ಅಂಕಣಗಳು

ವಯಸ್ಸಾದ ಮೇಲೆ ತರುಣ ಹರಿಣಿಯನ್ನು ಮದುವೆಯಾದರೆ ಈ ಕೀಳರಿಮೆ ಅತಿ ಸಹಜ!

Dr. Pavagada Prakash Rao
ಸುಕೋಮಲೆ, ಸುರತಿ, ಸುಮನೋಹರೆ, ಸುಂದರಿ, ಸೋಗಸುಗಾತಿ ಸಂಗಾತಿ ನೆಲದ ಮೇಲೆ ಬಿದ್ದಿರುವುದು ದಶರಥನಿಗೆ ಹೊಟ್ಟೆಯುರಿದುಹೋಗಿದೆ. ಹಾಗವಳು ಮಲಗಲು ಯಾರು ಕಾರಣರಾಗಿದ್ದಾರೆ ಅವರನ್ನು ಆ ಕ್ಷಣದಲ್ಲೇ ತುಂಡರಿಸುವಷ್ಟು ಸಿಟ್ಟು. ಮಡದಿಯನ್ನು ಸವರುತ್ತ, "ಏಳು, ಏಳು, ಏಕೆ ಹೀಗೆ ಮಲಗಿದ್ದೀಯ! ಯಾರು ಏನು ಮಾಡಿದರು? ಯಾರು ನಿನಗೆ ಈ ಸ್ಥಿತಿ ತಂದರು? ಯಾರು?! ಯಾರೇ ಆಗಿರಲಿ ಅವರಿಗೆ ಶಿಕ್ಷೆ ಕಾದಿದೆ... ಹೇಳು ಮೋಹಿನಿ. ಏಳು. ಮೊದಲು ಏಳು. ಇದೇಕೆ ಈ ಕಪ್ಪು ಸೀರೆ, ಹರಿದ ಸೀರೆ ಸುತ್ತಿಕೊಂಡಿದ್ದೀಯ? ಛೇ ಛೇ! ಏಕೆ ತಲೆ ಎಲ್ಲ ಬಿರೇಹೊಯ್ದುಕೊಂಡಿದ್ದೀಯ? ಛೇ! ಕುಂಕುಮವನ್ನೇಕೆ ಅಳಿಸಿಬಿಟ್ಟಿದ್ದೀಯ! ಬೇಡ, ಬೇಡ, ತುಂಬ ನೋಯಬೇಡ. ಕಾರಣ ಹೇಳು. ಯಾರಿಗೆ ಏನು ಕಾದಿದೆಯೋ! ಏನಾದರಾಗಲಿ ಏಳು."
(ಮುದುಕ, ಅವಳನ್ನೆಬ್ಬಿಸುವಷ್ಟು ಶಕ್ತಿ ಇಲ್ಲ. ಕಿರಿಯ ಹೆಂಡತಿಯ ಮುದಿ ಗಂಡನ ಗೋಳು ಇದ್ದದ್ದೇ! ವಯಸ್ಸಾದಮೇಲೆ ತರುಣ ಹರಿಣಿಯನ್ನು ಮದುವೆಯಾದರೆ ಈ ಕೀಳರಿಮೆ ಅತಿ ಸಹಜ. ಮೊದಲೇ ತನಗೆ ವಯಸ್ಸಾಗಿದೆ. ತನ್ನಿಂದ ಹೆಂಡತಿಯ ಯೌವ್ವನಕ್ಕೆ ನ್ಯಾಯ ದೊರಕುತ್ತಿಲ್ಲ ಎಂಬುದು ಸದಾ ಚುಚ್ಚುತ್ತಿರುವ ಶೂಲ. ಆ ಅರಕೆಯನ್ನು ಮುಚ್ಚಲು ಪರ್ಯಾಯವಾಗಿ ತನಗಿರುವ ಅಸೀಮ ಪ್ರೇಮವನ್ನು ತೋರುವ, ಅವಳಿಗೆ ಯಾವ್ಯಾವುವು ಬೇಕೋ ಅದನ್ನೆಲ್ಲ ತುಂಬುವ ಸತತ ಪ್ರಯತ್ನ. ಈ ಅಸಮತೋಲನದಲ್ಲಿಯೇ ಬುದ್ಧಿ ತನ್ನ ಸಮಸ್ಥಿತಿಯನ್ನೂ ಕಳೆದುಕೊಂಡು ಬಾಯಿಗೆ ಬಂದಂತೆ ಭರವಸೆಗಳ ಮಹಾಪೂರವನ್ನೇ ಹರಿಸುತ್ತದೆ; ತಾನು ಮಾತನಾಡುತ್ತಿರುವುದು ನ್ಯಾಯವೇ ಅನ್ಯಾಯವೇ ಎಂಬ ಪರಿಙ್ಞಾನವೂ ಇಲ್ಲದೇ! ಅಂತಹ ಮಹಾರಾಜ; ಅಂತಹ ಚಕ್ರವರ್ತಿ, ಙ್ಞಾನಿ, ವಿವೇಕಿ, ಋಷಿ ಸಮಾನನೆಂಬ ಖ್ಯಾತಿಗೆ ಪಕ್ಕಾದ ದಶರಥ ಹೀಗೆ ಮಾತನಾಡಬಹುದೆ?--ಲೇಖಕರು)
"ಸುಂದರಿ, ಯಾರಿಂದ ನಿನಗೆ ಈ ದುರವಸ್ಥೆ ಹೇಳು? ನೀನು ಬಯಸಿದರೆ, ನಿನಗೆ ಸಂತೋಷವಾಗುವುದಾದರೆ, ನಿರಪರಾಧಿಯನ್ನು ಬೇಕಾದರೂ ಕೊಲ್ಲಿಸುತ್ತೇನೆ! ಅಕಸ್ಮಾತ್ ನ್ಯಾಯಲಯ ನಿರ್ಣಯಿಸಿದ ಮರಣದಂಡನೆಗೆ ಗುರಿಯಾದವರನ್ನು ಬೇಕಾದರೂ ಬದುಕಿಸುತ್ತೇನೆ. ನೀನು ಬಯಸಿದರೆ ಭಿಕಾರಿಯನ್ನು ಕೋಟ್ಯಧಿಪತಿಯನ್ನಾಗಿಸುತ್ತೇನೆ. ನಿನಗೆ ಯಾರಮೇಲಾದರೂ ಸಿಟ್ಟಿದ್ದರೆ, ಅವನು ಕೋಟಿ ಕೋಟಿಗಳ ಒಡೆಯನಾಗಿದ್ದರೂ ತಕ್ಷಣವೇ ಅವನ ಹಣವನ್ನೆಲ್ಲ ದೋಚಿ ದಿವಾಳಿ ಮಾಡುತ್ತೇನೆ. 
(ಅವಧ್ಯೋ ವಧ್ಯತಾಂ ಕೋ ವಾ ! ವಧ್ಯಃ ಕೋ ವಾ ವಿಮುಚ್ಯತಾಂ
ದರಿದ್ರಃ ಕೋ ವಾ ಭವತ್ವಾಢ್ಯೋ ? ದ್ರವ್ಯವಾನ್ ವಾ ಅಪಿ ಅಕಿಂಚಿನಃ !)
ಮಲಗಿದವಳು ಮೇಲೆದ್ದಳು. ಗಂಡನನ್ನಪ್ಪಿದಳು. ಭುಜದಮೇಲೆ ತಲೆ ಇಟ್ಟು ಮುದ್ದು ಮಾತುಲಿದಳು. "ನಾನು ಕೇಳಿದ್ದು ಕೊಡ್ತೀರಿ ತಾನೆ? ನಂಗೆ ಯಾರೂ ಏನೂ ಮಾಡಿಲ್ಲ! ನಂಗೆ ಒಂದು ಆಸೆ ಇದೆ. ಅದನ್ನ ನಡಸ್ತೀರಿ ತಾನೆ? "ತನ್ನ ಹಿಡಿತ ಬಿಗಿ ಮಾಡಿ ಮುಂಗುರುಳನ್ನು ಹಿಂದಕ್ಕೆ ಸವರಿ ಬಹುಶಃ ತನ್ನ ಜೀವನದ ಕೊನೆಯ ನಗುವನ್ನು ನಕ್ಕು ನುಡಿದ; "ಅಯ್ಯೋ! ಇಷ್ಟೇನಾ? ನೀನು ಕೇಳಿದ್ದು ಏನು ಕೊಟ್ಟಿಲ್ಲ? ಎಂದು ಇಲ್ಲ ಅಂದಿದೀನಿ? ಹೇಳು! "ಇನ್ನೂ ಬಿಗಿಯಾಗಿ ಅಪ್ಪಿಕೊಳ್ಳುತ್ತ, ಸಿಕ್ಕಿದ ಕುರಿಯ ಕುತ್ತಿಗೆಯ ಸುತ್ತ ತನ್ನ ದೇಹ ಬಿಗಿಗೊಳಿಸುವ ಹೆಬ್ಬಾವಾಗಿ ಬಿಸಿಯುಸುರಿಟ್ಟು ಹೇಳಿದಳು; "ನಿಮಗೆ ನನ್ನ ಕಂಡರೆ ತುಂಬ ಪ್ರೀತಿ ಅಂತೀರಿ. ನೀನೇ ನನ್ನ ಪ್ರಾಣ ಅಂತ ಹೇಳಿದ್ದೀರಿ. ಹಾಗಾದರೆ ನನ್ನ ಮೇಲೆ ಆಣೆ ಇಟ್ಟು ಹೇಳಿ ನಾನು ಕೇಳಿದ್ದು ಕೊಡ್ತೀನಿ ಅಂತ... "ರಾಗ ಎಳೆದಳು! ತಲೆಯನ್ನು ಹಾವಿನ ಬಾಯಿಗೆ ತಾನೇ ತುರುಕುತ್ತ ನುಡಿದ ಕಾಮಿ ರಾಜ; "ನಿಜ ಹೇಳ್ತೀನಿ. ನಿನ್ನ ಬಿಟ್ಟರೆ ಇನ್ಯಾರಿದಾರೆ ನನಗೆ ಪ್ರೀತಿ ಮಾಡೋಕೆ? ಆದರೆ ಒಂದು ಸತ್ಯ. ರಾಮನ್ನ ಕಂಡರೆ ನಿನಗಿನ್ನ ಹೆಚ್ಚು ಪ್ರೀತಿ. ಅವನನ್ನ ನೋಡದೇ ಒಂದು ನಿಮಿಷಾನೂ ಇರೋಕಾಗಲ್ಲ. ಅವನ ಮೇಲೆ ಪ್ರಮಾಣ ಮಾಡ್ತೀನಿ. ಹೇಳು." 
(ಅವಲಿಪ್ತೇನ ಜಾನಾಸಿ ತ್ವತ್ತಃ ಪ್ರಿಯತರೋ ಮಮ
ಮನುಜೋ ಮನುಜವ್ಯಾಘ್ರಾತ್ ರಾಮಾತ್ ಅನ್ಯೋ ನ ವಿದ್ಯತೇ
ಯಂ ಮುಹೂರ್ತಂ ಅಪಶ್ಯಂಸ್ತು ನ ಜೀವೇಯಂ ಅಹಂ ಧ್ರುವಂ
ತೇನ ರಾಮೇಣ ಕೈಕೇಯಿ ಶಪೇ ತೇ ವಚನಕ್ರಿಯಾಂ)
ಹೆಬ್ಬಾವಿನ ಬಾಯಿ ಹಣೆ ತನಕ ನುಂಗಿದೆ. ಅಪ್ಪುಗೆಯನ್ನು ಬಿಟ್ಟಳು. ಕೊಂಚ ದೂರ ಸರಿದಳು. ಎರಡು ಕೈಗಳನ್ನೂ ಜೋಡಿಸಿ, ಗಂಭೀರವದನಳಾಗಿ, "ದೇವತೆಗಳೇ, ಕೇಳಿರಿ. ದಶರಥ ಮಹಾರಾಜರು ಆಡಿದ ಮಾತನ್ನು ಎಂದೂ ಹಿಂದಕ್ಕೆ ಸೆಳೆಯುವವರಲ್ಲ. ಸತ್ಯ ಹರಿಶ್ಚಂದ್ರನ ವಂಶ ಅವರದು. ಸಮಯ ಬಂದಾಗ ದೇವತೆಗಳಿಗೂ ಸಹಾಯ ಮಾಡಬಲ್ಲ ತೇಜಸ್ವಿ. ಮಹಾ ಧರ್ಮಶಾಲಿ. ಬುದ್ಧಿಯನ್ನು ಸ್ಥಿಮಿತದಲ್ಲಿಟ್ಟುಕೊಂಡಿರುವ ಈ ಮಹಾರಾಜರು ನನಗೆ ವರ ಕೊಡುತ್ತಿದ್ದಾರೆ. ಈ ಮಾತುಗಳನ್ನು ನೀವೆಲ್ಲ ಕೇಳಿಸಿಕೊಳ್ಳಿ. "
(ಸತ್ಯ ಸಂಧೋ ಮಹಾ ತೇಜಾ ಧರ್ಮಙ್ಞಃ ಸುಸಮಾಹಿತಃ
ವರಂ ಮಮ ದದಾತಿ ಏಷ ತನ್ಮೇ ಶೃಣ್ವಂತ ದೇವತಾಃ)
ಗಂಡನ ಕಾಲಿಗೆ ಬಿದ್ದು, "ವರಕೇಳಲೇ" ಎಂದಳು. "ಮೊದಲು ಕೇಳು ಸತಾಯಿಸಬೇಡ. "ದಶರಥನಿಗೇಕೋ ಕೊಂಚ ಅಸಹನೆ ಶುರುವಾಯಿತು. ಏನೋ ಅಹಿತ ಘಟಿಸಬಹುದೆಂದು ಮನಸ್ಸಿನ ಮೂಲ ಘಂಟೆ ಬಾರಿಸಿತು. ಹೆಬ್ಬಾವಿನ ಬಾಯಿ ಒಮ್ಮೆಗೇ ಮೂಗು - ಬಾಯಿಯ ಮೇಲೆ ಬಂದಿತು. 
"ಮಹಾರಾಜ, ಹಿಂದೆ ನೀವು ಭಾಗವಹಿಸಿದ್ದ ದೇವಾಸುರ ಸಮರ ನೆನಪಿಸಿಕೊಳ್ಳಿ. ಅಂದು ಶತ್ರು ನಿಮ್ಮನ್ನು ಮೂರ್ಛೆಗೆ ಕೆಡವಿದ. ಕಷ್ಟ ಪಟ್ಟು ಯುದ್ಧ ಭೂಮಿಯಿಂದ ಹೊರಕ್ಕೆ ತಂದು ನಾನು ನಿಮ್ಮನ್ನು ರಕ್ಷಿಸಿದೆ. ಆಗ ನೀವು ನನಗೆ ಎರಡು ವರಗಳನ್ನು ಕೊಟ್ಟಿರಿ. ಅವನ್ನು ಸತ್ಯಶೀಲರಾದ ನಿಮ್ಮಲ್ಲಿಯೇ ಬಿಟ್ಟಿದ್ದೆ. ಈಗ ಆ ವರಗಳನ್ನು ಕೇಳಿಕೊಳ್ಳುತ್ತೇನೆ." 
(ಸ್ಮರ ರಾಜನ್ ಪುರಾವೃತ್ತಂ ತಸ್ಮಿನ್ ದೈವಾಸುರೇ ರಣೇ
ತತ್ರ ತ್ವಚ್ಯಾವಯ ಚ್ಛತ್ರುಸ್ತವ ಜೀವಿತ ಮಂತರಾ
ತತ್ರಚಾಪಿ ಮಯಾದೇವ ಯತ್ವಂ ಸಮಭಿರಕ್ಷಿತಃ
ಜಾಗ್ರತ್ಯಾ ಯತಮಾನಾಯಾಸ್ತತೋ ಮೇ ಪ್ರಾದದಾ ವರೌ
ತೌತುದತ್ತೌ ವರೌ ದೇವ ನಿಕ್ಷೇಪೌ ಮೃಗಯಾಂ ಅಹಂ
ತವೈವ ಪೃಥಿವೀಪಾಲ ಸಕಾಶೇ ಸತ್ಯ ಸಂಗರ)
*****************
-ಡಾ.ಪಾವಗಡ ಪ್ರಕಾಶ ರಾವ್
pavagadaprakashrao@gmail.com 
SCROLL FOR NEXT