ದುಬೈ ರಿಯಲ್ ಎಸ್ಟೇಟ್ (ಸಂಗ್ರಹ ಚಿತ್ರ) online desk
ಅಂಕಣಗಳು

Dubai Real Estate ಹೂಡಿಕೆ ಲಾಭದಾಯಕವೆ? (ಹಣಕ್ಲಾಸು)

ಅಲ್ಲಿ ತಯಾರಾಗುತ್ತಿರುವ 100 ಮನೆ, ಅಪಾರ್ಟ್ಮೆಂಟ್ಗಳಲ್ಲಿ 70 ಮನೆಗಳನ್ನು ಖರೀದಿಸುತ್ತಿರುವವರು ಭಾರತೀಯರು ಎನ್ನುವ ಅಂಕಿ-ಅಂಶ ಅಚ್ಚರಿಗೆ ತಳ್ಳುತ್ತದೆ. (ಹಣಕ್ಲಾಸು-426)

ದುಬೈ (Dubai) ಎಂದರೆ ಇಂದಿಗೆ ಅದು ಕನಸಿನ ನಗರಿ ಎನ್ನುವ ಮಟ್ಟಕ್ಕೆ ಬದಲಾಗಿದೆ. ಜಗತ್ತಿನಾದ್ಯಂತ ಇರುವ ವಿಶೇಷ ಪ್ರತಿಭೆಗಳನ್ನು ದುಬೈ ತನ್ನೆಡೆಗೆ ಸೆಳೆದುಕೊಳ್ಳುತ್ತಿದೆ. ದುಬೈ ಎನ್ನುವುದು ಮರಳುಗಾಡಾಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಬಹಳ ವರ್ಷಗಳ ಹಿಂದೆ ಹೋಗುವುದು ಬೇಡ. 99 ರಲ್ಲಿ ನಾನು ಪ್ರಥಮ ಬಾರಿಗೆ ದುಬೈನಲ್ಲಿ ಇಳಿದಾಗ ಒಂದು ಕಟ್ಟಡಕ್ಕೂ ಇನ್ನೊಂದು ಕಟ್ಟಡಕ್ಕೂ ನಡುವೆ ಖಾಲಿ ನಿವೇಶನಗಳು ಕಾಣಲು ಸಿಗುತ್ತಿತ್ತು.

ಮತ್ತು ಅಲ್ಲಿ ಮರಳು ಕೂಡ ಹೇರಳವಾಗಿರುತ್ತಿತ್ತು. ಅಂದಿಗೆ ಇನ್ನು ಮೆಟ್ರೋ ಇರಲಿಲ್ಲ. ಟ್ರಾಫಿಕ್ ಕೂಡ ಇಂದಿನ ಮಟ್ಟದಲ್ಲಿ ಇರಲಿಲ್ಲ. ಇಂದಿಗೆ ಮೆಟ್ರೋ ಇದ್ದು ಕೂಡ ಟ್ರಾಫಿಕ್ ಬಹಳವಿದೆ. ದುಬೈ ಕಳೆದ ಮೂರು ದಶಕದಲ್ಲಿ ಅಮೂಲಾಗ್ರ ಬದಲಾವಣೆಯನ್ನು ಕಂಡಿದೆ. ಹಿಂದೆ ಭಾರತೀಯರು ಅಥವಾ ಇನ್ನ್ಯಾವುದೇ ದೇಶದವರು ಕೂಡ ಅಲ್ಲಿ ನೆಲವನ್ನು, ಮನೆಯನ್ನು ಹೊಂದುವಂತಿರಲಿಲ್ಲ. ವ್ಯಾಪಾರ ಮಾಡುವಾಗ ಅಲ್ಲಿನ ಸ್ಥಳೀಯರ ಅವಶ್ಯಕತೆ ಇಲ್ಲದೆ ಅದು ಸಾಧ್ಯವಾಗುತ್ತಿರಲಿಲ್ಲ. ದುಬೈ ನಡೆಸುವವರಿಗೆ ತಮ್ಮ ಬಳಿ ತೈಲವಿಲ್ಲ ಎನ್ನುವುದು ಗೊತ್ತು. ಹೀಗಾಗಿ ಜಾಗತಿಕವಾಗಿ ಪ್ರಸ್ತುತರಾಗಿರಬೇಕಾದರೆ ಏನು ಮಾಡಬೇಕು ಎನ್ನುವುದು ಕೂಡ ಅವರಿಗೆ ಗೊತ್ತು. ಹೀಗಾಗಿ ಅವರು ತಮ್ಮ ನಿಲುವುಗಳಲ್ಲಿ ಬಹಳಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ.

ಇಂದಿಗೆ ದುಬೈ ನಲ್ಲಿ ಯಾವುದೇ ದೇಶದ ಜನ ಕೂಡ ಮನೆಯನ್ನು ಹೊಂದಬಹುದು. ಈ ರೀತಿಯ ಬದಲಾವಣೆ 2002ರಲ್ಲಿ ತೆಗೆದುಕೊಂಡ ನಿರ್ಧಾರದಿಂದ ಶುರುವಾಯ್ತು. ಇಂದಿಗೆ ಆ ದೇಶದ ಮಟ್ಟಿಗೆ ಈ ನಿರ್ಧಾರ ಗೇಮ್ ಚೇಂಜರ್ ಎನ್ನಿಸಿಕೊಂಡಿದೆ. ಏಕೆಂದರೆ ಇಂದಿಗೆ ರಿಯಲ್ ಎಸ್ಟೇಟ್ ದುಬೈ (Real estate investment in Dubai) ನೆಲದ ಅತ್ಯಂತ ಲಾಭದಾಯಕ ಉದ್ಯಮ ಎನ್ನಿಸಿಕೊಂಡಿದೆ. ಅಲ್ಲಿ ತಯಾರಾಗುತ್ತಿರುವ 100 ಮನೆ, ಅಪಾರ್ಟ್ಮೆಂಟ್ಗಳಲ್ಲಿ 70 ಮನೆಗಳನ್ನು ಖರೀದಿಸುತ್ತಿರುವವರು ಭಾರತೀಯರು ಎನ್ನುವ ಅಂಕಿ-ಅಂಶ ಅಚ್ಚರಿಗೆ ತಳ್ಳುತ್ತದೆ.

ಅಲ್ಲಿನ ಸ್ಥಳೀಯ ಅರಬ್ಬಿ ಜನಸಂಖ್ಯೆ 10 ಪ್ರತಿಶತವಾಗಿದೆ. ಉಳಿದ 90 ಪ್ರತಿಶತ ಎಲ್ಲಾ ದೇಶಗಳ, ಧರ್ಮಗಳ ಜನರಿಂದ ತುಂಬಿದೆ. ಇದರಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಫಿಲಿಫೈನ್ಸ್ ದೇಶಗಳಿಂದ ವಲಸೆ ಹೋದ ಜನರ ಸಂಖ್ಯೆ 54 ಪ್ರತಿಶತವಾಗುತ್ತದೆ. ಆದರೆ ಭಾರತೀಯರು ಮಾತ್ರ ಅತಿ ಹೆಚ್ಚಿನ ಹೂಡಿಕೆಯನ್ನು ಅದರಲ್ಲೂ ರಿಯಲ್ ಎಸ್ಟೇಟನಲ್ಲಿ ಹೆಚ್ಚಿನ ಹೂಡಿಕೆಯನ್ನು ಮಾಡುತ್ತಿದ್ದಾರೆ. ಇಲ್ಲಿನ ಸಾಹುಕಾರ ಜನರು ದುಬೈನಲ್ಲಿ ಮನೆ ಹೊಂದುವುದು ಅತ್ಯಂತ ಸಾಮಾನ್ಯ ಎನ್ನುವಂತಾಗಿದೆ. ಇದಕ್ಕೆ ಕಾರಣಗಳೇನಿರಬಹುದು? ಎನ್ನುವುದನ್ನು ಪರಾಮರ್ಶಿಸೋಣ.

  1. ಭಾರತದ ಮಹಾನಗರಗಳಿಗಿಂತ ರಿಯಲ್ ಎಸ್ಟೇಟ್ ಬೆಲೆ ಕಡಿಮೆಯಿದೆ: ಭಾರತದ ಮೆಟ್ರೋ ಸಿಟಿಗಳು, ಬೆಂಗಳೂರು, ಹೈದರಾಬಾದ್ ನಗರಗಳಲ್ಲಿ ಮೂಲ ಸೌಕರ್ಯಗಳು ಇಲ್ಲವಾಗಿವೆ. ಅಲ್ಲದೆ ಈ ಎಲ್ಲಾ ನಗರಗಳು ಅತಿ ಹೆಚ್ಚು ಜನ ದಟ್ಟಣೆಯನ್ನು ಹೊಂದಿವೆ. ಬದುಕು ಕಟ್ಟಿಕೊಳ್ಳುವ ಭರದಲ್ಲಿ ಜನ ಇಲ್ಲಿ ಮನೆಗಳನ್ನು ಖರೀದಿ ಮಾಡಿರುವುದು ಸತ್ಯವಾದರೂ, ಒಂದು ಹಂತ ತಲುಪಿದ ಮೇಲೆ ಜನರಲ್ಲಿ ಉನ್ನತ ಸೌಕರ್ಯ, ನೆಮ್ಮದಿ, ಭದ್ರತೆಯ ಕಡೆಗೆ ಮುಖ ಮಾಡುತ್ತಾರೆ. ಅಲ್ಲದೆ ಮೂಲ ಸೌಕರ್ಯಗಳ ಕೊರತೆಯಿರುವ ಇಲ್ಲಿನ ಮನೆಗಳು ಕೂಡ ಕೋಟಿ ರೂಪಾಯಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದಕ್ಕಿಂತ ಎಲ್ಲಾ ರೀತಿಯಲ್ಲೂ ಉತ್ತಮ ದರ್ಜೆಯಲ್ಲಿರುವ ಮನೆಗಳಿಗೆ 20 ಪ್ರತಿಶತ ಹೆಚ್ಚಾದರೂ ಜನ ಕೊಡಲು ಹಿಂದೆ ಮುಂದೆ ನೋಡುವುದಿಲ್ಲ. ದುಬೈ ಇದರ ಲಾಭ ಪಡೆದುಕೊಳ್ಳುತ್ತಿದೆ.

  2. ಹೂಡಿಕೆಯ ಮೇಲೆ ಹೆಚ್ಚಿನ ಲಾಭವನ್ನು ತಂದು ಕೊಡುತ್ತಿದೆ: ಉತ್ತಮ ಜಾಗದಲ್ಲಿ, ಉತ್ತಮ ಬಿಲ್ಡರ್ ಬಳಿ ಮನೆಯನ್ನು ಕೊಂಡರೆ 8 ರಿಂದ 12 ಪ್ರತಿಶತದವರೆಗೆ ವಾರ್ಷಿಕ ಆದಾಯವನ್ನು ನಿರೀಕ್ಷಿಸಬಹುದು. ಅವೆರೆಜ್ 10 ಪ್ರತಿಶತ ಬಾಡಿಗೆಯನ್ನು ಹೂಡಿಕೆ ತಂದು ಕೊಡುತ್ತದೆ. ಅಲ್ಲದೆ ಇಲ್ಲಿ ಬಾಡಿಗೆ ಕೊಡದೆ ಸತಾಯಿಸುವುದು, ಮನೆ ಬಿಡಲು ಹಿಂಸೆ ಮಾಡುವುದು ಈ ರೀತಿಯ ಜಂಜಾಟವಿಲ್ಲ. ಅಲ್ಲದೆ ಬಾಡಿಗೆ ಹಣವನ್ನು ಪ್ರತಿ ವರ್ಷ, ಪೂರ್ಣ ವರ್ಷದ ಬಾಡಿಗೆಯನ್ನು ಮುಂಗಡವಾಗಿ ಕೊಡುವ ಪರಿಪಾಠ ಇಲ್ಲಿದೆ. ಕೇವಲ ಹೂಡಿಕೆ ದೃಷ್ಟಿಯಿಂದ ನೋಡಿದರೂ ಕೂಡ ಇದೊಂದು ಉತ್ತಮ ಅವಕಾಶ ಎನ್ನುವುದು ಹೂಡಿಕೆದಾರನಿಗೆ ಮನದಟ್ಟಾಗುತ್ತದೆ. ದುಬೈ ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದೆ.

  3. ಇನ್ಕಮ್ ಟ್ಯಾಕ್ಸ್ ಎನ್ನುವ ಪದ ಇಲ್ಲಿಲ್ಲ: ಹೌದು ಸರಿಯಾಗಿ ಓದಿದಿರಿ. ಕೆಲಸ ಮಾಡಿ ಗಳಿಸಿದ ಅಷ್ಟೂ ಹಣ ನಿಮ್ಮದು. ಅದರ ಮೇಲೆ ಯಾವುದೇ ತೆರಿಗೆಯನ್ನು ನೀವು ನೀಡಬೇಕಾಗಿಲ್ಲ. ಮನೆಯ ಮೇಲಿನ ಹೂಡಿಕೆಯಿಂದ ಬಂದ ಬಾಡಿಗೆ ಹಣ ಕೂಡ ನಿಮ್ಮ ಆದಾಯವಷ್ಟೇ, ಹೀಗಾಗಿ ಅದರ ಮೇಲೂ ಯಾವುದೇ ತೆರಿಗೆ ಇಲ್ಲ. ನೀವು ಗಳಿಸಿದ, ಉಳಿಸಿದ ಯಾವ ಹಣದ ಮೇಲೂ ತೆರಿಗೆ ಇಲ್ಲ. ಇದು ಭಾರತೀಯರ ಕಿವಿಗೆ ಇಂಪಾದ ಕೊಳಲ ವಾದನದಂತೆ ಕೇಳಿಸುತ್ತದೆ. ಹೀಗಾಗಿ ಹೂಡಿಕೆ ಮಾತ್ರವಲ್ಲದೆ, ದುಬೈ ದೇಶವನ್ನು ಮನೆಯನ್ನಾಗಿ ಕೂಡ ಅಪ್ಪಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. 2023ರಲ್ಲಿ ಭಾರತದಿಂದ ವಲಸೆ ಹೋದ ಶ್ರೀಮಂತರಲ್ಲಿ ಹೆಚ್ಚಿನವರು ಆಯ್ಕೆ ಮಾಡಿಕೊಂಡದ್ದು ದುಬೈ ದೇಶವನ್ನು ಎನ್ನುವುದು ಇದು ಪುಷ್ಟಿಕರಿಸುತ್ತದೆ.

  4. ಕ್ಯಾಪಿಟಲ್ ಗೈನ್ ಕೂಡ ಇಲ್ಲ!: ಹೌದು, ಭಾರತದಲ್ಲಿ ನಮ್ಮ ಹೂಡಿಕೆಯಲ್ಲಿ ಹೆಚ್ಚಳವಾಗಿ ನಾವು ಅದನ್ನು ಮಾರಿದರೆ ಲಾಭದ ಅಂಶದ ಮೇಲೆ ಲೆಕ್ಕಾಚಾರ ಮಾಡಿ ಹನ್ನೆರೆಡೂವರೆ ಅಥವಾ ಇಪ್ಪತ್ತು ಪ್ರತಿಶತ ಹಣವನ್ನು ತೆರಿಗೆ ರೂಪದಲ್ಲಿ ಕಟ್ಟಬೇಕಾಗುತ್ತದೆ. ಆದರೆ ದುಬೈನಲ್ಲಿ ಇದರ ಮೇಲೆ ಅಂದರೆ ಲಾಭದ ಮೇಲೆ ಕೂಡ ಯಾವುದೇ ತೆರಿಗೆ ಕಟ್ಟುವಂತಿಲ್ಲ . ಹೀಗಾಗಿ ಹೂಡಿಕೆದಾರರಿಗೆ ಇದು ಸುವರ್ಣಾವಕಾಶ ಎನ್ನುವಂತೆ ಕಂಡರೆ ಅದರಲ್ಲಿ ಅತಿಶಯೋಕ್ತಿ ಏನಿಲ್ಲ. ಹೀಗಾಗಿ ದುಬೈನಲ್ಲಿ ಮನೆ ಕೊಳ್ಳುವ ಭಾರತೀಯ ಸಂಖ್ಯೆ ಬಹಳ ಹೆಚ್ಚಾಗಿದೆ.

  5. ದುಬೈಗಿಂತ ಸೇಫ್ ನಗರ/ದೇಶ ಬೇರಿಲ್ಲ: ದುಬೈನಲ್ಲಿ ಕಳ್ಳತನ, ಕ್ರೈಂ ಗಳು ಬಹಳ ಕಡಿಮೆ ಅಥವಾ ಇಲ್ಲವೆನ್ನಬಹುದು. ಇಲ್ಲಿನ ಕಾನೂನು ಬಹಳ ಕಠಿಣವಿರುವ ಕಾರಣ ಇಲ್ಲಿ ಮಹಿಳೆಯರು ಮತ್ತು ಮಕ್ಕಳು ಜೊತೆಗೆ ಎಲ್ಲರೂ ಸೇಫ್ ಎನ್ನುವ ಭಾವದಲ್ಲಿ ಬದುಕಬಹುದು. ಭಾರತದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಜೊತೆಗೆ ಅಪರಾಧಗಳು ಕೂಡ ಹೆಚ್ಚುತ್ತಿದೆ. ಅದರಲ್ಲೂ ಹೆಂಗಸರು ಮತ್ತು ಮಕ್ಕಳು ಸಂಜೆಯ ಮೇಲೆ ಓಡಾಡುವುದು ಕಷ್ಟ ಎನ್ನುವ ಪರಿಸ್ಥಿತಿ ದೇಶದ ಹಲವು ನಗರದಲ್ಲಿದೆ. ಈ ನಿಟ್ಟಿನಲ್ಲಿ ನೋಡಿದಾಗ ಕೂಡ ದುಬೈ ಉತ್ತಮ ಆಯ್ಕೆ ಎನ್ನುವುದು ನಿರ್ವಿವಾದ.

  6. ದುಬೈ ಸರಕಾರ ನೀಡುತ್ತಿದೆ ಗೋಲ್ಡನ್ ವೀಸಾ: ನೀವು ಪ್ರಸಿದ್ಧ ಮತ್ತು ನೋಂದಾಯಿತ ಬಿಲ್ಡರ್ಗಳಿಂದ ಮನೆಯನ್ನು ಖರೀದಿಸಿದರೆ ಅವರು ಪೂರ್ಣ ಕುಟುಂಬಕ್ಕೆ ಗೋಲ್ಡನ್ ವೀಸಾ ನೀಡುವ ಆಫರ್ ನೀಡುತ್ತಿದ್ದಾರೆ. ಐದು, ಹತ್ತು ವರ್ಷಗಳ ಕಾಲ ದುಬೈನಲ್ಲಿ ನೆಲೆ ನಿಲ್ಲಲು ಈ ವೀಸಾ ಸಹಾಯ ಮಾಡುತ್ತದೆ. ಇದರ ಜೊತೆಗೆ ಈ ವೀಸಾ ಕೊಡಿಸುವ ಕೆಲಸದ ಪೂರ್ಣ ಜವಾಬ್ದಾರಿಯನ್ನು ಕೂಡ ಈ ರಿಯಲ್ ಎಸ್ಟೇಟ್ ಸಂಸ್ಥೆಗಳು ವಹಿಸಿಕೊಳ್ಳುತ್ತವೆ. ಇದು ಕೂಡ ಹೂಡಿಕೆದಾರರಿಗೆ ವರದಾನದಂತೆ ಕಾಣುತ್ತಿದೆ.

  7. ದುಬೈ ವೇಗವಾಗಿ ಬೆಳೆಯುತ್ತಿದೆ: ಇಲ್ಲಿನ ಹೂಡಿಕೆ, ವ್ಯಾಪಾರ ಎಲ್ಲವೂ ಅಭಿವೃದ್ಧಿ ಕಾಣುತ್ತಿದೆ. ಮುಂದಿನ ಹತ್ತಾರು ವರ್ಷದಲ್ಲಿ ಹೇಗಿರಬೇಕು ಎನ್ನುವ ಕನಸು ಇಲ್ಲಿನ ಸರಕಾರಕ್ಕಿದೆ. ಹೀಗಾಗಿ ಇಲ್ಲಿನ ಹೂಡಿಕೆ ವೃದ್ಧಿಯಾಗುವ ಸಾಧ್ಯತೆ ಕೂಡ ಬಹಳವಿದೆ.

ಮೇಲಿನ ಅಂಶಗಳ ಜೊತೆಗೆ ಇನ್ನೂ ಹಲವಾರು ಸಣ್ಣಪುಟ್ಟ ಮತ್ತು ವ್ಯಕ್ತಿಗತ ಕಾರಣಗಳು ಕೂಡ ದುಬೈನಲ್ಲಿ ಮನೆ ಖರೀದಿಸಲು ಮತ್ತು ಹೂಡಿಕೆ ಮಾಡಲು ಪ್ರಚೋದಿಸುವ ಅಂಶಗಳಾಗಿವೆ. ಇದರ ಜೊತೆಗೆ ಗಮನಿಸಬೇಕಾದ ಅಂಶವೆಂದರೆ ದುಬೈ ಅಮೇರಿಕಾ ದೇಶದೊಂದಿಗೆ ಉತ್ತಮ ಬಾಂಧ್ಯವವನ್ನು ಹೊಂದಿದೆ. ಡಾಲರ್ ಮತ್ತು ದಿರಾಮ್ ಹಲವಾರು ದಶಕದಿಂದ 3.673 ವಿನಿಮಯ ದರವನ್ನು ಹೊಂದಿದೆ. ಇದು ದುಬೈ ಅಭಿವೃದ್ಧಿಗೆ ಪ್ರಮುಖ ಕಾರಣವಾಗಿದೆ.

ಇದೆ ಕಾರಣ ಕುಸಿತಕ್ಕೂ ಕಾರಣವಾಗಬಹುದು. ಏಕೆಂದರೆ ಅಮೇರಿಕಾ ಎಕಾನಮಿ ಹೇಳಿಕೊಳ್ಳುವ ಮಟ್ಟದಲ್ಲಿಲ್ಲ. ಅಮೇರಿಕಾ ಕುಸಿದರೆ ಅದು ಖಂಡಿತ ದುಬೈ ಕುಸಿತಕ್ಕೂ ಕಾರಣವಾಗುತ್ತದೆ. ಅಲ್ಲದೆ ಇಂದಿನ ದಿನದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ಇದು ಆಗುವುದಿಲ್ಲ ಎಂದು ಹೇಳಿಕೊಳ್ಳುವ ಸನ್ನಿವೇಶ ಇಂದಿಲ್ಲ. ಹೀಗಾಗಿ ಜಾಗತಿಕ ರಾಜಕೀಯ ಮತ್ತು ದುಬೈ ಸುತ್ತಮುತ್ತ ದೇಶಗಳ ರಾಜಕೀಯ ಮತ್ತು ಆರ್ಥಿಕ ಭದ್ರತೆಯನ್ನು ಕೂಡ ಗಮನಿಸಬೇಕಾಗುತ್ತದೆ.

ಕೊನೆಮಾತು: ದುಬೈ ನಲ್ಲಿ ಹೂಡಿಕೆ ಖಂಡಿತ ಒಳ್ಳೆಯ ಅವಕಾಶ. ಆದರೆ ಅಲ್ಪಸ್ವಲ್ಪ ಹಣವಿದ್ದವರು ಹೂಡಿಕೆ ಮಾಡುವ ಮುನ್ನ ಚಿಂತಿಸಬೇಕಾಗುತ್ತದೆ. ಹೂಡಿಕೆದಾರರ ಜೇಬು ಭದ್ರವಿದ್ದರೆ ಈ ಮಟ್ಟಿನ ಅಪಾಯವನ್ನು ಖಂಡಿತ ತೆಗೆದುಕೊಳ್ಳಬೇಕು. ಅಪಾಯವಿಲ್ಲದ ಹೂಡಿಕೆಯಿಲ್ಲ ಎನ್ನುವ ಇಂದಿನ ದಿನದಲ್ಲಿ ಇದು ನಿಜಕ್ಕೂ ಅಳೆದುತೂಗಿದ ಅಪಾಯ. ಹೀಗಾಗಿ ಸ್ಥಿತಿವಂತರು ಇಲ್ಲಿ ಹೂಡಿಕೆ ಮಾಡಬಹುದು. ಹಾಗೊಮ್ಮೆ ಮಾರುಕಟ್ಟೆ ಕುಸಿತ ಕಂಡರೂ ದುಬೈ ಮತ್ತೆ ಪುಟಿದೇಳುತ್ತದೆ . ಇದನ್ನು ಕಳೆದ ಮೂರು ದಶಕದಿಂದ ಕಂಡ ಅನುಭವ ನನ್ನದು.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT