ಡೂಮ್ ಸ್ಕ್ರೋಲಿಂಗ್ ಸಿಂಡ್ರೋಮ್  online desk
ಅಂಕಣಗಳು

ಡೂಮ್ ಸ್ಕ್ರೋಲಿಂಗ್ ಸಿಂಡ್ರೋಮ್ (ಕುಶಲವೇ ಕ್ಷೇಮವೇ)

ಮೊಬೈಲ್ ಫೋನ್ ಸ್ಕ್ರೋಲ್ ಮಾಡುವ ಸಮಯ ಹೆಚ್ಚಾದಷ್ಟು ಈ ಸಮಸ್ಯೆಯ ಚಕ್ರವ್ಯೂಹದಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆ ಹೆಚ್ಚು.

ಇತ್ತೀಚೆಗೆ ಎಲ್ಲರಿಗೂ ಮೊಬೈಲ್ ಫೋನಿನ ಗೀಳು ಹೆಚ್ಚಾಗಿದೆ. ಮೊದಲೆಲ್ಲಾ ಮೊಬೈಲ್ ಫೋನ್ ಕೇವಲ ಮಾತುಕತೆಗೆ ಮೀಸಲಾಗಿತ್ತು. ಈಗಂತೂ ಹಿರಿಕಿರಿಯರೆನ್ನದೇ ಎಲ್ಲರೂ ಸಾಮಾಜಿಕ ಮಾಧ್ಯಮ, ಸುದ್ದಿ, ಸಂಗೀತ, ಸಿನಿಮಾ ಹೀಗೆ ಹಲವಾರು ಕಾರಣಗಳಿಗಾಗಿ ಮೊಬೈಲ್ ಫೋನಿಗೆ ಸದಾಕಾಲ ಅಂಟಿಕೊಂಡವರೇ ಆಗಿದ್ದಾರೆ. ಹದಿಹರೆಯದವರಂತೂ ಮೊಬೈಲ್ ಫೋನನ್ನು ಸ್ಕ್ರೋಲ್ ಮಾಡುತ್ತಾ ಕುಳಿತರೇ ಮುಗಿಯಿತು. ಅದೆಷ್ಟು ಸಮಯ ಸ್ಕ್ರೋಲಿಂಗ್ ಮಾಡುತ್ತಾರೋ ತಿಳಿಯುವುದಿಲ್ಲ. ಇದರಿಂದ ಅನೇಕ ದೈಹಿಕ ಮತ್ತು ಮಾನಸಿಕ ದುಷ್ಪರಿಣಾಮಗಳು ಉಂಟಾಗುತ್ತವೆ. ಇಂತಹ ದುಷ್ಪರಿಣಾಮಗಳಲ್ಲಿ ಒಂದು ಡೋಮ್ ಸ್ಕ್ರೋಲಿಂಗ್ ಸಿಂಡ್ರೋಮ್.

ಸ್ಕ್ರೋಲಿಂಗ್ ಸಿಂಡ್ರೋಮ್ ಎಂದರೇನು?

ಡೂಮ್ ಸ್ಕ್ರೋಲಿಂಗ್ ಸಿಂಡ್ರೋಮ್ ಎಂದರೆ ನಕಾರಾತ್ಮಕ ಸುದ್ದಿ, ಸಾಮಾಜಿಕ ಮಾಧ್ಯಮ ಅಥವಾ ದುಃಖಕರ ವಿಷಯವನ್ನು ಮೊಬೈಲ್ ಫೋನಿನಲ್ಲಿ ಸಮಯದ ಮಿತಿಯಿಲ್ಲದೇ ಅತಿಯಾಗಿ ಸ್ಕ್ರೋಲ್ ಮಾಡುವ ಅಭ್ಯಾಸ. ಸರಳವಾಗಿ ಹೇಳಬೇಕೆಂದರೆ ಡೂಮ್ ಸ್ಕ್ರೋಲಿಂಗ್ ಎನ್ನುವುದು ಸುದ್ದಿ (ಕೆಲವೊಮ್ಮೆ ನಕಾರಾತ್ಮಕ) ಮತ್ತು ಮಾಹಿತಿಯನ್ನು ಹುಡುಕುವ ಕಡ್ಡಾಯ ಮತ್ತು ಅನುತ್ಪಾದಕ ಅಭ್ಯಾಸವಾಗಿದೆ. ಇದು ಆತಂಕ, ಖಿನ್ನತೆ ಮತ್ತು ಭಯದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಸ್ಕ್ರೋಲಿಂಗ್ ಎಂಬ ಸಮಸ್ಯೆಯ ಚಕ್ರವ್ಯೂಹ

