ಹಾಗೆ ನೋಡಿದರೆ ಅವರು ಅಕಾಡೆಮಿಕ್ ವಲಯದ ‘ಇಕನಾಮಿಸ್ಟ್’ ಸಾಲಿಗೆ ಸೇರುವವರೇ ಅಲ್ಲ. ಅವರದ್ದು ಇತಿಹಾಸದಲ್ಲಿ ಎಂಎ ಪದವಿ. ಇತಿಹಾಸದವರಿಗೇನು ಗೊತ್ತು ಅರ್ಥಶಾಸ್ತ್ರ, ಅವರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲೇನಿದೆ ಪರಿಣತಿ ಎಂದೆಲ್ಲ ಉಡಾಫೆಯಿಂದ ಪ್ರಶ್ನಿಸುವಂತೆಯೇ ಇಲ್ಲ. ಏಕೆಂದರೆ, ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಆರು ವರ್ಷಗಳ ಕಾಲ ಅವರು ನೀಡಿದ್ದ ನಾಯಕತ್ವವು ಈ ಹಿಂದೆ ಅದೇ ಜಾಗಕ್ಕೆ ತಾವು ಜಗದ್ವಿಖ್ಯಾತ ಅರ್ಥಶಾಸ್ತ್ರಿಗಳೆಂದು ಹೇಳಿಕೊಂಡು ಬಂದಿದ್ದವರಿಗಿಂತ ಎಷ್ಟೋ ಪಾಲು ಉತ್ತಮವಿತ್ತು. ಹಾಗಂತ ವಿತ್ತ ವಲಯದ ವಿಶ್ಲೇಷಕರೇ ಹೇಳುತ್ತಿದ್ದಾರೆ. ಹಾಗೆಂದು ಅವರೇನೂ ಈ ಆರು ವರ್ಷಗಳ ಅವಧಿಯಲ್ಲಿ ದಿನಬೆಳಗಾದರೆ ಪತ್ರಿಕಾಗೋಷ್ಟಿ ಮಾಡಿಕೊಂಡು ಕೂರಲಿಲ್ಲ. ಸರ್ಕಾರ ಹೇಳಿದ್ದಕ್ಕೆಲ್ಲ ತಲೆಯಾಡಿಸದೇ ತಮ್ಮದೇ ವಿವೇಚನೆಯ ನೀತಿ ಅನುಸರಿಸಿದರಾದರೂ, ಕೇಂದ್ರದೊಂದಿಗೆ ಸಂಘರ್ಷದ ಹಾದಿ ಹಿಡಿದು ತಮ್ಮ ಹೀರೋಗಿರಿ ಪ್ರತಿಷ್ಟಾಪಿಸಿಕೊಳ್ಳುವ ಕೆಲಸಕ್ಕೆ ಯಾವತ್ತೂ ಕೈಹಾಕಲಿಲ್ಲ.
ಇಲ್ಲಿ ಹೇಳುತ್ತಿರುವುದು ಡಿಸೆಂಬರ್ 10ನೇ ತಾರೀಖು ಆರ್ಬಿಐ ಗವರ್ನರ್ ಸ್ಥಾನದಿಂದ ನಿರ್ಗಮಿಸಿದ ಶಕ್ತಿಕಾಂತ ದಾಸ್ ಅವರ ಬಗ್ಗೆ. ಅವರ ವ್ಯಕ್ತಿಚಿತ್ರ ಪರಿಚಯಿಸುವುದೇನೂ ಈ ಅಂಕಣದ ಉದ್ದೇಶವಲ್ಲ. ಆದರೆ, ಇವತ್ತಿಗೆ ಭಾರತದ ಅಧಿಕಾರಿಗಳ ವರ್ಗದಲ್ಲಿ ಬೆಳೆಯುತ್ತಿರುವ ಅನಪೇಕ್ಷಿತ ರಿವಾಜೊಂದನ್ನು ಪ್ರಶ್ನಿಸುವುದಕ್ಕೆ ಹಾಗೂ ಆ ಟ್ರೆಂಡ್ ವಿರುದ್ಧದ ಮಾದರಿಯೊಂದನ್ನು ಜನರಿಗೆ ಪರಿಚಯಿಸುವುದಕ್ಕೆ ಶಕ್ತಿಕಾಂತ ದಾಸ್ ಅವರನ್ನು ಉದಾಹರಣೆಯಾಗಿ ಇರಿಸಬೇಕಿದೆ.
ಸದ್ದು ಮಾಡಬೇಕು ಮತ್ತು ಹಾಗೆ ಮಾಡಿದವರಲ್ಲಿ ಮಾತ್ರ ಸತ್ವವಿದೆ ಎಂದು ನಂಬುವ ಕಾಲ ಇದು. ಪ್ರಚಾರವೇ ತಪ್ಪು ಎಂದೇನಲ್ಲ. ಆದರೆ ಅದಕ್ಕೊಂದು ಮಾದರಿ ಬೇಕಾಗುತ್ತದೆ. ಟಿ ಎನ್ ಶೇಷನ್ ಬಂದಿದ್ದರಿಂದಲೇ ಭಾರತದಲ್ಲಿ ಚುನಾವಣಾ ಆಯೋಗ ಅನ್ನುವುದು ಒಂದಿದೆ ಎಂದು ಗೊತ್ತಾಯಿತು ಎಂಬ ಅಭಿಪ್ರಾಯವೊಂದಿದೆ. ಅವರು ತಮ್ಮ ಅವಧಿಯಲ್ಲಿ ಆ ಮಟ್ಟಿಗೆ ಸದ್ದು ಮಾಡಿದರು. ಅದವರ ವರ್ಚಸ್ಸಿಗೆ ತಕ್ಕದಾಗಿ ಹೊಂದಿಕೆಯಾಯಿತು ಸಹ. ಹಾಗಂತ ಬಂದ ಅಧಿಕಾರಿಗಳೆಲ್ಲ ಇಡೀ ದಿನ ಮಾಧ್ಯಮದ ಮುಂದಿರುವುದು, ಮಾಧ್ಯಮದ ಎದುರಲ್ಲಿ ಅಧಿಕಾರಿಗಳಿಗೆ ‘ಜಾಡಿಸುವುದು’ ಇವನ್ನೇ ಮಾದರಿ ಎಂದುಕೊಂಡಾಗಲೆಲ್ಲ ಅಲ್ಲೊಂದು ಅಸಂಬದ್ಧ ಸೃಷ್ಟಿಯಾಗಿದೆ.
ಕೆಲವು ವರ್ಷಗಳ ಹಿಂದೆ ಐಎಎಸ್-ಐಪಿಎಸ್ ವಲಯದಲ್ಲಿರುವವರಿಗೆಲ್ಲ ‘ಸಿಂಘಂ’ ಎಂದು ಕರೆಸಿಕೊಳ್ಳುವ ತಲುಬು ಶುರುವಾಗಿಹೋಗಿತ್ತು. ವಾಸ್ತವವೇನೆಂದರೆ, ಒಬ್ಬ ಜಿಲ್ಲಾಧಿಕಾರಿಯೋ ಅಥವಾ ಪೊಲೀಸ್ ಮೇಲಧಿಕಾರಿಯೋ ತನ್ನ ವ್ಯಾಪ್ತಿಯಲ್ಲಿರುವ ಯಾವುದೋ ಅಕ್ರಮವನ್ನು ನಿಲ್ಲಿಸುವುದು, ಇನ್ಯಾರೋ ಬಡವನಿಗೆ ಸಹಾಯ ಮಾಡುವುದು ಇವೆಲ್ಲ ಆ ವ್ಯಕ್ತಿ ಮತ್ತು ಹುದ್ದೆಯ ಕರ್ತವ್ಯದ ಭಾಗಗಳೇ ಆಗಿರುತ್ತವೆ. ಮಾಧ್ಯಮದ ಕೆಮರಾಗಳನ್ನು ಸತತವಾಗಿ ಬೆನ್ನಿಗಿರಿಸಿಕೊಂಡು ತಾನು ಮಾಡುವ ಕೆಲಸಗಳಿಗೆಲ್ಲ ಯಾವುದೇ ಅಧಿಕಾರಿ ವಿಪರೀತ ಎನಿಸುವಷ್ಟು ಪ್ರಚಾರ ಪಡೆಯುತ್ತಿದ್ದರೆ, ಜನರು ಆತನನ್ನು ಸಿಂಘಂ ಎಂದೋ, ಆಕೆಯನ್ನು ಸಿಂಹಿಣಿ ಅಂತಲೋ ಭಾವಾತಿರೇಕದಿಂದ ಹೊಗಳಬೇಕಿಲ್ಲ. ಇವರಿಗೆ ಭವಿಷ್ಯದಲ್ಲಿ ಇದ್ದಿರಬಹುದಾದ ರಾಜಕೀಯ ಮಹತ್ತ್ವಾಕಾಂಕ್ಷೆ ಯಾವುದಿದ್ದಿರಬಹುದು ಅಂತ ಯೋಚಿಸಬೇಕು. ಬಹುತೇಕ ಸಿಂಘಂ ವೆರೈಟಿಗಳು ಕೊನೆಗೆ ಹೋಗಿ ನಿಲ್ಲುವುದು ರಾಜಕೀಯ ಪಡಸಾಲೆಯಲ್ಲೇ. ಅದು ತಪ್ಪು ಎಂದೇನಲ್ಲ. ಆದರೆ ಜನರದನ್ನು ಆರಾಧ್ಯ ಮಾದರಿಯನ್ನಾಗಿ ಕಾಣಬೇಕಿಲ್ಲ. ಏಕೆಂದರೆ ಅವರು ತಮ್ಮ ಗುರಿಗಾಗಿ ನಿಮ್ಮ ಭಾವನೆಗಳನ್ನು ಉಪಯೋಗಿಸಿಕೊಂಡವರಷ್ಟೆ.
ಭಾರತದಲ್ಲಿ ಆಡಳಿತಾತ್ಮಕ ನಿರ್ವಹಣೆಗೆಂದು ರಚಿತವಾದ ಜಿಲ್ಲೆಗಳ ಸಂಖ್ಯೆ ಏಳುನೂರಾ ಐವತ್ತನ್ನು ಮೀರುತ್ತದೆ. ಈ ಸಿಂಘಂ ಪ್ರಚಾರಪಟ್ಟಿಯ ಕೆಲವೇ ಕೆಲವು ಅಧಿಕಾರಿಗಳು ಮಾಡಿರುವ ಕೆಲಸದ ಬಹುಪಾಲನ್ನು ಬೇರೆ ಜಿಲ್ಲೆಯ ಹಲವು ಅಧಿಕಾರಿಗಳೂ ಸಹಜವೆಂಬಂತೆ ಮಾಡಿರುತ್ತಾರೆ. ಇವೇ ಕೆಲಸಗಳಿಗೆ ಪ್ರಚಾರ ಪಡೆದುಕೊಳ್ಳುವ ಕೌಶಲ ಹೊಂದಿರುವ ಕೆಲ ಅಧಿಕಾರಿಗಳು ಮಾತ್ರವೇ ಸಿಂಘಂ ಎನ್ನಿಸಿಕೊಳ್ಳುತ್ತಾರೆ ಅಥವಾ ಅಂಥದೊಂದು ಭ್ರಮೆಯನ್ನು ಹುಟ್ಟುಹಾಕಿರುತ್ತಾರೆ. ವರ್ಷದ ಹಿಂದೆ ಕರ್ನಾಟಕದಲ್ಲಿ ಇಬ್ಬರು ಮಹಿಳಾ ಉನ್ನತಾಧಿಕಾರಿಗಳು ಇನ್ನಿಲ್ಲದ ರಂಪ ಮಾಡಿಕೊಂಡು ನ್ಯಾಯಾಲಯದವರೆಗೆ ಹೋದರು. ಮಾಧ್ಯಮದ ಪ್ರಚಾರದಂಗಳ, ಟೆಡ್ ಟಾಕ್, ಸ್ಫೂರ್ತಿ ವೇದಿಕೆಗಳು ಇಲ್ಲೆಲ್ಲ ಸಾಕಷ್ಟು ಹೆಸರು ಮಾಡಿಕೊಂಡಿದ್ದವರು ಇವರಿಬ್ಬರೂ. ಆದರೆ ಅವರದ್ದೇ ವೈಯಕ್ತಿಕ ಸಂಗತಿಯನ್ನು ನಿಭಾಯಿಸಿಕೊಳ್ಳಲಾಗದೇ ಬೀದಿರಂಪ ಮಾಡಿಕೊಂಡ ರೀತಿಯೇ ಅವರಿಬ್ಬರಿಗೂ ಆವರೆಗೆ ಸಂದಿದ್ದ ಶ್ರೇಯಸ್ಸು ಅಪಾತ್ರರಿಗೆ ಸಂದಂತಿತ್ತು ಎಂಬುದನ್ನು ಸಾರಿ ಹೇಳುವಂತಿದೆ.
ಅದು ಯಾವುದೇ ಉನ್ನತ ಹುದ್ದೆ ಆಗಿದ್ದಿರಬಹುದು. ಅಲ್ಲಿ ಕುಳಿತ ವ್ಯಕ್ತಿಗೆ ಹೀರೊಗಿರಿಯ ಅಂಶಗಳು ಹೆಚ್ಚು ಅಂಟುತ್ತ ಹೋದಂತೆಲ್ಲ ಆ ಹುದ್ದೆಯ ಮೂಲಸಂಗತಿಗಳು ಮರೆಯಾಗಿ ವ್ಯಕ್ತಿಯ ಸುತ್ತಲೇ ಚರ್ಚೆಗಳು ಶುರುವಾಗಿಬಿಡುತ್ತವೆ. ಕೊನೆಗೂ, ಈ ಎಲ್ಲ ಹುದ್ದೆಗಳೂ ಜನರ ತೆರಿಗೆ ಹಣದಲ್ಲಿ ಆಕರ್ಷಕ ಸಂಬಳ-ಸವಲತ್ತು ಪಡೆದುಕೊಂಡು ಪ್ರಚಲಿತದಲ್ಲಿರುವಂಥವುಗಳು. ಹೀಗಾಗಿ, ಇವಕ್ಕೆಲ್ಲ ತ್ಯಾಗ-ಪರಿಶ್ರಮಗಳ ಅತಿಯಾದ ಬಣ್ಣ ಬಳಿದು ವ್ಯಕ್ತಿಪೂಜೆಗಿಳಿಯುವುದು ಸಮಾಜಕ್ಕೇ ದುಬಾರಿಯಾಗುತ್ತದೆ. ಯಾವುದೇ ಹುದ್ದೆಯಲ್ಲಿರುವ ವ್ಯಕ್ತಿಯ ಒಳ್ಳೆ ಕೆಲಸಗಳಿಗೆ ಪ್ರಚಾರ ಕೊಟ್ಟಾಗ ಉಳಿದವರಿಗೂ ಅದು ಪ್ರೇರಣೆಯಾಗುತ್ತದೆ ಎಂಬುದನ್ನು ಒಂದು ಹಂತದವರೆಗೆ ಅನುಮೋದಿಸಬಹುದು. ಆದರದು ಮೆಚ್ಚುಗೆಯ ನುಡಿಗಳಿಗೆ ಮೀರಿದ ಫ್ಯಾನ್ ಕ್ಲಬ್ ಆಗಬೇಕಿಲ್ಲ. ಈ ಎಲ್ಲ ಹಿನ್ನೆಲೆಗಳಲ್ಲಿ ನೋಡಿದಾಗ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಹುದ್ದೆಯಿಂದ ನಿರ್ಗಮಿಸಿದ ಶಕ್ತಿಕಾಂತ ದಾಸ್ ಅವರು ಒಂದು ಗಮನಾರ್ಹ ಉದಾಹರಣೆ ಆಗುತ್ತಾರೆ.
2018ರಲ್ಲಿ ಶಕ್ತಿಕಾಂತ ದಾಸ್ ಆರ್ಬಿಐ ಗವರ್ನರ್ ಆಗಿ ನಿಯುಕ್ತಿಗೊಂಡಾಗ ಟೀಕೆಗಳಿದ್ದವು. ಮೋದಿ ಸರ್ಕಾರ ತನ್ನ ಮಾತು ಕೇಳುವರೆಂಬ ಅರ್ಹತೆ ಮಾತ್ರ ಇರಿಸಿಕೊಂಡು ಇವರನ್ನು ಹುದ್ದೆಗೆ ತಂದಿದೆಯೇ ಎಂಬಂಥ ಪ್ರಶ್ನೆಗಳಿದ್ದವು. ಏಕೆಂದರೆ ಶಕ್ತಿಕಾಂತ ದಾಸ್ ವಿತ್ತ ಸಚಿವಾಲಯದ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ ಅನುಭವದ ಐ ಎ ಎಸ್ ಅಧಿಕಾರಿಯೇ ಆಗಿದ್ದರೂ ಶೈಕ್ಷಣಿಕ ಅರ್ಹತೆ ಇದ್ದದ್ದು ಚರಿತ್ರೆಯಲ್ಲಿ ಸ್ನಾತಕೋತ್ತರ ಪದವಿ. ಅವರಿಗಿಂತ ಪೂರ್ವದ ಉರ್ಜಿತ್ ಪಟೇಲ್ ಹಾಗೂ ರಘುರಾಮ ರಾಜನ್ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಮಾಡಿದ್ದವರು. ಆದರೆ ಈ ಇಬ್ಬರೂ ಗವರ್ನರ್ ಜತೆ ಮೋದಿ ಸರ್ಕಾರದ ಸಂವಾದ ಅಷ್ಟೇನೂ ಉತ್ತಮ ಸ್ಥಿತಿಯಲ್ಲಿದ್ದಿರಲಿಲ್ಲ.
ಆರ್ಬಿಐ ತಾನು ಇತರ ಬ್ಯಾಂಕುಗಳಿಗೆ ಕೊಡುವ ಬಡ್ಡಿದರವನ್ನು ತಗ್ಗಿಸಿ ಹಣದ ಹರಿವು ಹೆಚ್ಚಿಸಬೇಕು ಎಂಬುದು ಎಲ್ಲ ಜನಪ್ರಿಯ ರಾಜಕಾರಣಿಗಳು ಮತ್ತು ಅಧಿಕಾರಸ್ಥರ ನಿಲುವಾಗಿರುತ್ತದೆ. ಆದರೆ ಈ ಹಣದ ಹರಿವು ಹಣದುಬ್ಬರವನ್ನು ಹೆಚ್ಚಿಸುತ್ತದಲ್ಲದೇ, ಬಹಳಷ್ಟು ಬಾರಿ ಬ್ಯಾಂಕುಗಳ ಕೆಟ್ಟಸಾಲದ ಪ್ರಮಾಣವನ್ನೂ ಏರಿಸುತ್ತದೆ. ಹಾಗೆಂದೇ ಕೇಂದ್ರದ ಪರೋಕ್ಷ ಒತ್ತಡಗಳ ನಡುವೆಯೂ ಶಕ್ತಿಕಾಂತ್ ದಾಸ್ ಬೇಕಾಬಿಟ್ಟಿ ರೆಪೊರೇಟ್ ಬದಲಾವಣೆಗೆ ಹೋಗಲಿಲ್ಲ. ಹಾಗಂತ ಬಹಿರಂಗವಾಗಿ ಸರ್ಕಾರವನ್ನು ಟೀಕಿಸಿ ಸಂಘರ್ಷದ ಹಾದಿಯನ್ನೂ ತುಳಿಯಲಿಲ್ಲ.
ಆರ್ಬಿಐನಲ್ಲಿ ವಿದೇಶಿ ವಿನಿಮಯ ಅತಿಹೆಚ್ಚು ಜಮೆಯಾಗಿದ್ದದ್ದು ರಾಜನ್ ಅವರಂಥ ಅರ್ಥಶಾಸ್ತ್ರಜ್ಞರು RBI ಗವರ್ನರ್ ಆಗಿದ್ದಾಗಲ್ಲ, ಬದಲಿಗೆ ಶಕ್ತಿಕಾಂತ ದಾಸ್ ಅವಧಿಯಲ್ಲಿ. ಈ ವಿದೇಶಿ ವಿನಿಮಯವನ್ನು ಏಕಾಏಕಿ ನಿರ್ಮಾಣ ಕಾಮಗಾರಿಗಳಿಗೆ ಬಳಸುವ ಸರ್ಕಾರದ ಬಯಕೆಯನ್ನೂ ಶಕ್ತಿಕಾಂತ್ ದಾಸ್ ಆಂತರಿಕವಾಗಿ ಪ್ರತಿರೋಧಿಸಿದ್ದರು ಎಂದು ಕೆಲವು ವರದಿಗಳು ಹೇಳುತ್ತವೆ. ಭಾರತದ ಸಾಲದ ಬಾಂಡುಗಳು ವಿದೇಶಿಯರ ನಿಯಂತ್ರಣದಲ್ಲೇ ಹೆಚ್ಚಾಗಿ ಇರುವುದು ಮಾರುಕಟ್ಟೆ ಸ್ಥಿರತೆಗೆ ಪೂರಕವಲ್ಲ ಎಂದು ಪ್ರತಿಪಾದಿಸಿದ್ದರಲ್ಲದೇ, ಖಾಸಗಿ ಕ್ರಿಪ್ಟೋಕರೆನ್ಸಿಗಳು ತಲೆಎತ್ತುವುದರ ವಿರುದ್ಧ ಆಂತರಿಕ ಸಭೆಗಳಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡಿದ್ದವರು ಶಕ್ತಿಕಾಂತ ದಾಸರೇ.
ಕೋವಿಡ್ ಥರದ ಕಷ್ಟದ ಸಂದರ್ಭದಲ್ಲಿ RBIನ ನೀತಿ ನಿರೂಪಣೆ ಮಾಡಿದವರು ದಾಸ್. ಕೊನೆಗೂ, 2.11 ಲಕ್ಷ ಕೋಟಿ ರುಪಾಯಿಗಳ ಡಿವಿಡೆಂಡ್ ಅನ್ನು ಕೇಂದ್ರ ಸರ್ಕಾರದ ಖಜಾನೆಗೆ ಈ ವರ್ಷದಾರಂಭದಲ್ಲಿ ಹಸ್ತಾಂತರಿಸಿದ ಖ್ಯಾತಿಯೂ ಇವರದ್ದೇ.
ಆರ್ಬಿಐ ಗವರ್ನರ್ ಆಗಿದ್ದವರ ಪೈಕಿ ಮಾಧ್ಯಮಗಳಲ್ಲಿ ಹೀರೋಗಿರಿಯ ಪ್ರಚಾರ ಗಿಟ್ಟಿಸಿಕೊಂಡವರೆಂದರೆ ರಘುರಾಮ ರಾಜನ್. ಪತ್ರಿಕಾ ಹೇಳಿಕೆಗಳು ಮತ್ತು ಮಾಧ್ಯಮ ವರ್ಚಸ್ಸನ್ನೇ ಆಧಾರವಾಗಿಟ್ಟುಕೊಂಡು ನೋಡುವವರಿಗೆ ರಘುರಾಮ್ ರಾಜನ್ ಒಬ್ಬ ಸ್ಟಾರ್! ಆದರೆ ಅವರ ಅವಧಿಯಲ್ಲಿ ಭಾರತದ ಬ್ಯಾಂಕುಗಳು ಕೆಟ್ಟಸಾಲದ (NPA) ಸುಳಿಯಲ್ಲಿ ಸಿಲುಕಿದ್ದರೆ, ಶಕ್ತಿಕಾಂತ ದಾಸರ ಕಾಲದಲ್ಲಿ ಇವುಗಳ ಬ್ಯಾಲೆನ್ಸ್ ಶೀಟ್ ಸ್ಥಿರತೆಗೆ ಬಂತು.
ವಿದೇಶಿ ವಿಶ್ವವಿದ್ಯಾಲಯದ ಡಿಗ್ರಿ, ಅಲ್ಲಿನ ಪ್ರೊಫೆಸರ್ ಪಟ್ಟ, ಪಾಶ್ಚಾತ್ಯರಿಗೆ ಒಪ್ಪಿಗೆಯಾಗುವ ಆಂಗ್ಲ ಮಾತುಗಳ ಶೈಲಿ ಇವೆಲ್ಲ ರಘುರಾಮ್ ರಾಜನ್ ಅವರಿಗೆ ದೊಡ್ಡ ಪ್ರಚಾರ ಕೊಟ್ಟವಷ್ಟೆ. ಹೀಗಾಗಿ, 2016ರಲ್ಲಿ ಆರ್ಬಿಐ ಗವರ್ನರ್ ಆಗಿ ಅವರ ಅವಧಿ ವಿಸ್ತರಣೆ ಆಗದು ಎಂದು ತಿಳಿಯುತ್ತಲೇ, ರಾಜನ್ ಹೊರಹೋದರೆ ವಿದೇಶಿ ಹೂಡಿಕೆಯೂ ಹೊರಹೋಗಿಬಿಡುತ್ತದೆ ಎಂಬರ್ಥದ ಉತ್ಪ್ರೇಕ್ಷಿತ ವರದಿಗಳೆಲ್ಲ ಬಂದವು. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು 2006ರಲ್ಲೇ ರಾಜನ್ ಊಹಿಸಿದ್ದರು ಎಂಬುದು ಅವರ ಬಗೆಗಿರುವ ದಂತಕತೆ. ವಾಸ್ತವ ಏನೆಂದರೆ, ರಘುರಾಮ್ ರಾಜನ್ ಅವರು ತಮಗೆ ವೇದಿಕೆ ಸಿಕ್ಕಾಗಲೆಲ್ಲ ಇಂಥ ಮಹಾಪತನದ ಭವಿಷ್ಯವಾಣಿ ಹೇಳುತ್ತಲೇ ಇರುತ್ತಾರೆ. ಅವುಗಳಲ್ಲಿ ಹೆಚ್ಚಿನವು ಸುಳ್ಳಾಗಿವೆ.
2013-18ರ ಅವಧಿಯಲ್ಲಿ ರಾಜನ್ ಹಲವು ಬಾರಿ ಆರ್ಥಿಕ ಮಹಾಪತನದ ಎಚ್ಚರಿಕೆ ನುಡಿದಿದ್ದರು. 2015ರಲ್ಲಂತೂ ಜಗತ್ತು 1930ರ ಕಾಲದ ಗ್ರೇಟ್ ಡಿಪ್ರೆಶನ್ ಅನ್ನು ಕಾಣಲಿದೆಯೆಂಬ ಭವಿಷ್ಯ ನುಡಿದು ಪ್ರಚಾರ ಪಡೆದಿದ್ದಷ್ಟೇ ಬಂತು, ಅಂಥದ್ದೇನೂ ಆಗಲಿಲ್ಲ. ಇಂಥ ರಾಜನ್, ತೀರ ನಗೆಪಾಟಲಿಗೆ ಈಡಾಗಿದ್ದು 2023ರಲ್ಲಿ ಭಾರತ್ ಜೋಡೊ ಎಂಬ ರಾಜಕೀಯ ಕಾರ್ಯಕ್ರಮದ ಪ್ರಯುಕ್ತ ರಾಹುಲ್ ಗಾಂಧಿ ಜತೆಗೆ ಮಾತುಕತೆ ನಡೆಸಿದಾಗ. ಭಾರತವು ಶೇ. 5ರ ಜಿಡಿಪಿ ದರ ಕಾಯ್ದುಕೊಂಡರೂ ಅದನ್ನು ಮಹಾಭಾಗ್ಯ ಎನ್ನಬಹುದು ಅಂತ ಹೆದರಿಸುತ್ತ, ಪರೋಕ್ಷವಾಗಿ ಬಿಜೆಪಿ ಸರ್ಕಾರದ ವಿರುದ್ಧದ ಕಾಂಗ್ರೆಸ್ ಪ್ರಚಾರಾಂದೋಲನಕ್ಕೆ ತಮ್ಮನ್ನು ತಾವು ಕೊಟ್ಟುಕೊಂಡಿದ್ದರು. ಆದರೆ ಅವರು ಹಾಗೆ ಹೇಳಿದ ನಂತರದ ಎರಡು ತ್ರೈಮಾಸಿಕಗಳಲ್ಲಿ ಭಾರತವು ಕ್ರಮವಾಗಿ ಶೇ. 7.8 ಮತ್ತು ಶೇ. 7.6ರ ಪ್ರಗತಿ ದಾಖಲಿಸಿದಾಗ ತೀರ ಸಾಮಾನ್ಯರಿಗೂ ತಿಳಿದುಹೋಗಿತ್ತು, ರಾಜನ್ ರಾಜಕಾರಣ ಮಾಡುತ್ತಿದ್ದಾರೆಯೇ ಹೊರತು ಅರ್ಥಶಾಸ್ತ್ರಜ್ಞನಾಗಿ ವ್ಯವಹರಿಸುತ್ತಿಲ್ಲ ಅಂತ.
ಈ ಮಾಹಿತಿ ಯುಗದಲ್ಲಿ ಯಾವುದಕ್ಕೇ ಆಗಲಿ ಒಂದಿಷ್ಟು ಪ್ರಚಾರ ಬೇಕೆಂಬ ವಾಸ್ತವವನ್ನು ಒಪ್ಪೋಣ. ಆದರೆ ಕೇವಲ ಪ್ರಚಾರಕ್ಕೆ ಮರುಳಾಗಿ ವ್ಯಕ್ತಿಯ ಅರ್ಹತೆ ಮತ್ತು ಕಾರ್ಯಸಾಮರ್ಥ್ಯಗಳನ್ನು ಅಳೆಯಬಾರದು ಎಂಬ ಎಚ್ಚರಿಕೆಯ ಪ್ರತೀಕವಾಗಿದ್ದಾರೆ ನಿರ್ಗಮಿತ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್.
- ಚೈತನ್ಯ ಹೆಗಡೆ
cchegde@gmail.com