ನಾನು ಲಂಡನ್‌ನಲ್ಲಿ ಪತ್ರಿಕೋದ್ಯಮವನ್ನು ಓದುವ ಸಂದರ್ಭದಲ್ಲಿ ನಮಗೊಬ್ಬ ಮೇಷ್ಟ್ರು ಇದ್ದರು. ಅವರು ಪಾಠ ಮಾಡುವಾಗ 'ಪತ್ರಿಕೋದ್ಯಮ ಬೇರೆಯಲ್ಲ, ಬದುಕು ಬೇರೆ ಅಲ್ಲ. ಅದರಲ್ಲೂ ಪತ್ರಕರ್ತನಾದವನು ಇವೆರಡನ್ನೂ ಪ್ರತ್ಯೇಕಿಸಿ ನೋಡಬಾರದು. ಪ್ರತಿ ಸುದ್ದಿಯೂ ಬದುಕಿಗೆ ಬೇಕಾದ ಪಾಠವನ್ನು ಕಲಿಸುತ್ತದೆ. ಈ ನಿಟ್ಟಿನಲ್ಲಿ ಸುದ್ದಿಯನ್ನು ಗ್ರಹಿಸಿದರೆ ನಾವು ಸುದ್ದಿಯನ್ನು ಗಂಭೀರವಾಗಿ ಬರೆಯುತ್ತೇವೆ' ಎಂದು ಹೇಳುತ್ತಿದ್ದರು. ದಿನ ಪತ್ರಿಕೆಯ ಪ್ರತಿ ಸುದ್ದಿಯನ್ನು ಅವರು dissectಮಾಡಿ, ಅದರಿಂದ ನಾವು ಯಾವ ಪಾಠ ಕಲಿಯಬಹುದು, ಅದರಲ್ಲಿ ಯಾವ ನೀತಿ ಅಡಗಿದೆ ಎಂಬುದನ್ನು ಬಣ್ಣಿಸುತ್ತಿದ್ದರು. ಉದಾಹರಣೆಗೆ ಸಚಿನ್ ತೆಂಡುಲ್ಕರ್ 99ಕ್ಕೆ ಔಟಾದ ಸುದ್ದಿ ಓದಿದಿರಿ ಅಂತ ಭಾವಿಸಿ, ಅದನ್ನು ನಮ್ಮ ಬದುಕಿಗೆ ಅನ್ವಯಿಸಿದರೆ ಹತ್ತಾರು ಪಾಠಗಳು, ನೀತಿಗಳನ್ನು relate ಮಾಡಿಕೊಳ್ಳಬಹುದು. ಅಂದರೆ ಯಾವ ಸುದ್ದಿಯೂ ಬರೀ ಸುದ್ದಿಯಷ್ಟೇ ಅಲ್ಲ, ಅದರಿಂದ ನಾವು ಕಲಿಯುವಂಥದ್ದು ಸಾಕಷ್ಟು ಇರುತ್ತದೆ. ಇದು ಕೇವಲ ಕ್ರಿಕೆಟ್‌ಗೆ ಅಷ್ಟೇ ಸೀಮಿತವಲ್ಲ. ಪ್ರತಿ ಸುದ್ದಿಗೂ ಲಾಗೂ ಆಗುತ್ತದೆ. ಇದನ್ನೇ ಆಧರಿಸಿ ನಾನು 'ಪತ್ರಿಕೆ ಕಲಿಸಿದ ನೀತಿಪಾಠ' ಎಂಬ ಪುಸ್ತಕವನ್ನು ಬರೆಯುತ್ತಿದ್ದೇನೆ.
ಇಲ್ಲಿ ಈ ಪುಸ್ತಕದ ಬಗ್ಗೆ ಚರ್ಚಿಸುವುದು ನನ್ನ ಉದ್ದೇಶ ಅಲ್ಲ. ಈ ಪುಸ್ತಕದ ಬಗ್ಗೆ ಕಾರ್ಯನಿರತನಾಗಿದ್ದಾಗ, ಪೂರಕ ಅಂಶಗಳ ಬಗ್ಗೆ ತಡಕಾಡುತ್ತಿದ್ದಾಗ ನನಗೊಂದು ಆಸಕ್ತಿದಾಯಕ ಕೃತಿಯೊಂದು ಸಿಕ್ಕಿತು. ನಾನು ಪತ್ರಿಕೆಯನ್ನು ಜೀವನಕ್ಕೆ ಹೋಲಿಸಿ ಬರೆಯುತ್ತಿದ್ದರೆ, ಬೆಂಗಳೂರಿನಲ್ಲಿಯೇ ನೆಲೆಸಿರುವ ಐಟಿ ಉದ್ಯೋಗಿ ದೇವ್‌ಪ್ರಸಾದ್ ಎಂಬುವವರು ಕ್ರಿಕೆಟ್‌ನ್ನು ಕಾರ್ಪೋರೇಟ್ ಜಗತ್ತು, ಜೀವನಕ್ಕೆ ಹೋಲಿಸಿ 'Pitch It!'ಎಂಬ ಸೊಗಸಾದ ಪುಸ್ತಕ ಬರೆದಿದ್ದಾರೆ. ಈ ಶೀರ್ಷಿಕೆಯ ಟ್ಯಾಗ್‌ಲೈನ್ Inspirational stories from the Cricket dressing room to the Corporate boardroom. ನಾವು ದಿನವಿಡೀ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತೇವೆ. ಭಾರತದಲ್ಲಂತೂ ಕ್ರಿಕೆಟ್ ಎಂಬುದು ಬರೀ ಆಟ ಅಲ್ಲ. ಅದೊಂದು ಧರ್ಮ. ಅಷ್ಟರಮಟ್ಟಿಗೆ ನಾವು ಈ ಆಟದ ಗೀಳನ್ನು ತಲೆಗೆ ಹಚ್ಚಿಕೊಂಡಿದ್ದೇವೆ. ಆದರೆ ಬಹುತೇಕ ಮಂದಿಗೆ ಈ ಆಟ ಒಂದು ಆಟವೇ. ಕ್ರಿಕೆಟ್‌ನ್ನು ಬದುಕಿನಷ್ಟೇ ಪ್ರೀತಿಸುವವರು ಸಹ ಆ ಆಟದ ಒಳಸುಳಿ, ಅಂತರಾತ್ಮಗಳನ್ನು ಮಾತ್ರ ಬದುಕಿಗೆ ್ಠಜಟಛಡಿಜ ಮಾಡಿಕೊಳ್ಳುವುದಿಲ್ಲ. ಅಂಥವರ ಪಾಲಿಗೆ ಕ್ರಿಕೆಟ್ ಬರೀ ಧರ್ಮವೇ ಹೊರತು, ಜೀವನಧರ್ಮವಾಗುವುದೇ ಇಲ್ಲ. ಕನಿಷ್ಠ ಅವರು ಕ್ರಿಕೆಟ್‌ನ್ನು ಆ ದೃಷ್ಟಿಕೋನದಲ್ಲಿ ನೋಡಿರುವುದಿಲ್ಲ.
ಆದರೆ ದೇವ್ ಪ್ರಸಾದ ಕ್ರಿಕೆಟ್‌ನ್ನು ಬದುಕಿಗೆ, ಉದ್ಯೋಗಕ್ಕೆ ಹತ್ತಿರವಾಗಿಸಿದ್ದಾರೆ. ಕ್ರಿಕೆಟ್‌ನ ಪ್ರತಿ ವಿವರಗಳು ಬದುಕಿನ ಸಲಕರಣೆಗಳಂತೆ ನೋಡಿದ್ದಾರೆ. ಕ್ರಿಕೆಟ್ ನೋಡುವುದರಿಂದ, ಅದರ ಕುರಿತು ಯೋಚಿಸುವುದರಿಂದ ಬದುಕನ್ನು ಹೇಗೆ ಹಸನುಗೊಳಿಸಿಕೊಳ್ಳಬಹುದು ಎಂಬುದನ್ನು ಹೇಳುತ್ತಾರೆ.
ಕ್ರಿಕೆಟ್‌ನ್ನು ಸಭ್ಯವಂತರ, ಮಾನವಂತರ ಆಟ ಅಂತಾರೆ. ಈ Cricket exemplifies the best of human behavior ಎಂದೂ ಹೇಳುತ್ತಾರೆ. ಕ್ರಿಕೆಟ್‌ನ ಅಂತರಂಗಕ್ಕೂ ಕಾರ್ಪೋರೇಟ್ ಜಗತ್ತಿನ ಅಂತರಂಗಕ್ಕೂ ಹೆಚ್ಚು ವ್ಯತ್ಯಾಸ ಇಲ್ಲ. ಕ್ರಿಕೆಟ್‌ನ ಒಳವರ್ಮ ಅರಿತವರಿಗೆ ಬದುಕಿನ ಸೂಕ್ಷ್ಮಗಳನ್ನು ಅರಿಯಲು ಕಷ್ಟವಾಗುವುದಿಲ್ಲ. ಕ್ರಿಕೆಟ್ ಮೈದಾನದಲ್ಲಿ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಮಹೇಂದ್ರಸಿಂಗ್ ಧೋನಿ ಎತ್ತಿದ ಕೈ. ಕಾರ್ಪೋರೇಟ್ ಜಗತ್ತಿನಲ್ಲಿ ಆ ಕೈ ಅಜೀಂ ಪ್ರೇಮ್‌ಜೀ ಅವರದ್ದು. ಆಸ್ಟ್ರೇಲಿಯಾದ ಕ್ಯಾಪ್ಟನ್ ಆಗಿದ್ದ ಸ್ಟೀವ್ ವಾ ಅವರಿಗೂ ನಿರ್ಮಾ ಕಂಪನಿಯ ಕರ್ಸನ್‌ಭಾಯಿ ಪಟೇಲ್‌ಗೂ ಸಾಕಷ್ಟು ಹೋಲಿಕೆಗಳಿವೆ. ವೆಸ್ಟ್ ಇಂಡೀಸ್‌ನ ಕ್ಲೈವ್ ಲಾಯ್ಡ್, ಭಾರತದ ಸೌರವ್ ಗಂಗೂಲಿ ತಂತ್ರಗಳೆಲ್ಲ ಇನ್‌ಫೋಸಿಸ್‌ನ ನಾರಾಯಣಮೂರ್ತಿ ತಂತ್ರಗಳೊಂದಿಗೆ ತಾಳೆಯಾಗುತ್ತವೆ.
ಕ್ರಿಕೆಟ್ ಆಟ, ಆಟಗಾರರ ಪಟ್ಟು, ಸ್ವಭಾವ, ನಡೆವಳಿಕೆ, ತಂತ್ರಗಾರಿಕೆಯನ್ನು ನೋಡುತ್ತಾ ಹೋದಂತೆಲ್ಲ ಈ ಆಟ ಬದುಕಿಗೆ, ಉದ್ಯೋಗಕ್ಕೆ ಎಷ್ಟು ಹತ್ತಿರವಾಗಿದೆ ಎಂದು ಅನಿಸಲಾರಂಭಿಸುತ್ತದೆ. ಈ ಸಂಗತಿ ಮನದಟ್ಟಾದರೆ ನಾವು ಕ್ರಿಕೆಟ್‌ನ್ನು, ಬದುಕನ್ನು ಭಿನ್ನವಾಗಿ ನೋಡಲಾರಂಭಿಸುತ್ತೇವೆ. ಇವೆರಡರ ಬಗೆಗಿನ ನಮ್ಮ ಧೋರಣೆಗಳೂ ಬದಲಾಗುತ್ತವೆ. ಕ್ರಿಕೆಟ್‌ನ ಮೈದಾನದಲ್ಲಿ ಬದುಕಿನ ಅಂಗಳವನ್ನು ಕಾಣಲಾರಂಭಿಸುತ್ತೇವೆ. ಇಷ್ಟು ದಿನ ನಾವು ನೋಡಿದ ಕ್ರಿಕೆಟ್‌ನಲ್ಲಿ ಕಾಣದ ಸಂಗತಿಗಳು, ಕೈ ಚೆಲ್ಲಿದ ಕ್ಯಾಚುಗಳಂತೆ ವಿಷಣ್ಣಭಾವ ಮೂಡಿಸಬಹುದು.
ಜಿ.ಆರ್. ವಿಶ್ವನಾಥ್, ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್ ಕ್ರಿಕೆಟಿಗರಿಗೆ ಮಾತ್ರ ಅಲ್ಲ, ನಮ್ಮ ತರುಣ ಪೀಳಿಗೆಗೆ ಆದರ್ಶವಾಗಬಲ್ಲ ವ್ಯಕ್ತಿಗಳು. ಕ್ರಿಕೆಟ್ ಹಾಗೂ ಕಾರ್ಪೋರೇಟ್ ಜಗತ್ತಿಗೆ ಸಾಮ್ಯತೆ ಹುಡುಕುವಾಗ ಇಂಥದೇ ಆದರ್ಶಪ್ರಾಯವಾಗಬಲ್ಲ ಕಾರ್ಪೋರೇಟ್ ಕಂಪನಿಯಿದ್ದರೆ ಅದು ಟಾಟಾ ಸಂಸ್ಥೆ.
ಕ್ರಿಕೆಟ್‌ನಲ್ಲಿ ಬದುಕಿನ ಸೂತ್ರಗಳಿವೆಯಾ ಅಂತ ಹುಡುಕಿದರೆ ಅವು ಸೋಜಿಗವೆಂಬಂತೆ ನಮ್ಮನ್ನು ಆವರಿಸಿಕೊಳ್ಳುತ್ತದೆ. ಅನಿಲ್ ಕುಂಬ್ಳೆ ಕ್ರಿಕೆಟ್ ಜೀವನವನ್ನು ಅವಲೋಕಿಸಿದರೆ, ಅವರಲ್ಲಿ ಆ್ಯಪಲ್ ಕಂಪನಿಯ ಸ್ಟೀವ್ ಜಾಬ್ಸ್ ಕಾಣುತ್ತಾನೆ. ವೀರೇಂದ್ರ ಸೆಹವಾಗ್ ಕ್ರಿಕೆಟ್ ಬದುಕು ಟೋಯೋಟಾ, ಡೆಲ್, ಮೆಕ್‌ಡೊನಾಲ್ಡ್ ಸಂಸ್ಥೆಗಳ ಪಡಿಯಚ್ಚಿನಂತಿದೆ.
ಹಾಗಂತ ದೇವಪ್ರಸಾದ್ ಹಲವಾರು ನಿದರ್ಶನಗಳ ಮೂಲಕ ಹೇಳುತ್ತಾರೆ. ಈ ಸಂಗತಿ ಇನ್ನೂ ಚೆನ್ನಾಗಿ ಅರ್ಥವಾಗಬೇಕೆಂದರೆ ಈ ಅಧ್ಯಾಯವನ್ನು ಓದಿ.
---------
ಅವನ ಪೂರ್ತಿ ಹೆಸರು ಜಾನ್ ಮೈಕೆಲ್ ಬ್ರಿಯರ್ಲಿ.
ಆದರೆ, ಅವನು ಮೈಕ್ ಬ್ರಿಯರ್ಲಿ ಎಂಬ ಹೆಸರಿನಿಂದಲೇ ವರ್ಲ್ಡ್ ಫೇಮಸ್ ಆದ. ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಕ್ಯಾಪ್ಟನ್‌ಗಳಲ್ಲಿ ಒಬ್ಬ ಅನ್ನಿಸಿಕೊಂಡ ಅವನನ್ನುThinking Captain. ಅತಿ ಬುದ್ಧಿವಂತ ನಾಯಕ, ಎಂದೆಲ್ಲಾ ಕರೆಯಲಾಗುತ್ತಿತ್ತು. ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕನಾಗಿದ್ದ ಬ್ರಿಯರ್ಲಿಯ ಟೀಂನಲ್ಲಿ ಮೂರೋ ನಾಲ್ಕೋ ಮಂದಿ ಸ್ಟಾರ್ ಆಟಗಾರರಿದ್ದರು. ಉಳಿದವರೆಲ್ಲಾ ಲೆಕ್ಕಕ್ಕುಂಟು, ಆಟಕ್ಕಿಲ್ಲ ಅನ್ನುವಂಥವರೇ. ಅಂಥ ಆಟಗಾರರನ್ನು ಕಟ್ಟಿಕೊಂಡೂ ತನಗಿಂತ ಪ್ರಬಲ ಆಟಗಾರರನ್ನು ಹೊಂದಿದ್ದ ತಂಡಗಳನ್ನು ಬಗ್ಗು ಬಡಿಯುತ್ತಿದ್ದ. ಹೇಗೆಂದರೆ, ಎದುರಾಳಿ ಆಟಗಾರರ ವೀಕ್‌ನೆಸ್ ಏನೆಂದು ಪಂದ್ಯ ಆರಂಭವಾಗುವ ಮೊದಲೇ ಗುರುತಿಸಿ, ತನ್ನ ತಂಡದ ಎಲ್ಲ ಆಟಗಾರರಿಗೂ ಆ ಗುಟ್ಟನ್ನು ಹೇಳುತ್ತಿದ್ದ. ಯಾವ ಬಗೆಯ ಟೆಕ್ನಿಕ್‌ನಿಂದ ಯಾವ ಆಟಗಾರನಿಗೆ ಪೆಟ್ಟು ನೀಡಬಹುದು ಎಂಬುದು ಬ್ರಿಯರ್ಲಿ ತಂಡದ ಎಲ್ಲರಿಗೂ ಗೊತ್ತಿರುತ್ತಿತ್ತು. ಹಾಗಾಗಿ ತುಂಬ ಸುಲಭವಾಗಿ ಎದುರಾಳಿ ತಂಡದ ಆಟಗಾರರ ವಿಕೆಟ್‌ಗಳು ಲಭಿಸುತ್ತಿದ್ದವು.
ಕ್ರಿಕೆಟ್ ಆಡಲಿಕ್ಕೆಂದೇ ಹುಟ್ಟಿದ ಮನುಷ್ಯ ಎಂಬ ಮಾತು ಬ್ರಿಯರ್ಲಿಗೆ ಹೇಳಿ ಮಾಡಿಸಿದಂತಿತ್ತು. ಕ್ರಿಕೆಟ್ ಹುಚ್ಚು ಅವನಿಗೆ ತಂದೆಯ ಕಡೆಯಿಂದ ಸಿಕ್ಕ ಬಳುವಳಿ. ಬ್ರಿಯರ್ಲಿಯ ತಂದೆ ಕ್ಲಬ್ ತಂಡವೊಂದರ ಪರವಾಗಿ ಆಡುತ್ತಿದ್ದ. ಹಾಗಾಗಿ ಚರ್ಮದ ಚೆಂಡಿನ ಜೊತೆಗೆ ಬ್ರಿಯರ್ಲಿಗೆ ಬಾಲ್ಯದಿಂದಲೇ ಫ್ರೆಂಡ್‌ಶಿಪ್ ಬೆಳೆಯಿತು. ಬೆಸ್ಟ್ ಕ್ರಿಕೆಟರ್ ಅನ್ನಿಸಿಕೊಳ್ಳಬೇಕಾದರೆ, ಮೊದಲು ಎಲ್ಲ ಆಟಗಾರರ ಸಲಹೆಯನ್ನೂ ಕೇಳಬೇಕು. ಎಲ್ಲರ ಮಾತುಗಳನ್ನೂ ತಾಳ್ಮೆಯಿಂದ ಆಲಿಸಬೇಕು ಎಂಬುದು ಬ್ರಿಯರ್ಲಿಗೆ ತಂದೆ ಹೇಳಿದ ಕಿವಿ ಮಾತು. ತಂದೆಯ ಮಾತನ್ನು ಬ್ರಿಯರ್ಲಿ ಚಾಚೂ ತಪ್ಪದೆ ಪಾಲಿಸಿದ. ಕ್ರಿಕೆಟ್ ಬಗ್ಗೆ ತಂದೆ ಏನಾದರೂ ಹೇಳಲು ಆರಂಭಿಸಿದರೆ, ಮಾತು ಮುಗಿಯುವುದು ಒಂದು ಗಂಟೆಯ ಅವಧಿಯಾದರೂ ಸೈ, ಬ್ರಿಯರ್ಲಿ ಮೌನವಾಗಿ ಆಲಿಸುತ್ತಿದ್ದ. ನಂತರ, ಅಪ್ಪನ ಹೇಳಿಕೆಯಲ್ಲಿ ತನಗೆ ಇಷ್ಟವಾದದ್ದು, ಇಷ್ಟವಾಗದ್ದು...ಎರಡನ್ನೂ ತಿಳಿಸುತ್ತಿದ್ದ.
ಇಂಗ್ಲೆಂಡ್ ತಂಡದ ನಾಯಕ ಅನ್ನಿಸಿಕೊಂಡ ನಂತರ ತನ್ನ ತಂಡದ ಉಳಿದ ಆಟಗಾರರೊಂದಿಗೆ ಮುಕ್ತವಾಗಿ ಚರ್ಚಿಸುವುದು ಬ್ರಿಯರ್ಲಿಗೆ ತುಂಬ ಇಷ್ಟದ ಕೆಲಸವಾಗಿತ್ತು. ಆಟದ ಅಂಗಳದಲ್ಲಿ ಮಾತ್ರ ನಾನು ನಾಯಕ. ಅಂಗಳದಿಂದಾಚೆಗೆ ನಾನು ನಿಮ್ಮ ಆಪ್ತಮಿತ್ರ ಎಂದು ಆತ ನಿಸ್ಸಂಕೋಚದಿಂದ ಹೇಳುತ್ತಿದ್ದ. ಉಳಿದ ಆಟಗಾರರೊಂದಿಗೆ ಆತ ಕ್ರಿಕೆಟ್‌ನ ವಿಷಯವನ್ನಷ್ಟೇ ಚರ್ಚಿಸುತ್ತಿರಲಿಲ್ಲ. ನೀವು ಉಳಿದಿರುವ ಹೋಟೆಲಿನಲ್ಲಿ ಎಲ್ಲಾ ವ್ಯವಸ್ಥೆ ಸರಿಯಾಗಿದೆಯಾ? ಊಟ-ತಿಂಡಿ ಇಷ್ಟವಾಗುತ್ತಿದೆಯೆ ಎಂದೂ ವಿಚಾರಿಸುತ್ತಿದ್ದ. ಎಷ್ಟೋ ಬಾರಿ, ನಾಯಕನಿಗೆ ಮೀಸಲಾಗಿದ್ದ ವಿಶೇಷ ಕೊಠಡಿಯನ್ನು ಖಾಲಿ ಬಿಟ್ಟು, ಉಳಿದ ಆಟಗಾರರ ಜೊತೆಗೆ ಬಂದು ಟೀ ಕುಡಿಯುತ್ತಾ ಕೂರುತ್ತಿದ್ದ. ಆ ಸಂದರ್ಭದಲ್ಲಿ ಸಹ ಆಟಗಾರರನ್ನು ಮಾತನಾಡಲು, ಸಲಹೆ ನೀಡಲು ಹುರಿದುಂಬಿಸುತ್ತಿದ್ದ. ಈ ಮಾತುಕತೆಯ ಸಂದರ್ಭದಲ್ಲಿ ಜೊತೆಗಾರರ ಸ್ಟ್ರೆಂತ್ ಮತ್ತು ವೀಕ್‌ನೆಸ್ ಏನು ಎಂದು ಅರ್ಥ ಮಾಡಿಕೊಳ್ಳುವಂಥ ಬುದ್ಧಿವಂತಿಕೆ ಬ್ರಿಯರ್ಲಿಗಿತ್ತು.
ಜೊತೆಗಾರರೊಂದಿಗೆ ಮಾತಾಡುವ ಸಂದರ್ಭದಲ್ಲಿ, ಅವರು ಹೇಳುವ ಪ್ರತಿ ಮಾತನ್ನೂ ಇನ್ನಿಲ್ಲದೇ ಆಸ್ಥೆಯಿಂದ ಕೇಳುತ್ತಿದ್ದ ಬ್ರಿಯರ್ಲಿಗೆ, ಅದನ್ನು ಎಂದೆಂದೂ ಮರೆಯಲಾಗದಂಥ ಅಪೂರ್ವ ನೆನಪಿನ ಶಕ್ತಿ ಸಿದ್ಧಿಸಿತ್ತು. ಬ್ರಿಯರ್ಲಿ ನೀಡಿದ್ದ ಅತಿಯಾದ ಸ್ವಾತಂತ್ರ್ಯದಿಂದ ಖುಷಿಯಾಗುತ್ತಿದ್ದ ಆಟಗಾರರು ಎಂತೆಂಥ ಸಂದರ್ಭದಲ್ಲಿ ತಾವು ವಿಶೇಷ ಸಾಮರ್ಥ್ಯ ತೋರಬಲ್ಲೆವು ಎಂಬ ಗುಟ್ಟನ್ನೂ ಹೇಳಿಕೊಳ್ಳುತ್ತಿದ್ದರು. ಅಂಥಾ ಸಂಗತಿಗಳನ್ನು ತುಂಬ ಚೆನ್ನಾಗಿ ನೆನಪಿಡುತ್ತಿದ್ದ ಬ್ರಿಯರ್ಲಿ, ಅಗತ್ಯ ಸಂದರ್ಭದಲ್ಲಿ ಆಯಾ ಆಟಗಾರರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುತ್ತಿದ್ದ. ಪರಿಣಾಮವಾಗಿ, ಎಷ್ಟೋ ಬಾರಿ ಸೋತು ಬಿಡುವಂಥ ಪಂದ್ಯಗಳನ್ನು ಇಂಗ್ಲೆಂಡ್ ತಂಡ ಅನಿರೀಕ್ಷಿತವಾಗಿ ಗೆದ್ದು ಬಿಡುತ್ತಿತ್ತು.
1981ರಲ್ಲಿ ಇಂಗ್ಲೆಂಡ್- ಆಸ್ಟ್ರೇಲಿಯಾ ಮಧ್ಯೆ ಹೆಡಿಂಗ್ಲೆಯಲ್ಲಿ ನಡೆದ ಆ್ಯಷಸ್ ಸರಣಿಯ ಮೂರನೇ ಪಂದ್ಯವನ್ನು ಇಲ್ಲಿ ನೆನಪಿಸಿಕೊಳ್ಳಲೇಬೇಕು. ಆ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡ ಕೇವಲ 130 ರನ್‌ಗಳನ್ನು ಗಳಿಸಿದ್ದರೆ ಗೆಲವು ದಾಖಲಾಗುತ್ತಿತ್ತು. ಘಟಾನುಘಟಿ ಆಟಗಾರರಿಂದ ಕೂಡಿದ್ದ ಆಸ್ಟ್ರೇಲಿಯಾ ತಂಡಕ್ಕೆ ಕೇವಲ 130 ರನ್ ಗಳಿಸುವುದು ಖಂಡಿತ ಸವಾಲಲ್ಲ. ತುಂಬ ಸುಲಭವಾಗಿ, ಒಂದು ಅಥವಾ ಎರಡು ವಿಕೆಟ್ ನಷ್ಟಕ್ಕೆ ಆಸ್ಟ್ರೇಲಿಯಾ ತಂಡ ಗೆಲುವು ದಾಖಲಿಸುತ್ತದೆ ಎಂದೇ ಕ್ರಿಕೆಟ್ ಪಂಡಿತರು ಲೆಕ್ಕ ಹಾಕಿದ್ದರು. ಇಂಗ್ಲೆಂಡ್ ತಂಡದ ಆಟಗಾರರ ಲೆಕ್ಕಾಚಾರವೂ ಇದೇ ಆಗಿತ್ತು. ಆಟ ಶುರುವಾಗಿ ಅರ್ಧ ಗಂಟೆ ಕಳೆದಿರಬಹುದು. ಆಗಲೇ, ಹೆಡಿಂಗ್ಲೆಯ ಪೆವಿಲಿಯನ್ ತುದಿಯಿಂದ ಬೌಲಿಂಗ್ ಮಾಡುವುದೆಂದರೆ ನನಗೆ ತುಂಬಾ ಇಷ್ಟ. ಅಲ್ಲಿಂದ ಬೌಲ್ ಮಾಡಿದರೆ ಖಂಡಿತ ವಿಕೆಟ್ ಪಡೆಯುವೆನೆಂದು ನನಗೆ ವಿಶ್ವಾಸವಿದೆ ಎಂದು ವೇಗದ ಬೌಲರ್ ಬಾಬ್ ವಿಲ್ಲೀಸ್ ಹಿಂದೊಮ್ಮೆ ಹೇಳಿದ್ದು ಬ್ರಿಯರ್ಲಿಯ ನೆನಪಿಗೆ ಬಂತು. ಆತ ತಡ ಮಾಡಲಿಲ್ಲ. ಬಾಬ್‌ವಿಲ್ಲೀಸ್‌ಗೆ ಚೆಂಡು ಕೊಟ್ಟು- ಫ್ರೆಂಡ್, ನಿನ್ನ ಕೈ ಚಳಕ ಎಂಥದೆಂದು ಕ್ರೀಡಾ ಜಗತ್ತಿಗೆ ತೋರಿಸು' ಎಂದ. ಮುಂದೆ ನಡೆದದ್ದು ಇತಿಹಾಸ. ಬಾಬ್‌ವಿಲ್ಲೀಸ್‌ನ ಬಿರುಗಾಳಿ ವೇಗದ ಬೌಲಿಂಗ್‌ಗೆ ಆಸ್ಟ್ರೇಲಿಯಾದ ಆಟಗಾರರು ತರೆಗೆಲೆಗಳಂತೆ ಉದುರಿ ಹೋದರು. ಕೇವಲ 43 ರನ್‌ಗಳಿಗೆ ವಿಲ್ಲೀಸ್ 8 ವಿಕೆಟ್ ಉರುಳಿಸಿದ್ದ. ಪರಿಣಾಮವಾಗಿ, ಸೋಲಬೇಕಿದ್ದ ಪಂದ್ಯವನ್ನು ಬ್ರಿಯರ್ಲಿ ನೇತೃತ್ವದ ತಂಡ ಗೆದ್ದು ಬೀಗಿತು.
ಇದೇ ಆ್ಯಷಸ್‌ಸರಣಿಯ ನಾಲ್ಕನೇ ಪಂದ್ಯ ನಡೆದದ್ದು ಎಜ್‌ಬಾಸ್ಟನ್‌ನಲ್ಲಿ. ದುರಾದೃಷ್ಟವೆಂಬಂತೆ ನಾಲ್ಕನೇ ಟೆಸ್ಟ್‌ನಲ್ಲಿ ಕೂಡ ಬ್ರಿಯರ್ಲಿ ತಂಡದ ಆಟಗಾರರಿಗೆ ಹೆಚ್ಚು ರನ್ ಸೇರಿಸಲು ಸಾಧ್ಯವಾಗಲಿಲ್ಲ. ಈ ಬಾರಿ ಗೆದ್ದೇ ತೀರಬೇಕೆಂಬ ಹಂಬಲ ಆಸ್ಟ್ರೇಲಿಯಾದ ಆಟಗಾರರದಿತ್ತು. ಒಂದು ಹಂತದಲ್ಲಿ ಕೇವಲ 151 ರನ್ ಸೇರಿಸಿದರೆ ಗೆಲುವು ಎಂಬಂಥ ಪರಿಸ್ಥಿತಿಯಿತ್ತು. ಆಸ್ಟ್ರೇಲಿಯನ್ನರ ಕೈಯಲ್ಲಿ ಇನ್ನೂ 5 ವಿಕೆಟ್‌ಗಳಿದ್ದವು. ಅಂತೂ ಈ ಪಂದ್ಯ ಗೆದ್ದೆವು ಎಂಬ ಹಮ್ಮಿನಲ್ಲಿ ಆಸ್ಟ್ರೇಲಿಯಾದ ಆಟಗಾರರೂ; ಛೆ, ಈ ಪಂದ್ಯ ನಮ್ಮ ಕೈಬಿಟ್ಟು ಹೋಗುತ್ತದೆ ಎಂಬ ಬೇಸರದಿಂದಲೇ ಇಂಗ್ಲೆಂಡ್‌ನ ಆಟಗಾರರೂ ಇದ್ದರು. ಆಗಲೇ ಬ್ರಿಯರ್ಲಿಗೆ ದಿಢೀರನೆ ಇಯಾನ್ ಬೋಥಂನ ಮಾತೊಂದು ನೆನಪಾಯ್ತು. ಅದೊಮ್ಮೆ ಮಾತಿಗೆ ಕೂತಿದ್ದಾಗ, ಎಜ್‌ಬಾಸ್ಟನ್‌ನ ಮೈದಾನದಲ್ಲಿ ಉಳಿದೆಲ್ಲರಿಗಿಂತ ಚೆನ್ನಾಗಿ ನಾನು ಬೌಲಿಂಗ್ ಮಾಡಬಲ್ಲೆ ಎಂದು ಬೋಥಂ ಹೇಳಿದ್ದುದು ನೆನಪಾಯಿತು. ಬ್ರಿಯರ್ಲಿ ತಡ ಮಾಡಲಿಲ್ಲ. ನೇರವಾಗಿ ಬೋಥಂನ ಬಳಿಗೆ ಹೋದ. 'ಗೆಳೆಯಾ, ಈಗ ನಿನ್ನ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗಿದೆ. ಬೋಥಂ ಎಂದರೆ ಬಿರುಗಾಳಿಯ ವೇಗದ ಬೌಲರ್ ಎಂಬುದನ್ನು ಕ್ರಿಕೆಟ್ ಪಂಡಿತರು ತಿಳಿಯುವಂತಾಗಲಿ. ಆಲ್ ದಿ ವೆರಿ ಬೆಸ್ಟ್' ಎಂದ.
ಆನಂತರದಲ್ಲಿ ಯಾರೂ ನಿರೀಕ್ಷಿಸಿರದಂಥ ಪವಾಡ ನಡೆದು ಹೋಯಿತು. ತನ್ನ ಕ್ರಿಕೆಟ್ ಜೀವನದ ಶ್ರೇಷ್ಠ ಆಟ ಪ್ರದರ್ಶಿಸಿದ ಬೋಥಂ, ಕೇವಲ 1 ರನ್ ನೀಡಿ ಆಸ್ಟ್ರೇಲಿಯಾದ ಐದು ವಿಕೆಟ್‌ಗಳನ್ನು ಬಲಿ ತೆಗೆದುಕೊಂಡ. ಪರಿಣಾಮವಾಗಿ, ಇಂಗ್ಲೆಂಡ್‌ಗೆ ಸ್ಮರಣೀಯ ಗೆಲುವು ದಕ್ಕಿತು.
ಹೀಗೆ, ಕ್ರಿಕೆಟ್ ಅಂಗಳದಲ್ಲಿ ಸಂಕಟ ಎದುರಾದಾಗಲೆಲ್ಲ ಒಂದಲ್ಲ ಒಂದು ಹೊಸ ತಂತ್ರ ಪ್ರಯೋಗಿಸಿ ಗೆಲ್ಲುತ್ತಿದ್ದ ಬ್ರಿಯರ್ಲಿ, ಕೇಂಬ್ರಿಡ್ಜ್ ವಿ.ವಿ.ಯಲ್ಲಿ ಪದವಿ ಪಡೆದಾತ. ಎದುರಿಗಿದ್ದವರ ಮಾತುಗಳನ್ನು ಆಸಕ್ತಿಯಿಂದ ಆಲಿಸಬೇಕು, ಪ್ರತಿಯೊಂದು ವಿಷಯವನ್ನೂ ಸಮಗ್ರವಾಗಿ ಅವಲೋಕಿಸಬೇಕು, ಎಂಥ ಸಂದರ್ಭದಲ್ಲೂ ಧೈರ್ಯ ಕಳೆದುಕೊಳ್ಳಬಾರದು ಎಂಬ ಪಾಠವನ್ನು ಅವನಿಗೆ ಕೇಂಬ್ರಿಡ್ಜ್ ವಿ.ವಿ.ಯ ಅಂಗಳವೇ ಹೇಳಿಕೊಟ್ಟಿತ್ತು. ತಾನು ಕಲಿತಿದ್ದನ್ನೆಲ್ಲ ಬ್ರಿಯರ್ಲಿ, ಕ್ರಿಕೆಟ್ ಅಂಗಳದಲ್ಲಿ ಪರೀಕ್ಷೆಗೆ ಒಡ್ಡುತ್ತಿದ್ದ. ಪ್ರಯೋಗಕ್ಕೆ ಈಡು ಮಾಡುತ್ತಿದ್ದ. ಹೆಚ್ಚಿನ ಸಂದರ್ಭದಲ್ಲಿ ಅವನಿಗೆ 'ಪಾಸಿಟಿವ್' ಫಲಿತಾಂಶವೇ ದಕ್ಕುತ್ತಿತ್ತು. ಮುಂದೆ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ನಂತರ ವ್ಯಕ್ತಿತ್ವ ವಿಕಸನದ ಕಾರ್ಯಾಗಾರವೊಂದರಲ್ಲಿ ಪಾಲ್ಗೊಂಡಿದ್ದ ಬ್ರಿಯರ್ಲಿ, ಎದುರಿಗಿದ್ದವರಿಗೆ ಮಾತಾಡಲು ಅವಕಾಶ ಕೊಡಬೇಕು. ಒಂದು ಸಮಾವೇಶದಲ್ಲಿ ಕೆಲವರು ಕೂರುವ ಹಾಗೂ ಕೇಳುವ ಆಸಕ್ತಿ ಇಲ್ಲದೆ ಚಡಪಡಿಸುತ್ತಿದ್ದಾರೆ ಎಂದರೆ, ಅವರು ಮಾತಾಡಲು ತವಕಿಸುತ್ತಿದ್ದಾರೆ ಎಂಬ ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದ.
ನಿಮಗೆ ಆಶ್ಚರ್ಯವಾಗಬಹುದು. ಆದರೆ ಇದು ನಿಜ. ಒಳ್ಳೆಯ 'ನಾಯಕ' ಅನ್ನಿಸಿಕೊಂಡಿರುವ ಜನ ತುಂಬ ಒಳ್ಳೆಯ 'ಕೇಳುಗರೂ' ಆಗಿರುತ್ತಾರೆ. ಜೊತೆಗಾರರ ಎಲ್ಲ ಮಾತುಗಳನ್ನೂ ಆಲಿಸುವುದರಿಂದ ಎಂಥ ಸಂದರ್ಭವನ್ನೂ ಸುಲಭವಾಗಿ ನಿಭಾಯಿಸುವ ಕಲೆಗಾರಿಕೆ ಅವರಿಗೆ ಸಿದ್ಧಿಸಿಬಿಟ್ಟಿರುತ್ತದೆ.
ಲೂಯಿಸ್ ವಿ. ಗೆಸ್ಟೆನರ್ ಅವರ ಹೆಸರನ್ನು ನೀವು ಕೇಳಿರಬಹುದು. ಅಮೆರಿಕದ ಬಹುರಾಷ್ಟ್ರೀಯ ಕಂಪನಿಯಾದ ಇಂಟರ್ ನ್ಯಾಷನಲ್ ಬ್ಯುಸಿನೆಸ್ ಮೆಷಿನ್ಸ್ ಕಾರ್ಪೋರೇಷನ್ (ಐಬಿಎಂ) ಗೆ 1993ರ ಏಪ್ರಿಲ್‌ನಿಂದ 2002ರವರೆಗೂ ಅಧ್ಯಕ್ಷ ಹಾಗೂ ಸಿಇಒ ಆಗಿದ್ದ ಧೀಮಂತ ಅವರು. ಅವರಿಗೂ ಮೊದಲು ಐಬಿಎಂನ ಅಧ್ಯಕ್ಷ ಮತ್ತು ಸಿಇಒ ಆಗಿದ್ದವರು ಜಾನ್ ಅಕೇರ್ಸ್. ಅಕೇರ್ಸ್ ಅವರು ಇದ್ದಕ್ಕಿದ್ದಂತೆಯೇ ಸಂಸ್ಥೆ ತೊರೆದಾಗ, ಐಬಿಎಂನ ನಿರ್ದೇಶಕರೆಲ್ಲ ಹೊಸ ಸಿಇಒ ಹುಡುಕಾಟಕ್ಕೆ ನಿಂತರು. ಐಬಿಎಂ, ಸಾಫ್ಟ್‌ವೇರ್ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಯಾದ್ದರಿಂದ ಆ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದವರನ್ನೇ ಸಿಇಒ ಹುದ್ದೆಗೆ ಆರಿಸಬೇಕೆಂಬುದು ನಿರ್ದೇಶಕ ಮಂಡಳಿಯ ನಿಲುವಾಗಿತ್ತು. ಆದರೆ 'ಸೂಕ್ತ' ಅಭ್ಯರ್ಥಿಗಳು ಸಿಗದಿದ್ದುರಿಂದ, ಕಂಪ್ಯೂಟರ್ ಕ್ಷೇತ್ರಕ್ಕೆ ಸಂಪೂರ್ಣವಾಗಿ ಹೊಸಬರಾಗಿದ್ದ ಗೆಸ್ಟೆನರ್ ಅವರನ್ನು ಆಯ್ಕೆ ಮಾಡಲಾಯಿತು.
ಗೆಸ್ಟೆನರ್ ಐಬಿಎಂನ ಸಿಇಒ ಆದ ಸಂದರ್ಭದಲ್ಲಿ ಕಂಪನಿ ಆಗಲೇ ದೊಡ್ಡ ಲಾಸ್‌ನಲ್ಲಿತ್ತು. ಮುಂದಿನ ಐದಾರು ವರ್ಷಗಳಲ್ಲಿ ಈ ಕಂಪನಿ ಮುಚ್ಚಿ ಹೋಗುತ್ತದೆ ಎಂದು ಎಷ್ಟೋ ಮಂದಿ ಭವಿಷ್ಯ ನುಡಿದಿದ್ದರು. ಅಷ್ಟೇ ಅಲ್ಲ, ಐಬಿಎಂ ನ ಹೊಸ ಸಾರಥಿಯಾಗಿ ಗೆಸ್ಟೆನರ್ ಎಂಬ ಸುದ್ದಿ ಪ್ರಕಟವಾದಾಗ, ಕಂಪ್ಯೂಟರ್ ಕ್ಷೇತ್ರದ ಪರಿಚಯವೇ ಇಲ್ಲದ ಈತ ಹೇಗೆ ಕಂಪನಿಯನ್ನು ಸಂಭಾಳಿಸಬಲ್ಲ ಎಂದೂ ಕೆಲವರು ಕುಹಕವಾಡಿದ್ದರು. ತಾನು ಕೂತಿರುವುದು ಮುಳ್ಳಿನ ಸಿಂಹಾಸನ ಎಂಬುದು ಕೆಲವೇ ದಿನಗಳಲ್ಲಿ ಗೆಸ್ಟೆನರ್‌ಗೂ ಅರ್ಥವಾಯಿತು. ಆದರೆ ಅವನು ಹೆದರಲಿಲ್ಲ. ಮೊದಲು ಐಬಿಎಂನ ವಾರ್ಷಿಕ ವಹಿವಾಟು, ಉತ್ಪಾದನೆ, ಕಂಪನಿಗೆ ಬಂದಿರುವ ಬೇಡಿಕೆ ಇತ್ಯಾದಿಯ ವಿವರಣೆ ತರಿಸಿಕೊಂಡ. ಕಂಪ್ಯೂಟರ್ ಕ್ಷೇತ್ರದ ವಿವಿಧ ರಂಗಗಳಲ್ಲಿ ಕಂಪನಿ ಕಾರ್ಯನಿರ್ವಹಿಸುತ್ತಿರುವುದು, ಬೇಡಿಕೆಯೇ ಇಲ್ಲದ ಕೆಲವು ಉತ್ಪನ್ನಗಳನ್ನು ಹೆಚ್ಚಾಗಿ ತಯಾರಿಸುವುದು, ನೌಕರ ವರ್ಗದಲ್ಲಿ ಶಿಸ್ತು ಕಾಣೆಯಾಗಿರುವುದು... ಇಂಥವೇ ಕಾರಣಗಳಿಂದ ಕಂಪನಿ ಲಾಸ್‌ನಲ್ಲಿದೆ ಎಂಬುದನ್ನು ಆತ ಅರ್ಥ ಮಾಡಿಕೊಂಡ.
ಕಂಪನಿಯನ್ನು ಮತ್ತೆ ಲಾಭದ ಹಳಿಗೆ ಕೊಂಡೊಯ್ಯುವ, ಐಬಿಎಂನ ಉತ್ಪನ್ನಗಳ ಬಗ್ಗೆ ಗ್ರಾಹಕರಲ್ಲಿ ನಂಬಿಕೆ ಹುಟ್ಟುವಂತೆ ಮಾಡುವ ಕಠಿಣ ಸವಾಲು ಆತನ ಮುಂದಿತ್ತು. ಈ ಸಂದರ್ಭದಲ್ಲಿ ಆತ 'ಲಾಸ್' ನಿಂದ ತಪ್ಪಿಸಿಕೊಳ್ಳಲು ನೌಕರರನ್ನು ವಜಾ ಮಾಡಲಿಲ್ಲ. ಕಂಪನಿಯ ಶಾಖೆಗಳಿಗೆ ಬೀಗ ಹಾಕಿಸಲಿಲ್ಲ. ಬದಲಾಗಿ, ನೌಕರರ ಸಭೆ ಕರೆದ. ಅವರಿಗೆ ಕಂಪನಿ ಎದುರಿಸುತ್ತಿರುವ ಕಷ್ಟದ ಪರಿಸ್ಥಿತಿಯನ್ನು ವಿವರಿಸಿದ. ಈ ಲಾಸ್‌ನಿಂದ ನಾವು ಪಾರಾಗಬೇಕು. ಎಲ್ಲರ ನೌಕರಿಯೂ ಉಳಿಯಬೇಕು. ಅಂಥ ಮಾರ್ಗ ಯಾವುದಾದರೂ ಇದ್ದರೆ ತಿಳಿಸಿ ಎಂದು ವಿನಂತಿಸಿದ. ತಮ್ಮನ್ನು ಕೆಲಸದಿಂದ ವಜಾ ಮಾಡುವುದಿಲ್ಲ ಎಂಬ ಭರವಸೆ ಸಿಇಒ ಕಡೆಯಿಂದಲೇ ಸಿಕ್ಕಿದಾಗ ನೌಕರರು ಖುಷಿಯಾದರು. ಕಂಪನಿಯನ್ನು ಹೇಗೆ ಲಾಭದ ಕಡೆಗೆ ನಡೆಸಬಹುದು ಎಂಬುದನ್ನು ತಮಗೆ ತಿಳಿದಂತೆ ವಿವರಿಸಿದರು. ತುಂಬ ಉತ್ಸಾಹದಿಂದ ಕೆಲಸ ಮಾಡುವುದಾಗಿಯೂ ಭರವಸೆ ನೀಡಿದರು. ಆನಂತರದಲ್ಲಿ ಗೆಸ್ಟೆನರ್, ಹಲವು ಮಂದಿ ಗ್ರಾಹಕರನ್ನು ಭೇಟಿ ಮಾಡಿದ. ಐಬಿಎಂನ ಉತ್ಪನ್ನಗಳ ಬಗ್ಗೆ ಅವರ ತಕರಾರುಗಳು ಏನೆಂದು ಕೇಳಿದ. ಪ್ರತಿಸ್ಪರ್ಧಿ ಕಂಪನಿಯ ಉತ್ಪನ್ನಗಳು ಐಬಿಎಂನ ಉತ್ಪನ್ನಗಳಿಗಿಂತ ಹೇಗೆ ಶ್ರೇಷ್ಠ ಎಂದೂ ಪ್ರಶ್ನೆ ಹಾಕಿದ. ಐಬಿಎಂನ ಮಾರಾಟ ವಿಭಾಗದಿಂದ ಗ್ರಾಹಕರಿಗೆ ನೇರ ಸೇವೆ ಲಭಿಸುವಂಥ ವ್ಯವಸ್ಥೆಯೊಂದನ್ನು ರೂಪಿಸಿದ. ಕಂಪನಿಯ ಹೊಸ ಉತ್ಪನ್ನಗಳ ಬಗ್ಗೆ ಯಾರು, ಯಾವಾಗ ಬೇಕಾದರೂ ಫೋನ್/ಇ-ಮೇಲ್ ಮೂಲಕ ಮಾಹಿತಿ ಪಡೆಯಬಹುದೆಂದು ಪ್ರಕಟಣೆ ಹೊರಡಿಸಿದ. ಆಶ್ಚರ್ಯವೆಂದರೆ, ಐಬಿಎಂನ ಸಿಇಒ ಆದ ಒಂದೇ ವಾರದೊಳಗೆ ಇಷ್ಟೆಲ್ಲ ಕೆಲಸ ಮಾಡಿದ್ದ. ಆನಂತರದ ಎರಡೇ ದಿನದಲ್ಲಿ ಐಬಿಎಂ ಕಂಪನಿಯ ಸಮಸ್ತ ನೌಕರರ ಪಟ್ಟಿ ತರಿಸಿಕೊಂಡು ಎಲ್ಲರಿಗೂ ಪ್ರತ್ಯೇಕವಾಗಿ ಇ-ಮೇಲ್ ಕಳಿಸಿದ. 'ಪ್ರಿಯ ಸಹೋದ್ಯೋಗಿ ಬಂಧು...' ಎಂಬ ಮಾತಿನಿಂದಲೇ ಅವನ ಪತ್ರ ಶುರುವಾಗುತ್ತಿತ್ತು. ಈಗ ಕಂಪನಿ ಎದುರಿಸುತ್ತಿರುವ ಸವಾಲು ಹಾಗೂ ನೌಕರರ ಅಗತ್ಯ ಸಹಕಾರದ ಬಗ್ಗೆ ಬರೆಯುತ್ತಿದ್ದ. ಮುಂದಿನ ದಿನಗಳಲ್ಲಿ ಕಂಪನಿಗೆ ಗೆಲುವಾದರೆ ಅದಕ್ಕೆ ನಿಮ್ಮ ಪರಿಶ್ರಮವೇ ಕಾರಣ. ಒಂದೊಮ್ಮೆ ಮತ್ತೆ ಲಾಸ್ ಆದರೆ, ಆ ಸೋಲಿಗೆ ಸಂಪೂರ್ಣವಾಗಿ ನಾನೇ ಜವಾಬ್ದಾರ. ನಿಮ್ಮ ಪರಿಶ್ರಮದಲ್ಲಿ ನನಗೆ ನಂಬಿಕೆಯಿದೆ. ಸಂಭ್ರಮದಿಂದ ಕೆಲಸ ಮುಂದುವರಿಸಿ. ನಿಮಗೆ ಶುಭವಾಗಲಿ. ಸಣ್ಣದೊಂದು ಸಮಸ್ಯೆ ಎದುರಾದರೂ, ಸಂಕೋಚವಿಲ್ಲದೆ ನನ್ನನ್ನು ಸಂಪರ್ಕಿಸಿ...' ಎಂಬ ಮಾತುಗಳೊಂದಿಗೆ ಗೆಸ್ಟೆನರ ನ ಇ-ಮೇಲ್‌ಗಳು ಮುಕ್ತಾಯವಾಗುತ್ತಿದ್ದವು.
ಗೆಸ್ಟೆನರ್‌ನ ಪಾರದರ್ಶಕ ನಡವಳಿಕೆ ಮತ್ತು ಎಲ್ಲರ ಸಲಹೆಯ ನಂತರವೇ ನಿರ್ಧಾರ ಕೈಗೊಳ್ಳುವ ಗುಣ ಐಬಿಎಂನ ನೌಕರರ ಮನಸ್ಸು ಗೆದ್ದಿತು. ಕುಟುಂಬದ ಹಿರಿಯನೊಬ್ಬ ಮಕ್ಕಳಿಗೆ ಬರೆಯುವ ಪತ್ರಗಳಂತೆ ಆರ್ದ್ರ ಭಾವಗಳಿಂದ ಕೂಡಿರುತ್ತಿದ್ದ ಗೆಸ್ಟೆನರ್‌ನ ಇ-ಮೇಲ್‌ಗಳನ್ನು ನೌಕರರು, ಒಂದು ಪ್ರಶಸ್ತಿ ಪತ್ರದಂತೆ ಕಾಪಿಟ್ಟುಕೊಂಡರು. ಇಂಥಾ ದಕ್ಷ ಬಾಸ್‌ನ ಕೈ ಕೆಳಗೆ ದುಡಿಯುವುದು ನಮ್ಮ ಅದೃಷ್ಟ ಅಂದುಕೊಂಡರು. ದುಪ್ಪಟ್ಟು ಉತ್ಸಾಹದಿಂದ ಕೆಲಸದಲ್ಲಿ ತೊಡಗಿಸಿಕೊಂಡರು. ಪರಿಣಾಮವಾಗಿ, ಮುಳುಗಿ ಹೋಗುತ್ತದೆ ಎಂದು ಭಾವಿಸಲಾಗಿದ್ದ ಐಬಿಎಂನ ಹಡಗು ಎರಡೇ ವರ್ಷದ ಅವಧಿಯಲ್ಲಿ ಲಾಭದ ಹಳಿಯ ಮೇಲೆ ನಿಂತುಬಿಟ್ಟಿತು.
ಯಶಸ್ಸು ಕೈಗೆಟುಕಿದ ನಂತರವೂ ಗೆಸ್ಟೆನರ್ ಬದಲಾಗಲಿಲ್ಲ. ಈ ಗೆಲುವು ನನ್ನದಲ್ಲ. ಇದು ಐಬಿಎಂನ ಲಕ್ಷಾಂತರ ಉದ್ಯೋಗಿಗಳ ಪರಿಶ್ರಮದ ಫಲ ಎಂದ. ಆನಂತರದಲ್ಲೂ ಕಂಪನಿಗೆ ಒಂದಲ್ಲಾ ಒಂದು ಸವಾಲುಗಳು ಎದುರಾದವು. ಆಗಲೂ ಅಷ್ಟೆ: ಸಮಸ್ತ ನೌಕರರ ಮುಂದೆಯೇ ಎಲ್ಲವನ್ನೂ ಚರ್ಚಿಸಿದ. ಎಲ್ಲರ ಸಲಹೆಯನ್ನೂ ಆಲಿಸಿದ. ಅತ್ಯುತ್ತಮ ಅನ್ನಿಸಿದ ಸಲಹೆ ನೀಡಿದವನಿಗೆ ವಿಶೇಷ ಬಹುಮಾನ ನೀಡಿ ಸನ್ಮಾನಿಸಿದ. ಆನಂತರ- ಈ ಸಮಸ್ಯೆಗೆ ಇಂಥದೊಂದು ಪರಿಹಾರ ಕಂಡುಕೊಳ್ಳೋಣ, ಇದು ಎಲ್ಲರಿಗೂ ಒಪ್ಪಿಗೆ ತಾನೆ? ಎಂದು ಕಂಪನಿಯ ಎಲ್ಲ ನೌಕರರಿಗೂ ಪ್ರತ್ಯೇಕ ಮೇಲ್ ಕಳಿಸಿ, ಎಲ್ಲರ ಸಮ್ಮತಿ ದೊರೆತ ನಂತರವೇ ಹೆಜ್ಜೆ ಮುಂದಿಡುತ್ತಿದ್ದ. ಗೆಸ್ಟೆನರ್‌ನ ಇಂಥ ವರ್ತನೆಯಿಂದ ಐಬಿಎಂನ ಕಾರ್ಯಕ್ಷಮತೆಯ ಬಗ್ಗೆ ನೌಕರರಿಗೆ ವಿಶ್ವಾಸ ಬಂತು. ಬೇರೆ ಕಂಪನಿಗೆ ವಲಸೆ ಹೋಗುವವರ ಸಂಖ್ಯೆ ಕಡಿಮೆಯಾಯಿತು. ಅಷ್ಟೇ ಅಲ್ಲ,
ಹಂತದಲ್ಲಿದ್ದಾಗಲೇ ಐಬಿಎಂನ ಉತ್ಪನ್ನಗಳಿಗೆ ಭಾರಿ ಡಿಮ್ಯಾಂಡ್ ಶುರುವಾಯಿತು.
ಈಗ ಯೋಚಿಸೋಣ. ಕ್ರೀಡೆ ಅಥವಾ ಮಾರುಕಟ್ಟೆ ರಂಗದಲ್ಲಿ ಆಯಾ ಕ್ಷೇತ್ರದಲ್ಲಿ ಎಲ್ಲ ರೀತಿಯಿಂದಲೂ ಪಳಗಿರುವ ವ್ಯಕ್ತಿಗೆ ಮಾತ್ರ ಒಂದು ಯಶಸ್ವೀ ತಂಡ ಕಟ್ಟುವ ಸಾಮರ್ಥ್ಯ ಇರುತ್ತದೆ ಎಂಬುದು ಎಲ್ಲರ ನಂಬಿಕೆ. ಆದರೆ, ಈ ನಂಬಿಕೆಗೆ ತದ್ವಿರುದ್ಧ ಗುಣ ಹೊಂದಿದ್ದ ಬ್ರಿಯರ್ಲಿ ಮತ್ತು ಗೆಸ್ಟೆನರ್ ತಮ್ಮ ಪ್ರಚಂಡ ಯಶಸ್ಸಿನಿಂದ ಮನೆಮಾತಾಗಿ ಬಿಟ್ಟರು. ನಿಮಗೆ ಅಚ್ಚರಿಯಾಗಬಹುದು. ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ನಾಯಕ ಎಂದು ಕರೆಸಿಕೊಂಡ ಮೈಕ್ ಬ್ರಿಯರ್ಲಿ, 39 ಟೆಸ್ಟ್ ಮ್ಯಾಚ್‌ಗಳನ್ನು ಆಡಿದ. ಆದರೆ ಒಂದೇ ಒಂದು ಸೆಂಚುರಿ ಹೊಡೆಯುವುದಕ್ಕೂ ಆತನಿಂದ ಸಾಧ್ಯವಾಗಲಿಲ್ಲ. ಹಾಗೆಯೇ, ಸಾಫ್ಟ್‌ವೇರ್ ಕ್ಷೇತ್ರದ ಬಗ್ಗೆ ಹೆಚ್ಚಿನ ತಿಳಿವಳಿಕೆಯೇ ಇಲ್ಲದ ಗೆಸ್ಟೆನರ್, ಐಬಿಎಂ ಕಂಪನಿಯ ಭವಿಷ್ಯಕ್ಕೆ ಹೊಸದೊಂದು ಭಾಷ್ಯ ಬರೆದ. ಆತ 1993ರಲ್ಲಿ ಸಿಇಒ ಆದಾಗ ಕಂಪನಿಯ ಮೇಲೆ ಲಕ್ಷಾಂತರ ಡಾಲರ್ ಸಾಲದ ಹೊರೆಯಿತ್ತು. ಕಂಪನಿಯ ಷೇರುಗಳನ್ನು ಕೇಳುವವರೇ ಇರಲಿಲ್ಲ. ಆದರೆ, 1999ರ ಹೊತ್ತಿಗೆ, ಅಂದರೆ ಆರೇ ವರ್ಷದ ಅವಧಿಯಲ್ಲಿ ಐಬಿಎಂ ಸಾಫ್ಟ್‌ವೇರ್ ಕ್ಷೇತ್ರದ ನಂಬರ್ ಒನ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಇಂಥದೊಂದು ಬದಲಾವಣೆ ತರಲು ಗೆಸ್ಟೆನರ್ ಹಾಗೂ ಬ್ರಿಯರ್ಲಿ, ಯಾವುದೇ ದೈವದ ಮೊರೆ ಹೋಗಲಿಲ್ಲ. ಪವಾಡಕ್ಕಾಗಿ ಪ್ರಾರ್ಥಿಸಲಿಲ್ಲ. ಸೋಲಿಗೆ ಕಾರಣರಾದವರ ಮೇಲೆ ಗೂಬೆ ಕೂರಿಸಲಿಲ್ಲ. ಬದಲಿಗೆ, ಉಳಿದವರ ಸಲಹೆಯನ್ನು ಪ್ರೀತಿಯಿಂದ ಆಲಿಸುವ ಕೆಲಸಕ್ಕೆ ನಿಂತರು. ಒಗ್ಗಟ್ಟಿನಲ್ಲಿ ಬಲವಿದೆ. ಒಗ್ಗಟ್ಟಿನಲ್ಲಿ ಗೆಲುವಿದೆ ಎಂದು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟರು. ಅದಕ್ಕಿಂತ ಹೆಚ್ಚಾಗಿ, ನಮ್ಮ ಸಲಹೆಯನ್ನೂ, ನಮ್ಮ ಬಾಸ್ ಆಲಿಸುತ್ತಾರೆ. ನಮ್ಮ ಮಾತುಗಳಲ್ಲಿ ಅವರಿಗೆ ನಂಬಿಕೆ ಇದೆ ಎಂಬುದು ಜೊತೆಗಾರರಿಗೆ ಅರ್ಥವಾಗುವಂತೆ ಮಾಡಿದರು. ಅದೇ ಸಂದರ್ಭಕ್ಕೆ -ನಿಮ್ಮೊಳಗೆ ಒಂದು ವಿಶಿಷ್ಟ ಶಕ್ತಿಯಿದೆ ಎಂಬುದನ್ನು ಜೊತೆಗಿದ್ದವರಿಗೆ ಮನವರಿಕೆ ಮಾಡಿಕೊಟ್ಟರು. ಈ ಕಾರಣದಿಂದಾಗಿ ಒಂದು ಕಡೆಯಲ್ಲಿ ಅವರು ಮಹಾನ್ ನಾಯಕರಾಗುವುದಕ್ಕೂ ಸಾಧ್ಯವಾಯಿತು. ಇನ್ನೊಂದು ಕಡೆಯಲ್ಲಿ ನಾಯಕನ ನೆರಳಲ್ಲಿ ಹಲವು ಹೊಸ ಪ್ರತಿಭೆಗಳು ಅರಳಲು ವೇದಿಕೆಯೂ ಸೃಷ್ಟಿಯಾಯಿತು.
ಅದರರ್ಥ ಇಷ್ಟೆ: ನಾಯಕನಾಗಿ ಪ್ರಚಂಡ ಯಶಸ್ಸು ಕಾಣಬೇಕು ಅನ್ನುವವನು ಜೊತೆಗಾರರ ಗೆಳೆಯನಾಗಬೇಕು, ಬಂಧುವಾಗಬೇಕು ಮತ್ತು ಎಲ್ಲವನ್ನೂ ಕೇಳುವ 'ಕಿವಿ'ಯಾಗಬೇಕು.
-ವಿಶ್ವೇಶ್ವರ ಭಟ್
vbhat@me.com