'ಅಪಾಯವಿದೆ ಎಚ್ಚರಿಕೆ' ಸಿನಿಮಾ ತಂಡ 
ಸಿನಿಮಾ ವಿಮರ್ಶೆ

Apaayavide Eccharike Movie Review: ಹಳಿ ತಪ್ಪಿದ ಮೂವರು ಯುವಕರ ಅಲೆದಾಟ; ಹಣಗಳಿಸಲು ಅಡ್ಡ ದಾರಿ ಹಿಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದೇ ಪಾಠ!

Shilpa D

ಅಪಾಯವಿದೆ ಎಚ್ಚರಿಕೆ' ಸಿನಿಮಾ ಮೂವರು ಯುವಕರ ಜೀವನದ ಕಥೆಯನ್ನು ಹಾಸ್ಯ, ಹಾರರ್ ಮತ್ತು ಸಸ್ಪೆನ್ಸ್ ಮೂಲಕ ಚಿತ್ರಿಸುತ್ತದೆ. ದುಡ್ಡು ಸಂಪಾದನೆಗಾಗಿ ಅಡ್ಡದಾರಿ ಹಿಡಿಯುವ ಯುವಕರು ಕಾಡಿನ ಸಂಪತ್ತನ್ನು ನಾಶ ಮಾಡುವ ಯತ್ನದಲ್ಲಿ ಎದುರಾಗುವ ಅಪಾಯಗಳು ಮತ್ತು ಅನಿರೀಕ್ಷಿತ ಘಟನೆಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಮೊದಲಾರ್ಧ ಬೋರ್ ಹೊಡೆಸಿದರೂ, ದ್ವಿತೀಯಾರ್ಧದಲ್ಲಿ ಚಿತ್ರ ವೇಗ ಪಡೆದುಕೊಳ್ಳುತ್ತದೆ. ಹಾರರ್ ಮತ್ತು ಸಸ್ಪೆನ್ಸ್ ಪ್ರೇಮಿಗಳಿಗೆ ಈ ಸಿನಿಮಾ ಇಷ್ಟವಾಗಬಹುದು.

ಇತ್ತೀಚೆಗೆ ಕನ್ನಡ ಸಿನಿಮಾರಂಗದಲ್ಲಿ ಹಾರರ್ ಸಿನಿಮಾಗಳ ಆರ್ಭಟ ಜೋರಾಗಿದೆ. ಅಜಿತ್ ತೀರ್ಥಹಳ್ಳಿ ನಿರ್ದೇಶನದ ಹಾರರ್ -ಸಸ್ಪೆನ್ಸ್ ಚಿತ್ರ 'ಅಪಾಯವಿದೆ ಎಚ್ಚರಿಕೆ' ಬಿಡುಗಡೆಯಾಗಿದೆ. ಹೆಸರೇ ತಿಳಿಸುವಂತೆ ಇದೊಂದು ಭಯಾನಕ ಸಿನಿಮಾ ಎಂದು ತೋರಿಸುತ್ತದೆ. ಆದರೆ ಸಿನಿಮಾ ಹೆಸರಿನಷ್ಟೆಯೇ ಭಯ ಹಾಗೂ ಸಸ್ಪೆನ್ಸ್ ಉಳಿಸಿಕೊಳ್ಳುತ್ತದೆಯೇ ಎಂಬುದು ಕುತೂಹಲ.

ಚಿತ್ರವು ಒಂದು ವಿಲಕ್ಷಣ ಚಿತ್ರವು ಸಸ್ಪೆನ್ಸ್ ನೊಂದಿಗೆ ಪ್ರಾರಂಭವಾಗುತ್ತದೆ, ಪದವಿ ಪಾಸು ಮಾಡದೇ ಊರಿನಲ್ಲಿ ದಂಡಪಿಂಡಗಳ ರೀತಿ ಅಲೆದಾಡಿಕೊಂಡಿರುವ ಮೂವರು ಯುವಕರ ಜೀವನದ ಕಥಾವಸ್ತುವನ್ನು ಆಧರಿಸಿ ಸಿನಿಮಾ ಹೆಣೆಯಲಾಗಿದೆ. ಸೂರಿ (ವಿಕಾಶ್‌), ಪೆಟ್ಗೆ (ರಾಘವ್), ಗಾಬ್ರಿಗೆ (ಮಿಥುನ್) ಯುವಕರು ಕೆಲಸವಿಲ್ಲದೆ ಅಲೆಯುತ್ತಿರುತ್ತಾರೆ. ದಿನ ಬೆಳಗಾದರೆ ಸಾಲಗಾರರ ಕಾಟ, ನಿರುದ್ಯೋಗ, ಅವಮಾನಗಳಿಂದ ಬೇಸತ್ತಿರುವ ಮೂವರು, ದುಡ್ಡು ಸಂಪಾದನೆಗಾಗಿ ಅಡ್ಡದಾರಿ ಹಿಡಿಯುವುದಕ್ಕೆ ತೀರ್ಮಾನಿಸುತ್ತಾರೆ. ಈ ಮೂವರಿಗೆ ಇರುವುದು ಒಂದೇ ಆಸೆ, ಏನಾದರೂ ಮಾಡಿ ದುಡ್ಡು ಗಳಿಸಬೇಕು. ಸರಿಯಾದ ಓದು ಇಲ್ಲ, ಕೆಲಸ ಮಾಡೋಕೆ ಮನಸ್ಸಿಲ್ಲ. ಇಂಥವರು ದುಡ್ಡು ಗಳಿಸಲು ಹುಡುಕುವುದೇ ಕೋಟೆ ಕಾಡಿನ ಅಡ್ಡದಾರಿ. ಆ ದಾರಿಯಲ್ಲಿ ಹೋಗುವ ಈ ಮೂವರು ಮುಂದೆ ಏನೆಲ್ಲಾ ಅನುಭವಿಸುತ್ತಾರೆ ಎಂಬುದನ್ನು ಹಾಸ್ಯ ಸಹಿತ ಹಾರರ್ ಮೂಲಕ ನಿರ್ದೇಶಕರು ವಿವರಿಸಿದ್ದಾರೆ.

ಚಿತ್ರದ ಮೊದಲಾರ್ಧ ಯುವಕರ ತರಲೆ-ತಮಾಷೆಗಳಿಂದ ತುಂಬಿಕೊಂಡಿದೆ. ಚಿತ್ರಕ್ಕೆ ಸಂಬಂಧವಿಲ್ಲದ ದೃಶ್ಯಗಳು ಅತಿಯಾಗಿ, ಚಿತ್ರ ಯಾವಾಗ ಶುರುವಾಗುತ್ತದೆ ಎಂದನಿಸುವ ಸಾಧ್ಯತೆ ಇದೆ. ಮಧ್ಯಂತರದ ಹೊತ್ತಿಗೆ ಚಿತ್ರ ತಿರುವು ಪಡೆಯುತ್ತದೆ. ದ್ವಿತೀಯಾರ್ಧದಲ್ಲಿ ಚಿತ್ರ ವೇಗ ಪಡೆಯುತ್ತದೆ. ಸೆಕೆಂಡ್ ಆಫ್ ಸಿನಿಮಾದ ಜೀವಾಳವಾಗಿದೆ. ಸೆಕೆಂಡ್ ಹಾಫ್‌ನಲ್ಲಿ ಹಲವು ಟ್ವಿಸ್ಟ್ ಎದುರಾಗುತ್ತವೆ. ಕಾಡಿನ ಸಂಪತ್ತನ್ನು ನಾಶ ಮಾಡುವವರಿಗೆ ಯಾವೆಲ್ಲಾ ಸಮಸ್ಯೆಗಳಾಗುತ್ತವೆ ಎಂಬುದನ್ನು ದೆವ್ವದ ಆ್ಯಂಗಲ್‌ನಲ್ಲಿ ನಿರ್ದೇಶಕರು ಹೇಳೋದಕ್ಕೆ ಪ್ರಯತ್ನ ಪಟ್ಟಿದ್ದಾರೆ. ದುಡ್ಡು ಸಂಪಾದನೆಗಾಗಿ ದಟ್ಟ ಕಾಡಿನಲ್ಲಿರುವ ಗಂಧದ ಮರ ಕಡಿದು, ಅದನ್ನು ಮಾರಿ ಹಣ ಗಳಿಸುವ ಯೋಚನೆ ಮಾಡುತ್ತಾರೆ. ಕಾಡಿಗೆ ಹೋಗುವ ಅವರಿಗೆ ಚಿತ್ರ-ವಿಚಿತ್ರ ಘಟನೆಗಳು ಎದುರಾಗುತ್ತವೆ. ಇವೆಲ್ಲದರಿಂದ ಅವರು ಹೇಗೆ ಪಾರಾಗುತ್ತಾರೆ ಮತ್ತು ಅಂದುಕೊಂಡಂತೆ ಹಣ ಗಳಿಸುವುದಕ್ಕೆ ಸಾಧ್ಯವಾಗುತ್ತದಾ ಎಂದು ಗೊತ್ತಾಗಬೇಕಿದ್ದರೆ ‘ಅಪಾಯವಿದೆ ಎಚ್ಚರಿಕೆ’ ಚಿತ್ರವನ್ನು ನೋಡಬೇಕು.

ನಿರ್ದೇಶಕರು ತೀರ್ಥಹಳ್ಳಿಯವರೇ ಆಗಿರುವುದರಿಂದ, ಅಲ್ಲಿನ ಪರಿಸರವನ್ನೇ ಆಯ್ಕೆ ಮಾಡಿಕೊಂಡು, ಅದನ್ನೇ ಮುಖ್ಯವಾಗಿಟ್ಟುಕೊಂಡು ಕಥೆ ಮಾಡಿಕೊಂಡಿದ್ದಾರೆ. ಸಿನಿಮಾದ ಮೊದಲಾರ್ದ ಬೋರ್ ಹೊಡೆಸುತ್ತದೆ. ಸೆಕೆಂಡ್ ಆಫ್ ವೇಗ ಪಡೆದುಕೊಳ್ಳುತ್ತದೆ. ತೀರ್ಥಹಳ್ಳಿ ಸುತ್ತಮುತ್ತವೇ ಇಡೀ ಸಿನಿಮಾದ ಶೂಟಿಂಗ್ ನಡೆದಿದೆ. ಆದರೆ ನಿರೂಪಣೆಯಲ್ಲಿ ಮತ್ತಷ್ಟು ಹಿಡಿತ ಸಾಧಿಸಿದ್ದರೇ ಸಿನಿಮಾ ಮತ್ತಷ್ಟು ಸೊಗಸಾಗಿರುತ್ತಿತ್ತು. ಸೂರಿ ಪಾತ್ರದಲ್ಲಿ ನಟ ವಿಕಾಶ್ ಉತ್ತಯ್ಯ ಅಭಿನಯ ಚೆನ್ನಾಗಿದೆ. ಹೀರೋ ಆಗಲು ಬೇಕಾದ ತಯಾರಿ ಅವರಲ್ಲಿ ಕಾಣಿಸುತ್ತದೆ. ಜೊತೆಗೆ ಸ್ನೇಹಿತರ ಪಾತ್ರ ಮಾಡಿರುವ ಮಿಥುನ್ ಮತ್ತು ರಾಘವ್ ನಟನೆಯೂ ಉತ್ತಮವಾಗಿದೆ. ಗಾಬ್ರಿ ಪಾತ್ರದಲ್ಲಿ ಮಿಥುನ್ ನಗಿಸುವ ಪ್ರಯತ್ನ ಮಾಡಿದ್ದಾರೆ.

ಕಥೆಗೆ ಟ್ವಿಸ್ಟ್ ನೀಡುವ ದೇವಿಕಾ ಪಾತ್ರದಲ್ಲಿ ನಟಿ ಹರಿಣಿ ಶ್ರೀಕಾಂತ್ ನಟನೆ ಚೆನ್ನಾಗಿದೆ. ನಾಯಕಿ ರಾಧಾ ಭಗವತಿ ಸಿಕ್ಕ ಪಾತ್ರಕ್ಕೆ ನ್ಯಾಯ ನ್ಯಾಯ ನೀಡಿದ್ದಾರೆ. ರುದ್ರನಾಗಿ ದೇವ್, ಕಲಾವತಿಯಾಗಿ ನವ್ಯಾ ಇಷ್ಟವಾಗುತ್ತಾರೆ. ನಟ ಅಶ್ವಿನ್ ಹಾಸನ್ ತಮಗೆ ಸಿಕ್ಕ ಪಾತ್ರವನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಹಾಡುಗಳನ್ನು ಬದಿಗಿಟ್ಟರೆ ಸುನಂದಾ ಗೌತಮ್ ಹಿನ್ನೆಲೆ ಸಂಗೀತ ಚೆನ್ನಾಗಿದೆ, ಮಲೆನಾಡಿನ ಕಾಡಿನ ಸೌಂದರ್ಯವನ್ನು ಅದ್ಭುತವಾಗಿ ಸೆರೆಹಿಡಿಯಲಾಗಿದೆ. ಒಟ್ಟಾರೆ ಸಸ್ಪೆನ್ಸ್ ಮತ್ತು ಹಾರರ್ ಸಿನಿಮಾ ಇಷ್ಟ ಪಡುವವರಿಗೆ ಅಪಾಯವಿದೆ ಎಚ್ಚರಿಕೆ ಇಷ್ಟವಾಗಬಹುದು.

ಚಿತ್ರ: ಅಪಾಯವಿದೆ ಎಚ್ಚರಿಕೆ

ನಿರ್ದೇಶನ: ಅಭಿಜಿತ್‌ ತೀರ್ಥಹಳ್ಳಿ

ಕಲಾವಿದರು: ವಿಕಾಶ್ ಉತ್ತಯ್ಯ, ರಾಧಾ ಭಗವತಿ, ಅಶ್ವಿನ್‌ ಹಾಸನ್‌, ರಾಘವ್ ಕೊಡಚಾದ್ರಿ, ಮುಂತಾದವರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

SIR ಒತ್ತಡ: ಮದುವೆಗೆ ಒಂದು ದಿನ ಮೊದಲು ಆತ್ಮಹತ್ಯೆಗೆ ಶರಣಾದ ಯುಪಿ ಸಿಬ್ಬಂದಿ!

'Please wait...': ಡಿ.ಕೆ ಶಿವಕುಮಾರ್ ಗೆ ರಾಹುಲ್ ಗಾಂಧಿ ವಾಟ್ಸ್​ಆ್ಯಪ್​​ ಸಂದೇಶ; ಹೇಳಿದ್ದೇನು?

ಭಾರತದ ಸಿಇಸಿ ಜ್ಞಾನೇಶ್ ಕುಮಾರ್ ಗೆ ವಿಶ್ವ ಚುನಾವಣಾ ಸಂಸ್ಥೆಯ ಅಧ್ಯಕ್ಷ ಹುದ್ದೆ!

ಹಾಂಗ್ ಕಾಂಗ್ ನಲ್ಲಿ ಭೀಕರ ಅಗ್ನಿ ಅವಘಡ: 32 ಅಂತಸ್ತಿನ ಅಪಾರ್ಟ್ ಮೆಂಟ್ ಗೆ ಬೆಂಕಿ, 13 ಮಂದಿ ಸಾವು, 700 ಮಂದಿ ಸ್ಥಳಾಂತರ! Video

ಐಎಎಸ್​ ಅಧಿಕಾರಿ ಮಹಾಂತೇಶ ಬೀಳಗಿ ಪಂಚಭೂತಗಳಲ್ಲಿ ಲೀನ: ಏಕಕಾಲಕ್ಕೆ ನಾಲ್ವರ ಅಂತ್ಯಕ್ರಿಯೆ

SCROLL FOR NEXT