ಬಿಹಾರ ವಿಧಾನಸಭಾ ಚುನಾವಣೆ ನಂತರ ಕರ್ನಾಟಕದ ಕಾಂಗ್ರೆಸ್ ರಾಜಕಾರಣದಲ್ಲಿ ಅಲೆಗಳು ಏಳುವುದು ಬಹುತೇಕ ಖಚಿತ. ಈ ಅಲೆಗಳ ಮೇಲೆ ಸಿಎಂ ಸಿದ್ದರಾಮಯ್ಯ ಅಥವಾ ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರಲ್ಲಿ ಯಾರು ತೇಲುತ್ತಾರೆ ಎಂಬ ಪ್ರಶ್ನೆ ಈಗ ಇದೆ.
ಸಿದ್ದರಾಮಯ್ಯ ಅವರಿಗೆ ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ತೋರಿದರೆ ಅಲ್ಲಿಗೆ ಅಲೆಗಳ ಮೇಲೆ ತೇಲುವವರು ಸಿದ್ದರಾಮಯ್ಯ ಅವರೇ. ಏಕೆಂದರೆ, ಸಂಪುಟ ಪುನಾರಚನೆಗೆ ಅನುಮತಿಸಿದರೆ ಅದು ಸಿದ್ದರಾಮಯ್ಯ ನಾಯಕತ್ವ ಮುಂದುವರಿಯಲಿದೆ ಎಂಬ ಸ್ಪಷ್ಟ ಸಂದೇಶ. ಸಿದ್ದರಾಮಯ್ಯ ಅವರಿಗೆ ಸಂಪುಟ ಪುನಾರಚನೆಗೆ ಅನುಮತಿಸದೇ ನಾಯಕತ್ವದ ಗೊಂದಲವನ್ನು ಹೈಕಮಾಂಡ್ ಮುಂದುವರಿಸಲೂಬಹುದು. ಇಲ್ಲವೇ ನಾಯಕತ್ವ ಬದಲಾವಣೆಗೂ ಮುಂದಾಗಬಹುದು.
ಆದರೆ, ಸದ್ಯದ ಪರಿಸ್ಥಿತಿಯಲ್ಲಿ ನಾಯಕತ್ವ ಬದಲಾವಣೆಯ ಯಾವುದೇ ಸಂದೇಶಗಳನ್ನು ಹೈಕಮಾಂಡ್ ರವಾನಿಸಿಲ್ಲ. ಆದರೆ, ಗೊಂದಲವನ್ನು ಜೀವಂತವಾಗಿರಿಸಿದೆ. ಈ ನಡುವೆಯೇ ಸಿದ್ದರಾಮಯ್ಯ ಅವರು ಅಕ್ಟೋಬರ್ 13 ರಂದು ಸಂಪುಟ ಸಹೋದ್ಯೋಗಿಗಳಿಗೆ ಔತಣಕೂಟ ಏರ್ಪಡಿಸಿರುವುದು ಕುತೂಹಲ ಕೆರಳಿಸಿದೆ. ಸಿದ್ದರಾಮಯ್ಯ ತಮ್ಮ ಪಟ್ಟುಗಳನ್ನು ಹಾಕಲು ಅಖಾಡಕ್ಕೆ ಇಳಿಯುವ ಸೂಚನೆ ಇದಾಗಿರಬಹುದು.
ಒಂದಂತೂ ಸ್ಪಷ್ಟ. ಸಿದ್ದರಾಮಯ್ಯ ನಾಯಕತ್ವ ಬದಲಾವಣೆಯ ಗೊಂದಲಕ್ಕೆ ಹೈಕಮಾಂಡ್ ಇಂದಲ್ಲ, ನಾಳೆ ತೆರೆ ಎಳೆಯಲೇಬೇಕಿದೆ. ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಯ ಒಪ್ಪಂದ ಆಗಿದೆಯೇ ಎಂಬ ಬಗ್ಗೆ ಹೈಕಮಾಂಡೇ ಸ್ಪಷ್ಟಪಡಿಸಬೇಕಿದೆ. ಬಿಹಾರ ಚುನಾವಣೆ ನಂತರ ಈ ಎಲ್ಲ ಗೊಂದಲಗಳಿಗೆ ಉತ್ತರ ದೊರೆಯುವ ನಿರೀಕ್ಷೆ ಇದೆ.
ನಾಯಕತ್ವದ ಬದಲಾವಣೆಯ ಊಹಾಪೋಹಗಳಿಗೆ ಅಂತ್ಯ ಹಾಡುವಂತೆ ಸಿದ್ದರಾಮಯ್ಯ ಸಂಪುಟದ ಇಬ್ಬರು ಹಿರಿಯ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಡಾ.ಜಿ.ಪರಮೇಶ್ವರ್ ಅವರು ಇದೇ ಮೊದಲ ಬಾರಿಗೆ ಹೈಕಮಾಂಡ್ ಗೆ ಮನವಿ ಮಾಡಿರುವುದು ಹೊಸ ಬೆಳವಣಿಗೆ. ಈ ಇಬ್ಬರೂ ಹಿರಿಯ ಸಚಿವರು ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿರುವುದು ವಿಶೇಷ.
ಸಿದ್ದರಾಮಯ್ಯ ನವೆಂಬರ್ ಅಂತ್ಯ ಇಲ್ಲವೇ ಡಿಸೆಂಬರ್ ನಲ್ಲಿ ಸಚಿವ ಸಂಪುಟ ಪುನಾರಚನೆಗೆ ಸಿದ್ದತೆಯಲ್ಲಿದ್ದಾರೆ. ಆದರೆ, ಪಕ್ಷದಲ್ಲೇ ಒಂದು ಗುಂಪಿಗೆ ಇದು ಇಷ್ಟವಿಲ್ಲ. ಸಿದ್ದರಾಮಯ್ಯ ಅವರಿಗೆ ಸಚಿವ ಸಂಪುಟ ಪುನರ್ ರಚನೆಗೆ ಹೈಕಮಾಂಡ್ ಅಸ್ತು ಎಂದರೆ ಸಿದ್ದರಾಮಯ್ಯ ಅವರ ನಾಯಕತ್ವ ಮುಂದುವರಿಯಲಿದೆ ಎಂಬ ಸಂದೇಶ ರವಾನೆಯಾಗುತ್ತದೆ. ಹೀಗಾಗಿ, ಸಚಿವ ಸಂಪುಟ ಪುನರ್ ರಚನೆಯನ್ನು ತಡೆಯಬೇಕೆಂಬುದು ಸಿದ್ದರಾಮಯ್ಯ ವಿರೋಧಿ ಗುಂಪಿನ ಕಸರತ್ತು.
ಸಿದ್ದರಾಮಯ್ಯ ಸರಕಾರಕ್ಕೆ ನವೆಂಬರ್ ನಲ್ಲಿ ಎರಡೂವರೆ ವರ್ಷ ಪೂರ್ಣಗೊಳ್ಳಲಿದೆ. ಎರಡೂವರೆ ವರ್ಷದ ನಂತರ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲಿದ್ದಾರೆ. ಈ ಕುರಿತು ಒಪ್ಪಂದ ಆಗಿದೆ ಎಂಬ ಮಾತುಗಳು ಸರಕಾರ ರಚನೆಯ ಕಾಲದಿಂದಲೇ ಕೇಳಿ ಬರುತ್ತಲೇ ಇದೆ. ಸಿದ್ದರಾಮಯ್ಯ ಅವರು ಕೆಲವು ತಿಂಗಳ ಹಿಂದೆ ದೆಹಲಿಯಲ್ಲಿ ಹೈಕಮಾಂಡ್ ಅಂಗಳದಲ್ಲಿ ನಿಂತು ಐದು ವರ್ಷಗಳ ಕಾಲವೂ ನಾನೇ ಮುಖ್ಯಮಂತ್ರಿ. ಅಧಿಕಾರ ಹಂಚಿಕೆಯ ಒಪ್ಪಂದ ಆಗಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಶಾಸಕರ ಬೆಂಬಲ ಇಲ್ಲ. ಅಸೆಂಬ್ಲಿಗೆ 2028ರಲ್ಲಿ ನಡೆಯುವ ಚುನಾವಣೆಗೆ ನನ್ನದೇ ನಾಯಕತ್ವ ಎಂದು ಸಾರಿ ಹೇಳಿದ್ದಾರೆ. ಆ ಮೂಲಕ ಮೊದಲ ಬಾರಿಗೆ ಅಧಿಕಾರ ಹಸ್ತಾಂತರದ ಚರ್ಚೆಗೆ ತೆರೆ ಎಳೆಯಲು ಪ್ರಯತ್ನಿಸಿದ್ದರು.
ಇದಾದ ಕೆಲವು ತಿಂಗಳು ನಾಯಕತ್ವ ಬದಲಾವಣೆ ಚರ್ಚೆ ನಿಂತಿತ್ತು. ಆದರೆ, ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಸಿದ್ದರಾಮಯ್ಯ ಅವರಂತೂ ಐದು ವರ್ಷಗಳ ಕಾಲವೂ ನಾನೇ ಮುಖ್ಯಮಂತ್ರಿ ಎಂದು ಕಳೆದ ವಾರ ಮತ್ತೆ ಸಾರಿ ಹೇಳಿದ್ದಾರೆ. ಮುಂದಿನ ವರ್ಷಗಳಲ್ಲಿಯೂ ದಸರಾ ಉತ್ಸವದಲ್ಲಿ ನಾನೇ ಪುಷ್ಪಾರ್ಚನೆ ಮಾಡುತ್ತೇನೆ ಎಂಬ ಭರವಸೆ ಇದೆ ಎಂದಿದ್ದಾರೆ. ಮುಖ್ಯಮಂತ್ರಿ ಗಾದಿಯಲ್ಲಿರುವವರು ಪದೇ ಪದೇ ಹೀಗೆ ಹೇಳುವುದು ಅಸ್ಥಿರತೆಯ ಲಕ್ಷಣವಲ್ಲವೇ? ಹೈಕಮಾಂಡ್ ಮರ್ಜಿಯಲ್ಲಿ ನಾನಿಲ್ಲ ಎಂಬ ಸಂದೇಶವೇ? ಇಲ್ಲವೇ ಪರಸ್ಪರರನ್ನು ಪಳಗಿಸುವ ಕಸರತ್ತೇ?
ಯಾವುದೇ ಒಬ್ಬ ಕಾಂಗ್ರೆಸ್ ಮುಖ್ಯಮಂತ್ರಿ ಅವಧಿ ಪೂರ್ಣ ತಾವೇ ಮುಖ್ಯಮಂತ್ರಿ, ಮುಂದಿನ ಚುನಾವಣೆಯೂ ತಮ್ಮ ನೇತೃತ್ವದಲ್ಲೇ ನಡೆಯುತ್ತದೆ ಎಂದು ಮಾತಾಡುವುದಿಲ್ಲ. ಅದು ಕಾಂಗ್ರೆಸ್ಸಿನ ಸಂಸ್ಕೃತಿಯೂ ಅಲ್ಲ. ಅಲ್ಲಿ ಎಲ್ಲವೂ ಹೈಕಮಾಂಡ್ ನಿರ್ದೇಶನವೇ. ಇದು ಸಿದ್ದರಾಮಯ್ಯ ಅವರಿಗೂ ಚೆನ್ನಾಗಿ ಗೊತ್ತಿದೆ. ಆದರೂ ಅವರು ಹೀಗೆ ಮಾತಾಡಿ ತಮ್ಮ ತಂಟೆಗೆ ಬಂದರೆ ಹುಷಾರ್ ಎಂಬ ಸಂದೇಶವನ್ನು ರವಾನಿಸಿದ್ದಾರೆ. ನಾಯಕತ್ವ ಕುರಿತು ಸಿದ್ದರಾಮಯ್ಯ ಅವರ ಈ ಹೇಳಿಕೆಯನ್ನು ಹೈಕಮಾಂಡ್ ಎಲ್ಲಿಯೂ ಸಮರ್ಥಿಸಿಕೊಂಡಿಲ್ಲ. ಇದೇ ವೇಳೆ ಅಧಿಕಾರ ಹಂಚಿಕೆಯ ಒಪ್ಪಂದ ಆಗಿದೆಯೇ ಇಲ್ಲವೇ ಎಂಬ ಬಗ್ಗೆ ಹೈಕಮಾಂಡ್ ಮೌನವಹಿಸಿದೆ.
ಡಿಸಿಎಂ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರು. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ. ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರೇ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾದ ನಿದರ್ಶನಗಳು ಈ ಹಿಂದೆಯೂ ನಮ್ಮ ರಾಜ್ಯವೂ ಸೇರಿದಂತೆ ಬೇರೆ ರಾಜ್ಯಗಳಲ್ಲಿ ನಡೆದಿವೆ. ಅಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ಭಿನ್ನಮತೀಯ ಚಟುವಟಿಕೆಗಳು ಉಲ್ಭಣಗೊಂಡಿವೆ. ಆದರೆ, ಶಿವಕುಮಾರ್ ಇಂತಹ ಭಿನ್ನಮತೀಯ ಚಟುವಟಿಕೆಗಳಿಗೆ ಆಸ್ಪದ ನೀಡಿಲ್ಲ.
ಅಧಿಕಾರ ಹಂಚಿಕೆ ಬಗ್ಗೆ ಅನಗತ್ಯ ಚರ್ಚೆಯು ಪಕ್ಷ ವಿರೋಧಿ ಕೆಲಸ. ಈ ವಿಚಾರದಲ್ಲಿ ಮಾತಾಡಿದವರಿಗೆ ನೋಟಿಸ್ ನೀಡುವಂತೆ ಶಿವಕುಮಾರ್ ಸೂಚಿಸಿದ್ದಾರೆ. ಹೀಗೆ ಸೂಚಿಸಿದ ನಂತರವೂ ಕೈ ಶಾಸಕರ ಹೇಳಿಕೆ ನಿಂತಿಲ್ಲವೆಂದರೆ ಹೈಕಮಾಂಡ್ ನಲ್ಲೇ ಇದರ ಸೂತ್ರ ಅಡಗಿದೆಯಲ್ಲವೇ?
ಹಾಗೇ ನೋಡಿದರೆ ಸಿದ್ದರಾಮಯ್ಯ ಸರಕಾರ 2023ರಲ್ಲಿ ರಚನೆಯಾದ ಗರ್ಭದಲ್ಲೇ ಗೊಂದಲ ಅಡಗಿತ್ತು. ಫಲಿತಾಂಶ ಪ್ರಕಟವಾಗಿ ಒಂದು ವಾರ ಕಳೆದರೂ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ನಡುವೆ ಮುಖ್ಯಮಂತ್ರಿ ಗಾದಿಗಾಗಿ ಹಗ್ಗಜಗ್ಗಾಟದಲ್ಲಿ ಸರಕಾರ ರಚನೆ ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್ಸಿನ ದೆಹಲಿಯ ದೊರೆಗಳು ಕಸರತ್ತು ನಡೆಸಿ ಸೂತ್ರಗಳನ್ನು ಹೆಣೆದರು. ನಂತರವೇ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು. ಸಿದ್ದರಾಮಯ್ಯ 2013ರಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಕ್ಕೂ 2023ರಲ್ಲಿ ಆಯ್ಕೆಯಾದ ಸಂದರ್ಭಕ್ಕೂ ಬಹಳ ವ್ಯತ್ಯಾಸವಿದೆ. ಆಗ ಗೊಂದಲವಿರಲಿಲ್ಲ. ಈಗ ಗೊಂದಲವಿದೆ. ಬಲವಾದ ಪ್ರತಿಸ್ಪರ್ಧಿಯಾಗಿ ಶಿವಕುಮಾರ್ ರೂಪುಗೊಂಡಿದ್ದಾರೆ.
ಹೈಕಮಾಂಡ್ ಗೆ ಮಾಸ್ ಲೀಡರ್ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು ಅಷ್ಟು ಸುಲಭವಲ್ಲ. ಇದೇ ವೇಳೆ ಶಿವಕುಮಾರ್ ಅವರು ಪಕ್ಷಕ್ಕಾಗಿ ಮಾಡಿರುವ ತ್ಯಾಗಕ್ಕೆ ಪ್ರತಿಫಲ ನೀಡಬೇಕೆಂಬ ಹಂಬಲವೂ ಇದೆ. ಇದು ಹೈಕಮಾಂಡ್ ನ ಇಕ್ಕಟ್ಟಿನ ಸ್ಥಿತಿ. ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಬದಲಿಸಿದರೂ ಶಿವಕುಮಾರ್ ಅವರನ್ನೇ ಪಟ್ಟದಲ್ಲಿ ಕೂರಿಸುತ್ತಾರೆಂದು ಹೇಳಲಾಗದು. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ಅಹಿಂದ ವರ್ಗದವರನ್ನೇ ಕೂರಿಸಬೇಕೆಂಬ ಕೂಗು ಏಳುವುದು ಸಹಜ. ಆಗ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಗಾದಿ ಒಲಿಯಬಹುದು. ಖರ್ಗೆ ಅವರು ಕೆಲವು ದಿನಗಳ ಹಿಂದೆ ತಾವು ಮುಖ್ಯಮಂತ್ರಿಯಾಗಲಿಲ್ಲ ಎಂದು ನೋವು ತೋಡಿಕೊಂಡಿದ್ದು ಉಂಟು. ಎಲ್ಲವೂ ಕಾಂಗ್ರೆಸ್ ಹೈಕಮಾಂಡ್ ಮೇಲೆ ಅವಲಂಬಿತ.
ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com