ಚರ‍್ರಿ ಆಂಜಿಯೋಮಾ 
ಅಂಕಣಗಳು

ಚರ‍್ರಿ ಆಂಜಿಯೋಮಾ (ಕುಶಲವೇ ಕ್ಷೇಮವೇ)

ವಯಸ್ಕರಲ್ಲಿ ಒಮ್ಮೊಮ್ಮೆ ಚರ್ಮದ ಮೇಲೆ ಚರ‍್ರಿ ಹಣ್ಣಿನ ಬಣ್ಣದ ಉಬ್ಬುಗಳು ಕಾಣಿಸಿಕೊಳ್ಳುತ್ತವೆ. ಈ ಉಬ್ಬುಗಳು ಹಾನಿಕಾರಕವಲ್ಲ. ಇವು ನೋವನ್ನು ಉಂಟುಮಾಡುವುದಿಲ್ಲ.

ವಯಸ್ಕರಲ್ಲಿ ಒಮ್ಮೊಮ್ಮೆ ಚರ್ಮದ ಮೇಲೆ ಚರ‍್ರಿ ಹಣ್ಣಿನ ಬಣ್ಣದ ಉಬ್ಬುಗಳು ಕಾಣಿಸಿಕೊಳ್ಳುತ್ತವೆ. ಈ ಉಬ್ಬುಗಳು ಹಾನಿಕಾರಕವಲ್ಲ. ಇವು ನೋವನ್ನು ಉಂಟುಮಾಡುವುದಿಲ್ಲ. ಆದರೂ ಇವೇಕೆ ಕಾಣಿಸಿಕೊಳ್ಳುತ್ತಿವೆ ಎಂಬ ಯೋಚನೆ ಬರುವುದು ಸಹಜ. ಗಾಬರಿ ಮಾಡಿಕೊಳ್ಳುವುದು ಬೇಡ. ಚರ‍್ರಿ ಆಂಜಿಯೋಮಾ ಸಣ್ಣ, ಪ್ರಕಾಶಮಾನವಾದ ಕೆಂಪು ಉಬ್ಬುಗಳಾಗಿದ್ದು ನಯವಾದ ಅಥವಾ ಸ್ವಲ್ಪ ಎತ್ತರದ ಮೇಲ್ಮೈ ಹೊಂದಿರುತ್ತದೆ. ಇದನ್ನು ಗೀಚಿದರೆ ಅಥವಾ ಗಾಯಗೊಂಡರೆ ರಕ್ತಸ್ರಾವವಾಗಬಹುದು. ನಿಜವಾಗಿ ಹೇಳಬೇಕೆಂದರೆ ಚರ‍್ರಿ ಆಂಜಿಯೋಮಾ ಚರ್ಮದ ಸಾಮಾನ್ಯ ವಿಸ್ತೃತ ಬೆಳವಣಿಗೆ. ಇದು ಗಾತ್ರದಲ್ಲಿ ಬದಲಾಗುತ್ತದೆ. 

ಚರ‍್ರಿ ಆಂಜಿಯೋಮಾ ಎಂದರೇನು?
ದೇಹದ ಯಾವುದೇ ಭಾಗದಲ್ಲಿ ಚರ‍್ರಿ ಆಂಜಿಯೋಮಾ ಬೆಳೆಯಬಹುದು. ಮೂವತ್ತು ವರ್ಷಗಳಾದ ನಂತರ ಮಹಿಳೆಯರು ಮತ್ತು ಪುರುಷರು ಯಾರಲ್ಲಾದರೂ ಇದು ಕಾಣಿಸಿಕೊಳ್ಳಬಹುದು. ಇದು ಚರ್ಮದಲ್ಲಿ ರಕ್ತನಾಳಗಳ ಅತಿಯಾದ ಬೆಳವಣಿಗೆಯಿಂದ ಉಂಟಾಗುತ್ತದೆ. ಚರ‍್ರಿ ಆಂಜಿಯೋಮಾಗಳು ಸಾಮಾನ್ಯವಾಗಿ ತೋಳುಗಳು ಮತ್ತು ಕಾಲುಗಳ ಮೇಲೆ ಕಂಡುಬರುತ್ತವೆ ಮತ್ತು ವಯಸ್ಸಿನೊಂದಿಗೆ ಸಂಖ್ಯೆಯಲ್ಲಿ ಹೆಚ್ಚಾಗಬಹುದು. ಆದರೂ ಇದು ಏಕೆ ಉಂಟಾಗುತ್ತದೆ ಎಂಬುದಕ್ಕೆ ನಿಖರ ಕಾರಣ ತಿಳಿದಿಲ್ಲ. ಕೆಲವೊಮ್ಮೆ ಇರುವ ಅನುವಂಶೀಯವಾಗಿಯೂ ಬರಬಹುದು. ದೇಹದಲ್ಲಿ ಹಾರ್ಮೋನುಗಳ ಬೆಳವಣಿಗೆ ಹೆಚ್ಚಾದಾಗ ಇದು ಉಂಟಾಗಬಹುದು. ಬೇರೆ ಬೇರೆ ಕಾರಣಗಳಿಗಾಗಿ ಔಷಧಿ ಮಾತ್ರೆ ಸೇವಿಸುವರಲ್ಲಿ ಮತ್ತು ಬೆಂಜೀನ್/ಟಾಲನಿ ನಂತಹ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದರಿಂದ ಇದು ಬರಬಹುದು. ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಉದಾಹರಣೆಗೆ ಸಿರೋಸಿಸ್ಸಿನಿಂದ ತೊಂದರೆಗೆ ಒಳಗಾಗಿರುವವರಲ್ಲಿ ಚರ‍್ರಿ ಆಂಜಿಯೋಮಾ ಕಾಣಿಸಿಕೊಳ್ಳಬಹುದು. ಡಯಾಬಿಟೀಸ್ ಮತ್ತು ಅಧಿಕ ರಕ್ತದೊತ್ತಡದಿಂದ ಉಂಟಾಗಬಹುದು. 

ಚರ‍್ರಿ ಆಂಜಿಯೋಮಾ ಸುಮಾರು ಕಾಲು ಇಂಚು ವ್ಯಾಸ ಹೊಂದಿದ್ದು ನಯವಾಗಿ ಚರ್ಮದ ಹೊರಗೆ ಬೆಳೆಯುತ್ತದೆ. ಇದರಿಂದ ಯಾವುದೇ ತೊಂದರೆ ಇಲ್ಲ ಅಥವಾ ಕ್ಯಾನ್ಸರ್ ಬರುವುದಿಲ್ಲ. ಹೆಚ್ಚಾಗಿ ಕಾಣಿಸಿಕೊಂಡಾಗ ಕೆಲವೊಮ್ಮೆ ಕಿರಿಕಿರಿಯಾಗಿ ಭಾವನೆಗಳಿಗೆ ಘಾಸಿಯಾಗಬಹುದು. ಗಾತ್ರದಲ್ಲಿ ಇದು ತುಂಬಾ ಚಿಕ್ಕದಾಗಿರುತ್ತದೆ (ಸರಾಸರಿ ಒಂದರಿಂದ ಮೂರು ಮಿಲಿಮೀಟರ್‌ಗಳು). ಆದರೆ ಒಬ್ಬರಿಂದ ಒಬ್ಬರಿಗೆ ಗಾತ್ರ ಬದಲಾಗಬಹುದು ಸಾಮಾನ್ಯವಾಗಿ ವೃತ್ತ ಅಥವಾ ಅಂಡಾಕಾರದ ಆಕಾರವನ್ನು ಹೊಂದಿರುತ್ತದೆ. ಚರ್ಮಕ್ಕೆ ಇದರಿಂದ ಹಾನಿ ಏನೂ ಇಲ್ಲ. ಕೆಲವರು ಸೂಕ್ಷ್ಮ ಮನಸ್ಸಿನವರು ಇದನ್ನು ನೋಡಿದಾಗ ಚಿಂತೆಗೆ ಒಳಗಾಗುತ್ತಾರೆ. ಅಂತಹವರು ವೈದ್ಯರನ್ನು ಕಂಡು ಸಲಹೆ ಪಡೆಯಬೇಕು. 

ಚರ‍್ರಿ ಆಂಜಿಯೋಮಾಗೆ ಚಿಕಿತ್ಸೆ
ಚರ‍್ರಿ ಆಂಜಿಯೋಮಾಗೆ ಚಿಕಿತ್ಸೆಯು ಸಾಮಾನ್ಯವಾಗಿ ಅಗತ್ಯವಿಲ್ಲ, ಏಕೆಂದರೆ ಅವು ನಿರುಪದ್ರವಿ ಮತ್ತು ವೈದ್ಯಕೀಯ ಆರೈಕೆಯ ಅಗತ್ಯವಿರುವುದಿಲ್ಲ. ಆದರೂ ಕೆಲವರು ಸೌಂದರ್ಯ ದೃಷ್ಟಿಯಿಂದ ತೊಂದರೆಯಾಗುತ್ತಿದೆ ಅಥವಾ ರಕ್ತಸ್ರಾವವಾದರೆ ಚರ್ಮಶಾಸ್ತ್ರಜ್ಞರನ್ನು ಕಂಡು ಲೇಸರ್ ಥೆರಪಿ, ಎಲೆಕ್ಟ್ರೋಕಾಟರಿ ಅಥವಾ ಕ್ರೈಯೊಥೆರಪಿ ಮೂಲಕ ತೆಗೆದುಹಾಕಿಸಿಕೊಳ್ಳಬಹುದು. 

ಚರ‍್ರಿ ಆಂಜಿಯೋಮಾದ ನಿಖರವಾದ ಕಾರಣ ತಿಳಿದಿಲ್ಲವಾದ್ದರಿಂದ, ಯಾವುದೇ ನಿರ್ದಿಷ್ಟ ತಡೆಗಟ್ಟುವ ಕ್ರಮಗಳಿಲ್ಲ. ಆದರೂ ಕೆಲವು ಜೀವನಶೈಲಿಯ ಬದಲಾವಣೆಗಳು ಚರ‍್ರಿ ಆಂಜಿಯೋಮಾ ಬರದಂತೆ ತಡೆಯುತ್ತವೆ. ಉದಾಹರಣೆಗೆ ಹೇಳುವುದಾದರೆ ಆರೋಗ್ಯಕರ ಆಹಾರ ಸೇವನೆ ಬಹಳ ಮುಖ್ಯ. ಅದರಲ್ಲಿಯೂ ತಾಜಾ ಹಣ್ಣು ಮತ್ತು ತರಕಾರಿಗಳು, ಸೊಪ್ಪುಗಳನ್ನು ಸೇವಿಸುವುದು ಬಹಳ ಮುಖ್ಯ. ಉತ್ತಮ ಖಾದ್ಯ ತೈಲ, ಹಾಲು, ತುಪ್ಪ, ಬೇಳೆಕಾಳುಗಳು ಮತ್ತು ಸಿರಿಧಾನ್ಯಗಳಿಂದ ಕೂಡಿದ ಸಮತೋಲನ ಆಹಾರ ಶ್ರೇಷ್ಠ. ಅತಿ ಸಿಹಿ, ಹುಳಿ, ಉಪ್ಪು ಮತ್ತು ಮಸಾಲೆಗಳನ್ನು ಹಾಕಿರುವ ಪದಾರ್ಥಗಳನ್ನು ಹೆಚ್ಚು ಸೇವಿಸಬಾರದು. ಜಂಕ್ ಫುಡ್ ಬೇಡ, ಕಾಫೀ ಮತ್ತು ಟೀ ಸೇವನೆಯನ್ನು ಮಿತಿಗೊಳಿಸಬೇಕು. ಜೊತೆಗೆ ಮಾನಸಿಕ ನೆಮ್ಮದಿ ಬಹಳ ಮುಖ್ಯ. ಧ್ಯಾನ, ಸಾಹಿತ್ಯದ ಓದು, ಸಂಗೀತ, ಕ್ರೀಡೆ, ತೋಟಗಾರಿಕೆ ಮತ್ತು ವಿವಿಧ ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದು ಉತ್ತಮ. ಆರರಿಂದ ಎಂಟು ಗಂಟೆಗಳ ಕಾಲ ಪ್ರತಿದಿನ ನಿದ್ದೆ ಮಾಡಬೇಕು. ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಗಮನ ನೀಡಬೇಕು. 

ಚರ‍್ರಿ ಆಂಜಿಯೋಮಾ ತಡೆಗೆ ಮುನ್ನೆಚ್ಚರಿಕೆ ಅಗತ್ಯ
ವೃದ್ಧರೂ ಸೇರಿದಂತೆ ಎಲ್ಲರೂ ದಿನವೂ ವ್ಯಾಯಾಮ, ಯೋಗಾಸನ ಅಥವಾ ಬ್ರಿಸ್ಕ್ ವಾಕ್ ಮಾಡುವುದು ಒಳ್ಳೆಯದು. ಬಿಸಿಲಿನಲ್ಲಿ ಹೋಗುವಾಗ ಉಸನ್‌ಸ್ಕ್ರೀನ್ ಬಳಸಬೇಕು ಮತ್ತು ರಕ್ಷಣಾತ್ಮಕ ಉಡುಪುಗಳನ್ನು ಧರಿಸಿ ಚರ್ಮವನ್ನು ರಕ್ಷಿಸಿಕೊಳ್ಳಬೇಕು. ಚರ್ಮದ ಸೋಂಕುಗಳು ಮತ್ತು ಗಾಯಗಳನ್ನು ತಡೆಗಟ್ಟಲು ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು. ಚರ್ಮವನ್ನು ಮೃದುವಾಗಿಸಲು ಸೂಕ್ತ ಮುಲಾಮುಗಳನ್ನು ವೈದ್ಯರ ಸಲಹೆ ಮೇರೆಗೆ ಬಳಸಬೇಕು. 

ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವವರು ರಸಾಯನಿಕಗಳನ್ನು ಚರ್ಮದಿಂದ ದೂರವಿಡಬೇಕು. ಮಹಿಳೆಯರು ಚರ್ಮವನ್ನು ಕೆರಳಿಸುವ ಉತ್ಪನ್ನಗಳು ಅಥವಾ ಹೆಚ್ಚು ರಸಾಯನಿಕಯುಕ್ತ ಸೌಂದರ್ಯವರ್ಧಕಗಳನ್ನು ಬಳಸುವಾಗ ಜಾಗರೂಕರಾಗಿರಬೇಕು. ಮುಖದಲ್ಲಿ ಚರ‍್ರಿ ಆಂಜಿಯೋಮಾ ಇದ್ದರೆ ಹೆಚ್ಚು ರಸಾಯನಿಕಗಳಿರುವ ಸೋಪುಗಳನ್ನು ಬಳಸುವುದು ಬೇಡ. ಕಡಲೇಹಿಟ್ಟನ್ನು ಹೆಚ್ಚಿಕೊಂಡು ಮುಖ ಸ್ವಚ್ಛಮಾಡಿಕೊಳ್ಳುವುದು ಒಳಿತು. ಹಾಗೆಯೇ ಅರಿಷಿನ ಮತ್ತು ಶ್ರೀಗಂಧವನ್ನು ಹಾಲಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಟ್ಟು ಮುಖ ತೊಳೆದುಕೊಳ್ಳುವುದು ಸಹಕಾರಿ. ಕೆಲವು ವ್ಯಕ್ತಿಗಳಲ್ಲಿ ಚರ‍್ರಿ ಆಂಜಿಯೋಮಾ ಬೆಳವಣಿಗೆಗೆ ಒತ್ತಡವು ಸಂಬಂಧಿಸಿರುವುದರಿಂದ ಧ್ಯಾನ ಅಥವಾ ಯೋಗದಂತಹ ಒತ್ತಡ-ಕಡಿಮೆಗೊಳಿಸುವ ತಂತ್ರಗಳನ್ನು ಅಭ್ಯಾಸ ಮಾಡಬೇಕು.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

SCROLL FOR NEXT