ಅಂಕಣಗಳು

ಜಗತ್ತಿನ ಗಮನ ಸೆಳೆಯಲಿದೆ ಪುಟಿನ್ ದೆಹಲಿ ಭೇಟಿ (ಜಾಗತಿಕ ಜಗಲಿ)

ಭಾರತ ಯಾಕೆ ರಷ್ಯಾವನ್ನು ಬಹಿರಂಗವಾಗಿ ಟೀಕಿಸುವುದಿಲ್ಲ ಎಂದು ಬಹಳಷ್ಟು ಜನರು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರ ಇತಿಹಾಸ ಮತ್ತು ಭೂಗೋಳದಲ್ಲಿದೆ. ಹಲವಾರು ದಶಕಗಳ ಕಾಲ, ಬಹಳಷ್ಟು ದೇಶಗಳು ನಮಗೆ ನೆರವಾಗಲು ನಿರಾಕರಿಸಿದಾಗಲೂ ಸೋವಿಯತ್ ಒಕ್ಕೂಟ...

ಡಿಸೆಂಬರ್ ತಿಂಗಳ ಆರಂಭದಲ್ಲಿ (ಡಿಸೆಂಬರ್ 4, 5ರಂದು) ಉದ್ದೇಶಿಸಲಾಗಿರುವ ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿ ಕೇವಲ ಇನ್ನೊಂದು ಉನ್ನತ ಮಟ್ಟದ ಭೇಟಿ, ಸಭೆ ಮಾತ್ರವೇ ಅಲ್ಲ. ನಿರ್ಬಂಧಗಳು, ಸುಂಕಗಳು, ಮತ್ತು ರಾಜಕೀಯ ಒತ್ತಡಗಳ ಮುಂದೆ ಭಾರತ ಕ್ರಮೇಣ ಮಂಡಿ ಊರಬಹುದು ಎಂದು ನಿರೀಕ್ಷಿಸಿದ್ದ ವಾಷಿಂಗ್ಟನ್, ಬ್ರುಸೆಲ್ಸ್, ಮತ್ತು ಇತರ ಪಾಶ್ಚಾತ್ಯ ರಾಜಧಾನಿಗಳಲ್ಲಿ ಪುಟಿನ್ ಭಾರತ ಭೇಟಿ ಈಗಾಗಲೇ ಚರ್ಚೆಯ ವಿಚಾರವಾಗಿದೆ. ಆದರೆ, ನವದೆಹಲಿ ತಾನು ಜಗತ್ತಿನ ಮಾತಿಗೆ ಕಿವಿ ಕೊಡುತ್ತೇನೆ, ಆದರೆ ತನ್ನ ನಿರ್ಧಾರಗಳನ್ನು ರಾಷ್ಟ್ರೀಯ ಹಿತಾಸಕ್ತಿಗಳ ಆಧಾರದಲ್ಲಿ ತಾನೇ ತೆಗೆದುಕೊಳ್ಳುತ್ತೇನೆ ಎನ್ನುವುದನ್ನು ಸಾಬೀತುಪಡಿಸಿದೆ.

ಪುಟಿನ್ ಮತ್ತು ಮೋದಿ 23ನೇ ಭಾರತ - ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದು, 2021ರ ಬಳಿಕ ಮೊದಲ ಬಾರಿಗೆ ಪುಟಿನ್ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಭೇಟಿಯ ಸಮಯವೂ ಸಹ ವಿಶೇಷವಾಗಿದೆ. ಕಳೆದ ಬಹುತೇಕ ಮೂರು ವರ್ಷಗಳ ಅವಧಿಯಲ್ಲಿ, ಅದರಲ್ಲೂ ಭಾರತ ರಷ್ಯಾದ ರಿಯಾಯಿತಿ ದರದ ತೈಲದ ಅತಿದೊಡ್ಡ ಗ್ರಾಹಕನಾದ ಬಳಿಕವಂತೂ ಪಾಶ್ಚಾತ್ಯ ದೇಶಗಳು ಭಾರತ - ರಷ್ಯಾ ಸಂಬಂಧವನ್ನು ಮುರಿಯಲು ಭಾರೀ ಪ್ರಯತ್ನ ನಡೆಸಿದ್ದವು. ರಷ್ಯಾದ ರಿಯಾಯಿತಿಗಳು ಭಾರತಕ್ಕೆ ಬಹುತೇಕ 13 ಬಿಲಿಯನ್ ಡಾಲರ್ ಉಳಿಸಲು ನೆರವಾಗಿದ್ದು, ಇತರ ದೇಶಗಳು ಪರದಾಡುತ್ತಿರುವಾಗ ಭಾರತದ ಇಂಧನ ದರವನ್ನು ಸ್ಥಿರವಾಗಿಡಲು ಸಹಾಯಕವಾಗಿದೆ. ಜಾಗತಿಕ ತೈಲ ದರವನ್ನು ನಿಯಂತ್ರಣದಲ್ಲಿಡುವ ಸಲುವಾಗಿ ಇದೇ ಅಮೆರಿಕ ಹಿಂದೆ ಭಾರತದ ಸಹಾಯ ಕೇಳಿತ್ತು!

ಭಾರತ ಯಾಕೆ ರಷ್ಯಾವನ್ನು ಬಹಿರಂಗವಾಗಿ ಟೀಕಿಸುವುದಿಲ್ಲ ಎಂದು ಬಹಳಷ್ಟು ಜನರು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರ ಇತಿಹಾಸ ಮತ್ತು ಭೂಗೋಳದಲ್ಲಿದೆ. ಹಲವಾರು ದಶಕಗಳ ಕಾಲ, ಬಹಳಷ್ಟು ದೇಶಗಳು ನಮಗೆ ನೆರವಾಗಲು ನಿರಾಕರಿಸಿದಾಗಲೂ ಸೋವಿಯತ್ ಒಕ್ಕೂಟ ಭಾರತದೊಡನೆ ದೃಢವಾಗಿ ನಿಂತಿತ್ತು. ಬಹಳಷ್ಟು ಭಾರತೀಯರು ಇಂದಿಗೂ ರಷ್ಯನ್ ನಿಯತಕಾಲಿಕೆಗಳನ್ನು ಓದಿದ್ದನ್ನು, ಮೊದಲ ಬಾರಿಗೆ ರಷ್ಯನ್ ಆಹಾರ ಸೇವಿಸಿದ್ದನ್ನು ನೆನಪಿಟ್ಟುಕೊಂಡಿದ್ದಾರೆ. ಭಾರತ ರಷ್ಯಾಗಳದ್ದು ಹಲವು ತಲೆಮಾರುಗಳಿಂದ ವೃದ್ಧಿಸುತ್ತಾ ಬಂದ ಸಂಬಂಧವಾಗಿದೆ. ಈ ಸಂಬಂಧವನ್ನು ಓರ್ವ ಭಾರತೀಯನ ಹೇಳಿಕೆ ಸ್ಪಷ್ಟವಾಗಿ ವಿವರಿಸಿದೆ: "ಇತರರು ದೂರದಲ್ಲಿ ನೆಮ್ಮದಿಯಾಗಿರುವಾಗ, ನಮ್ಮಿಂದ ಮೇಲಿರುವ ಎರಡು ದೊಡ್ಡ ರಾಷ್ಟ್ರಗಳೊಡನೆ ಹೊಡೆದಾಟ ನಮಗೆ ಸೂಕ್ತವಲ್ಲ. ನಮ್ಮ ಭದ್ರತೆಗೆ ಇದು ಪೂರಕವಾಗಿಲ್ಲ".

ಈ ವಿಚಾರಕ್ಕೆ ಒಂದು ಪ್ರಾಯೋಗಿಕ ಆಯಾಮವೂ ಇದೆ. ಹಲವಾರು ವರ್ಷಗಳ ಕಾಲ, ಪಾಶ್ಚಾತ್ಯ ದೇಶಗಳು ಭಾರತಕ್ಕೆ ಆಧುನಿಕ ರಕ್ಷಣಾ ಉಪಕರಣಗಳ ಮಾರಾಟ ಮಾಡಲು ನಿರಾಕರಿಸಿದ್ದವು. ಆದ್ದರಿಂದಲೇ ಇಂದು ಭಾರತದ ಮಿಲಿಟರಿ ಹಾರ್ಡ್‌ವೇರ್‌ಗಳು ರಷ್ಯಾ ನಿರ್ಮಿತವಾಗಿವೆ. ಯಾವುದೇ ಗಡಿಯಲ್ಲಿ ಬಿಕ್ಕಟ್ಟು ಆರಂಭಗೊಂಡರೆ, ಭಾರತ ಇದ್ದಕ್ಕಿದ್ದಂತೆ ತನ್ನ ಬಹುದೊಡ್ಡ ರಕ್ಷಣಾ ಪೂರೈಕೆದಾರನೊಡನೆ ಸಂಬಂಧ ಮುರಿದುಕೊಳ್ಳಲು ಸಾಧ್ಯವಿಲ್ಲ. ಆದರೆ ಪಾಶ್ಚಾತ್ಯ ಜಗತ್ತು ಈ ವಾಸ್ತವವನ್ನು ಮರೆತುಬಿಡುತ್ತದೆ. ಹಾಗೆ ನೋಡಿದರೆ, ಭಾರತ ರಷ್ಯನ್ ತೈಲವನ್ನು ಅಧಿಕೃತ ಗರಿಷ್ಠ ದರದೊಳಗೆ ಖರೀದಿಸಿದೆ. ಆದ್ದರಿಂದ ಇದು ಪಾಶ್ಚಾತ್ಯ ನೀತಿಗಳ ಉಲ್ಲಂಘನೆಯಾಗದೆ, ಅದರ ನಿಯಮಗಳ ಭಾಗವಾಗುತ್ತದೆ. ಈ ಮೂಲಕ ಭಾರತ ಜಾಗತಿಕ ತೈಲಾಘಾತವನ್ನು ತಡೆಯಲು ನೆರವಾಗಿದೆ.

ಜಿ20 ಶೃಂಗಸಭೆಯ ಸಂದರ್ಭದಲ್ಲಿ, ಭಾರತ ಜಗತ್ತಿನ ನಡುವೆ ಒಂದು ಸೇತುವೆಯಾಗಿ, ಜಾಗರೂಕವಾಗಿ ರೂಪಿಸಿದ ಹೇಳಿಕೆಯನ್ನು ಒಪ್ಪಿಕೊಳ್ಳುವಂತೆ ರಷ್ಯಾದ ಮನ ಒಲಿಸಿತ್ತು. ಯುರೋಪ್ ಈ ಹೇಳಿಕೆಯನ್ನು ಬೆಂಬಲಿಸಿದ್ದರೆ, ರಷ್ಯಾ ಅದನ್ನು ಒಪ್ಪಿಕೊಂಡಿತ್ತು. ಸೂಕ್ತವಾಗಿ ಬಳಸಿದರೆ ಭಾರತ - ರಷ್ಯಾ ಸಹಕಾರ ಎಷ್ಟು ವಿಶಿಷ್ಟವಾಗಿದೆ ಎನ್ನುವುದನ್ನು ಇದು ತೋರಿಸಿತ್ತು.

ಆದರೆ ಬಳಿಕ ರಾಜಕೀಯ ಬದಲಾವಣೆ ತಲೆದೋರಿತು. ಟ್ರಂಪ್ ಆಡಳಿತ ಭಾರತ ರಷ್ಯಾಗೆ ಪರೋಕ್ಷ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ, 50% ತನಕ ಸುಂಕ ವಿಧಿಸಿತು. ಇಷ್ಟಾದರೂ ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆ ಉಂಟಾಗಲಿಲ್ಲ. ಭಾರತ ಕೈಗೆಟುಕುವ ಬೆಲೆಯಲ್ಲಿ ಇಂಧನ ಖರೀದಿಸುವ ತನ್ನ ಹಕ್ಕನ್ನು ಸಮರ್ಥಿಸಿಕೊಂಡು, ಮಾಸ್ಕೋವನ್ನು ಖಂಡಿಸಲು ನಿರಾಕರಿಸಿತು. ಮೋದಿಯವರು ಪಾಶ್ಚಾತ್ಯ ಒತ್ತಡಕ್ಕೆ ಮಣಿಯದಿದ್ದುದನ್ನು ಪುಟಿನ್ ಸಾರ್ವಜನಿಕವಾಗಿ ಶ್ಲಾಘಿಸಿದರು.

ಡಿಸೆಂಬರ್ 4, 5ರಂದು ನಡೆಯಲಿರುವ ಪುಟಿನ್ ಭೇಟಿಯೂ ಈ ವಿಶ್ವಾಸವನ್ನು ಪ್ರತಿನಿಧಿಸುತ್ತಿದೆ. ಭಾರತ ಮತ್ತು ರಷ್ಯಾಗಳು ಕಾರ್ಮಿಕರ ಚಲನಶೀಲತೆ ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧವಾಗಿದ್ದು, ಇದರಿಂದ ಸಾವಿರಾರು ಕುಶಲ ಕಾರ್ಮಿಕರು ಕಾನೂನುಬದ್ಧವಾಗಿ ರಷ್ಯಾದಲ್ಲಿ ಉದ್ಯೋಗ ಮಾಡಲು ಸಾಧ್ಯವಾಗುತ್ತದೆ. ರಷ್ಯಾ ನಿರ್ಬಂಧಗಳ ಪರಿಣಾಮವಾಗಿ ಎದುರಿಸುತ್ತಿರುವ ಕಾರ್ಮಿಕರ ಕೊರತೆಯನ್ನು ನಿವಾರಿಸಲು ಒಪ್ಪಂದ ಪೂರಕವಾಗಿದೆ. ಭಾರತಕ್ಕೆ ಇದು ಕಾನೂನಾತ್ಮಕವಾಗಿ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ಈ ಮೂಲಕ ನಿರ್ಬಂಧ ಎದುರಿಸುತ್ತಿರುವ ದೇಶದೊಡನೆ ಸಂಬಂಧ ವೃದ್ಧಿಸಲು ಭಾರತಕ್ಕೆ ಯಾವ ಭಯವೂ ಇಲ್ಲ ಎಂಬ ಸಂದೇಶ ಜಗತ್ತಿಗೆ ರವಾನೆಯಾಗುತ್ತದೆ.

ಮಾತುಕತೆಯಲ್ಲಿ ಇಂಧನ ಹೆಚ್ಚಿನ ಗಮನ ಪಡೆಯಲಿದೆ. ಅಮೆರಿಕದ ನಿರ್ಬಂಧದ ಪರಿಣಾಮವಾಗಿ ಕೆಲವು ಸಂಸ್ಕರಣಾಗಾರಗಳು ರಷ್ಯನ್ ತೈಲ ಖರೀದಿಯನ್ನು ನಿಲ್ಲಿಸಿದ್ದರೂ, ಅವುಗಳ ದೀರ್ಘಾವಧಿಯ ನಿಲುವು ಸ್ಪಷ್ಟವಾಗಿಲ್ಲ. ಭಾರತಕ್ಕೆ ಸ್ಥಿರವಾದ, ರಿಯಾಯಿತಿ ದರದ ಇಂಧನ ಬೇಕಿದ್ದರೆ, ರಷ್ಯಾಗೆ ನಿರಂತರ ಗ್ರಾಹಕರು ಬೇಕು. ಉಭಯ ನಾಯಕರೂ ಪೂರೈಕೆ ಮಾರ್ಗಗಳನ್ನು ಬಲಗೊಳಿಸಿ, ಡಾಲರ್ ಹೊರತಾದ ಪಾವತಿ ವ್ಯವಸ್ಥೆಯನ್ನು ರೂಪಿಸಿ, ಜಂಟಿ ಪರಮಾಣು ಮತ್ತು ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ರೂಪಿಸುವ ನಿರೀಕ್ಷೆಗಳಿವೆ.

ರಕ್ಷಣಾ ಕ್ಷೇತ್ರದಲ್ಲೂ ನಿರೀಕ್ಷೆಗಳು ಹೆಚ್ಚಿವೆ. ರಷ್ಯಾ ಭಾರತದ ಪ್ರಮುಖ ಮಿಲಿಟರಿ ಸಹಯೋಗಿಯಾಗಿದೆ. ತಂತ್ರಜ್ಞಾನ ವರ್ಗಾವಣೆ, ಜಂಟಿ ಉತ್ಪಾದನೆ, ಸಬ್‌ಮರೀನ್‌ಗಳು, ವಾಯು ರಕ್ಷಣೆ, ಮತ್ತು ಯುದ್ಧ ವಿಮಾನ ಯೋಜನೆಗಳು ಚರ್ಚೆಯಾಗಲಿವೆ. ರಷ್ಯಾ ಈಗಾಗಲೇ ಯಾವುದೇ ನಿರ್ಬಂಧಗಳಿಲ್ಲದೆ ತನ್ನ ಐದನೇ ತಲೆಮಾರಿನ ಯುದ್ಧ ವಿಮಾನವಾದ ಸು-57 ತಂತ್ರಜ್ಞಾನ ವರ್ಗಾವಣೆಗೂ ಬದ್ಧತೆ ಪ್ರದರ್ಶಿಸಿದೆ. ನಿರ್ಬಂಧಗಳಿಂದ ಒಂದಷ್ಟು ವಿಳಂಬವಾಗಿದ್ದರೂ, ಈ ಸಭೆ ಉಭಯ ದೇಶಗಳ ಸಹಕಾರವನ್ನು ಸ್ಥಿರಗೊಳಿಸಲಿದೆ.

ಇನ್ನು ಹಿನ್ನಲೆಯಲ್ಲಿ ಅಜಿತ್ ದೋವಲ್ ಮತ್ತು ನಿಕೊಲಾಯ್ ಪತ್ರುಶೇವ್ ಅವರು ಸಮುದ್ರ ಭದ್ರತೆ, ನೌಕಾ ನಿರ್ಮಾಣ, ಸಮುದ್ರ ಆರ್ಥಿಕತೆ ಯೋಜನೆಗಳು, ಮತ್ತು ದೀರ್ಘಾವಧಿಯ ಕಾರ್ಯತಂತ್ರದ ಸ್ಥಿರತೆಗಳ ಕುರಿತು ಸಮನ್ವಯ ಸಾಧಿಸುತ್ತಿದ್ದಾರೆ. ಈ ಮಾತುಕತೆಗಳು ಉಭಯ ದೇಶಗಳ ಸಂಬಂಧದ ಆಳವನ್ನು ಪ್ರತಿನಿಧಿಸಿದ್ದು, ಅದು ಈಗ ಕೇವಲ ರಕ್ಷಣೆ, ತೈಲಕ್ಕೆ ಸೀಮಿತವಾಗಿರದೆ, ಮುಂದಿನ ದಶಕವನ್ನು ರೂಪಿಸುವ ವಲಯಗಳಿಗೂ ವಿಸ್ತರಿಸಿದೆ.

ಒತ್ತಡದಲ್ಲಿ ಭಾರತ ಮತ್ತು ರಷ್ಯಾ ಸಂಬಂಧ ದುರ್ಬಲವಾಗಬಹುದು ಎಂದು ಪಾಶ್ಚಾತ್ಯ ದೇಶಗಳು ನಿರೀಕ್ಷಿಸಿದ್ದವು. ಆದರೆ, ನಮ್ಮ ವ್ಯಾಪಾರ ದಾಖಲೆಯ 68.7 ಬಿಲಿಯನ್ ಡಾಲರ್ ತಲುಪಿದ್ದು, ಇವುಗಳಲ್ಲಿ ಬಹುತೇಕ ರೂಪಾಯಿ - ರೂಬೆಲ್ ಪಾವತಿಯಲ್ಲಿ ನೆರವೇರಿದೆ. ಈ ವಿಧಾನಗಳು ನಿರ್ಬಂಧಕ್ಕೆ ಸಿಲುಕದಂತಹ ಆರ್ಥಿಕ ವ್ಯವಸ್ಥೆಯನ್ನು ರೂಪಿಸುತ್ತಿವೆ. ಎಸ್‌ಸಿಒ, ಬ್ರಿಕ್ಸ್ ಮತ್ತು ರಿಕ್‌ನಂತಹ ವೇದಿಕೆಗಳಲ್ಲಿ ಭಾರತ ಮತ್ತು ರಷ್ಯಾಗಳು ಬಹು ಧ್ರುವೀಯ ಜಗತ್ತು, ನ್ಯಾಯಯುತ ಜಾಗತಿಕ ಆಡಳಿತ, ಪಾಶ್ಚಾತ್ಯೇತರ ಭದ್ರತಾ ಮಾದರಿಗಳು, ಮತ್ತು ದ್ವಿಮುಖ ಧೋರಣೆಯನ್ನು ವಿರೋಧಿಸುವ ಕುರಿತು ಮಾತನಾಡಿವೆ. ಇದು ಜಾಗತಿಕ ಸ್ಪರ್ಧೆಯ ಹೊಸ ಆಯಾಮವೂ ಹೌದು.

ಪುಟಿನ್ ಭೇಟಿಯಲ್ಲಿ ನಾವು ಸಹಯೋಗ, ನಿರಂತರತೆ, ಮತ್ತು ಪರಸ್ಪರ ವಿಶ್ವಾಸಕ್ಕೆ ಸಂಬಂಧಿಸಿದ ಸಂದೇಶವನ್ನು ನಿರೀಕ್ಷಿಸಬಹುದು. ಉಭಯ ದೇಶಗಳು ಇಂಧನ ಸಹಕಾರಕ್ಕೆ ಉತ್ತೇಜನ ನೀಡಿ, ರಕ್ಷಣಾ ಒಪ್ಪಂದಗಳನ್ನು ಬಲಪಡಿಸಿ, ಕಾರ್ಮಿಕರ ಚಲನಶೀಲತಾ ಒಪ್ಪಂದವನ್ನು ರೂಪಿಸಿ, ಪಾವತಿ ವ್ಯವಸ್ಥೆಗಳನ್ನು ಉತ್ತಮಗೊಳಿಸಬಹುದು. ಇದರೊಡನೆ, ಭಾರತ ಮತ್ತು ರಷ್ಯಾಗಳು ತಮ್ಮ ಹಿತಾಸಕ್ತಿಗೆ ಪೂರಕವಾದ ಪಥವನ್ನು ಆರಿಸುತ್ತವೆಯೇ ಹೊರತು, ವಿದೇಶೀ ಒತ್ತಡಕ್ಕೆ ಮಣಿಯುವುದಿಲ್ಲ ಎಂಬ ಸಂದೇಶವೂ ರವಾನೆಯಾಗಲಿದೆ.

ದೆಹಲಿಯಲ್ಲಿ ನಡೆಯುವ ಪ್ರತಿಯೊಂದು ಹಸ್ತಲಾಘವವನ್ನೂ ಪಾಶ್ಚಾತ್ಯ ಜಗತ್ತು ಸೂಕ್ಷ್ಮವಾಗಿ ವಿಶ್ಲೇಷಿಸಲಿದೆ. ಆದರೆ, ಭಾರತ ಮತ್ತು ರಷ್ಯಾಗಳಿಗೆ ಈ ಸಭೆ ಕಳೆದ ಹಲವು ದಶಕಗಳ ರೀತಿಯಲ್ಲಿ ಮುಂದೆಯೂ ಜೊತೆಯಾಗಿ ನಿಲ್ಲುವ, ಪರಸ್ಪರ ಸಾರ್ವಭೌಮತ್ವ ಮತ್ತು ನಂಬಿಕೆಯ ಮೇಲೆ ಭವಿಷ್ಯವನ್ನು ರೂಪಿಸುವುದರ ಸಂಕೇತವಾಗಿರಲಿದೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೋದಿಯೇ 'ಅತಿದೊಡ್ಡ ಡ್ರಾಮಾಬಾಜಿ': 'ನಾಟಕ ಬೇಡ' ಎಂದ ಪ್ರಧಾನಿಗೆ ಕಾಂಗ್ರೆಸ್ ತಿರುಗೇಟು

ಸಂಸತ್ ಚಳಿಗಾಲದ ಅಧಿವೇಶನ: SIR ಬಗ್ಗೆ ಚರ್ಚೆಗೆ ವಿಪಕ್ಷಗಳ ಪ್ರತಿಭಟನೆ, ಗದ್ದಲ, ಲೋಕಸಭೆ ಕಲಾಪ ಮಧ್ಯಾಹ್ನ 2ಕ್ಕೆ ಮುಂದೂಡಿಕೆ

'ಅದು ನನಗೂ ಸಿಎಂ ಗೂ ಸಂಬಂಧಪಟ್ಟ ವಿಚಾರ, ನಾವಿಬ್ರೂ ಬ್ರದರ್ಸ್ ರೀತಿ ಇದ್ದೇವೆ': ಮತ್ತೆ ಬ್ರೇಕ್ ಫಾಸ್ಟ್ ಮೀಟಿಂಗ್ ಬಗ್ಗೆ ಡಿ.ಕೆ ಶಿವಕುಮಾರ್; Video

ಇಶಾ ಯೋಗ ಕೇಂದ್ರದಲ್ಲಿ ರಾಜ್ ನಿಡಿಮೋರು ಜೊತೆ ಎರಡನೇ ಮದುವೆಯಾದ ನಟಿ ಸಮಂತಾ ರುತ್ ಪ್ರಭು!

'ಧಕ್ ಧಕ್ ಬೆಡಗಿ' ರಾಜಕೀಯ ಸೇರ್ತಾರಾ? ಯಾವ ಪಕ್ಷದಿಂದ! ಕೊನೆಗೂ ಮೌನ ಮುರಿದ ಮಾಧುರಿ ದೀಕ್ಷಿತ್!

SCROLL FOR NEXT