ಅಂಕಣಗಳು

ಬದಲಾವಣೆ ಜಗದ ನಿಯಮ

ಬದಲಾವಣೆ ಎಂಬ ಪದವೇ ಯಥಾಸ್ಥಿತಿಯನ್ನು ಕದಲಿಸುವುದು ಎಂಬ ಅರ್ಥ ಹೊಂದಿರುವಂಥದ್ದು. ಇರುವ ಸ್ಥಿತಿಗೆ ಒಗ್ಗಿ ಹೋಗಿರುವವರಿಗೆ ಬದಲಾವಣೆಗೆ ತೆರೆದುಕೊಳ್ಳಬೇಕಲ್ಲ ಎಂಬ ಸಂಕಟ. ಬದಲಾವಣೆ ಹೇಗಿರುತ್ತದೋ ಎಂಬ ಆತಂಕ ಹಲವರದ್ದು. ಬದಲಾವಣೆಗೆ ದಾರಿ ಮಾಡಿಕೊಡಬೇಕಾದವರಂತೂ ಸಹಜವಾಗಿಯೇ ಬುಸುಗುಟ್ಟುತ್ತಾರೆ, ನೋವು ತೋಡಿಕೊಳ್ಳುತ್ತಾರೆ. ಆದರೆ ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿರುವುದು ಒಂದು ಪ್ರಖರ ಜನಾಭಿಪ್ರಾಯದ ಕಾವಿನಲ್ಲೇ ಬದಲಾವಣೆ ಅವತರಿಸುತ್ತದೆ ಎಂಬುದು. ಅದು ಜನರ ತುಡಿತ, ಅಂತೆಯೇ ಜಗದ ನಿಯಮ. ಮೋದಿ ಪ್ರವರ್ಧಮಾನ ಹಾಗೂ ಆಡ್ವಾಣಿ ನಿರ್ಗಮನವೂ ಇದೇ ನಿಯಮಕ್ಕೆ ಬದ್ಧವಾದದ್ದು. ನೊಂದು ನಿರ್ಗಮಿಸುತ್ತಿರುವ ಆಡ್ವಾಣಿಯವರನ್ನು ಲಾಯಕ್ ಅಲ್ಲದವರು ಎಂದು ಯಾರೂ ದೂಷಿಸುತ್ತಿಲ್ಲ, ಅವರ ಕೊಡುಗೆಯನ್ನೂ ಮರೆತಿಲ್ಲ. ಅವರ ಕಾಲ ಮುಗಿದಿದೆ ಎಂಬುದಷ್ಟೇ ಧ್ವನಿ. ಸಮಕಾಲೀನ ಆಶಯಗಳನ್ನು ನರೇಂದ್ರ ಮೋದಿಯವರ ನಾಯಕತ್ವವೇ ಸದ್ಯದ ಸ್ಥಿತಿಯಲ್ಲಿ ಪರಿಣಾಮಕಾರಿಯಾಗಿ ಪ್ರತಿನಿಧಿಸುತ್ತದೆ ಎಂಬುದು ವಾಸ್ತವ. ಈ ವಿಶ್ಲೇಷಣೆಯ ಜಾಡಿನಲ್ಲಿ ಅರಳಿವೆ ಇಲ್ಲಿನ ಅಭಿಪ್ರಾಯಗಳು.

ಟಾಮ್ ಆ್ಯಂಡ್ ಜೆರ್ರಿ ಕಾರ್ಟೂನ್ ಫಿಲ್ಮ್ಗಳನ್ನು ನೋಡಿದ ನೆನಪಿದೆಯಾ? ಜೆರ್ರಿ ಕೈನಲ್ಲಿರುವ ಏನನ್ನೋ ತನ್ನದಾಗಿಸಿಕೊಳ್ಳಬೇಕು ಎಂದು ಟಾಮ್ ಓಟ ಕಿತ್ತಿದೆ. ಈ ಗಡಿಬಿಡಿಯಲ್ಲಿ ಟಾಮ್ ಕಣಿವೆಯ ತುದಿಯನ್ನು ಮುಟ್ಟಿಬಿಟ್ಟಿದೆ. ಅದನ್ನು ಲೆಕ್ಕಿಸದೇ ಮುಂದೆ ಹೋಗಿ ಗಾಳಿಯಲ್ಲೇ ಕ್ಷಣಕಾಲ ಕಾಲು ತಿರುಗಿಸಿಕೊಂಡಿದೆ. ಕೆಳಗೆ ನೋಡಿದರೆ ಪಾದದ ಅಡಿಗೆ ಭೂಮಿಯೇ ಇಲ್ಲ ಎಂಬ ಸತ್ಯ ಗೋಚರಿಸಿದೆ. ದೊಡ್ಡ ಬೊಬ್ಬೆಯೊಂದಿಗೆ ಟಾಮ್ ಕೆಳಗೆ ಬಿದ್ದಿದೆ. ಆ ಜಾಗದಿಂದ ನಕ್ಷತ್ರಗಳು ಮೇಲೆದ್ದಿದ್ದು ಹಾಗೂ ಕ್ರಿಸ್ಮಸ್ ಮತಾಪುಗಳು ಸುರುಗುಟ್ಟಿದ್ದನ್ನು ವೀಕ್ಷಕರಿಗೆ ತೋರಿಸಲಾಗುತ್ತದೆ.
ಪರಿಸ್ಥಿತಿಯ ವ್ಯಂಗ್ಯ ಎಂದರೆ ವಸ್ತುವಿಗೆ ಕೆಲವೊಮ್ಮೆ ತನ್ನಲ್ಲಿರುವ ಶಕ್ತಿಯ ಇಂಧನ ಖಾಲಿಯಾಗಿದೆ ಎಂಬುದು ಅರಿವಾಗುವುದಿಲ್ಲ. ಯಾತ್ರೆಗೆ ಹೊರಟ ಪ್ರಯಾಣಿಕನಿಗೆ ತನ್ನ ಯಾನ ಮುಗಿದಿರುವುದನ್ನು ಒಪ್ಪಿಕೊಳ್ಳುವುದಕ್ಕೆ ಆಗದೇ ಇನ್ನೂ ಎಲ್ಲೋ ಅಡ್ಡಾಡುವುದಕ್ಕೆ ಬಯಸುತ್ತಾನೆ.
ಪ್ರಸ್ತುತ ಎಲ್. ಕೆ. ಆಡ್ವಾಣಿಯವರು ಟಾಮ್ನ ಪಾತ್ರದಲ್ಲೇ ಗೋಚರಿಸುತ್ತಿದ್ದಾರೆ. ಪ್ರಯಾಣದ ನೇಪಥ್ಯ ವಹಿಸುವುದಕ್ಕೆ ಹೊಸ ನಾವಿಕನೊಬ್ಬ ಬಂದಿದ್ದಾನೆ ಎಂಬುದನ್ನು ಅವರಿಗೆ ಒಪ್ಪಿಕೊಳ್ಳುವುದಕ್ಕೆ ಆಗಿಲ್ಲ. ತಾನೇ ಸೃಷ್ಟಿಸಿರುವ ಹಾದಿಯ ಇಕ್ಕೆಲಗಳಲ್ಲೇ ಆ ಹೊಸ ಮಾರ್ಗದರ್ಶಕ ಭರವಸೆ- ಆಕಾಂಕ್ಷೆಯ ಕೈತೋಟವನ್ನು ನಿರ್ಮಿಸಲಿದ್ದಾನೆ ಎಂಬುದು ಅವರಿಗೆ ಒಪ್ಪಿತವೇ ಆಗುತ್ತಿಲ್ಲ. ಇದು ಆಡ್ವಾಣಿ ಮತ್ತು ನರೇಂದ್ರ ಮೋದಿ ನಡುವಿನ ಅಧಿಕಾರ ಸಂಘರ್ಷದ ಕತೆ. ಆಕಸ್ಮಿಕ ಏನು ಗೊತ್ತೇ? ಮೋದಿ ಆಕ್ರಮಿಸಿಕೊಳ್ಳುವುದಕ್ಕೆ ಹೊರಟಿರುವುದು ಆಡ್ವಾಣಿಯವರು ಖಾಲಿ ಮಾಡಿದ ಜಾಗವನ್ನೇ. ಅಂದರೆ ಹಿಂದುತ್ವ ಪ್ರತಿಪಾದಕ, ರಾಜಿಯಿಲ್ಲದ ರಾಮನ ಹೋರಾಟಗಾರ, ದೇಶವನ್ನು ಹೊಸ ದಿಗಂತದೆಡೆಗೆ, ಶಕ್ತಿಶಾಲಿ ಔನ್ನತ್ಯಕ್ಕೆ ಕೊಂಡೊಯ್ಯುವುದಕ್ಕೆ ಬದ್ಧವಾಗಿರುವ ನಾಯಕನ ಜಾಗ ಅದು.  
ಎಲ್ಲ ಪ್ರಯಾಣಗಳ ಒಡಲಲ್ಲೂ ಒಂದಿಷ್ಟು ವ್ಯಾಕರಣ, ತುಡಿತಗಳ ಪ್ರವಾಹ ಹಾಗೂ ಗುರಿ ಇದ್ದಿರುತ್ತದೆ. ಎಲ್ಲ ಪ್ರಯಾಣಗಳಿಗೂ ಮಹಾತ್ವಾಕಾಂಕ್ಷೆಯೇ ಇಂಧನವಾಗಿರುತ್ತದೆ. ಸೀಮೆಗಳನ್ನು ವಿಸ್ತರಿಸಿಕೊಳ್ಳಬೇಕು, ಹೊಸ ಜಾಗಗಳನ್ನು ಮುಟ್ಟಬೇಕು, ಅವನ್ನು ಗೆಲ್ಲಬೇಕು ಎಂಬ ಮಹಾತ್ವಾಕಾಂಕ್ಷೆ ಇಲ್ಲದೇ ಯಾವ ಯಾನಗಳೂ ಪ್ರಾರಂಭವಾಗುವುದಿಲ್ಲ. ಈ ನಿಟ್ಟಿನಲ್ಲಿ ಆಡ್ವಾಣಿಯವರ ಸಂಭ್ರಮದ ಯಾತ್ರೆಯನ್ನು ನೆನಪಿಸಿಕೊಳ್ಳಬೇಕು. 1990ರಲ್ಲಿ ಸೋಮನಾಥದಿಂದ ಅಯೋಧ್ಯೆಯವರೆಗೆ ಐತಿಹಾಸಿಕ ರಥಯಾತ್ರೆಯನ್ನು ಕೈಗೊಂಡರು. ಅದು ಅವರಿಗೆ ದೇಶದ ನವ ರಾಮನೆಂಬ ಪಟ್ಟವನ್ನು ಕೊಟ್ಟಿತು. ಹಿಂದು ವಿಜಯಕ್ಕೆ ಸ್ಕ್ರಿಪ್ಟ್ ಸಿಕ್ಕಿದ್ದೇ ಅಲ್ಲಿಂದ. ಜನಸಂಘದ ವಂಶವಾಹಿಯನ್ನಿಟ್ಟುಕೊಂಡು ಬಿಜೆಪಿ ತಾನೇತಾನಾಗಿ ರಾಷ್ಟ್ರಮಟ್ಟದಲ್ಲಿ ತೋರಿಸಿಕೊಂಡಿದ್ದು ಅದೇ ಮೊದಲು. ವಾಸ್ತವದಲ್ಲಿ ಆಡ್ವಾಣಿ ಆಗ ಹಿಂದು ಐಡೆಂಟಿಟಿ ಮೇಲೆ ಹೊಸ ರಾಮರಾಜ್ಯವೊಂದರ ಸ್ಥಾಪನೆಯ ಪ್ರತಿಪಾದಕರಾದರು. ಆ ಕನಸಿನ ರಾಮರಾಜ್ಯವನ್ನು ಪಡೆಯುವುದರಲ್ಲೂ ಅವರು ಸಫಲರಾದರು. ಆದರೆ ಕೊನೆಯಲ್ಲಿ ವಾಜಪೇಯಿ ರಾಮನಾಗಿ ಆಡ್ವಾಣಿಯವರು ಲಕ್ಷ್ಮಣನ ಸ್ಥಾನದಲ್ಲಿ ನಿಂತರು. ತನ್ನ ರಥಯಾತ್ರಿಗನ ಮಹಾತ್ವಾಕಾಂಕ್ಷೆಗೆ ಪಕ್ಷವೇ ಆಗ ಲಕ್ಷ್ಮಣರೇಖೆಯನ್ನು ಹಾಕಿತ್ತು. ಹಿಂದುತ್ವದ ಪ್ರಖರತೆಯೇನೋ ಒಳ್ಳೆಯದೇ. ಆದರೆ ಮೈತ್ರಿಕೂಟದ ಅಗತ್ಯಗಳಿಗೆ ಮೃದು ಧೋರಣೆಯ ನಾಯಕನೇ ಸ್ವೀಕಾರಾರ್ಹ ಎಂಬ ಸತ್ಯ ಅದಕ್ಕೆ ಗೊತ್ತಿತ್ತು.
2004ರಲ್ಲಿ ಯಾವಾಗ ಆಡ್ವಾಣಿಯವರ ಪಾಲಿಗೆ ಭಾರತ ಪ್ರಜ್ವಲಿಸಲಿಲ್ಲವೋ ಆಗಲೇ ಅವರ ಯಾತ್ರೆ ಮುಕ್ತಾಯವಾಗಿತ್ತು. ಪಕ್ಷದಲ್ಲಿ ಅಧಿಕಾರ ಕೇಂದ್ರ ಸುತ್ತುವರೆದ ಕೆಲ ಹಿತಾಸಕ್ತಿಗಳ ಮಾತಿಗೆ ಕಿವಿಗೊಟ್ಟು ಅವಸರದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯುವಂತೆ ನೋಡಿಕೊಳ್ಳಲಾಯಿತು. ಆಗ ಆಡ್ವಾಣಿ ಆತ್ಮಾವಲೋಕನಕ್ಕೆ ಇಳಿದರು. ಅಲ್ಲಿ ಅವರಿಗೆ ತಾವು ವಾಜಪೇಯಿ ಅವರ ಹೊಸ ಅವತರಣಿಕೆಯಾಗಿ ಹೊರಹೊಮ್ಮಬೇಕಾದ ತುರ್ತು ಕಾಣಿಸಿಕೊಂಡಿತು. ಅತ್ಯಂತ ಕೋಮಲ ಸ್ವಭಾವದ, ಹಿರಿಯಜ್ಜನ ಜಾಗದಲ್ಲಿ ನಿಂತಿರುವಂಥ ಪರಿಸ್ಥಿತಿಯಲ್ಲಿ ತಮ್ಮನ್ನು ಬಿಂಬಿಸಿಕೊಳ್ಳುವುದಕ್ಕೆ ಯತ್ನಿಸಿದರು. ಮೈತ್ರಿ ರಾಜಕಾರಣದ ಯುಗದಲ್ಲಿ ತಮ್ಮ ರಾಜಕೀಯ ವ್ಯಕ್ತಿತ್ವವನ್ನು ಮರು ವ್ಯಾಖ್ಯಾನಕ್ಕೆ ಒಡ್ಡಿಕೊಳ್ಳುವುದು ಅಗತ್ಯ ಎಂದುಕೊಂಡರು ಆಡ್ವಾಣಿ. ಈ ಮೂಲಕ ತಾವು ಪ್ರಾದೇಶಿಕ ಮುಖಂಡರುಗಳಿಗೆಲ್ಲ ಸಮ್ಮತಿಯಾಗುವ ವ್ಯಕ್ತಿಯಾಗುತ್ತೇನೆ ಎಂಬುದು ಅವರ ಲೆಕ್ಕಾಚಾರವಾಗಿತ್ತು. ತಮ್ಮದೇ ಕೆಲ ಹಿತಾಸಕ್ತಿಗಳನ್ನು ಪೊರೆದುಕೊಂಡಿರುವ ಪ್ರಾದೇಶಿಕ ಶಕ್ತಿಗಳ ಮನ ಗೆಲ್ಲಬೇಕೆಂದರೆ ವಿವಾದಗಳ ವ್ಯಕ್ತಿಯಾಗುವುದಕ್ಕಿಂತ ಒಮ್ಮತ ಮೂಡಿಸುವ ಹಿರಿ ಮನುಷ್ಯನಾಗಿ ತೋರಿಸಿಕೊಳ್ಳಬೇಕೆಂಬ ಆಲೋಚನೆಗೆ ಆಡ್ವಾಣಿ ಹೊರಳಿಕೊಂಡರು. ಆಡ್ವಾಣಿಯವರು ಜಿನ್ನಾ ಅವರನ್ನು ಪ್ರಶಂಸಿಸಿ ಮಾತನಾಡಿದ್ದು ಪಕ್ಷದಲ್ಲಿ ಭಾರಿ ಕೋಲಾಹಲವನ್ನೇ ಸೃಷ್ಟಿಸಿತು. ಆಡಳಿತದ ಆಯಕಟ್ಟಿನ ಜಾಗದಲ್ಲಿರುವ ಕುಟುಂಬವು ವಿದೇಶಿ ಬ್ಯಾಂಕ್ಗಳಲ್ಲಿ ಕಪ್ಪುಹಣವನ್ನಿಟ್ಟಿದೆ ಎಂದು ಬಿಜೆಪಿ ದೊಡ್ಡಧ್ವನಿಯಲ್ಲಿ ಪ್ರತಿಪಾದಿಸುತ್ತಿರುವಾಗಲೇ ಆಡ್ವಾಣಿಯವರು ಆ ಆರೋಪಗಳ ಬಗ್ಗೆ ಸೋನಿಯಾ ಗಾಂಧಿ ಅವರಲ್ಲಿ ಕ್ಷಮೆ ಕೇಳಿದರು! ಇವೆಲ್ಲ ಅವರು ತಮ್ಮ ವ್ಯಕ್ತಿತ್ವ ಬದಲಾಗಿದೆ ಎಂದು ಬಿಂಬಿಸಿಕೊಳ್ಳುವ ಯತ್ನಗಳಾಗಿದ್ದವು. ಆದರೆ ಈ ಹಂತದಲ್ಲಿ ಅವರಿಗೆ ಬದಲಾವಣೆಯೊಂದು ಗಮನಕ್ಕೆ ಬಾರದೇ ಹೋಯಿತು. ಅದೇನೆಂದರೆ ಯಾವ ವಾಜಪೇಯಿ ಅವರಂತೆ ತಮ್ಮನ್ನು ಬಿಂಬಿಸಿಕೊಳ್ಳುವುದಕ್ಕೆ ಹೋದರೋ ಆ ವಾಜಪೇಯಿ ಯುಗ ಮುಗಿದುಹೋಗಿತ್ತು. ಅರ್ಥಾತ್ ವಾಜಪೇಯಿ ಬಿಜೆಪಿಗೆ ಬೇಕಾಗಿರಲಿಲ್ಲ! ಅದು ಹುಡುಕುತ್ತಿದ್ದದ್ದು ಹೊಸ ಆಡ್ವಾಣಿಯನ್ನು! ಬೀದಿಯಲ್ಲಿ ನಿಂತು ಹೋರಾಡುವುದಕ್ಕೆ ಸಿದ್ಧವಿರುವ, ಅದೇ ಸಮಯಕ್ಕೆ ರಾಷ್ಟ್ರೀಯ ವಿಚಾರಗಳ ಬಗ್ಗೆ ನಿಖರವಾಗಿರುವ ವ್ಯಕ್ತಿಗಾಗಿ ಬಿಜೆಪಿ ಹಪಾಹಪಿಸಿತ್ತು.  ಇಂಥ ಸಂದರ್ಭದಲ್ಲಿ.... ಬಿಜೆಪಿಯ ಉನ್ನತ ನಾಯಕತ್ವದ ಕೊಠಡಿಯಲ್ಲಿ ಹಲವರು ಆಡ್ವಾಣಿ ಜಾಗಕ್ಕೆ ಬರಲು ಹೊಂಚಿದರು. ಆದರೆ ಪಕ್ಷದ ನಾನಾ ಶ್ರೇಣಿ, ಜಿಲ್ಲೆಗಳ ಮುಖ್ಯಸ್ಥರು, ಪ್ರಭಾವಿ ಮುಖ್ಯಮಂತ್ರಿಗಳೆಲ್ಲರೂ ಬೇರೆ ಯಾವ ಆಯ್ಕೆಗಳೂ ಕಾಣದೇ ರಥದ ಚುಕ್ಕಾಣಿ ಹಿಡಿಯುವುದಕ್ಕೆ ನರೇಂದ್ರ ಮೋದಿಯವರೇ ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿದ್ದರು. 1990ರಲ್ಲಿ ಪಕ್ಷಕ್ಕೆ ದೊರಕಿದ್ದ ವೈಭವವನ್ನು ಮರಳಿ ದೊರಕಿಸಬೇಕಾದರೆ ನರೇಂದ್ರ ಮೋದಿಯವರೇ ಆಡ್ವಾಣಿಯವರ ಹೊಸ ಅವತರಣಿಕೆ ಆಗುತ್ತಾರೆ ಎಂಬುದನ್ನು ಅವರೆಲ್ಲ ಒಪ್ಪಿದ್ದರು.
ಎಲ್ಲದರ ಪರಿಣಾಮ ಈಗ ನರೇಂದ್ರ ಮೋದಿಯವರು ತಮ್ಮ ಮಹಾತ್ವಾಕಾಂಕ್ಷೆಯನ್ನು ಪ್ರಬಲವಾಗಿ ಪ್ರತಿಪಾದಿಸಿದ್ದಾರೆ. ಇದೇ ಬಿಜೆಪಿ ಹಿರಿತಲೆಗೆ ಒದಗಿದ ದುರಂತವಾಗಿದೆ. ಮೋದಿಯವರು ಮೈತ್ರಿಕೂಟ ನಿಭಾಯಿಸಬಲ್ಲರೇ, 272 ಸ್ಥಾನ ದೊರಕಿಸಬಲ್ಲರೇ ಎಂಬ ಪ್ರಶ್ನೆಗಳಿಗೆ ನಕಾರಾತ್ಮಕ ಉತ್ತರವೂ ಹೊರಹೊಮ್ಮಬಹುದು. ಆದರೆ ಈ ಕ್ಷಣದಲ್ಲಿ ಮೋದಿಯವರ ಆಕಾಂಕ್ಷೆ ಸಮರ್ಥನೀಯವಲ್ಲ ಎಂದು ಹೇಳುವುದಕ್ಕೆ ಯಾವ ಕಾರಣಗಳೂ ಇಲ್ಲ.
ಆಕಾಂಕ್ಷೆಗಳೇ ಇಲ್ಲದೇ ಯಾವ ನಾಯಕನೂ ರೂಪುಗೊಳ್ಳಲಾರ. ಈ ಆಕಾಂಕ್ಷೆಗೆ ಬುದ್ಧಿಮತ್ತೆಯೂ ಜತೆಗೂಡಿದಾಗ ಇತಿಹಾಸದಲ್ಲಿ ಮುತ್ಸದ್ಧಿಯ ಸ್ಥಾನ ಗಟ್ಟಿಯಾಗುತ್ತದೆ. ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ಆಡ್ವಾಣಿಯವರು ಯಾವತ್ತೋ ಮುತ್ಸದ್ಧಿ ಎನ್ನಿಸಿಕೊಂಡಿದ್ದಾಗಿದೆ. ಮತ್ತೆ ಅವರು ಯಕಶ್ಚಿತ್ ಗಲಾಟೆಕೋರನ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಬೇಡ. ಮುನ್ನಡೆಯ ಧ್ವಜ ಹಸ್ತಾಂತರವಾಗಿದ್ದಾಗಿದೆ. ವಾಸ್ತವವನ್ನು ಅರ್ಥ ಮಾಡಿಕೊಳ್ಳದಿದ್ದರೆ ಈ ಹಿಂದಿನ ಅದ್ಭುತ ಯಾತ್ರೆಗಳೆಲ್ಲ ವ್ಯರ್ಥ ಎನ್ನಿಸಿಕೊಳ್ಳುತ್ತವೆ.

ಟ್ವಿಟ್ಟರ್ ಕಾಡಿನ ಚಿಲಿಪಿಲಿ
ಎಂಥಾ ಬೂಟಾಟಿಕೆ. ಒಂದೊಮ್ಮೆ ಆಡ್ವಾಣಿ ಜತೆ ಸಭೆಯಲ್ಲೇ ಗಲಾಟೆ ಮಾಡಿ ಎದ್ದುಹೋಗಿದ್ದ ಉಮಾ ಭಾರತಿ ಈಗ ಆಡ್ವಾಣಿಯವರಿಲ್ಲದೆ ಬಿಜೆಪಿಯೇ ಇಲ್ಲ ಅಂತಿದಾರೆ!
- ಸುಹೇಲ್ ಸೇಠ್

ಆಡ್ವಾಣಿಯವರು ಬಿಜೆಪಿಯಿಂದ ಗೌರವಯುತವಾಗಿ ಹೊರಹೋಗಬೇಕಿತ್ತು ಎಂದು ಹಲವರು ಹೇಳುತ್ತಿದ್ದಾರೆ. ಆದರೆ ಕಿಮ್ಮತ್ತೇ ಇಲ್ಲದ ಹುದ್ದೆಯಿಂದ ಹೀಗೆ ನಿರ್ಗಮಿಸುವ ಹಕ್ಕು ಅವರಿಗಿದೆ ಎಂದು ನಾನು ಭಾವಿಸುತ್ತೇನೆ.
- ಉಮಾ ಸುಧೀರ್

ಮೋದಿ ಹೆದರಿಕೆ ಕೆಲವರಿಗೆ ಎಷ್ಟಿದೆ ನೋಡಿ. ಯಾವತ್ತೂ ಪ್ರಧಾನಿ ಹುದ್ದೆಗೆ ಕಾಯುತ್ತಲೇ ಇರುವವರು ಎಂದು ಆಡ್ವಾಣಿಯವರನ್ನು ಕೀಳಾಗಿ ಟೀಕಿಸಿದವರೆಲ್ಲ ಈಗ ಏಕಾಏಕಿ ಬೆಂಬಲಿಸುತ್ತಿದ್ದಾರೆ.
- ವಿಜಯ್

ಬಾಬ್ರಿ ಮಸೀದಿ ಧ್ವಂಸಕ್ಕೆ ಕಾರಣರು ಎಂದು ತಾವು ದೂಷಿಸಿದ್ದ ಆಡ್ವಾಣಿ ಬಹಳ ಸಂಭಾವಿತರು ಎಂದು ಕಾಂಗ್ರೆಸ್, ಜೆಡಿಯು, ಎಸ್ಪಿಗಳಿಗೆಲ್ಲ ಏಕಾಏಕಿ ಜ್ಞಾನೋದಯವಾಗಿದೆ!
- ಮಿನ್ಹಾಜ್ ಮರ್ಚೆಂಟ್

ಆಡ್ವಾಣಿ ಅಧ್ಯಾಯ ಬಿಜೆಪಿ ಎಷ್ಟೊಂದು ಪ್ರಜಾಸತ್ತಾತ್ಮಕ ಎಂಬುದನ್ನು ತೋರಿಸಿದೆ. ಹಿರಿಯ ನಾಯಕನ ಒತ್ತಡಕ್ಕೆ ಬಾಗದೇ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗಿದೆ.
- ಕಿರಾತ್ ಅಂತಾನಿ

ಏಕ್ತಾ ಕಪೂರ್ಳ ಧಾರಾವಾಹಿಯಲ್ಲಿ ಬುದ್ಧಿವಂತ ಸೊಸೆಗೆ ಮನೆಯ ಚಾವಿ ಹಸ್ತಾಂತರಿಸದೆ ಮುನಿಸಿಕೊಳ್ಳುವ ಸಿಟ್ಟಿನ ಅತ್ತೆಯ ಪಾತ್ರದಂತೆ ಕಾಣುತ್ತಿದ್ದಾರೆ ಆಡ್ವಾಣಿ.
- ವಿನಿತಾ ಚತುರ್ವೇದಿ

ಬ್ರೇಕಿಂಗ್ ನ್ಯೂಸ್: ಡಾ. ರಾಜನಾಥ್ ಸಿಂಗ್, ಡಾ. ಸುಷ್ಮಾ ಸ್ವರಾಜ್, ಡಾ. ಜೇಟ್ಲಿ ಹಾಗೂ ಡಾ. ಅನಂತ್ ಕುಮಾರ್ ಒಳಗೊಂಡ ವೈದ್ಯತಂಡವು 'ನಮೋನಿಯಾ' ಕಾಯಿಲೆಗೆ ತುತ್ತಾಗಿರುವ ಆಡ್ವಾಣಿಯವರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಅವರ ನಿವಾಸಕ್ಕೆ ಭೇಟಿ ಕೊಟ್ಟಿದೆ.
- ಜುಂಜನ್ವಾಲಾ

ಮೋದಿ ಆಗಮನದೊಂದಿಗೆ ಭಾರತೀಯ ಜನಪಥ್ ಪಾರ್ಟಿ ಅಂತೂ ಭಾರತೀಯ ಜನತಾ ಪಾರ್ಟಿಯಾಗಿ ಬದಲಾಗುತ್ತಿದೆ.
- ರಮೇಶ ಸ್ವಾಮಿ

ಹಿರಿ ಮನುಷ್ಯನ ಆಸೆ ಎಂಬುದು ಲಕ್ಷಾಂತರ ಭಾರತೀಯರ ಒತ್ತಾಸೆಗಳಿಗಿಂತ ಹೆಚ್ಚಿನದೇನಲ್ಲ.
- ಅನಿಲ್ ಕೋಹ್ಲಿ

- ರವಿಶಂಕರ್
ಕಾರ್ಯನಿರ್ವಾಹಕ ಸಂಪಾದಕರು
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Operation Epic Fury: ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕಾಗೆ ಮಹಾಘಾತಕ: F-35 ಸೇರಿ 42 ಯುದ್ಧ ವಿಮಾನ, ಡ್ರೋನ್‌ಗಳಿಗೆ ಹಾನಿ..!

ಇಟಲಿಯಲ್ಲಿ ಪ್ರಧಾನಿ ಮೋದಿ: “ವೆಲ್‌ಕಮ್ ಟು ರೋಮ್ ಮೈ ಫ್ರೆಂಡ್” ಎಂದು ಆತ್ಮೀಯ ಸ್ವಾಗತ ಕೋರಿದ ಜಾರ್ಜಿಯಾ ಮೆಲೋನಿ..!

ಪ್ರಧಾನಿ ಮೋದಿಯನ್ನು 'ಹಾವಾಡಿಗ'ನಂತೆ ಬಿಂಬಿಸಿ ವಿಕೃತಿ: ಭಾರತವನ್ನು ಹೀಯಾಳಿಸಿದ ನಾರ್ವೆ ಪತ್ರಿಕೆ; ನೆಟ್ಟಿಗರು ತೀವ್ರ ಕಿಡಿ

ಅಮೆರಿಕಾ ಜೊತೆ ಒಪ್ಪಂದಕ್ಕೆ ಇರಾನ್‌ ಕಾತರ, ಶೀಘ್ರದಲ್ಲೇ ಯುದ್ಧ ಅಂತ್ಯ: ತೈಲ ಬೆಲೆ ಭಾರೀ ಕುಸಿತ; ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

Bangladesh ಸರ್ಕಾರಿ ಕಚೇರಿಯಲ್ಲಿ ಭಾರತೀಯ ಅಧಿಕಾರಿ ನಿಗೂಢ ಸಾವು, ತನಿಖೆ ಆರಂಭ

SCROLL FOR NEXT