ಕನ್ನಡ ಚಿತ್ರಂಗಕ್ಕೆ ಎವರ್ ಗ್ರೀನ್ ಎಂಬಂತಹ ಮುಂಗಾರುಮಳೆ ಸಿನಿಮಾ ನೀಡಿದ್ದ ಈ. ಕೃಷ್ಣಪ್ಪ ಮತ್ತು ನಿರ್ದೇಶಕ ಯೋಗರಾಜ್ ಭಟ್ ಹಲವು ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ. ಈ ಇಬ್ಬರ ಕಾಂಬಿನೇಷನ್ ನ ಮನದ ಕಡಲು ಸಿನಿಮಾ ರಿಲೀಸ್ ಆಗಿದೆ. ಸುಮುಖ, ರಾಶಿಕಾ ಶೆಟ್ಟಿ, ಅಂಜಲಿ ಅನೀಶ್ ಎಂಬ ಹೊಸ ಪ್ರತಿಭೆಗಳು ಸಿನಿಮಾದಲ್ಲಿ ನಟಿಸಿದ್ದಾರೆ.
ಮುಂಗಾರು ಮಳೆ ನಿರ್ದೇಶಕ-ನಿರ್ಮಾಪಕ ಮತ್ತೆ ಒಂದಾಗಿದ್ದಾರೆ, ಹೀಗಾಗಿ ಮತ್ತೆ ಮುಂಗಾರು ಮಳೆಯಂತ ಹಿಟ್ ಚಿತ್ರ ನೋಡಬಹುದು ಎಂದು ಹೋದ ಪ್ರೇಕ್ಷಕನಿಗೆ ನಿರಾಶೆ ಖಚಿತ. ಏಕೆಂದರೆ ಯೋಗರಾಜ್ ಭಟ್ಟರ ಈ ಹಿಂದಿನ ಸಿನಿಮಾಗಳ ಚಾಪು ಎದ್ದು ಕಾಣುತ್ತದೆ.
ನೀಲಿ ನೀಲಿ ಕಡಲು ಎಂಬ ಅರ್ಥ ಪೂರ್ಣ ಹಾಡಿನೊಂದಿಗೆ ಸಿನಿಮಾ ಆರಂಭವಾಗುತ್ತದೆ. ಎಂಬಿಬಿಸ್ ವಿದ್ಯಾರ್ಥಿಯಾಗಿರುವ ಸುಮುಖ ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ, ಏಕಾಏಕಿ ಕಾಲೇಜು ಬಿಟ್ಟು ಊರು ಸುತ್ತಲು ಹೋಗುವ ಬೇಜವಬ್ದಾರಿ ಯುವಕನ ಪಾತ್ರವನ್ನು ಕೇಂದ್ರವಾಗಿ ಇಟ್ಟುಕೊಂಡು ಈ ಸಿನಿಮಾವನ್ನು ಮಾಡಿದ್ದಾರೆ. MBBS ಅರ್ಧಕ್ಕೆ ನಿಲ್ಲಿಸಿ ಜೀವನದ ಅರ್ಥ ಹುಡುಕಿಕೊಂಡು ಹೋಗುವ ಸುಮುಖನಿಗೆ ಕಡಲ ತೀರದಲ್ಲಿ ರಾಶಿಕಾ ಸಿಗುತ್ತಾಳೆ.
ಮೆಚ್ಚಿದ ಹುಡುಗಿ ರಾಶಿಕಾಳನ್ನು ಹುಡುಕಿಕೊಂಡು ಕಡಲ ಮಡಿಲಲ್ಲಿರುವ ದೋಣಿ ದುರ್ಗ ಅನ್ನೋ ಊರಿಗೆ ಸುಮುಖ ಬರುತ್ತಾನೆ, ನಾಯಕಿ ಜೊತೆ ಮತ್ತೊಬ್ಬಳು ಸಿಗುತ್ತಾಳೆ. ಪುರಾತತ್ವಶಾಸ್ತ್ರಜ್ಞೆ ಅಂಜಲಿ, ಪ್ರೀತಿಯ ಸಂಕೀರ್ಣತೆಗಳ ಬಗ್ಗೆ ರಾಶಿಕಾಗೆ ಎಚ್ಚರಿಕೆ ನೀಡುತ್ತಾಳೆ, ಆದರೆ ಕಥೆ ತೆರೆದುಕೊಳ್ಳುತ್ತಿದ್ದಂತೆ, ಅವಳು ಕೂಡ ಸುಮುಖನ ಮೇಲಿನ ತನ್ನದೇ ಆದ ಪ್ರೇಮ ಭಾವನೆಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾಳೆ. ಅಲ್ಲಿಂದ ತ್ರಿಕೋನ ಪ್ರೇಮಕಥೆಗೆ ಟರ್ನಿಂಗ್ ಸಿಗುತ್ತದೆ.
ರಂಗಾಯಣ ರಘು ಆದಿವಾಸಿ ಪಾತ್ರದಲ್ಲಿ ನಟಿಸಿದ್ದಾರೆ. ಗಿಬ್ರಿಶ್ ಭಾಷೆ, ನಡೆಯುವ ಸನ್ನಿವೇಶಗಳೆಲ್ಲ ಭಟ್ಟರ ಹಿಂದಿನ ಸಿನಿಮಾಗಳನ್ನು ನೆನಪಿಗೆ ತರುತ್ತವೆ. ಮಳೆ, ಕಡಲು, ಹಸಿರು ಪ್ರಕೃತಿ ಇವೆಲ್ಲಾ ಭಟ್ಟರ ಸಿನಿಮಾಗಳಲ್ಲಿ ಹೇರಳವಾಗಿರುತ್ತದೆ. ಅದೇ ರೀತಿಯ ಪುನಾರವರ್ತನೆ ಇಲ್ಲಿಯೂ ಇದೆ. ಆದರೆ ಸಿನಿಮಾದ ಯಾವೊಂದು ಪಾತ್ರಗಳು ಬಿಡದಂತೆ ಮನಸ್ಸನ್ನು ಕಾಡುವುದಿಲ್ಲ, ಎದೆಬಿರಿವಷ್ಟು ಪ್ರೀತಿಯಿದ್ದರೂ ಮನ ತಣಿಯುವುದಿಲ್ಲ, ಯಾವ ಸನ್ನಿವೇಶವೂ ಆವರಿಸಿಕೊಳ್ಳುವುದಿಲ್ಲ, ಸಿನಿಮಾದ ಮೊದಲಾರ್ಧ ಹಾಸ್ಯದಿಂದ ಸ್ವಲ್ಪ ಸಮಯದವರೆಗೆ ನೋಡಿಸಿಕೊಂಡು ಹೋಗುತ್ತದೆ. ಚಿತ್ರದ ದ್ವಿತೀಯಾರ್ಧದ ನಿರೂಪಣೆ ಮತ್ತಷ್ಚು ಬಿಗಿ ಹಿಡಿತ ಬೇಡುತ್ತದೆ.
ಹೊಸ ಪ್ರತಿಭೆಗಳಿಗೆ ಸದಾ ಮಣೆ ಹಾಕುವ ಭಟ್ಟರು ಮನದ ಕಡಲು ಸಿನಿಮಾದಲ್ಲಿ ಮೂವರು ಹೊಸಬರಿಗೆ ಅವಕಾಶ ನೀಡಿದ್ದಾರೆ, ಆದರೆ ಅವರು ಪಾತ್ರವನ್ನು ಮತ್ತಷ್ಟು ಅನುಭವಿಸಲು ನಟನೆಯಲ್ಲಿ ಪಕ್ವವಾಗಬೇಕು. ಎಂದಿನಂತೆ ರಂಗಾಯಣ ರಘು ತಮ್ಮ ಹಾಸ್ಯದಿಂದ ನಗು ಮೂಡಿಸುತ್ತಾರೆ. ಯೋಗರಾಜ್ ಭಟ್ ಅವರ ದೀರ್ಘಕಾಲದ ಸಂಗೀತ ಮಿತ್ರ ಹರಿಕೃಷ್ಣ ಅವರ ಮ್ಯೂಸಿಕ್ ಭಾವನಾತ್ಮಕ ಏರಿಳಿತಗಳಿಗೆ ಪೂರಕವಾಗಿದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಸಮುದ್ರ, ಪರ್ವತಗಳು ಮತ್ತು ಹಚ್ಚ ಹಸಿರಿನ ಉಸಿರುಕಟ್ಟುವ ಸೌಂದರ್ಯವನ್ನು ಸೊಗಸಾಗಿ ಸೆರೆಹಿಡಿಯುತ್ತವೆ. ಈ ನೈಸರ್ಗಿಕ ಅಂಶಗಳು ಚಿತ್ರದ ಪ್ಲಸ್ ಪಾಯಿಂಟ್. ಉಳಿದಂತೆ ಯಾವುದೇ ಹಾಡು ಸನ್ನಿವೇಶ ಮನಸಲ್ಲಿ ಉಳಿಯುವುದಿಲ್ಲ.