ನಾರಾಯಣನ ಸ್ವರೂಪದಲ್ಲಿರುವ ಪರಬ್ರಹ್ಮನ ಕಲ್ಪನೆ (ಸಂಗ್ರಹ ಚಿತ್ರ) 
ಅಂಕಣಗಳು

ಪರಬ್ರಹ್ಮನಿಂದ ಪ್ರಾರಂಭ; ಪರಬ್ರಹ್ಮ ನಾರಾಯಣನಾಗಿ, ನಾರಾಯಣನ ಸಂತಾನವಾಗಿ ಚತುರ್ಮುಖ ಬ್ರಹ್ಮನ ಉತ್ಪತ್ತಿ!

ಪ್ರಕಾಶ ಮೊತ್ತವೆಲ್ಲ ಘನೀಭವಿಸಿ ಪುರುಷಾಕಾರ ಪಡೆಯಿತು. ಅದೇನು ವಿಸ್ತಾರ ! ಅದೇನು ಆಕರ್ಷಣೆ ! ನೀರಿನಲ್ಲಿದ್ದು ತಪಸ್ಸು ಮಾಡುತ್ತಿದ್ದುದರಿಂದ ಆ ಶಕ್ತಿಯನ್ನು, ಆ ಪುರುಷಶಕ್ತಿಯನ್ನು ನಾರಾಯಣ ಎನ್ನೋಣವೆ?

ತಪಸ್ಸು , ತಪಸ್ಸು , ತಪಸ್ಸು ! ಸೃಷ್ಟಿ ಮೂಲ ದರ್ಶನಕ್ಕಾಗಿ ಸತತ ಯತ್ನ . ಕಾಣದ ಆ ಶಕ್ತಿಯಲ್ಲಿ ಒಂದೇ ಸಮನೆ ಕರುಣಿಸಲು ಅಹವಾಲು; ಆರ್ತತೆ . ಸಿದ್ಧಿಯ ಅಂತ್ಯಕ್ಕೆ ಏನೋ ಅನಿರ್ವಚನೀಯ ದರ್ಶನ . ಏನೋ ಕಂಡಿತು ; ಏನೋ ಪ್ರಕಾಶ ; ಏನೋ ತೇಜಸ್ಸು ; ಏನೋ ಕಾಂತಿ ; ಏನೋ ಪ್ರಭೆ ; ಏನೋ ತಂಪು ; ಏನೋ ಬಿಸುಪು ; ಏನೋ ರೋಮಾಂಚನ ; ಏನೋ ಸದ್ದು.... ಹೌದು . ಅದು ಅರ್ಥವಾಗುತ್ತದೆ . ಆದರೆ ಅರ್ಥಮಾಡಿಕೊಳ್ಳಲು ಕಷ್ಟ . ತಿಳಿದದ್ದನ್ನು ಮತ್ತೊಬ್ಬರಿಗೆ ಹೇಳುವುದು ಮತ್ತೂ ಕಷ್ಟ . ಅಲ್ಲಲ್ಲ! ಪೂರ್ಣ ಅರಿವಾಗದ್ದನ್ನು ಹೇಳುವುದಾದರೂ ಹೇಗೆ ??
                   (ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಃ ) 
ಅಥವ ತನ್ನ ಬುದ್ಧಿಗರಿವಾದ ಈ ಬಡಭಾಷೆಯಲ್ಲಿ ಹೇಗೆ ಹೇಳುವುದು ? ಅದು ಭಾಷೆ ಮೀರಿದ ಬಯಲು . ಬಯಲನ್ನು ಅಡಗಿಸಿಕೊಂಡ , ಬಯಲನ್ನೂ ನುಂಗಿದ ದೊಡ್ಡದು ; ಬಹು ದೊಡ್ಡದು ; ತುಂಬಾ ದೊಡ್ಡದು ; ಮಹಾ ದೊಡ್ಡದು ; ಪರಮ ದೊಡ್ಡದು ! ಅದೇ ಪರಬ್ರಹ್ಮನ್ !! ಅದು ಅದೊಂದೇ . ಅಂತಹದ್ದು ಎರಡಿಲ್ಲ . ಆದ್ದರಿಂದಲೇ ಅದು ಏಕಮೇವಾದ್ವಿತೀಯ ! ಅದಕ್ಕೆ ಕೊನೆ ಮೊದಲಿಲ್ಲ ; ಅದೇ ಅನಾದ್ಯನಂತ ! ಅದಕ್ಕೆ ಸಮಾನವಾದದ್ದಿಲ್ಲ ; ಅದೇ ನಿರುಪಮ ! ಅದೇ ಎಲ್ಲದಕ್ಕೂ ದಿಕ್ಕಾದಾಗ , ಅದಕ್ಕಾವ ಆಧಾರ ? ನಿರಾಧಾರ. ಅದೊಂದೇ ಸತ್ಯ; ಅದೊಂದೇ ನಿತ್ಯ ; ಬೇಕು ಬೇಡಗಳೆಂಬ ಬಯಕೆಗಳನ್ನು ಮೀರಿದ ನಿತ್ಯ ತೃಪ್ತ !!! ಏನೆಂದು ಹೇಳೋಣ ? ಏನು ಮಾಡುತ್ತದೆ ಅದು ? ತಪಸ್ಸು ಮಾಡುತ್ತಿದೆ. ಜಲದಲ್ಲಿ ಶಯನಿಸಿದೆ. ಇಲ್ಲ - ಇಲ್ಲ ಹಾಗೆ ಕಾಣುತ್ತಿದೆ . ಅದಕ್ಕೆಲ್ಲಿಯ ನಿದ್ದೆ ; ಅದಕ್ಕೆಲ್ಲಿಯ ಮೊಂಕು ? ಸದಾ ಎಚ್ಚರದ ಪ್ರಙ್ಞೆ. 
ಋಷಿಗಳು ಸ್ತುತಿಸಿದರು, "ಹೇ ಶಕ್ತಿ. ನೀನು ಅವ್ಯಕ್ತ; ನೀನು ಬ್ರಹ್ಮನ್; ನೀನು ಪರಬ್ರಹ್ಮನ್; ನೀನು ಆಕಾರಕ್ಕೆ ಸಿಗದಾತ; ಕಣ್ಣಿಗೇ ಕಾಣದಾತ; ಏನೋ ನಮ್ಮ ಪುಣ್ಯದಿಂದ, ನಮ್ಮ ತಪಸ್ಸಿನಿಂದ ಕಾಣುತ್ತಿರುವೆ. ಆದರೆ ಹೀಗೆ ರೂಪವಿರದ ಅವ್ಯಕ್ತ ಬ್ರಹ್ಮನನ್ನು ಅರಿಯುವುದು ಹೇಗೆ? ( ಅವ್ಯಕ್ತ ಪ್ರಭವೋ ಬ್ರಹ್ಮ ). ದಯೆಯಿಟ್ಟು ನಮಗರ್ಥವಾಗುವಂತೆ ಯಾವುದಾದರೊಂದು ರೂಪವನ್ನು ಧರಿಸಿ ಕಾಣಿಸಿಕೊಳ್ಳಲಾರೆಯಾ? ಸಾಧ್ಯವಾದರೆ ಪುರುಷರೂಪದಲ್ಲಿಯೇ ಕಂಡರೆ ನಮಗೆ ಎಷ್ಟೋ ಸನಿಹವಾದಂತೆ"! ಪ್ರಕಾಶ ಮೊತ್ತವೆಲ್ಲ ಘನೀಭವಿಸಿ ಪುರುಷಾಕಾರ ಪಡೆಯಿತು. ಅದೇನು ವಿಸ್ತಾರ ! ಅದೇನು ಆಕರ್ಷಣೆ ! ನೀರಿನಲ್ಲಿದ್ದು ತಪಸ್ಸು ಮಾಡುತ್ತಿದ್ದುದರಿಂದ ಆ ಶಕ್ತಿಯನ್ನು, ಆ ಪುರುಷಶಕ್ತಿಯನ್ನು (ನಮಗೆ ಅರ್ಥವಾಗಲೋಸುಗ , ಆ ಆಕಾರಕ್ಕೆ) ನಾರಾಯಣ ಎನ್ನೋಣವೆ?                 
  (ಆಪೋ ನಾರಾ ಇತಿಪ್ರೋಕ್ತಾ ಆಪೋ ವೈ ನರಸೂನವಃ 
ಆಯನಂ ತಸ್ಯತಾಃ ಪೂರ್ವಮ್ ತೇನ ನಾರಾಯಣ ಸ್ಮೃತಃ)
ಗಗನದ ಬಣ್ಣವೇ ಸಾಗರದಲ್ಲಿ ಪ್ರತಿಫಲಿಸಿತೋ ? ಅದೇ ನಾರಾಯಣ ಬಣ್ಣವಾಯಿತೋ ? ನೀಲ ಮೇಘ ಶ್ಯಾಮನಾಗಿ ಹೊಳೆಯುತ್ತಿರುವ ತನುಕಾಂತಿ ! ಪ್ರಸನ್ನ ಮುಖ ; ಮುಖದ ತುಂಬ ನಗೆ ; ಸುಂದರವಾದ ಹಲ್ಲು ಸಾಲು ; ತುಂಬುಗೆನ್ನೆಗಳು ; ಸೆಳೆವ ಕಣ್ಣುಗಳು ; ನಾಲ್ಕು ಭುಜಗಳು ; ಶಂಖ ಚಕ್ರ ಗದಾ ಧನುಗಳು; ಹೊಕ್ಕಳಲ್ಲಿ ಹೊತ್ತ ಕಮಲಬಳ್ಳಿ; ಅದರ ತುದಿಯಲ್ಲಿ ಅರಳಿದ ಸಹಸ್ರ ದಳ ಕಮಲ ; ಮಧ್ಯದಲ್ಲಿ ಚತುರ್ಮುಖ ಬ್ರಹ್ಮ !! ಕೈಯಲ್ಲಿ ಜಪಮಣಿ , ಸೃಷ್ಟಿ ಕಾರ್ಯಪಟು. ಸದಾ ತತ್ಪರ.
"ಅವ್ಯಕ್ತ ಪರಬ್ರಹ್ಮ ನಾರಾಯಣನಾಗಿ, ಈಗ ಈ ನಾರಾಯಣನ ಸಂತಾನವಾಗಿ ಚತುರ್ಮುಖ ಬ್ರಹ್ಮೋತ್ಪತ್ತಿ...". ಕುಶೀಲವರ ವಿವರಣೆಯಲ್ಲಿ ಮುಳುಗಿ ಹೋಗಿದೆ ಸಭೆ. ಅವರೀಗ ಅಯೋಧ್ಯೆಯಲ್ಲಿಲ್ಲ; ತಮ್ಮ ಕೆಲಸ ಕಾರ್ಯಗಳ ಪರಿವಿಲ್ಲ ; ಹಶಿವು ನೀರಡಿಕೆಗಳಿಲ್ಲ. ಎಲ್ಲೋ... ಎಲ್ಲೋ ಯಾವುದೋ ಕಾಲಕ್ಕೆ ಹೋಗಿದ್ದಾರೆ. ಅಂದಿನ ಗಾನಗೊಟ್ಟಿ ಮುಗಿಯಿತು. ಮೈಮರೆತು ಪರಬ್ರಮ್ಹ ಪ್ರಪಂಚದಲ್ಲಿ ತಲ್ಲೀನರಾಗಿ ಎಲ್ಲರೂ ಮನೆಗಳಿಗೆ ತೆರಳಿದ್ದಾರೆ. ಮಾರನೆಯ ದಿನ ಎಷ್ಟು ಹೊತ್ತಿಗೆ ಸಭಾ ಭವನಕ್ಕೆ ಬರುವೆವೋ ಎಂಬ ಕಾತುರತೆಯಲ್ಲಿದ್ದಾರೆ. ಕುಶೀಲವರು ಯಾರೇನಿತ್ತರೂ ಗ್ರಹಿಸದೇ ಆಶ್ರಮಕ್ಕೆ ವಾಪಸಾಗಿದ್ದಾರೆ. ವಾಲ್ಮೀಕಿ ಮಹರ್ಷಿಗಳು ತಮ್ಮ ವಾಸ್ತವ್ಯವನ್ನೀಗ ಅಯೋಧ್ಯೆಯ ಹತ್ತಿರಕ್ಕೆ, ಊರ ಹೊರಕ್ಕೆ ಬದಲಾಯಿಸಿದ್ದಾರೆ. ಏನೋ ನಿರೀಕ್ಷೆ ಇದೆ ಅವರಿಗೆ. ರಾಮಾಯಣದ ಪ್ರವಚನ ಮಂಗಳಕ್ಕೆ ಏನೋ ಮಂಗಳಾಂತವಾಗುವುದೆಂಬ ಆಶಾಭಾವನೆಯಿದೆ. ಮಕ್ಕಳಿಗೆ ಹೇಳಿದ್ದಂತೆ, ಅವರು ಅಪರಿಗ್ರಹರಾಗಿ ಆಶ್ರಮಕ್ಕೆ ಬಂದು ಅಂದಿನ ಘಟನೆಗಳನ್ನು ಬಣ್ಣಿಸಿದ್ದಾರೆ . 
(ಆಸಕ್ತ ಓದುಗರೇ,  ಇನ್ನು ಮುಂದೆ ಅಂದಂದಿನ ದಿನಕ್ಕೊಂದು  ಬಿಡುವಿಲ್ಲದೇ , ಕಥಾಸ್ವಾದನೆಗೆ ಪಾನಕದ ಪುಳ್ಳೆಯಾಗದಂತೆ ಕಥೆ ಓಡುತ್ತದೆ . ಏನಾದರೂ ವಿವರಣೆ ಕೊಡಬೇಕಿದ್ದರೆ ,  ವ್ಯಕ್ತಪಡಿಸಿರುವ ಶಂಕೆಗೆ ಸಮಾಧಾನ ಕೊಡುವ ಅವಶ್ಯಕತೆಯಿದ್ದರೆ ಮಾತ್ರ ನಾನು ಅಲ್ಲಲ್ಲಿ ಮೂಗು ಹಾಕುತ್ತೇನೆ. ತಮಗೆ ರಾಮಾಯಣದ ಬಗೆಗೆ ಯಾವುದೇ ಸಂದೇಹಗಳಿದ್ದರೂ , ಯಾರಾದರೂ ವ್ಯಕ್ತಪಡಿಸಿರುವ ವಿರೋಧಗಳಿಗೆ ಪರಿಹಾರ ಬೇಕಿದ್ದರೂ ದಯವಿಟ್ಟು ಕನ್ನಡಪ್ರಭ.ಕಾಂ ಗೆ ಪತ್ರ ಬರೆಯಿರಿ . ಒಂದು ಅಂಶವನ್ನು ಹೇಳಿಬಿಡುವ . ಶ್ರೀಮದ್ ವಾಲ್ಮೀಕಿ ರಾಮಾಯಣದಲ್ಲಿ ಇಲ್ಲದ್ದು ಇಲ್ಲಿ ಏನೂ ದಾಖಲಾಗುವುದಿಲ್ಲ . ಕೆಲವು ಸಂದರ್ಭಗಳಲ್ಲಿ ಮಾತ್ರ ಸಂದರ್ಭ ಪುಷ್ಟಿಗಾಗಿ ಮತ್ತು ಆದಿಕವಿ ಕೊಟ್ಟ ಸೂಚನೆಯನ್ನು ಸಂಪೂರ್ಣ ಮಾಡುವ ಏಕೈಕ ಕಾರಣದಿಂದಾಗಿ, ಅನ್ಯಮೂಲಗಳಿಂದ ತಾತ್ಪೂರ್ತಿಕವಾಗಿ ಸೇರಿಸಲಾಗುತ್ತದೆ ಎಂಬ ಆಶ್ವಾಸನೆಯೊಂದಿಗೆ ಈ ಸಂಚಿಕೆ ಮುಗಿಸುತ್ತಿರುವೆ)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT