ಇರ್ವಿನ್–ಗ್ಯಾಸ್ ಸಿಂಡ್ರೋಮ್ online desk
ಅಂಕಣಗಳು

ಇರ್ವಿನ್–ಗ್ಯಾಸ್ ಸಿಂಡ್ರೋಮ್: ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸೆ (ಕುಶಲವೇ ಕ್ಷೇಮವೇ)

ಮ್ಯಾಕ್ಯುಲಾ ದೃಷ್ಟಿಯ ಸ್ಪಷ್ಟತೆ ಮತ್ತು ಸೂಕ್ಷ್ಮ ವಿವರಗಳನ್ನು ಗುರುತಿಸಲು ಅಗತ್ಯವಾದ ಭಾಗವಾಗಿರುವುದರಿಂದ ಅಲ್ಲಿ ಉಂಟಾಗುವ ಊತ ದೃಷ್ಟಿಗೆ ಬಹಳ ಹಾನಿಯನ್ನುಂಟುಮಾಡುತ್ತದೆ.

ಇರ್ವಿನ್–ಗ್ಯಾಸ್ ಸಿಂಡ್ರೋಮ್ ಅಥವಾ ಸಿಸ್ಟಾಯ್ಡ್ ಮ್ಯಾಕ್ಯುಲರ್ ಎಡಿಮಾ ಕಣ್ಣಿನ ಕ್ಯಾಟರಾಕ್ಟ್ (ಕಣ್ಣಿನ ಪೊರೆ) ಶಸ್ತ್ರಚಿಕಿತ್ಸೆಯ ನಂತರ ಉಂಟಾಗಬಹುದಾದ ಒಂದು ಸಮಸ್ಯೆ. ಇದನ್ನು ಮೊಟ್ಟಮೊದಲು ನೇತ್ರ ತಜ್ಞರಾದ ಡಾ. ಎಸ್.ಎಲ್. ಇರ್ವಿನ್ ಮತ್ತು ಡಾ. ಜೆ.ಡಿ. ಗ್ಯಾಸ್ 1950–60ರ ದಶಕಗಳಲ್ಲಿ ವಿವರಿಸಿದರು. ಈ ಸಮಸ್ಯೆ ಬಂದರೆ ಕಣ್ಣಿನ ರೆಟಿನಾದ ಮಧ್ಯಭಾಗವಾದ ಮ್ಯಾಕ್ಯುಲಾ ಎಂಬ ಸ್ಥಳದಲ್ಲಿ ದ್ರವ ಸಂಗ್ರಹವಾಗುತ್ತದೆ. ಇದರ ಪರಿಣಾಮವಾಗಿ ಮಧ್ಯದ ದೃಷ್ಟಿ ಅಸ್ಪಷ್ಟವಾಗುವುದು ಅಥವಾ ವಕ್ರವಾಗಿ ಕಾಣುವುದು ಸಂಭವಿಸುತ್ತದೆ.

ಸಿಸ್ಟಾಯ್ಡ್ ಮ್ಯಾಕ್ಯುಲರ್ ಎಡಿಮಾ

ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕಣ್ಣಿನ ಒಳಭಾಗದಲ್ಲಿ ಸ್ವಲ್ಪ ಮಟ್ಟಿನ ಉರಿಯೂತ ಉಂಟಾಗುತ್ತದೆ. ಕೆಲವು ಜನರಿಗೆ ಈ ಉರಿಯೂತದಿಂದ ಪ್ರೋಸ್ಟಾಗ್ಲ್ಯಾಂಡಿನ್ ಎಂಬ ರಾಸಾಯನಿಕಗಳು ಹೊರಬಂದು ರೆಟಿನಾದ ಸೂಕ್ಷ್ಮ ರಕ್ತನಾಳಗಳಿಂದ ದ್ರವ ಸೋರಿಕೆಗೆ ಕಾರಣವಾಗುತ್ತವೆ. ಈ ದ್ರವ ಮ್ಯಾಕ್ಯುಲಾ ಭಾಗದಲ್ಲಿ ಸಂಗ್ರಹಗೊಂಡಾಗ ಗಂಟಾಗಿರುವ ರಚನೆಗಳು ಉಂಟಾಗುತ್ತವೆ. ಇದನ್ನೇ ವೈದ್ಯರು ಸಿಸ್ಟಾಯ್ಡ್ ಮ್ಯಾಕ್ಯುಲರ್ ಎಡಿಮಾ ಎಂದು ಕರೆಯುತ್ತಾರೆ.

ಮ್ಯಾಕ್ಯುಲಾ ದೃಷ್ಟಿಯ ಸ್ಪಷ್ಟತೆ ಮತ್ತು ಸೂಕ್ಷ್ಮ ವಿವರಗಳನ್ನು ಗುರುತಿಸಲು ಅಗತ್ಯವಾದ ಭಾಗವಾಗಿರುವುದರಿಂದ ಅಲ್ಲಿ ಉಂಟಾಗುವ ಊತ ದೃಷ್ಟಿಗೆ ಬಹಳ ಹಾನಿಯನ್ನುಂಟುಮಾಡುತ್ತದೆ.

ಇರ್ವಿನ್-ಗ್ಯಾಸ್ ಸಿಂಡ್ರೋಮ್ ಗೆ ಕಾರಣಗಳು

ಭಾರತದಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ವರ್ಷ ಸುಮಾರು ಅರವತ್ತು ಲಕ್ಷ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದೆ. ಶಸ್ತ್ರಚಿಕಿತ್ಸೆಯ ನಂತರದ ತೊಡಕುಗಳು ಫ್ಯಾಕೋಎಮಲ್ಸಿಫಿಕೇಶನ್ ಮತ್ತು ಸುಧಾರಿತ ಇಂಟ್ರಾಕ್ಯುಲರ್ ಲೆನ್ಸ್ ಇಂಪ್ಲಾಂಟೇಶನ್‌ನಂತಹ ಸುಧಾರಿತ ಮೈಕ್ರೋಸರ್ಜಿಕಲ್ ತಂತ್ರಗಳೊಂದಿಗೆ ಗಮನಾರ್ಹವಾಗಿ ಕಡಿಮೆಯಾಗಿವೆ. ಆದರೂ ಇರ್ವಿನ್-ಗ್ಯಾಸ್ ಸಿಂಡ್ರೋಮ್ ಇನ್ನೂ ಸ್ವಲ್ಪ ಶೇಕಡಾವಾರು ಪ್ರಕರಣಗಳಲ್ಲಿ ಕಂಡುಬರುತ್ತದೆ. ಸಾಮಾನ್ಯವಾಗಿ ಶೇಕಡಾ 0.1ರಿಂದ 2ರಷ್ಟು ಇರ್ವಿನ್-ಗ್ಯಾಸ್ ಸಿಂಡ್ರೋಮ್ ಪ್ರಕರಣಗಳು ವರದಿಯಾಗಿವೆ.

ಇದು ಶಸ್ತ್ರಚಿಕಿತ್ಸಾ ತಂತ್ರ, ರೋಗಿಗಳ ಪರಿಸ್ಥಿತಿ ಮತ್ತು ಶಸ್ತ್ರಚಿಕಿತ್ಸೆಯ ನಂತರದ ಆರೈಕೆಯನ್ನು ಅವಲಂಬಿಸಿರುತ್ತದೆ. ಹೆಚ್ಚಿನ ಪ್ರಕರಣಗಳು ಸೌಮ್ಯವಾಗಿದ್ದರೂ ಅರಿವಿನ ಕೊರತೆ ಮತ್ತು ವಿಳಂಬ ಪತ್ತೆ ದೀರ್ಘಕಾಲದ ದೃಷ್ಟಿಯ ತೊಂದರೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆಯ ನಂತರ ವೈದ್ಯರೊಂದಿಗೆ ಫಾಲೋ ಅಪ್ ಭೇಟಿಗಳನ್ನು ಮಾಡದಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.

ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಎಲ್ಲರಿಗೂ ಈ ಸಮಸ್ಯೆ ಬರುವುದಿಲ್ಲ. ಆದರೆ ಡಯಾಬಿಟಿಸ್ (ಮಧುಮೇಹ) ಇರುವವರು, ಯೂವೈಟಿಸ್ (ಕಣ್ಣಿನ ಉರಿಯೂತ) ತೊಂದರೆ ಇರುವವರು, ರೆಟಿನಾ ಸಮಸ್ಯೆ ಇದ್ದವರಿಗೆ, ಹಿಂದೆ ಒಮ್ಮೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು ಅಥವಾ ಗಾಯವಾಗಿದ್ದರೆ ಮತ್ತು ಕ್ಯಾಟಾರಾಕ್ಟ್ ಶಸ್ತ್ರಚಿಕಿತ್ಸೆ ಕಷ್ಟಕರವಾಗಿದ್ದರೆ ಇದು ಬರಬಹುದು. ಹೆಚ್ಚಾಗಿ ವಯಸ್ಸಾದವರು ಮತ್ತು ದೀರ್ಘಕಾಲದ ಉರಿಯೂತದ ಸಮಸ್ಯೆ ಇರುವವರು ಈ ಬಗ್ಗೆ ಹುಷಾರಾಗಿರಬೇಕು.

