ಕೋವಿಡ್-19 (ಸಂಗ್ರಹ ಚಿತ್ರ) 
ಅಂಕಣಗಳು

ಕೋವಿಡ್ JN.1: ಭಯ ಬೇಡ, ಜಾಗ್ರತೆ ಇರಲಿ (ಕುಶಲವೇ ಕ್ಷೇಮವೇ)

ಇತ್ತೀಚೆಗೆ ಕೋವಿಡ್ ವೈರಸ್ಸಿನ ರೂಪಾಂತರಿ ಕೋವಿಡ್ ಜೆಎನ್.1 ದೇಶಾದ್ಯಂತ ವ್ಯಾಪಿಸಿರುವುದು ಸಾಕಷ್ಟು ಸುದ್ದಿಯಲ್ಲಿದೆ. ಆದರೆ ಇಂದು ಕೋವಿಡ್ ಎಂದಾಕ್ಷಣ ಹಿಂದಿನಂತೆ ಭಯಪಡಬೇಕಿಲ್ಲ.

ಇತ್ತೀಚೆಗೆ ಕೋವಿಡ್ ವೈರಸ್ಸಿನ ರೂಪಾಂತರಿ ಕೋವಿಡ್ ಜೆಎನ್.1 ದೇಶಾದ್ಯಂತ ವ್ಯಾಪಿಸಿರುವುದು ಸಾಕಷ್ಟು ಸುದ್ದಿಯಲ್ಲಿದೆ. ಆದರೆ ಇಂದು ಕೋವಿಡ್ ಎಂದಾಕ್ಷಣ ಹಿಂದಿನಂತೆ ಭಯಪಡಬೇಕಿಲ್ಲ. 2020 ಮತ್ತು 2021ರ ನಂತರ ಕಾಣಿಸಿಕೊಂಡಿರುವ ಕೋವಿಡ್ ರೂಪಾಂತರಿ ವೈರಸ್ಸುಗಳು ಮಾರಣಾಂತಿಕವಲ್ಲ. ಆದರೂ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಅದರಲ್ಲಿಯೂ ಬಿಪಿ, ಶುಗರ್ ಮತ್ತಿತರ ಅಸ್ವಸ್ಥತೆಗಳನ್ನು ಹೊಂದಿರುವವರು ಹುಷಾರಾಗಿರಬೇಕು. ಈ ಬಗ್ಗೆ ಕೋವಿಡ್ ಮೊದಲ ಮೂರು ಅಲೆಗಳಲ್ಲಿಯೂ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗಿತ್ತು. ಈಗಲೂ ಎಲ್ಲರೂ ಈ ದಿಸೆಯಲ್ಲಿ ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆ ಇದೆ. 

ಈ ಕೋವಿಡ್ ರೂಪಾಂತರಿಯು ವೇಗವಾಗಿ ಹಲವಾರು ರಾಜ್ಯಗಳಲ್ಲಿ ಹರಡುತ್ತಿದೆ ಮತ್ತು ಈಗಾಗಲೇ ಶ್ವಾಸಕೋಶ, ಹೃದ್ರೋಗ ಮತ್ತಿತರ ಸಮಸ್ಯೆಗಳಿಂದ ಗಂಭೀರ ಸ್ಥಿತಿಯಲ್ಲಿರುವವರಿಗೆ ಈ ಸೋಂಕು ತಗುಲಿ ಸಾವು ಸಂಭವಿಸಿದೆ. ಹೀಗಾಗಿ ಇದರ ರೋಗಲಕ್ಷಣಗಳ ಬಗ್ಗೆ ನಿರ್ಲಕ್ಷ್ಯ ಮಾಡುವುದು ಸಲ್ಲ. ದುರ್ಬಲ ಆರೋಗ್ಯ ಸ್ಥಿತಿ ಹೊಂದಿರುವವರಿಗೆ, ಗರ್ಭಿಣಿಯರಿಗೆ ಮತ್ತು ವೃದ್ಧರಿಗೆ ಈ ಸೋಂಕಿನ ಅಪಾಯ ಹೆಚ್ಚು.

ಕೋವಿಡ್ ರೂಪಾಂತರಿ JN.1 ವೈರಸ್

ಕೋವಿಡ್ ಜೆಎನ್.1 ವೈರಸ್ ಯುಎಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ ಸೆಪ್ಟೆಂಬರ್ ತಿಂಗಳಿನಲ್ಲಿ ಅಮೆರಿಕದಲ್ಲಿ ಮೊದಲು ಪತ್ತೆಯಾಗಿತ್ತು. ಇದು ಬಿ.2.86 ರೂಪಾಂತರಿ (ಓಮಿಕ್ರಾನ್) ಸಂತತಿಗೆ ಸೇರಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿ ಇದನ್ನು ಆಸಕ್ತಿಕರ ರೂಪಾಂತರಿ (ವೇರಿಯಂಟ್ ಆಫ್ ಇಂಟರೆಸ್ಟ್) ಎಂದು ವರ್ಗೀಕರಿಸಿದೆ. 

ಭಾರತದಲ್ಲಿ ಕೊವಿಡ್ ಜೆಎನ್.1ರ ಮೊದಲ ಪ್ರಕರಣವನ್ನು 2023ರ ಡಿಸೆಂಬರ್ 8ರಂದು ಕೇರಳದ ತಿರುವನಂತಪುರಂ ಜಿಲ್ಲೆಯ ಕರಕುಲಂನಲ್ಲಿ ಪತ್ತೆಹಚ್ಚಲಾಯಿತು. ಅಂದಿನಿಂದ ಇಂದಿನವರೆಗೂ ಈ ರೋಗದ ಪ್ರಕರಣಗಳ ಸಂಖ್ಯೆಯು ಹೆಚ್ಚುತ್ತಲೇ ಇದೆ. ಆದ್ದರಿಂದ ಇದು ಜನರಲ್ಲಿ ಆತಂಕ ಮತ್ತು ಭಯವನ್ನು ಹೆಚ್ಚಿಸಿರುವುದು ಸಹಜ. ಆದರೆ ಇದು ಸಾರ್ವಜನಿಕ ಆರೋಗ್ಯದ ಆರೋಗ್ಯದ ಮೇಲೆ ಅಂತಹ ಪರಿಣಾಮ ಬೀರುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ತಿಳಿಸಿರುವುದು ಸಮಾಧಾನಕರ ವಿಷಯ. ಜೊತೆಗೆ ತಜ್ಞರು ಈ ರೂಪಾಂತರಿ ವೈರಸ್ಸಿನ ಮೇಲೆ ಸದಾ ಕಾಲ ಕಣ್ಣಿಟ್ಟಿದ್ದಾರೆ.

ಕೋವಿಡ್ ಜೆಎನ್.1 ಸೋಂಕು ಲಕ್ಷಣಗಳು

ಮೊದಲಿಗೆ ಕೋವಿಡ್ ಜೆಎನ್.1 ವೈರಸ್ಸು ಸೋಂಕು ತಗುಲಿದಾಗ ಜ್ವರ, ನೆಗಡಿ, ಗಂಟಲು ನೋವು, ತಲೆನೋವು ಕಾಣಿಸಿಕೊಳ್ಳುತ್ತದೆ. ಹಸಿವಾಗದೇ ಇರುವುದು ಮತ್ತು ವಾಕರಿಕೆಯ ಅನುಭವವಾಗುತ್ತದೆ. ಕೆಲವರಲ್ಲಿ ಅಜೀರ್ಣದ ಸಮಸ್ಯೆ ಮತ್ತು ಗ್ಯಾಸ್ಟ್ರಿಕ್ ತೊಂದರೆಗಳು ಕಾಣಿಸಿಕೊಳ್ಳಬಹುದು. ಅತಿಯಾದ ಸುಸ್ತು, ಸ್ನಾಯುಗಳಲ್ಲಿ ಬಳಲಿಕೆ ಕಂಡುಬರಬಹುದು. 

ಹೆಚ್ಚಿನ ರೋಗಿಗಳು ಉಸಿರಾಟದಲ್ಲಿ ಸಣ್ಣ ಪ್ರಮಾಣದ ಸಮಸ್ಯೆಗಳನ್ನು ಅನುಭವಿಸಬಹುದು. ಆದರೆ ಇದು ಸಾಮಾನ್ಯವಾಗಿ ನಾಲ್ಕರಿಂದ ಐದು ದಿನಗಳಲ್ಲಿ ಸುಧಾರಿಸುತ್ತದೆ.  ಹಿರಿಯ ನಾಗರಿಕರು ಹೊರಗೆ ಹೋಗುವಾಗ ಮಾಸ್ಕ್ (ಮುಖಗವಸು) ತೊಟ್ಟು ಹೋಗುವುದು ಕಡ್ಡಾಯ ಎಂದು ಆರೋಗ್ಯ ಇಲಾಖೆಯೇ ಹೇಳಿದೆ. ಈ ನಿಯಮವನ್ನು ಪಾಲಿಸಬೇಕು. ಆದಷ್ಟು ಜನಸಂದಣಿ ಇರುವ ಜಾಗಗಳಿಗೆ ಹೋಗದಿದ್ದರೆ ಒಳಿತು. ಸದ್ಯಕ್ಕೆ ಶೇಕಡಾ 90ರಷ್ಟು ಕೋವಿಡ್ ಪ್ರಕರಣಗಳು ನಿಯಂತ್ರಣದ ಹಂತದಲ್ಲಿವೆ. ಲಕ್ಷಣಗಳು ಹೆಚ್ಚು ಗಂಭೀರವಾಗಿ ಕಂಡುಬಂದಿದ್ದರೆ ಮಾತ್ರ ಒಂದು ವಾರ ಮನೆಯಲ್ಲಿ ಪ್ರತ್ಯೇಕವಾಸ (ಹೋಮ್ ಐಸೋಲೇಷನ್) ಮಾಡಿ ಗುಣವಾಗಬಹುದು. 

ಕೋವಿಡ್ ಜೆಎನ್.1 ಮಾರ್ಗಸೂಚಿ

ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಹೆಚ್ಚು ಆರ್ ಟಿ - ಪಿ ಸಿ ಆರ್ ಪರೀಕ್ಷೆಗಳನ್ನು ಮಾಡುವುದು ಮತ್ತು ಪಾಸಿಟಿವ್ ಆಗಿರುವ ವೈರಸ್ ಮಾದರಿಗಳಲ್ಲಿ ತಳಿನಕ್ಷೆ (ಜೀನೋಮ್) ಪರೀಕ್ಷೆಗಾಗಿ ಉನ್ನತ ಪ್ರಯೋಗಾಲಯಗಳಿಗೆ ಕಳಿಸುವುದೂ ಸೇರಿದೆ. ಉಸಿರಾಟಕ್ಕೆ ತೊಂದರೆಯಾಗಿರುವ ತೀವ್ರತರ ಪ್ರಕರಣಗಳಲ್ಲಿ ರೋಗಿಗಳ ಮೇಲೆ ನಿಗಾ ಇಟ್ಟು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಬೇಕಾದ ಮೂಲ ಸೌಕರ್ಯಗಳನ್ನು ಸಜ್ಜುಗೊಳಿಸಬೇಕೆಂದು ಹೇಳಿದೆ. 

ಸಾಮಾನ್ಯವಾಗಿ ವೈರಸ್ ಬಂದ ಮೇಲೆ ಗುಣವಾಗುವ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕಿಂತ ಇದು ಬಾರದಂತೆ ತಡೆಯುವುದು ಬಹಳ ಮುಖ್ಯ. ಒಮ್ಮೆ ವೈರಸ್ ಸೋಂಕು ಬಂದರೆ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ಎಂಬುದನ್ನು ನಿಖರವಾಗಿ ಹೇಳಲು ಬರುವುದಿಲ್ಲವಾದ್ದರಿಂದ ಅದನ್ನು ತಡೆಗಟ್ಟುವ ಮಾರ್ಗಗಳ ಬಗ್ಗೆ ನಾವೆಲ್ಲರೂ ಹೆಚ್ಚು ಗಮನ ಹರಿಸಬೇಕು. ದಿನವೂ ಆಗಾಗ್ಗೆ ಕೈ ತೊಳೆಯುವುದು, ಮಾಸ್ಕ್ ಬಳಕೆ ಹಾಗೂ ಆದಷ್ಟೂ ಪರಸ್ಪರ ಅಂತರ ಕಾಪಾಡಿಕೊಳ್ಳುವುದು ಬಹಳ ಅಗತ್ಯ. ಎಲ್ಲಕ್ಕಿಂತ ಮುಖ್ಯವಾಗಿ ಈ ಹಿಂದೆ ಎರಡು ಕೋವಿಡ್ ಲಸಿಕೆಗಳನ್ನು ಪಡೆದು ಬೂಸ್ಟರ್ ಡೋಸ್ ಪಡೆಯದಿದ್ದರೆ ಅದನ್ನು ತಪ್ಪದೇ ಪಡೆಯಬೇಕು. ಹಲವಾರು ಜನರು ಇನ್ನೂ ಎರಡನೆಯ ಲಸಿಕೆಯನ್ನೇ ಪಡೆದಿಲ್ಲ ಎಂಬುದು ನಿರ್ಲಕ್ಷ್ಯದ ಸಂಗತಿಯಾಗಿದೆ. ಈ ಬಗ್ಗೆ ಎಚ್ಚರ ವಹಿಸಲೇಬೇಕು. ಆರೋಗ್ಯ ಇಲಾಖೆಯು ಬೂಸ್ಟರ್ ಡೋಸ್ ಕೊಡುವುದನ್ನು ಹಲವಾರು ಪ್ರದೇಶಗಳಲ್ಲಿ ಪ್ರಾರಂಭಿಸಿದೆ. ಇದರ ಸದುಪಯೋಗವನ್ನು ಪಡೆಯಬೇಕು. 

ನೆಗಡಿ ಮತ್ತು ಕೆಮ್ಮು ಇರುವವರು ಬೆಳಗ್ಗೆ ಮತ್ತು ರಾತ್ರಿ ಬಿಸಿ ನೀರನ್ನು ಕುಡಿಯಬೇಕು. ಜ್ವರ ಮತ್ತಿತರ ಸಮಸ್ಯೆಗಳು ಕಂಡುಬಂದರೆ ವೈದ್ಯರನ್ನು ತಡಮಾಡದೇ ಕಾಣಬೇಕು. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನಿಯಮಿತ ವ್ಯಾಯಾಮ, ನಡಿಗೆ, ಜಾಗಿಂಗ್, ರನ್ನಿಂಗ್, ಸಮತೋಲನ ಆಹಾರ ಸೇವನೆ (ತಾಜಾ ಹಣ್ಣು-ತರಕಾರಿಗಳು, ಬೇಳೆಕಾಳುಗಳು ಮತ್ತು ಹಸಿರು ಸೊಪ್ಪುಗಳು) ಒತ್ತಡರಹಿತ ಜೀವನ ಮತ್ತು ಸಾಕಷ್ಟು ನಿದ್ರೆ ಮಾಡುವುದು ಬಹುಮುಖ್ಯ. ಆಯುರ್ವೇದದಲ್ಲಿ ಇದಕ್ಕೆ ಹಲವಾರು ಉಪಶಮನ ಕ್ರಮಗಳಿವೆ. ಈ ಬಗ್ಗೆ ತಿಳಿದುಕೊಳ್ಳಲು ಹತ್ತಿರದ ಆಯುರ್ವೇದ ವೈದ್ಯರನ್ನು ಭೇಟಿ ಮಾಡಿ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT