ರಾವಣ 
ಅಂಕಣಗಳು

ದಶಕಂಠನ ದಾರುಣ ಜನನ

ಅತ್ಯನುಭವಿ ಸೂಲಗಿತ್ತಿಗೂ ನಖಶಿಖಾಂತ ಭಯ ಮಿಶ್ರ ಅಚ್ಚರಿ. ಒಂದು, ಎರಡು, ಮೂರು... ಹತ್ತು ಪುಟ್ಟ ಮುಖಗಳು, ಇಪ್ಪತ್ತು ಕೈಗಳು. ಕೆಂಚು ಕೂದಲು. ಅಳುತ್ತಿಲ್ಲ, ಕತ್ತೆಯಂತೆ ಅರಚುತ್ತಿದೆ .ಒಂದೊಂದು ಬಾಯಿಂದ...

ಸುಮಾಲಿ ವಿವರಿಸಿದ, "ಲಂಕೆಯ ಮೇಲೆ ಅಧಿಕಾರ ಯಾರಿಗಿದೆ? ಕುಬೇರನಿಗಿದೆ. ಆದರೆ ಮತ್ತಾರಿಗೆ ಅಧಿಕಾರ ಬರುತ್ತದೆ ಕಾನೂನಿನ ಪ್ರಕಾರ? ಕುಬೇರನ ತಮ್ಮನಿಗೆ. ನೀನು, ಗಮನವಿಟ್ಟು ಕೇಳಿಸಿಕೊ, ನೀನು ಕುಬೇರನ ಅಪ್ಪ ವಿಶ್ರವಸ್ಸನ್ನು ಆಕರ್ಷಿಸಿ ಅವನ ಹೆಂಡತಿಯಾಗಬೇಕು. ಅವನಿಂದ ಮಗನನ್ನು ಪಡೆಯಬೇಕು. ಆ ನಿನ್ನ ಮಗ ಈ ಕುಬೇರನ ಜೊತೆಗೆ ಲಂಕಾಧಿಪತಿ ಆಗಬಹುದು. 
  ***********
ವಿಶ್ರವಸ್ ಸ್ನಾನ ಮುಗಿಸಿ ತಟಾಕ ಹತ್ತಿ ದರ್ಭೆ ಹಿಡಿದು ಮಂತ್ರ ಪಠಿಸುತ್ತ ಅಶ್ವತ್ಥದ ಕೆಳಕ್ಕೆ ಬಂದು ಪದ್ಮಾಸನ ಹಾಕಿ ಕಣ್ಮುಚ್ಚಿ ಕುಳಿತ. ಕಣ್ಣು ಬಿಟ್ಟಾಗ ಮಧ್ಯಾಹ್ನ ಸರಿದಿತ್ತು. ಮುಂದೆ ಮೋಹಿನಿ ಮಂಡಿಯೂರಿದ್ದಾಳೆ. ಹೊಟ್ಟೆಯೊಡನೆ ಈಗ ಕಣ್ಣಿಗೂ ಹಶಿವು. ಆದರೆ... ಆದರೆ ಅದೆಂತು ತನಗೆ ಇವಳಲ್ಲಿ ಅನುರಕ್ತಿ ಮೂಡುತ್ತಿದೆ? " ಇವಳು ಬಂದದ್ದೇ ನನ್ನನ್ನು ಒಲಿಸಲು ಎಂದು ನೋಡಿದ ಕ್ಷಣವೇ ಗೊತ್ತಾಯಿತು. ಆದರೆ ನನಗೇಕೆ ಕಾಮನೆ ? ಓಹ್ ! ನಾನು ಸ್ಥಿರಂಜೀವಿಯೊಬ್ಬನಿಗೆ ; ಭಗವದ್ ಭಕ್ತನೊಬ್ಬನಿಗೆ ; ಧಾರ್ಮಿಕನೊಬ್ಬನಿಗೆ ನನ್ನ ತಪಃ ಶಕ್ತಿಯನ್ನು ಧಾರೆಯೆರೆಯಬೇಕಿದೆ. " ಈ ಆಲೋಚನೆ ಬರುತ್ತಿದ್ದಂತೆಯೇ ಕೈಕಸಿ ವಿಶ್ರವಸ್‌ನ ತೆಕ್ಕೆಯಲ್ಲಿ ಹುದುಗಿ ಹೋದಳು. 
" ಛೆ ಛೆ ! ಕಾಲ ಮಿಂಚಿತ್ತು. ಕೈಕಸಿ ಜೊತೆ ಕೂಡಿದಾಗ ಎಂತಹ ಸಮಯ ! ಅದು ದೋಷಜನ್ಯ; ಕೆಟ್ಟ ಮುಹೂರ್ತ; ಪ್ರದೋಷ ಪಾಪಕಾಲ! ತನಗೇಕೆ ಮೊಂಕು ಹಿಡಿಯಿತು? ಮತ್ತೆ ಅದೇ ತತ್ವ!! ಒಳಿತು-ಕೆಡಕು, ತಪ್ಪು- ಸರಿ, ನ್ಯಾಯ - ಅನ್ಯಾಯ , ಧರ್ಮ-ಅಧರ್ಮಗಳ ಅರಿವಿದ್ದೂ, ಯೋಚಿಸುವ ಶಕ್ತಿಯಿದ್ದೂ, ವಿವೇಚನಾ ಸಾಮರ್ಥ್ಯವಿದ್ದೂ, ನಿಗ್ರಹ - ಅನುಗ್ರಹ ಪ್ರದಾನವಿದ್ದೂ ಈ ರೀತಿ ತಪ್ಪಾಗುವುದೆಂದರೆ ? ಅದೇ ಮಾಯೆ. ಎಂತಹ ಙ್ಞಾನಿಯಾದರೂ ಈ ಮಾಯೆಯ ಮುಸುಕಿನಿಂದ ಹೊರಬರಲಾರ. ಏನುಂಟು ನಮ್ಮ ಕೈಯ್ಯಲ್ಲಿ ? 
ಮಿಲನಾಂತ್ಯದಲ್ಲಿ ಸಂತಸದಿಂದಿರುವ ಬದಲು ಗಂಡನ ಮುಖ ಕಪ್ಪಿಟ್ಟಿದ್ದು ಕಂಡು ಕೈಕಸಿ ಕೇಳಿದಳು; " ಯಾಕೆ ಸ್ವಾಮಿ ಮುಖ ಮುದುಡಿದೆ ? ನಗುವಿನ ಬದಲು ಏನೋ ಕಳವಳ, ಏನೋ ಹೆದರಿಕೆಯ ಭಾವ ಕಾಣಿಸುತ್ತಿದಿಯಲ್ಲ? ನನ್ನಿಂದೇನಾದರೂ ತಪ್ಪಾಯಿತಾ? ". ತಲೆ ಸವರುತ್ತಾ ವಿಶ್ರವಸ್ ನುಡಿದ, " ತಪ್ಪಾಗಿದ್ದು ನಿಜ, ಆದರೆ ಅದು ನಿನ್ನಿಂದ ಅಲ್ಲ. ನೀನು ಮಗು ಬಯಸಿ ಬಂದಿದ್ದೂ ತಪ್ಪಿಲ್ಲ. ನಿನ್ನನ್ನು ಕೂಡಿದ್ದೂ ತಪ್ಪಲ್ಲ. ಆದರೆ ತಪ್ಪು ಆಗಿದ್ದು ಎಲ್ಲಿ ಎಂದರೆ ನಮ್ಮ ನಿರ್ಣಯವನ್ನು ಜಾರಿ ಮಾಡುವ ಕಾಲದಲ್ಲಿ. ನಮ್ಮ ಋಷಿ - ಮುನಿಗಳು ಪ್ರತಿಯೊಂದು ಕಾರ್ಯಕ್ಕೂ ಒಂದು ಮುಹೂರ್ತವನ್ನು ಸ್ಪಷ್ಟ ಪಡಿಸುತ್ತಾರೆ. ಮದುವೆಯಿರಲಿ, ಉಪನಯನ ಇರಲಿ, ವ್ರತ ಇರಲಿ, ಯಙ್ಞ ಇರಲಿ, ಗೃಹಾರಂಭ ಇರಲಿ, ಪ್ರಯಾಣ ಇರಲಿ... ಹೀಗೆ ಏನು ಮಾಡಬೇಕಾಗಿದ್ದರೂ ಕೆಲವು ಸುಮುಹೂರ್ತಗಳನ್ನ ಅವರು ಗುರ್ತು ಮಾಡಿದ್ದಾರೆ. ನಾವು ಅಙ್ಞಾನದಿಂದಲೋ, ಅಹಂಕಾರದಿಂದಲೋ ಅವನ್ನು ಮೀರಿದರೆ ಹೀಗೇ ಆಗುವುದು. ಇವೆಲ್ಲಾ ಗೊತ್ತಿದ್ದ ನಾನು, ನಾನೂ ಕೊಂಚ ಆತುರ ಪಟ್ಟೆ. "ಕೈಕಸಿಗೂ ಈಗ ಕೊಂಚ ಅಧೈರ್ಯ, ನಡುಕ. " ಏನಾಯಿತೀಗ ಅದರಿಂದ ?" . ಭವಿಷ್ಯದಲ್ಲಿ ಕಣ್ಣಿಟ್ಟು ಹೇಳಿದ ವಿಶ್ರವಸ್; " ದುರ್ಮುಹೂರ್ತದಲ್ಲಿ ಸಂಯೋಗವಾದ್ದರಿಂದ ಆ ಪ್ರದೋಷದಲ್ಲಿ ನಮ್ಮೀರ್ವರ ಜೀವ ಧಾತುಗಳು ಬೆರೆತಿದ್ದರಿಂದ ಫಲಿತವೂ ಕೆಟ್ಟದ್ದೇ. ಹುಟ್ಟುವ ಸಂತಾನ, ನೋಡೋದಕ್ಕೆ ಭೀಕರ, ಮಾಡೋ ಕೆಲಸಗಳು ದುಷ್ಟ ಕಾರ್ಯಗಳು, ಜಗತ್ತಿಗೇ ಭಯ ಉಂಟು ಮಾಡುತ್ತಾರೆ, ಸಾಧುಗಳಿಗೆ ಹಿಂಸೆ ಕೊಡುತ್ತಾರೆ, ಒಟ್ಟಿನಲ್ಲಿ ಪಾಪಿಷ್ಟರನ್ನ ನೀನು ಹೆರಬೇಕಾಗುತ್ತೆ. " 
    (ದಾರುಣಾನ್ ದಾರುಣಾಕಾರಾನ್ ದಾರುಣಾಭಿಜನಪ್ರಿಯಾನ್
    ಪ್ರಸವಿಷ್ಯತಿ ಸುಶ್ರೋಣೀ ರಾಕ್ಷಸಾನ್ ಕ್ರೂರಕರ್ಮಣಃ )
  ************
ಅಂದು ಬೆಳಗಿನಿಂದಲೇ ಕೈಕಸಿ ಅಸ್ತ - ವ್ಯಸ್ತ ; ಹೊಟ್ಟೆಯಲ್ಲಿ ತಳಮಳ; ಸಾಮಾನ್ಯ ಬಸುರಿಗಿನ್ನ ಬಹು ದೊಡ್ಡ ಉದರ. ಒಳಗಿನ ಓಡಾಟ ಅವಳಿಗೆ ಪ್ರಾಣ ಹೋಗುವಂತೆ. ರಕ್ತ - ವಾಂತಿ, ತಲೆ ಸುತ್ತು, ನಡುವೇ ಬಿದ್ದು ಹೋದಂತೆ, ಎದೆಗೆ ಏಟು ಕೊಟ್ಟಂತೆ, ತೊಡೆ ಸೀಳಿದಂತೆ, ತಲೆಗೆ ಚಚ್ಚಿದಂತೆ. ಹೊರಳಾಡುತ್ತಿದ್ದಾಳೆ, ಕೂಗಾಡುತ್ತಿದ್ದಾಳೆ, ಅಳುತ್ತಿದ್ದಾಳೆ. ಹೆಂಡತಿಯ ಗೋಳಾಟ ನೋಡಿ ಏನೂ ಮಾಡಲಾಗದ ಅಸಹಾಯಕತೆ ವಿಶ್ರವಸ್‌ಗೆ ; ಹೊರಗೆ ಧೂಳು ತುಂಬಿದ ಸುಂಟರಗಾಳಿ ; ಉಸಿರಾಡಿದರೆ ಮಣ್ಣು ಮೂಗಿನ ಒಳನುಗ್ಗುವ ಕಷ್ಟ. ಯಙ್ಞಕುಂಡದ ಅಗ್ನಿ ಆರಿಹೋಗಿದೆ ; ಜಿಂಕೆಗಳನ್ನು ಚಿರತೆ ಹುಲಿಗಳು ಕಚ್ಚಿಕೊಂಡೇ ಹೋಗಿವೆ ; ಮಡಕೆಗಳು ಉರುಳಿ ಯಙ್ಞದ್ರವ್ಯಗಳು ಚಲ್ಲಾಪಿಲ್ಲಿ ; ಪರ್ಣಕುಟಿ ದಕ್ಷಿಣ ದಿಕ್ಕಿನಲ್ಲಿ ಮುರಿದು ಬಿತ್ತು ; ಕ್ಷೀಣ ಸೂರ್ಯ; ಹಗಲಲ್ಲೇ ಕತ್ತಲಿನಂತೆ ಮೋಡಗಳು ಮುತ್ತಿವೆ; ದೊಡ್ಡ ದೊಡ್ಡ ಮರಗಳು ಉರುಳಿಬಿದ್ದಿವೆ; ಕಾಳ್ಗಿಚ್ಚು ಹತ್ತಿಕೊಂಡಿದೆ. ಹಕ್ಕಿಗಳನ್ನು, ಮೃಗಗಳನ್ನು, ಗಿಡಮರಗಳನ್ನು ಮುತ್ತಿವೆ, ಸುಟ್ಟಿವೆ; ಎಲ್ಲೆಲ್ಲೂ ಹಾಹಾಕಾರ; ಆಗ ತಾನೇ ಹುಟ್ಟಿದ ಕರುವನ್ನು ಗೂಳಿಯೊಂದು ನುಗ್ಗಿ ಬಂದು ತುಳಿದು, ಕೊಂದು, ತಾಯಿಯ ಹೊಟ್ಟೆಗೆ ಕೊಂಬಿನಿಂದ ಇರಿದಿದೆ; ಪ್ರಸವ ಗೃಹದ ಸುತ್ತ ಮುತ್ತ ನಾಯಿ, ನರಿಗಳು ಊಳಿಟ್ಟವು; ಹಂದಿ, ಕತ್ತೆಕಿರುಬಗಳು ಅರಚಿದವು; ಕೊಳಕು ಮಂಡಲಗಳು ಹರಿದಾಡ ತೊಡಗಿದವು. ಬಾವಲಿಗಳು, ಗೂಬೆಗಳು ಗುಡಿಸಿಲ ಮೇಲೆ ವಾಲಿದವು; ಗಗನದಿಂದ ಉಲ್ಕೆಯೊಂದು ಉರುಳಿಬಿತ್ತು.
ಕೈಕಸಿಯ ರೋದನ, ಕರುಳಿರಿವ ನರಳುವಿಕೆ, ನೋವು ತಡೆಯಲಾರದೆ ಅರಚುತ್ತಿದ್ದಾಳೆ, " ಅಯ್ಯಯ್ಯೋ " ಕರ್ಕಶವಾಗಿ ಕಿರುಚಿ ಮೂರ್ಛೆ ಹೋದಳು. ಭೂ ಪತನವಾದ ಕಪ್ಪು ಮಾಂಸದ ಮುದ್ದೆ; ವಿಚಿತ್ರವಾದ ಕೀರಲುಧ್ವನಿ ಒಂದಲ್ಲ ಹಲವು ; ಅತ್ಯನುಭವಿ ಸೂಲಗಿತ್ತಿಗೂ ನಖಶಿಖಾಂತ ಭಯ ಮಿಶ್ರ ಅಚ್ಚರಿ. ಒಂದು, ಎರಡು, ಮೂರು... ಹತ್ತು ಪುಟ್ಟ ಮುಖಗಳು, ಇಪ್ಪತ್ತು ಕೈಗಳು. ಕೆಂಚು ಕೂದಲು. ಅಳುತ್ತಿಲ್ಲ, ಕತ್ತೆಯಂತೆ ಅರಚುತ್ತಿದೆ. ಒಂದೊಂದು ಬಾಯಿಂದ ಒಂದೊಂದು ಕೂಗು (......ಮುಗಿದಿಲ್ಲ )
-ಡಾ.ಪಾವಗಡ ಪ್ರಕಾಶ್ ರಾವ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಏ.10 ಕ್ಕೆ ರಾಜ್ಯಸಭಾ ಸದಸ್ಯರಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ! ಸಿಎಂ ಸ್ಥಾನಕ್ಕೆ ರಾಜೀನಾಮೆ?

ಬಾಗಲಕೋಟೆ ಉಪಚುನಾವಣೆ: BJP ಅಭ್ಯರ್ಥಿ ವಿರುದ್ಧ ಕರಪತ್ರ ಹಂಚಿಕೆ: ಇಬ್ಬರು ಪೊಲೀಸ್ ಅಧಿಕಾರಿಗಳ ಎತ್ತಂಗಡಿ!

ವಿಶೇಷ ಪಡೆ, ಹತ್ತಾರು ಸೇನಾ ವಿಮಾನ: ಶತ್ರು ನೆಲದಲ್ಲಿ ಬಿದ್ದ ತನ್ನ ಪೈಲಟ್​ ನ್ನು ಅಮೆರಿಕ ರಕ್ಷಿಸಿದ್ದೇ ರೋಚಕ!

ಅಕ್ರಮ ಬಾಂಗ್ಲಾ ವಲಸಿಗರಿಗೆ ಹೊಸ ತಲೆನೋವು; ಗಡಿಗಳಲ್ಲಿ ಹಾವು. ಮೊಸಳೆಗಳ ನಿಯೋಜನೆ: BSF ಗಂಭೀರ ಚಿಂತನೆ!

ಇರಾನ್ ವಿರುದ್ಧದ ಯುದ್ಧ ಅಮೆರಿಕಾಗೆ ತಿರುಗುಬಾಣ!: ಇಂಧನ, ಸಾರಿಗೆ ದರ ದುಪ್ಪಟ್ಟು, ಜನಸಾಮಾನ್ಯರು ಹೈರಾಣ; ಟ್ರಂಪ್ ಗೆ ಹಿಡಿಶಾಪ!

SCROLL FOR NEXT