ಅಂಕಣಗಳು

ಪ್ರಜ್ವಲ್ ಪ್ರಕರಣ: ಕಾಂಗ್ರೆಸ್ ಗೆ ದಿಗ್ವಿಜಯದ ಉನ್ಮಾದ, ಜೆಡಿಎಸ್ ಗೆ ಅಸ್ತಿತ್ವದ್ದೇ ಚಿಂತೆ (ಸುದ್ದಿ ವಿಶ್ಲೇಷಣೆ)

ಪ್ರಜ್ವಲ್ ಲೈಂಗಿಕ ದೌರ್ಜನ್ಯ ಪ್ರಕರಣ. ಈ ಘಟನೆ ಜೆಡಿಎಸ್ ಪಾಳೇಯದ ಜಂಘಾ ಬಲವನ್ನೇ ಉಡುಗಿಸಿದೆ. ಒಂದು ಕಡೆ ಆ ಪಕ್ಷದ ನಾಯಕರು ಕಂಗಾಲಾಗಿದ್ದಾರೆ. ಈಗ ಆಗಿರುವ ಮಾನಸಿಕ, ಕೌಟುಂಬಿಕ ಆಘಾತಕ್ಕಿಂತ ರಾಜಕೀಯವಾಗಿ ಆಗಿರುವ ಮತ್ತು ಮುಂದೆ ಆಗಬಹುದಾದ ಸಂಭವನೀಯ ನಷ್ಟ ಸರಿದೂಗಿಸಿಕೊಳ್ಳುವ ಮಾರ್ಗಕ್ಕಾಗಿ ಹುಡುಕಾಟ ನಡಸಿದ್ದಾರಾದರೂ ಸ್ಪಷ್ಟ ದಾರಿ ಗೋಚರವಾಗುತ್ತಿಲ್ಲ.

ಪ್ರಜ್ವಲ್ ಲೈಂಗಿಕ ದೌರ್ಜನ್ಯ ಪ್ರಕರಣ. ಈಗ ಇಡೀ ದೇಶದಾದ್ಯಂತ ಚರ್ಚೆ ಹುಟ್ಟುಹಾಕಿದೆ. ಕಾಂಗ್ರೆಸ್ ಈ ಪ್ರಕರಣವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುವ ಮೂಲಕ ಇದರ ಲಾಭ ಪಡೆಯಲು ಸನ್ನಾಹ ನಡೆಸಿದ್ದರೆ, ಇದೀಗ ಈ ಪ್ರಕರಣ ಬಿಜೆಪಿ ಕೊರಳಿಗೇ ಸುತ್ತಿಕೊಳ್ಳುವ ಲಕ್ಷಣಗಳು ಕಾಣುತ್ತಿವೆ.

ಈ ಘಟನೆ ಜೆಡಿಎಸ್ ಪಾಳೇಯದ ಜಂಘಾ ಬಲವನ್ನೇ ಉಡುಗಿಸಿದೆ. ಒಂದು ಕಡೆ ಆ ಪಕ್ಷದ ನಾಯಕರು ಕಂಗಾಲಾಗಿದ್ದಾರೆ. ಈಗ ಆಗಿರುವ ಮಾನಸಿಕ, ಕೌಟುಂಬಿಕ ಆಘಾತಕ್ಕಿಂತ ರಾಜಕೀಯವಾಗಿ ಆಗಿರುವ ಮತ್ತು ಮುಂದೆ ಆಗಬಹುದಾದ ಸಂಭವನೀಯ ನಷ್ಟ ಸರಿದೂಗಿಸಿಕೊಳ್ಳುವ ಮಾರ್ಗಕ್ಕಾಗಿ ಹುಡುಕಾಟ ನಡಸಿದ್ದಾರಾದರೂ ಸ್ಪಷ್ಟ ದಾರಿ ಗೋಚರವಾಗುತ್ತಿಲ್ಲ.

ಒಂದು ಕಡೆ ಕುಟುಂಬದ ಮರ್ಯಾದೆ ಉಳಿಸಿಕೊಳ್ಳುವ ಅವಶ್ಯಕತೆ ಮತ್ತೊಂದು ಕಡೆ ರಾಜಕೀಯವಾಗಿ ಅಸ್ತಿತ್ವವೇ ಕಳೆದು ಹೋಗುವ ಭಯ ಇದಕ್ಕೂ ಮಿಗಿಲಾಗಿ ಈ ಪ್ರಕರಣದ ತನಿಖೆ ದಿನೇ ದಿನೇ ಬಿಗಿಯಾಗುತ್ತಿದ್ದು ಆಡಳಿತ ಕಾಂಗ್ರೆಸ್ ಪಕ್ಷದ ಸರ್ಕಾರ ಈ ವಿಚಾರದಲ್ಲಿ ಯಾವುದೇ ಮುಲಾಜು ತೋರಿಸುವ ಲಕ್ಷಣಗಳು ಕಾಣುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಡೀ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆಗೆ ವಿಶೇಷ ತನಿಖಾದಳ ರಚಿಸಿದ್ದಾರೆ. ಎಸ್.ಐ.ಟಿ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದು ಈಗ ಇದು ಬಿಜೆಪಿ ಸ್ಥಳೀಯ ಮುಖಂಡರ ಕೊರಳಿಗೆ ಸುತ್ತಿಕೊಳ್ಳುವ ಲಕ್ಷಣಗಳು ಕಾಣುತ್ತಿವೆ. ಹೀಗಾಗಿ ಒಂದು ಕಡೆ ಪ್ರಕರಣದ ತನಿಖೆ ಮುಂದುವರಿದು ಅದರ ಹಿಂದಿರುವ ಸೂತ್ರಧಾರರ ಬಂಧನವಾಗುತ್ತಿರುವಂತೆ ಮೊದಲು ಸಮಗ್ರ ತನಿಖೆಯ ಧ್ವನಿ ಎತ್ತಿದ್ದ ಬಿಜೆಪಿ ಮುಖಂಡರು ಈಗ ಎಸ್ಐಟಿ ವಿರುದ್ಧವೇ ಆರೋಪಗಳನ್ನು ಹೊರಿಸಿ ಸಿಬಿಐ ತನಿಖೆಗೆ ಒತ್ತಾಯಿಸುತ್ತಿರುವುದು ಆ ಪಕ್ಷದ ಅತಂತ್ರ ಸ್ಥಿತಿಗೆ ನಿದರ್ಶನ. ಮೇಲ್ನೋಟಕ್ಕೆ ಇಡೀ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವಲ್ಲಿ ವಿಶೇಷ ಜಾಣ್ಮೆಯಿಂದ ವರ್ತಿಸಿದ್ದಾರೆ ಎಂದು ಕಾಣುತ್ತದಾದರೂ ಜವಾಬ್ದಾರಿಯುತ ಸರ್ಕಾರವಾಗಿ ಇದಕ್ಕಿಂತ ಬೇರೆ ಮಾರ್ಗ ಇರಲಿಲ್ಲ ಎಂಬುದಂತೂ ಸತ್ಯ. ಆದರೆ ಈ ಅವಕಾಶವನ್ನು ಬಳಸಿಕೊಂಡು ಇಬ್ಬರು ನಾಯಕರೂ ತಮ್ಮ ರಾಜಕೀಯ ಕಡು ವೈರಿ ದೇವೇಗೌಡರ ಕುಟುಂಬ ರಾಜಕೀಯವಾಗಿ ಅಸ್ಥಿರಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದಂತೂ ಸತ್ಯ.

ಬಹು ಮುಖ್ಯವಾಗಿ ದೌರ್ಜನ್ಯ, ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಗೌಡರ ಹಿರಿಯ ಪುತ್ರ ಶಾಸಕ ರೇವಣ್ಣ ಬಂಧನ, ಜೈಲು ವಾಸ, ನಂತರದ ಜಾಮೀನು ಪ್ರಕರಣ ಮಾನಸಿಕವಾಗಿ ಹಿರಿಯ ನಾಯಕರಾದ ಗೌಡರನ್ನು ಕುಗ್ಗುವಂತೆ ಮಾಡಿದೆ. ತಮ್ಮ ಸುದೀರ್ಘ ಐದು ದಶಕಗಳ ರಾಜಕೀಯ ಜೀವನದುದ್ದಕ್ಕೂ ವೈಯಕ್ತಿಕವಾಗಿ ಪರಿಶುದ್ಧ ಜೀವನ ನಡೆಸಿಕೊಂಡು ಬಂದ ಗೌಡರಿಗೆ ಮೊಮ್ಮಗನ ವಿರುದ್ಧ ಕೇಳಿ ಬಂದಿರುವ ಆರೋಪಗಳು ಮತ್ತು ಪೊಲೀಸರ ತನಿಖೆ ಒಂದು ರೀತಿಯಲ್ಲಿ ಮೌನಕ್ಕೆ ಶರಣಾಗುವಂತೆ ಮಾಡಿದೆ. ರಾಜಕೀಯದಲ್ಲಿ ಅಧಿಕಾರಕ್ಕಾಗಿ ಗೌಡರು ಏನೇ ತಂತ್ರಗಳನ್ನು ಮಾಡಿರಬಹುದು ಅದರಲ್ಲಿ ಕೊಂಚ ಯಶಸ್ವಿಯೂ ಆಗಿರಬಹುದು. ಆದರೆ ಅವರ ವೈಯಕ್ತಿಕ ಜೀವನ ತೆರೆದ ಪುಸ್ತಕ. ಜೆ.ಎಚ್. ಪಟೇಲ್, ರಾಮಕೃಷ್ಣ ಹೆಗಡೆಯವರಂತಹ ರಾಜಕೀಯ ನಾಯಕರ ನಿಕಟ ಸಂಪರ್ಕದಲ್ಲಿದ್ದರೂ ಆ ಸಂಬಂಧಗಳನ್ನು ರಾಜಕೀಯಕ್ಕಷ್ಟೆ ಸೀಮಿತಗೊಳಿಸಿದ್ದು ಬಿಟ್ಟರೆ ವೈಯಕ್ತಿಕ ಜೀವನದಲ್ಲಿ ಶಿಸ್ತಿನ ಲಕ್ಷ್ಮಣ ರೇಖೆ ದಾಟಲಿಲ್ಲ ಎಂಬುದು ಅವರನ್ನು ಬಲ್ಲ ಎಲ್ಲರಿಗೂ ಗೊತ್ತು. ಹೀಗಿರುವಾಗ ಮೊಮ್ಮಗನ ವಿರುದ್ಧದ ಆರೋಪಗಳು ಮಗನ ಬಂಧನ ಅವರನ್ನು ಅಸಹಾಯಕತೆಗೆ ದೂಡಿದೆ.

ಪ್ರಮುಖವಾಗಿ ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಕ್ಕಟ್ಟಿಗೆ ಸಿಕ್ಕಿದ್ದಾರೆ. ಸ್ವಂತ ಅಣ್ಣನ ಮಗನ ವಿರುದ್ಧದ ಆರೋಪಗಳನ್ನು ಒಪ್ಪಿಕೊಳ್ಳಲೂ ಅಥವಾ ಸಮರ್ಥಿಸಲೂ ಆಗದ ನಿರಾಕರಿಸಲೂ ಆಗದ ಇಕ್ಕಟ್ಟಿನ ಸ್ಥಿತಿಗೆ ಬಲವಂತವಾಗಿ ದೂಡಲ್ಪಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಅವರು ದಿನಕ್ಕೊಂದರಂತೆ ಪತ್ರಿಕಾ ಗೋಷ್ಠಿ ಕರೆದು ನೀಡುತ್ತಿರುವ ಹೇಳಿಕೆಗಳು ಅವರೆಷ್ಟು ಗೊಂದಲದಲ್ಲಿದ್ದಾರೆ ಎಂಬುದನ್ನು ಋಜುವಾತು ಪಡಿಸುತ್ತದೆ. ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಮಾಡಿದ್ದ ಕುಮಾರಸ್ವಾಮಿ ಈಗ ಆತನಿಗೂ ತನಗೂ ಮೊದಲಿನಿಂದಲೂ ಸಂಪರ್ಕವೇ ಇಲ್ಲ ಎಂದು ಹೇಳುತ್ತಿರುವುದು, ಚುನಾವಣಾ ಪ್ರಚಾರ ಸಮಯದಲ್ಲಿ ಪ್ರಜ್ವಲ್ ಕುರಿತು ಆಡಿದ ಸಮರ್ಥನೆಯ ಮಾತುಗಳು ಈಗ ಅವರಿಗೆ ತಿರುಗು ಬಾಣವಾಗಿದೆ. ಹೀಗಾಗಿ ಅವರ ನಿಲುವುಗಳೇ ಗೊಂದಲಕ್ಕೆ ಸಿಕ್ಕಿ ಹೊಯ್ದಾಡುತ್ತಿವೆ. ಒಂದು ಕಡೆ ಕುಟುಂಬದ ಮರ್ಯಾದೆ ಕಾಪಾಡುವ ಕರ್ತವ್ಯ ಮತ್ತೊಂದು ಕಡೆ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಅನಿವಾರ್ಯತೆ ಇದರ ಜತೆಯಲ್ಲೇ ರಾಜಕೀಯ ವಿರೋಧಿಗಳು ತಮ್ಮನ್ನು ದುರ್ಬಲಗೊಳಿಸಲು ಹೂಡುತ್ತಿರುವ ತಂತ್ರಗಳಿಂದ ರಕ್ಷಿಸಿಕೊಳ್ಳಬೇಕಾದ ಮತ್ತು ಹೋರಾಡಬೇಕಾದ ಅಗತ್ಯಗಳ ನಡುವೆ ಸೂಕ್ತ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಇದೇ ಇನ್ನೊಂದು ರೀತಿಯಲ್ಲಿ ಅವರ ಹತಾಶೆಗೆ ಕಾರಣವಾಗಿದೆ. ಕುಟುಂಬದ ಸದಸ್ಯರ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಾಗ ಸೂಕ್ಷ್ಮತೆಯಿಂದ ವರ್ತಿಸುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಬೇಕಿದ್ದ ಕುಮಾರಸ್ವಾಮಿ ದಿನಕ್ಕೊಂದು ವಿಭಿನ್ನ ಮತ್ತು ಗೊಂದಲ ತುಂಬಿದ ಪ್ರತಿಕ್ರಿಯೆಗಳ ಮೂಲಕ ತಮ್ಮ ಅಸಹಾಯಕತೆಯನ್ನು ಪ್ರದರ್ಶನಕ್ಕಿಟಿದ್ದಾರೆ.

ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಪ್ರಜ್ವಲ್ ರೇವಣ್ಣ ವಿದೇಶದಲ್ಲೇ ಉಳಿದಿದ್ದಾರೆ. ಅವರು ವಾಪಸು ತಾಯ್ನಾಡಿಗೆ ಮರಳುವ ದಿನ ಖಚಿತವಾಗಿಲ್ಲ. ಆದರೆ ಅವರ ವಿರುದ್ಧ ಗುರುತರ ಪ್ರಕರಣ ದಾಖಲಿಸಿ ಈಗ ಕೇಂದ್ರ ಸರ್ಕಾರಕ್ಕೂ ಮಾಹಿತಿ ಹೋಗಿದೆ. ಅವರ ವಿರುದ್ಧ ನೋಟೀಸ್ ಜಾರಿಯಾಗಿದೆ. ವಿದೇಶದಲ್ಲಿರುವ ಆರೋಪಿಗಳನ್ನು ಕರೆ ತರಲು ಕೇಂದ್ರದ ತನಿಖಾ ಸಂಸ್ಥೆಗಳ ನೆರವು ಮಧ್ಯಪ್ರವೇಶ ಅಗತ್ಯ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನಾತ್ಮಕ ಪರಿಣಾಮಗಳು , ಫಲಿತಾಂಶಗಳು ಏನೇ ಇರಲಿ ಇಂಥ ಗುರುತರ ಪ್ರಕರಣದ ಆರೋಪಿಗಳನ್ನು ಕರೆತರಲು ಕೇಂದ್ರ ಸರ್ಕಾರ ರಾಜ್ಯದ ಪೊಲೀಸರಿಗೆ ನೆರವಾಗಬೇಕಾದ್ದು ಸಂವಿಧಾನಾತ್ಮಕ ಕರ್ತವ್ಯವೂ ಹೌದು. ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಪ್ರಕರಣದ ಗಂಭೀರತೆಯನ್ನು ಮರೆಮಾಚುತ್ತಿರುವುದು ಮೇಲ್ನೋಟಕ್ಕೇ ಸಾಬೀತಾಗಿದೆ. ಸ್ವಯಂ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಇಡೀ ಪ್ರಕರಣದಲ್ಲಿ ತಮ್ಮ ಮಿತ್ರ ಪಕ್ಷದ ನಾಯಕರ ಬೆಂಬಲಕ್ಕೆ ನಿಂತಿರುವ ಪರಿಣಾಮ ಪ್ರಕರಣದ ಗಂಭೀರತೆಯ ಬಗ್ಗೆ ಗಮನ ಹರಿಸಬೇಕಾಗಿದ್ದ ಕೇಂದ್ರ ಸರ್ಕಾರದ ಗೃಹ ಮತ್ತು ವಿದೇಶಾಂಗ ಸಚಿವಾಲಯಗಳು ಸಮಸ್ಯೆಯನ್ನು ಮುಂದೂಡುವ ತಂತ್ರಕ್ಕೆ ಶರಣಾಗಿವೆ. ರಾಷ್ಟ್ರ ಮಟ್ಟದಲ್ಲೂ ಈ ಪ್ರಕರಣ ಸದ್ದು ಮಾಡಿದ್ದರೂ ಅದರ ಗಂಭೀರತೆಯನ್ನು ಮರೆಮಾಚುವ ಕೆಲಸ ಸ್ವಯಂ ಅಧಿಕಾರದ ಸೂತ್ರ ಹಿಡಿದ ಪ್ರಮುಖರಿಂದಲೇ ನಡೆದಿದೆ. ಅಲ್ಲಿಗೆ ಬಿಜೆಪಿ ಸರ್ಕಾರ ಆರೋಪಿಗಳು ಮಿತ್ರ ಪಕ್ಷದವರು ಎಂಬ ಕಾರಣಕ್ಕೆ ಅವರ ಬೆಂಬಲಕ್ಕೆ ನಿಂತಿದೆ ಎಂಬುದು ಸಾಬೀತಾದಂತಾಗಿದೆ. ಸಣ್ಣ ಪುಟ್ಟ ಪ್ರಕರಣಗಳನ್ನೂ ದೊಡ್ಡದಾಗಿ ಬಿಂಬಿಸಿ ತನ್ನ ಸಾಧನೆ ಎಂದು ಸ್ವಯಂ ಪ್ರಚಾರ ಪಡೆಯುವ ಮೋದಿ ಸರ್ಕಾರಕ್ಕೆ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಗಂಭೀರತೆ ಅರ್ಥವಾಗಿಲ್ಲ ಎಂದರೆ ಸಾಮಾನ್ಯ ನಾಗರಿಕರೂ ನಂಬುವುದು ಕಷ್ಟ.

ಹಗರಣಕ್ಕೆ ಸಂಬಂಧಿಸಿದ ಪೆನ್ ಡ್ರೈವ್ ಸಾಮಾಜಿಕ ಜಾಲ ತಾಣಗಳಲ್ಲಿ ಮತ್ತು ಸಾರ್ವತ್ರಿಕವಾಗಿ ಪ್ರದರ್ಶನ ಗೊಳ್ಳಲು ಕಾರಣರಾದ ಆರೋಪದ ಮೇಲೆ ಹಾಸನದ ಕೆಲವು ಬಿಜೆಪಿ ಮುಖಂಡರನ್ನು ಬಂಧಿಸಲಾಗಿದೆ. ಯಥಾ ಪ್ರಕಾರ ರಾಜ್ಯ ವಿಧಾನಸಭೆಯ ಪ್ರತಿ ಪಕ್ಷದ ನಾಯಕ ಬಿಜೆಪಿಯ ಆರ್. ಅಶೋಕ್ ಈ ಪ್ರಕರಣದ ವಾಸ್ತವಾಂಶ ಅರಿತುಕೊಳ್ಳುವ ಪ್ರಯತ್ನವನ್ನೇ ಮಾಡದೇ ಕಾಲ್ಪನಿಕ ಆರೋಪಗಳನ್ನು ರಾಜ್ಯ ಸರ್ಕಾರದ ವಿರುದ್ಧ ಮಾಡುವ ಮೂಲಕ ನಗೆಪಾಟಲಿಗೆ ಈಡಾಗುತ್ತಿದ್ದಾರೆ. ಮತ್ತೊಂದು ಕಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಹಾಗೂ ಸಾಂದರ್ಭಿಕ ಸಾಕ್ಷ್ಯಗಳು ಮೇಲ್ನೋಟಕ್ಕೆ ಬಿಜೆಪಿ ಮುಖಂಡರ ವಿರುದ್ಧ ಕೇಳಿ ಬಂದಿರುವ ಈ ಸಂದರ್ಭದಲ್ಲಿ ಕುಮಾರಸ್ವಾಮಿ ಮತ್ತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಟೀಕಾ ಪ್ರಹಾರ ಮುಂದುವರೆಸುವ ಮೂಲಕ ತಮಗಿರುವ ಗೊಂದಲವನ್ನು ಪ್ರದರ್ಶಿಸಿದ್ದಾರೆ. ಕೆಲವೊಂದು ವಿಚಾರಗಳಲ್ಲಿ ಸತ್ಯ ಗೊತ್ತಿದ್ದೂ ಬಿಜೆಪಿ ನಾಯಕರತ್ತ ಆರೋಪಗಳನ್ನು ಮಾಡದ ನಿಸ್ಸಹಾಯಕ ಸ್ಥಿತಿ ಅವರದ್ದು.

ಮುಖ್ಯವಾಗಿ ಸಾಮಾಜಿಕ ಹಾಗೂ ಕಾನೂನಾತ್ಮಕ ಹೋರಾಟವಾಗಿ ರೂಪುಗೊಳ್ಳಬೇಕಿದ್ದ ಈ ಪ್ರಕರಣ ಕಾಂಗ್ರೆಸ್ ನಾಯಕರು ಮತ್ತು ದೇವೇಗೌಡರ ಕುಟುಂಬದ ನಡುವಿನ ಹೋರಾಟದ ವೇದಿಕೆಯಾಗಿ ಪರಿವರ್ತನೆಯಾಗಿರುವುದು ಮತ್ತೊಂದು ವಿಡಂಬನೆ, ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ ತಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಮೊದಲಿನಿಂದಲೂ ಅವರ ಜತೆಗೆ ತನಗೆ ಅಂತಹ ನಿಕಟ ಆತ್ಮೀಯತೆ ಇಲ್ಲ ಎಂದು ಕುಮಾರಸ್ವಾಮಿ ಹೇಳುತ್ತಿರುವುದು ಪ್ರಶ್ನಾರ್ಥಕವಾಗಿದೆ. ಕೇಂದ್ರ ಗೃಹ ಇಲಾಖೆಯಲ್ಲಿ ವಿದೇಶದಿಂದ ಬರುವ ಮತ್ತು ವಿದೇಶದಲ್ಲಿರುವವರಿಗೆ ಹೋಗುವ ಕರೆಗಳ ಮಾಹಿತಿ ಕಲೆ ಹಾಕುವ ಘಟಕವೊಂದಿದ್ದು ಪ್ರತಿಯೊಂದು ಕರೆಗಳ ಮೇಲೂ ಹದ್ದಿನ ಕಣ್ಣಿಟ್ಟಿರುತ್ತದೆ. ಈ ಪ್ರಕರಣದಲ್ಲಿ ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣರಿಂದ ಕರ್ನಾಟಕದಲ್ಲಿರುವ ಯಾರಿಗೆ ಪ್ರತಿನಿತ್ಯ ಕರೆಗಳು ಬರುತ್ತವೆ. ಯಾರು ಯಾರು ಅವರ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಕಲೆಹಾಕುವುದು ಕಷ್ಟವೇನಲ್ಲ. ಆದರೆ ರಾಜಕೀಯ ಸಂಬಂಧ ಮೈತ್ರಿ ಅದಕ್ಕೆ ಅಡ್ಡಗಾಲಾಗಿದೆ. ಇದೇ ಅವಕಾಶ ಬಳಸಿಕೊಂಡಿರುವ ಕಾಂಗ್ರೆಸ್ ಸರ್ಕಾರ ಪ್ರಕರಣದ ತನಿಖೆಯನ್ನು ದಿನೇ ದಿನೇ ಬಿಗಿಗೊಳಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರಿಗೂ ಇದು ಪ್ರತಿಷ್ಠೆಯ ಪ್ರಶ್ನೆ. ಪ್ರಜ್ವಲ್ ವಿದೇಶದಲ್ಲಿ ಸೆರೆಯಾಗಿ ಆತನನ್ನು ವಾಪಸು ಕರೆತಂದು ಕಾನೂನಿಗೆ ಒಪ್ಪಿಸಿದರೆ ಒಂದು ಸರ್ಕಾರದ ಮುಖ್ಯಸ್ಥರಾಗಿ ಸಿದ್ದರಾಮಯ್ಯ ಅವರಿಗೆ ಅದು ದಿಗ್ವಿಜಯ. ಅದು ಡಿ.ಕೆ.ಶಿವಕುಮಾರ್ ಅವರ ಪಾಲಿಗೂ ಮಹತ್ವದ ಯುದ್ಧವೊಂದನ್ನು ಗೆದ್ದ ಸಂಭ್ರಮವಾಗುತ್ತದೆ. ಒಕ್ಕಲಿಗ ಸಮುದಾಯದ ನಾಯಕತ್ವದ ಪಟ್ಟಕ್ಕಾಗಿ ಅವರ ಮತ್ತು ಗೌಡರ ಕುಟುಂಬದ ನಡುವೆ ಹೋರಾಟ ನಡಯುತ್ತಿರುವುದು ಗುಟ್ಟೇನಲ್ಲ. ಹೀಗಾಗಿ ಪ್ರಕರಣದಲ್ಲಿ ಒಬ್ಬ ಮಹತ್ವಾಕಾಂಕ್ಷಿ ರಾಜಕಾರಣಿಯಾಗಿ ಅವರು ರಾಜಕೀಯ ಲಾಭದ ದೂರದೃಷ್ಟಿ ಹೊಂದಿರುವುದು ಸಹಜವೇ. ಜೆಡಿಎಸ್ ದುರ್ಬಲವಾದಷ್ಟೂ ತಮಗೆ ರಾಜಕೀಯ ಲಾಭ ಎಂಬ ನಿರೀಕ್ಷೆ ಅವರದ್ದು.

ಒಟ್ಟಿನಲ್ಲಿ ಕಾನೂನಿನ ದೃಷ್ಟಿಯಲ್ಲಿ ಗಂಭೀರ ಸ್ವರೂಪದ್ದಾದ ಈ ಪ್ರಕರಣ ದಿನೇ ದಿನೇ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿರುವುದು ದುರಂತ.

100%

-ಯಗಟಿ ಮೋಹನ್
yagatimohan@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ. ಹರಿಪ್ರಸಾದ್

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Idre Nemdiyaag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

SCROLL FOR NEXT