ಅಂಕಣಗಳು

ನಿಮಗೆ ಗೊತ್ತಿಲ್ಲದೇ ನಿಮ್ಮ ಮನಸ್ಸನ್ನು ಮಾರಿ ಹಣ ಮಾಡಿಕೊಳ್ಳುತ್ತವೆ ಈ ದೈತ್ಯ ಕಂಪನಿಗಳು

ನಮ್ಮಿಂದ ಕೊಂಚವೂ ಹಣ ಪಡೆಯದೇ ಕೋಟ್ಯಂತರ ಜನರಿಗೆ ಈ ಕಂಪನಿಗಳು ಸೇವೆ ಒದಗಿಸುತ್ತಿರುವುದು ಹೇಗೆ?

ನಾವು ಹುಡುಕುವ ಗೂಗಲ್ ಉಚಿತ. ಇವರು ನಮ್ಮಿಂದ ಅಂದರೆ ಬಳಕೆದಾರರಿಂದ ಹಣ ಪಡೆಯುವುದಿಲ್ಲ. ಫೇಸ್ ಬುಕ್ ನ ಬಳಕೆ ಉಚಿತ. ಇವರೂ ನಮ್ಮಿಂದ ಹಣ ಪಡೆಯುವುದಿಲ್ಲ. ವಾಟ್ಸಾಪ್ ಪ್ರತಿ ವರ್ಷ 50 ರೂಪಾಯಿ ಕೊಡಿ ಎಂದು ಕೇಳುತ್ತದಾದರೂ ಹಣ ಕೊಡದೆಯೇ ಬಳಕೆ ಮುಂದುವರಿದಿದೆ. ನಮ್ಮಿಂದ ಕೊಂಚವೂ ಹಣ ಪಡೆಯದೇ ಕೋಟ್ಯಂತರ ಜನರಿಗೆ ಈ ಕಂಪನಿಗಳು ಸೇವೆ ಒದಗಿಸುತ್ತಿರುವುದು ಹೇಗೆ? ಉಚಿತ ಸೇವೆ ಒದಗಿಸುವ ಮೂಲಕವೇ ನೂರಾರು ಕೋಟಿ ರೂಪಾಯಿಗಳ ಲಾಭ ಮಾಡುತ್ತಿರುವುದು ಹೇಗೆ?

  ಟಿವಿಯ ಉದಾಹರಣೆ ತೆಗೆದುಕೊಳ್ಳೋಣ. ಕೆಲ ಚಾನಲ್ ಗಳು ತಿಂಗಳಿಗೆ ಹತ್ತೋ ಇಪ್ಪತ್ತೋ ರೂಪಾಯಿ ಶುಲ್ಕತೆಗೆದುಕೊಳ್ಳುತ್ತವೆ. ಉಳಿದೆ ಬಹುತೇಕ ಚಾನಲ್ ಗಳು ಉಚಿತ ಸೇವೆ ಒದಗಿಸುತ್ತವೆ. ಈ ಚಾನೆಲ್ ಗಳಿಗೆ ಹಣ ಬರುವುದು ಜಾಹೀರಾತಿನ ಮೂಲಕ ಎಂಬುದು ಎಲ್ಲರಿಗೂ ತಿಳಿದದ್ದೇ.  ಮಕ್ಕಳ ಚಾನಲ್ ಗಳಲ್ಲಿ ಮತ್ತು ಮಕ್ಕಳ ಕಾರ್ಯಕ್ರಮಗಳಲ್ಲಿ ಚಾಕಲೇಟ್, ಹಾಲು, ಶಕ್ತಿ ಪೇಯಗಳ ಜಾಹೀರಾತು ಬಂದರೆ, ಸಂಜೆ ಹೆಣ್ಣುಮಕ್ಕಳು ನೋಡುವ ದಾರಾವಾಹಿಗಳಲ್ಲಿ ಬಟ್ಟೆ ಬರೆ, ಟೂತ್ ಪೇಸ್ಟ್, ಒಡವೆ, ಪಾತ್ರೆ ತಿಕ್ಕುವ ಜೆಲ್, ಬಟ್ಟೆ ಸೋಪು ಇತ್ಯಾದಿಗಳ ಜಾಹೀರಾತು ಬರುತ್ತದೆ. ಗಂಡಸರು ಹೆಚ್ಚಾಗಿ ನೋಡುವ ಕಾರ್ಯಕ್ರಮಗಳಾದ ನ್ಯೂಸ್ ಚಾನಲ್ ಗಳಲ್ಲಿ ಶೇರ್ ಗಳು, ಹೂಡಿಕೆಯ ಬಾಂಡ್ ಗಳು, ಸಾಲ, ಬ್ಯಾಂಕ್, ಮೋಟಾರುಗಳ ಜಾಹೀರಾತು ಹೆಚ್ಚಾಗಿ ಬರುತ್ತವೆ. ಇಲ್ಲಿ ಒಂದು ಅಂದಾಜಿನ ಮೇಲೆ ಕೆಲಸ ನಡೆಯುತ್ತವೆ. ಈ ಕಾರ್ಯಕ್ರಮವನ್ನು ಯಾವ ವರ್ಗದ ಜನ, ಯಾವ ವಯಸ್ಸಿನ ಜನ ಹೆಚ್ಚಾಗಿ ನೋಡುತ್ತಾರೆ ಎಂದು ಅಂದಾಜಿಸಿಕೊಂಡು ಅದಕ್ಕೆ ತಕ್ಕಂತೆ ಜಾಹೀರಾತುಗಳನ್ನು ವಿನ್ಯಾಸಗೊಳಿಸಿ ಪ್ರಸಾರ ಮಾಡಲಾಗುತ್ತದೆ.

 ಇಂಟರ್ ನೆಟ್ ನಲ್ಲಿ ಗೂಗಲ್ ಮತ್ತು ಫೇಸ್-ಬುಕ್ ದೈತ್ಯಗಳು ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗುತ್ತವೆ. ಇಲ್ಲಿ ಯಾವ ಯಾವ ಕಾರ್ಯಕ್ರಮವನ್ನು ಯಾರು ವೀಕ್ಷಿಸುತ್ತಾರೆ ಅಂದರೆ ಯಾವ ಜಾಲತಾಣಕ್ಕೆ ಯಾರು ಭೇಟಿಕೊಡುತ್ತಾರೆ ಎಂದು ಕರಾರುವಾಕ್ಕಾಗಿ ಕಂಪನಿಗಳಿಗೆ ಗೊತ್ತಿರುತ್ತದೆ! ಅದಕ್ಕೆ ತಕ್ಕಂತೆ ಆ ವ್ಯಕ್ತಿಗೆ ಜಾಹೀರಾತನ್ನು ಪ್ರದರ್ಶಿಸಲಾಗುತ್ತದೆ. ಅಂದರೆ ನೀವು ಗೂಗಲ್ ನಲ್ಲಿ ಕೆಲ ವಿಷಯಗಳನ್ನು ಹುಡುಕುತ್ತೀರಿ. ಗೂಗಲ್ ಪ್ರತಿ ಸಾರಿಯೂ ನೀವು ಯಾವ ವಿಷಯವನ್ನು ಹುಡುಕಿದಿರಿ, ಎಲ್ಲೆಲ್ಲಿ ಭೇಟಿ ಕೊಟ್ಟಿರಿ, ನಿಮಗೆ ಆಸಕ್ತಿ ಇರುವ ವಿಷಯಗಳು ಯಾವವು ಎಂಬುದನ್ನು ಗಮನಿಸುತ್ತದೆ. ಗಮನಿಸಿ ನಿಮ್ಮ ಪ್ರತಿ ಚಲನವಲನವನ್ನು ಪಟ್ಟಿ ಮಾಡುತ್ತದೆ. ಪಟ್ಟಿ ಮಾಡಿ ತಮ್ಮ ಸರ್ವರ್ ನಲ್ಲಿ ಶೇಖರಿಸಿಡುತ್ತದೆ. ನಮ್ಮ ಆಸಕ್ತಿ ಅನಾಸಕ್ತಿ ಮತ್ತು ಚಲನವಲನಗಳ ಸಂಪೂರ್ಣ ವಿವರವನ್ನು ಜಾಹೀರಾತು ಕಂಪನಿಗಳಿಗೆ ಮಾರಲಾಗುತ್ತದೆ!  ಫೇಸ್ ಬುಕ್ ಸಹ ಇದೇ ಕೆಲಸವನ್ನು ಇನ್ನೊಂದು ರೀತಿಯಲ್ಲಿ ಮಾಡುತ್ತದೆ. ನೀವು ಲೈಕ್ ಒತ್ತುವ ವಿಷಯಗಳು, ಕಮೆಂಟ್ ಮತ್ತು ಶೇರ್ ಮಾಡುವ ವಿಷಯಗಳು ನಿಮ್ಮ ಆಸಕ್ತಿಗಳನ್ನು ಬಿಂಬಿಸುತ್ತವೆ. ಅದರ ಪ್ರಕಾರ ನಿಮ್ಮ ಒಳಹೊರಗು, ಅಂತರಂಗ ಬಹಿರಂಗಗಳನ್ನು ಪಟ್ಟಿಮಾಡಿ ಜಾಹೀರಾತು ಕಂಪನಿಗಳಿಗೆ ಕೊಡಲಾಗುತ್ತದೆ. ಈ ಪಟ್ಟಿಗಾಗಿ ಜಾಹೀರಾತುಗಳು ಕೋಟಿ ಕೋಟಿ ಸುರಿಯಲು ತಯಾರಾಗಿರುತ್ತವೆ.

  ಈ ಪಟ್ಟಿಯ ಮುಖಾಂತರ ಜಾಹೀರಾತು ನೀಡುವವರು ನಮಗೆ ಇಂತಿಂತಹ ಆಸಕ್ತಿ ಉಳ್ಳ ಜನರಿಗೆ ತಮ್ಮ ಉತ್ಪನ್ನಗಳ ಜಾಹೀರಾತನ್ನು ತೋರಿಸಬೇಕೆಂದು ಒಪ್ಪಂದ ಮಾಡಿಕೊಳ್ಳುತ್ತಾರೆ. ಆ ಒಪ್ಪಂದದಂತೆ ಆಯಾ ಆಸಕ್ತಿಯ ಜನರು ಲಾಗಿನ್ ಆದಾಗ ಅವರ ಆಸಕ್ತಿಗೆ ತಕ್ಕ ಜಾಹೀರಾತು ಕಾಣುತ್ತದೆ.

 ಪ್ರತಿಯೊಬ್ಬ ಮನುಷ್ಯನಿಗೂ ಆತನ ಆಸಕ್ತಿಗೆ ತಕ್ಕಂತೆ ಜಾಹೀರಾತು ತೋರಿಸುವುದು ಇಂಟರ್ ನೆಟ್ ನ ಹೆಗ್ಗಳಿಕೆ! ಟಿವಿಯಲ್ಲಿ ನಿಮಗೆ ಸಾಲ ಅಥವಾ ಬ್ಯಾಂಕ್ ಬಗ್ಗೆ ಆಸಕ್ತಿ ಇರಲಿ ಬಿಡಲಿ ಆ ಜಾಹೀರಾತನ್ನು ನೋಡಲೇಬೇಕು. ಆದರೆ ಇಂಟರ್ ನೆಟ್ ನಲ್ಲಿ ನಿಮ್ಮ ಹಿಂದಿನ ಇತಿಹಾಸವನ್ನೆಲ್ಲಾ ಆಧರಿಸಿ ಜಾಹೀರಾತನ್ನು ಪ್ರದರ್ಶಿಸಲಾಗುತ್ತದೆ. ಉದಾಹರಣೆಗೆ ನೀವೊಮ್ಮೆ ಹೊಸ ಮನೆ ಕೊಳ್ಳಲು ಗೂಗಲ್ ನಲ್ಲಿ ಹುಡುಕಿದಿರಿ ಎಂದುಕೊಳ್ಳಿ. ಈ ವಿಷಯ ರಿಯಲ್ ಎಸ್ಟೇಟ್ ಕಂಪನಿಗಳಿಗೆ ತಿಳಿಯುತ್ತದೆ. ವಿವಿಧ ರಿಯಲ್ ಎಸ್ಟೇಟ್ ಕಂಪನಿಗಳು ತಮ್ಮ ಜಾಹೀರಾತನ್ನು ನಿಮಗೆ ಮತ್ತು ನಿಮ್ಮ ಹಾಗೆ ಹುಡುಕುವವರಿಗೆ ತೋರಿಸಲು ಅದಾಗಲೇ ಗೂಗಲ್ ಗೆ ಹಣ ನೀಡಿರುತ್ತವೆ. ನೀವು ಗೂಗಲ್ ನ ಜೊತೆ ಹೊಂದಾಣಿಕೆ ಮಾಡಿಕೊಂಡ ಯಾವುದೇ ಸಾಮಂತ ವೆಬ್ ಸೈಟ್ ಗಳಿಗೆ ಭೇಟಿ ನೀಡಿದರೂ ವಿವಿಧ ರಿಯಲ್ ಎಸ್ಟೇಟ್ ಕಂಪನಿಗಳ ಜಾಹೀರಾತು ಕಾಣುತ್ತವೆ.

 ಹೀಗೆ ಸಾಮಂತ ವೆಬ್ ಸೈಟ್ ಗಳು ಮತ್ತು ಜಾಹೀರಾತುದಾರರು ಇಬ್ಬರಿಂದಲೂ ನಿಮ್ಮನ್ನು ಬೆತ್ತಲಾಗಿಸಿ ಹಣ ಪಡೆಯುತ್ತದೆ ಗೂಗಲ್! ನಿಮ್ಮ ಸಂಪೂರ್ಣ ಅಂತರಂಗವು ನಿಮ್ಮ ಹೆಂಡತಿಗಿಂತ ಗೂಗಲ್ ಗೆ ಚೆನ್ನಾಗಿ ಗೊತ್ತು. ನಿಮಗೆ ಗೊತ್ತಿಲ್ಲದೇ ಈ ಮಾಹಿತಿಯನ್ನು ಪಡೆದು ಹಂಚಿ ನಿಮ್ಮಿಂದಲೇ ಉಪಾಯವಾಗಿ ಈ ಕಂಪನಿಗಳು ಹಣ ಮಾಡುತ್ತವೆ. ಇನ್ನು ಮುಂದೆ ಯಾವುದೇ ಮಾಹಿತಿಯನ್ನು ಹುಡುಕುವಾಗ ಹುಷಾರಾಗಿರಿ. ಸೈಬರ್ ಕಣ್ಣುಗಳು ನಿಮ್ಮನ್ನು ಕ್ಷಣಕ್ಷಣಕ್ಕೂ ದಿಟ್ಟಿಸುತ್ತಿವೆ ಎಂಬುದು ನೆನಪಿರಲಿ. ಹೆಂಡತಿಯಿಂದ ಸುಳ್ಳು ಹೇಳಿ ಬಚಾವಾಗಬಹುದು ಗೂಗಲ್ ನಿಂದಲ್ಲ, ಏಕೆಂದರೆ ಗೂಗಲ್ ನಿಮ್ಮ ಒಳಮನಸ್ಸನ್ನು ನೇರವಾಗಿ ಹೊಕ್ಕು ಹುಡುಕುತ್ತದೆ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳು ನಾಡು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ TVK ಪಕ್ಷ ಸೇರಿದ ಸೆಂಗೊಟ್ಟೈಯನ್ ವಿಜಯ್

CM ಪಟ್ಟಕ್ಕಾಗಿ ಕಿತ್ತಾಟ: ಡಿಕೆಶಿಗೆ 'ಹೈಕಮಾಂಡ್' ಒಲವು ತೋರಿದ್ರೆ, ಸಿದ್ದರಾಮಯ್ಯರ ಮುಂದಿನ ಪ್ಲಾನ್ ಏನು?

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

450 ಕೋಟಿ ರೂ. ಮೌಲ್ಯದ ಧರ್ಮೇಂದ್ರ ಆಸ್ತಿ ಯಾರ ಪಾಲಾಗುತ್ತೆ? ಕುತೂಹಲ ಕೆರಳಿಸಿದ ಹೇಮಾ ಮಾಲಿನಿ ಪೋಸ್ಟ್!

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

SCROLL FOR NEXT