸ್ತಿ ವಿಜೇತ ರೆಸುಲ್ ಪೂಕುಟ್ಟಿ ನೇತೃತ್ವದ ಚಿತ್ರದ ಧ್ವನಿ ವಿನ್ಯಾಸವು ಮನರಂಜನೆ ನೀಡುತ್ತದೆ, ಅನುಪ್ ಕಟ್ಟುಕರನ್ ಅವರ ಛಾಯಾಗ್ರಹಣವು ಸಸ್ಪೆನ್ಸ್ ಕ್ಷಣಗಳನ್ನು ಹೆಚ್ಚಿಸುತ್ತದೆ. ಇದಲ್ಲದೆ ಕಥೆಯಲ್ಲಿನ ಆಧ್ಯಾತ್ಮಿಕ ಅಂಶಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತವೆ. ಹನುಮಾನ್ ಚಾಲೀಸಾ ಹಾಡಿನಲ್ಲಿ ಸಿನಿಮಾ ಕೊನೆಗೊಳ್ಳುತ್ತದೆ.
ಚಿತ್ರ: ಛೂ ಮಂತರ್
ನಿರ್ದೇಶನ: ನವನೀತ್
ತಾರಾಗಣ: ಶರಣ್, ಮೇನಾ ಗಾಂವ್ಕರ್, ಅದಿತಿ ಪ್ರಭುದೇವ, ಚಿಕ್ಕಣ್ಣ, ಪ್ರಭು ಮುಂಡ್ಕೂರ್, ರಜಿನಿ ಮುಂತಾದವರು.