ಕಾಲೇಜು ವಿದ್ಯಾರ್ಥಿನಿಯರು (ಸಾಂದರ್ಭಿಕ ಚಿತ್ರ) 
ಅಂಕಣಗಳು

ಕಾಲೇಜಿನ ಗುಣಮಟ್ಟ ಮುಖ್ಯವಲ್ಲ.. ಓದಿನ ಗುಣ ಮಟ್ಟ ಮುಖ್ಯ..!

ಭವಿಷ್ಯದ ಬಗ್ಗೆ ಕೌತುಕ ಮತ್ತು ಹೊಸ ಜಗತ್ತಿಗೆ ತೆರೆದುಕೊಳ್ಳುವ ವಿಸ್ಮಯಗಳು ಈ ಘಟ್ಟವನ್ನು ವಿದ್ಯಾರ್ಥಿಗಳ ಪಾಲಿಗೆ ಮತ್ತಷ್ಟು ರೋಚಕವಾಗಿಸುತ್ತವೆ!

ಹತ್ತನೆಯ ತರಗತಿಯಲ್ಲಿ ತೇರ್ಗಡೆಯಾದ ಎಲ್ಲ ವಿದ್ಯಾರ್ಥಿಗಳಿಗೂ ಅಭಿನಂದನೆಗಳು. ಶಾಲೆಯ ಹಂತವನ್ನು ಮುಗಿಸುವ ಸಂತಸ ಒಂದೆಡೆಯಾದರೆ ಕಾಲೇಜು ಮೆಟ್ಟಲು ಹತ್ತುವ ಹುಮ್ಮಸ್ಸು ಮತ್ತು ಆತಂಕ ಮಿಶ್ರಿತ ಭಾವನೆಗಳು ಇನ್ನೊಂದೆಡೆ. ಇವೆಲ್ಲರ ಜೊತೆಗೆ ಬಂದಿರುವ ಅಂಕಗಳಿಗೆ ಒಳ್ಳೆಯ ಕಾಲೇಜಿನಲ್ಲಿ ಸೀಟು ಸಿಗುತ್ತದೆಯೇ ಎಂಬ ಪ್ರಶ್ನೆ ಬೇರೆ! ಭವಿಷ್ಯದ ಬಗ್ಗೆ ಕೌತುಕ ಮತ್ತು ಹೊಸ ಜಗತ್ತಿಗೆ ತೆರೆದುಕೊಳ್ಳುವ ವಿಸ್ಮಯಗಳು ಈ ಘಟ್ಟವನ್ನು ವಿದ್ಯಾರ್ಥಿಗಳ ಪಾಲಿಗೆ ಮತ್ತಷ್ಟು ರೋಚಕವಾಗಿಸುತ್ತವೆ! ಇಂತಹ ಸಾವಿರ ಗೊಂದಲಗಳ ನಡುವೆ ಯಾವ ವಿಷಯವನ್ನು ಆಯ್ಕೆ ಮಾಡಿಕೊಂಡರೆ ಸೂಕ್ತ ಎಂಬುದರ ಬಗ್ಗೆ ನೂರು ದಿಕ್ಕುಗಳಿಂದ ಬರುವ  ಸಂಬಂಧಿಗಳ ಮತ್ತು ಆಪ್ತರುಗಳ ಸಲಹೆ ಸೂಚನೆಗಳು ಮತ್ತಷ್ಟು ದಿಗಿಲು ಹುಟ್ಟಿಸುತ್ತವೆ!

ಪ್ರತಿಷ್ಠಿತ ಕಾಲೇಜುಗಳಲ್ಲಿ ಎದೆಯೊಡೆಯುವ  ಹೈ ಕಟ್ ಆಫ್ ಗಳು ಮತ್ತು ತಂದೆ ತಾಯಿಯರ ಜೇಬು ಕತ್ತರಿಸುವ ದುಬಾರಿ ಶುಲ್ಕಗಳು ವ್ಯಾಸಂಗವೇ ದುಸ್ತರ ಎನಿಸುವಂತೆ ಮಾಡಿಬಿಡುತ್ತವೆ. ಕೆಲ ಪಿ ಯು ಸಿ ಕಾಲೇಜುಗಳಲ್ಲಿ ಅದರಲ್ಲೂ ವಿಜ್ಞಾನ ವಿಷಯಕ್ಕೆ ಪ್ರವೇಶ ಪಡೆಯಲು ಶಾಸಕರ, ಸಂಸದರ ಶಿಫಾರಸನ್ನು ಪಡೆಯುವಷ್ಟರ ಮಟ್ಟಿಗೆ ಬೇಡಿಕೆ ಇದೆ. ಇಂತಹ ಸಮಯದಲ್ಲಿ ಕಾಲೇಜು ಶಿಕ್ಷಣವು ಸಿರಿವಂತರ ಮತ್ತು ಅಧಿಕಾರಸ್ಥರ ಸೊತ್ತು ಎಂಬ ಭಾವನೆ ಬರುವುದು ಸಹಜ. ಆದರೆ ಇವೇ ಕಾರಣಗಳಿಗಾಗಿ ಆತಂಕಕ್ಕೊಳಗಾಗುವ ಅಥವಾ  ಹತಾಶರಾಗುವ ಅವಶ್ಯಕತೆಯಿಲ್ಲ. ಕಾಲೇಜು ಆಯ್ಕೆ ಮಾಡುವ ಮುನ್ನ ಗಮನಿಸಬೇಕಾದದ್ದು ಕೆಳಗಿನ ಮೂರು ಅಂಶಗಳನ್ನು ಮಾತ್ರ.

ಕಾಲೇಜಿನಲ್ಲಿ ಒಳ್ಳೆಯ ಗ್ರಂಥಾಲಯ ಮತ್ತು ಪ್ರಯೋಗಾಲಯಗ ಸೌಲಭ್ಯಗಳಿವೆಯೇ ಮತ್ತು ಉತ್ತಮ ಪುಸ್ತಕ ಸಂಗ್ರಹವಿದೆಯೇ?

ಸಮಯಕ್ಕೆ ಸರಿಯಾಗಿ ತರಗತಿಗಳು ನಡೆಯುತ್ತವೆಯೇ?

ಕಾಲೇಜಿನಲ್ಲಿ ಪ್ರತಿವರ್ಷ ಶೇಕಡಾವಾರು ಫಲಿತಾಂಶ (Minimum Pass percentage) ಉತ್ತಮವಾಗಿದೆಯೇ?

ಇವು ಮೂರು ಪ್ರಶ್ನೆಗಳಿಗೆ ಉತ್ತರ ಹೌದಾದೆಂದಲ್ಲಿ ಅದೇ ಉತ್ತಮ ಕಾಲೇಜು! ಸಾಕಷ್ಟು ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿಯೂ ಸಹ ಉತ್ತಮ ಸೌಲಭ್ಯಗಳಿವೆ. ಈ ಕಾಲೇಜುಗಳಿಗೆ ಪರಿಣಿತಿಯುಳ್ಳ ಉಪನ್ಯಾಸಕರನ್ನು ಕಠಿಣ ಪರೀಕ್ಷೆಯ ಮೂಲಕ ಸರಕಾರವು ಆಯ್ಕೆ ಮಾಡಿ ನೇಮಿಸುತ್ತದೆ. ಸರಕಾರಿ ಶಿಕ್ಷಣ ಸಂಸ್ಥೆಗಳೆಂದರೆ ಮೂಗು ಮುರಿಯುವವರು ಈ ಬಾರಿ ಹತ್ತನೆಯ ತರಗತಿಯ ಪರೀಕ್ಷೆಯಲ್ಲಿ ಎಲ್ಲ ಸರಕಾರಿ ಶಾಲೆಗಳು ಶೇ.ನೂರರಷ್ಟು ಫಲಿತಾಂಶ ಗಳಿಸಿರುವುದನ್ನು ಗಮನಿಸಬೇಕು.

