ಪುತ್ರಕಾಮೇಷ್ಟಿಗೆ ಮುನ್ನ ವಸಿಷ್ಠರು ಸುಮಂತ್ರನಿಗೆ ಹೇಳಿದರು, " ಯಾಙ್ಞವಲ್ಕ್ಯ ಮಹರ್ಷಿಗಳ ಹೆಸರನ್ನು ನೀನು ಕೇಳಿರಬೇಕು. ಸೂರ್ಯನನ್ನು ಮೆಚ್ಚಿಸಿ, ಶುಕ್ಲ ಯಜುರ್ವೇದವನ್ನು ದರ್ಶಿಸಿದ ಬ್ರಹ್ಮರ್ಷಿಯಾತ. ಅಂತಹಾ ಮಹಾತ್ಮರು ಮಾನ್ಯ ಮಾಡುತ್ತಿದ್ದುದು ಮಿಥಿಲಾಧಿಪತಿ ಜನಕ ಮಹಾರಾಜರನ್ನು. ಮಹಾ ರಾಜರ್ಷಿಯಾತ. ಅವನ ವಂಶದಲ್ಲೀಗ ಪ್ರಸಿದ್ಧನಾಗಿರುವಾತ ಹ್ರಸ್ವ ರೋಮ ಪುತ್ರ ಜನಕ. ಈತನನ್ನೂ ಮಿಥಿಲಾಧಿಪತಿಯೆಂದೇ ಕರೆಯುತ್ತಾರೆ. ಅದು ಒಂದು ತರಹ ವಂಶ ನಾಮ. " ತಾವು ಹೇಳುತ್ತಿರುವುದನ್ನು ಗಮನವಿಟ್ಟು ಕೇಳುತ್ತಿದ್ದಾನೆಂದು ಅರಿತು ಮುಂದುವರಿಸಿದರು. "ಮಹಾ ಶೂರನೂ, ಸತ್ಯವಾದಿಯೂ, ನಾಲ್ಕು ವೇದಗಳನ್ನು ಅರಿತವನೂ, ಶಾಸ್ತ್ರಾಂತರ್ಗತ ಅರ್ಥವೈದುಶ್ಯನೂ ಆಗಿದ್ದಾನೆ ಈ ಜನಕ ಮಹಾರಾಜ. ಈ ಜನಕ ಮಹಾರಾಜನನ್ನು ನೀನೇ ಸ್ವತಃ ಹೋಗಿ ಈ ಯಙ್ಞಕ್ಕೆ ಆಮಂತ್ರಿಸು."
(ಮಿಥಿಲಾಧಿಪತಿಂ ಶೂರಂ ಜನಕಂ ಸತ್ಯವಾದಿನಂ
ನಿಷ್ಠಿತಂ ಸರ್ವಶಾಸ್ತ್ರೇಷು ತಥಾ ವೇದೇಷು ನಿಷ್ಠಿತಂ
ತಮಾನಯ ಮಹಾಭಾಗಂ ಸ್ವಯಮೇವ ಸು ಸತ್ಕೃತಂ)
ಇಷ್ಟೊಂದು ವರ್ಣನೆ ಮಾಡಿ ತಾನೇ ಸ್ವಯಂ ಹೋಗಿ ಆದರಿಸಬೇಕೆಂದು ಬ್ರಹ್ಮರ್ಷಿಗಳು ಹೇಳುತ್ತಿದ್ದಾರೆಂದರೆ ಅದಕ್ಕೆ ವಿಶೇಷಾರ್ಥ ಇರಲೇಬೇಕು. ಆದರೆ ಅದೇನೆಂದು ಕೇಳುವುದು ತುಸು ಹೆಚ್ಚು ಸಲುಗೆ ತೆಗೆದುಕೊಂಡಂತೆ. ಹೊರಡಲು ಅಪ್ಪಣೆ ಕೇಳಿದಾಗ ವಸಿಷ್ಠರ ಬಾಯಿಂದ ಬಂದ ಮಾತೂ ವಿಶೇಷಾರ್ಥವನ್ನೇ ಧ್ವನಿಸಿತು. ಆದರೆ ಅದು ಖಚಿತವಾಗಿ ಅರ್ಥವಾಗಿದ್ದು 16 ವರ್ಷಗಳ ನಂತರವೇ. ವಸಿಷ್ಠರಿಂದ ಬಂದ ಮಾತು, " ಕಲ್ಯಾಣಮಸ್ತು. "
**********
ವಿಶೇಷವಾದ ಹೋಮಕುಂಡ, ಇಂತಿಷ್ಟೇ ಇಟ್ಟಿಗೆಗಳಿಂದ, ಇಂಥದ್ದೇ ಆಕಾರದಲ್ಲಿ ನಿರ್ಮಾಣವಾದ ಯಙ್ಞವೇದಿ. ಅದರಲ್ಲಿ ಧೂಮ ರಹಿತ ಪ್ರಜ್ವಲಿಸುತ್ತಿರುವ ಅಗ್ನಿ ಜ್ವಾಲೆ. ದಶರಥ ಪ್ರಧಾನ ಪತ್ನೀ ತ್ರಯರೊಂದಿಗೆ ಕುಳಿತಿದ್ದಾನೆ, ಕೊಂಚ ದೂರದಲ್ಲಿ ಅರ್ಧವೃತ್ತಾಕಾರದಲ್ಲಿ ಉಳಿದ ಮುನ್ನೂರಕ್ಕೂ ಹೆಚ್ಚು ಉಪಪತ್ನಿಯರ ದಂಡೇ ಮಂಡಿಸಿದೆ. ವಸಿಷ್ಠರು, ವಾಮ ದೇವರು, ಸುಯಙ್ಞರು, ಇತ್ಯಾದಿ ಗುರುಗಳ ಮಧ್ಯದಲ್ಲಿ ಋಷ್ಯಶೃಂಗರು ತೇಜಸ್ವಿಯಾಗಿ ಪ್ರಧಾನ ಋತ್ವಿಜರಾಗಿದ್ದಾರೆ. ಪ್ರತಿಯೊಬ್ಬರ ಮುಂದೂ ಒಂದೊಂದು ಬುಟ್ಟಿ. ಅದರಲ್ಲಿ ಹೋಮ ದ್ರವ್ಯಗಳು, 21 ಬಗೆಯ ಸಸ್ಯ ಸಮಿತ್ತುಗಳು, ಓಷಧೀ ಸಸ್ಯಗಳು, ತುಪ್ಪ, ಅರಳು, ಇತ್ಯಾದಿ. ಪ್ರತಿ ಸ್ವಾಹಾಕಾರಾಂತ್ಯಕ್ಕೂ ಯಙ್ಞಕುಂಡಕ್ಕೆ ಅವುಗಳ ಸಮರ್ಪಣೆ.
ಯಾಗಕುಂಡದಿಂದ ಮೇಲೆದ್ದ ಜ್ವಾಲೆಗಳು ಛಾವಣಿಯವರೆಗೆ ಏರಿ ಕೊನೆಗೆ ಧೂಮದಲ್ಲಿ ಮರೆಯಾಗುತ್ತಿವೆ. ಸುಗಂಧ ಪೂರ್ಣ ಧೂಮ ನೋಡುಗರಿಗೆ ಮರೆಯಾದರೂ, ಸೋಪಾನ ಪಂಕ್ತಿಯಾಗಿ ಮೇಲೇರಿವೆ. ಹೋತೃ ಋಗ್ಮಂತ್ರಗಳಿಂದ ಇಂದ್ರಾದಿ ದೇವತೆಗಳನ್ನು ಆಹ್ವಾನಿಸುತ್ತಿದ್ದರೆ, ಅಧ್ವೈರ್ಯುವು ಸಮಿತ್ತು-ಹವಿಸ್ಸುಗಳನ್ನು ಅರ್ಪಿಸುತ್ತಿದ್ದಾರೆ. ಉದ್ಗಾತೃ ಶುದ್ಧ ಕಂಠದಿಂದ ಸುಶ್ರಾವ್ಯವಾಗಿ ಸಾಮ ವೇದವನ್ನು ಹಾಡುತ್ತಿದ್ದಾರೆ; ಇಂದ್ರ, ಅಗ್ನಿ, ವರುಣ, ಯಮ, ಗಂಧರ್ವ, ಸಿದ್ಧ, ಸಾಧ್ಯ, ದೇವರ್ಷಿಗಳು, ಬ್ರಹ್ಮ, ವಿಷ್ಣು, ಈಶ್ವರ.... ಇತ್ಯಾದಿ ದೇವದೇವೋತ್ತಮರನ್ನು ಸ್ವಾಗತಿಸುತ್ತಿದ್ದಾರೆ.
(ಆಹ್ವಯಾಂ ಚಕ್ರಿರೇ ತತ್ರ ಶಕ್ರಾದೀನ್ ವಿಬುಧೋತ್ತಮಾನ್)
ಯಾಗವಾಟಿಕೆ ಸಾವಿರಾರು ಜನರಿಂದ ತುಂಬಿದೆ. ಅನೇಕಾನೇಕ ರಾಜರು ಪರಿವಾರ ಸಹಿತ ಬಂದಿದ್ದಾರೆ. ಜನಕ ಮಹಾರಾಜ, ಕಾಶೀಪುರಾಧೀಶ, ಕೇಕಯಾಧಿಪತಿ, ಅಂಗರಾಜ್ಯದ ರೋಮಪಾದ... ಇತ್ಯಾದಿ ರಾಜರುಗಳೆಲ್ಲ ತಮಗಿರುವ ಪ್ರತ್ಯೇಕ ಆಸನಗಳಲ್ಲಿ ಮಂಡಿತರಾಗಿದ್ದಾರೆ. ಆಹಾರ ವ್ಯವಸ್ಥೆ ಅಚ್ಚುಕಟ್ಟಾಗಿದೆ. ಬಂದವರಿಗಾಗಿ ಅನ್ನದ ಬೆಟ್ಟಗಳು, ಹುಳಿಯ ಕೆರೆಗಳು, ಭಕ್ಷ್ಯಗಳ ರಾಶಿಗಳು, ಹಣ್ಣುಗಳ ಗುಡ್ಡಗಳು ಹುಟ್ಟುತ್ತಿವೆ; ಕರಗುತ್ತಿವೆ. ಸಾಲು ಸಾಲಿನಲ್ಲಿ ಸಾವಿರ ಸಾವಿರ ಮಂದಿ ಉಂಡು ದಶರಥನನ್ನು ಹರಸುತ್ತಿದ್ದಾರೆ; " ಸಂತಸವಾಗಿದೆ, ಪೂರ್ಣವಾಗಿದೆ, ರುಚಿಕಟ್ಟಾಗಿದೆ, ರಘುವಂಶದ ದಶರಥ ನಿನಗೆ ಒಳ್ಳೆಯದಾಗಲಿ, ನಿನ್ನ ಬಯಕೆ ಈಡೇರಲಿ.
(ಅಹೋ ತೃಪ್ತಾಃ ಸ್ಮ ಭದ್ರಂತೇ ಇತಿ ಶುಶ್ರಾವ ರಾಘವಃ)
ಇಷ್ಟೂ ಮಂದಿ ಪ್ರಜೆಗಳು ಸಂತೃಪ್ತರಾಗಿ ಹರಸುತ್ತಿದ್ದರೆ ದೇವರುಗಳು ಬರದಿರುವರೇ? ಹಾಗೇ ಆಯಿತು. ಧೂಮ ಸೋಪಾನ ಪಂಕ್ತಿ ಬಳಿಗೆ ಬಂದ ದೇವತೆಗಳು ತಮ್ಮ ವಾಹನಗಳಿಂದ ಇಳಿದು ಮೆಟ್ಟಿಲುಗಳನ್ನು ಅವರೋಹಿಸುತ್ತ ಯಾಗವಾಟಿಕೆಯ ಮೇಲ್ಭಾಗಕ್ಕೆ ಬಂದರು. ಯಕ್ಷರು, ಕಿನ್ನರರು, ಕಿಂಪುರುಷರು, ನಾಗಗಳು, ದೇವತೆಗಳು..... ಎಲ್ಲರೂ ಬಂದಮೇಲೆ ಬ್ರಹ್ಮಾಗಮನವೂ ಆಯಿತು. ತಕ್ಷಣವೇ ಎಲ್ಲರೂ ವಿರಿಂಚಿಯನ್ನು ಸುತ್ತಿ ತಮ್ಮ ಅಹವಾಲನ್ನು ಹೇಳ ತೊಡಗಿದರು. "ಎಂತಹ ವರ ಕೊಟ್ಟಿರುವೆ ಬ್ರಹ್ಮದೇವ ?! ಮೊದಲೇ ದುಷ್ಟ; ಶರೀರ ಬಲಿಷ್ಠ; ಕೆಟ್ಟ ಮನಸ್ಸು; ದೈವ ವಿರೋಧ. ಯಾರನ್ನೂ ದಶಕಂಠ ಲೆಕ್ಕಿಸುತ್ತಿಲ್ಲ. ಭಿನ್ನೋದರನಾದರೂ ಕುಬೇರ ಅಣ್ಣನಲ್ಲವೇ? ಅವನನ್ನೋಡಿಸಿ ಅವನ ಲಂಕೆಯನ್ನು ಕಿತ್ತುಕೊಂಡಿದ್ದಲ್ಲದೇ ಪುಷ್ಪಕವನ್ನೂ ಸೆಳೆದುಕೊಂಡ. ನಾಗಲೋಕಕ್ಕೆ ದಾಳಿ ಮಾಡಿ ಅವೆಷ್ಟು ನಾಗಗಳನ್ನು ಕೊಚ್ಚಿ ಹಾಕಿದನೋ! ಯಕ್ಷರು ಅವನು ಬಂದನೆಂದರೆ ನಡುಗುತ್ತಾರೆ. ಅಮರಾವತಿಗೆ ಹೆಜ್ಜೆಯಿಟ್ಟರೆ ಅಷ್ಟದಿಕ್ಪಾಲಕರು ಮಾಯವಾಗುತ್ತಾರೆ. ಇಂದ್ರನ ವಜ್ರಾಯುಧ , ವರುಣನ ಪಾಶ, ಯಮನ ದಂಡ.... ಇವು ಯಾವುವೂ ಕೆಲಸಕ್ಕೆ ಬಾರದಾಗಿದೆ. ಅಮರ್ತ್ಯನಂತೆ, ಮರಣ ಮುಟ್ಟದ ಮತ್ತೊಬ್ಬ ಇಂದ್ರನಂತೆ ಮೆರೆಯುತ್ತಿದ್ದಾನೆ. ಯಾಗಗಳನ್ನು ಧ್ವಂಸ ಮಾಡುತ್ತಾನೆ. ಋತ್ವಿಜರನ್ನು ಹೊಸಕಿ ಹಾಕುತ್ತಾನೆ. ಕಾಡಿನ ಋಷಿಗಳನ್ನು ತಿಂದೇ ಬಿಡುತ್ತಾನೆ. ಲೆಕ್ಕವಿಲ್ಲದಷ್ಟು ಸುಂದರಿಯರ ಮಾನ ಭಂಗ ಮಾಡಿದ್ದಾನೆ. ಗಂಡಂದಿರ ಎದುರೇ ಹೆಣ್ಣುಗಳನ್ನು ದರೋಡೆ ಮಾಡಿದ್ದಾನೆ. ಯಾರೂ ಏನೂ ಮಾಡಲಾಗದೇ ನತಾಶರಾಗಿದ್ದಾರೆ. ಯಾರೂ ಅವನನ್ನು ಸೋಲಿಸಲಾಗದ ವರ ಕೊಟ್ಟಿರುವ ಪ್ರಭಾವ ಇದು. "