ಅಂಕಣಗಳು

ಕಾಂಗ್ರೆಸ್ ಗೆ ಪಿಸುಮಾತಿನ ಪೀಕಲಾಟ (ನೇರ ನೋಟ)

ಕೂಡ್ಲಿ ಗುರುರಾಜ

ಕರ್ನಾಟಕ ವಿಧಾನಸಭೆಗೆ ಚುನಾವಣೆ ಇನ್ನು ಒಂದೂವರೆ ವರ್ಷ ಇರುವಾಗ ಕಾಂಗ್ರೆಸ್ ಇದನ್ನು ನಿರೀಕ್ಷಿಸಿರಲಿಲ್ಲ. ಅದರಲ್ಲೂ ವಿಧಾನಸಭೆಯ ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿರುವ ಈ ಹೊತ್ತಲ್ಲಿ ಸದ್ದು ಮಾಡಿರುವ ಈ ವಿಡಿಯೊ ಕಾಂಗ್ರೆಸ್‌ನಲ್ಲಿ ತಲ್ಲಣ ಸೃಷ್ಟಿಸಿದೆ.

ಕಾಂಗ್ರೆಸ್‌ನಲ್ಲಿ ಲಾಗಾಯ್ತಿನಿಂದಲೂ ಒಂದು ಮಾತಿದೆ. ಅದರಲ್ಲೂ ಅಸೆಂಬ್ಲಿ ಹಾಗೂ ಲೋಕಸಭೆಯ ಚುನಾವಣೆ ಫಲಿತಾಂಶ ಹೊರಬಿದ್ದಾಗ ಇಂಥದ್ದೊಂದು ಮಾತು ಕೇಳಿ ಬರುವುದು ಸಾಮಾನ್ಯ. ಕಾಂಗ್ರೆಸ್‌ಗೆ ಕಾಂಗ್ರೆಸ್ಸಿಗರೇ ಶತ್ರು ಎಂಬ ಮಾತು ಅದು. ಕಾಂಗ್ರೆಸ್‌ನಲ್ಲಿ ತಳಮಳ ಸೃಷ್ಟಿಸಿರುವ ಲೋಕಸಭೆಯ ಮಾಜಿ ಸದಸ್ಯ ವಿ.ಎಸ್.ಉಗ್ರಪ್ಪ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿ ಮಾಧ್ಯಮ ಸಂಯೋಜಕ ಎಂ.ಎ.ಸಲೀಂ ಅವರ ನಡುವಿನ ಪಿಸುಮಾತಿನ ವಿಡಿಯೊ ಈಗ ಇಂಥದ್ದೊಂದು ಮಾತನ್ನು ಮತ್ತೆ ನೆನಪಿಸಿದೆ.

ಉಗ್ರಪ್ಪ-ಸಲೀಂ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿದ ಈ ಪಿಸುಮಾತು ಕಾಂಗ್ರೆಸ್‌ಗೆ ತೀವ್ರ ಮುಜುಗರ ತಂದಿದೆ. ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಇದು ಪಕ್ಷಕ್ಕೆ ಮುಜುಗರ ತಂದಿದೆ ಎಂದು ಒಪ್ಪಿಕೊಂಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲೇ ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಕೇಳಿ ಬಂದ ಈ ಮಾತು ಹೆಚ್ಚು ಸದ್ದು ಮಾಡಿದೆ. ಸಲೀಂ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಿದ್ದರೆ ಉಗ್ರಪ್ಪ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಪಕ್ಷದಲ್ಲಿ ಆಂತರಿಕವಾಗಿ ಇಂತಹ ಡ್ಯಾಮೇಜ್ ಕಂಟ್ರೋಲ್ ಕ್ರಮಗಳು ನಡೆದರೂ ರಾಜಕಾರಣದಲ್ಲಿ  ತನ್ನ ಪಕ್ಷಕ್ಕೆ ಆಗುವ ಡ್ಯಾಮೇಜ್ ಅನ್ನು ತಡೆಯುವುದು ಕಾಂಗ್ರೆಸ್ ಮುಖಂಡರಿಗೆ ಕಷ್ಟ.

ಉಗ್ರಪ್ಪ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರು. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವೆ ಪಕ್ಷದಲ್ಲಿ ನಡೆದಿರುವ ಶೀತಲ ಸಮರದಲ್ಲಿ ಉಗ್ರಪ್ಪ ಅವರ ಈ ವಿಡಿಯೊ ಬಹಿರಂಗವಾಗಿರುವುದು ಆಡಳಿತಾರೂಢ ಬಿಜೆಪಿ ನಾಯಕರಿಗೆ ಅಸ್ತ್ರ ಒದಗಿಸಿದಂತೆ ಆಗಿದೆ.

ಬಿಜೆಪಿಯು ಉಗ್ರಪ್ಪ-ಸಲೀಂ ವಿಡಿಯೊ ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದೆ. ಆದರೆ, ಇದೇ ಬಿಜೆಪಿಯು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಅವರ ಪಕ್ಷದ ಕೆಲವು ಶಾಸಕರೇ ಬಹಿರಂಗವಾಗಿ ಆರೋಪಗಳನ್ನು ಮಾಡಿದಾಗ ಯಾವುದೇ ಶಿಸ್ತು ಕ್ರಮಗಳನ್ನು ಜರುಗಿಸಲೇ ಇಲ್ಲ. ಈಗ ಈ ವಿಡಿಯೊ ಮುಂದಿಟ್ಟುಕೊಂಡು ಮಾತಾಡುವ ನೈತಿಕತೆ ಬಿಜೆಪಿಗೆ ಇದೆಯೇ? ಹೀಗಾಗಿಯೇ ಬಿಜೆಪಿಯ ಟೀಕಾಸ್ತ್ರ ಗಳಿಗೆ ಕಾಂಗ್ರೆಸ್ ಅಷ್ಟೇ ಪರಿಣಾಮಕಾರಿಯಾಗಿ ಪ್ರತ್ಯುತ್ತರಗಳನ್ನು ನೀಡಿದೆ. ಅದಕ್ಕೇ ಕೆಲವು ರಾಜಕೀಯ ಮುತ್ಸದ್ಧಿಗಳು ಹೇಳುವ ಮಾತು- ರಾಜಕಾರಣದಲ್ಲಿ ಎಲ್ಲರೂ ಗಾಜಿನಮನೆಯಲ್ಲಿ ಕುಳಿತಿರುವವರೇ.   

ಪಿಸುಮಾತಿನ ಇಂತಹ ವಿಡಿಯೊ ಇದೇನೂ ಹೊಸದಲ್ಲ. ಈ ಹಿಂದೆಯೂ ಬಿಜೆಪಿಯಲ್ಲಿ ಇಂಥದ್ದೊಂದು ಪಿಸುಮಾತಿನ ವಿಡಿಯೊ ಬಯಲಾಗಿತ್ತು. ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಹಾಗೂ ಅನಂತಕುಮಾರ್ ಅವರ ನಡುವೆ ಇಂತಹ ಪಿಸುಮಾತು ನಡೆದಿದ್ದು ಬಯಲಾಗಿತ್ತು.

ಕೇಂದ್ರ ಹಾಗೂ ರಾಜ್ಯ ಸರಕಾರಗಳ ವೈಫಲ್ಯಗಳ ವಿರುದ್ಧ ಕಾಂಗ್ರೆಸ್ ಬೀದಿಗಿಳಿದು ಹೋರಾಟ ನಡೆಸುತ್ತಿದೆ. ವಿಧಾನಸಭಾ ಚುನಾವಣೆಗೆ ಅಖಾಡ ಸಿದ್ದಪಡಿಸುತ್ತಿದೆ. ಚುನಾವಣಾ ಕಣದಲ್ಲಿ ಎದುರಾಳಿಗಳನ್ನು ಎದುರಿಸಲು ತಂತ್ರಗಳನ್ನು ಹೆಣೆಯುತ್ತಿದೆ. ಈ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷರ ವಿರುದ್ಧವೇ ಅವರದೇ ಪಕ್ಷದ ಮುಖಂಡರು ಪಿಸುಮಾತಾಡುತ್ತಾ ಭ್ರಷ್ಟಾಚಾರದ ಆರೋಪ ಹೊರಿಸಿರುವುದು ಸಮರದ ಕಣದಲ್ಲಿ ಎದುರಾಳಿಗಳಿಗೆ ಮತ್ತಷ್ಟು ರಣೋತ್ಸಾಹ ತುಂಬಿದೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ಗುಂಪುಗಾರಿಕೆ ಇದ್ದೇ ಇದೆ. ಪ್ರಮುಖ ನಾಯಕರ ಬಣಗಳೇ ಅಲ್ಲಿವೆ. ಬಣ ರಾಜಕಾರಣದಲ್ಲಿ ಹೈಕಮಾಂಡ್‌ಗೆ ತಲುಪಿದ ಪರಸ್ಪರರ ದೂರುಗಳ ಪಟ್ಟಿಗೆ ಲೆಕ್ಕವೇ ಇಲ್ಲ. ಹೈಕಮಾಂಡ್ ದುರ್ಬಲವಾಗಿರುವಾಗ ಎಲ್ಲ ಬಣಗಳನ್ನು ಸರಿದೂಗಿಸಿಕೊಂಡು ಹೋಗುವುದೇ ಆ ಪಕ್ಷದಲ್ಲಿ ಒಂದು ದೊಡ್ಡ ಸವಾಲು.

ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ. ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಏರಿದರೆ ಮುಖ್ಯಮಂತ್ರಿ ಸ್ಥಾನದ ಮೇಲೆ ಇಬ್ಬರೂ ನಾಯಕರು ಕಣ್ಣಿಟ್ಟಿದ್ದಾರೆ. ಪಕ್ಷದಲ್ಲಿ ಇಬ್ಬರೂ ನಾಯಕರಿಗೆ ಅವರನ್ನು ಹಿಂಬಾಲಿಸುವ ಬೆಂಬಲಿಗರ ಪಡೆಯೇ ಇದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಸಿದ್ದರಾಮಯ್ಯ ಅವರ ಶಿಷ್ಯರು ಹಾದಿಬೀದಿಯಲ್ಲಿ ಹೇಳುತ್ತಾ ವಿವಾದ ಸೃಷ್ಟಿಸಿದ್ದರು. ಶಿವಕುಮಾರ್ ಎಚ್ಚರಿಕೆ ನಂತರವೂ ಸಿದ್ದರಾಮಯ್ಯ ಶಿಷ್ಯ ಶಾಸಕರ ಹೇಳಿಕೆ ಮುಂದುವರಿದಿತ್ತು. ಕೊನೆಗೆ ಹೈಕಮಾಂಡ್ ಮಧ್ಯಪ್ರವೇಶದಿಂದ ವಿವಾದ ತಣ್ಣಗಾಯಿತು. ಮತ್ತೆ ಯಾವಾಗ ಭುಗಿಲೇಳುತ್ತದೆಯೋ ಗೊತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಪಿಸುಮಾತಿನ ವಿಡಿಯೊ ಉಂಟು ಮಾಡುವ ಪರಿಣಾಮ ಕಾಂಗ್ರೆಸ್‌ನಲ್ಲಿ ಹೆಚ್ಚಾಗಿಯೇ ಇರುತ್ತದೆ.

ಒಂದು ರಾಜಕೀಯ ಪಕ್ಷ ತನ್ನ ಕಚೇರಿಯನ್ನು ಇಟ್ಟುಕೊಳ್ಳುವುದರ ವಿಚಾರದಲ್ಲೂ ಈ ಘಟನೆ ಮುಖ್ಯ ಎನಿಸುತ್ತದೆ. ಸಾರ್ವಜನಿಕ ಜೀವನ ಎಷ್ಟರಮಟ್ಟಿಗೆ ಅಧೋಗತಿಗೆ ಇಳಿದಿದೆ ಎಂಬುದಕ್ಕೂ ಈ ಪಿಸುಮಾತಿನ ವಿಡಿಯೊ ನಿದರ್ಶನ ಒದಗಿಸಿದೆ.

ಈ ಘಟನೆ ನಂತರ ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಅಲ್ಪಸಂಖ್ಯಾತ ವಿರೋಧಿ ಎಂದು ಆರೋಪಿಸಿ ಮಾಡಿರುವ ಟ್ವೀಟ್‌ಗಳು ಗಮನ ಸೆಳೆದಿವೆ.

ಸಿದ್ದರಾಮಯ್ಯ ಅವರು ಇಕ್ಬಾಲ್ ಅಹಮದ್ ಸರಡಗಿ, ಸಿ.ಕೆ.ಜಾಫರ್ ಷರೀಫ್ ಅವರ ಮೊಮ್ಮಗ ರೆಹಮಾನ್ ಷರೀಫ್, ರೋಷನ್ ಬೇಗ್, ಶಾಸಕ ತನ್ವೀರ್ ಸೇಠ್, ಈಗ ವಿಡಿಯೊ ನೆಪದಲ್ಲಿ ಸಲೀಂ ಅವರನ್ನು ರಾಜಕೀಯವಾಗಿ ಬದಿಗೆ ಸರಿಸಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ. ಸಿದ್ದರಾಮಯ್ಯ ಮುಸ್ಲಿಂ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಈ ಟೀಕೆಯ ಬೆನ್ನಲ್ಲೇ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಮುಖ್ಯ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮುಸ್ಲಿಂ, ದಲಿತರು, ಯಾರು ಬೇಕಾದರೂ ಮುಖ್ಯಮಂತ್ರಿಯಾಗಲಿ. ಯಾರು ಮುಖ್ಯಮಂತ್ರಿಯಾದರೂ ನನಗೆ ಬೇಸರವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಸಿದ್ದರಾಮಯ್ಯ ಇದೇ ಮೊದಲ ಬಾರಿಗೆ ಹೀಗೆ ಪ್ರತಿಕ್ರಿಯಿಸಿರುವುದು ಕುತೂಹಲ ಮೂಡಿಸಿದೆ.

ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

SCROLL FOR NEXT