ಯಾವ ಕಾಲೇಜಿನಲ್ಲಿ ಪ್ರವೇಶ ಗಳಿಸಿದರೂ ಕಡೆಗೆ ಹೆಚ್ಚು ಅಂಕಗಳಿಸಲು ಗಣನೆಗೆ ಬರುವುದೆಂದರೆ ವಿದ್ಯಾರ್ಥಿಯು ತನ್ನ ಓದಿನಲ್ಲಿ ಎಷ್ಟು ಶ್ರದ್ಧೆಯನ್ನು ತಾಳುತ್ತಾನೆ ಎಂಬುದು. ಸರಿಯಾದ ಗುರಿಯನ್ನಿಟ್ಟುಕೊಂಡು ಗಮನವಹಿಸಿ ಓದಿದರೆ ಒಳ್ಳೆಯ ಅಂಕ ಗಳಿಸುವುದು ಕಷ್ಟವೇನೂ ಅಲ್ಲ. ಪ್ರತಿಷ್ಟಿತ ಕಾಲೇಜುಗಳಲ್ಲಿ ಲಕ್ಷಾಂತರ ರೂಪಾಯಿ ಶುಲ್ಕ ತೆತ್ತು ಓದಿನಲ್ಲಿ ಶ್ರದ್ಧೆಯಿಲ್ಲದೇ ಫೇಲಾದವರಿದ್ದಾರೆ. ಸರಕಾರಿ ಶಾಲೆಗಳಲ್ಲಿ ಶ್ರದ್ಧೆಯಿಂದ ಓದಿ ಒಳ್ಳೆಯ ಭವಿಷ್ಯ ರೂಪಿಸಿಕೊಂಡವರಿದ್ದಾರೆ. ಕಾಲೇಜಿನ ಹಂತದಲ್ಲಿ ಉಪನ್ಯಾಸಕರು ಕೇವಲ ಮಾರ್ಗದರ್ಶಕರಾಗಿ ಇರುತ್ತಾರೆ. ಸ್ವಂತ ಕಲಿಕೆಯನ್ನೇ ಹೆಚ್ಚು ಆಶ್ರಯಿಸಬೇಕಾಗುತ್ತದೆ. ಮೊದಲನೆಯ ದಿನದಿಂದಲೇ ಓದಿನ ಕಡೆ ಒತ್ತು ಕೊಟ್ಟು ಮುಂದುವರಿಯಬೇಕು. ಈಗ ಮೊದಲಿನಂತೆ ಪಿ ಯು ಸಿ ಗೆ ನೂರೆಂಟು ಲೇಖಕರ ಪುಸ್ತಕಗಳಿಲ್ಲ. ಸರಕಾರವೇ ನಿಗದಿಪಡಿಸಿದ ಪಠ್ಯ ಪುಸ್ತಕಗಳಿರುವುದರಿಂದ ಮೊದಲಿನಷ್ಟು ಶ್ರಮ ಪಡಬೇಕಾಗಿಲ್ಲ. ಗ್ರಂಥಾಲಯ ಸೌಲಭ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ದಿನಕ್ಕೊಮ್ಮೆಯಾದರೂ ಭೇಟಿಕೊಡುವ ಅಭ್ಯಾಸವಿದ್ದರೆ ಒಳಿತು. ಕಲಾ ಮತ್ತು ವಾಣಿಜ್ಯ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದರೆ ಪಠ್ಯಕ್ರಮವನ್ನು ಇಟ್ಟುಕೊಂಡು ಸ್ವಂತ ನೋಟ್ಸ್ ಗಳನ್ನು ತಯಾರಿಮಾಡಿಟ್ಟುಕೊಳ್ಳುವ ಅಭ್ಯಾಸ ಬಹಳ ಉತ್ತಮ.  ಆಗ ಶಿಕ್ಷಕರ ಪಾಠವನ್ನು ಅನುಸರಿಸುವುದು ಸುಲಭವಾಗುತ್ತದೆ. ವಿಜ್ಞಾನದ ವಿದ್ಯಾರ್ಥಿಗಳು ಭೌತಶಾಸ್ತ್ರ ಮತ್ತು ಗಣಿತದ ಸೂತ್ರಗಳನ್ನು ಮೊದಲೇ ಮನನ ಮಾಡಿಕೊಂಡು ಒಂದೆರಡು ಮಾದರಿ ಲೆಕ್ಕಗಳನ್ನು ಬಿಡಿಸಲು ಯತ್ನಿಸಿದ್ದಲ್ಲಿ ಶಿಕ್ಷಕರು ಪಾಠ ಮಾಡುವ ದಿನ ಚರ್ಚಿಸಲು ಮತ್ತು ವಿಷಯವನ್ನು ಆಳವಾಗಿ ತಿಳಿದುಕೊಳ್ಳಲು ಸಹಾಯಕವಾಗುತ್ತದೆ.

 ಮುಖ್ಯವಾಗಿ ಎಲ್ಲರೂ ಮಾಡುವ ಅತೀ ದೊಡ್ಡ ತಪ್ಪೆಂದರೆ ನೌಕರಿಗಾಗಿಯೇ ಓದುವುದು ಮತ್ತು ಅದಕ್ಕಾಗಿಯೇ ವಿಷಯವನ್ನು ಆಯ್ಕೆ ಮಾಡಿಕೊಳ್ಳುವುದು! ಸಾಮಾಜಿಕ ಪ್ರತಿಷ್ಟೆಗಾಗಿ ಮತ್ತು ಒತ್ತಾಯಕ್ಕಾಗಿ ಅಭಿರುಚಿಯನ್ನು ಪಣಕ್ಕಿಡುವುದು ತರವಲ್ಲ. ತಮ್ಮ ಅಭಿರುಚಿಗೆ ತಕ್ಕಂತೆ ಹಿರಿಯರೊಡನೆ ಚರ್ಚಿಸಿ ಭವಿಷ್ಯವನ್ನು ಚಿಂತಿಸಿ ನಿರ್ದಿಷ್ಟ ಗುರಿಯನ್ನು ಆಯ್ಕೆ ಮಾಡಿಕೊಂಡು ತಕ್ಕ ವಿಷಯವನ್ನು ಆಯ್ಕೆ ಮಾಡಿಕೊಳ್ಳುವುದು ಉಚಿತ. ನೆನಪಿರಲಿ ಜೀವನಕ್ಕೆ ಪೂರಕವಾಗಿ ಓದು ಮತ್ತು ನೌಕರಿಗಳಿರಬೇಕೇ ಹೊರತು ನೌಕರಿಗೆ ಪೂರಕವಾಗಿ ಜೀವನವಲ್ಲ!

-ಸಿಂಧು

ಮುಂದಿನ ವಾರ: ಹದಿಹರೆಯದಲ್ಲಿ ಮನವೆಂಬ ಮರ್ಕಟನ ಮೇಲೆ ಹತೋಟಿ..

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT