ಅಂಕಣಗಳು

ಕ್ರಿಪ್ಟೋ ಕರೆನ್ಸಿ ಜಗತ್ತಿನ ಹಣವಾಗಿಸಲು ಚೀನಾ ವೇದಿಕೆ ಸಿದ್ಧಪಡಿಸುತ್ತಿದೆಯೇ? 

ರಂಗಸ್ವಾಮಿ ಮೂಕನಹಳ್ಳಿ

ಚೀನಾ ದೇಶದ ಬ್ಯಾಂಕ್ಗಳು ಕುಸಿತಕಾಣುತ್ತಿವೆ. ಬ್ಯಾಂಕಿನಲ್ಲಿ ಇಟ್ಟಿರುವ ಹಣ ವಾಪಸ್ಸು ಬರುವುದು ಸಂಶಯ ಎನ್ನುವಂತಹ ಸುದ್ದಿ ಇಂಟರ್ನೆಟ್ ನಲ್ಲಿ ಹರಿದಾಡಿದೆ. ಕೇಳುವುದಿನ್ನೇನು? ನಿಧಾನವಾಗಿ ಜನ ಬ್ಯಾಂಕಿನತ್ತ ಮುಖ ಮಾಡಿದರು. ನಮ್ಮ ಹಣ ನಮಗೆ ವಾಪಸ್ಸು ಕೊಡಿ ಎಂದು ತಮ್ಮ ಖಾತೆಯಲ್ಲಿನ ಹಣವನ್ನ ಹಿಂತೆಗೆಯಲು ಶುರು ಮಾಡಿದರು. ಚೀನಿಯರು ಬಹಳ ಹಿಂದಿನಿಂದಲೂ ತಮ್ಮ ಹಣವನ್ನ ತಾವೇ ಇಟ್ಟುಕೊಳ್ಳಲು ಬಯಸುವ ಜನ. ಅವರಿಗೆ ಬ್ಯಾಂಕಿಂಗ್ ಸಿಸ್ಟಮ್ ನಲ್ಲಿ ಅಷ್ಟೊಂದು ನಂಬಿಕೆ ಇಲ್ಲ. ಆದರೆ ವಿಪರ್ಯಾಸ ನೋಡಿ ಇವತ್ತು ನಾವು ಉಪಯೋಗಿಸುತ್ತಿರುವ ಪೇಪರ್ ಹಣವನ್ನ ಸೃಷ್ಟಿಸಿದವರು ಚೀನಿಯರು...!  

ಯಾವುದೇ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಎಷ್ಟೇ ಭದ್ರವಾಗಿರಲಿ ಎಷ್ಟೇ ಆರೋಗ್ಯಕರವಾಗಿರಲಿ ಅದನ್ನ ಜನ ನಂಬದಿದ್ದರೆ? ಬ್ಯಾಂಕಿಂಗ್ ವ್ಯವಸ್ಥೆ ಒಂದೇ ಅಲ್ಲ ಜಗತ್ತು ನಡೆಯುತ್ತಿರುವುದೇ ನಂಬಿಕೆಯ ಆಧಾರದ ಮೇಲೆ. ಜನ ತಮ್ಮ ಹಣವನ್ನ ಬ್ಯಾಂಕ್ ನಿಂದ ಹೊರತೆಗೆಯಲು ಗುಂಪುಗುಂಪಾಗಿ ಹೊರಟರೆ ಅದಕ್ಕೆ ಬ್ಯಾಂಕ್ ರನ್ ಎನ್ನುತ್ತಾರೆ. ಚೀನಾದಲ್ಲಿ ಆಗುತ್ತಿರುವುದೂ ಇದೇ... ಮೊದಲೇ ಹೇಳಿದಂತೆ ಎಷ್ಟೇ ಸುಭದ್ರ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿದ್ದರೂ ಜನರೆಲ್ಲಾ ಒಟ್ಟಾಗಿ ಅಲ್ಲಿ ಇಟ್ಟಿರುವ ಹಣವನ್ನ ತೆಗೆಯಲು ಹವಣಿಸಿದರೆ ಬ್ಯಾಂಕ್ ಕುಸಿತ ಕಾಣುತ್ತದೆ. ಇದನ್ನ ಗಮದಲ್ಲಿರಿಸಿಕೊಂಡು ಚೀನಿ ಸರಕಾರ ಜನ ಬ್ಯಾಂಕ್ ನಿಂದ ಹಣ ತೆಗೆಯಲು ನಿರ್ಬಂಧ ಹೇರಿದೆ. ಸೋಶಿಯಲ್ ಕ್ರೆಡಿಟ್ ರೇಟಿಂಗ್ ನೀಡಲು ಬಯಸಿದೆ. ಅಂದರೆ ಹೆಚ್ಚು ಹಣ ತೆಗೆದರೆ ಮುಂದೆ ಸಾಲ ನೀಡುವುದಿಲ್ಲ ಅಥವಾ ವಿದೇಶ ಪ್ರಯಾಣ ಮಾಡಲು ಬಿಡುವುದಿಲ್ಲ ಹೀಗೆ ಹಣ ತೆಗೆಯುವುದರ ಮೇಲೆ ರೇಟಿಂಗ್ ನೀಡುವ ವ್ಯವಸ್ಥೆ ಜಾರಿಗೆ ತಂದಿದೆ. ಅಮೆರಿಕನ್ ಡಾಲರ್ ಹೊರತೆಗೆಯಲು ಕೂಡ ನಿರ್ಬಂಧ ಹೇರಿದೆ. 

ಗಮನಿಸಿ, ಪ್ರಕೃತ್ತಿ ವಿಕೋಪಗಳು ನಮಗೆ ಯಾವುದೇ ರೀತಿಯ ಸೂಚನೆ ನೀಡದೆ ಆಗಬಹುದಾದ ಕ್ರಿಯೆ. ಆದರೆ ಒಂದು ದೇಶದ ಆರ್ಥಿಕ ವ್ಯವಸ್ಥೆ ಅಚಾನಕ್ಕಾಗಿ ಕುಸಿಯುವುದಿಲ್ಲ ಅಲ್ಲವೇ? ಅದಂತೂ ಒಂದಲ್ಲ ಹಲವು ರೀತಿಗಳಲ್ಲಿ ಸಂದೇಶ ನೀಡಿರುತ್ತದೆ. ವಸ್ತುಸ್ಥಿತಿ ಹೀಗಿದ್ದೂ ಚೀನಾ ಬ್ಯಾಂಕಿಂಗ್ ವ್ಯವಸ್ಥೆ ಕುಸಿದದ್ದು ಏಕೆ? 

ಇದಕ್ಕೆ ಪ್ರಮುಖ ಕಾರಣಗಳು ಹೀಗಿವೆ: 

  1. 2016 ರಿಂದ ಶುರುವಾದ ಅಮೆರಿಕಾ ಜೊತೆಗಿನ ಟ್ರೇಡ್ ವಾರ್ ಚೀನಾದ ಬಹುತೇಕ ಎಕ್ಸ್ಪೋರ್ಟ್  ಕಂಪನಿಗಳಿಗೆ ಬಹಳ ಹೊಡೆತ ನೀಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಪೈಪೋಟಿ ದರದಲ್ಲಿ ಮಾರಾಟ ಮಾಡುತ್ತಿದ್ದ ಅವುಗಳ ಲಾಭದ ಅಂಶ ಬಹಳ ಕಡಿಮೆ. ಅವುಗಳದೇನಿದ್ದರೂ ಹೆಚ್ಚು ಹೆಚ್ಚು ವಹಿವಾಟು ನಡೆಸಿ ತನ್ಮೂಲಕ ಲಾಭ ಮಾಡುವ ವಾಲ್ಯೂಮ್ ಬಿಸಿನೆಸ್ ಫಾರ್ಮ್ಯಾಟ್ ನಲ್ಲಿ ವ್ಯಾಪಾರ ಮಾಡುತ್ತಿದ್ದವು. ಟ್ರಂಪ್ ಅಧಿಕಾರ ವಹಿಸಿಕೊಂಡ ದಿನದಿಂದ ಶುರುವಾದ ಈ ಟ್ರೇಡ್ ವಾರ್ ಆಟದಲ್ಲಿ ಚೀನಾದ ಎಕ್ಸ್ಪೋರ್ಟ್ ಹೌಸ್ ಗಳು ನಲುಗಿ ಹೋದವು. ಬ್ಯಾಂಕಿನಿಂದ ವ್ಯಾಪಾರಕ್ಕೆ ತೆಗೆದುಕೊಂಡ ಸಾಲವನ್ನ ಮರಳಿ ನೀಡುವಲ್ಲಿ ಇವು ಕುಸಿದವು. 
  2. ಯಾವುದೇ ರೀತಿಯ ತಪಾಸಣೆ ಇಲ್ಲದೆ, ಆಸ್ತಿ, ಅಥವಾ ಬೇರೆ ಯಾವುದೇ ತೆರನಾದ ಒತ್ತೆ ಇಲ್ಲದೆ ಎಲ್ಲರಿಗೂ ಸಾಲವನ್ನ ಚೀನಾದ ಬ್ಯಾಂಕುಗಳು ನೀಡಲು ಶುರು ಮಾಡಿದವು ಇದರಿಂದ ಬಹಳಷ್ಟು ಸಾಲ, ಕೆಟ್ಟ ಸಾಲವಾಗಿ ಅಂದರೆ ವಸೂಲಾಗದೆ ಉಳಿಯಿತು. ಇದು ಸಹಜವಾಗೇ ಬ್ಯಾಂಕ್ಗಳ ಬಂಡವಾಳವನ್ನ ಬರಿದು ಮಾಡಿತು. ನೆನಪಿಡಿ ಬ್ಯಾಂಕುಗಳ ಬಳಿ ಬಹಳಷ್ಟು ಹಣವಿದ್ದರೂ ಅದರ ಮೂಲ ಬಂಡವಾಳ ಬರಿದಾದರೆ ಆ ಬ್ಯಾಂಕ್ ಜನರಿಗೆ ಸಾಲ ಕೊಡಲು ಸಾಧ್ಯವಿಲ್ಲ. 

ಬ್ಯಾಂಕಿಂಗ್ ಕುಸಿತ ಯಾವಾಗ ಶುರುವಾಯ್ತು? 

2019, ಮೇ ತಿಂಗಳ ಕೊನೆಯಲ್ಲಿ ಮೊದಲಿಗೆ ಬೌಶಿಂಗ್ ಬ್ಯಾಂಕ್, ನಂತರ ಬ್ಯಾಂಕ್ ಆಫ್ ಜಿನ್ಜೋ ನಂತರ ಹೆಂಗ್ ಫೆಂಗ್ ಬ್ಯಾಂಕ್ ಗಳು ಕುಸಿತ ಕಂಡವು. ಚೀನಾ ಸದ್ದು ಗದ್ದಲವಿಲ್ಲದೆ ಅವುಗಳನ್ನ ರಾಷ್ಟ್ರೀಕೃತ ಬ್ಯಾಂಕ್ಗಳನ್ನಾಗಿ ಮಾರ್ಪಡಿಸಿಬಿಟ್ಟಿತು. ಅಂದರೆ ಜನರ ಠೇವಣಿ ಜೊತೆಗೆ ಎಲ್ಲಾ ರೀತಿಯ ಭದ್ರತೆ ಅಥವಾ ಬಾಧ್ಯತೆಗಳಿಗೆ ಸರಕಾರ ಜವಾಬ್ದಾರ ಎನ್ನುವ ಅರ್ಥ. ಹೀಗಾಗಿ ಅವು ಸುದ್ದಿಯಾದರೂ ಹೆಚ್ಚು ಸದ್ದು ಮಾಡಲಿಲ್ಲ. ಇದೀಗ ಸುದ್ದಿಯಾಗಿರುವುದು Yingkou Coastal Bank ಕುಸಿತದಿಂದ. ಈ ಪ್ರದೇಶದಲ್ಲಿ ವಾಸಿಸುವ ಜನ ಬ್ಯಾಂಕಿನಲ್ಲಿ ಇಟ್ಟಿರುವ ಹಣವನ್ನ ವಾಪಸ್ಸು ಪಡೆಯಲು ಸಾಲುಗಟ್ಟಿ ನಿಂತರು. ವೆಸ್ಟ್ರನ್ ಮೀಡಿಯಾ ಕಣ್ಣಿಗೆ ಇದು ಸೊಗಸಾದ ಆಹಾರವಾಯಿತು. 

ಬೌಶಿಂಗ್ ಬ್ಯಾಂಕ್ 2017ರಲ್ಲಿ 600 ಮಿಲಿಯನ್ ಅಮೆರಿಕನ್ ಡಾಲರ್ ಲಾಭವನ್ನ ದಾಖಲಿಸುತ್ತದೆ. ಇದರ ಜೊತೆಗೆ 90 ಬಿಲಿಯನ್ ಅಮೆರಿಕನ್ ಡಾಲರ್ ಆಸ್ತಿಯನ್ನ ಅದು ತನ್ನ ಬ್ಯಾಲೆನ್ಸ್ ಶೀಟ್ ನಲ್ಲಿ ತೋರಿಸುತ್ತದೆ. ಆದರೆ ಕೆಟ್ಟ ಸಾಲ ಅಥವಾ ಬ್ಯಾಡ್ ಲೋನ್ ಕೇವಲ 2 ಪ್ರತಿಶತ ಅಷ್ಟೇ! ಉಳಿದ ಬ್ಯಾಂಕುಗಳು ಕೂಡ ನಷ್ಟದಲ್ಲಿ ಇದ್ದ ಲೆಕ್ಕ ಪತ್ರವನ್ನ ತೋರಿಸಿಲ್ಲ. ಅಂದರೆ ತೀರಾ ಇತ್ತೀಚಿನವರೆಗೆ ಎಲ್ಲಾ ಚೆನ್ನಾಗೇ ಇತ್ತು. ಚೀನಾದ ಬ್ಯಾಂಕ್ಗಳು ಲಿಕ್ವಿಡಿಟಿ ಕೊರತೆಯಿಂದ ಬಳಲುತ್ತಿವೆ ಎನ್ನುವ ಅಲ್ಪ ಜ್ಞಾನವೂ ಕೂಡ ಹೊರ ಜಗತ್ತಿಗೆ ಇರಲಿಲ್ಲ. ಈಗ ಅಚಾನಕ್ಕಾಗಿ ಇಷ್ಟೊಂದು ಸದ್ದು ಮಾಡುತ್ತಿರುವುದರ ಹಿಂದೆ ಚೀನಾ ದೇಶದ ಹುನ್ನಾರವೇನಿರಬಹುದು? ಎನ್ನುವುದು ಪ್ರಶ್ನೆ. 

ಚೀನಾದ ಬ್ಯಾಂಕ್ಗಳು ಜನರು ಇಡುವ ಠೇವಣಿ ಮತ್ತು ಇತರ ಬ್ಯಾಂಕುಗಳಿಂದ ಬೇಕಾದಾಗ ಪಡೆಯುವ ಸಾಲದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿವೆ. ಇದು ಬಹಳ ವರ್ಷದಿಂದ ನಡೆದು ಬಂದಿದೆ ಆದರೆ ಈಗ ಇಂಟೆರ್ ಬ್ಯಾಂಕ್ ಹೊಣೆಗಾರಿಕೆ ನಿಭಾಯಿಸುವುದರಲ್ಲಿ ಎಡವಿದೆ ಎನ್ನುವ ಕಾರಣ ಹೇಳಿ ಬ್ಯಾಂಕುಗಳನ್ನ ರಾಷ್ಟ್ರೀಕೃತ ಬ್ಯಾಂಕುಗಳನ್ನಾಗಿ ಮಾರ್ಪಾಡು ಮಾಡುತ್ತಾ ಇದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಬಂಡವಾಳ ಬೇಕು ಬಂಡವಾಳವಿಲ್ಲದೆ ಅವುಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಹೀಗಾಗಿ 
ಪೀಪಲ್ ಬ್ಯಾಂಕ್ ಆಫ್ ಚೀನಾ 600 ಬಿಲಿಯನ್ ಯುವಾನ್ ಅನ್ನು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮರು ಹೂಡಿಕೆ (ರಿ-ಕ್ಯಾಪಿಟಲೈಸೇಷನ್) ಮಾಡಿದೆ. 

ಗಮನಿಸಿ ಚೀನಾ ದೇಶ ಪ್ರಪಂಚದ ಹತ್ತಾರು ದೇಶಗಳಿಗೆ ಲಕ್ಷಾಂತರ ಕೋಟಿ ಹಣವನ್ನ ಸಾಲವನ್ನಾಗಿ ನೀಡಿದೆ. ಒಂದು ಲೆಕ್ಕಾಚಾರದ ಪ್ರಕಾರ ಜಗತ್ತಿನ 66 ದೇಶಗಳು ಚೀನಾ ತೋಡಿದ ಸಾಲದ ಖೆಡ್ಡಾದಲ್ಲಿ ಬಿದ್ದಿವೆ. ಅವುಗಳಲ್ಲಿ 20 ಕ್ಕೂ ಹೆಚ್ಚು ದೇಶಗಳು ತಾವು ಪಡೆದ ಸಾಲವನ್ನ ಮರಳಿ ನೀಡುವ ಶಕ್ತಿಯನ್ನ ಹೊಂದಿಲ್ಲ. ಹೀಗಾಗಿ ಚೀನಾ ಅಪರೋಕ್ಷವಾಗಿ ಇವುಗಳ ಆಡಳಿತ ನಡೆಸುತ್ತಿದೆ. ಚೀನಾಗೆ ಹೊರಗಿನ ಸಾಲವಿಲ್ಲ. ಅಂದರೆ ಚೀನಾ ಬೇರೆಯವರಿಗೆ ಸಾಲ ಕೊಟ್ಟಿದೆ ಆದರೆ ಯಾರಿಂದ ಸಾಲ ಪಡೆದಿಲ್ಲ ಹೀಗಾಗಿ ಅವರು ಬೇಕಾದಷ್ಟು ಹಣವನ್ನ ಪ್ರಿಂಟ್ ಮಾಡಿ ಎಂತಹುದೇ ಬ್ಯಾಂಕ್ ಮುಳುಗುತ್ತಿದ್ದರೂ ಅದನ್ನ ಅವರು ಉಳಿಸಿಕೊಳ್ಳಬಹುದು. 

ವಸ್ತುಸ್ಥಿತಿ ಹೀಗಿರುವಾಗ ಯಕಶ್ಚಿತ್ ಒಂದು ಕೋಸ್ಟಲ್ ಬ್ಯಾಂಕ್ ರನ್ ಗೆ ಹೆದರಿತೆ? ಇದು ಸಾಧ್ಯವಿಲ್ಲದ ಮಾತು. ವೆಸ್ಟ್ರೇನ್ ಮೀಡಿಯಾಗಳು ಇದನ್ನ ಚೀನಾದ ಕುಸಿತ ಎನ್ನುವಂತೆ ಬಣ್ಣಿಸುತ್ತಿವೆ. ಆದರೆ ಚೀನಾ ತನ್ನ ಬ್ಯಾಂಕುಗಳನ್ನ ರಾಷ್ಟ್ರೀಕೃತ ಮಾಡುವ ಹುನ್ನಾರದಲ್ಲಿದೆ ಎನ್ನುವುದು ಒಳಹೊಕ್ಕು ನೋಡಿದರೆ ತಿಳಿಯುತ್ತದೆ.

ಇದಕ್ಕೆ ಪ್ರಮುಖ ಕಾರಣಗಳು ಹೀಗಿವೆ: 

  1. ದಶಕಗಳಿಂದ ವಿಶ್ವದ ಮಾರುಕಟ್ಟೆಗೆ ಕಾರ್ಖಾನೆಯಾಗಿ ದುಡಿದು ಬೇಸತ್ತಿದ್ದಾರೆ. ಕನ್ಸ್ಯೂಮರ್ ಅಂಡ್ ಸರ್ವಿಸ್ ಬೇಸ್ಡ್ ಎಕಾನಮಿ ಆಗಲು ಹವಣಿಸುತ್ತಿದ್ದಾರೆ. ಅಂದರೆ ಡೊಮೆಸ್ಟಿಕ್ ಮಾರುಕಟ್ಟೆಯನ್ನ ನಂಬಿ ಬದುಕಿದರೆ ಸಾಕು ಎನ್ನುವಷ್ಟು.  
  2. 2012ರ ಅಂಕಿ ಅಂಶದ ಪ್ರಕಾರ 54 ಪ್ರತಿಶತ ಚೀನಿಯರು ಮಿಡ್ಲ್ ಕ್ಲಾಸ್! ಅಂದರೆ 9-16 ಸಾವಿರ ಅಮೆರಿಕನ್ ಡಾಲರ್ ವಾರ್ಷಿಕ ಗಳಿಸುತ್ತಾ ಇದ್ದರು. ಇಷ್ಟೇ ಸಂಖ್ಯೆಯ ಜನ ಅಂದರೆ 54 ಪ್ರತಿಶತ 2022ಕ್ಕೆ ಅಪ್ಪರ್ ಮಿಡ್ಲ್ ಕ್ಲಾಸ್ (ಮೇಲ್ಮಧ್ಯಮ ವರ್ಗ) ತಲುಪಲಿದ್ದಾರೆ ಅಂದರೆ 16-34 ಸಾವಿರ ಅಮೆರಿಕನ್ ಡಾಲರ್ ವಾರ್ಷಿಕ ಗಳಿಕೆ. ಹೀಗಾಗಿ ಚೀನಾ ದೇಶದ ಪ್ರಜೆಗಳ ಬಳಿ ವ್ಯಯಿಸಲು ಮತ್ತು ಸಾಲ ಮಾಡಲು ಹೆಚ್ಚು ಸಾಮರ್ಥ್ಯ ಇದೆ. ಚೀನಾ ಸರಕಾರಕ್ಕೆ ಬ್ಯಾಂಕಿಂಗ್ ವ್ಯವಹಾರ ಹಸಿರಾಗಿ ಕಾಣುತ್ತಿದೆ.
  3. ಅಮೇರಿಕಾದಲ್ಲಿ ಮಿಡ್ಲ್ ಕ್ಲಾಸ್ ವೇಗವಾಗಿ ಸಾಯುತ್ತಿದೆ. ವೆಲ್ತ್ ಕ್ರಿಯೇಷನ್ ಮತ್ತು ರಿಸರ್ವ್ ಕರೆನ್ಸಿ ಎನ್ನುವ ಎರಡು ಮರೀಚಿಕೆ ಮೇಲೆ ಅವರು ಬಾಳು ಸಾಗಿಸುತ್ತಿದ್ದಾರೆ. ಚೀನಾದಲ್ಲಿ ಮಧ್ಯಮ ವರ್ಗ ಮೇಲ್ಮಧ್ಯಮ ವರ್ಗವಾಗಿ ಬಡ್ತಿ ಪಡೆಯುತ್ತಿದೆ. ಬಡವರು ಕೆಳಮಧ್ಯಮ ಹಾಗೂ ಮಧ್ಯಮ ವರ್ಗಕ್ಕೆ ಶಿಫ್ಟ್ ಆಗುತ್ತಾ ಇದ್ದಾರೆ. ಇದು ಇವರ ಕೊಳ್ಳುವ ಶಕ್ತಿಯನ್ನ ಹೆಚ್ಚಿಸಲಿದೆ.  
  4. 2020 ಕ್ಕೆ ಚೀನಾದ ಡೊಮೆಸ್ಟಿಕ್ ಡಿಮ್ಯಾಂಡ್ 9 ಪ್ರತಿಶತ ಹೆಚ್ಚಾಗಲಿದೆ. 
  5. ಮೊದಲೇ ಹೇಳಿದಂತೆ ಬಳಕೆ ಹೆಚ್ಚಾಗಲಿದೆ. ಕನ್ಸ್ಯೂಮರ್ ಎಕಾನಮಿ 6.5 ಟ್ರಿಲಿಯನ್ ಅಮೆರಿಕನ್ ಡಾಲರ್ ತಲುಪಲಿದೆ ಅಂದರೆ 55 ಪ್ರತಿಶತ ಹೆಚ್ಚಳ ಕಾಣಲಿದೆ. 
  6. ಚೀನಾ ಪ್ರಜೆಗಳ ತಲೆಯ ಮೇಲೆ ಸಾಲ ಕಡಿಮೆ ಇದೆ. ಅಮೆರಿಕಾಕ್ಕಿಂತ 40 ಪ್ರತಿಶತ ಕಡಿಮೆ ಮತ್ತು ಇತರ ಯಾವುದೇ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಬಹಳ ಕಡಿಮೆ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇಂತಹ ಪ್ರಜೆಗಳಿಗೆ ಸಾಲ ನೀಡುವ ಹೊಸ ವ್ಯಾಪಾರ ಸರಕಾರ ಶುರು ಮಾಡುತ್ತದೆ.

ಇಂದಿಗೂ ಚೀನಾ ಜಗತ್ತಿನ ಹೆಚ್ಚು ಚಿನ್ನ ಕೊಳ್ಳುವ ದೇಶ. ಉಳಿತಾಯದಲ್ಲೂ ಮುಂದಿದೆ. ಜೊತೆಗೆ ಮೇಲಿನ ಕಾರಣಗಳು ಬ್ಯಾಂಕಿಂಗ್ ವ್ಯವಹಾರವನ್ನ ಸರಕಾರ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರೇರೇಪಿಸಿದೆ. ಚೀನಾದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಬ್ಯಾಂಕುಗಳ ಮಾಲಿಕರನ್ನ ಸರಿಯಾಗಿ ವ್ಯವಹಾರ ನಡೆಸಿಲ್ಲ ಎಂದು ಹೇಳಿ ಅವರಿಂದ ಕಸಿದುಕೊಂಡು ನ್ಯಾಷನಲೈಸ್ ಮಾಡುತ್ತಿದೆ. 

ಚೀನಿಯರು ಅಮೆರಿಕನ್ನರಿಗಿಂತ ಹೆಚ್ಚು ಭದ್ರತೆ ಹೊಂದಿದ್ದಾರೆ. ಡಾಲರ್ ಯಾವುದೇ ಬ್ಯಾಕ್ ಅಪ್ ಇಲ್ಲದ ಒಂದು ಪೇಪರ್ ತುಂಡು ಅಷ್ಟೇ. ಬ್ಯಾಂಕುಗಳ ಸಾಲದ ಮೊತ್ತ 3೦೦ ಟ್ರಿಲಿಯನ್ ಜೊತೆಗೆ ಹೂಡಿಕೆ ಮಾಡಲಾಗದ ಸಾಲದ ಮೊತ್ತ 6೦೦ ಟ್ರಿಲಿಯನ್ ಅಮೆರಿಕನ್ನರು ಜೀವನದಲ್ಲಿ ಎಂದಿಗೂ ತೀರಿಸಲಾಗದ ಸಾಲದಲ್ಲಿ ಮುಳುಗಿದ್ದಾರೆ. ಡೆಟ್ ಬೇಸ್ಡ್ ಬ್ಯಾಂಕಿಂಗ್ ಸಿಸ್ಟಮ್ ಎಂದಿಗೂ ಒಂದು ದೊಡ್ಡ ಮೋಸದ ಜಾಲ. ಆದರೆ ಚೀನಿಯರ ಸ್ಥಿತಿ ಹೀಗಿಲ್ಲ. 

ಚೀನಾ ಎಂದೂ ಯಾವುದೇ ಕೆಲಸವನ್ನ ಕೇವಲ ಇಂದಿಗಾಗಿ ಮಾಡಿದ ಉದಾಹರಣೆ ಇಲ್ಲ. ಅವರದ್ದು ದೂರಾಲೋಚನೆ. ವಿಶ್ವದ ಹಣವಾಗಿ ಡಾಲರ್ ಮೆರೆದಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅದು ಚೀನಾಗೆ ಎಂದೂ ಸಹ್ಯವಾಗಿಲ್ಲ. ಯಾನ್ ನನ್ನ ವಿಶ್ವದ ಹಣವನ್ನಾಗಿ ಮಾಡಲು ಪಟ್ಟ ಪ್ರಯತ್ನಗಳು ಸಫಲವಾಗಿಲ್ಲ. ಹೀಗಾಗಿ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರುವ ತಲ್ಲಣಗಳನ್ನ ಬಂಡವಾಳ ಮಾಡಿಕೊಂಡು ವಿಶ್ವದ ಮುಂದೆ 'ಹೊಸ ವಿಶ್ವ ಹಣ' ಬೇಕು ಎನ್ನುವ ಹುಯಿಲು ಎಬ್ಬಿಸುವುದು ಮತ್ತು ತನ್ನ ದೇಶದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಪೂರ್ಣ ನಿಯಂತ್ರಣ ಹೊಂದುವುದು ಇದರ ಸದ್ಯದ ಗುರಿ. 

ಚೀನಾದಲ್ಲಿ ಬ್ಯಾಂಕಿಂಗ್ ಸಮಸ್ಯೆ ಇಲ್ಲವೆಂದಲ್ಲ, ಇದೆ... ಆದರೆ ಅದನ್ನ ಚೀನಾ ಚಿಟಿಕೆ ಹೊಡೆಯುವಷ್ಟರಲ್ಲಿ ಪರಿಹರಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಇಷ್ಟೆಲ್ಲಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ಹೊಸ ಹಣ ತರಲು ನಡೆಯುತ್ತಿರುವ ಹುನ್ನಾರವೇ? ಎನ್ನುವ ಪ್ರಶ್ನೆ ಉಧ್ಭವಿಸುತ್ತದೆ. ಯಾವೊಂದು ದೇಶವೂ ಪೂರ್ಣ ಹಿಡಿತ ಸಾಧಿಸಲು ಸಾಧ್ಯವಾಗದ ಕ್ರಿಪ್ಟೋ ಕರೆನ್ಸಿಯನ್ನು ಜಗತ್ತಿನ ಹಣವಾಗಿಸಲು  ಚೀನಾ ವೇದಿಕೆ ಸಿದ್ಧಪಡಿಸುತ್ತಿದೆಯೇ? ಕಾಲ ಉತ್ತರ ಹೇಳಲಿದೆ... 

- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

SCROLL FOR NEXT