ಕೆಡಿ ದಿ ಡೆವಿಲ್ ಸಿನಿಮಾ ಸ್ಟಿಲ್ 
ಸಿನಿಮಾ ವಿಮರ್ಶೆ

KD: The Devil Movie Review: 80ರ ದಶಕದ ಭೂಗತ ಲೋಕದ ರಕ್ತಚರಿತ್ರೆ; ಧ್ರುವ ಅಭಿಮಾನಿಗಳಿಗೆ ಮಾಸ್ ಜಾತ್ರೆ; ಅಮಾಯಕ ಕಾಳಿದಾಸನ ಅಪೂರ್ಣ ಕತೆ!

Shilpa D

1980ರ ದಶಕದ ಬೆಂಗಳೂರಿನ ಭೂಗತ ಲೋಕ, ಅಣ್ಣ-ತಮ್ಮನ ಭಾವನಾತ್ಮಕ ಬಾಂಧವ್ಯ, ರಾಜಕೀಯ ಪೈಪೋಟಿ ಮತ್ತು ರಕ್ತಚರಿತ್ರೆಯನ್ನು ಜೋಗಿ ಪ್ರೇಮ್ ಮಾಸ್ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಧ್ರುವ ಸರ್ಜಾ ಕಾಳಿಯಾಗಿ ಎರಡು ಶೇಡ್‌ಗಳಲ್ಲಿ ಮಿಂಚಿದ್ದಾರೆ, ರೆಟ್ರೋ ಸೆಟ್‌ಗಳು, ವಿಂಟೇಜ್ ವಾಹನಗಳು, ಸ್ಥಳೀಯ ಭಾಷೆಯ ನೈಜತೆ ಚಿತ್ರಕ್ಕೆ ಜೀವ ತುಂಬುತ್ತವೆ. ಮೊದಲಾರ್ಧದ ಎಳೆತ, ಅಪೂರ್ಣ ಅಂತ್ಯ ಸ್ವಲ್ಪ ನಿರಾಶೆ ಮೂಡಿಸುತ್ತವೆ.

ಶೋಮ್ಯಾನ್ ಪ್ರೇಮ್ ಅವರ ವಿಂಟೇಜ್ ಅವತಾರ ಮತ್ತೆ ಕಣ್ಮುಂದೆ ಬಂದಿದೆ. ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟನೆ ಕೆಡಿ ದಿ ಡೆವಿಲ್ ಸಿನಿಮಾ ರಿಲೀಸ್ ಆಗಿದ್ದು, ಧ್ರುವ ಸರ್ಜಾ ಅಭಿಮಾನಿಗಳಿಗೆ ರಸದೌತಣವಾಗಿದೆ. ಸಿನಿಮಾದಲ್ಲಿ ಕೆಡಿ ಅಂದ್ರೆ ಕಾಳಿದಾಸ. ಧ್ರುವ ಸರ್ಜಾ ಪಾತ್ರದ ಹೆಸರು ಕಾಳಿದಾಸ.

ಎಂಬತ್ತರ ಕಾಲಘಟ್ಟದಲ್ಲಿ ಬೆಂಗಳೂರಿನ ಭೂಗತ ಜಗತ್ತು ಹೇಗಿತ್ತು ಎಂಬುದನ್ನು ಪ್ರೇಮ್ ಕಟ್ಟಿಕೊಟ್ಟಿದ್ದಾರೆ. ಭೂಗತ ಲೋಕದ ರಕ್ತಚರಿತ್ರೆ, ರಾಜಕೀಯದ ಪೈಪೋಟಿ ಮತ್ತು ವೈಯಕ್ತಿಕ ಸಂಬಂಧಗಳ ಸಂಘರ್ಷವನ್ನು ಕೆಡಿ ಮೂಲಕ ಪ್ರೇಮ್ ಹೇಳಲು ಹೊರಟಿದ್ದಾರೆ.

ತಮ್ಮ ಹಿಂದಿನ ಸಿನಿಮಾಗಳಲ್ಲಿ ತಾಯಿ ಮಗನ ಬಾಂಧವ್ಯದ ಬಗ್ಗೆ ಹೇಳಿದ್ದ ಪ್ರೇಮ್ ಈ ಸಿನಿಮಾದಲ್ಲಿ ಅಣ್ಣ-ತಮ್ಮನ ಸಂಬಂಧದ ಬಗ್ಗೆ ಭಾವನಾತ್ಮಕ ಕತೆ ಹೆಣೆದಿದ್ದಾರೆ. ಅತಿರೇಕದ ಹಿಂಸಾಚಾರದ ನಡುವೆಯೂ ಪ್ರೇಮ್ ಸಹೋದರರ ಸಂಬಂಧದ ಜೊತೆಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

1975ರ ದಶಕದಲ್ಲಿ ‘ಕೆಡಿ’ ಸಿನಿಮಾದ ಕಥೆ ನಡೆಯುತ್ತದೆ. ಅಣ್ಣನೇ ಸರ್ವಸ್ವ ಎಂದುಕೊಂಡು ಬದುಕುತ್ತಿರುವ ಕಾಳಿದಾಸ ಅಲಿಯಾಸ್ ಕೆಡಿ ಎಂಬಾತನ ಕಥೆ ಈ ಸಿನಿಮಾದಲ್ಲಿದೆ. ಸೀಮೆಎಣ್ಣೆ ವ್ಯಾಪಾರ ಮಾಡುವ ಕಾಳಿ ವಿದ್ಯಭ್ಯಾಸ ಮಾಡಿಲ್ಲ ಎಂಬ ಕಾರಣಕ್ಕೆ ಅಣ್ಣ ಧರ್ಮನಿಂದ ದೂರವಾಗಿರುತ್ತಾನೆ. ಅಣ್ಣನ ಪ್ರೀತಿ ಗಳಿಸಬೇಕೆಂದು ಕಾಳಿದಾಸ ಸದಾ ಬಯಸುತ್ತಿರುತ್ತಾನೆ. ಈ ನಡುವೆ ಮಚ್‌ ಲಕ್ಷ್ಮಿಯೊಂದಿಗೆ ಅವನ ಪರಿಚಯವಾಗಿ ಪ್ರೇಮಕಥೆಗೆ ದಾರಿ ಮಾಡಿಕೊಡುತ್ತದೆ. ಮನಸ್ಸಿನಲ್ಲಿ ಕಲ್ಮಶವೇ ಇಲ್ಲದ ಕಾಳಿ ಯಾರ ಮೇಲೂ ಕೈ ಎತ್ತಲ್ಲ, ಅಷ್ಟರ ಮಟ್ಟಿನ ಅಮಾಯಕನಾಗಿರುತ್ತಾನೆ. ಮಚ್ಚು ಕೈಗೆ ಬಂದ ನಂತರ ಚಿತ್ರದ ಹಿಂಸೆ ಇನ್ನಷ್ಟು ತೀವ್ರವಾಗುತ್ತದೆ. ಅಂತಿಪ್ಪ ಕಾಳಿ ಒಂದು ದಿನ ಅತಿ ಭಯಾನಕವಾದ ರಾಕ್ಷಸನ ರೂಪದಲ್ಲಿ ಭೂಗತ ಲೋಕಕ್ಕೆ ಎಂಟ್ರಿ ನೀಡುತ್ತಾನೆ. ಧರ್ಮ ಎಂಬ ಅಧ್ಯಾಪಕ ಮತ್ತು ಶಾಸಕ ಅಣ್ಣಯ್ಯಪ್ಪನ ಸ್ನೇಹದಿಂದ ಕಥೆಗೆ ರಾಜಕೀಯದ ಸ್ಪರ್ಶ ಸಿಗುತ್ತದೆ. ಆ ರೀತಿ ಬದಲಾವಣೆಗೆ ಕಾರಣ ಏನು ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

ಕೆಡಿ ಸಿನಿಮಾದ ಮೇಜರ್‌ ಹೈಲೈಟ್‌ ರೆಟ್ರೋ ಸ್ಟೈಲ್. ಇದು 1980ರ ದಶಕದಲ್ಲಿ ನಡೆಯುವ ಕಥೆ. ಅಂದಿನ ಬೆಂಗಳೂರನ್ನ ತೆರೆಮೇಲೆ ನೀಟ್ ಆಗಿ ಕಟ್ಟಿಕೊಟ್ಟಿದ್ದಾರೆ ಪ್ರೇಮ್. ಕೆಡಿ ಸಿನಿಮಾ ಈ ಮಟ್ಟಕ್ಕೆ ಮೂಡಿಬರಲು ಮುಖ್ಯ ಕಾರಣ ಕೆವಿಎನ್ ಸಂಸ್ಥೆ. ನಿರ್ಮಾಪಕರು ಹಾಕಿರುವ ಅದ್ದೂರಿ ಬಜೆಟ್ ಪ್ರತಿಯೊಂದು ಫ್ರೇಮ್‌ನಲ್ಲೂ ಎದ್ದು ಕಾಣುತ್ತಿದೆ. 1970ರ ದಶಕದ ಬೆಂಗಳೂರನ್ನು ಮರುಸೃಷ್ಟಿಸಿರುವ ರೀತಿ ಅದ್ಭುತವಾಗಿದೆ. ಒಬ್ಬ ಸಾಮಾನ್ಯ ಹುಡುಗ ತನ್ನ ಕುಟುಂಬಕ್ಕೆ ತೊಂದರೆಯಾದಾಗ ಏನು ಮಾಡುತ್ತಾನೆ ಎಂಬುದೇ ಚಿತ್ರದ ಹೂರಣವಾಗಿದ್ದು, ಅದರಲ್ಲಿ ಅಣ್ಣ-ತಮ್ಮನ ಸೆಂಟಿಮೆಂಟ್, ಪ್ರೀತಿ ಮತ್ತು ಕಾಮಿಡಿ ಮಸಾಲೆಗಳನ್ನು ಹದವಾಗಿ ಬೆರೆಸಲಾಗಿದೆ.

ಧ್ರುವ ಸರ್ಜಾ ಕಾಳಿಯಾಗಿ ಚಿತ್ರವನ್ನು ಸಂಪೂರ್ಣ ಆವರಿಸಿದ್ದಾರೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರನ್ನು ಅಭಿಮಾನಿಗಳು ಎರಡು ಶೇಡ್​​ನಲ್ಲಿ ನೋಡಬಹುದು. ಒಂದು ಶೇಡ್​ನಲ್ಲಿ ಮುಗ್ಧನಾಗಿ ನಗಿಸುತ್ತಾರೆ. ಇನ್ನೊಂದು ಶೇಡ್​​ನಲ್ಲಿ ರಕ್ತದೋಕುಳಿ ಹರಿಸುತ್ತಾರೆ. ಅವರು ಕೇವಲ ಆ್ಯಕ್ಷನ್‌ಗೆ ಸೀಮಿತವಾಗದೆ, ಪಾತ್ರದ ವಿವಿಧ ಹಂತಗಳನ್ನು ಸಮರ್ಥವಾಗಿ ನಿಬಾಯಿಸಿದ್ದಾರೆ. ಸಂಜಯ್‌ ದತ್‌ ಡಾಕ್‌ ದೇವನಾಗಿ ಖಡಕ್‌ ಖಳನಾಯಕನಾಗಿ ಅಬ್ಬರಿಸಿದ್ದಾರೆ.

ರಮೇಶ್‌ ಅರವಿಂದ್‌ ಅವರ ಧರ್ಮ ಪಾತ್ರಕ್ಕೆ ಇನ್ನಷ್ಟು ಗಟ್ಟಿತನ ತುಂಬಬಹುದಿತ್ತು. ಶಿಲ್ಪಾ ಶೆಟ್ಟಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆದರೆ ಅವರ ಲಿಪ್ ಸಿಂಕ್ ಮ್ಯಾಚ್ ಆಗುವುದಿಲ್ಲ. ರೀಷ್ಮಾ ಅವರ ಪಾತ್ರದಲ್ಲಿ ಗದ್ದಲ ಹೆಚ್ಚು ಅನ್ನಿಸುತ್ತದೆ. ಜೊತೆಗೆ ಆರಂಭದಲ್ಲಿ ಅಸಹಜ ಎನಿಸುವಷ್ಟು ಕಿರಿಕಿರಿಯಾಗುತ್ತದೆ. ಇನ್ನೂ ರಕ್ಷಿತಾ - ಪ್ರೇಮ್ ಪುತ್ರ ಸೂರ್ಯ ಸಹ ಒಂದು ಸೀನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸುದೀಪ್‌ ಕೊನೆಯ ಭಾಗದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ, ಕಾಲ ಭೈರವನಾಗಿ ಸುದೀಪ್ ತೆರೆಯ ಮೇಲೆ ಇದ್ದಷ್ಟು ಸಮಯ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾರೆ. ಪೊಲೀಸ್ ಕಮಿಷನರ್‌ ಸೂರಪ್ಪ ಆಗಿ ರವಿಶಂಕರ್‌ ಆಕ್ಟಿಂಗ್ ಅದ್ಭುತವಾಗಿದೆ.

ಕಥೆಯಲ್ಲಿ ನೆಲದ ಸೊಗಡು, ಸ್ಥಳೀಯ ಭಾಷೆಯ ನೈಜತೆ, ಸಂಸ್ಕೃತಿ ಮತ್ತು ಹಾಸ್ಯವನ್ನು ಸಮತೋಲನದಿಂದ ಬೆರೆಸಿರುವುದು ಸಿನಿಮಾದ ಪ್ಲಸ್ ಪಾಯಿಂಟ್. ವಿಂಟೇಜ್‌ ಕಾರುಗಳು, ಹಳೇ ಬೈಕ್‌ಗಳು, ಡಬಲ್ ಡೆಕ್ಕರ್ ಬಸ್, ಪ್ರತಿಯೊಬ್ಬರ ಕಾಸ್ಟ್ಯೂಮ್‌ ಹಾಗೂ ಹೇರ್‌ ಸ್ಟೈಲ್‌, ಪ್ರತಿಯೊಂದರ ಬಗ್ಗೆಯೂ ಕಾಳಜಿ ವಹಿಸಲಾಗಿದೆ. ಸಿನಿಮಾದ ಮೊದಲಾರ್ದದಲ್ಲಿ ಕಥೆಯನ್ನು ಅನಗತ್ಯವಾಗಿ ಎಳೆದಂತೆ ಅನ್ನಿಸುತ್ತದೆ. ಅರ್ಜುನ್‌ ಜನ್ಯ ಅವರ ಹಿನ್ನೆಲೆ ಸಂಗೀತ ಸನ್ನಿವೇಶಗಳಿಗೆ ಬಲ ನೀಡುತ್ತದೆ. ಆದರೆ ಹಾಡುಗಳು ನೆನಪಿನಲ್ಲಿ ಉಳಿಯುವಷ್ಟು ಪರಿಣಾಮ ಬೀರುವುದಿಲ್ಲ.

ಮಳೆಯ ನಡುವೆ ನಡೆಯುವ ಅಂತಿಮ ಹೋರಾಟ ದೃಶ್ಯಕ್ಕೆ ದೃಶ್ಯಾತ್ಮಕ ತೀವ್ರತೆ ಮಾತ್ರವಲ್ಲ, ಭಾವನಾತ್ಮಕ ಘರ್ಷಣೆಯನ್ನೂ ನೀಡುತ್ತದೆ. ಕಥೆಯ ಕೆಲವು ಭಾಗಗಳನ್ನು ಮುಂದಿನ ಭಾಗಕ್ಕೆ ಉಳಿಸಿರುವುದರಿಂದ ಚಿತ್ರದಲ್ಲಿ ಅಪೂರ್ಣತೆಯ ಭಾವನೆ ಮೂಡುತ್ತದೆ. ‘ಕೆಡಿ’ ಸಿನಿಮಾದಲ್ಲಿ ಯಾವುದೇ ಪಾತ್ರವೂ ಡಮ್ಮಿ ಅಲ್ಲ. ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ತೂಕವಿದೆ. ಕಲಾ ನಿರ್ದೇಶಕ ಮೋಹನ್ ಬಿ. ಕೆರೆ ಮುಂತಾದ ತಂತ್ರಜ್ಞರ ಕೆಲಸ ಪ್ರತಿ ಫ್ರೇಮ್​​ನಲ್ಲೂ ಎದ್ದು ಕಾಣಿಸುತ್ತದೆ. ನೋರಾ ಫತೇಹಿ ನಟಿಸಿದ್ದ ವಿವಾದಾತ್ಮಕ ಸಾಹಿತ್ಯದ ಹಾಡಿಗೆ ಕತ್ತರಿ ಹಾಕಲಾಗಿದೆ. ಒಟ್ಟೆರೆ ಕೆಡಿ ದಿ ಡೆವಿಲ್ ಒಮ್ಮೆ ನೋಡಬಹುದಾದ ಸಿನಿಮಾವಾಗಿದೆ.

ಸಿನಿಮಾ: ಕೆಡಿ ದಿ ಡೆವಿಲ್

ನಿರ್ದೇಶಕ: ಜೋಗಿ ಪ್ರೇಮ್

ತಾರಾಗಣ: ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್, ರವಿಚಂದ್ರನ್, ರವಿಶಂಕರ್, ಸುಚೇಂದ್ರ ಪ್ರಸಾದ್, ಮತ್ತು ಯಶ್ ಶೆಟ್ಟಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಸ್ಸಾಂ ಸಿಎಂ ಪತ್ನಿ ವಿರುದ್ಧ ಆರೋಪ: ಪವನ್ ಖೇರಾಗೆ ನಿರೀಕ್ಷಣಾ ಜಾಮೀನು ಮಂಜೂರು

ನಾಯಕತ್ವ ಹಗ್ಗಜಗ್ಗಾಟ ನಡುವೆ ಗುಪ್ತಚರ ಮುಖ್ಯಸ್ಥರ ಬದಲಾವಣೆ: ಅಧಿಕಾರ ಇನ್ನೂ ನನ್ನ ಕೈಯಲ್ಲೇ ಇದೆ, ಕಠಿಣ ಸಂದೇಶ ರವಾನಿಸಿದ ಸಿದ್ದರಾಮಯ್ಯ..?

ಗಾಯದ ಮೇಲೆ ಬರೆ: ವಾಣಿಜ್ಯ LPG ಸಿಲಿಂಡರ್ ದರ ರೂ.993 ಏರಿಕೆ, ಹೊಸ ದರ ಇಂದಿನಿಂದ ಜಾರಿ..!

ಬುದ್ದ- ಜಗವೆಲ್ಲಾ ಮಲಗಿರಲು ಅವನೊಬ್ಬ ಎದ್ದ: ಬೌದ್ಧ ಪೌರ್ಣಮಿ ಮಹತ್ವ, ಆಚರಣೆ - ಸಂದೇಶ

ಜಾಗತಿಕ ಅಸ್ಥಿರತೆ ನಡುವೆಯೂ ಇಂಧನ ದರ ಸ್ಥಿರ: ಬೆಲೆ ಏರಿಕೆ ಹೊರೆ ಹೊತ್ತ ತೈಲ ಕಂಪನಿಗಳು, ಗ್ರಾಹಕರಿಗೆ ರಿಲೀಫ್..!

SCROLL FOR NEXT