ಅಂಕಣಗಳು

ಮೋದಿ ವಿರುದ್ಧ ಸೋತಿದ್ದು ಕೇವಲ ಕಾಂಗ್ರೆಸ್ ಅಲ್ಲ!

ಭವ್ಯ ಭಾರತದ ನಿರ್ಮಾಣಕ್ಕೆ ಅವರು ಒಂದೊಂದೇ ನೀಲನಕ್ಷೆ ಬಿಡಿಸಿಡುತ್ತ..

ಈ ಅಂಕಣ ಬರೆಯುವ ವೇಳೆಗೆ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿರುವುದನ್ನು ಟಿವಿಯಲ್ಲಿ ನೋಡುತ್ತಿದ್ದೆ. ಭವ್ಯ ಭಾರತದ ನಿರ್ಮಾಣಕ್ಕೆ ಅವರು ಒಂದೊಂದೇ ನೀಲನಕ್ಷೆ ಬಿಡಿಸಿಡುತ್ತ ಹೋಗುತ್ತಿದ್ದರೆ ನರೇಂದ್ರ ಮೋದಿಯವರ ವಿಜಯ ಮತ್ತು ಪರಿಣಾಮಗಳ ಬಗ್ಗೆ ಮತ್ತೆ ಬರೆದರೆ ಅನಪೇಕ್ಷಿತವೆಂದೇನೂ ಎನ್ನಿಸುವುದಿಲ್ಲ ಅಂತ ಖಾತ್ರಿಯಾಯಿತು. ಏಕೆಂದರೆ ನರೇಂದ್ರ ಮೋದಿ ಎಂಬ ಚುಂಬಕ ಶಕ್ತಿಯ ಗುಂಗಿನಿಂದ ದೇಶ ಹೊರಬಂದಿಲ್ಲ, ಹೊರ ಬರುವುದಕ್ಕೆ ಇಷ್ಟಪಡುತ್ತಿಲ್ಲ. ಮೋದಿ ಅಲೆ ಎಂಬುದು ಅವರನ್ನು ಪ್ರಧಾನಿ ಗದ್ದುಗೆಗೆ ಕೂರಿಸಿದ ಮೇಲೆ ಮುಗಿಯಿತು ಎಂದುಕೊಂಡಿದ್ದವರಿಗೆ, ಇದು ದಿನೇ ದಿನೆ ಸಕಾರಾತ್ಮಕ ನೆಲೆಯಲ್ಲಿ ದೇಶವನ್ನು ಮತ್ತಷ್ಟು ಆವರಿಸಿಕೊಳ್ಳುವ ಎಲ್ಲ ಸೂಚನೆಗಳು ಸಿಗುತ್ತಿವೆ.
ಲೋಕಸಭೆ ಚುನಾವಣೆಯ ಫಲಿತಾಂಶವನ್ನು ಪ್ರಾಮಾಣಿಕವಾಗಿ ವಿಶ್ಲೇಷಣೆ ಮಾಡಿದ ಯಾರಾದರೂ ಖಡಕ್ ಆಗಿ ಹೇಳಿಬಿಡಬಹುದು- ಇಲ್ಲಿ ಗೆದ್ದದ್ದು ಬಿಜೆಪಿ ಅಲ್ಲ, ನರೇಂದ್ರ ಮೋದಿ ಅಂತ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎಂಬುದು ನರೇಂದ್ರ ಮೋದಿಯನ್ನು ಪ್ರತಿನಿಧಿಸುವ ಅಂಶ ಆಗಿತ್ತೇ ಶಿವಾಯ್ ಮೋದಿ ಬಿಜೆಪಿಯನ್ನು ಪ್ರತಿನಿಧಿಸುತ್ತಿದ್ದಾರೆ ಅಂತಲ್ಲ. ಮೋದಿ ಅಲೆ- ಬಿಜೆಪಿ ಅಲೆ ಎಲ್ಲ ಒಂದೇ, ಯಾಕಂದ್ರೆ ಮೋದಿ ಬಿಜೆಪಿಯನ್ನು ಪ್ರತಿನಿಧಿಸುತ್ತಿರುವವರು ಎಂಬುದು ತಾತ್ತ್ವಿಕವಾಗಿ ಸರಿ ಇರಬಹುದಾದರೂ, ತೀರ ಹಳ್ಳಿಮೂಲೆಯಲ್ಲೂ ಅಭ್ಯರ್ಥಿ ಯಾರೆಂಬ ಬಗ್ಗೆ ಅಷ್ಟೇನೂ ಉತ್ಸುಕರಲ್ಲದ ಮಂದಿಯೂ ಮೋದಿಗೆ ಮತ ಹಾಕಿ ಬಂದೆ ಎಂದಿದ್ದರು. 'ಮೋದಿ ಅಲೆಯೂ ಇಲ್ಲ, ಎಂಥದೂ ಇಲ್ಲ' ಅಂತೆಲ್ಲ ಪ್ರತಿಪಕ್ಷದವರು ಹೀಗಳೆಯುತ್ತಿರುವಾಗಲೇ ಮೋದಿ ಕೆಲವು  ಚುಟುಕೇ ಚುಟುಕು ಎಂಬಂಥ ವಿಚಾರಗಳ ಮೂಲಕ ಜನರಿಗೆ ಕನೆಕ್ಟ್ ಆಗುತ್ತ, ಅವರನ್ನು ಸೆಳೆದುಕೊಳ್ಳುತ್ತ ಸಾಗುತ್ತಿದ್ದರು. 'ಭಾರತವನ್ನು ಗೆಲ್ಲಿಸಿ' ಎಂದರು. 'ಏಕ್ ಭಾರತ್, ಶ್ರೇಷ್ಠ್ ಭಾರತ್‌' ಎನ್ನುತ್ತ ಆ ಏಕಸೂತ್ರದೊಳಗೆ ತಾನೂ ಸೇರಿಕೊಳ್ಳೋಣ ಎಂಬ ಆಶಯವನ್ನು ಸಾಮಾನ್ಯನೊಬ್ಬನಲ್ಲಿ ತಂದರು. ಭವಿಷ್ಯದ ಆಸೆ-ಹಂಬಲಗಳ ದಾರದಲ್ಲಿ ಸಾಮಾನ್ಯರನ್ನೂ ಪೋಣಿಸಿ ಅವರನ್ನೆಲ್ಲ ತನ್ನೊಂದಿಗೆ ಎಬ್ಬಿಸಿಕೊಂಡಿದ್ದರಿಂದಲೇ ಮೋದಿಯವರಿಗೆ ಹಾಗೊಂದು ಅಲೆಯನ್ನು ಸೃಷ್ಟಿಸುವುದಕ್ಕೆ ಸಾಧ್ಯವಾಯಿತು.
ಇಂಥದೊಂದು ಕನೆಕ್ಟಿವಿಟಿಯನ್ನು ನರೇಂದ್ರ ಮೋದಿ ಮುಂದುವರಿಸಿಕೊಂಡು ಹೋಗುತ್ತಿರುವುದರಿಂದ ಚುನಾವಣೆಯ ರಭಸ ಮುಗಿದರೂ ಅಲೆ ಹೊಯ್ದಾಡುತ್ತಲೇ ಇದೆ. ಇಲ್ಲದಿದ್ದರೆ ಸಂಸತ್ತಿನಲ್ಲಿ ರಾಷ್ಟ್ರಪತಿ ಭಾಷಣಕ್ಕೆ ಪ್ರತಿಕ್ರಿಯೆಯಾಗಿ ಮಾತನಾಡುವ ಸಂದರ್ಭದಲ್ಲಿ ಮೋದಿ ಮತ್ತೆ ಎಲ್ಲರನ್ನೂ ಸ್ಫೂರ್ತಿಯ ಕಡಲಲ್ಲಿ ತೊಯ್ದಾಡಿಸುವುದು ಸಾಧ್ಯವಾಗುತ್ತಿತ್ತೇ? ಚುನಾವಣೆಯೆಲ್ಲ ಮುಗಿದು ಇಂಥ ನಿರ್ಣಾಯಕ ಜಯ ಸಿಕ್ಕಿರುವ ಹೊತ್ತಿನಲ್ಲೂ ನರೇಂದ್ರ ಮೋದಿ, 'ಹೀಗೆಲ್ಲ ಗುರಿಗಳಿವೆ, ಬನ್ನಿ ನಾವೆಲ್ಲ ಒಂದುಗೂಡಿದರೆ ಸಾಧ್ಯವಾಗದಿರದೇ' ಅಂತ ಉತ್ಸಾಹ ವೃದ್ಧಿಸುವ ಪ್ರಯತ್ನ ಮಾಡಿದ್ದೇಕೆ? ಏಕೆಂದರೆ ಈಗಲೂ ಈ ಯಾನದಲ್ಲಿ ಜನರನ್ನೂ ಭಾಗಿದಾರರನ್ನಾಗಿ ಮಾಡಿಕೊಂಡು ಜವಾಬ್ದಾರಿಯ ಭಾವವನ್ನು ಎಲ್ಲರಲ್ಲೂ ಜಾಗೃತವಾಗಿಸುವ ತವಕವೊಂದು ಅಲ್ಲಿದೆ. ಈವರೆಗೆ ಪ್ರಧಾನಿಯಾಗಲೀ, ಸರ್ಕಾರದ ಪ್ರಮುಖರಾಗಲೀ ಸಿಕ್ಕಿಮ್‌ನಂಥ ರಾಜ್ಯದ ಉದಾಹರಣೆ ತೆಗೆದುಕೊಂಡು ಸಕಾರಾತ್ಮಕವಾಗಿ ಮಾತನಾಡಿದ್ದು ನಿಮ್ಮ ಗಮನಕ್ಕೇನಾದರೂ ಬಂದಿತ್ತಾ? 'ಸಿಕ್ಕಿಮ್‌ನಂಥ ಹಿಮಾಲಯದ ಮಡಿಲ ಚಿಕ್ಕ ರಾಜ್ಯ ಸಂಪೂರ್ಣ ಸಾವಯವ ಕೃಷಿ ಸಂಪನ್ನ ರಾಜ್ಯವೆಂಬ ಸಾಧನೆಗೈದಿದೆ. ಇಡೀ ಜಗತ್ತೇ ರಾಸಾಯನಿಕ ಮುಕ್ತ ಉತ್ಪನ್ನಗಳನ್ನು ಬೇಡುತ್ತಿರುವ ಈ ಸಂದರ್ಭದಲ್ಲಿ ಇದೇ ಪ್ರಯೋಗವನ್ನು ಈಶಾನ್ಯ ರಾಜ್ಯಗಳೆಲ್ಲ ಮಾಡುವುದು ನಮಗೆ ಸಾಧ್ಯವಾಗದೇನು?' ಅಂತ ಕನಸಿನ ಪುಳಕ ಕಟ್ಟಿಕೊಡುತ್ತಾರೆ. ಈ ಕನಸಿನಲ್ಲಿ ಜನರೆಲ್ಲ ಪಾಲ್ಗೊಳ್ಳುತ್ತಲೇ, ಏನೆಲ್ಲ ಸರ್ಕಸ್ಸು ಮಾಡಿ ಹುಯಿಲೆಬ್ಬಿಸುವ ಪ್ರತಿಪಕ್ಷದವರು ಮತ್ತು ಬುದ್ಧಿಜೀವಿಗಳೆಂದು ಗುರುತಿಸಿಕೊಂಡಿರುವ ಮೋದಿ ದ್ವೇಷಿಗಳು ಅಪ್ರಸ್ತುತರಾಗಿಬಿಡುತ್ತಾರೆ. ಗಮನಿಸಿ; ನರೇಂದ್ರ ಮೋದಿ ಉದ್ದಕ್ಕೂ ಅನುಸರಿಸಿಕೊಂಡು ಬಂದ ಕಾರ್ಯಸೂಚಿಯೇ ಇದು!
ಹೀಗಾಗಿಯೇ ಇಲ್ಲಿ ನರೇಂದ್ರ ಮೋದಿಯವರ ಶಾಣ್ಯಾ ನಡೆಗಳ ಬಗ್ಗೆ ಹೇಳುತ್ತಲೇ ಸೋತವರ ಕತೆಯನ್ನೂ ನಿಮಗೆ ಹೇಳಬೇಕಿದೆ. ನರೇಂದ್ರ ಮೋದಿ ನಿಸ್ಸಂಶಯವಾಗಿ ಗೆದ್ದಿದ್ದಾರೆ. ಹೀಗೆಂದಾಗ ಸೋತವರು ಯಾರು ಎಂಬ ಪ್ರಶ್ನೆ ಸ್ಫುರಿಸುತ್ತದೆ. ಅದಕ್ಕೆ ಉತ್ತರ ತುಂಬ ಸರಳ ಎಂಬಂತೆ ಕಾಂಗ್ರೆಸ್‌ನಿಂದ ಹಿಡಿದು ಮೋದಿ ವಿರೋಧಿ ಪಾಳೆಯದಲ್ಲಿದ್ದ ರಾಜಕೀಯ ಪಕ್ಷಗಳನ್ನು ಪಟ್ಟಿ ಮಾಡಿ ಇಟ್ಟುಬಿಡಬಹುದು. ಆದರೆ ವಾಸ್ತವದಲ್ಲಿ ನರೇಂದ್ರ ಮೋದಿ ವಿರುದ್ಧ ಸೋತಿದ್ದು ಕೇವಲ ಕಾಂಗ್ರೆಸ್ ಅಲ್ಲ. ಕಾಂಗ್ರೆಸ್ ವಿಚಾರಗಳನ್ನು ಪೋಷಿಸಿಕೊಂಡುಬಂದ ಬಹುದೊಡ್ಡ ಬುದ್ಧಿಜೀವಿ ವರ್ಗ ತಿಂದಿರುವ ತಪರಾಕಿ ಇದೆಯಲ್ಲ, ಅದನ್ನು ಅಷ್ಟು ಸುಲಭದಲ್ಲಿ ವರ್ಣಿಸುವುದಕ್ಕೆ ಆಗುವುದಿಲ್ಲ ಬಿಡಿ! ನಮ್ಮಲ್ಲಿ ಹೇಗೆ ಅನಂತಮೂರ್ತಿ, ಗಿರೀಶ್ ಕಾರ್ನಾಡ, ಮರುಳಸಿದ್ಧಪ್ಪ ಮುಂತಾದ ಹೆಸರುಗಳನ್ನೆಲ್ಲ ವಿಘ್ನಸಂತೋಷಿಗಳ ಸಾಲಿನಲ್ಲಿ ಹೇಗೆ ನೆನಪಿಸಿಕೊಳ್ಳುತ್ತೇವೋ ಅಂತೆಯೇ ರಾಷ್ಟ್ರೀಯಮಟ್ಟದಲ್ಲಿ ನರೇಂದ್ರ ಮೋದಿಯವರನ್ನು ಶತಾಯಗತಾಯ ವಿರೋಧಿಸುವ, ಅವರನ್ನು ಪ್ರಜಾಪ್ರಭುತ್ವಕ್ಕೆ ಒದಗಿದ ದೊಡ್ಡ ಅಪಾಯದಂತೆ ಬಿಂಬಿಸುವ ಬೌದ್ಧಿಕ ವಿಕೃತರ ದೊಡ್ಡ ವರ್ಗವೇ ಸಕ್ರಿಯವಾಗಿತ್ತು. ದಿಲೀಪ್ ಪಡಗಾಂವಕರ್, ಕವಿತಾ ಕೃಷ್ಣನ್, ಶಿವ ವಿಶ್ವನಾಥನ್, ರಾಮಚಂದ್ರ ಗುಹಾ, ಮಲ್ಲಿಕಾ ಸಾರಾಭಾಯ್ ಹೀಗೆ ಪಟ್ಟಿ ಮಾಡುತ್ತ ಹೋದರೆ ಹಲವು ಖಾಲಿ ತಲೆಯವರನ್ನು ಸ್ಮರಿಸಬೇಕಾಗುತ್ತದೆ. ರಾಷ್ಟ್ರೀಯ ಮುಖ್ಯವಾಹಿನಿ ಮಾಧ್ಯಮದಲ್ಲಿ ಮುಂಚೂಣಿಯಲ್ಲಿರುವ ಮುಕ್ಕಾಲುಪಾಲು ಅಭಿಪ್ರಾಯ ನಿರೂಪಕರು ಹಾಗೂ ಪತ್ರಕರ್ತರೂ ಮೋದಿ ನಿಂದನೆಯ ಗ್ಯಾಂಗ್‌ಗೇ ಸೇರಿದವರು. ಈ ಬಾರಿ ನರೇಂದ್ರ ಮೋದಿ ಕಾಂಗ್ರೆಸ್ಸಿಗರನ್ನು ಅಪ್ರಸ್ತುತರನ್ನಾಗಿಸಿಬಿಟ್ಟರಲ್ಲ ಅಂತ ನಾವು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತೇವೆ. ಆದರೆ ಇದಕ್ಕೂ ಮೀರಿ, ನರೇಂದ್ರ ಮೋದಿ ಅವರು ತಮ್ಮ ನಿಂದಕರನ್ನು, ಸೆಕ್ಯುಲರ್ ಪಾಳೆಯದ ಬೌದ್ಧಿಕವರ್ಗವನ್ನು ಅಪ್ರಸ್ತುತರನ್ನಾಗಿಸಿದ ರೀತಿ, ಅವರಿಗೆಲ್ಲ ಅವರ ಸ್ಥಾನವೇನೆಂಬುದನ್ನು ಮನದಟ್ಟು ಮಾಡಿಕೊಟ್ಟ ಬಗೆ ಬಹಳ ರೋಚಕವಾಗಿದೆ.
ಹಾಗೆ ನೋಡಿದರೆ, ಕಾಂಗ್ರೆಸ್‌ಗಿಂತ ವ್ಯಾಪಕವಾಗಿ ಮೋದಿ ನಿಂದನೆ ಮಾಡಿಕೊಂಡುಬಂದ ಕುಖ್ಯಾತಿ ಸಲ್ಲಬೇಕಿರುವುದು ಈ ಬೌದ್ಧಿಕ ವರ್ಗದವರಿಗೇ. ಹೋಗಲಿ, ಇವರೆಲ್ಲ ನರೇಂದ್ರ ಮೋದಿ ಅವರನ್ನು ಇಷ್ಟೊಂದು ಉತ್ಕಂಟಿತರಾಗಿ ವಿರೋಧಿಸಿಕೊಂಡು ಬರುವುದಕ್ಕೆ ಏನೆಲ್ಲ ಕಾರಣಗಳಿದ್ದವು? ಹಾಡಿದ್ದೇ ಹಾಡು ಕಿಸಬಾಯಿ ದಾಸ ಎಂಬಂತೆ, 2002ರ ಗುಜರಾತ್ ಗಲಭೆಯ ಸಂಗತಿ ಬಿಟ್ಟರೆ ಇವರಲ್ಲಿ ಚರ್ಚಿಸುವುದಕ್ಕೆ ಯಾವ ವಿಷಯಗಳೂ ಇರಲಿಲ್ಲ. ದೇಶದಲ್ಲಿ ಇನ್ಯಾವ ಕೋಮುಗಲಭೆಗಳೂ ನಡೆದೇ ಇಲ್ಲ ಅಥವಾ ಹಾಗೆ ಕೋಮುಗಲಭೆ ನಡೆದಲ್ಲೆಲ್ಲ ಅಲ್ಲಿನ ಮುಖ್ಯಮಂತ್ರಿಯನ್ನು ಗಲ್ಲಿಗೇರಿಸಲಾಗಿದೆ ಎಂಬಂತೆ ಇವರು ಸೋಗು ಹಾಕಿದರು. ನರೇಂದ್ರ ಮೋದಿಯವರೇ ಮುಂದೆ ನಿಂತು ಮುಸಲ್ಮಾನರನ್ನು ಕೊಲ್ಲಿಸಿದ್ದಾರೆ ಎಂಬಷ್ಟರಮಟ್ಟಿಗೆ ಇವರು ಸುಳ್ಳೇಸುಳ್ಳು ಬರೆದರು. ಅಷ್ಟೆಲ್ಲ ಅಪಪ್ರಚಾರದ ನಂತರವೂ ಗುಜರಾತ್‌ನ ಸ್ಥಳೀಯ ಸಂಸ್ಥೆ, ವಿಧಾನಸಭೆ ಚುನಾವಣೆಗಳಲ್ಲೆಲ್ಲ ಮೋದಿ ಭರ್ಜರಿ ಗೆಲುವನ್ನೇ ದಾಖಲಿಸಿದರು. ಆಗಲೂ ಈ ಬೌದ್ಧಿಕ ವರ್ಗ ನ್ಯಾಯಾಧೀಶರಂತೆ ಆಡುವುದನ್ನು ಬಿಡಲಿಲ್ಲ. ಬಿಜೆಪಿಯು ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿಸಿದಾಗ ಇವರೆಲ್ಲ ಸೇರಿಕೊಂಡು ಹೊಡೆದ ಬೊಬ್ಬೆ ಎಂದರೆ, 'ನರೇಂದ್ರ ಮೋದಿಯವರಿಗೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ದೇಶ ನಡೆಸುವ ಶಕ್ತಿ ಇಲ್ಲವೇ ಇಲ್ಲ. ಅವರಿಗೆ ಯಾವ ಮೈತ್ರಿಯೂ ಸಿಗೊಲ್ಲ. ಭಾರತವನ್ನು ಆಳುವುದೆಂದರೆ ಗುಜರಾತ್ ಆಳಿದಂತೆ ಅಲ್ಲ...' ಕಾಂಗ್ರೆಸ್ಸಿಗರಂತೆ ಹಿಟ್ಲರ್- ಫ್ಯಾಸಿಸ್ಟ್ ಎಂದೆಲ್ಲ ಮೋದಿಯವರನ್ನು ನೇರವಾಗಿ ಜರಿಯಲಿಲ್ಲ ಎಂಬುದನ್ನು ಬಿಟ್ಟರೆ, ಅವರೊಬ್ಬ ವಿಭಜಕ ಶಕ್ತಿ ಎಂದು ಬಿಂಬಿಸುವುದಕ್ಕೆ ಮಾಡಬೇಕಾದ ಯಾವ ಪ್ರಯತ್ನವನ್ನೂ ಈ ವರ್ಗ ಬಿಡಲಿಲ್ಲ. ಇವ್ಯಾವುದಕ್ಕೂ ಉತ್ತರಿಸಲು ಹೋಗದ ಮೋದಿ, ಜನರಿಗೆ ಕನಸು ಕಾಣುವುದನ್ನು ಕಲಿಸುತ್ತ ಸಾಗಿದರು. 'ಒಳ್ಳೆಯ ದಿನಗಳು ಬರಲಿವೆ' ಎಂಬ ನಿಚ್ಚಳ ಭರವಸೆಯನ್ನೇ ಅಪ್ಪಿಕೊಂಡು ಕನಸುತ್ತಿದ್ದ ಜನರ ಮನಸ್ಸಿಗೆ ಸೆಕ್ಯುಲರ್ ಬುದ್ಧಿಜೀವಿಗಳ ಯಾವ ಕರ್ಕಶಗಳೂ ತಾಗಲಿಲ್ಲ. ಮೋದಿಯವರನ್ನು ಬಲಿಹಾಕಲು ಹೊರಟವರೆಲ್ಲ ತಾವೇ ಅಪ್ರಸ್ತುತರಾಗಿಬಿಟ್ಟರು.
ಇದೀಗ ಬುದ್ಧಿಜೀವಿಗಳೆಲ್ಲ ನಿಧಾನಕ್ಕೆ ಮೋದಿ ಹೊಗಳಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಗೆದ್ದೆತ್ತಿನ ಬಾಲ ಹಿಡಿಯುವ ಅನುಮಾನಾಸ್ಪದ ಟ್ರೆಂಡ್‌ನಂತೆ ಕಾಣುತ್ತಿದ್ದರೂ, ಯಾರಾದರೂ ತಮ್ಮ ಪೂರ್ವಗ್ರಹಪೀಡಿತ ಅಭಿಪ್ರಾಯಗಳನ್ನು ಬದಲಿಸಿಕೊಂಡು ವಾಸ್ತವದ ಹಾದಿಯಲ್ಲಿ ಸಾಗುತ್ತಾರೆಂದಾದರೆ ಅದನ್ನು ಸ್ವಾಗತಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ನೋಡುವುದಾದರೆ, ಹೀನಾಯ ಸೋಲಿನ ನಂತರವೂ ಅಹಂಕಾರದ ಕೋಟೆಯಲ್ಲೇ ಇರುವ ಕಾಂಗ್ರೆಸ್ಸಿಗರಿಗಿಂತ ಬುದ್ಧಿಜೀವಿಗಳ ಸ್ಥಿತಿ ಉತ್ತಮವಾಗಿದೆ. ಇದು ಮಾಧ್ಯಮ ಮತ್ತು ಬೌದ್ಧಿಕ ವರ್ಗದ ಆತ್ಮವಿಮರ್ಶೆಗೆ ಮುನ್ನುಡಿಯಾಗುವುದಾದರೆ ಭೇಷ್. 'ಮೋದಿ ನನ್ನಂಥ ಉದಾರವಾದಿಗಳನ್ನು ಸೋಲಿಸಿದ್ದು ಹೇಗೆ' ಎಂಬ ಶೀರ್ಷಿಕೆಯಲ್ಲಿ ಶಿವ ವಿಶ್ವನಾಥನ್ ಇತ್ತೀಚೆಗೆ 'ಹಿಂದು' ಪತ್ರಿಕೆಯಲ್ಲಿ ಲೇಖನ ಬರೆದಿದ್ದಾರೆ. 'ನಾವು ಎಡಪಂಥೀಯ ಉದಾರವಾದಿಗಳೆಲ್ಲ ಸೆಕ್ಯುಲರಿಸಮ್ ಬಗ್ಗೆ ಅತಿಯಾಗಿ ಮಾತನಾಡಿ ಮೋದಿಯವರನ್ನು ತೆಗಳಿದ್ದು, ಧರ್ಮವನ್ನು ಮೂಢನಂಬಿಕೆ ಅಂತಲ್ಲದೇ ಜೀವನವಿಧಾನವಾಗಿ ಕಂಡ ಮಧ್ಯಮವರ್ಗದವರಲ್ಲಿ ರೇಜಿಗೆ ಹುಟ್ಟಿಸಿತು' ಅಂತ ಜ್ಞಾನೋದಯದ ಮಾತುಗಳನ್ನು ಬರೆದಿದ್ದಾರೆ. ಇನ್ನೊಂದೆಡೆ ಮುಂಬೈನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಅರ್ನಬ್, ರಾಜ್‌ದೀಪ್‌ರಂಥ ಘಟಾನುಘಟಿ ಪತ್ರಕರ್ತರೆಲ್ಲ ಮಾಧ್ಯಮವು ಚುನಾವಣೆಯನ್ನು ತಪ್ಪಾಗಿ ಗ್ರಹಿಸಿತೆಂಬುದನ್ನು ಸೂಚ್ಯವಾಗಿ ಒಪ್ಪಿಕೊಂಡಿದ್ದಾರೆ. ಹಾಗೆಂದು ಸಂಪೂರ್ಣ ಅಹಮಿಕೆಯೇನೂ ಇಳಿದಂತಿಲ್ಲ. ತಮ್ಮನ್ನು ತಾವು ಉದಾರವಾದಿಗಳೆಂದು ಕರೆದುಕೊಳ್ಳುವ ಇವರೆಲ್ಲ ಜನಮಿಡಿತದಿಂದ ಸಂಪೂರ್ಣ ದೂರವಾಗಿದ್ದಾರೆ. ರಾಜಕಾರಣಿಗಳು ಜನರನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಅಂತ ಭರಪೂರ ಟೀಕಿಸುವವರಿಗೆ, ತಾವು ಜನಮಾನಸದಿಂದ ಸಂಪೂರ್ಣ ದೂರವಾಗುತ್ತಿದ್ದೇವೆ ಎಂಬ ಅರಿವು ಇನ್ನೂ ಆಗುತ್ತಿಲ್ಲ.
ಮೋದಿ ಭಾರತದಲ್ಲಿ ಇನ್ನೂ ಸೆಕ್ಯುಲರ್-ಕಮ್ಯುನಲ್ ಚರ್ಚೆ ಮಾಡಿಕೊಂಡಿದ್ದರೆ ಉಳಿಗಾಲವಿಲ್ಲ. ವಿಷಯವೇ ಅಲ್ಲದ ವಿಷಯಗಳನ್ನು ವಿವಾದಾತ್ಮಕವೆನಿಸಿ ಬೌದ್ಧಿಕತೆ ಹೆಸರಲ್ಲಿ ಗಲಾಟೆ ಮಾಡುವ ದಿನಗಳು ಕ್ಷೀಣವಾಗುತ್ತ ಬಂದಿವೆ. ಚುನಾವಣೆ ಪೂರ್ವದಲ್ಲಾದಂತೆ ಈಗಲೂ ಮೋದಿ ನಿರ್ಣಯಿಸಿದ ಕಾರ್ಯಸೂಚಿಗಳ ಮೇಲಷ್ಟೇ ಭಾರತ ಉತ್ಸುಕವಾಗಿದೆ. ಗಂಗಾ ಶುದ್ಧೀಕರಣಕ್ಕೆ ಹೇಗೆಲ್ಲ ಪ್ರಾಯೋಗಿಕಾತ್ಮಕ ಹೆಜ್ಜೆ ಇಡಬಹುದು, ಈಶಾನ್ಯ ರಾಜ್ಯಗಳನ್ನು ಹೊಸ ಶಕ್ತಿಕೇಂದ್ರಗಳನ್ನಾಗಿ ರೂಪಿಸುವುದು ಹೇಗೆ ಎಂಬೆಲ್ಲ ಚರ್ಚೆಗಳ ಜಾಡುಹಿಡಿದರಷ್ಟೇ ಈಗ ಬೆಲೆ. ರೋಚಕತೆ- ನಿಂದನೆಗಳ ಸುತ್ತ ವೃತ್ತಿ ರೂಪಿಸಿಕೊಂಡಿರುವ ಪತ್ರಕರ್ತರು ಮತ್ತು ಬುದ್ಧಿಜೀವಿಗಳು ಅಧ್ಯಯನ ಮತ್ತು ಹೊಸಶಿಸ್ತುಗಳನ್ನು ರೂಢಿಸಿಕೊಳ್ಳಬೇಕಾದ ಅನಿವಾರ್ಯವನ್ನು ಮೋದಿಯುಗ ಸೃಷ್ಟಿಸಲಿದೆ.
ಮೋದಿ ವಿರುದ್ಧ ಕಾಂಗ್ರೆಸ್ ಮಾತ್ರ ಸೋತಿಲ್ಲ. ಸೆಕ್ಯುಲರ್ ಚಿಂತಕ ಕೂಟವೂ ಸೋಲಿನ ಬರೆ ಎಳೆಸಿಕೊಂಡಿದೆ. ಹೀಗಾಗಿ ಆತ್ಮಾವಲೋಕನ ಇವರಿಗೂ ಅನಿವಾರ್ಯ.

-ವಿಶ್ವೇಶ್ವರ ಭಟ್
vbhat@me.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

SCROLL FOR NEXT