ಮೊಬೈಲ್ ಫೋನ್ ಸ್ಕ್ರೋಲ್ ಮಾಡುವ ಸಮಯ ಹೆಚ್ಚಾದಷ್ಟು ಈ ಸಮಸ್ಯೆಯ ಚಕ್ರವ್ಯೂಹದಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆ ಹೆಚ್ಚು. ಯಾವುದಾದರೂ ಒಂದು ಆಸಕ್ತಿಕರ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದರೆ ಸಾಕು ಮತ್ತೆ ಅದೇ ನಮ್ಮ ಮುಂದೆ ಬರುತ್ತದೆ. ಏಕೆಂದರೆ ಆನ್‌ಲೈನ್ ಪ್ಲಾಟ್‌ಫಾರರ್ಮ್ಗಳು ಬಳಕೆದಾರರ ಗಮನ ಸೆಳೆಯುವ ವಿಷಯವನ್ನು ತೋರಿಸಲು ಇಂಟರ್‌ನೆಟ್ಟಿನಲ್ಲಿ ಅಲ್ಗಾರಿದಮ್ಮಗಳನ್ನು ಬಳಸುತ್ತವೆ. ಈ ಆಲ್ಗಾರಿದಮ್ಮುಗಳು ನಮ್ಮನ್ನು ಈ ಗೀಳಿನಲ್ಲಿ ಬೀಳಿಸುತ್ತವೆ. ನಾವು ಮತ್ತೆ ಮತ್ತೆ ಅದನ್ನೇ ನೋಡಲು ಬಯಸುತ್ತೇವೆ. ಹೀಗೆ ಪುನರಾವರ್ತಿತ ನಡವಳಿಕೆಗೆ ಪ್ರತಿಕ್ರಿಯೆಯಾಗಿ ಮೆದುಳಿನ ಒಳಗಿನ ಸಂಪರ್ಕಗಳ (ವೈರಿಂಗ್) ಬದಲಾಗುತ್ತದೆ.

ಡೂಮ್ ಸ್ಕ್ರೋಲಿಂಗ್ ಸಮಸ್ಯೆಯ ಲಕ್ಷಣಗಳು

ಈ ಸಮಸ್ಯೆಯ ಲಕ್ಷಣಗಳೆಂದರೆ ಸುದ್ದಿ ಅಥವಾ ಸಾಮಾಜಿಕ ಮಾಧ್ಯಮಗಳನ್ನು ಬ್ರೌಸ್ ಮಾಡಿದ ನಂತರ ಆತಂಕ, ಒತ್ತಡ; ನಿದ್ರೆ ಮಾಡದೇ ಈ ಗೀಳಿನಲ್ಲಿಯೇ ತೊಡಗಿಕೊಳ್ಳುವುದು ಅಥವಾ ಈ ಗೀಳು ಕೆಲಸದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದಿದ್ದರೂ ಸುದ್ದಿಗಳನ್ನು ಕಡ್ಡಾಯವಾಗಿ ಪರಿಶೀಲಿಸುವುದು/ಸಾಮಾಜಿಕ ಮಾಧ್ಯಮಗಳ ವೀಕ್ಷಣೆಯಲ್ಲಿ ಮುಳುಗಿರುವುದು; ಏನನ್ನಾದರೂ ಸದಾ ಮೊಬೈಲ್ ಫೋನಿನಲ್ಲಿ ಸರ್ಚ್ ಮಾಡುತ್ತಲೇ ಇರುವುದು ಮತ್ತು ನಿರಂತರ ಅನೇಕ ವಿಷಯಗಳ ವೀಡಿಯೋಗಳನ್ನು ನೋಡುತ್ತಲೇ ಇರುವುದು. ಇದರಿಂದ ಮಾಡಬೇಕಾದ ಕೆಲಸಗಳಿಗೆ ಅಡ್ಡಿ ಉಂಟಾಗುವುದು.

