ಶಕ್ತಿ ದೇವತೆಯ ಆರಾಧನೆ ಪೂರ್ಣಾಹುತಿಯಾದಾಗ ಯಙ್ಞಕುಂಡದಿಂದ ಆಳೆತ್ತರದ ಉರಿಯೆದ್ದು, ಆ ಅಗ್ನಿಜ್ವಾಲೆಗಳೆಲ್ಲ ಯಾವುದೋ ಅಂಕೆಗೆ ಸಿಕ್ಕು ನಿಮಿಷ ಮಾತ್ರ ಒಂದು ಆಕೃತಿ. ಸಿಂಹದ ಮೇಲೆ ಕುಳಿತ ಭವಾನಿ; ಅನೇಕ ಕೈಗಳಲ್ಲಿ ವಿವಿಧ ಆಯುಧಗಳು; ಅದನ್ನು ಕಂಡು ಎಲ್ಲರೂ ದಿಂಡುರುಳಿದರು. ವಿಶ್ವಮಿತ್ರರಿಗೂ ಆನಂದವಾಯಿತು. ಆನಂತರ ಸಂತರ್ಪಣೆ. ಸುತ್ತ ಮುತ್ತಲ ಋಷಿಗಳೆಲ್ಲ ಬಂದಿದ್ದಾರೆ. ಇದ್ದಾತು ಸುಮಾರು ಇನ್ನೂರು ಮಂದಿ. ಎಲ್ಲರೂ ವಿಶ್ವಮಿತ್ರರ ಕಾಲಿಗೆ ಬಿದ್ದವರೇ. ಕಾರ್ಯಕರ್ತರು ಬಂದು ಬಿನ್ನಯಿಸಿದರು. ಎಲ್ಲರೂ ಊಟಕ್ಕೆ ಕೂಡುತ್ತಿದ್ದಾರೆ; " ಪಕ್ಕದ ಎಲೆಮನೆಯಲ್ಲಿ ತಮ್ಮೊಬ್ಬರಿಗೇ ಬಡಿಸಿದೆ, ತಾವು ದಯಮಾಡಿಸಿ ಆರೋಗಿಸಬೇಕು. "
ಭದ್ರಾಸನದಲ್ಲಿ ಕುಳಿತು ಎಲೆಯನ್ನು ವೀಕ್ಷಿಸಿದ್ದಾರೆ. ಕಣ್ಣಿಗೆ ಹಬ್ಬವಾಗುವಂತೆ ಅನ್ನ, ತವ್ವೆ, ಪಾಯಸ, ಹೋಳಿಗೆ, ಆಂಬೊಡೆ.... ಹೀಗೆ ವಿವಿಧ ಭಕ್ಷ್ಯಗಳು; ಅನೇಕ ಪಲ್ಯೆಗಳು. ಕಣ್ಣು ಅಗಲವಾಗಿ ನಾಲಿಗೆ ನೀರೂರಿದ್ದನ್ನು ವಿಶ್ವಮಿತ್ರರು ಕಂಡರು. " ಓಹ್ ! ಒಮ್ಮೆ ಈ ಇಂದ್ರಿಯಗಳಿಗೆ ಸ್ವಾತಂತ್ರ್ಯ ಸಿಕ್ಕರೆ ಸಾಕು, ನಮ್ಮನ್ನು ಎಳೆದುಬಿಡುತ್ತವೆ, ಅಲ್ಲವೇ? ಇರಲಿ, ಎಷ್ಟೋ ಕಾಲ ನನ್ನಂಕೆಯಲ್ಲಿವೆ. ಈಗೇನೋ ಬಯಸುತ್ತಿವೆ... ನಾನೇನೂ ಇದನ್ನು ಬಯಸಲೂ ಇಲ್ಲ, ಹುಟ್ಟಿಸಲೂ ಇಲ್ಲ. ಇದೂ ಪ್ರಾರಬ್ಧವೇ ಇದ್ದಾತು. ಇರಲಿ, ಇದನ್ನು ಸ್ವೀಕರಿಸಿ ಹೇಗೆ ನಲಿಯುತ್ತವೆ ನೋಡೋಣ.
"ಕೈಗೆ ಜಲ ತುಂಬಿ ಎಲೆ ಸುತ್ತ ಬಿಂದುಗಳ ಮಂಡಲ ಕಟ್ಟಿದರು. ಚಿತ್ರಾಹುತಿ ಇಟ್ಟರು. ಪ್ರಾಣ ವಾಯುಗಳಿಗೆ ಆಹುತಿ ಕೊಡಬೇಕು. ಉದ್ಧರಣೆ ನೀರು ಕುಡಿದು ಅನಾಮಿಕ ಹೆಬ್ಬೆರಳಲ್ಲಿ ಎರಡಗುಳು ಎತ್ತಿ ಬಾಯಿಗೆ ತುಟಿ ಸೋಕದಂತೆ ಗಂಟಲಿಗೆ ನೇರವಾಗಿ ಹೋಗುವಂತೆ ಚಿಮ್ಮಬೇಕು. ಅಷ್ಟರಲ್ಲಿ ಮುಚ್ಚಿದ್ದ ಬಾಗಿಲು ತೆಗೆದು ಕಪ್ಪು ಮುಖದ, ಒಣಕಲು ದೇಹದ, ಚಿಂದಿಯುಟ್ಟ ಬ್ರಾಹ್ಮಣನೊಬ್ಬ ಬಂದ. "ಹೊರಗೆ ಊಟಕ್ಕಿನ್ನೂ ಬಡಿಸಿಲ್ಲ. ಈಗಿನ್ನಾ ಪಂಙ್ಞ್ತಿಗಳಲ್ಲಿ ಕೂತ್ಕೊಳ್ತಾ ಇದಾರೆ. ನನಗೆ ಪ್ರಾಣ ಹೋಗೋ ಅಷ್ಟು ಹಸಿವಾಗಿಬಿಟ್ಟಿದೆ. ನಿಮ್ಮ ಊಟ ಕೊಟ್ಟರೆ ನನ್ನ ಜೀವ ಉಳಿಯುತ್ತೆ. ನಿಮಗೇನು, ನೀವು ದೊಡ್ಡವರು, ಇನ್ನೊಂದ್ ಸಲ ಬಡಿಸ್ತಾರೆ. " ಹಸಿದ ಬ್ರಾಹ್ಮಣ ಅಂಗಲಾಚಿದ. ವಿಶ್ವಮಿತ್ರರ ಸ್ವಗತ, " ಎಲೈ ನಾಲಿಗೆಯೇ, ಅನುಭವಿಸಿದೆಯಾ? ಇದೂ ಒಂದು ಪಾಠ. ಕಲಿತುಕೊ! ಇನ್ನೇನು ತಿನ್ನಬೇಕೆಂದು ಹಾತೊರೆಯುತ್ತಿದ್ದ ಮನಸ್ಸೇ, ಈಗ ಸುಮ್ಮನಾಗು ನೋಡೋಣ? "ಬ್ರಾಹ್ಮಣನ ಕಡೆಗೆ ತಿರುಗಿ , ಹಸನ್ಮುಖ ತೋರಿ ಮೇಲೆದ್ದರು.
(ತಸ್ಮೈ ದತ್ವಾ ತದಾ ಸಿದ್ಧಂ ಸರ್ವಂ ವಿಪ್ರಾಯ ನಿಶ್ಚಿತಃ
ನಿಶ್ಶೇಷಿತೇ ಅನ್ನೇ ಭಗವಾನ್ ನ ಭುಕ್ತ್ವೈವ ಮಹಾ ತಪಾಃ)
ದರಿದ್ರ ಬ್ರಾಹ್ಮಣ ಇವರ ಆಸನದಲ್ಲಿ ಕುಳಿತು ಗಬಗಬ ತಿನ್ನ ತೊಡಗಿದ. ಋಷಿಗಳೆಂದುಕೊಂಡರು, "ಎಲೈ ಬ್ರಾಹ್ಮಣ , ನೀನು ಯಾರೇ ಆಗಿರು, ನನ್ನ ಇಂದ್ರಿಯಗಳಿಗೆ ಒಂದು ಒಳ್ಳೆಯ ಪಾಠ ಕಲಿಸಿದೆ. ನಾನೇ ನನ್ನನ್ನು ಪರೀಕ್ಷಿಸುವಂತೆ ಮಾಡಿದೆ. ನನಗೆ ಎಷ್ಟೋ ಕಾಲದ ಮೇಲೆ ಸಿಕ್ಕಿದ್ದ ಊಟವನ್ನು ನಿನಗೆ ಕೊಟ್ಟು ಎದ್ದಾಗ ನಿನ್ನ ಮೇಲೆ ಸಿಟ್ಟಿಲ್ಲ, ಅಸಮಾಧಾನದ ಎಳೆಯೂ ಇಲ್ಲ. ನನ್ನ ಸಂಯಮದ ಪರೀಕ್ಷೆ ಮಾಡಿಬಿಟ್ಟೆ. ನಾನದರಲ್ಲಿ ಗೆದ್ದುಬಿಟ್ಟೆ. ಇಂತಹ ಅನಿರೀಕ್ಷಿತ ಪರೀಕ್ಷೆ ಮಾಡಿದ ನಿನಗೆ ಕೃತಙ್ಞನಾಗಿದ್ದೇನೆ.
ಎಲೆ ಮನೆಯ ಬಾಗಿಲು ತೆರೆದು ಹೊರಬರುತ್ತಿದ್ದಂತೆಯೇ ಅವರ ಊಟ ಮುಗಿಯಿತೆಂದು ಭಾವಿಸಿದ ಅಂತೇವಾಸಿಯೊಬ್ಬ ಕೈ ತೊಳೆಯಲು ನೀರು ಕೊಟ್ಟ. ಹೊರಡುತ್ತಿದ್ದಂತೆಯೇ ಮತ್ತೊಮ್ಮೆ ಎಲ್ಲರೂ ಸಾಷ್ಟಾಂಗ ಮಾಡಿ ಎದ್ದರು.
ವಿಶ್ವಮಿತ್ರರ ತಪೋ ಭಂಗಿಯಲ್ಲಿ ಕದಲಿಕೆಯೇ ಇಲ್ಲ. ಒಂದೆರಡು ದಿನಗಳು ಕಳೆದರೂ ಈ ಬಾರಿ, ಅವರು ಉಸಿರಾಡುವುದನ್ನೂ ಪೂರ್ಣವಾಗಿ ನಿಲ್ಲಿಸಿಬಿಟ್ಟಿದ್ದಾರೆ. ಅವರ ದೇಹದಲ್ಲಿ ತಾಪ ಏರ್ಪಟ್ಟು ಮೇಲಕ್ಕೆ ಹತ್ತುತ್ತಿದೆ; ತಲೆಯ ಮೇಲೆ ಹೊಗೆ ಏಳುತ್ತಿದೆ, ಬೆಂಕಿಯ ಗೋಪುರ ಒಂದು ತಲೆಯ ಮೇಲೆ ಮೂಡಿ ಕ್ಷಣ ಕಾಲದ ಮೇಲೆ ವಾತಾವರಣದಲ್ಲಿ ಲೀನವಾಗುತ್ತಿದೆ. ಸುತ್ತಲೆಲ್ಲ ಬಿಸಿ-ಬಿಸಿ, ಕಾಡೆಲ್ಲ ಬೆಂಕಿಯುಂಡೆ, ಸುತ್ತ ಮುತ್ತಲ ಋಷಿಗಳು ಬಿಸಿಯ ಬೇಗೆ ತಡೆಯಲಾರದೆ, ಮೂಲ ಅರಸಿ ಬಂದು ನೋಡುತ್ತಾರೆ; ವಿಶ್ವಮಿತ್ರರ ದೇಹ ಕೆಂಪಾಗಿಬಿಟ್ಟಿದೆ. ಅವರ ತಲೆಯ ಮೇಲೆ ಬೆಂಕಿಯ ವೃತ್ತಗಳು ಹೊರಬರುತ್ತಿವೆ.
ಮೊದಲೇ ವಿಶ್ವಮಿತ್ರರೆಂದರೆ ದೂರ ನಿಲ್ಲುತ್ತಿದ್ದ ಮಂದಿ, ಇದೀಗ ದಿಗಿಲುಬಿದ್ದರು; ದೂರ ಹೋದರು. ಆ ಅಡವಿ ಬಿಟ್ಟೇ ಹೋಗಿಬಿಟ್ಟರು. ಶಿರದಿಂದ ಹೊರಟ ಅಗ್ನಿ ಭೂಮಿಯಿಂದ ಮೇಲು ಮೇಲಕ್ಕೆ ಹೋಗುತ್ತ ಮೇಲಿನ ಲೋಕಗಳನ್ನು ಸುಡತೊಡಗಿದವು. ತಪೋ ಜ್ವಾಲೆ ಎಲ್ಲರನ್ನೂ ಬಿಸಿ ಮಾಡಿತು. ದೇವತೆಗಳಿಗೆ ದಿಕ್ಕು ತಪ್ಪಿತು. ಗಂಧರ್ವರಿಗೆ ಗಾಬರಿಯಾಯಿತು. ಸರ್ಪಗಳನ್ನು ಸುಡತೊಡಗಿತು. ಅಸುರರಿಗೆ ಅರಿವು ತಪ್ಪಿತು. ರಾಕ್ಷಸರಿಗೆ ರಕ್ಷಣೆಯಿಲ್ಲವಾಯಿತು. ಎಲ್ಲವನ್ನೂ ಸುಡುತ್ತ, ಎಲ್ಲರನ್ನೂ ಕಳಾಹೀನರನ್ನಾಗಿ ಮಾಡಿತು, ವಿಶ್ವಮಿತ್ರ ಜನ್ಯ ತಪೋಗ್ನಿ.
(ತಸ್ಯಾನ್ ಉಛ್ವಸಮಾನಸ್ಯ ಮೂರ್ಧ್ನಿ ಧಮೋ ವ್ಯಜಾಯತ
ತ್ರೈಲೋಕ್ಯಂ ಏನ ಸಂಭ್ರಾಂತಂ ಆದೀಪಿತಂ ಇವಾ ಭವತ್
ತತೋ ದೇವಾಃ ಸಗಂಧರ್ವಾಃ ಪನ್ನಗಾಃ ಅಸುರ ರಾಕ್ಷಸಾಃ
ಮೋಹಿತಾ ತೇಜಸಾ ತಸ್ಯ ತಪತಾ ಮಂದರಶ್ಮಯಃ)
ಸತ್ಯ ಲೋಕದಲ್ಲಿ ನೂರಾರು ದೇವತೆಗಳ, ಋಷಿಗಳ ಸಂದಣಿ. ಜೀವಿಗಳ ಹಣೆ ಬರಹ ಬರೆದು ಸೃಷ್ಟಿಕಾರ್ಯದಲ್ಲಿ ಮಗ್ನನಾಗಿದ್ದ ಬ್ರಹ್ಮ, ಕಲರವ ಬಂದ ಕಡೆ ತಿರುಗಿದ. ಕ್ಷಣದಲ್ಲಿಯೇ ಎಲ್ಲರೂ ಪಿತಾ ಮಹನಿಗೆ ಅಡ್ಡ ಬಿದ್ದು ಎದ್ದರು. ಮುಖಂಡನಾಗಿದ್ದ ಮಹೇಂದ್ರ ಒಂದೇ ಉಸುರಿಗೆ ಹೇಳ ತೊಡಗಿದ, "ಪಿತಾಮಹ! ನಾನು ಯಾವ ಯಾವ ರೀತಿಯಲ್ಲಿ ಪರೀಕ್ಷಿಸಿದೆನೋ, ಆ ಎಲ್ಲದರಲ್ಲಿಯೂ ವಿಶ್ವಮಿತ್ರ ಗೆಲ್ಲುತ್ತಲೇ ಹೋದ. ಕೊನೆಗೆ ಅವನು ಎಷ್ಟೋ ಕಾಲದ ಮೇಲೆ ಉಣ್ಣಲು ಕುಳಿತಿದ್ದಾಗ ಆ ಎಲೆಯನ್ನೇ ಕಿತ್ತುಕೊಂಡೆ. ಆಗಲೂ ಅವನು ಅಣುವಾದರೂ ಅಲ್ಲಾಡಲಿಲ್ಲ. ಇನ್ನಾವ ಪರೀಕ್ಷೆಯೂ ಅವನಲ್ಲಿ ನೆಡೆಯದೆಂದು ಅರ್ಥವಾಯಿತು". ಉಸಿರು ತೆಗೆದುಕೊಂಡು ಮತ್ತೆ ಬ್ರಹ್ಮದೇವನನ್ನು ನೋಡುತ್ತ ಹೇಳ ತೊಡಗಿದ; " ಏನೇನೇ ಪ್ರಯತ್ನಗಳನ್ನು ಪಟ್ಟರೂ, ಪಿತಾ ಮಹಾ, ಅವನ ತಪಸ್ಸು ವರ್ಧಿಸುತ್ತಲೇ ಹೋಗಿದೆ. ಕಾಮ ಕ್ರೋಧಗಳನ್ನು ಹುಟ್ಟಿಸಲು ಮಾಡಿದ ಎಲ್ಲ ಪ್ರಯತ್ನಗಳೂ ವಿಫಲವಾದವು. ವಿರುದ್ಧವಾಗಿ ಆತನ ತಪಸ್ಸು ಅಭಿವೃದ್ಧಿಯಾಗುತ್ತಲೇ ಇದೆ.
(ಬಹುಭಿಃ ಕಾರಣೈರ್ದೇವ ವಿಶ್ವಾಮಿತ್ರೋ ಮಹಾ ಮುನಿಃ
ಲೋಭಿತಃ ಕ್ರೋಧಿತಶ್ಚೈವ ತಪಸಾ ಚ ಅಭಿವರ್ಧತೇ)
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos