ಶಿಕ್ಷಣ ವ್ಯವಸ್ಥೆಯು ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಒಂದು ಜನಾಂಗದ ಮತ್ತು ಪೀಳಿಗೆಯ ಏಳಿಗೆ ಯಾವತ್ತಿಗೂ ಶಿಕ್ಷಣದ ಮೇಲೆಯೇ ಅವಲಂಬಿತವಾಗಿರುತ್ತದೆ. ಭಾರತ ದೇಶದ ಶಿಕ್ಷಣ ವ್ಯವಸ್ಥೆಯು ಸ್ವಾತಂತ್ರ ಬಂದು ದಶಕಗಳೇ ಕಳೆದರೂ ಪರಿಷ್ಕೃತವಾಗದೇ ಉಳಿದಿದೆ. ಉಳಿದೆಲ್ಲ ದೇಶಗಳು ಹೊಸ ತಂತ್ರಜ್ಞಾನವನ್ನು ಹೊಸ ಮಾದರಿಗಳನ್ನು ಅಳವಡಿಸಿಕೊಂಡು ಹೊಸ ಪೀಳಿಗೆಯನ್ನು ಸ್ಪರ್ಧಾತ್ಮಕ ಜಗತ್ತಿಗೆ ಸಿದ್ಧಗೊಳಿಸುತ್ತಿರುವಾಗ ಭಾರತದಂತಹ ದೇಶವು ಶಿಕ್ಷಣವನ್ನು ಒಂದು ಮಹತ್ವದ ಕ್ಷೇತ್ರ ಎಂದು ಇಂದಿಗೂ ಗುರುತಿಸದಿರುವುದು ಅತ್ಯಂತ ವಿಷಾದದ ಸಂಗತಿ. ಜನಸಂಖ್ಯೆಯಲ್ಲಿ ಎರಡನೆಯ ಅತಿ ದೊಡ್ಡ ದೇಶ ಎಲ್ಲ ಕ್ಷೇತ್ರಗಳಲ್ಲೂ ಸಾಧನೆಯಲ್ಲಿ ಇದೇ ಕಾರಣದಿಂದ ಅತ್ಯಂತ ಹಿಂದಿದೆ.
ಮೊದಲ ಅತಿ ದೊಡ್ಡ ತೊಡಕೆಂದರೆ ಇನ್ನೂ ಹಳೆಯ ಕಾಲದ ಚಾಕ್ ಪೀಸ್ ಬೋರ್ಡ್ ಪದ್ಧತಿಗೆ ಅಂಟಿಕೊಂಡಿರುವುದು; ಪ್ರಾಯೋಗಿಕ ಬೋಧನೆ ಇಂದಿಗೂ ಕಡಿಮೆ ಇರುವುದು ಹಾಗೂ ಸೈದ್ಧಾಂತಿಕ ಬೋಧನೆಗೇ ಹೆಚ್ಚು ಮಹತ್ವ ಕೊಡುವುದು. ಬರವಣಿಗೆಗೆ 80 ಅಂಕಗಳಿದ್ದರೆ ಪ್ರಾಯೋಗಿಕ ಪರಿಣಿತಿಗೆ ಕೇವಲ 20 ಅಂಕಗಳನ್ನು ನೀಡಲಾಗುತ್ತದೆ. ವಾರಕ್ಕೆ ಆರು ತರಗತಿ ಸಿದ್ಧಾಂತ ಬೋಧನೆಗಿದ್ದರೆ ಪ್ರಯೋಗಕ್ಕೆ ಎರಡು ತಾಸು ಮಾತ್ರ ಮೀಸಲಿರುತ್ತದೆ.ಪ್ರಾಯೋಗಿಕವಾಗಿ ಪರಿಣಿತಿಯನ್ನು ಸಾಧಿಸದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಮನ್ನಣೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಪ್ರಯೋಗಗಳ ಮೂಲಕ ವಿಷಯಗಳ ಆಳಕ್ಕೆ ಇಳಿದು ಅರಿಯುವುದರ ಬದಲಾಗಿ ಸೂತ್ರಗಳನ್ನು ಊರು ಹೊಡೆಯುವುದರಲ್ಲೇ ವಿದ್ಯಾರ್ಥಿಗಳ ಬುದ್ಧಿವಂತಿಕೆ ದುರ್ಬಳಕೆಯಾಗಿ ಹೋಗಿರುತ್ತದೆ.
ಇದರ ಮೇಲೆ ಇತ್ತೀಚೆಗೆ ಟ್ಯೂಷನ್ ಗಳ ಹಾವಳಿ ಅತಿಯಾಗಿ ಹೋಗಿದೆ. ಟ್ಯೂಷನ್ ಗಳ ಮುಖ್ಯ ಉದ್ದೇಶವೆಂದರೆ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳನ್ನು ಗಳಿಸಿಕೊಳ್ಳುವಂತೆ ನೋಡಿಕೊಳ್ಳುವುದು ತನ್ಮೂಲಕ ತಮ್ಮ ಬಿಸಿನೆಸ್ ಅನ್ನು ಹೆಚ್ಚಿಸಿಕೊಳ್ಳುವುದು. ಈ ಟ್ಯೂಷನ್ ಸೆಂಟರ್ ಗಳು ಪರೀಕ್ಷೆಗೆ ತಕ್ಕಂತಹ ತಯಾರಿಗಳನ್ನು ಮಾತ್ರ ಮಾಡಿಕೊಡುವುದರಿಂದ ವಿದ್ಯಾರ್ಥಿಗಳು ಮೂಲ ವಿಷಯಗಳನ್ನು ಪರೀಕ್ಷೆಯ ದೃಷ್ಟಿಯಿಂದ ಮಾತ್ರ ಓದುತ್ತಾರೆ. ಶಾಲೆ ಮುಗಿಯುತ್ತದ್ದಂತೆ ವಿದ್ಯಾರ್ಥಿಗಳು ಸಾಲು ಸಾಲಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಈ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದರಲ್ಲೇ ವಿದ್ಯಾರ್ಥಿಗಳ ಅತ್ಯಮೂಲ್ಯವಾದ ಸೃಜನಶೀಲತೆ ಮತ್ತು ಚಿಂತನಾಶಕ್ತಿ ಕಮರಿಹೋಗಿರುತ್ತದೆ.
ಚಿಕ್ಕದಂದಿನಲ್ಲೇ ಮಕ್ಕಳಲ್ಲಿ ಇದ್ದಿರಬಹುದಾದ ವಿಶೇಷತೆಗಳನ್ನು ಗುರುತಿಸುವಲ್ಲಿ ಸೋಲುವುದು ನಮ್ಮ ವ್ಯವಸ್ಥೆಯ ಮತ್ತೊಂದು ಬಹುದೊಡ್ಡ ಹಿನ್ನಡೆ. ಸಾಂಪ್ರದಾಯಿಕ ಓದನ್ನು ಬದಿಗಿಟ್ಟು ಮುಂದುವರೆದಲ್ಲಿ ಅದೆಂತಹ ಅಪಾಯ ಎದುರಾಗಬಹುದೋ ಎಂಬ ಆತಂಕ ಪೋಷಕರನ್ನು ಕಾಡುತ್ತಿರುತ್ತದೆ.ಇಂಜಿನಿಯರ್ ಅಥವಾ ವೈದ್ಯಕೀಯ ಹೊರತುಪಡಿಸಿದರೆ ಬೇರೆ ಭವಿಷ್ಯವೇ ಇಲ್ಲವೆಂಬ ಅನಿಶ್ಚಿತತೆಯೆಡೆಗೆ ಸಮಾಜ ಸಾಗುತ್ತಿದೆ. ಈ ರೀತಿಯ ವ್ಯವಸ್ಥೆಯಿಂದಾಗಿ ಅತ್ತ ಓದಿದವರೂ ಅಲ್ಲದ ಇತ್ತ ಗಮಾರರೂ ಅಲ್ಲದ ತ್ರಿಶಂಕು ಸ್ಥಿತಿಯಲ್ಲಿರುವ ವಿದ್ಯಾವಂತ ಪೀಳಿಗೆ ತಯಾರಾಗುತ್ತಿದೆ.
ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಅನವಶ್ಯಕ ಹೊರೆಯಾಗಬಹುದಾದ ಅನೇಕ ವಿಷಯಗಳನ್ನು ಪಠ್ಯದಲ್ಲಿ ತೂರಿಸಲಾಗಿದೆ. ಎಲ್ಲೆಡೆ ಒಂದೇ ನುಡಿಯಲ್ಲಿ ಕಲಿಕೆಯಿದ್ದರೆ ಇಲ್ಲಿ ಹಿಂದಿ, ಸಂಸ್ಕೃತದಂತಹ ಕಠಿಣ ಕಡುಬುಗಳನ್ನು ತೂರಿಸಿ ವಿದ್ಯಾರ್ಥಿಗಳಿಗೆ ಕಲಿಕೆಯ ಹೊರೆ ಹೆಚ್ಚಿಸಲಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರವಾದ ಚಿಂತನೆ ನಡೆದು ಮುಂದುವರಿದ ದೇಶಗಳಿಗೆ ಸರಿಸಮನಾದ ಪಠ್ವನ್ನು ಹೊಂದಿಸಿಕೊಳ್ಳದಿದ್ದಲ್ಲಿ ಅತ್ಯಂತ ಅಪಾಯಕಾರಿಯಾದ ಪರಿಸ್ಥಿತಿಗೆ ಈ ದೇಶದ ಭವಿಷ್ಯ ಸಿಕ್ಕಿಕೊಳ್ಳಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos