(ಸಾಂಕೇತಿಕ ಚಿತ್ರ) 
ಅಂಕಣಗಳು

ಮನುಷ್ಯರಿಗೆ ಸಾವಿನ ಭಯ ಕಾಡುವುದೇಕೆ? (ಚಿತ್ತ ಮಂದಿರ)

ಕೋವಿಡ್ ವೈರಾಣುಗಿಂತ ಮಾಧ್ಯಮಗಳು ಸೃಷ್ಟಿಸಿದ, ಭಯದ ತಾಂಡವ ನೃತ್ಯದ ಪರಿಣಾಮವನ್ನು ನಾವೆಲ್ಲ ನೋಡಿದ್ದೇವೆ, ಅನುಭವಿಸಿದ್ದೇವೆ, ಆತ್ಮೀಯರನ್ನು ಕಳೆದುಕೊಂಡು ದುಃಖವನ್ನು ಅನುಭವಿಸಿದ್ದೇವೆ. ದುಃಖವನ್ನು ತಗ್ಗಿಸುವುದು ನಾವೆಲ್ಲ ಕಲಿಯಲೇಬೇಕಾದ ಕಲಾಕೌಶಲ.

ಕೋವಿಡ್-19 ಹಾವಳಿ, ನಟ ಪುನೀತ್ ರಾಜಕುಮಾರ್ ಸಾವಿನ ನಂತರ, ಪ್ರತಿಯೊಬ್ಬರಲ್ಲೂ ಸಾವು ಭಯವನ್ನು, ದುಃಖ, ಅಸಹಾಯಕತೆಯನ್ನು, ಜೀವನದ ಅನಿಶ್ಚಯತೆಯನ್ನು ಸೃಷ್ಟಿಸಿದೆ.

ಜನ ಜೀವಭಯದಿಂದ ವೈದ್ಯ ತಪಾಸಣೆ ಮಾಡಿಕೊಳ್ಳಲು ಆಸ್ಪತ್ರೆ - ಲ್ಯಾಬ್ ಗಳಿಗೆ ಮುಗಿಬೀಳುತ್ತಿದ್ದಾರೆ. ಮನೆಯವರೋ, ಆಪ್ತರೋ, ಮಿತ್ರರೋ, ಸತ್ತಾಗ ಅಕಾಲಿಕ ಮರಣಕ್ಕಾಗಿ ಮರುಗಿದ್ದಾರೆ, ಕಣ್ಣೀರು ಹಾಕಿದ್ದಾರೆ. ಪುನೀತ್ ಸಾವಿಗೆ ಕರ್ನಾಟಕದ ಜನತೆ ಕಂಬನಿ ಮಿಡಿದಿದೆ. ಮನುಷ್ಯರಿಗೆ ಸಾವಿನ ಬಗ್ಗೆ ಭಯ (ಇದನ್ನು ವೈದ್ಯಕೀಯ ಭಾಷೆಯಲ್ಲಿ ಥಾನಟೋಫೋಬಿಯಾ (Thanatophobia) ಎಂದೂ ಹೇಳುವುದುಂಟು) ಮತ್ತು ಸಾವದಾಗ ದುಃಖ ಸಹಜ. ಆದರೆ ಭಯ ದುಃಖ ಹೆಚ್ಚಾದಾಗ ಅದು ಅಸಹನೀಯವಾಗುತ್ತದೆ. ಮನಸ್ಸಿಗೆ ಹಿಂಸೆಯಾಗುತ್ತದೆ. ವ್ಯಕ್ತಿಯ ಕಾರ್ಯಕ್ಷಮತೆ ಕುಗ್ಗುತ್ತದೆ, ನಿತ್ಯ ಕೆಲಸ ಕರ್ತವ್ಯಗಳನ್ನು ನಿರ್ವಹಿಸಲಾರ. ಕೋವಿಡ್ ವೈರಾಣುಗಿಂತ ಮಾಧ್ಯಮಗಳು ಸೃಷ್ಟಿಸಿದ, ಭಯದ ತಾಂಡವ ನೃತ್ಯದ ಪರಿಣಾಮವನ್ನು ನಾವೆಲ್ಲ ನೋಡಿದ್ದೇವೆ, ಅನುಭವಿಸಿದ್ದೇವೆ, ಆತ್ಮೀಯರನ್ನು ಕಳೆದುಕೊಂಡು ದುಃಖವನ್ನು ಅನುಭವಿಸಿದ್ದೇವೆ. ಅತಿಯಾದ ಭಯವನ್ನು, ದುಃಖವನ್ನು ತಗ್ಗಿಸುವುದು ನಾವೆಲ್ಲ ಕಲಿಯಲೇಬೇಕಾದ ಕಲಾಕೌಶಲ.

ಸಾವಿನ ಭಯವೇಕೆ?

ಸಾಯುವ ಪ್ರಕ್ರಿಯೆ ಬಹಳ ನೋವುಂಟು ಮಾಡುತ್ತದೆ ಎನ್ನುವ ನಿರೀಕ್ಷೆ: ಸಾಯುವಾಗ ಎಲ್ಲರಿಗೂ ನೋವೇನಾಗುವುದಿಲ್ಲ. ಹಾರ್ಟ್ ಅಟ್ಯಾಕ್ ಆದಾಗ ತೀವ್ರ ನೋವು, ಕ್ಯಾನ್ಸರ್ ಅಂತಿಮ ಹಂತದಲ್ಲಿ ವಿಪರೀತ ನೋವು, ಅಪಘಾತದಲ್ಲಿ ಆದ ಜಜ್ಜು ಗಾಯದಿಂದ ನೋವು, ಇವನ್ನು ನೋಡಿದವರಿಗೆ ಸಾವು ಎಂದರೆ ನೋವು ಎಂಬ ಕಲ್ಪನೆ ಇದೆ. ಸಾಕಷ್ಟು ಜನ ನೋವಿಲ್ಲದೆ ಸಾವನ್ನಪ್ಪುತ್ತಾರೆ. ನಿಮಗೆ ಭಗವಂತನಲ್ಲಿ ನಂಬಿಕೆ ಇದ್ದರೆ 'ದೇವರೇ ನೋವಿಲ್ಲದೆ ಸಾವು ಕೊಡು' ಎಂದು ಪ್ರಾರ್ಥನೆ ಮಾಡಿ ಸಾಯುವ ಪ್ರಕ್ರಿಯೆಯ ಮೇಲೆ ನಮಗೆ ಹತೋಟಿ ಇಲ್ಲ.

ಸಾಯುವಾಗ ಮನೆಯವರನ್ನು ಆತ್ಮೀಯರನ್ನು ಬಿಟ್ಟುಹೋಗಬೇಕೆಂದು ಎಂಬ ನೋವು: 

ನಾವು ಪ್ರೀತಿಸುವ ತಂದೆ ತಾಯಿ, ಸೋದರ-ಸೋದರಿಯರು, ಜೀವನಸಂಗಾತಿ, ಸಾಕಿದ ಮಕ್ಕಳು, ಆಪ್ತರನ್ನು ಬಿಟ್ಟುಹೋಗುವ ನೋವು. ಪ್ರೀತಿ ಹೆಚ್ಚಾದಾಗ, ಮೋಹ ಅದರ ಜಾಗದಲ್ಲಿ ಬಂದು ಕುಡುತ್ತದೆ. ಮೋಹ ಆವರಿಸಿದಾಗ, ಅಗಲಿಕೆಯ ನೋವು ಹೆಚ್ಚಾಗುತ್ತದೆ. ಆದ್ದರಿಂದ ಪ್ರೀತಿಸುವವರನ್ನು ಬಿಟ್ಟು ಹೋಗಲು ಮತ್ತು ಪ್ರೀತಿಸಿದವರನ್ನು ಕಳೆದುಕೊಳ್ಳಲು ಮಾನಸಿಕವಾಗಿ ನಾವು ಸಿದ್ದರಾಗಿರಬೇಕಾಗುತ್ತದೆ. ಪ್ರೀತಿ ಇರಲಿ ಮೋಹ ಬೇಡ.

ಹಣ-ಆಸ್ತಿ-ಭೋಗ ವಸ್ತುಗಳನ್ನು ಬಿಟ್ಟುಹೋಗುವ, ಅವು ಅವರಿವರ ಪಾಲಾಗುವ ನೋವು:

ನಾವು ಕಷ್ಟಪಟ್ಟು ಹಣ-ಆಸ್ತಿ,  ಭೋಗ ವಸ್ತುಗಳನ್ನು ಸಂಪಾದಿಸುತ್ತೇವೆ, ಸಂಗ್ರಹಿಸುತ್ತೇವೆ. ಬಳಸಿ ಖುಷಿಪಡುತ್ತೇವೆ ಸಾಯುವಾಗ ಅವನ್ನು ಬಿಟ್ಟು ಹೋಗುವ ನೋವು ಅಥವಾ ಅವು ಅಪಾತ್ರರ ಪಾಲಿಗೆ ಹೋಗುತ್ತವೋ, ಮನೆಯವರು ಅವನ್ನು ಸುರಕ್ಷಿತವಾಗಿಟ್ಟುಕೊಳ್ಳುತ್ತಾರಾ? ಕಳೆದುಕೊಳ್ಳುತ್ತಾರಾ? ಎನ್ನುವ ಆತಂಕ ನಮ್ಮನ್ನು ಕಾಡುತ್ತವೆ. ಸಾಯುವ ಮೊದಲು ಅವು ಯಾರು ಯಾರಿಗೆ ಸೇರಬೇಕು ಎಂದು ವಿಲ್ ಮಾಡಿ. ಸತ್ತ ನಂತರ ಅವುಗಳು ಏನಾಗುತ್ತವೆ ಎಂಬ ಚಿಂತೆ ಬಿಡಿ. ಇದ್ದಾಗ ಬಳಸಿ, ಆನಂತರ ಅವುಗಳ ಬಗ್ಗೆ ಯಾವ ಮೋಹ ಬೇಡ.

ಆಶ್ರಿತರಿಗೆ ರಕ್ಷಣೆ: 

ನೀವು ಅಕಸ್ಮಾತ್ ಸತ್ತರೆ ನಿಮ್ಮ ಸಂಗಾತಿ, ಮಕ್ಕಳು, ಅಥವಾ ಇತರೆ ಆಶ್ರಿತರನ್ನು ಯಾರು ನೋಡಿಕೊಳ್ಳುತ್ತಾರೆ, ಅಥವಾ ಸಂಪಾದಿಸುವ ಕುಟುಂಬಕ್ಕೆ ಆಸರೆಯಾಗಿದ್ದ ವ್ಯಕ್ತಿ ಸತ್ತರೆ, ಕುಟುಂಬದವರ ಗತಿ ಏನು. ಇದು ಭಯಕ್ಕೆ ಇನ್ನೊಂದು ಸಾಮಾನ್ಯ ಕಾರಣ, ಆಶ್ರಿತರಿಗೆ ಬ್ಯಾಂಕ್ ನಲ್ಲಿ ಹಣ ವಿಡಿ, ವಿಮೆ ಮಾಡಿಸಿ, ನಿಮ್ಮ ಅನುಪಸ್ಥಿತಿಯಲ್ಲಿ ಯಾರು ಅವರ ಯೋಗಕ್ಷೇಮ ನೋಡಿಕೊಳ್ಳುತ್ತಾರೆಂದು ವ್ಯವಸ್ಥೆ ಮಾಡಿ, ಸ್ವಾವಲಂಬಿಯಾಗಲು ಅವರಿಗೆ ತರಪೇತಿ ಕೊಡಿ.

ಸತ್ತ ಮೇಲೆ ನಮಗೆ ಏನಾಗುತ್ತದೆ?

ಇದರ ಬಗ್ಗೆ ಹಲವಾರು ಜನಪ್ರಿಯ ನಂಬಿಕೆಗಳಿವೆ. ನಮ್ಮ ಪಾಪ-ಪುಣ್ಯಗಳ ಆಧಾರದ ಮೇಲೆ, ನಾವು ಸ್ವರ್ಗ ಅಥವಾ ನರಕಕ್ಕೆ ಹೋಗುತ್ತೇವೆ. ಯಮನ ಸನ್ನಿಧಿಯಲ್ಲಿ ಚಿತ್ರಗುಪ್ತರು ನಮ್ಮ ಎಲ್ಲಾ ತಪ್ಪು-ಒಪ್ಪುಗಳ, ಒಳ್ಳೆಯ /ಕೆಟ್ಟ ಕೆಲಸಗಳ ದಾಖಲೆಗಳನ್ನು ಪರಿಶೀಲಿಸುತ್ತಾರೆ.

ಆಕಾಲಿಕ ಮತ್ತು ದುರಂತ ಮರಣವಾದರೆ, ನಮ್ಮ ಆತ್ಮಕ್ಕೆ ಮುಕ್ತಿ ಇಲ್ಲ, ಅದು ಅಂತರ್ ಪಿಶಾಚಿಯಾಗಿ ಅಲೆಯಬೇಕು, ಪಾಳು ಬಿದ್ದ ಬಂಗಲೆ, ಹುಣಸೆ ಮರ, ಸತ್ತ ಜಾಗದ ಸಮೀಪ, ಅಥವಾ ಸತ್ತ ಮನೆಯೊಳಗೆ ವಾಸ ಇರಬೇಕು. ದೆವ್ವ-ಭೂತ, ಪೀಡೆ, ಪಿಶಾಚಿ ಎನ್ನಿಸಿಕೊಂಡು ಅಲೆದಾಡಬೇಕು. ಅದನ್ನು ಕಂಡ ಜನ ಭಯಭೀತರಾಗುತ್ತಾರೆ. ಪೂಜಾರಿ ಮಂತ್ರವಾದಿಗಳ ಮೊರೆ ಹೋಗುತ್ತಾರೆ. ನನ್ನ ಆತ್ಮಕ್ಕೆ ಶಾಂತಿ ಇರುವುದಿಲ್ಲ. ಇದೊಂದು ಕಲ್ಪನೆ.

ಪುನರ್ಜನ್ಮ: ಸತ್ತ ಮೇಲೆ ನಾವು ಮತ್ತೆ ಹುಟ್ಟುತ್ತೇವೆ. ಪುನರಪಿ ಜನನಂ ಪುನರಪಿ ಮರಣಂ ಎಂದರು ಶ್ರೀ ಶಂಕರಾಚಾರ್ಯರು. ಹಳೆಯ ವಸ್ತ್ರವನ್ನು ತ್ಯಜಿಸಿ ಹೊಸ ವಸ್ತ್ರವನ್ನು ಧರಿಸುವಂತೆ, ಆತ್ಮವು ಜೀರ್ಣಗೊಂಡ ದೇಹವನ್ನು ಬಿಟ್ಟು ಹೊಸ ದೇಹವನ್ನು ಪಡೆಯುತ್ತದೆ ಎನ್ನುತ್ತಾನೆ ಗೀತಾಚಾರ್ಯ ಶ್ರೀಕೃಷ್ಣ. ಪುನರ್ಜನ್ಮ ಒಂದು ಕಲ್ಪನೆ. ಅದು ನಿಜವೇ, ಸತ್ತ ಮೇಲೆ ವಾಪಸ್ ಬಂದವರಿಲ್ಲ, ವರದಿ ತಂದವರಿಲ್ಲ ಎನ್ನುತ್ತಾರೆ ಡಿ.ವಿ.ಜಿ. ಕರ್ಮಫಲ ಅನುಸಾರ ಒಳ್ಳೆಯ ಜನ್ಮ ಕೆಟ್ಟ ಜನ್ಮ ಬರುತ್ತದೆ ಎನ್ನುತ್ತದೆ ಕರ್ಮಸಿದ್ಧಾಂತ. ಬಿಡಿ. ಈ ಜನ್ಮದ ಬಗ್ಗೆ ಗಮನಿಸೋಣ, ಮುಂದಿನ ಜನ್ಮದ ಚಿಂತೆ ಭಯ ಖಂಡಿತ ಬೇಡ.

ಸಾವಾದಾಗಿನ ಪ್ರತಿಕ್ರಿಯೆ:

ಸಾವಾದಾಗ ಉಳಿದವರು, ಮನೆಯವರು, ಆಪ್ತರು, ಅಭಿಮಾನಿಗಳು ಮೂರು ಹಂತದಲ್ಲಿ ಪ್ರತಿಕ್ರಿಯಿಸುತ್ತಾರೆ.
ಅಪಘಾತ: ಇಂತಹ ಸಾವನ್ನು ಒಪ್ಪಲು ಕಷ್ಟ ದಿಗ್ಬ್ರಮೆಯಾಗುತ್ತದೆ ದಿಙ್ಮೂಡರಾಗುತ್ತೇವೆ, ನಿಜವೇ ಎಂದು ಮತ್ತೆ ಮತ್ತೆ ಕೇಳುತ್ತೇವೆ.

ತೀವ್ರ ಭಾವೋದ್ವೇಗ: ದುಃಖ, ಸಿಟ್ಟು, ಭಯ, ಹತಾಶೆ, ಅಸಹಾಯಕತೆಯ ಸುನಾಮಿ ಏಳುತ್ತದೆ. ಸಾಧಾರಣವಾಗಿ ಇದು ಮೂರು ನಾಲ್ಕು ದಿವಸಗಳಿರುತ್ತದೆ, ಆನಂತರ ತಗ್ಗಲಾರಂಭಿಸುತ್ತದೆ, ಈ ಹಂತದಲ್ಲಿ ಕೆಲವರು ಹಿಂಸಾಚಾರ, ಆತ್ಮಹತ್ಯೆ ವಸ್ತು ನಾಶ, ಪೂರ್ಣ ನಿಷ್ಕ್ರಿಯತೆಗೆ ಶರಣಾಗುತ್ತಾರೆ, ಕರ್ತವ್ಯ, ಕೆಲಸಗಳನ್ನು ನಿರ್ಲಕ್ಷಿಸುತ್ತಾರೆ. ಇದು ಒಂದೆರಡು ವಾರಗಳ ಅವಧಿಯಲ್ಲಿ ನಡೆಯುತ್ತದೆ.

ಚೇತರಿಕೆಯ ಹಂತ: ವ್ಯಕ್ತಿ ಇಲ್ಲದ ಪರಿಸ್ಥಿತಿಗೆ ವ್ಯಕ್ತಿಗಳು ನಿಧಾನವಾಗಿ ಹೊಂದಿಕೊಳ್ಳುತ್ತಾರೆ. ಇದು ಹಲವಾರು ತಿಂಗಳ ಅವಧಿಯಲ್ಲಿ ನಡೆಯುತ್ತದೆ. ಜನ ಮತ್ತು ಧನ ಬೆಂಬಲವಿದ್ದರೆ ಚೇತರಿಕೆಯ ವೇಗ ಹೆಚ್ಚುತ್ತದೆ. ಸಾಂತ್ವನ ಸಮಾಲೋಚನೆಯ ಅಗತ್ಯ: ಸಾವು ಸಂಭವಿಸಿದ ಕೂಡಲೇ ಬಂಧು ಮಿತ್ರರು ಸತ್ತ ವ್ಯಕ್ತಿಯ ಮನೆಯವರನ್ನು ಆಶ್ರಿತರನ್ನು ಕಂಡು ಸಾಂತ್ವನ - ಸಹಾಯ, ಆಸರೆ ನೀಡಬೇಕು. ಸಾವು  ಹೇಗೇ ಸಂಭವಿಸಿರಲಿ, ಸಾವನ್ನು ಒಪ್ಪಿಕೊಳ್ಳಲು ನೆರವಾಗಬೇಕು, ತಪ್ಪಿತಸ್ಥ ಭಾವನೆ, ನಿರಾಶೆ, ಹತಾಶೆಗಳ ತೀವ್ರತೆಯನ್ನು ತಗ್ಗಿಸಲು ಪ್ರಯತ್ನಿಸಬೇಕು. ಹಣ ವಸ್ತುಗಳ ಅಗತ್ಯವನ್ನು ಪೂರೈಸಬೇಕು.

ಸಾವಿನ ದುಃಖ ಬಹು ತೀವ್ರವಾಗಿದ್ದರೆ. ಒಂದು ತಿಂಗಳಿಗಿಂತ ಹೆಚ್ಚು ಕಾಲ ಮುಂದುವರೆದರೆ, ಮನೋವೈದ್ಯರನ್ನು ಸಂಪರ್ಕಿಸಬೇಕು. ಖಿನ್ನತೆ ನಿವಾರಕ ಔಷಧ ಮತ್ತು ಕ್ರಮಬದ್ಧವಾದ ಆಪ್ತ ಸಮಾಲೋಚನೆ (De-Grief Therapy) ಬೇಕಾಗಬಹುದು. ಸಾವನ್ನು ಗೆದ್ದವರಿಲ್ಲ, ಸಾವನ್ನು ಎದುರಿಸಲು, ನಿಭಾಯಿಸಲು ನಾವೇ ಕಲಿಯಬೇಕು.

ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯ 

drcrchandrashekhar@gmail.com
+919845605615

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

SCROLL FOR NEXT