ಡಾರ್ಲಿಂಗ್ ಕೃಷ್ಣ ನಿರ್ದೇಶನದ 'ಲವ್ ಮಾಕ್ಟೇಲ್ 3' ಚಿತ್ರವು ತಂದೆ-ಮಗಳ ಬಾಂಧವ್ಯದ ಸುತ್ತ ಹೆಣೆದಿದೆ. ಚಿತ್ರದಲ್ಲಿ ಹಾಸ್ಯ, ಭಾವನೆಗಳ ಕಾಕ್ಟೇಲ್ ಅನ್ನು ಸೃಷ್ಟಿಸಲಾಗಿದೆ. ಕಥೆಯು ಸಿಂಪಲ್ ಆಗಿದ್ದರೂ, ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಡಾರ್ಲಿಂಗ್ ಕೃಷ್ಣ ಮತ್ತು ಪುಟಾಣಿ ಸಂವೃತ ಅವರ ಅಭಿನಯ ಗಮನಾರ್ಹವಾಗಿದೆ. ಚಿತ್ರವು ಪಕ್ಕಾ ಫ್ಯಾಮಿಲಿ ಪ್ಯಾಕೇಜ್ ಆಗಿದ್ದು, ಪ್ರೇಕ್ಷಕರಿಗೆ ಪಕ್ಕಾ ಮನರಂಜನೆ ನೀಡುತ್ತದೆ.
ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಸಿನಿಮಾ "ಲವ್ ಮಾಕ್ಟೇಲ್ 3'. "ಲವ್ ಮಾಕ್ಟೇಲ್' 2020ರ ಜನವರಿಯಲ್ಲಿ ರಿಲೀಸ್ ಆಗಿತ್ತು. ನಂತರ ಅದರ ಸೀಕ್ವೆಲ್ "ಲವ್ ಮಾಕ್ಟೇಲ್ 2' 2022ರ ಫೆಬ್ರವರಿಯಲ್ಲಿ ಬಿಡುಗಡೆಯಾಗಿತ್ತು. ಇದೀಗ ನಾಲ್ಕು ವರ್ಷಗಳ ನಂತರ ಲವ್ ಮಾಕ್ಟೇಲ್-3 ರಿಲೀಸ್ ಆಗಿದೆ.
ವಿಶೇಷ ಅಂದರೆ ಈ ಚಿತ್ರದಲ್ಲಿ ಮಿಲನಾ ನಾಗರಾಜ್, ಅಮೃತಾ ಅಯ್ಯಂಗಾರ್ ಮತ್ತು ರೇಚೆಲ್ ಡೇವಿಡ್ ಜತೆಗೆ ಮೂರನೇ ಭಾಗದಲ್ಲಿ ಶ್ವೇತಾ ಪ್ರಸಾದ್, ರಜನಿ ಭಾರದ್ವಾಜ್ ಹಾಗೂ ನಯಾರಾ ಕೂಡ ಸೇರಿಕೊಂಡಿದ್ದಾರೆ. ಆ ಮೂಲಕ ರೊಮ್ಯಾಂಟಿಕ್ ಡ್ರಾಮಾ ಗಟ್ಟಿ ಮಹಿಳಾ ಪಾತ್ರಗಳ ಮೂಲಕವೂ ಗಮನ ಸೆಳೆಯುತ್ತಿದೆ. ನಿಧಿಮಾ ತೀರಿಕೊಂಡ ನಂತರ ಒಂಟಿಯಾಗುವ ಆದಿ, ಅನಾಥಾಶ್ರಮದಿಂದ ರಮ್ಯಾಳನ್ನು ದತ್ತು ಪಡೆಯುವಲ್ಲಿಗೆ ‘ಲವ್ ಮಾಕ್ಟೇಲ್–2’ ಕಥೆ ಅಂತ್ಯಗೊಂಡಿತ್ತು. ಅಲ್ಲಿಂದ ನಂತರದ ರಮ್ಯಾ ಮತ್ತು ಆದಿಯ ಬದುಕೇ ‘ಲವ್ ಮಾಕ್ಟೇಲ್–3’ ಚಿತ್ರದ ಒಟ್ಟಾರೆ ಕಥೆ.
ಹೆಣ್ಣು ಮಗುವನ್ನು ದತ್ತುಪಡೆದುಕೊಂಡು ಆ ಜೀವನದಲ್ಲೇ ಖುಷಿ ಕಾಣುತ್ತಿರುತ್ತಾನೆ. ಹೆಂಡತಿಯ ನೆನಪಿನಲ್ಲಿ ಆದಿ ತನ್ನ ಮಗಳ ಹೆಸರನ್ನು ನಿಧಿ ಎಂದು ಬದಲಾಯಿಸಿರುತ್ತಾನೆ. ಆಕೆಗೆ ಏಳು ವರ್ಷವಾದ ನಂತರದ ಕಥೆ ಈ ಚಿತ್ರದಲ್ಲಿದೆ. ಎಲ್ಲವೂ ಒಂದು ಹಂತಕ್ಕೆ ಚೆನ್ನಾಗಿ ನಡೆಯುತ್ತಿದೆ ಎನ್ನುವಷ್ಟರಲ್ಲಿ ಆದಿ, ಕನಸಲ್ಲೂ ನೆನೆಯದಂತಹ ಸಮಸ್ಯೆಯೊಂದು ಧುತ್ತನೇ ಎದುರಾಗುತ್ತದೆ. ಅಲ್ಲಿಂದ ಹೋರಾಟ ಶುರುವಾಗುತ್ತದೆ. ಆ ಸಮಸ್ಯೆಯಾದರೂ ಏನು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಲವ್ ಮಾಕ್ಟೇಲ್ -3 ನೋಡಬೇಕು.
ಆದಿಯ ಸ್ನೇಹಿತ ವಿಜಯ್‌ನ ಹೆಂಡತಿ ಸೀಮಂತದ ನೆಪದಲ್ಲಿ ‘ಲವ್ ಮಾಕ್ಟೇಲ್’ ಎರಡು ಭಾಗಗಳ ಪ್ರಮುಖ ಪಾತ್ರಧಾರಿಗಳು ಒಂದೆಡೆ ಸೇರುತ್ತಾರೆ. ಆಗ ವಿಜಯ್ ಆದಿಯ ಪ್ರಸ್ತುತ ಬದುಕಿನ ಕಥೆಯನ್ನು ಹೇಳಲು ಪ್ರಾರಂಭಿಸುತ್ತಾನೆ. ಲವ್ ಮಾಕ್ಟೇಲ್ 3’ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ನಟನೆಯಲ್ಲಿ ಮತ್ತಷ್ಟು ಪಳಗಿದ್ದಾರೆ. ಪತ್ನಿಯ ನೆನಪಲ್ಲೇ ಜೀವನ ಸಾಗಿಸುತ್ತಿರುವವನಾಗಿ, ಒಂದು ಹೆಣ್ಣು ಮಗುವಿನ ಜವಾಬ್ದಾರಿಯುತ ತಂದೆಯಾಗಿ ಡಾರ್ಲಿಂಗ್ ಕೃಷ್ಣ ಪ್ರಬುದ್ಧ ಅಭಿನಯ ನೀಡಿದ್ದಾರೆ.
ಚಿತ್ರದ ಪ್ರಮುಖ ಹೈಲೈಟ್ ಪುಟಾಣಿ ಸಂವೃತ. ಅಪ್ಪನ ಮುದ್ದಿನ ಮಗಳಾಗಿ ಸಂವೃತ ಮುದ್ದಾಗಿ ನಟಿಸಿದ್ದಾಳೆ. ತೆರೆಮೇಲೆ ಇದ್ದಷ್ಟು ಹೊತ್ತು ಲವಲವಿಕೆಯಿಂದಲೇ ಕಾಣಿಸಿಕೊಂಡಿದ್ದಾಳೆ ಸಂವೃತ. ಜವಾಬ್ದಾರಿಯುತ ತಂದೆಯಾಗಿ ಕೃಷ್ಣ ಇಷ್ಟವಾಗುತ್ತಾರೆ. ವಿಜು ಮಾಮ ಆಗಿ ದಳಪತಿ ಅಭಿಲಾಶ್ ನಟನೆ ಚೆನ್ನಾಗಿದೆ. ಜಗ್ಗ ಮಮ್ಮಿ ಆಗಿ ಜಗದೀಶ್ ನಟನೆ ಗಮನ ಸೆಳೆಯುತ್ತದೆ. ಉಳಿದಂತೆ ಎಲ್ಲಾ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಚಿತ್ರದ ಕಥೆ ಸಿಂಪಲ್ ಆಗಿದೆ. ಆದರೂ ಶುರುವಿನಿಂದ ಹಿಡಿದು ಎಂಡಿಂಗ್‌ವರೆಗೂ ಎಲ್ಲೂ ಬೋರಿಂಗ್ ಎನಿಸುವುದಿಲ್ಲ. ಯಾವ ದೃಶ್ಯವೂ ಅನವಶ್ಯಕ ಅನಿಸುವುದಿಲ್ಲ. ಅಷ್ಟರಮಟ್ಟಿಗೆ ಸ್ಕ್ರೀನ್ ಪ್ಲೇ ಮತ್ತು ಸಂಕಲನ ಉತ್ತಮವಾಗಿ ಮೂಡಿಬಂದಿದೆ. ಚಿತ್ರಕಥೆಗೆ ತಕ್ಕ ಹಾಗೆ ಸಂಗೀತ ಬಹು ಚೆನ್ನಾಗಿ ಮೂಡಿಬಂದಿದ್ದರೂ ಯಾವ ಹಾಡುಗಳು ನೆನಪಲ್ಲಿ ಉಳಿಯುವುದಿಲ್ಲ. ಫಾರಿನ್ ಲೊಕೇಷನ್‌ಗಳಲ್ಲಿ ಕ್ಯಾಮರಾ ವರ್ಕ್ ಕಣ್ಣು ಕೋರೈಸುವಂತಿದೆ. ಮೊದಲಾರ್ಧ ಸ್ವಲ್ಪ ನಿಧಾನಗತಿಯಲ್ಲಿ ಸಾಗಿದಂತೆ ಅನಿಸುತ್ತದೆ.
ಚಿತ್ರದ ದ್ವೀತಿಯಾರ್ದದಲ್ಲಿ ಮಗುವಿನ ದತ್ತು ಪ್ರಕ್ರಿಯೆ, ಕಾನೂನು ತೊಡಕುಗಳ ಬಗ್ಗೆ ತೋರಿಸಲಾಗಿದೆ. ಸಿನಿಮಾದೊಳಗೆ ಪ್ರೇಕ್ಷಕ ಊಹಿಸದ ಕಥೆ ಇದೆ. ಜೊತೆಗೆ ಕಾಮಿಡಿ ಇದೆ, ಕಣ್ಣಂಚು ಒದ್ದೆಯಾಗಿಸುವ ಭಾವನಾತ್ಮಕ ದೃಶ್ಯಗಳಿವೆ, ಏನಾಗಬಹುದು ಎಂದು ಪ್ರೇಕ್ಷಕರನ್ನು ಕುತೂಹಲದ ಕಟಕಟೆಯಲ್ಲಿ ನಿಲ್ಲಿಸುವ ದೃಶ್ಯಗಳು ಕೂಡಾ ಇವೆ. ಈ ಮಟ್ಟಿಗೆ ಇದು ಪಕ್ಕಾ ಫ್ಯಾಮಿಲಿ ಪ್ಯಾಕೇಜ್. ಸಿನಿಮಾದ ಎರಡನೇ ಭಾಗ ಬಹುತೇಕ ಕೋರ್ಟ್ ನಲ್ಲೇ ಕಳೆದು ಹೋಗುತ್ತದೆ. ಮೊದಲಾರ್ಧದಲ್ಲಿ ಕೆಲ ಪುನರಾವರ್ತಿತ ದೃಶ್ಯಗಳಿಗೆ ಕತ್ತರಿ ಹಾಕ ಬಹುದಿತ್ತು. ಎರಡು ಭಾಗಗಳನ್ನು ನೋಡಿರುವ ಸಿನಿ ಪ್ರೇಕ್ಷಕನಿಗೆ ಪಾರ್ಟ್ 3 ನಿರಾಶೆ ಮಾಡುವುದಿಲ್ಲ. ಮೂರನೇ ಭಾಗದ ಕಥೆಯನ್ನು ಅತ್ಯಂತ ನವಿರಾಗಿ ಕೃಷ್ಣ ಮುಗಿಸಿದ್ದಾರೆ.
ಸಿನಿಮಾ: ಲವ್ ಮಾಕ್ಟೇಲ್ 3
ನಿರ್ದೇಶಕ: ಡಾರ್ಲಿಂಗ್ ಕೃಷ್ಣ
ಕಲಾವಿದರು: ಡಾರ್ಲಿಂಗ್ ಕೃಷ್ಣ, ಸಂವೃತ, ಮಿಲನ ನಾಗರಾಜ್, ಅಭಿಲಾಷ್, ದಿಲೀಪ್ ರಾಜ್ ಮುಂತಾದವರು.