“ಮೀಸಲು ಬೇಡ- ಪ್ರತಿಭೆಗೆ ಮಾತ್ರ ಬೆಲೆ ಇರಲಿ”- ಇದಿಷ್ಟೇ ಘೋಷಣೆಯನ್ನು ಕೇಳಿಸಿಕೊಂಡರೆ ಹೆಚ್ಚಿನವರ ಪ್ರತಿಕ್ರಿಯೆ ಹೇಗಿದ್ದೀತು? ಇದು ಮನುವಾದಿಗಳ ಅಜೆಂಡಾ… ಮೇಲ್ವರ್ಗದ ಹಿಂದುಗಳು ಯಾವತ್ತೂ ಮೀಸಲು ನೀತಿಯನ್ನು ಸಹಿಸಿಕೊಂಡವರಲ್ಲ… ಸಂವಿಧಾನ ಆಪತ್ತಿನಲ್ಲಿದೆ…ಬಾಬಾ ಸಾಹೇಬ ಅಂಬೇಡ್ಕರರಿಗೆ ಮಾಡುತ್ತಿರುವ ಅಪಮಾನ ಇದು…ಹಿಂದು ಮೇಲ್ವರ್ಗದವರಿಗೆ ಸಾಮಾಜಿಕ ನ್ಯಾಯದ ಎಬಿಸಿಡಿಯೇ ಗೊತ್ತಿಲ್ಲ…. ಇವೆಲ್ಲ ಸಾಮಾನ್ಯವಾಗಿ ಕೇಳಿಬರುವ ಆಕ್ರೋಶಿತ ಮರುಪ್ರತಿಕ್ರಿಯೆಗಳು ಅಲ್ಲವೇ?
ಆದರೆ, ಈಗ ಮೀಸಲು ಬೇಡ, ಪ್ರತಿಭೆ ಮಾತ್ರ ಇರಲಿ ಎಂದು ಭಿತ್ತಿಪತ್ರ ಹಿಡಿದು ನಿಂತವರ ವಿರುದ್ಧ ತಥಾಕಥಿತ ಸೆಕ್ಯುಲರ್ ಪಕ್ಷಗಳ್ಯಾವವೂ ತುಟಿ ಪಿಟಕ್ ಎಂದಿಲ್ಲ! ಏಕೆಂದರೆ ಈ ಘೋಷಣೆ ಮೊಳಗುತ್ತಿರುವುದು ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಹಾಗೂ ಅಲ್ಲಿ ಇಂಥದೊಂದು ಪ್ಲಕಾರ್ಡ್ ಹಿಡಿದು ನಿಂತವರು ಮುಸ್ಲಿಮರು! ಹೀಗಾಗಿಯೇ ತಮ್ಮನ್ನು ತಾವು ಅಂಬೇಡ್ಕರವಾದಿಗಳೆಂದು ಕರೆದುಕೊಳ್ಳುವವರದ್ದೆಲ್ಲ ಈ ಬಗ್ಗೆ ದಿವ್ಯಮೌನ!
ಜಮ್ಮು-ಕಾಶ್ಮೀರದಲ್ಲಿ ಅಧಿಕಾರದಲ್ಲಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಕ್ಕೆ ಸೇರಿದ ಸಂಸದ ಸಯ್ಯದ್ ರಹವುಲ್ಲ ಮೆಹ್ದಿ, ಒಂದಿಷ್ಟು ವಿದ್ಯಾರ್ಥಿಗಳ ಗುಂಪನ್ನು ಕಟ್ಟಿಕೊಂಡು ತಮ್ಮದೇ ಪಕ್ಷದಿಂದ ಮುಖ್ಯಮಂತ್ರಿ ಹುದ್ದೆಗೇರಿರುವ ಒಮರ್ ಅಬ್ದುಲ್ಲ ಅವರ ನಿವಾಸದ ಎದುರಲ್ಲೇ ಮೀಸಲು ವಿರೋಧಿ ಪ್ರತಿಭಟನೆ ನಡೆಸುವುದಕ್ಕೆ ಯತ್ನಿಸಿದ್ದಾರೆ. ಈ ವಿದ್ಯಾರ್ಥಿಗಳೆಲ್ಲ ಆಗ್ರಹಿಸುತ್ತಿರುವುದು ಜಮ್ಮು-ಕಾಶ್ಮೀರದ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಎಸ್ ಸಿ - ಎಸ್ಟಿ ಮೀಸಲು ತರಬಾರದು, ಬದಲಿಗೆ ಪ್ರತಿಭೆ ಆಧಾರದ ಮೇಲೆಯೇ ಶಿಕ್ಷಣಸಂಸ್ಥೆಗಳ ಪ್ರವೇಶ ಹಾಗೂ ಉದ್ಯೋಗ ನೀಡಿಕೆಗಳೆಲ್ಲ ಆಗಬೇಕು ಎಂಬುದನ್ನು.
ಇಲ್ಲಿರುವ ಕ್ರೂರ ವ್ಯಂಗ್ಯ ಗಮನಿಸಿ. ಜಮ್ಮು-ಕಾಶ್ಮೀರದಲ್ಲಿ ಯಾವ ಮುಸ್ಲಿಂ ಸಮುದಾಯ ಮೆರಿಟ್ ವಾದ ಹಿಡಿದುಕೊಂಡು ಮೀಸಲನ್ನು ವಿರೋಧಿಸುತ್ತಿದೆಯೋ, ಅದೇ ಸಮುದಾಯವು ದೇಶದ ಹೆಚ್ಚಿನ ರಾಜ್ಯಗಳಲ್ಲಿ ತನ್ನ ನಾನಾ ಜಾತಿಗಳಿಗೆ ಒಬಿಸಿ ಪಟ್ಟಿಯಲ್ಲಿ ಮೀಸಲು ಸೌಲಭ್ಯ ಪಡೆದಿದೆ. ಒಬಿಸಿ ಪಟ್ಟಿಯಲ್ಲಿಲ್ಲದ ಮುಸ್ಲಿಂ ಜಾತಿಗಳಲ್ಲಿ ಒಂದೊಮ್ಮೆ ಯಾರಾದರೂ ಆರ್ಥಿಕ ಅಶಕ್ತರಾಗಿದ್ದರೆ ಅವರು ಇಡಬ್ಲುಎಸ್ (ಆರ್ಥಿಕ ಬಡ ವರ್ಗ) ಕೋಟಾದಲ್ಲೂ ಜನರಲ್ ಕೆಟಗರಿಯಿಂದ ಮೀಸಲು ಪಡೆದುಕೊಳ್ಳಬಹುದು. ಇಂಥವರಿಗೆ ಜಮ್ಮು-ಕಾಶ್ಮೀರದಲ್ಲಿ ಮಾತ್ರ ಹಿಂದು ಎಸ್ ಸಿ -ಎಸ್ಟಿಗಳಿಗೆ ನ್ಯಾಯಬದ್ಧವಾಗಿ ಸಿಗುವ ಮೀಸಲನ್ನು ಸಹಿಸಿಕೊಳ್ಳಲಾಗುತ್ತಿಲ್ಲ.
ಜಮ್ಮು-ಕಾಶ್ಮೀರದಲ್ಲಿ ಎಸ್ ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಉದ್ಯೋಗ ಮತ್ತು ಶಿಕ್ಷಣಗಳಲ್ಲಿ ಮೀಸಲು ಅನ್ವಯವಾಗಿರುವುದು 2019ರಲ್ಲಿ ಮೋದಿ ಸರ್ಕಾರವು 370ನೇ ವಿಧಿಯನ್ನು ತೆರವುಗೊಳಿಸುವ ಐತಿಹಾಸಿಕ ನಿರ್ಣಯ ಕೈಗೊಂಡಮೇಲಷ್ಟೇ. ಏಕೆಂದರೆ, ಆವರೆಗೆ ಆರ್ಟಿಕಲ್ 370ನೇ ವಿಧಿ ಇದ್ದ ಪ್ರಯುಕ್ತ, ಭಾರತದ ಸಂಸತ್ತು ಮಾಡಿದ ಕಾನೂನುಗಳು ಜಮ್ಮು-ಕಾಶ್ಮೀರಕ್ಕೆ ಅನ್ವಯಿಸುತ್ತಲೇ ಇರಲಿಲ್ಲ. ಸ್ವಾತಂತ್ರ್ಯಾನಂತರ ಹೀಗೆ ದಲಿತರಿಗೆ ಮೀಸಲು ನಿರಾಕರಿಸಿ, 1990ರಲ್ಲಿ ಅಲ್ಲಿನ ‘ಮೆರಿಟ್’ ವರ್ಗವಾಗಿದ್ದ ಕಾಶ್ಮೀರಿ ಪಂಡಿತರನ್ನೂ ಹತ್ಯಾಕಾಂಡದ ಬೆದರಿಕೆಯಲ್ಲಿ ಹೊರಗಟ್ಟಿದ ಮೇಲೆ ಆ ರಾಜ್ಯದಲ್ಲಿ ಕೇವಲ ಒಂದು ಸಮುದಾಯದವರಷ್ಟೇ ಎಲ್ಲ ಸೌಲಭ್ಯ ಪಡೆಯುವಂತಾಗಿತ್ತು.
370ನೇ ವಿಧಿ ಇರುವಾಗ ಎಷ್ಟು ಕೆಟ್ಟ ಪರಿಸ್ಥಿತಿ ಇತ್ತೆಂದರೆ, ಪಶ್ಚಿಮ ಪಾಕಿಸ್ತಾನದಿಂದ ನಿರಾಶ್ರಿತರಾಗಿ ಬಂದು ಜಮ್ಮು-ಕಾಶ್ಮೀರದಲ್ಲಿ ನೆಲೆಸಿದ್ದ ವಾಲ್ಮೀಕಿ ಜನಾಂಗದವರಿಗೆ ಮತದಾನದ ಹಕ್ಕೆ ಇರಲಿಲ್ಲ, ಇನ್ನು ಮೀಸಲಿನ ಹಕ್ಕು ದೂರದ ಮಾತು. ಅವರಿಗೆ ಗುತ್ತಿಗೆ ಆಧಾರದ ಸ್ವಚ್ಛತಾ ಕಾಮಗಾರಿ ಹೊರತಾಗಿ ಮತ್ಯಾವ ಉದ್ಯೋಗಾವಕಾಶವೇ ಇರದಿದ್ದ ಅಮಾನುಷ ಪರಿಸ್ಥಿತಿ ಇತ್ತು. ಈಗ ಎರಡು ಲಕ್ಷದ ಸಂಖ್ಯೆಯಲ್ಲಿರುವ ವಾಲ್ಮೀಕಿ, ಗೊರ್ಖಾ ಸಮುದಾಯದವರಿಗೆ ಮತದಾನದ ಹಕ್ಕು, ಚುನಾವಣೆಗೆ ಸ್ಪರ್ಧಿಸುವ ಹಕ್ಕು, ಮೀಸಲು ಹಕ್ಕುಗಳೆಲ್ಲ ಸಿಗುತ್ತಿವೆ. ಈವರೆಗೆ ಇವರನ್ನು ಶೌಚಾಲಯ ಶುದ್ಧ ಮಾಡುವುದಕ್ಕೆ ಮಾತ್ರವೇ ಬಳಸಿಕೊಂಡಿದ್ದ ಕಣಿವೆಯ ಮುಸ್ಲಿಂ ಸಮುದಾಯಕ್ಕೆ ಈಗವರ ಉನ್ನತಿಯ ದಾರಿ ತೆರೆದುಕೊಂಡಿರುವುದು ಸಹಿಸಲು ಆಗುತ್ತಿಲ್ಲವೇ ಎಂಬ ಪ್ರಶ್ನೆಯೊಂದು ಎದ್ದಿದೆ.
ಈಗ ವಿಧಿ 370 ತೆರವಾಗಿರುವುದಲ್ಲದೇ, ಆ ರಾಜ್ಯಕ್ಕೆ ಒಮರ್ ಅಬ್ದುಲ್ಲ ನೇತೃತ್ವದ ಸರ್ಕಾರವೂ ಚುನಾಯಿತವಾಗಿ ಅಧಿಕಾರಕ್ಕೆ ಬಂದಿದೆ. ಆದರೆ, ವ್ಯತ್ಯಾಸವೇನೆಂದರೆ, ಅಧಿಕಾರಕ್ಕೆ ಎನ್ ಸಿ ಅಥವಾ ಪಿಡಿಪಿ ಯಾವುದೇ ಬಂದರೂ ಇನ್ನುಮುಂದೆ ತಮಗೆ ಕೇಂದ್ರದ ಕಾಯಿದೆಗಳು ಹಾಗೂ ಭಾರತದ ಸಂವಿಧಾನದ ಕೆಲವು ಭಾಗಗಳು ಅನ್ವಯಿಸುವುದಿಲ್ಲ ಎಂದು ಹೇಳುವಂತಿಲ್ಲ. ಹೀಗಾಗಿ, ದೇಶದ ಬೇರೆಡೆಗಳಲ್ಲಿ ಇರುವಂತೆ ವಿದ್ಯೆ-ಉದ್ಯೋಗಗಳಲ್ಲಿ ಅನುಸೂಚಿತ ಜಾತಿ ಮತ್ತು ಪಂಗಡಗಳಿಗೆ ಮೀಸಲು ಕಲ್ಪಿಸಬೇಕಿದೆ. ಈಗ ಏಕಾಏಕಿ ಅಲ್ಲಿನ ಮುಸ್ಲಿಮರು ಮೆರಿಟ್ ಮಾತನಾಡುತ್ತಿದ್ದಾರೆ.
ಸದ್ಯಕ್ಕೆ ತನ್ನದೇ ಸಂಸತ್ ಸದಸ್ಯ ವ್ಯಕ್ತಪಡಿಸಿರುವ ನಿಲವಿಗೂ ತನಗೂ ಅಂತರ ಕಾದುಕೊಂಡಿದೆ ಆಡಳಿತಾರೂಢ ಎನ್ ಸಿ. ಆದರೆ ಇದು ಕೇವಲ ಸಂಸದನೊಬ್ಬನ ಪ್ರಶ್ನೆ ಅಲ್ಲ. ಅಲ್ಲಿನ ಮುಸ್ಲಿಂ ವಿದ್ಯಾರ್ಥಿಗಳ ಗುಂಪು ಮೆರಿಟ್ ಹೆಸರಲ್ಲಿ ನಡೆಸಿರುವ ಪ್ರತಿಭಟನೆಯ ಹಿಂದಿನ ಮನಸ್ಥಿತಿ ಮತ್ತು ಲೆಕ್ಕಾಚಾರಗಳನ್ನು ಭಾರತದ ಇತರೆಡೆಗಳ ರಾಜಕೀಯ ಪ್ರಜ್ಞಾವಂತರು ಮನಗಾಣಬೇಕಿದೆ.
ಮುಸ್ಲಿಮರ ಒಂದು ದೊಡ್ಡ ವರ್ಗಕ್ಕೆ ತಾವು ಭಾರತವನ್ನು ಆಳಿದ್ದ ಮೊಘಲರ ಉತ್ತರಾಧಿಕಾರಿಗಳೆಂದೂ, ಹಾಗೆಂದೇ ಭಾರತದ ರಾಜಕೀಯ ಅಧಿಕಾರ ಇಂದಲ್ಲ ನಾಳೆ ತಮಗೆ ಸಲ್ಲಬೇಕೆಂಬ ನಿರೀಕ್ಷೆ ಇದೆ. ಆದರೆ ಅದೇ ವೇಳೆ, ತಮ್ಮ ಸಮುದಾಯ ದಮನಿತವಾದದ್ದು ಹಾಗೂ ಮೀಸಲಿಗೆ ಅರ್ಹ ಎಂದೂ ಅವರು ಪ್ರತಿಪಾದಿಸುತ್ತಾರೆ. ಆದರೆ ಮುಸ್ಲಿಂ ಬಾಹುಳ್ಯದ ಆಡಳಿತ ವ್ಯವಸ್ಥೆಯಲ್ಲಿ ಹಿಂದು ದಲಿತರಿಗೆ ಅವರ ಹಕ್ಕು ನೀಡಬೇಕಾಗಿ ಬಂದಾಗ ತಕರಾರು ಏಳುತ್ತದೆ. ಇದು ಜಮ್ಮು-ಕಾಶ್ಮೀರದಲ್ಲಿ ಅಚಾನಕ್ಕಾಗಿ ಕಂಡ ಮನಸ್ಥಿತಿ ಏನಲ್ಲ. ವಿಭಜನೆ ಸಂದರ್ಭದಲ್ಲಿ ಜೋಗಿಂದ್ರನಾಥ ಮಂಡಲ್ ಎಂಬ ದಲಿತ ನಾಯಕರೊಬ್ಬರು ಭಾರತದ ಹಿಂದು ಬಹುಸಂಖ್ಯಾತ ಸ್ಥಿತಿಯಲ್ಲಿ ದಲಿತರ ಏಳ್ಗೆ ಆಗುವುದಿಲ್ಲ ಎಂದು ಅವತ್ತಿನ ಪೂರ್ವ ಪಾಕಿಸ್ತಾನವನ್ನು ಸೇರಿ ಪಾಕಿಸ್ತಾನದ ಕಾನೂನು ಮತ್ತು ಕಾರ್ಮಿಕ ಸಚಿವರೂ ಆದರು. ನಂತರ, ಸ್ವಾತಂತ್ರ್ಯದ ಬೆನ್ನಲ್ಲೇ ಪಾಕಿಸ್ತಾನದ ಇಸ್ಲಾಮಿಕ್ ಪ್ರಭುತ್ವವು ಹಿಂದುಗಳು, ವಿಶೇಷವಾಗಿ ದಲಿತರನ್ನು ನಿಕೃಷ್ಟವಾಗಿ ನಡೆಸಿಕೊಳ್ಳತೊಡಗಿದಾಗ ರಾಜೀನಾಮೆ ನೀಡಿ ಭಾರತಕ್ಕೆ ವಾಪಸ್ಸಾದರಲ್ಲದೇ, ಅತ್ಯಂತ ನೋವಿನ ಅಂತ್ಯ ಕಾಣಬೇಕಾಯಿತು. ಸುದ್ದಿಯೊಂದನ್ನು ಸೀಳಿ ನೋಡಿದಾಗಲಷ್ಟೇ ಕೇಳುವ ಇಂಥ ಎಚ್ಚರಿಕೆ ಘಂಟೆಗಳು ಆಗಾಗ ಮೊಳಗುತ್ತಿರುತ್ತವೆ!
- ಚೈತನ್ಯ ಹೆಗಡೆ
cchegde@gmail.com