ಇರ್ವಿನ್-ಗ್ಯಾಸ್ ಸಿಂಡ್ರೋಮ್ ಲಕ್ಷಣಗಳು

ಇರ್ವಿನ್–ಗ್ಯಾಸ್ ಸಿಂಡ್ರೋಮ್‌ನ ಲಕ್ಷಣಗಳು ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯ 4 ರಿಂದ 12 ವಾರಗಳ ನಂತರ ಕಾಣಿಸಿಕೊಳ್ಳುತ್ತವೆ. ಇದರ ಪ್ರಮುಖ ಲಕ್ಷಣಗಳು ದೃಷ್ಟಿ ಅಸ್ಪಷ್ಟವಾಗುವುದು, ಏನನ್ನಾದರೆ ನೋಡಿದರೆ ಅದು ಅಲೆಗಳಂತೆ ಅಥವಾ ವಕ್ರವಾಗಿ ಕಾಣುವುದು, ಬಣ್ಣದ ಸ್ಪಷ್ಟತೆ ಕಡಿಮೆಯಾಗುವುದು ಮತ್ತು ಕೆಲವೊಮ್ಮೆ ಕಣ್ಣಿನಲ್ಲಿ ಏನೋ ಸಮಸ್ಯೆಯಾದಂತೆ ಆಗುವುದು.

ಈ ಸಮಸ್ಯೆಯನ್ನು ವೈದ್ಯರು ಒಸಿಟಿ (ಆಪ್ಟಿಕಲ್ ಕೊಹೆರೆನ್ಸ್ ಟೋಮೊಗ್ರಫಿ) ಸ್ಕ್ಯಾನ್ ಮೂಲಕ ಪತ್ತೆಹಚ್ಚುತ್ತಾರೆ. ಈ ಪರೀಕ್ಷೆಯಲ್ಲಿ ಬಾಧಿತ ರೆಟಿನಾದ ಚಿತ್ರವನ್ನು ತೆಗೆಯಲಾಗುತ್ತದೆ ಮತ್ತು ಇದರಿಂದ ಅಲ್ಲಿನ ದ್ರವ ಸಂಗ್ರಹದ ಬಗ್ಗೆ ತಿಳಿಯುತ್ತದೆ. ಫ್ಲುರೆಸಿನ್ ಆಂಜಿಯೋಗ್ರಫಿ ಎಂಬ ಇನ್ನೊಂದು ಪರೀಕ್ಷೆಯಲ್ಲಿ ವಿಶೇಷ ಡೈ ಬಳಸಿ ರಕ್ತನಾಳಗಳಿಂದ ದ್ರವ ಸೋರಿಕೆಯ ಸ್ಥಳಗಳನ್ನು ಗುರುತಿಸಲಾಗುತ್ತದೆ.

ಇರ್ವಿನ್-ಗ್ಯಾಸ್ ಸಿಂಡ್ರೋಮ್ ಚಿಕಿತ್ಸೆಗಳು

ಬಹುತೇಕ ಸಂದರ್ಭಗಳಲ್ಲಿ ಈ ಸಮಸ್ಯೆ ಸರಿಯಾದ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖವಾಗುತ್ತದೆ. ಇದನ್ನು ಪರಿಹರಿಸಲು ಮೊದಲಿಗೆ ಸ್ಟಿರಾಯ್ಡ್ ಅಥವಾ ಉರಿಯೂತ ತಗ್ಗಿಸುವ ಡ್ರಾಪ್ಸುಗಳನ್ನು ನೀಡಲಾಗುತ್ತದೆ. ಉರಿಯೂತ ಹೆಚ್ಚಾದರೆ ಮಾತ್ರೆಗಳು ಅಥವಾ ಕಣ್ಣಿನ ಒಳಭಾಗಕ್ಕೆ ಇಂಜೆಕ್ಷನ್ ರೂಪದಲ್ಲಿ ಔಷಧಿ ನೀಡಬಹುದು. ತೀವ್ರತರ ಪ್ರಕರಣಗಲ್ಲಿ ಕಣ್ಣಿನ ಒಳಕ್ಕೇ ನೇರವಾಗಿ ಪರಿಣಾಮಕಾರಿ ಔಷಧಿ ಹಾಕಲಾಗುತ್ತದೆ. ಅಪರೂಪದ ಸಂದರ್ಭಗಳಲ್ಲಿ ಲೇಸರ್ ಅಥವಾ ಇತರ ಕ್ರಮಗಳು ಅಗತ್ಯವಾಗಬಹುದು. ಈ ಚಿಕಿತ್ಸೆಗಳ ನಂತರ ಸಾಧಾರಣವಾಗಿ ದೃಷ್ಟಿ ಕೆಲ ವಾರಗಳಿಂದ ಕೆಲವು ತಿಂಗಳುಗಳ ನಂತರ ಮೊದಲಿನಂತೆ ಆಗುತ್ತದೆ.

ಈ ಸಮಸ್ಯೆಯನ್ನು ತಡೆಗಟ್ಟಲು ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆಗೆ ಮುನ್ನ ಮತ್ತು ನಂತರ ಉರಿಯೂತ ವಿರೋಧಿ ಡ್ರಾಪ್ಸುಗಳನ್ನು ನಿಯಮಿತವಾಗಿ ಬಳಸಬೇಕು. ಡಯಾಬಿಟಿಸ್ ನಿಯಂತ್ರಣದಲ್ಲಿ ಇರಬೇಕು. ಶಸ್ತ್ರಚಿಕಿತ್ಸೆಯ ನಂತರ ಕಣ್ಣಿನ ಆರೈಕೆಯಲ್ಲಿ ಎಚ್ಚರಿಕೆ ವಹಿಸಬೇಕು. ದೃಷ್ಟಿಯಲ್ಲಿ ಏನೇ ಬದಲಾವಣೆ ಕಂಡುಬಂದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಕೊನೆಮಾತು: ಒಟ್ಟಾರೆಯಾಗಿ ಹೇಳುವುದಾದರೆ ಇರ್ವಿನ್–ಗ್ಯಾಸ್ ಸಿಂಡ್ರೋಮ್ ಒಂದು ತಾತ್ಕಾಲಿಕ ಹಾಗೂ ಚಿಕಿತ್ಸೆಸಾಧ್ಯವಾದ ಕಣ್ಣಿನ ಉರಿಯೂತ ಸಂಬಂಧಿತ ಸಮಸ್ಯೆಯಾಗಿದೆ. ಶಸ್ತ್ರಚಿಕಿತ್ಸೆಯ ನಂತರ ದೃಷ್ಟಿ ಅಸ್ಪಷ್ಟವಾದರೂ, ಸರಿಯಾದ ಸಮಯದಲ್ಲಿ ಪತ್ತೆಹಚ್ಚಿ ಚಿಕಿತ್ಸೆ ನೀಡಿದರೆ ದೃಷ್ಟಿ ಸಂಪೂರ್ಣವಾಗಿ ಪುನಃ ಸುಧಾರಿಸುತ್ತದೆ. ವೈದ್ಯರ ಸಲಹೆ, ನಿಯಮಿತ ಹನಿ ಬಳಕೆ ಮತ್ತು ಪರೀಕ್ಷೆಗಳು ಈ ರೋಗವನ್ನು ತಡೆಯಲು ಮತ್ತು ಕಣ್ಣಿನ ಆರೋಗ್ಯ ಕಾಪಾಡಲು ಮುಖ್ಯವಾದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ ನೌಗಮ್ ಪೋಲಿಸ್ ಠಾಣೆ ಸ್ಫೋಟ, ಮೃತರ ಸಂಖ್ಯೆ 9ಕ್ಕೆ ಏರಿಕೆ, 32 ಮಂದಿ ಗಾಯ, ಭಯೋತ್ಪಾದಕ ಕೃತ್ಯವೇ? ಪೊಲೀಸರು ಹೇಳುವುದೇನು-Video

ಬೆಳೆಗಾರರ ಹೆಸರಲ್ಲಿ ಕಬ್ಬಿನ ಟ್ರ್ಯಾಕ್ಟರ್'ಗಳಿಗೆ ಬೆಂಕಿ: ತನಿಖೆಗೆ ರಾಜ್ಯ ಸರ್ಕಾರ ಆದೇಶ

ಮುಸ್ಲಿಂ-ಯಾದವ್ RJD ತುಷ್ಠಿಕರಣಕ್ಕೆ ಬುದ್ಧಿ ಕಲಿಸಿದ್ದು ನಮ್ಮ ಮಹಿಳೆ-ಯುವಕರ M-Y ಸೂತ್ರ: ಪ್ರಧಾನಿ ಮೋದಿ

ಬಿಹಾರ ಚುನಾವಣೆಯಲ್ಲಿ ಅನ್ಯಾಯ; ಫಲಿತಾಂಶಗಳು ಆಘಾತಕಾರಿ: ಹೀನಾಯ ಸೋಲಿನ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ!

ಬಿಹಾರ ಸಿಎಂ ಗಾದಿಯಲ್ಲಿ ಮುಂದುವರೆಯುತ್ತಾರಾ ನಿತೀಶ್ ಕುಮಾರ್?: ಮೋದಿಯ ಹನುಮಾನ್ ಚಿರಾಗ್ ಪಾಸ್ವಾನ್ ಹೇಳಿದ್ದೇನು?

SCROLL FOR NEXT