ಶ್ರೀರಾಮ ಪಾದಸ್ಪರ್ಶದಿಂದ ಪುನೀತಳಾದಳೇನು ಅಹಲ್ಯೆ? 
ಅಂಕಣಗಳು

ಶ್ರೀರಾಮ ಪಾದಸ್ಪರ್ಶದಿಂದ ಪುನೀತಳಾದಳೇನು ಅಹಲ್ಯೆ?

ಇದ್ದಕ್ಕಿದ್ದಂತೆಯೇ ಕಣ್ಣು ಕೋರೈಸುವ ಪ್ರಕಾಶ ಝಗ್ಗೆಂದಿತು. ರಾಮರೂ ಕ್ಷಣಕಾಲ ನಿಬ್ಬೆರಗಾದರು; ಹಿಂದೆಗೆದರು; ಕಣ್ಣು ಹೊಸೆದರು. ಕಣ್ಣು ಆ ಅಭೂತ ಬೆಳಕಿನ ಆಕಾರಕ್ಕೆ ಹೊಂದಿಕೊಳ್ಳಲು ಯತ್ನಿಸುತ್ತಿತ್ತು. ತಪ...

ಅದೇನಾಯಿತೆಂದರೆ, ಕಥೆ ಕೇಳಿದ ಮೇಲೆ ಶ್ರೀರಾಮರು ನೇರ ಯಙ್ಞ ಕುಂಡದ ಬಳಿ ಹೋದರು. ಯಙ್ಞಕುಂಡವೀಗ ತಪೋಕುಂಡ. ಅಗ್ನಿ ಇಲ್ಲ. ಆದರೆ ಯಙ್ಞಕುಂಡವನ್ನು ಸಾರಿಸಿ, ರಂಗವಲ್ಲಿ ಎಳೆದು, ಹೂವಿನಿಂದ ಅಲಂಕರಿಸಿದೆ. ಮಧ್ಯದಲ್ಲಿ ಏನೂ ಕಾಣುತ್ತಿಲ್ಲ. ಶ್ರೀರಾಮರು ಕುಂಡಕ್ಕೆ ನಮಸ್ಕರಿಸಿ, "ಅಮ್ಮ, ನಿನ್ನ ಮಗ ರಾಮ ಬಂದಿದ್ದಾನೆ, ನಿನ್ನನ್ನು ಕಾಣಲು ಕಾದಿದ್ದಾನೆ. "ಬಹುಶ: ಎಂದಿನಂತೆ ಅಹಲ್ಯೆ ಯಙ್ಞಕುಂಡವನ್ನು ಸಾರಿಸಿ, ಪೂಜಿಸಿ, ಯಙ್ಞಕುಂಡದ ಮಧ್ಯದಲ್ಲಿ ಕುಳಿತು ಕಣ್ಮುಚ್ಚಿ ಧ್ಯಾನದಲ್ಲಿದ್ದಿರಬೇಕು. ಈಗ ಕಣ್ಣು ತೆರೆದಿರಬೇಕು.
ಇದ್ದಕ್ಕಿದ್ದಂತೆಯೇ ಕಣ್ಣು ಕೋರೈಸುವ ಪ್ರಕಾಶ ಝಗ್ಗೆಂದಿತು. ರಾಮರೂ ಕ್ಷಣಕಾಲ ನಿಬ್ಬೆರಗಾದರು; ಹಿಂದೆಗೆದರು; ಕಣ್ಣು ಹೊಸೆದರು. ಕಣ್ಣು ಆ ಅಭೂತ ಬೆಳಕಿನ ಆಕಾರಕ್ಕೆ ಹೊಂದಿಕೊಳ್ಳಲು ಯತ್ನಿಸುತ್ತಿತ್ತು. ತಪ ಮಾಡಿ-ಮಾಡಿ, ರವೆಯಷ್ಟಿದ್ದ ದೊಷವನ್ನೂ ಕಳೆದು, ಕೇವಲ ಸ್ವರ್ಣ ಕಾಂತಿ. ಮೊದಲೇ ಅಹಲ್ಯೆ, ದೋಷ ರಹಿತೆ, ಇದೀಗ ತಪ ಸುತ್ತಿಗೆಯ ಸತತ ಹೊಡೆತ! ಇದ್ದಿರಬಹುದಾದ ಅಣು ಕೊಳೆಯೂ ಕರಗಿ ಹೋಗಿ ಶುದ್ಧ ಚಿನ್ನ. ಶ್ರೀರಾಮರ ಪ್ರಾರ್ಥನೆ ಕಿವಿಗೆ ಸೋಕುತ್ತಿದ್ದಂತೆಯೇ ಕಣ್ಣು ಬಿಟ್ಟ ಅಹಲ್ಯೆ. ದರ್ಶನವಾಗುತ್ತಿದ್ದಂತೆಯೇ ಪೂರ್ವದೇಹ ಪ್ರಾಪ್ತಿ! ಅದು ಗೌತಮರ ಮಾತು. ಶಾಪಾವೃತ್ತಳಾಗಿ, ಈಗ, ಶಾಪವಲಯದಿ೦ದ ಹೊರಬರುತ್ತಿದ್ದ ಅಹಲ್ಯೆ ರಾಮರಿಗೆ ಕಂಡಳು; ಮೋಡ ಮಧ್ಯದ ಪೂರ್ಣ ಚಂದ್ರನಂತೆ; ಧೂಮ ಮಧ್ಯದ ಜ್ವಾಲೆಯಂತೆ; ನೀರ ಮಧ್ಯದ ರವಿ ಕಿರಣದಂತೆ.  
(ಸ ತುಷಾರಾವೃತಾಂ ಸಾಭ್ರಾಂ ಪೂರ್ಣ ಚಂದ್ರ ಪ್ರಭಾಂ ಇವ 
ಧೂಮೇನಾಪಿ ಪರೀತಾಂಗೀಂ ದೀಪ್ತಾಂ ಅಗ್ನಿಶಿಖಾಂ ಇವ 
ಮಧ್ಯೇ ಅಂಭಸೋ ದುರಾಧರ್ಶಾಂ ದೀಪ್ತಾಂ ಸೂರ್ಯಪ್ರಭಾಂ ಇವ)
ತೇಜಸ್ಸನ್ನು ಕಂಡು ಅಪ್ರತಿಭರಾಗಿದ್ದ ರಾಮ ಲಕ್ಷ್ಮಣರು, ಕ್ಷಣಕಾಲದಲ್ಲಿ ಚೇತರಿಸಿಕೊಂಡು, ಆ ವೃದ್ಧೆಯ ಎರಡೂ ಪಾದಗಳನ್ನು ಹಿಡಿದು ನಮಸ್ಕರಿಸಿದರು. 
(ರಾಘವೌತು ತಸ್ತಸ್ತಸ್ಯಾಃ ಪಾದೌ ಜಗೃಹತುಸ್ತದಾ)
ರಾಮಾಗಮನ, ದರ್ಶನವಾಗುತ್ತಿದ್ದಂತೆಯೇ, ತನಗೆ ದೇಹ ಪ್ರಾಪ್ತಿಯಾಗುತ್ತಿದ್ದಂತೆಯೇ, ಯಜಮಾನರ ಆದೇಶ ನೆನಪಾಯಿತು. ಮನದಲ್ಲಿ ಯೋಚಿಸುತ್ತಿದ್ದಂತೆಯೇ ಅರ್ಘ್ಯ, ಜಲ, ಅರಿಶಿನ, ಕುಂಕುಮ, ವಸ್ತ್ರ, ಹೂವು... ಎಲ್ಲ ಕೈ ಚಾಚುತ್ತಿದ್ದಂತೆಯೇ, ಪ್ರತ್ಯಕ್ಷವಾಗ ತೊಡಗಿದವು. ಮನಸ್ಸಿನಲ್ಲಿ ಸಂಕಲ್ಪಿಸುತ್ತಿದ್ದಂತೆಯೇ ಸಿಂಹಾಸನವೊ೦ದು ಸಿದ್ಧವಾಯಿತು. "ರಾಮ, ದಯವಿಟ್ಟು ಕೂಡು. ನೀನು ಕೇವಲ ಮನುಷ್ಯನಲ್ಲ, ನೀನು ಅವತಾರ ಪುರುಷ; ನಿನ್ನನ್ನು ಪೂಜಿಸಬೇಕೀಗ. ನೀನು ಸಾಮಾನ್ಯ ಅತಿಥಿಯಲ್ಲ, ನನ್ನ ಉದ್ಧಾರಕ್ಕೆ ಆಗಮಿಸಿದ ಮಹಾ ಅತಿಥಿ. "ಶ್ರೀರಾಮರಿಗೆ ತುಂಬ ಸಂಕೋಚವಾಯಿತು. ಹೇಗೆ ತಾನು ಆಸನದಲ್ಲಿ ಕುಳಿತು ಆ ಅಜ್ಜಿಯಿಂದ ಉಪಚರಿಕೊಳ್ಳುವುದು? ವಿಶ್ವಮಿತ್ರರು ನೆರವಿಗೆ ಬಂದರು. "ರಾಮ, ನಿನ್ನನ್ನು ಪೂಜಿಸಿದರೆ ಮಾತ್ರವೇ ಗೌತಮರು ಬರುವುದು. ಆ ದಿವ್ಯ ಸಮಾಗಮಕ್ಕಾಗಿ ನೀನು ಈಗ ನೆಪ. ನಿನ್ನಿಂದ ಇಂತಹುದೊಂದು ಅಭೂತ ಕಾರ್ಯವಾಗಲಿ. ತಪ್ಪು ಮಾಡುವುದು ಸಹಜ, ಎಲ್ಲರೂ ಮಾಡುತ್ತಾರೆ. ಆದರೆ ಅದನ್ನು ತಿದ್ದಿಕೊಳ್ಳುವುದರಲಿಯೇ ವ್ಯಕ್ತಿಯ ಯೋಗ್ಯತೆ ಇರುವುದು. ತಪಸ್ಸಿನ ಬೆಂಕಿಯಲ್ಲಿ ಎಂತಹ ಕೊಳೆಯೂ ತೊಳೆದು ಹೋಗುತ್ತದೆ ಎಂದು, ಅದಕ್ಕೆ ರಾಮರ ಒಪ್ಪಿತವೂ ಇದೆ ಎಂದು ಲೋಕಕ್ಕೆ ಗೊತ್ತಾಗಲಿ; ಕೂಡು. " .ಮುದುರಿ ಕುಳಿತ ರಾಮ ಪಾದಕ್ಕೆ ನೀರು ಹನಿಸುತ್ತಿದ್ದಂತೆಯೇ ಹಿಮಾಲಯದಲ್ಲಿದ್ದ ಗೌತಮರ ಕಣ್ಣು ಮುಂದೆ ಈ ಚಿತ್ರ. ಮರುಕ್ಷಣದಲ್ಲವರು ಆಶ್ರಮದಲ್ಲಿ. ಗೌತಮರನ್ನು ಕಂಡು ರಾಮ, ಲಕ್ಷ್ಮಣ, ವಿಶ್ವಮಿತ್ರರೆಲ್ಲರಿಗೂ ಸಂಭ್ರಮ. ಕಾಲಿಗೆ ಬಿದ್ದ ಅಹಲ್ಯೆಯನ್ನೆತ್ತಿ ಅಪ್ಪಿಕೊಂಡರು ಗೌತಮರು. 
( ತಪೋ ಬಲ ವಿಶುದ್ಧಾಂಗೀಂ ಗೌತಮಸ್ಯ ವಶಾನುಗಾಂ
ಗೌತಮೋಪಿ ಮಹಾತೇಜಾ ಅಹಲ್ಯಾ ಸಹಿತಃ ಸುಖೀ )
***************
ವಿಶ್ವಮಿತ್ರರು ಕಥೆ ಮುಗಿಸಿದರು. ಶತಾನಂದರು ಧನ್ಯತಾ ಭಾವದಿಂದ ಕೈಜೋಡಿಸಿ ನುಡಿದರು, " ಶ್ರೀರಾಮ, ನೀನು ಕ್ಷತ್ರಿಯನಿದ್ದರೂ, ನಾನು ಬ್ರಾಹ್ಮಣನಿದ್ದರೂ, ನನಗಿನ್ನ ನೀನು ಚಿಕ್ಕವನಿದ್ದರೂ, ನೀನು ನನಗೇ ನಮಸ್ಕಾರ ಮಾಡಿದರೂ, ನಾನು ನಿನಗೆ ಆಶೀರ್ವಾದ ಮಾಡಿದರೂ ಈಗ ಒಂದು ಬದಲಾವಣೆ. ನನ್ನ ತಾಯಿಯ ಶಾಪವನ್ನು ನೀಗಿಸಿದೆಯಾಗಿ, ನನ್ನ ತಂದೆ ತಾಯಿಯರನ್ನು ಒಂದು ಮಾಡಿದೆಯಾಗಿ, ಮಗನಾಗಿ ನನಗೆ ತುಂಬ ಆನಂದವಾಗಿದೆ. ಕೃತಙ್ಞತಾ ಪೂರ್ವಕವಾದ ಈ ನನ್ನ ವಂದನೆಗಳನ್ನು ಸ್ವೀಕರಿಸು. 
***************
(ಆತ್ಮೀಯ ಓದುಗರೆ, ಈ ಅಹಲ್ಯಾ ಪ್ರಕರಣಕ್ಕೆ ಮಂಗಳ ಹಾಡುವ ಮುನ್ನ ಒಂದೆರಡು ಅಂಶಗಳ ನಿವೇದನೆ ನಿಮ್ಮಲ್ಲಿ. ಕೇಳಿರುವ ಕಥೆಗಳಲ್ಲಿ, ಮಲಗಿದ್ದ ಗೌತಮರನ್ನು ಕೋಳಿಯಾದ ಇಂದ್ರ ಎಚ್ಚರಿಸುತ್ತಾನೆ. ಸ್ನಾನಕ್ಕೆ ಹೋಗುತ್ತಿದ್ದಂತೆಯೇ ಅವರ ರೂಪ ಧರಿಸಿ ಬಂದ ಇಂದ್ರನನ್ನು ಅಹಲ್ಯೆ ಗಂಡನೆಂದೇ ನಂಬಿ ಅವನ ತೆಕ್ಕೆಗೆ ಸಹಜವಾಗಿ ಸ್ಪಂದಿಸುತ್ತಾಳೆ. ಅನಂತರ ಸಿಕ್ಕಿ ಬಿದ್ದಾಗ ಇಂದ್ರನಿಗೆ ಸಾವಿರ ಕಣ್ಣಾಗಲೆಂದೂ, ಅಹಲ್ಯೆಗೆ ಕಲ್ಲಾಗೆಂದೂ ಗೌತಮರು ಶಪಿಸುತ್ತಾರೆ. ಶ್ರೀರಾಮ ಪಾದ ಸ್ಪರ್ಶದಿಂದ ಕಲ್ಲಾಗಿದ್ದ ಅಹಲ್ಯೆ ಮತ್ತೆ ಹಿಂದಿನ ರೂಪವನ್ನೇ ಪಡೆಯುತ್ತಾಳೆ-ಇದು ತಾನೆ, ನಾವು ಕೇಳಿರುವ ಕಥಾ ಸಾರಾಂಶ? 
ಈ ಕಥೆಗೆ ರಾಮಾಯಣದಲ್ಲಿ ಯಾವ ಆಧಾರವೂ ಇಲ್ಲವೆಂದು ಹೇಳುತ್ತಲೇ, ಇಂತಹ ಹುಚ್ಚು ಕಥೆಯನ್ನು ನಂಬಿಬಿಟ್ಟರೆ ಆಗುವ ಅನ್ಯಾಯಗಳನ್ನು ನಾವು ನೋಡಲೇ ಬೇಕು. ಏಕೆಂದರೆ ಈ ಕಥೆಯೇ ನಿಜವಾದ ಪ್ರಸಂಗಕ್ಕಿನ್ನ ಹೆಚ್ಚು ಪ್ರಕಾಶಿಸಿರುವುದು. ಕೋಳಿ ಕೂಗುವುದಿಲ್ಲವೆಂಬ ಸಣ್ಣ ತಪ್ಪಿನಿಂದ ಹಿಡಿದು, ಗೌತಮನ ಎಚ್ಚರ ಇಂತಹ ಸಾಮಾನ್ಯ ಹಕ್ಕಿಯ ಕೂಗಿಗೆ ಆಗುತ್ತದೆಯೇ?, ಎಲ್ಲೋ ಹಿಮಾಲಯದಲ್ಲಿದ್ದ ಅವರು ಆತಿಥ್ಯವನ್ನು ದಿವ್ಯ ದೃಷ್ಟಿಯಿಂದ ಕಂಡು ಕ್ಷಣಮಾತ್ರದಲ್ಲಿ ಆಶ್ರಮಕ್ಕೆ ಬಂದರೆಂಬ ಅದ್ಭುತ ಪ್ರಸಂಗಕ್ಕೆ ಹೋಲಿಸಿದ್ದರೆ ಅವರು ಎಚ್ಚರಗೊಳ್ಳಲು ಕೋಳಿ/ಹು೦ಜ ಬೇಕೆ?
ಅಹಲ್ಯೆಯನ್ನು ಮುಗ್ಧೆಯೆಂದು ಒಪ್ಪಿಬಿಟ್ಟರೆ, ಗೌತಮರ ಶಾಪ ಅನ್ಯಾಯವಾಗಿಬಿಡುತ್ತದೆ. ಇಂದ್ರನಿಗೆ ಸಹಸ್ರಾಕ್ಷ ಶಾಪ ವರವಾಗಿಬಿಡುತ್ತದೆ. ಎರಡು ಕಣ್ಣಿದ್ದೇ ಏನೇನೋ ಮಾಡುವ ಇಂದ್ರ, ಸಾವಿರ ಕಣ್ಣುಗಳಿಂದ ಕಂಡು ಇನ್ನೇನೇನೇನು ಮಾಡುವನೋ?! ಅಸಲು ಸಾವಿರ ಕಣ್ಣನ್ನು ಯಾವ ಯಾವ ಅವಯವಗಳಿಗೆ ಹೊಂದಿಸೋಣ? 
ಅಹಲ್ಯೆ ಕಲ್ಲಾಗಿಬಿಟ್ಟರೆ ಏನು ಪ್ರಯೋಜನ? ಕಲ್ಲು ಮನಸ್ಸು, ಚಿಂತನೆಗಳಿಲ್ಲದ ವಸ್ತು. ತಾನು ಮಾಡಿದ್ದು ತಪ್ಪಾಗಿ, ಆ ಕಳೆಯನ್ನು ಸುಡಲು ಬಂದ ತಪಸ್ಸು ಎಂತಹ ದಿವೌಷಧ! ಅವಳು ಕಲ್ಲಾದರೆ ಮಾತ್ರ ಶ್ರೀರಾಮರು ತಮ್ಮ ಚರಣ ಸ್ಪರ್ಶ ಮಾಡಬೇಕಾಗುತ್ತದೆ ಹೌದೆ? ಶ್ರೀರಾಮರು ಅಷ್ಟು ಅನಾಗರಿಕರೆ? ವಿಷ್ಣುವೇ ಅವರಾಗಿದ್ದರೂ ಆ ಕಾಲಕ್ಕವರು ಮನುಷ್ಯ ಎಂದು ಮರೆಯಬಾರದು. ಮನುಷ್ಯನ ಮಿತಿ-ಸಹಜತೆಯಲ್ಲಿ ತನಗಿನ್ನ ಹಿರಿಯಳಾದ, ಮಹರ್ಷಿ ಪತ್ನಿಯಾದ ಅಹಲ್ಯೆಯನ್ನು ಯಾವುದೇ ಕಾರಣದಿಂದ ಕಾಲಲ್ಲಿ ಮಾತಾಡಿಸುವಷ್ಟು ರಾಮರು ದುಷ್ಟರಲ್ಲ. ಸತ್ಯ ಹಾಗಿಲ್ಲವಲ್ಲ, ಸಧ್ಯ! 
ಈಗಾಗಲೇ ಸುಳ್ಳು-ಸುಳ್ಳು ಬರೆದು ರಾಮಾಯಣಕ್ಕೆ ಅಂಟಿಸಿದ್ದ ಶಂಬೂಕ ಪ್ರಸಂಗದಿಂದಾಗಿ ಶ್ರೀರಾಮರಿಗೆ ಸಾಕಷ್ಟು ಅನ್ಯಾಯವಾಗಿದೆ. ಇದನ್ನು ಹಿಂದೆಯೇ ಚರ್ಚಿಸಿದ್ದೇನೆ. ಈಗ ಅಹಲ್ಯೆಯನ್ನು ಶ್ರೀರಾಮರು ಕಾಲಲ್ಲಿ ಮಾತನಾಡಿಸಿದರೆಂದರೆ,  ಅವರು ಮರ್ಯಾದಾ ಪುರುಷೋತ್ತಮರೆಂತಾಗುತ್ತಾರೆ? ಎಷ್ಟು ಸುಂದರವಾಗಿದೆ ನಿಜ ಕಥೆ! ಅಹಲ್ಯೆ ಅಲ್ಲ ಪಾದ ಹಿಡಿಯುವುದು, ರಾಮ ಲಕ್ಷ್ಮಣರೇ ಆಕೆಯ ಪಾದ ಹಿಡಿದು ನಮಿಸುತ್ತಾರೆ. ಇದು ನಿಜವಾದ ರಾಮ ಪ್ರಭೆ. - ಲೇಖಕರು )
---೦೦೦---
-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT