ಸಂಗ್ರಹ ಚಿತ್ರ online desk
ಅಂಕಣಗಳು

Year 2025 Financial Planning: 10 ಸೂತ್ರಗಳನ್ನು ಪಾಲಿಸಿ; ಈ ತಪ್ಪುಗಳನ್ನು ಮಾಡಲೇಬೇಡಿ... (ಹಣಕ್ಲಾಸು)

ಯಾವುದೇ ನಿರ್ಧಾರವಾದರೂ ಅದನ್ನು ನಿಧಾನವಾಗಿ ತೆಗೆದುಕೊಳ್ಳಬೇಕು. ಆತುರದಲ್ಲಿ ತೆಗೆದುಕೊಂಡ ನಿರ್ಧಾರಗಳು ಒಳಿತಿಗಿಂತ ಕೆಡುಕನ್ನು ಹೆಚ್ಚು ಮಾಡುತ್ತವೆ. ಸಂಸ್ಥೆಯೇ ಇರಲಿ ಅಥವಾ ವ್ಯಕ್ತಿ ನಿರ್ಧಾರಗಳು ಗಟ್ಟಿಯಾಗಿರಬೇಕು. (ಹಣಕ್ಲಾಸು-443)

ಇನ್ನೊಂದು ಹೊಸ ವರ್ಷ ನಮ್ಮ ಮುಂದೆ ಬಂದು ನಿಂತಿದೆ. ಹೊಸ ವರ್ಷವದ ದಿನ , ವಾರಗಳಲ್ಲಿ ನಾವು ಮಾಡಬೇಕಾದ ಕೆಲಸದಲ್ಲಿ ಅತಿ ಮುಖ್ಯವಾದದ್ದು ಕಳೆದ ವರ್ಷದ ಪ್ಲಾನಿಂಗ್ ನಲ್ಲಿ ಎಷ್ಟನ್ನು ಸಾಧಿಸಲು ಸಾಧ್ಯವಾಯ್ತು? ಯಾವುದನ್ನು ಮಾಡಲಾಗಲಿಲ್ಲ? ಮತ್ತು ಏಕೆ? ಎನ್ನುವ ಕಾರಣಗಳನ್ನು ಹುಡುಕಿಕೊಳ್ಳುವುದು ಮತ್ತು ಅದು ನಮ್ಮ ಬದುಕಿಗೆ ಮತ್ತು ಮುಂದಿನ ವರ್ಷಕ್ಕೆ ಕೂಡ ಬೇಕಾಗಿರುವ ಅಂಶವಾಗಿದ್ದರೆ ಅದನ್ನು ಮತ್ತೆ ಸಾಧಿಸಲು ಪ್ರಯತ್ನಿಸುವುದು ಮತ್ತು ಇನ್ನಿತರ ಹೊಸ ವಿಷಯಗಳನ್ನು ಸೇರಿಸಿಕೊಳ್ಳಲು ಪ್ರಯತ್ನ ಮಾಡುವುದು. ಸರಳವಾಗಿ ಹೇಳಬೇಕೆಂದರೆ ಕಳೆದ ವರ್ಷದ ಅವಲೋಕನ ಮತ್ತು ಮುಂಬರುವ ವರ್ಷದ ಬಗ್ಗೆ ಸಣ್ಣ ಪ್ಲಾನಿಂಗ್ ಮಾಡುವುದಕ್ಕೆ ನಮಗೆ ಸಿಕ್ಕ ಅವಕಾಶವೇ ಹೊಸ ವರ್ಷದ ದಿನ.

ನೀವೇ ಗಮನಿಸಿ ನೋಡಿ ನಾವು ಮುಕ್ಕಾಲು ಪಾಲು ಸಾಮಾಜದ ಅಂಜಿಕೆಗೆ, ಮನೆಯ ಹಲವು ಸದಸ್ಯರ ಒತ್ತಾಯಕ್ಕೆ ಕಟ್ಟು ಬಿದ್ದು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಅವುಗಳು ದೀರ್ಘಕಾಲದಲ್ಲಿ ಯಾವ ಪರಿಣಾಮ ಬೀರುತ್ತದೆ ಎನ್ನುವುದರ ಅರಿವು ನಮಗೆ ನಿರ್ಧಾರ ತೆಗೆದುಕೊಳ್ಳುವಾಗ ಇರುವುದಿಲ್ಲ. ಯಾವುದೇ ನಿರ್ಧಾರವಾದರೂ ಅದನ್ನು ನಿಧಾನವಾಗಿ ತೆಗೆದುಕೊಳ್ಳಬೇಕು. ಆತುರದಲ್ಲಿ ತೆಗೆದುಕೊಂಡ ನಿರ್ಧಾರಗಳು ಒಳಿತಿಗಿಂತ ಕೆಡುಕನ್ನು ಹೆಚ್ಚು ಮಾಡುತ್ತವೆ. ಸಂಸ್ಥೆಯೇ ಇರಲಿ ಅಥವಾ ವ್ಯಕ್ತಿ ನಿರ್ಧಾರಗಳು ಗಟ್ಟಿಯಾಗಿರಬೇಕು. ತೆಗೆದುಕೊಂಡ ನಿರ್ಧಾರಕ್ಕೆ ಹೊಣೆಗಾರಿಕೆ ಪ್ರದರ್ಶಿಸುವ ಜಾಯಮಾನ ನಮ್ಮದಾಗಿರಬೇಕು.

ವೈಯಕ್ತಿಕ ನೆಲಗಟ್ಟಿನಲ್ಲಿ ನಾವು ಹೆಚ್ಚು ವಿಚಾರವನ್ನು ಮಾಡೋಣ. ಸಾಮಾನ್ಯವಾಗಿ ನಮ್ಮಲ್ಲಿ ಎದುರಾಗುವ ಸಮಸ್ಯೆ ಅಥವಾ ನಿರ್ಧಾರ ತೆಗೆದುಕೊಳ್ಳಬೇಕಾದ ಅಂಶಗಳಲ್ಲಿ ಪ್ರಮುಖವಾಗಿ;

  1. ಸ್ವಂತ ಮನೆ ಕಟ್ಟುವುದು

  2. ಜಾಗ ಖರೀದಿಸುವುದು

  3. ಇನ್ವೆಸ್ಟ್ಮೆಂಟ್ ಗೆ ಎಂದು ಇನ್ನೊಂದು ಜಾಗ ಅಥವಾ ಅಪಾರ್ಟ್ಮೆಂಟ್ ಖರೀದಿಸುವುದು.

  4. ಕಾರು ಖರೀದಿಸುವುದು

  5. ಮದುವೆ

  6. ಆರೋಗ್ಯ

  7. ವಿದ್ಯಾಭ್ಯಾಸ

  8. ಕೆಲಸ ಬದಲಾವಣೆ

ಮೇಲಿನ ಅಷ್ಟೂ ಅಂಶವನ್ನು ನೀವು ಗಮನಿಸಿ ನೋಡಿ ಇವುಗಳಲ್ಲಿ ಒಂದರಲ್ಲಿ ನಾವು ತಪ್ಪು ನಿರ್ಧಾರ ಮಾಡಿದರೆ ಅದು ಕೆಲವು ವರ್ಷಗಳನ್ನು ನಮ್ಮಿಂದ ಕಸಿದು ಬಿಡುತ್ತವೆ. ಉದಾಹರಣೆ ನೋಡೋಣ , ಅವಶ್ಯಕತೆ ಇಲ್ಲದ ಕಾರು ಖರೀದಿ ಹತ್ತಾರು ಲಕ್ಷ ರೂಪಾಯಿಯನ್ನು ಒಂದೆಡೆ ಬ್ಲಾಕ್ ಮಾಡುತ್ತದೆ , ಜೊತೆಗೆ ಅಪರ್ಚುನಿಟಿ ಕಾಸ್ಟ್ ಅದಕ್ಕಿಂತ ದೊಡ್ಡದಾಗುತ್ತದೆ. ನಮ್ಮ ಮುಂದೆ ಬಂದು ನಿಲ್ಲುವ ಉತ್ತಮ ಅವಕಾಶದಲ್ಲಿ ಹೂಡಿಕೆ ಮಾಡಲು ಹಣವಿಲ್ಲ ಎನ್ನುವ ಸನ್ನಿವೇಶವನ್ನು ನಾವೇ ಸೃಷ್ಟಿ ಮಾಡಿಕೊಳ್ಳುತ್ತೇವೆ. ಇನ್ನು ಮನೆ , ಜಾಗದಂತಹ ವಿಷಯದಲ್ಲಿ ಆತುರ ಮತ್ತು ತಪ್ಪು ನಿರ್ಧಾರ ಮಾಡಿದರೆ ಅದು ಹತ್ತಾರು ವರ್ಷವನ್ನು ನುಂಗಿ ಬಿಡುತ್ತದೆ.

ಅಂದರೆ ಮುಂದಿನ ಹತ್ತು ಅಥವಾ ಹದಿನೈದು ವರ್ಷ ಮಾಡಿದ ತಪ್ಪಿಗೆ ಕಂತು ಕಟ್ಟುತ್ತಾ ಜೀವನ ನಡೆಸಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಹೀಗಾಗಿ ಇಂತಹ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಮುನ್ನ ಅದರ ಸಾಧಕ ಬಾಧಕಗಳನ್ನು ಬರೆದಿಟ್ಟುಕೊಳ್ಳುವುದು ಉತ್ತಮ. ಹತ್ತಾರು ಕಡೆಗಳಲ್ಲಿ ಇದರ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹಣೆ ಮಾಡುವುದು ಕೂಡ ಮಾಡಬೇಕು. ಕನಿಷ್ಠ ವಾರ ಅಥವಾ ಹತ್ತು ದಿನ ತೆಗೆದುಕೊಂಡ ತೀರ್ಮಾನದ ಜೊತೆಗೆ ಜೀವಿಸಬೇಕು. ನಿಮ್ಮ ಫೈನಾನ್ಸಿಯಲ್ ಅಡ್ವೈಸರ್ ಬಳಿ ಇದರ ಕುರಿತು ಚರ್ಚಿಸಬೇಕು. ಸರಿ ಎನ್ನಿಸಿದಾಗ ಕಾರ್ಯೋನ್ಮುಖರಾಗಬೇಕು.

ಇದರ ಜೊತೆಗೆ ದಿನ ನಿತ್ಯದ ಸಣ್ಣ ಪುಟ್ಟ ನಿರ್ಧಾರಗಳು ಕೂಡ ದೀರ್ಘಕಾಲದಲ್ಲಿ ದೊಡ್ಡ ವ್ಯತ್ಯಾಸವನ್ನು ಉಂಟುಮಾಡುತ್ತದೆ. ಉದಾಹರಣೆಗೆ ಮಗುವನ್ನು ಶಾಲೆಯ ವಾಹನದಲ್ಲಿ ಕಳಿಸುವುದೋ ಅಥವಾ ನಾವೇ ಕಾರಿನಲ್ಲಿ ಅಥವಾ ಸ್ಕೂಟರ್ನಲ್ಲಿ ಕರೆದುಕೊಂಡು ಹೋಗಬೇಕೋ ಎನ್ನವುದು ತೀರಾ ಸಾಧಾರಣ , ಮಹತ್ವವಲ್ಲದ ನಿರ್ಧಾರ ಎನ್ನಿಸುತ್ತದೆ.

ಆದರೆ ನಾವೇ ಶಾಲೆಗೆ ಬಿಡುವ ನಿರ್ಧಾರ ದೀರ್ಘಕಾಲದಲ್ಲಿ ಶಾಲೆಯ ವಾಹನಕ್ಕಿಂತ ಹತ್ತಾರು ಪಟ್ಟು ಹೆಚ್ಚು ದುಬಾರಿಯಾಗಿರುತ್ತದೆ. ಜೊತೆಗೆ ನಮ್ಮ ವೇಳೆಯೂ ಅಲ್ಲಿ ಅಪಮೌಲ್ಯ ಹೊಂದುತ್ತದೆ. ಇದರರ್ಥ ಮಕ್ಕಳನ್ನು ಶಾಲೆಗೆ ಪೋಷಕರು ಬಿಡಬಾರದು ಎಂದಲ್ಲ. ನೀವು ಬದುಕಿನ ಯಾವ ಹಂತದಲ್ಲಿದ್ದೀರಿ ಎನ್ನುವುದರ ಮೇಲೆ ಈ ನಿರ್ಧಾರ ಸರಿ ಅಥವಾ ತಪ್ಪು ಎನ್ನುವುದನ್ನು ನಿರ್ಧರಿಸಬಹುದು. ಹೀಗೆ ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ರೆಸ್ಟುರೆಂಟ್ನಲ್ಲಿ ಊಟ ಮಾಡುವ ನಿರ್ಧಾರ , ಸಿಗರೇಟು , ಮಧ್ಯಪಾನ , ಮನರಂಜನೆಗೆ ವ್ಯಯಿಸುವ ಹಣ , ಎಲ್ಲವೂ ಲೆಕ್ಕವನ್ನು ಹಳಿ ತಪ್ಪಿಸುವ ಶಕ್ತಿ ಹೊಂದಿರುತ್ತವೆ. ಇವುಗಳನ್ನು ಸರಿಯಾಗಿ ಬಜೆಟ್ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ಈಗ ನೀವು ನಿಮ್ಮ ಸುತ್ತಮುತ್ತಲಿನ ಜಗತ್ತನ್ನು ಒಮ್ಮೆ ಗಮನಿಸಿ ನೋಡಿ . ಅವರಲ್ಲಿ ಮುಕ್ಕಾಲು ಪಾಲು ಜನ ಹಣವಿಲ್ಲ , ಹಣದ ಕೊರತೆ ಎನ್ನುವ ಮಾತುಗಳನ್ನು ಸದಾ ಆಡುತ್ತಿರುತ್ತಾರೆ. ಈ ರೀತಿ ಏಕೆ ಆಗಿರುತ್ತದೆ ಎಂದರೆ ಅವರಿಗೆ ಸರಿಯಾದ ಹಣಕಾಸು ಮಾಹಿತಿ ಸಿಗದ ಕಾರಣ ತಪ್ಪು ಆಯ್ಕೆಗಳನ್ನು ಮಾಡಿಕೊಂಡಿರುತ್ತಾರೆ. ಇನ್ಫೋರ್ಮೆಡ್ ಚಾಯ್ಸ್ ಮಾಡಿದಾಗ ಅದರಲ್ಲಿ ತಪ್ಪುಗಳ ಸಾಧ್ಯತೆ ಕಡಿಮೆ ಇರುತ್ತದೆ.

ಇಂದಿಗೂ ನಿಮಗೆ ಸಮಯ ಮೀರಿಲ್ಲ . ನಿಮ್ಮ ವಯಸ್ಸು ಎಷ್ಟು ಎನ್ನುವುದು ಇಲ್ಲಿ ಮುಖ್ಯವಾಗುವುದಿಲ್ಲ . ನೀವಿನ್ನೂ ಹಣಕಾಸಿನ ಆಟದಿಂದ ಹೊರಬಂದಿಲ್ಲ ಎಂದರೆ ಇದು ನಿಮಗೆ ಅನ್ವಯ. ಹೀಗಾಗಿ ಹಣಕಾಸಿನ ಮೂಲಭೂತ ನಿಯಮಗಳನ್ನು ಕಲಿಯಲು ಪ್ರಾರಂಭಿಸಿ. ಯಾವುದೊ ನಾವೆಂದು ಕೊಂಡಷ್ಟು ಸುಲಭವಾಗಿ ನಮಗೆ ದಕ್ಕುವುದಿಲ್ಲ, ಅದೇ ಸಮಯದಲ್ಲಿ ನಾವೆಂದು ಕೊಂಡಷ್ಟು ಕಷ್ಟವೂ ಆಗಿರುವುದಿಲ್ಲ. ಒಟ್ಟಾರೆ ಸರಳವಾಗಿ ಹೇಳಬೇಕೆಂದರೆ ನಾವು ದಿನ ನಿತ್ಯ ತೆಗೆದುಕೊಳ್ಳುವ ಅತಿ ಸಾಧಾರಣ ನಿರ್ಧಾರಗಳು ಕೂಡ ಹಣಕಾಸಿನ ನಿರ್ಧಾರವೇ ಆಗಿರುತ್ತದೆ. ಹೀಗಾಗಿ ದೊಡ್ಡದು , ಚಿಕ್ಕದು ಎನ್ನುವುದಕ್ಕಿಂತ ದೀರ್ಘಕಾಲದಲ್ಲಿ ಅವುಗಳು ಮಾಡಬಹುದಾದ ಪರಿಣಾಮವನ್ನು ಅವಲಂಬಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

ಸರಳವಾಗಿ ಹೇಳಬೇಕೆಂದರೆ ಕೆಳಗಿನ ಅಂಶಗಳನ್ನು ತಪ್ಪದೆ ಪಾಲಿಸುವುದು ಎಲ್ಲಾ ಸಮಸ್ಯೆಗಳಿಗೆ ರಾಮಬಾಣ.

  1. ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡದಿರುವುದು.

  2. ತೀರಿಸಲಾಗದ ಸಾಲ ಮಾಡದೆ ಇರುವುದು

  3. ನಾಳಿನ ಬಗ್ಗೆ ಒಂದು ಕಣ್ಣಿಟ್ಟಿರುವುದು

  4. ಇಂದಿನ ಸುಖ , ನಮ್ಮನ್ನು ನಾವು ಖುಷಿಯಾಗಿ ಇಟ್ಟುಕೊಳ್ಳುವುದು ಕೂಡ ಮರೆಯಬಾರದು

  5. ಯಾವುದೇ ಖರೀದಿಗೆ ಮುಂಚೆ ಕಾಸ್ಟ್ ಮತ್ತು ಬೆನಿಫಿಟ್ ಲೆಕ್ಕ ಹಾಕುವುದು

  6. ಉಳಿಕೆ ಮತ್ತು ಹೂಡಿಕೆಗೆ ಮೀಸಲಿಟ್ಟ ಹಣವನ್ನು ಯಾವುದೇ ಕಾರಣಕ್ಕೂ ಬೇರೆಯದಕ್ಕೆ ಖರ್ಚು ಮಾಡದೆ ಇರುವುದು

  7. ಹಣಕಾಸು ಶಿಸ್ತು ಎನ್ನುವುದು ಒಂದು ದಿನ, ವಾರ , ತಿಂಗಳು ಮಾಡಿ ಬಿಡುವ ಕೆಲಸವಲ್ಲ . ಅದು ಜೀವನಶೈಲಿ ಎನ್ನುವುದನ್ನು ಮನನ ಮಾಡಿಕೊಳ್ಳುವುದು.

  8. ಅಸ್ಥಿರ ಸಮಾಜದಲ್ಲಿ ಉಂಟಾಗುವ ಬದಲಾವಣೆಗೆ ಸದಾ ಸಿದ್ಧವಾಗಿರುವುದು. ಕಲಿಕೆ ಮರೆಯದಿರುವುದು.

  9. ನಿಖರವಾದ ಹಣಕಾಸು ಗುರಿಯನ್ನು ಇಟ್ಟುಕೊಳ್ಳುವುದು

  10. ಆದ್ಯತೆಗಳನ್ನು ಸಮಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವುದು.

ಹೋಗುವ ಮುನ್ನ: ಬೆಳಿಗ್ಗೆ ತಿಂಡಿ ಮನೆಯಲ್ಲಿ ಮಾಡಬೇಕಾ? ಇಲ್ಲವೇ ಹೋಟೆಲ್ನಲ್ಲಿ ತಿನ್ನಬೇಕಾ? ಎನ್ನುವ ಪ್ರಶ್ನೆಯಿಂದ, ಕಾರು, ಮನೆ, ಕೆಲಸ, ಬದುಕಿಗೆ ಸಂಬAಧ ಪಟ್ಟ ಎಲ್ಲಾ ಪ್ರಶೆಗಳಿಗೆ ಉತ್ತರವನ್ನು, ನಿರ್ಧಾರಗಳನ್ನು ನಾವು ತೆಗೆದುಕೊಳ್ಳಬೇಕಾಗುತ್ತದೆ. ಅತಿ ಚಿಕ್ಕ ನಿರ್ಧಾರದಿಂದ , ದೊಡ್ಡ ನಿರ್ಧಾರದವರೆಗೆ ಎಲ್ಲವೂ ಪರೋಕ್ಷವಾಗಿ ಅಥವಾ ಅಪರೋಕ್ಷವಾಗಿ ಹಣಕಾಸಿಗೆ ಸಂಬಂಧಿಸಿರುತ್ತವೆ. ಹುಟ್ಟಿದ ಕ್ಷಣದಿಂದ ಸಾಯುವವರೆಗೆ ಸಂಖ್ಯೆಗಳ ಆಟ ಬದುಕಿನಲ್ಲಿ ಬಹಳ ದೊಡ್ಡದು.

ಆ ಸಂಖ್ಯೆಗಳನ್ನು ನಾವು ನಮ್ಮ ಒಳಿತಿಗೆ ಬಳಸಿಕೊಳ್ಳಬೇಕು. ಅದಕ್ಕಾಗಿ ನಾವು ನಮ್ಮ ಮೆದುಳನ್ನು ಟ್ರೈನ್ ಮಾಡಬೇಕು. ಬೇಕೆನ್ನಿಸಿದ್ದನು ಬೇಕಾದ ಹಾಗೆ ಮಾಡಲು ಬಿಡುತ್ತ ಹೋದರೆ ಬದುಕು ಸೂತ್ರ ಕಿತ್ತ ಗಾಳಿಪಟವಾಗುತ್ತದೆ.ಹೀಗಾಗಿ ಹೊಸ ವರ್ಷದ ಬಾಗಿಲಿನಲ್ಲಿ ನಿಂತಿರುವ ನಾವು ಇದರ ಬಗ್ಗೆ ಯೋಚಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕಿದೆ. ನೆನಪಿರಲಿ ಸಮಯ ಎನ್ನುವುದು ವೇಗವಾಗಿ ಕಳೆದು ಹೋಗುತ್ತದೆ. ಮುಂದಿನ ವರ್ಷ ಮತ್ತೆ ಮನೆ ಬಾಗಿಲಿಗೆ ಬಂದು ನಿಲ್ಲುತ್ತದೆ. ಆಗ ಮತ್ತದೆ ತಪ್ಪಾಗಿದೆ ಎಂದರೆ ಒಂದು ವರ್ಷ ನಮ್ಮ ಕೈಯಿಂದ ಜಾರಿ ಹೋಯ್ತು ಎಂದರ್ಥ. ಈ ಲೇಖನ ಓದಿದ ತಕ್ಷಣ ಒಂದು ಪುಟ್ಟ ಪ್ಲಾನ್ ಸಿದ್ದ ಮಾಡಿಕೊಳ್ಳಿ. ಪ್ರತಿ ತಿಂಗಳೂ ಅದರ ಸ್ಟೇಟಸ್ ಅಪ್ಡೇಟ್ ಮಾಡಿಕೊಳ್ಳಿ. ವರ್ಷದ ಕೊನೆಗೆ ಫಲಿತಾಂಶ ನೀವೇ ಕಾಣುವಿರಿ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT