ರಾಮಚರಿತ್ರೆಯೆಂದು ಕರೆಯಲೆ ? ಎಷ್ಟೆಷ್ಟು ರಾಜರ ಚರಿತ್ರೆ ಕೇಳಿಲ್ಲ ತಾನು ? ಅವರೆಷ್ಟು ವೀರರು; ಅವರೆಷ್ಟು ರಾಜ್ಯ ಗೆದ್ದರು; ಅವರೆಷ್ಟು ಅರಸರ ತಲೆಯಮೇಲೆ ಪಾದವಿಟ್ಟರು; ಇದೇ ತಾನೇ ರಾಜ ಚರಿತ್ರೆ? ಬೇಡ ! ತನ್ನ ರಾಮ ಎಂದೂ ಯಾರಿಗೂ ಅಕಾರಣವಾಗಿ ನೋಯಿಸದಾತ. ತನ್ನ ಪೂರ್ವಿಕರ ಸಾಮ್ರಾಜ್ಯ ಬಿಟ್ಟು ಅಕ್ಕಪಕ್ಕಕ್ಕೆ ಇಂಚೂ ಸರಿದು ರಾಜ್ಯ ವಿಸ್ತರಿಸದಾತ. ತನ್ನನ್ನು ಪ್ರಜಾ ಪ್ರತಿನಿಧಿ ಎಂದುಕೊಂಡಾತ . ಪ್ರಜಾಪ್ರಭುತ್ವದ ಮುಂದಾಳು ಆತ. ಹೋಗಲಿ ರಾಮಕಥೆ ಎನ್ನೋಣವೆ ? ಕಥೆಯೇನೋ ಇದೆ, ಅದು ಪುಣ್ಯ ಗ್ರಹಣವೇ , ನೀತಿಯುಕ್ತವೇ, ಅದು ಅಸಾಧಾರಣ ಕಥೆಯೇ. ಆದರೆ ಕಥೆಯ ಮಿತಿ ಏಕೋ ಸರಿಹೋಗುತ್ತಿಲ್ಲ. ಹರಕು ಪುರಕು ಸೋಮಾರಿ ಕಥೆಗಳು ಜನರ ಬಾಯಲ್ಲಿ ಎಷ್ಟಿಲ್ಲ ? ಏನು ಪ್ರಯೋಜನ ? ಬೇಡ. ಅದು ಕಥೆಯಷ್ಟೇ ಅಲ್ಲ, ಬೇರೆ ಏನೋ ಇದೆ.
ನಾನು ಬರೆದಿರುವುದು ಗದ್ಯವೂ ಅಲ್ಲ , ಪ್ರಬಂಧವೂ ಅಲ್ಲ , ನೀಳ್ಗವಿತೆಯೂ ಅಲ್ಲ , ಅದೊಂದು ಕಾವ್ಯ . ಸರ್ಗಗಳಾಗಿ ವಿಭಜಿಸಿದ್ದೇನೆ . ಅಲಂಕಾರಗಳ ಸೌಮ್ಯ ನಗಗಳನ್ನು ಕಾವ್ಯ ದೇವಿಗೆ ಒಪ್ಪಿಸಿದ್ದೇನೆ . ಮಂದಾನಿಲ ಗತಿಯ ಶೈಲಿ ನನ್ನ ಈ ಕಾವ್ಯಕ್ಕೆ ಇದೆ . ನಾಯಕ , ನಾಯಕಿ , ಪ್ರತಿನಾಯಕ .... ಇತ್ಯಾದಿ ಔಚಿತ್ಯ ಪಾತ್ರ ಪ್ರಪಂಚವಿದೆ . ಹಿತಮಿತವಾದ ರಸಪುಷ್ಟಿಯೂ ಇದೆ . ಅತ್ಯಂತ ಪ್ರಸನ್ನವಾಗಿ ಓದುಗನಿಗೆ ಕಷ್ಟಕೊಡದೆ ಸುಲಭವಾಗಿ ಓದಿಸಿಕೊಂಡೂ ಹೋಗುತ್ತದೆ . ಈ ಎಲ್ಲಕ್ಕಿನ್ನ ಮುಖ್ಯವಾಗಿ ಶ್ರೀರಾಮರ ನಡೆ ಗಮನಾರ್ಹವಾಗಿದೆ . ತಮಗೆ ಬಂದ ಸಂಕಟಗಳಿಗೆ , ಸವಾಲುಗಳಿಗೆ , ಸಮಸ್ಯೆಗಳಿಗೆ ಅವರು ಏನು ಪರಿಹಾರ ಕಂಡುಕೊಂಡರೆಂಬುದು ಪ್ರಮುಖವಾಗಬೇಕಾಗಿದೆ . ಅದೇ ನಮ್ಮ ಅಧ್ಯಯನವಾಗಬೇಕಿದೆ ಕೂಡ . ರಾಮರ ಬದುಕೇ ಒಂದು ನೀತಿಪಾಠ . ಅವರ ನಡೆಯೇ ನಮ್ಮ ಬದುಕಿನ ಬಟ್ಟೆ , ಅವರ ನುಡಿಯೇ ನಮ್ಮ ಜೀವನದ ಮಂತ್ರ ಎಂದಾಗಬೇಕಿದೆ . ಎಂದಮೇಲೆ ನನ್ನ ಕೃತಿ ಒಂದು ಕಾವ್ಯ ; ಮಹಾಕಾವ್ಯ ; ಅದಿಕಾವ್ಯ ; ಅನುಕರಣೀಯ ಕಾವ್ಯ ; ರಸಕಾವ್ಯ ! ಇದು ರಾಮರ ನಡೆ ; ರಾಮರ ಗತಿ ; ರಾಮಧರ್ಮ ; ರಾಮಮಾರ್ಗ ; ರಾಮಪಥ ! ಅದೇ ರಾಮಾಯಣ. ಅದೇ ಅದೇ ಪ್ರಪಂಚ ಪ್ರಥಮ ಕಾವ್ಯರಾಜ ; ಅದೇ ಪುಣ್ಯ ಕಾವ್ಯ ; ಅದೇ ಮಾರ್ಗಕಾವ್ಯ ; ಅದೇ ನವ್ಯಕಾವ್ಯ ; ಅದೇ ನಿತ್ಯಕಾವ್ಯ ; ಅದೇ ಸತ್ಯಕಾವ್ಯ ; ಅದೇ ನಿತ್ಯನೂತನ ಕಾವ್ಯ ; ಅದೇ ರಾಮಾಯಣಂ !
ಈ ನಿರ್ಣಯಕ್ಕೆ ಬರುತ್ತಿದ್ದಂತೆಯೇ ವಾಲ್ಮೀಕಿಗಳಿಗೆ ಅಡಿಯಿಂದ ಮುಡಿಯವರೆಗೆ ರೋಮಾಂಚನ , ಪುಲಕ , ನವಿರು , ಹದಿನಾರರ ಉತ್ಸಾಹ . ಧಿಗ್ಗನೆದ್ದು ಸೀತೆಯ ಗುಡಿಗೆ ಹೋದರು. " ಮಗಳೇ, ನಿನ್ನ ಅಪೇಕ್ಷೆಯಂತೆ ನಾಮಕರಣ ಮಾಡಿದ್ದೇನೆ. ಈ ಅಮರಕಾವ್ಯ ;ಈ ಅದ್ಭುತಕಾವ್ಯ; ಈ ಆನಂದಕಾವ್ಯ ; ಈ ಅಧ್ಯಾತ್ಮಕಾವ್ಯ ; ಈ ತಾತ್ವಿಕ ಕಾವ್ಯ ; ಈ ರಂಜನೀಯ ಕಾವ್ಯದ ಹೆಸರೇ "ಶ್ರೀಮದ್ರಾಮಾಯಣಂ" .
ಬರೆದದ್ದೂ ಆಯಿತು . ಸೀತಾಮಾತೆಯ ಒಪ್ಪಿಗೆಯೂ ದೊರೆಯಿತು . ನಾಮಕರಣವೂ ಆಯಿತು. ಇನ್ನೀಗ ಇದರ ಪ್ರಚಾರ. ಹಣ್ಣಿರುವುದು ತಿನ್ನಲಿಕ್ಕೆ. ಹೂವಿರುವುದು ಮುಡಿಯಲಿಕ್ಕೆ .ಹಾಡಿರುವುದು ಕೇಳಲಿಕ್ಕೆ . ಊಟವಿರುವುದು ಉಣ್ಣಲಿಕ್ಕೆ . ಇದೀಗ ಈ ಕಾವ್ಯವಿರುವುದು ಆಸ್ವಾದಿಸಲಿಕ್ಕೆ ತಾನೇ ? ಆದರೆ ಕಾವ್ಯ ರಸಾಮೃತ ಪಾನಕ್ಕೆ ಪಾಠಕ ಪಂಡಿತ ಪಾಮರರ ಬಳಿಗೆ ಇದನ್ನೊಯ್ಯುವವರಾರು, ಹಾಡುವವರಾರು, ವೀಣೆಗಳಿಗೆ ಅಳವಡಿಸಿ ನುಡಿಸುವವರಾರು ? ಅಪಶಬ್ದವಿರದ ಶುದ್ಧ ಭಾಷಾ ಕೋವಿದರಾರು ? ಆಲಸ್ಯವಿರದ ತರುಣ ತೇಜಸ್ವಿಯಾರು ? ಪ್ರಶ್ನೆಗಳ ಮೇಲೆ ಪ್ರಶ್ನೆಗಳು . ಕಣ್ಣು ಮುಚ್ಚಿ ಯೋಚಿಸುತ್ತಿದ್ದಾಗ ಮೃದು ಸ್ಪರ್ಶ . ಅಕ್ಷಿ ಬಿಚ್ಚಿ ನೋಡಿದರೆ ಕುಶೀಲವರು. ನಮಸ್ಕರಿಸುತ್ತಿದ್ದಾರೆ ಬೆಳಗೆದ್ದು ಬಂದು. ತುಪ್ಪದ ಥಾಲಿಗಳೆರಡೂ ಸುಗಂಧ ಸೂಸುತ್ತ ಮುಂದೆ ಕಂಗೊಳಿಸುತ್ತಿದ್ದಾಗ ತಾನೇಕೆ ಬೆಣ್ಣೆ ಹುಡುಕುತ್ತಿರುವೆ ?
ಬಾಲಕರಿಬ್ಬರನ್ನೂ ನೋಡುತ್ತಿದ್ದರೆ ತದ್ರೂಪಿ ರಾಮರೇ . ಎಷ್ಟು ಮೃದು , ಎಂತಹ ಮಿದುಮಾತು , ಏನು ನಯ , ಏನು ವಿನಯ , ಕಿರಿಯರಿಬ್ಬರೂ ಈಗಾಗಲೇ ವೇದಾಭ್ಯಾಸ ಮಾಡಿದ್ದಾರೆ , ಸಂಗೀತದಲ್ಲಿ ಸನಾಮರಾಗಿದ್ದಾರೆ , ಶಾಸ್ತ್ರ ಬುದ್ಧಿಯೂ ಸಿದ್ಧಿಸಿದೆ . ಕಂಠವೋ ಎಂಥ ಮಧುರ , ಭಾವಗಳ ನಿತ್ಯ ನರ್ತನ ಮೊಗದಲ್ಲಿ . ಘಂಟೆ ಘಂಟೆಗಳು ಹಾಡಿದರೂ ಸುಸ್ತಾಗದ ಕಂಠ , ಬಾಡದ ಮುಖ . ಜೊತೆಗೆ ಅಸ್ತ್ರಶಸ್ತ್ರಗಳಲ್ಲೂ ನಿಪುಣರಾಗಿದ್ದಾರೆ . ಈ ಸಣ್ಣ ವಯಸ್ಸಿಗೇ ಇವರಿಗೆ ಇಷ್ಟೆಲ್ಲ ಹೇಗೆ ಸಾಧ್ಯವಾಯಿತು ? ಇದು ಪ್ರಶ್ನೆಯೇ ಅಲ್ಲ ! ಯಾರ ಮಕ್ಕಳಿವರು ?
ತಲೆ ನೇವರಿಸಿ ಕೇಳಿದರು , " ನಿಮಗೊಂದು ಕಾವ್ಯ ಹೇಳಿಕೊಡಲೇ ? ಕಲಿಯುವಿರಾ ? ಹಾಡುವಿರಾ ? " ಮತ್ತೆ ತಾತನ ಪಾದ ಮುಟ್ಟಿ ಕುಶ ಹೇಳಿದ ; " ಗುರುಗಳೇ , ತಾವು ಆದೇಶವಿತ್ತರೆ ಕಲಿಯುವುದು ಎಷ್ಟರ ಮಾತು ? ಸರಸ್ವತಿ ತಮ್ಮ ಆದೇಶಕ್ಕೆ ಕಾದು ಕುಳಿತಿರುವಾಗ ಆಕೆ ಅದನ್ನು ನಮಗೆ ಅನುಗ್ರಹಿಸಳೇ ? ತಾವು ಅಪ್ಪಣೆ ಕೊಡಿ , ನಮಗಿದು ಅದೃಷ್ಟ". " ಇದು ಶ್ರೀಮದ್ರಾಮಾಯಣಂ . ಇದು ಪುಣ್ಯಕಾವ್ಯ . ಇದು ಧರ್ಮಕಾವ್ಯ . ಇದು ರಸಪೂರ್ಣಕಾವ್ಯ , ಇದು ಧ್ವನಿಪೂರ್ಣ ಕಾವ್ಯ . ಇದು ಸವಿತೃ ಸಮಕಾವ್ಯ . ಸವಿತೃ ಮಂತ್ರದ ಪ್ರಖ್ಯಾತಿ ಗಾಯತ್ರೀ ಛಂದಸ್ಸಿನಲ್ಲಿ . ಈ ಛಂದಸ್ಸಿಗೆ ೨೪ ಅಕ್ಷರಗಳ ಮಿತಿ . ಅಕ್ಷರ ಒಂದಕ್ಕೆ ಒಂದು ಸಾವಿರ ಶ್ಲೋಕದಂತೆ 24 ಸಾವಿರ ಶ್ಲೋಕಗಳನ್ನು ರಚಿಸಿರುವೆ . ಶ್ಲೋಕದ ಪ್ರತಿ ಅಕ್ಷರವೂ ಪ್ರಣವಕ್ಕೆ ಸಮಾನ . ಅದು ಓಂಕಾರ ನಾದದಂತೆ ಪವಿತ್ರ . ಇಡೀ ರಾಮಾಯಣ ಪಾರಾಯಣ ಮಾಡಿದರೆ 7, 68,000 ಬಾರಿ ಓಂಕಾರ ಪಠಣ ಮಾಡಿದಂತೆ . ಅಂತಹ ಪುಣ್ಯ ಗ್ರಂಥವಿದು . ಇದನ್ನು ವೀಣೆಗಳಲ್ಲಿ ಅಳವಡಿಸಿ ನುಡಿಸಲು ಸುಲಭ , ಅನುಮೋದನೀಯ .ಈ ಶುಭ ಮುಹೂರ್ತದಲ್ಲಿ ಶುದ್ಧ ಮನಸ್ಕರಾಗಿ ಸ್ವೀಕರಿಸಿ ಈ ತಾತ್ವಿಕ ಕಾವ್ಯವನ್ನು ".
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos