ಅಂಕಣಗಳು

ಪ್ಲಾಸ್ಟಿಕ್ ಮನಿ ವಿತ್ತ ಪ್ರಪಂಚದ ಹೊಸ ದನಿ !

ರಂಗಸ್ವಾಮಿ ಮೂಕನಹಳ್ಳಿ
ನಾಗರೀಕತೆ ಬೆಳೆಯುತ್ತಾ ಬಂದಂತೆಲ್ಲ ನಾವು ತಿನ್ನುವ ಆಹಾರ ಮತ್ತು ಉಡುಪಿನಲ್ಲಷ್ಟೇ ಅಲ್ಲ ಎಲ್ಲದರಲ್ಲೂ ಬದಲಾವಣೆ ಕಂಡಿದೆ. ವಿನಿಮಯ ಮಾಧ್ಯಮವಾಗಿ ಕಣ್ಣಿಗೆ ಕಂಡದ್ದನ್ನೆಲ್ಲ ಬಳಸುತ್ತಿದ್ದೆವು. ಅಕ್ಕಿ ಬದಲಿಗೆ ರಾಗಿ. ಜೋಳದ ಬದಲಿಗೆ ಕುರಿ.. ಹೀಗೆ ಉದಾಹರಿಸುತ್ತ ಹೋಗಬಹದು. ಮನುಷ್ಯ ತನ್ನ ಅವಶ್ಯಕತೆಗೆ ಅನುಗುಣವಾಗಿ 'ಹಣ' ಎನ್ನುವ ಪದವನ್ನ ಹುಟ್ಟಿಹಾಕಿದ. ನೂರಾರು ವರ್ಷ ಪೇಪರ್ ಮನಿ ತನಗಿನ್ನಾರು ಸಾಟಿ ಇಲ್ಲ ಎನ್ನುವಂತೆ ಮೆರೆಯಿತು. ಇದೀಗ ಎಲ್ಲವೂ ಡಿಜಿಟಲ್.. ಹೌದು ಡಿಜಿಟಲ್ ಮನಿ ಅಥವಾ ಪ್ಲಾಸ್ಟಿಕ್ ಮನಿ ಮುಂದಿನ ದಿನಗಳ ಹೊಸ ವಿನಿಮಯ ಮಾಧ್ಯಮ. ಇವತ್ತು ಪ್ಲಾಸ್ಟಿಕ್ ಮನಿ ಎಂದು ಹೆಸರು ಪಡೆದಿರುವ ಡೆಬಿಟ್/ ಕ್ರೆಡಿಟ್ ಕಾರ್ಡ್ಗಳ ಬಗ್ಗೆ ಒಂದಷ್ಟು ತಿಳಿದುಕೊಳ್ಳೋಣ. 
ವೀಸಾ, ಮಾಸ್ಟರ್ ಕಾರ್ಡ್ ಹೆಸರು ಕೇಳದವರು ಯಾರು? ಜಗತ್ತಿನಲ್ಲಿ ನೂರು ಕಾರ್ಡ್ ಇದ್ದವೆಂದರೆ ಅದರಲ್ಲಿ 52 ವೀಸಾ, 30 ಮಾಸ್ಟರ್ ಕಾರ್ಡ್ ಎಂದರೆ ಇವುಗಳು ಹೇಗೆ ಮಾರುಕಟ್ಟೆಯನ್ನು ತಮ್ಮ ಹಿಡಿತಕ್ಕೆ ತೆಗೆದು ಕೊಂಡಿವೆ ಎನ್ನುವುದರ ಅರಿವು ನಿಮಗಾದಿತು. ಅಮೆರಿಕನ್ ಎಕ್ಸ್ಪ್ರೆಸ್ ಎನ್ನುವ ಇನ್ನೊಂದು ಹೆಸರಿನ ಕಾರ್ಡ್ 9 ಪ್ರತಿಶತ ಮಾರುಕಟ್ಟೆ ಆಕ್ರಮಿಸಿದೆ ಎಂದರೆ ಉಳಿದ ಕಾರ್ಡ್ ಗಳ ಸ್ಥಾನ ಏನಿರಬಹುದು? ಎನ್ನುವ ಜಿಜ್ಞಾಸೆ ಸಹಜವಾಗಿ ಮೂಡುತ್ತದೆ.
ವೀಸಾ ಅಂಡ್ ಮಾಸ್ಟರ್ ಕಾರ್ಡ್ ಜಗತ್ತಿನಾದ್ಯಂತ ಎಲ್ಲೆಡೆ ಒಪ್ಪಿಕೊಳ್ಳುವ ಹಣ ಪಾವತಿಸುವ ಒಂದು ಸಾಧನ, ಅಮೆರಿಕನ್ ಡಾಲರ್ ನಾವು ಒಪ್ಪಿಕೊಂಡದಂತೆ ಇಲ್ಲಿಯೂ ಕೆಲಸ ಮಾಡುವುದು ನಂಬಿಕೆ ಎನ್ನುವ ಅತ್ಯಂತ ಬಲಿಷ್ಠ ಶಕ್ತಿ. ಇವೆರೆಡು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ನಷ್ಟು ಮಾನ್ಯತೆ ಪಡೆದ ಹಣ ಪಾವತಿ ಸಾಧನ ಇನ್ನೊಂದಿಲ್ಲ, ಇಲ್ಲಿಯವರೆಗೂ ಇವು ನಡೆದದ್ದೇ ರಾಜ ಮಾರ್ಗ. 
ಏನಿದು ವೀಸಾ, ಮಾಸ್ಟರ್ ಕಾರ್ಡ್? ಇವು ಹೇಗೆ ಕಾರ್ಯ ನಿರ್ವಹಿಸುತ್ತವೆ? 
ವೀಸಾ, ಮಾಸ್ಟರ್ ಕಾರ್ಡ್ ಅಥವಾ ಇನ್ನಾವುದೇ ಕಾರ್ಡ್ ಇರಬಹುದು ಇದು ಪ್ಲಾಸ್ಟಿಕ್ ನಿಂದ ಮಾಡಿದ ಒಂದು ಕಾರ್ಡ್, ಗ್ರಾಹಕನ ಹೆಸರು, ಕಾರ್ಡ್ ಸಂಖ್ಯೆ, ಕಾರ್ಡ್ ಇಶ್ಯೂ ಮಾಡಿದ ದಿನಾಂಕ, ಎಕ್ಷ್ಪಿರಿ ದಿನಾಂಕ ಹೀಗೆ ಹಲವು ವಿಷಯ ಕಾರ್ಡ್ ಮೇಲೆ ಮುದ್ರಿತವಾಗಿರುತ್ತದೆ. ನೆನಪಿರಲಿ ವೀಸಾ ಅಥವಾ ಮಾಸ್ಟರ್ ಕಾರ್ಡ್ ಇಶ್ಯೂ ಮಾಡುವ ಸಂಸ್ಥೆ ಹಣಕಾಸು ಸಂಸ್ಥೆಯಲ್ಲ, ಇವುಗಳ ಕೆಲಸ ಮಧ್ಯವರ್ತಿಯ ತರಹ, ಯಾವುದೇ ಬ್ಯಾಂಕ್ ಅದು sbi ಇರಬಹುದು, ಕೆನರಾ ಇರಬಹುದು ಅಥವಾ ಇನ್ನ್ಯಾವುದೇ ಬ್ಯಾಂಕ್ ಇರಬಹುದು ಅವರು ವೀಸಾ ಅಥವಾ ಮಾಸ್ಟರ್ ಕಾರ್ಡ್ ವಿತರಣೆ ಮಾಡಬಹುದು. ಅಂದರೆ ವೀಸಾ, ಮಾಸ್ಟರ್ ಕಾರ್ಡ್ ಸಂಸ್ಥೆಗಳು ಸಾಲ ನಿಡುವ ಕೆಲಸ ಮಾಡುವುದಿಲ್ಲ, ಅದೇನಿದ್ದರೂ ಸಂಬಂದಪಟ್ಟ ಬ್ಯಾಂಕ್ ನ ಕೆಲಸ. ಅಮೆರಿಕನ್ ಎಕ್ಸ್ಪ್ರೆಸ್ ಕಾರ್ಡ್ ಮಾತ್ರ ಇದಕ್ಕಿಂತ ಬಿನ್ನ, ಅಮೆರಿಕನ್ ಎಕ್ಸ್ಪ್ರೆಸ್ ಖರೀದಿದಾರನಿಗೆ ಸಾಲ ನೀಡುವ ಸಂಸ್ಥೆಯಾಗಿಯೂ ಕೆಲಸ ನಿರ್ವಹಿಸುತ್ತದೆ. 
ಇವುಗಳ ಕಾರ್ಯ ನಿರ್ವಹಣೆ ಬಹು ಸುಲಬ, ಟೆಕ್ನಾಲಜಿ ಬೆಳೆದಂತೆ ಇವುಗಳ ನಿರ್ವಹಣೆ, ಅದಕ್ಕೆ ತಗಲುವ ಸಮಯ ಎಲ್ಲಾ ಬದಲಾಗಿ ಹೋಗಿದೆ. ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ನೋಡೋಣ. 
  1. ಗ್ರಾಹಕ ತನ್ನಿಚ್ಚೆಯ ಸರುಕು ಕೊಂಡು ಅಂಗಡಿಯಲ್ಲಿ ಹಣದ ಬದಲು ಕಾರ್ಡ್ ನೀಡುತ್ತಾನೆ. 
  2. ಮಾರಾಟಗಾರ ನ ಬ್ಯಾಂಕ್ ಮಾಹಿತಿ ಕಲೆಹಾಕುತ್ತದೆ ಹಾಗೂ ಒಪ್ಪಿಗೆಗೆ ಗ್ರಾಹಕನ ಬ್ಯಾಂಕ್ ನ ಅನುಮತಿ ಕೇಳುತ್ತದೆ. 
  3. ಗ್ರಾಹಕನ ಬ್ಯಾಂಕ್ ,ಗ್ರಾಹಕನಿಗೆ ಇರುವ ಲಭ್ಯತೆ ನೋಡುತ್ತದೆ , ಹಾಗೂ ಒಪ್ಪಿಗೆ ಸಂದೇಶ ರವಾನಿಸುತ್ತದೆ. 
  4. ಸಮ್ಮತಿ /ಅಸಮ್ಮತಿ ಕೋಡ್ ಮಾರಾಟಗಾರನ ಬ್ಯಾಂಕ್ ನಿಂದ ಮಾರಟಗಾರನಿಗೆ ವರ್ಗಾವಣೆ ಆಗುತ್ತದೆ. 
  5.  ವಹಿವಾಟು ಪೂರ್ಣವಾಯಿತು ಎನ್ನುವುದ ಸೂಚಿಸಲು ರಸೀದಿ ಮುದ್ರಣವಾಗುತ್ತದೆ. 
  6. ತನ್ನ ಒಪ್ಪಿಗೆ ಸೂಚಿಸಲು ಗ್ರಾಹಕ ರಸೀದಿ ಮೇಲೆ ಸಹಿ ಮಾಡುತ್ತಾನೆ. 
ಗಮನಿಸಿ ಇಷ್ಟೆಲ್ಲಾ ಕೇವಲ ಮೂವತ್ತು ಸೆಕೆಂಡ್ ಅಥವಾ ಅದಕ್ಕೂ ಕಡಿಮೆ ಅವಧಿಯಲ್ಲಿ ಮುಗಿದಿ ಹೋಗುತ್ತದೆ. 
ಓಕೆ, ಅರ್ಥ ಆಯ್ತು, ಈ ಸೇವೆ ನೀಡುವುದರಿಂದ ವೀಸಾ ಅಥವಾ ಮಾಸ್ಟರ್ ಕಾರ್ಡ್ ಸಂಸ್ಥೆಗಳಿಗೇನು ಲಾಭ? ಇವು ಹಣ ಹೇಗೆ ಗಳಿಸುತ್ತವೆ?
ಜಗತ್ತಿನಲ್ಲಿ ಇಂದು ಪುಕ್ಕಟೆ ಎನ್ನುವುದು ಒಂದು ಭ್ರಮೆ ಅಷ್ಟೇ, ವೀಸಾ, ಮಾಸ್ಟರ್ ಕಾರ್ಡ್ ಸಂಸ್ಥೆಗಳು ಸೇವೆಯನ್ನು ಪುಕ್ಕಟೆ ನೀಡುವುದಿಲ್ಲ, ಗ್ರಾಹಕನಿಗೆ ತಕ್ಷಣ ಕೈಯಿಂದ ದುಡ್ಡು ಹೋಗದ ಕಾರಣ ಆತನಿಗೆ ಅದು ತಿಳಿಯುವುದು ಇಲ್ಲ, ಈ ಸಂಸ್ಥೆಗಳು ಮಾರಾಟಗಾರನಿಂದ ವಹಿವಾಟಿನ ಮೇಲೆ 1 ರಿಂದ 3 ಪ್ರತಿಶತ ಹಣ ಪಡೆಯುತ್ತವೆ. ವರ್ಷಕೊಮ್ಮೆ ಗ್ರಾಹಕನಿಂದ  ಕಾರ್ಡ್ ಬಳಕೆ ಫೀಸ್,ಕಾರ್ಡ್ ವಿತರಣೆ ಫೀಸ್ ಹೆಸರಲ್ಲಿ ಹಣ ಪಡೆಯುತ್ತವೆ, ಆಕಸ್ಮಾತ್ ಮೂವತ್ತು ದಿನಗಳಲ್ಲಿ ನಿಗದಿತ ಮೊತ್ತ ಪಾವತಿಸದೇ ಹೋದರೆ ಅದಕ್ಕೆ ಬಡ್ಡಿ ಹಾಕುತ್ತದೆ. 
ಕ್ರೆಡಿಟ್ ಕಾರ್ಡ್ ನೆಟ್ ವರ್ಕಿಂಗ್ ಫೀಸ್ ಹೆಸರಲ್ಲಿ ಈ ಸಂಸ್ಥೆಗಳು ಪಡೆಯುವ ಹಣ ಪೈಸದಲ್ಲಿ, ಗ್ರಾಹಕನಿಗೆ, ಮಾರಟಗಾರನಿಗೆ ಇಬ್ಬರಿಗೂ, ಹಾಗೂ ನೆಟ್ ವರ್ಕ್ ಒದಗಿಸಿದ ಸಂಸ್ಥೆಗೂ ನೋವು ಉಂಟಾಗದ, ಫೀಸ್ ಇದು, ಆದರೆ ಜಗತ್ತಿನಾದ್ಯಂತ ನಡೆಯುವ ವಹಿವಾಟಿನ ಲೆಕ್ಕಕ್ಕೆ ತೆಗೆದು ಕೊಂಡರೆ ಇದು ಅತ್ಯಂತ ದೊಡ್ಡ ಮೊತ್ತ ವಾಗುತ್ತದೆ, ಗಮನಿಸಿ 2013 ರಲ್ಲಿ 5 ಬಿಲಿಯನ್ ಅಮೆರಿಕನ್ ಡಾಲರ್ ಲಾಭ ವೀಸಾ ಸಂಸ್ಥೆ ಕೇವಲ ಈ ಒಂದು ಫೀಸ್ ಮೂಲಕ ಗಳಿಸಿತು ಎಂದರೆ, ಈ ಸಂಸ್ಥೆಗಳು ಗಳಿಸುವ ಆದಾಯದ ಅಂದಾಜು ಆಗಬಹುದು. ಈ ಲಾಭದ ಮೊತ್ತ 2013 ರಿಂದ ಇಲ್ಲಿವರೆಗೆ ಪ್ರತಿವರ್ಷ 10 ರಿಂದ 13 ಪ್ರತಿಶತ ಹೆಚ್ಚುತ್ತಲೇ ಇದೆ ಎನ್ನುವುದು ಇನ್ನೊಂದು ಗಮನಿಸಬೇಕಾದ ಅಂಶ. 
ಹೀಗೆ ವೀಸಾ ಹಾಗೂ ಮಾಸ್ಟರ್ ಕಾರ್ಡ್ ಇಡಿ ಜಗತ್ತಿನಲ್ಲಿ ತಮ್ಮ ಸಾಮ್ರಾಜ್ಯ ಅಭಾದಿತವಾಗಿ ಸ್ಥಾಪಿಸಿ ವರ್ಷದಿಂದ ವರ್ಷಕ್ಕೆ ಹೆಚ್ಚು ಲಾಭ ಗಳಿಸುತ್ತಲೇ ಇದ್ದವು, ಗಳಿಸುತ್ತಿವೆ ಕೂಡ, ಆದರೆ ಭಾರತದಲ್ಲಿ ಇವುಗಳ ನಾಗಾಲೋಟಕ್ಕೆ ಕಡಿವಾಣ ಹಾಕಿರುವುದು ರುಪೈ ಎನ್ನುವ ಸ್ವದೇಶೀ ಕಾರ್ಡ್. 
ಏನಿದು ರುಪೈ (Rupay )?
ವೀಸಾ ಅಥವಾ ಮಾಸ್ಟರ್ ಕಾರ್ಡ್ ನಂತೆ ಇದು ಒಂದು ಹಣ ಪಾವತಿ ಮಾಡಲು ಉಪಯೋಗಿಸ ಬಹುದಾದ ಒಂದು ಕಾರ್ಡ್ ಅಥವಾ ವ್ಯವಸ್ಥೆ, ರು ಪೈ ಜನಕ UPA ಸರಕಾರ, ಆದರೆ ಅದರ ಪೋಷಕ, ನಿರ್ವಾಹಕ ಮಾತ್ರ ಮೋದಿ ಸರಕಾರ, ಜನ ಧನ ಎನ್ನುವ ಯೋಜನೆ ಅಡಿಯಲ್ಲಿ ಎಲ್ಲಾ ಖಾತೆದಾರರಿರಿಗೆ ಈ ಕಾರ್ಡ್ ಗಳನ್ನು ವಿತರಿಸಲಾಗಿದೆ. ಭಾರತದಲ್ಲಿ ಒಟ್ಟು 60 ಕೋಟಿ ಡೆಬಿಟ್ ಕಾರ್ಡ್ ಇವೆ ಅದರಲ್ಲಿ 22 ಕೋಟಿ ರುಪೈ ಕಾರ್ಡ್!! ಅಂದರೆ ಮಾರುಕಟ್ಟೆಯ 36 ಪ್ರತಿಶತ ಕಾರ್ಡ್ ರುಪೈ! ಇದು ಕಡಿಮೆ ಸಾಧನೆಯಲ್ಲ, ಏಕೆಂದರೆ 22 ಕೋಟಿ ರುಪೈ ಕಾರ್ಡ್ ನಲ್ಲಿ 40 ಭಾಗ ಅದನ್ನು ಉಪಯೋಗಿಸುವುದಿಲ್ಲ! ಹೆಸರಿಗೆ ಮಾತ್ರ ಅವು ವಿತರಣೆ ಆಗಿವೆ ಆದರೆ ಗ್ರಾಹಕ ಅವನ್ನು ಬಳಸುತ್ತಿಲ್ಲ, ವಹಿವಾಟಿ ನಲ್ಲಿ ರುಪೈ ಕಾರ್ಡ್ ನ ಪಾಲು ಎಷ್ಟು ಎನ್ನುವುದು ನಿಖರ ಉತ್ತರ ನೀಡುತ್ತದೆ, ಕಾರ್ಡ್ ಗಳ ಬಳಸಿ 100 ರುಪಾಯಿ ವಹಿವಾಟು ಆದರೆ 20 ರುಪಾಯಿ ರುಪೈ ಕಾರ್ಡ್ ನ ಪಾಲು. ಗಮನಿಸಿ ಜಗತ್ತಿನಾದ್ಯಂತ ದಶಕಗಳಿಂದ ಏಕಸ್ವಾಮ್ಯ ಗಳಿಸಿದ್ದ ವೀಸಾ ಹಾಗೂ ಮಾಸ್ಟರ್ ಕಾರ್ಡ್ ಹೆಡೆಮುರಿ ಕಟ್ಟಿ ರುಪೈ ವಹಿವಾಟಿನ 20 ಭಾಗ ಅವರಿಂದ ಕಸಿದಿದೆ ಅದೂ ಕೇವಲ ಎರಡು ವರ್ಷಗಳಲ್ಲಿ! 
ರುಪೈ ಭಾರತದಲ್ಲಿ ಮಾತ್ರ ಸ್ವಿಕರಿಸಲ್ಪಡುವ ಕಾರ್ಡ್, ವೀಸಾ, ಮಾಸ್ಟರ್ ಕಾರ್ಡ್ ನಂತೆ ಇದಕ್ಕೆ ವಿಶ್ವದಾದ್ಯಂತ ಮಾನ್ಯತೆ ಸಿಕ್ಕಿಲ್ಲ, ಅದಕ್ಕೆ ವಿಶ್ವ ಮಾನ್ಯತೆ ಕೊಡಿಸುವ ನಿಟ್ಟಿನಲ್ಲಿ ಕೆಲಸ ಸದ್ದಿಲ್ಲದೇ ನಡೆಯುತ್ತಿದೆ. ಈ ರೀತಿಯ ಕೆಲಸಗಳು ಹಾಗೂ ರುಪೈ ದೇಶಿಯ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿರುವುದು ಕಂಡು ಮಾಸ್ಟರ್ ಕಾರ್ಡ್ ಮುಖ್ಯ ಕಾರ್ಯ ನಿರ್ವಾಹಕ ಅಜಯ್ ಬಂಗಾ' ಮೋದಿ ಸರಕಾರ ರುಪೈ ಕಾರ್ಡ್ ಗೆ ಹೆಚ್ಚುವರಿ ಸಹಾಯ ಮಾಡುವದನ್ನು ನಿಲ್ಲಿಸಬೇಕು, ಇಲ್ಲಿ ನೇರ ವ್ಯಾಪಾರ ಹಣಾಹಣಿ ಇಲ್ಲವೇ ಇಲ್ಲ, ಜನಧನ್ ರುಪೈ ಜೋಡಿಸಿ ಮುಖ್ತ ಹೋರಾಟ ಕಸಿದಿದ್ದಾರೆ' ಎಂದು ದೂರಿದ್ದಾರೆ.  ಮುಂದುವರಿದು "ಆಲ್ ಐ ವಾಂಟ್ ಇಸ್ ಅ ಲೆವೆಲ್ ಪ್ಲೇಯಿಂಗ್ ಫೀಲ್ಡ್ " ಎನ್ನುವ ಹೇಳಿಕೆ ಕೊಟ್ಟಿದ್ದಾರೆ. ರುಪೈ ಗಿಂತ ಹೆಚ್ಚಿನ ಸವಲತ್ತು, ಸೇವೆ, ಎಲ್ಲಕ್ಕಿಂತ ಮುಖ್ಯ ಭದ್ರತೆ ನಾವು ಒದಗಿಸುತ್ತೇವೆ ನಮಗೆ ಅವಕಾಶ ಕೊಡಿ ಎನ್ನುವ ಮಟ್ಟಕ್ಕೆ ಮಾಸ್ಟರ್ ಕಾರ್ಡ್ ಭಾರತದಲ್ಲಿ ಇಳಿದಿದೆ, ಅದರ ಪೂರ್ಣ ಶ್ರೇಯ ರುಪೈ ಕಾರ್ಡ್ ನ ಹಿಂದಿನ ಶ್ರಮಿಕರಿಗೆ ತಲುಪುತ್ತದೆ. 
ವಿದೇಶಗಳಲ್ಲಿ ನೋಟಿನ ರೂಪದ ಹಣದ ಹರಿವು ತುಂಬಾ ಕಡಿಮೆಯಾಗಿದೆ. ಸ್ವೀಡೆನ್ ಜಗತ್ತಿನ ಪ್ರಥಮ ಕ್ಯಾಶ್ ಲೆಸ್ ಎಕಾನಮಿಯಾಗುವತ್ತ ವೇಗದಿಂದ ಹೆಜ್ಜೆ ಇಡುತ್ತಿದೆ. ಇಲ್ಲೇನಿದ್ದರೂ ಇವತ್ತು ಆಪ್ ಗಳ ಮೂಲಕ ಅಥವಾ ಪ್ಲಾಸ್ಟಿಕ್ ಕಾರ್ಡ್ ಗಳ ಮೂಲಕ ಹಣವನ್ನ ಪಾವತಿಸಲಾಗುತ್ತದೆ. ಹಲವು ರೆಸ್ಟುರಾಂಟ್ ಮತ್ತು ಮ್ಯೂಸಿಯಂ ಗಳಲ್ಲಿ 'ನಗದು ಸ್ವೀಕರಿಸಲಾಗುವುದಿಲ್ಲ ಕ್ಷಮಿಸಿ ' ಎನ್ನುವ ಬೋರ್ಡುಗಳು ಕಾಣಿಸಲು ಶುರುವಾಗಿದೆ. ಭಾರತವನ್ನೂ  ಕ್ಯಾಶ್ ಲೆಸ್ ಎಕಾನಮಿ ಮಾಡಬೇಕೆನ್ನುವುದು ಈಗಿನ ಸರಕಾರದ ಕನಸು ಆದರೇನು ಅಂಗಡಿಯಲ್ಲಿ ವ್ಯಾಪಾರಸ್ಥ' ಕಾರ್ಡ್ ಮೂಲಕ ಪಾವತಿಸಿದರೆ 2 ಪ್ರತಿಶತ ಕಾರ್ಡ್ ಚಾರ್ಜಸ್ ಮತ್ತು 18 ಪ್ರತಿಶತ ಜಿಎಸ್ಟಿ ಎನ್ನುತ್ತಾನೆ,  ವಸ್ತುವಿನ ಬೆಲೆ ನೂರು ರೂಪಾಯಿ ನಗದು ಕೊಟ್ಟರೆ ಎನ್ನುತ್ತಾನೆ, ಕಾರ್ಡ್ ತೆಗೆದುಕೊಳ್ಳುತ್ತೇನೆ, ಬಿಲ್ ಹರಿಯುತ್ತೇನೆ ನೂರಿಪ್ಪತ್ತು ರೂಪಾಯಿ ಕೊಡಿ ಎನ್ನುತ್ತಾನೆ. ಗ್ರಾಹಕ ಒಮ್ಮೆಲೆ ಏರಿದ 20 ಪ್ರತಿಶತ ಬೆಲೆಯಿಂದ ಕಂಗೆಟ್ಟು ನಗದು ಪಾವತಿಸುತ್ತಾನೆ. ಇವುಗಳಿಗೆ  ಕಡಿವಾಣ ಹಾಕದೆ ಕ್ಯಾಶ್ ಲೆಸ್ ಎಕಾನಮಿ ನಾವೇಗಾದೆವು? 
ಜಗತ್ತನ್ನ ಒಂದು ರೈಲ್ವೆ ಬೋಗಿ ಎಂದು ಕೊಂಡರೆ, ಮುಂದಿನ ಬೋಗಿಗಳು ಕ್ಯಾಶ್ ಲೆಸ್ ಎಕಾನಮಿ ಯಾಗುವತ್ತ ದಾಪುಗಾಲು ಹಾಕುತ್ತಿವೆ, ಕೊನೆಯ ಬೋಗಿಯಲ್ಲಿ ಇರುವ ಭಾರತದಂತ ದೇಶಗಳು ಇನ್ನೂ ನಗದನ್ನ ರಾಜ ಎನ್ನುತ್ತಿವೆ. ಒಟ್ಟಿನಲ್ಲಿ ನಮ್ಮ ಚಿಂತನೆ ಮತ್ತು ನಾವು ಬದಲಾಗದೆ ವ್ಯವಸ್ಥೆ ಹೇಗೆ ಬದಲಾದೀತು? 
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
SCROLL FOR NEXT