‘ಲ್ಯಾಂಡ್ಲಾರ್ಡ್’ ಚಿತ್ರವು 80-90ರ ದಶಕದ ಹಳ್ಳಿಯ ಕಥೆಯನ್ನು ಆಧರಿಸಿದೆ. ಕೋಡಿಹಳ್ಳಿ ರಾಚಯ್ಯನಾಗಿ ದುನಿಯಾ ವಿಜಯ್ ಅಭಿನಯಿಸಿದ್ದು, ಭೂಮಿಗಾಗಿ ಹೋರಾಟದ ಕಥೆಯನ್ನು ನಿರೂಪಿಸುತ್ತದೆ. ಜಡೇಶ್ ಹಂಪಿ ನಿರ್ದೇಶನದಲ್ಲಿ, ಚಿತ್ರವು ಬಡವರ ಹಕ್ಕುಗಳಿಗಾಗಿ ಹೋರಾಟದ ಸಂದೇಶವನ್ನು ನೀಡುತ್ತದೆ. ಚಿತ್ರಕಥೆ ಕೆಲವು ಕಡೆ ಹಳಿ ತಪ್ಪಿದರೂ, ಕಲಾವಿದರ ಅಭಿನಯ ಗಮನಾರ್ಹವಾಗಿದೆ.
ಈ ಹಿಂದೆ ಕಾಟೇರ ಸಿನಿಮಾದ ಕಥೆ, ಚಿತ್ರಕಥೆಯಲ್ಲಿ ನಿರ್ದೇಶಕ ತರುಣ್ ಸುಧೀರ್ ಜೊತೆ ಕೈ ಜೋಡಿಸಿದ್ದ ಜಡೇಶ್ ಹಂಪಿ ನಿರ್ದೇಶನದಲ್ಲಿ ‘ಲ್ಯಾಂಡ್ಲಾರ್ಡ್’ಸಿನಿಮಾ ತೆರೆಕಂಡಿದ್ದು ಪ್ರಧಾನ ಭೂಮಿಕೆಯಲ್ಲಿ ದುನಿಯಾ ವಿಜಯ್ ಕುಮಾರ್, ರಚಿತಾ ರಾಮ್ ಮತ್ತಿತರರು ನಟಿಸಿದ್ದಾರೆ. ಹಳ್ಳಿಯಲ್ಲಿ ಭೂ ಮಾಲೀಕರು ಮತ್ತು ಕೂಲಿ ಕಾರ್ಮಿಕ ವರ್ಗದ ನಡುವೆ ಭೂಮಿಗಾಗಿ ನಡೆಯುವ ಹೋರಾಟವೇ ಚಿತ್ರದ ಒಟ್ಟಾರೆ ಕಥೆಯಾಗಿದೆ. ಸರ್ವರಿಗೂ ಸಮಾನತೆ ಇರಬೇಕು ಎಂಬ ಸಂವಿಧಾನದ ಮೂಲ ಆಶಯವನ್ನು ಎತ್ತಿಹಿಡಿಯುವ ಕಥೆ ಹೊಂದಿರುವ ಸಿನಿಮಾವಿದು. ಈ ಹಿಂದೆ ಈ ರೀತಿಯ ಹಲವು ಕಥೆಗಳು ಸಿನಿಮಾವಾಗಿದ್ದರೂ ಜಡೇಶ ಹಂಪಿ ಹೊಸತೇನನ್ನು ಹೇಳಲು ಪ್ರಯತ್ನಿಸಿದ್ದಾರೆ. ಈ ಪ್ರಯತ್ನದಲ್ಲಿ ಅವರು ಕೆಲವೆಡೆ ಎಡವಿರುವುದಂತೂ ಸತ್ಯ. ಕಥೆಯಲ್ಲಿ ಗಟ್ಟಿತನವಿದೆ ಆದರೆ ಅದನ್ನು ನಿರೂಪಿಸುವಲ್ಲಿ ನಿರ್ದೇಶಕರು ವಿಫಲವಾಗಿದ್ದಾರೆ ಎಂದೆನಿಸುತ್ತದೆ.
ಲ್ಯಾಂಡ್ ಲಾರ್ಡ್ ಹಳ್ಳಿಯಲ್ಲಿ ನಡೆಯುವ ಕಥೆ. ಸುಮಾರು 80-90ರ ದಶಕದ ಕಥೆ. ಒಂದು ಕಾಲದಲ್ಲಿ ರಾಮದುರ್ಗದವನಾಗಿದ್ದ ಕೋಡಿಹಳ್ಳಿ ರಾಚಯ್ಯ ಹುಲಿದುರ್ಗದಲ್ಲಿ ದಿನಗೂಲಿ ಕೆಲಸಗಾರನಾಗಿರುತ್ತಾನೆ. ಆತನಿಗೆ ಜೀವನದಲ್ಲಿ ಒಂದು ಮಹಾದಾಸೆ. ತನ್ನದೆ ಆದ 2 ಎಕರೆ ಭೂಮಿ ಹೊಂದುವುದಾಗಿತ್ತು. ಎರಡು ಎಕರೆ ಭೂಮಿಗಾಗಿ ನಿರಂತರ ಹೋರಾಟ ಮಾಡುವ ರಾಚಯ್ಯ ಸಿನಿಮಾದ ಜೀವಾಳ. ಕೋಲಾರ ಭಾಗದ ಭಾಷೆಯನ್ನು ದುಡಿಸಿಕೊಳ್ಳುವ ಜೊತೆಗೆ, ನೆಲದ ಕಥೆಯನ್ನು, ಸೊಗಡನ್ನು ಒಂದು ಚೌಕಟ್ಟಿನಲ್ಲಿ ಕಟ್ಟಿಕೊಡಲಾಗಿದೆ.
ಊರಿನ ಧಣಿ (ರಾಜ್ ಬಿ ಶೆಟ್ಟಿ) ಎನಿಸಿಕೊಂಡವರ ದಬ್ಬಾಳಿಕೆ, ಅವರ ಪರ ನಿಲ್ಲುವ ಕಾನೂನು, ಪೊಲೀಸ್ ಎಂಬ ವ್ಯವಸ್ಥೆ ಬಡವರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದನ್ನು ಸಿನಿಮಾ ಧ್ವನಿಸುತ್ತದೆ. ಬಡವರಿಗೆ ಭೂಮಿ ನೀಡಿದರೆ ತಮ್ಮ ಪ್ರತಿಷ್ಠೆಗೆ ಧಕ್ಕೆ ಬರುತ್ತದೆ ಎಂಬುದು ದಣಿಗಳ ವಾದ. ಎಂದೆಂದಿಗೂ ಬಡವರಿಗೆ ಭೂಮಿಯ ಒಡೆತನ ಸಿಗಲೇಬಾರದು ಎಂದು ದಣಿಗಳು ಕುತಂತ್ರ ನಡೆಸುತ್ತಾರೆ. ಅಂಥ ದಣಿಗಳ ವಿರುದ್ಧ ಸಿಡಿದು ನಿಲ್ಲುವ ರಾಚಯ್ಯ ಅಲಿಯಾಸ್ ಕೊಡಲಿ ರಾಚಯ್ಯ ಎಂಬ ಬಡವನ ಕಥೆ ಈ ಸಿನಿಮಾದಲ್ಲಿ ಇದೆ.
ನಟ ದುನಿಯಾ ವಿಜಯ್ ಅವರು ಕೊಡಲಿ ರಾಚಯ್ಯನಾಗಿ ಈ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ಆ ಪಾತ್ರಕ್ಕೆ ಅವರು ನ್ಯಾಯ ಒದಗಿಸಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲಿ ಅಬ್ಬರಿಸಿದ್ದಾರೆ. ಕೋಲಾರ ಭಾಗದ ಕನ್ನಡವನ್ನು ಮಾತನಾಡುತ್ತಾ ಆ ಪಾತ್ರವೇ ತಾವಾಗಿದ್ದಾರೆ. ದುನಿಯಾ ವಿಜಯ್ ಅವರಿಗೆ ಜೋಡಿಯಾಗಿ ರಚಿತಾ ರಾಮ್ ಅಭಿನಯಿಸಿದ್ದಾರೆ. ದಿಟ್ಟ ಹೆಣ್ಣುಮಗಳಾಗಿ, ಡಿ-ಗ್ಲಾಮ್ ಪಾತ್ರವನ್ನು ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಮಗಳ ಪಾತ್ರದಲ್ಲಿ ನಟಿಸಿರುವ ರಿತನ್ಯಾ ಅವರು ಗಮನ ಸೆಳೆಯುತ್ತಾರೆ.
ಈ ಸಿನಿಮಾದಲ್ಲಿ ಪ್ರತಿಭಾವಂತ ಕಲಾವಿದ ದಂಡು ಇದೆ. ಹಿರಿಯ ನಟಿ ಉಮಾಶ್ರೀ ಅವರು ಈ ಸಿನಿಮಾದಲ್ಲಿ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಕೂಡ ತಮ್ಮ ಛಾಪು ಮೂಡಿಸಿದ್ದಾರೆ. ಅವರಿಂದಾಗಿ ಸಿನಿಮಾದ ತೂಕ ಹೆಚ್ಚಿದೆ. ರಾಜ್ ಬಿ. ಶೆಟ್ಟಿ ಅವರು ಈ ಚಿತ್ರದಲ್ಲಿ ವಿಲನ್ ಆಗಿ ಘರ್ಜಿಸಿದ್ದಾರೆ. ಬಡವರ ರಕ್ತ ಹೀರುವ ಖಳನಾಗಿ ಅವರು ಇಡೀ ಸಿನಿಮಾವನ್ನು ಆವರಿಸಿದ್ದಾರೆ. ಲ್ಯಾಂಡ್ಲಾರ್ಡ್ ಸಿನಿಮಾದಲ್ಲಿ ಕಟುಕನಾಗಿ ಕಾಣಿಸಿಕೊಂಡಿದ್ದಾರೆ. ಪದ್ಮಾ ಎಂಬ ದೇವದಾಸಿ ಪಾತ್ರದಲ್ಲಿ ಭಾವನಾ ರಾವ್ ಕಾಣಿಸಿಕೊಂಡಿದ್ದಾರೆ.
ಇದು ದುನಿಯಾ ವಿಜಯ್ ಅವರ 29ನೇ ಸಿನಿಮಾ ಆಗಿದ್ದು, ಜಡೇಶ್ ಕೆ.ಹಂಪಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸ್ವಾಮಿ ಜೆ ಗೌಡ ಕ್ಯಾಮೆರಾ ಹಿಡಿದಿದ್ದು, ಅಜನಿಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಂದಿನ ಕಾಲಘಟ್ಟವನ್ನು ಕಣ್ಣಿಗೆ ಕಟ್ಟುವಂತೆ ತೋರಿಸುವಲ್ಲಿ ಈ ಸಿನಿಮಾ ಯಶಸ್ವಿ ಆಗಿದೆ. ಅಜನೀಶ್ ಬಿ. ಲೋಕನಾಥ್ ಅವರ ಸಂಗೀತದಲ್ಲಿ ಮೂಡಿಬಂದ ಹಾಡುಗಳು ಗಮನ ಸೆಳೆಯುವಂತಿವೆ. ಹೊಸತೇನನ್ನೂ ಹುಡುಕದ ಚಿತ್ರಕಥೆ ಕೆಲವು ಕಡೆ ಹಳಿ ತಪ್ಪಿದೆ ಎನ್ನುವ ಭಾವನೆ ಮೂಡಿಸುತ್ತದೆ. ಕಥೆಯನ್ನು ಮತ್ತಷ್ಟು ಬಿಗಿಯಾಗಿ ಹೆಣೆಯುವ ಅವಕಾಶವಿತ್ತು. ಸಿನಿಮಾ ಆರಂಭದಲ್ಲಿ ಅದ್ಭುತ ಎನಿಸುವ ಕತೆ ಕ್ಲೈಮ್ಯಾಕ್ಸ್ ಹೊತ್ತಿಗೆ ಜಾಳು ಎನಿಸುತ್ತದೆ.ಲಾಜಿಕ್ ಬದಿಗಿಟ್ಟು ನೋಡಿದರೆ ಲ್ಯಾಂಡ್ ಲಾರ್ಡ್ ಸಿನಿಮಾ ಇಷ್ಟವಾಗುತ್ತದೆ.
ಸಿನಿಮಾ: ಲ್ಯಾಂಡ್ ಲಾರ್ಡ್
ನಿರ್ದೇಶಕ: ಜಡೇಶಾ ಕೆ ಹಂಪಿ
ತಾರಾಗಣ: ವಿಜಯ್ ಕುಮಾರ್, ರಾಜ್ ಬಿ ಶೆಟ್ಟಿ, ರಚಿತಾ ರಾಮ್, ರಿತ್ನ್ಯಾ ವಿಜಯ್, ಉಮಾಶ್ರೀ ಮುಂತಾದವರು