ಡೂಮ್ ಸ್ಕ್ರೋಲಿಂಗಿನಿಂದ ಆಗುವ ದುಷ್ಟರಿಣಾಮಗಳು

ಡೂಮ್ ಸ್ಕ್ರೋಲಿಂಗಿನಿಂದ ಆಗುವ ದುಷ್ಟರಿಣಾಮಗಳು ಅನೇಕ. ಸದಾ ಮೊಬೈಲ್ ಫೋನ್ ಹಿಡಿದುಕೊಂಡು ದೀರ್ಘ ಕಾಲ ಕಳೆಯುವುದರಿಂದ ಯಾವುದೇ ಕೆಲಸ ಮಾಡಲು ಅಗತ್ಯವಾಗಿ ಬೇಕಾದ ಗಮನ ನೀಡಲು ತೊಂದರೆಯಾಗುತ್ತದೆ. ಯಾವ ವಿಷಯದ ಅಥವಾ ಕೆಲಸದ ಮೇಲೆ ಸರಿಯಾಗಿ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಬೇರೆಯವರು ಏನು ಹೇಳುತ್ತಿದ್ದಾರೆ ಎಂಬುದಕ್ಕೂ ಈ ಗೀಳಿಗೆ ಬಿದ್ದವರು ಗಮನ ಕೊಡುವುದಿಲ್ಲ. ಋಣಾತ್ಮಕ (ನೆಗೆಟಿವ್) ವಿಷಯಗಳ ವಿಡಿಯೋಗಳನ್ನು ಪದೇ ಪದೇ ನೋಡಿದಾಗ ನಿರಾಶಾವಾದ ಹೆಚ್ಚುತ್ತದೆ ಮತ್ತು ಜನರ ಬಗ್ಗೆ ವಿಶ್ವಾಸ ಕಳೆದುಹೋಗಬಹುದು.

ಸದಾ ಒಂದೇ ಭಂಗಿಯಲ್ಲಿ ಮೊಬೈಲ್ ಫೋನನ್ನು ಹಿಡಿದು ನೋಡುವುದರಿಂದ ಕಣ್ಣಿಗೆ ಆಯಾಸ, ತಲೆನೋವು, ಸ್ನಾಯು ಸೆಳೆತ, ಕುತ್ತಿಗೆ ಮತ್ತು ಭುಜದ ನೋವು, ಹಸಿವು ಕಡಿಮೆಯಾಗುವುದು, ನಿದ್ರೆ ಮಾಡಲು ತೊಂದರೆ ಮತ್ತು ರಕ್ತದೊತ್ತಡ ಹೆಚ್ಚಾಗುವಂತಹ ದೈಹಿಕ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಒಂದು ಅಧ್ಯಯನದ ಪ್ರಕಾರ ಪುರುಷರು ಮಹಿಳೆಯರಿಗಿಂತ ಈ ಗೀಳಿನಲ್ಲಿ ತೊಡಗುತ್ತಾರೆ. ಯುವಜನರಲ್ಲಿ ಈ ಗೀಳು ಹೆಚ್ಚಾಗಿಯೇ ಇದೆ. ಸುದ್ದಿಗಳನ್ನು ಓದುವ ಅಥವಾ ತಿಳಿದುಕೊಳ್ಳುವ ಜನರು ಡೂಮ್ ಸ್ಕ್ರೋಲ್ ಮಾಡುತ್ತಾರೆ. ಹೀಗೆ ಋಣಾತ್ಮಕ ವಿಷಯಗಳನ್ನು ನೋಡುವುದೇ ಒಂದು ದುರಭ್ಯಾಸವಾಗುವುದು ತಿಳಿಯುವುದೇ ಇಲ್ಲ. ಇದರಿಂದ ಕ್ರಮೇಣ ಜನರ ಪ್ರಾಪಂಚಿಕ ದೃಷ್ಟಿಯು ಬದಲಾಗುತ್ತದೆ. ಕ್ರಮೇಣ ಆತಂಕ, ಖಿನ್ನತೆ ಮತ್ತು ಒತ್ತಡ ಹೆಚ್ಚಾಗಬಹುದು.

ಡೂಮ್ ಸ್ಕ್ರೋಲಿಂಗ್ ಸಮಸ್ಯೆಯಿಂದ ಹೊರಬರುವುದು ಹೇಗೆ?

  1. ಈ ಸಮಸ್ಯೆ ಪರಿಹಾರ ಇಲ್ಲದಿರುವ ಸಮಸ್ಯೆಯೇನಲ್ಲ. ತಾಳ್ಮೆ ಮತ್ತು ಸ್ವಲ್ಪ ಮಟ್ಟಿಗೆ ಮನೋನಿಗ್ರಹ ಬೇಕಷ್ಟೇ.

  2. ಮೊದಲಿಗೆ ಮೊಬೈಲ್ ಫೋನಿನಲ್ಲಿ ಸುದ್ದಿ, ವಿಡಿಯೋ ಅಥವಾ ಸಾಮಾಜಿಕ ಮಾಧ್ಯಮಗಳನ್ನು ನೋಡಲು ಸಮಯವನ್ನು ಮಿತಿಗೊಳಿಸಬೇಕು. ಹೀಗೆ ಸಾಮಾಜಿಕ ಮಾಧ್ಯಮ/ಸುದ್ದಿ ಬಳಕೆಯನ್ನು ನಿರ್ಬಂಧಿಸಲು ಟೈಮರುಗಳು/ಟ್ರಾಕರ್ ಅಥವಾ ಅಪ್ಲಿಕೇಷನ್ನುಗಳನ್ನು ಲಭ್ಯವಿವೆ. ಅವುಗಳನ್ನು ಬಳಸಬೇಕು.

  3. ಮಿತವಾಗಿ ಸುದ್ದಿಗಳನ್ನು ಅನುಸರಿಸಬೇಕು. ದಿನವಿಡೀ ಸುದ್ದಿಗಳನ್ನು ನೋಡುವುದು ಅಥವಾ ವಿಡಿಯೋಗಳನ್ನೇ ನೋಡುವುದೇ ಒಂದು ಕೆಲಸ ಆಗಬಾರದು.

  4. ನಕಾರಾತ್ಮಕ ಸುದ್ದಿಗಳ ಬದಲಿಗೆ ಸಕಾರಾತ್ಮಕ ಅಥವಾ ಶೈಕ್ಷಣಿಕ/ಸಾಮಾನ್ಯ ಜ್ಞಾನದ ವಿಷಯಗಳನ್ನು ತಿಳಿಯಬೇಕು.

  5. ಮಲಗುವ ಕನಿಷ್ಠ ಎರಡು ಗಂಟೆಗಳ ಮೊದಲು ಮೊಬೈಲ್ ಬಳಕೆ ನಿಲ್ಲಿಸಬೇಕು. ಆಗ ಚೆನ್ನಾಗಿ ನಿದ್ರೆ ಬರುತ್ತದೆ.

  6. ಯಾವುದಾದರೂ ವಿಷಯವನ್ನು ಸರ್ಚ್ ಅಥವಾ ಸ್ಕ್ರೋಲ್ ಮಾಡುವ ಮುನ್ನ ಅದು ಉಪಯುಕ್ತವಾಗಿದೆಯೇ ಅಥವಾ ಅದು ತೊಂದರೆಯನ್ನು ಉಂಟುಮಾಡುತ್ತಿದೆಯೇ ಎಂದು ಅರಿಯಬೇಕು.

  7. ಮೊಬೈಲ್ ನೋಟಿಫಿಕೇಷನ್ನುಗಳನ್ನು ಮೊದಲು ಆಫ್ ಮಾಡಬೇಕು. ಪದೇ ಪದೇ ನೋಟಿಫಿಕೇಷನ್ನುಗಳು ಬಂದರೆ ಗಮನ ಅದರತ್ತಲೇ ಹರಿಯುತ್ತವೆ.

  8. ಸದಾ ಕಾಲ ಮೊಬೈಲ್ ಫೋನನ್ನು ಹತ್ತಿರ ಇಟ್ಟಕೊಂಡಿರಬಾರದು. ಮೊಬೈಲ್ ಫೋನನ್ನು ಬಿಟ್ಟು ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಪುಸ್ತಕಗಳನ್ನು ಓದುವುದು, ಸಂಗೀತ ಕೇಳುವುದು, ವಾಕಿಂಗ್ ಹೋಗುವುದು ಅಥವಾ ಮನೆಯವರೊಂದಿಗೆ/ಸ್ನೇಹಿತರೊಂದಿಗೆ ಸಮಯ ಕಳೆಯಬೇಕು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT