ರಾಮಾಯಣ ಅವಲೋಕನ 
ಅಂಕಣಗಳು

'ಇಂದ್ರನಿಗೆ ಸಾವಿರ ಕಣ್ಣಾಗಲಿ; ಅಹಲ್ಯೆ ಕಲ್ಲಾಗಲಿ'ಎಂದು ಶಪಿಸಿದನೇ ಗೌತಮ? ಇಲ್ಲವಲ್ಲ!, ಹಾಗಾದರೆ...?

"ಅಯೋಗ್ಯ! ನಿನ್ನ ಚಾಪಲ್ಯಕ್ಕೆ ಇತಿಯಿಲ್ಲ, ನಿನ್ನ ಭೋಗಕ್ಕೆ ಮಿತಿಯಿಲ್ಲ. ಸುರ ಗಣಿಕೆಯರಲ್ಲಿ ತಣಿಯದ ನೀನು ನನ್ನ ಮನೆಗೂ ಬಂದೆಯಾ? ಶುದ್ಧ ಕ್ಷೇತ್ರವನ್ನು ಅಪವಿತ್ರ ಮಾಡಿದೆಯ? ಯಙ್ಞತಾಣವನ್ನು ಭೋಗ...

ಪರ್ಣ ಕುಟಿಯ ಬಾಗಿಲು ತೆಗೆದ ಇಂದ್ರ ನಿಂತ. ಹೋಗುತ್ತಿಲ್ಲ; ಮಾಯವಾಗುತ್ತಿಲ್ಲ. ತನಗೋ ತಲೆ ಕೆಟ್ಟು ಹೋಗುತ್ತಿದೆ. ಆಶ್ರಮದ ಸುತ್ತ ಹಾಕಿದ್ದ ಬೇಲಿಯ ಬಾಗಿಲು ಓರೆಯಾಯಿತು. ಬಂದೇ ಬಿಟ್ಟ ತನ್ನ ಗಂಡ! ಸ್ನಾನ ಮಾಡಿ ನಾರುಡೆಯುಟ್ಟು ಮತ್ತೊಂದನ್ನು ಹೆಗಲಲ್ಲಿಟ್ಟು, ಕಮಂಡಲ ಹಿಡಿದು ಒಳ ಬಂದವರೇ ಆಗಂತುಕನನ್ನು ಕಂಡರು. ಸುತ್ತಮುತ್ತಲ ಮುನಿಗಳು ಪರಿಚಿತರೇ. ಈತ ಯಾರೋ? ಎಲ್ಲೋ ಕಂಡಿರುವೆ.. ಅಹ್? ನನ್ನ ಹೋಲಿಕೆಯೇ. ಏಕೆ? ಹೆದರಿಕೆಯಿಂದ ನಿಂತಂತಿದೆ?
ಇಂದ್ರ ಎಷ್ಟೇ ಯೋಜನೆ ಮಾಡಿದ್ದರೂ, ಗೌತಮರಿಗೆ ವೃತ ಭಂಗ ಮಾಡಿಸಲೇ ಬಂದಿದ್ದರೂ, ಅವರನ್ನು ಕಂಡಕೂಡಲೇ ನಡುಕ ಹುಟ್ಟಿಯೇ ಬಿಟ್ಟಿತು.
( ದೃಷ್ಟ್ವಾ ಸುರಪತಿಸ್ತ್ರಸ್ತೋ ವಿವರ್ಣ ವದನೋ ಭವತ್ )
ಇವನು ಯಾರೇ ಆಗಿರಲಿ, ನನ್ನನ್ನು ಕಂಡು ಬಿಳಿಚಿದ್ದಾನೆಂದರೆ ಇವನ ಚಿತ್ತ ಶುದ್ಧ ಇರಲಾರದು. ಯಾರೀತ?  ಎಂದು ಕಣ್ಣ ಮುಚ್ಚಿ ನೋಡ ತೊಡಗಿದರು.  ಇಂದ್ರ! ಮುನಿವೇಷ! ಅಲ್ಲ, ನನ್ನದೇ ರೂಪ!! ಕುಟಿಯಿಂದ ಬರುತ್ತಿದ್ದಾನೆ. ಎಂದ ಮೇಲೆ ಒಳಗೇನೋ ನೆಡೆದಿದೆ. ಏನು ನಡೆಯಿತು?  ಘಂಟೆಯಿಂದ ನಡೆದ ದೃಷ್ಯ ಕಾಣ ತೊಡಗಿದವು. ನೆಮ್ಮದಿ ಹಾಳಾಯಿತು. ರೋಷ ಉಕ್ಕಿತು. ಮನಸ್ಸು ಮುರಿಯಿತು. ಕಮಂಡಲದ ನೀರು ಕೈಗೆ ಸುರಿಯಿತು. ಭೀಕರವಾಗಿ ಶಪಿಸಿ ನೀರನ್ನು ಇಂದ್ರನೆಡೆ ತೂರಿದರು. "ಅಯೋಗ್ಯ! ನಿನ್ನ ಚಾಪಲ್ಯಕ್ಕೆ ಇತಿಯಿಲ್ಲ, ನಿನ್ನ ಭೋಗಕ್ಕೆ ಮಿತಿಯಿಲ್ಲ. ಸುರ ಗಣಿಕೆಯರಲ್ಲಿ ತಣಿಯದ ನೀನು ನನ್ನ ಮನೆಗೂ ಬಂದೆಯಾ? ಶುದ್ಧ ಕ್ಷೇತ್ರವನ್ನು ಅಪವಿತ್ರ ಮಾಡಿದೆಯ? ಯಙ್ಞತಾಣವನ್ನು ಭೋಗ ಭೂಮಿಯನ್ನಾಗಿಸಿದೆಯಾ? ನೀನೂ ಜಾರನಾಗಿ ಅವಳನ್ನೂ ಜಾರಿಣಿಯನ್ನಾಗಿಸಿದೆಯಾ? "ಇಂದ್ರ ಗೌತಮನಿಗೆ ಸಿಟ್ಟು ಬರಿಸಿ ತಪೋ ಭಂಗ ಮಾಡಬೇಕೆಂದು ಲೆಕ್ಕ ಹಾಕಿದ್ದನಷ್ಟೇ. ಆದರೆ ಈಗಿದು ವಿಪರೀತಕ್ಕಿಟ್ಟುಕೊಂಡಿತು. ತನಗೇ ಶಾಪ ಕೊಡುತ್ತಿದ್ದಾನೆ! ಶಾಪ ವಾಕ್ಕು ತೂರಿ ಬಂತು. "ಪೌರುಷಕ್ಕೆ ಪ್ರತೀಕವಾದ ವೃಷಣಗಳು ಈ ಕ್ಷಣದಿಂದ ಬಿದ್ದು ಹೋಗಲಿ"
(ಪೇತತುರ್ ವೃಷಣೌ ಭೂಮೌ ಸಹಸ್ರಾಕ್ಷಸ್ಯ ತತ್ ಕ್ಷಣಾತ್)
ಯಾವ ದೈತ್ಯನೊಡನೆ ಯುದ್ಧ ಮಾಡಿದಾಗಲೂ ಆಗದ ಪರಾಭವ! ದೇಹದ ಯಾವ ಅಂಗಕ್ಕೆ ಆಯುಧ ಬಡಿದರೂ ಆಗದ ಯಾತನೆ!! ಕಾಲುಗಳ ಮಧ್ಯೆ ಜಾರಿ ಹೋಯಿತು!!! ಉಟ್ಟ ಬಟ್ಟೆಯೆಲ್ಲ ರಕ್ತ! 
*************
ಮಾಯವಾದ ಇಂದ್ರ ಪ್ರತ್ಯಕ್ಷವಾದದ್ದು ಅಮರಾವತಿಯಲ್ಲಿ. ದೇವತೆಗಳೆಲ್ಲ ಕಂಗಾಲಾದರು; ದೇವೇಂದ್ರನ ದೈನ್ಯ ಕಂಡು. ಇಂದ್ರ ಬಡಬಡಿಸತೊಡಗಿದ. ಕರೆಯಿರಿ ಅಶ್ವಿನಿ ದೇವತೆಗಳನ್ನು. ಗೌತಮರಿಗೆ ತಪೋ ಭಂಗ ಮಾಡಲು ಹೀಗೆ ಮಾಡಿದೆ. ಹೀಗೆ ಮಾಡಿ ಅವನಿಗೆ ಸಿಟ್ಟು ಬರಿಸಿದೆ. ಇದು ದೇವ ಕಾರ್ಯ. ಈಗ ನೋಡಿ, ನಾನೀಗ ವೃಷಣಗಳನ್ನು ಕಳೆದುಕೊಂಡೆ. ಅಹಲ್ಯೆಗೂ ಶಾಪ ಕೊಡಿಸಿ ಗೌತಮರ ತಪಸ್ಸಿನಲ್ಲಿ ಸಾಕಷ್ಟು ಹಾಳು ಮಾಡಿದೆ! 
(ಕುರ್ವತಾ ತಪಸೋ ವಿಘ್ನಂ ಗೌತಮಸ್ಯ ಮಹಾತ್ಮನಃ
ಕ್ರೋಧಂ ಉತ್ಪಾದ್ಯಹಿ ಮಯಾ ಸುರಕಾರ್ಯಂ ಇದಂ ಕೃತಂ
ಅಫಲೋ ಅಸ್ಮಿ ಕೃತಸ್ತೇನ ಕ್ರೋಧಾತ್ ಸಾ ಚ ನಿರಾಕೃತಾ
ಶಾಪ ಮೋಕ್ಷೇಣ ಮಹತಾ ತಪಃ ಅಸ್ಯ ಅಪಹೃತಂ ಮಯಾ)
*************
ಬೆಂಕಿಯಂತೆ ಉರಿಯುತ್ತಿದ್ದ, ಕೃಷ್ಣ ಸರ್ಪದಂತೆ ಭಿಸುಗುಡುತ್ತಿದ್ದ ಗಂಡನನ್ನು ಕಂಡು ನಡುಗಿಬಿಟ್ಟಳು. ಕಾಲ ಮೇಲೆ ಬಿದ್ದಳು. ಏನು ಹೇಳಲೂ ನಾಲಗೆ ಹೊರಳುತ್ತಿಲ್ಲ. ಗೌತಮರ ಕೈ ತುಂಬ ಮತ್ತೆ ಮಂತ್ರ ಜಲ ತುಂಬಿತು. "ನೀನು ಮೋಸ ಹೋಗಲಿಲ್ಲ! ನಿನ್ನ ಅನುಮತಿಯಿಂದಲೇ ಅವನು ನಿನ್ನ ಮೇಲೆ ಬಿದ್ದ. "ಪತಿ ಹೇಳುತ್ತಿರುವುದೂ ನಿಜ. ತಾನೇನು ಹೇಳುವಂತಿದೆ? ಗೌತಮರ ಮಾತು ಮುಂದುವರಿಯಿತು; "ಹೆಣ್ಣಿನ ಮೇಲೆ ಗಂಡಿನ ದೌರ್ಜನ್ಯ ನಡೆಯುತ್ತಲೇ ಇರುತ್ತದೆ. ಅವಳು ಅಬಲೆ ಎಂಬುದೇ ಕಾರಣ. ಆದರೆ ಸಬಲ ಸ್ತ್ರೀ ಮೇಲೆ ಗಂಡಿನ ಆಟ ನಡೆಯದು. ನಿನಗೆ ನನ್ನ ರಕ್ಷೆ ಇತ್ತು. ಇಂದ್ರ, ಮಹೇಂದ್ರನೇ ಆಗಿದ್ದರೂ ನೀನು ಅನುಮತಿಸದೇ ನಿನ್ನನ್ನು ಮುಟ್ಟಲೂ ಆಗುತ್ತಿರಲಿಲ್ಲ. ಅವನ ತಪ್ಪಿಗೆ ಅವನ ಪೌರುಷವನ್ನೇ ಕತ್ತರಿಸಿಬಿಟ್ಟೆ. ನಿನಗೆ ಅವನಿಗಿನ್ನ ಘೋರ ಶಾಪ ಕೊಡಬೇಕು!"
ಇನ್ನು ಸುಮ್ಮನಿದ್ದರೆ ನನ್ನ ಸರ್ವ ನಾಶವಾಗುತ್ತದೆ. ಪತಿಯ ಸಿಟ್ಟನ್ನು ಹೇಗಾದರೂ ಮಾಡಿ ಕಡಿಮೆ ಮಾಡಬೇಕು. " ಸ್ವಾಮಿ, ಕ್ಷಮಿಸಿ! "ತನ್ನೆಲ್ಲ ಶಕ್ತಿಯನ್ನೂ ನಾಲಗೆಗೆ ತಂದು ಹೇಳಿದಳು; "ಕ್ಷಮಿಸಿ, ನನ್ನದು ತಪ್ಪಾಗಿದೆ, ಕ್ಷಮಿಸಿ! ಶಿಕ್ಷೆ ಕೊಡಿ! ಆ ಶಿಕ್ಷೆ ನನ್ನ ಅಪರಾಧವನ್ನು ಕರಗಿಸಲಿ. ನಿಮ್ಮ ಸಾನ್ನಿಧ್ಯ ಮತ್ತೆ ಸಿಗುವಂತಾಗಲಿ. "ಉಕ್ಕುತ್ತಿದ್ದ ಹಾಲಿಗೆ ಮತ್ತೆ ನೀರು ಚಿಮುಕಿಸಿದಂತೆ, ಭೋರ್ಗರೆದು ಬಂದ ನದಿಗೆ ಕಮರಿ ಎದುರಾದಂತೆ, "ತಪಸ್ಸು ಬಿಟ್ಟರೆ ಬೇರೆ ಶಿಕ್ಷೆ ನಾನು ಕಾಣೆ. ನಿನ್ನ ದುರ್ಗುಣ ಸುಟ್ಟು ಹೋಗಬೇಕಾದರೆ ಯಙ್ಞಕುಂಡದ ಭಸ್ಮ ಮಧ್ಯೆ ಕುಳಿತುಕೋ. ಯಾರಿಂದಲೂ ನಿನಗೆ ತೊಂದರೆಯಾಗಕೂಡದು. ಹಾಗಾಗಬೇಕಾದರೆ ನೀನು ಯಾರ ಕಣ್ಣಿಗೂ ಕಾಣಿಸಕೂಡದು. ಘನಾಹಾರ ತ್ಯಜಿಸಿ, ವಾಯುವನ್ನೇ ಆಹಾರವಾಗಿ ಸ್ವೀಕರಿಸು. ಹಾಗೆ ಮಾಡುತ್ತಾ ತಪಸ್ಸನ್ನು ಮಾಡುತ್ತಿರು. "
(ವಾಯುಭಕ್ಷಾ ನಿರಾಹಾರ ತಪ್ಯಂತೀ ಭಸ್ಮ ಶಾಯಿನೀ 
ಅದೃಶ್ಯಾ ಸರ್ವಭೂತಾನಾಂ ಆಶ್ರಮೇಸ್ಮಿನ್ ನಿವತ್ಸ್ಯಸಿ)
ಕ್ಷಣ ಮಾತ್ರದಲ್ಲಿ ಅಹಲ್ಯೆ ಕಾಣದಾದಳು. ಪಾದಗಳ ಮೇಲೆ ಅವಳ ಹಿಡಿತ ಇನ್ನೂ ಬಿಗಿದಿತ್ತು. "ಸ್ವಾಮಿ, ಈ ನನ್ನ ತಪಸ್ಸಿಗೆ ಒಂದು ಅವಧಿಯನ್ನು ಗೊತ್ತು ಮಾಡಿ. ನನಗೆ ಶಾಪ ವಿಮೋಚನೆ ಯಾವಾಗ?". ಪತ್ನಿಯ ಬೇಡಿಕೆ ನ್ಯಾಯವಾಗಿಯೇ ಇದೆ. ನಿಮಿಷ ಕಾಲ ಕಣ್ಣು ಮುಚ್ಚಿ, ಮುಂದಿನ ಕಾಲದಲ್ಲಿ ನುಗ್ಗಿ ನೋಡಿ ಹಿಂಬಂದು ಹೇಳಿದರು, "ಈ ಘೋರಾರಣ್ಯಕ್ಕೆ ದಶರಥ ಪುತ್ರ ರಾಮನ ಬರವೇ ನಿನ್ನ ಶಾಪ ವಿಮೋಚನೆಯ ಮೊದಲ ಹೆಜ್ಜೆ. ಆತ ಇಲ್ಲಿಗೆ ಬಂದನೆಂದರೆ... ಆಗ ನಿನಗೆ ಪೂರ್ವ ರೂಪ. ನಿನಗೆ ನಿನ್ನ ಸ್ತ್ರೀ ರೂಪ ಬಂದಿತೆಂದರೆ ನಿನಗೆ ಶಾಪ ವಿಮೋಚನೆಯಾಯಿತೆಂದೇ ಅರ್ಥ. "ಯಾವಾಗ ಆ ದಾಶರಥಿ ಬರುವನೋ? ಅಂತೂ ಅಂತಿಮ ಗಡು ಒಂದು ನಿರ್ಧಾರವಾಯಿತಲ್ಲ? ಆದರೆ, ಆದರೆ... "ಸ್ವಾಮಿ, ನಿಮ್ಮ ಭೇಟಿ ಎಂದು ಮತ್ತೆ?" ಮಡದಿಯ ಮೊರೆ ಗೌತಮನ ಹೃದಯಕ್ಕೆ ತಟ್ಟಿತು. ಇಂದ್ರನೆಡೆಗೆ ಆಕರ್ಷಿತಳಾಗಲು ತನ್ನ ಅಲಕ್ಷ್ಯವೂ ಕಾರಣವೋ ಎಂಬ ಸಂದೇಹ ಮನಸ್ಸಿನಲ್ಲಿ ಮೊಳಕೆ ಒಡೆದಿತ್ತು. "ಈಗ ಈ ಕಾರ್ಯ ಮಾಡಿ ದುರ್ವೃತ್ತಳಾದೆ. ತಪಿಸಿ ನೀನು ಶುದ್ಧಳಾಗು. ಶ್ರೀರಾಮರು ಆಗಮಿಸುವ ಹೊತ್ತಿಗೆ ನಿನ್ನಲ್ಲಿನ ನಿನ್ನ ಲೋಭ-ಮೋಹಗಳನ್ನು ನೀನು ಸುಟ್ಟಿರುತ್ತೀಯೆ. ಆ ಶುದ್ಧ ಸ್ಥಿತಿಯಲ್ಲಿ ಶ್ರೀರಾಮರನ್ನು ನೀನು ಆದರಿಸಿ ಅತಿಥಿ ಸತ್ಕಾರ ಮಾಡು. ಆಗ ನಮ್ಮ ಸಮಾಗಮ." 
(ತಸ್ಯ ಆತಿಥ್ಯೇನ ದುರ್ವೃತ್ತೇ ಲೋಭ ಮೋಹ ವಿವರ್ಜಿತಾ 
ಮತ್ಸ್ಯಕಾಶೇ ಮದಾಯುಕ್ತ ಸ್ವಂ ವಪುರ್ ಧಾರ ಇಷ್ಯಸಿ)
ಅಂದಿನಿಂದ ಅಹಲ್ಯೆ ಇಲ್ಲೇ ಯಾರ ಕಣ್ಣಿಗೂ ಕಾಣದೇ ಯಙ್ಞಕುಂಡದಲ್ಲಿ ತಪಸ್ಸು ಮಾಡುತ್ತಿದ್ದಾಳೆ. ಈಗ ನೀನು ಬಂದಿರುವೆ, ನಿನ್ನನ್ನು ನೋಡಿದೊಡನೆ ಆಕೆಗೆ ಪುನರ್ ದೇಹ ಬರುತ್ತದೆ. "ವಿಶ್ವಮಿತ್ರರು ಕಥೆ ಮುಗಿಸಿದರು. ಇಲ್ಲ ಇಲ್ಲ, ಮುಗಿಯಲಿಲ್ಲ! ತಂದೆ ತಾಯಿಯರ ಸಮಾಗಮವಾಯಿತೆ? ಹೇಗಾಯಿತು? ಶತಾನಂದರ ಕುತೂಹಲ ವಿಶ್ವಮಿತ್ರರನ್ನು ಪ್ರೇರೇಪಿಸಿತು. ಅದೇನಾಯಿತೆಂದರೆ....(ಮುಂದುವರೆಯುವುದು)
 
-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT