2025ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರ ಘೋಷಣೆಯಾದಾಗ, ಬಹಳಷ್ಟು ಜನರು ದೀರ್ಘ ಕಾಲದಿಂದ ನೊಬೆಲ್ ಶಾಂತಿ ಪ್ರಶಸ್ತಿಗೆ ಹಾತೊರೆದಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬದಲು ಮರಿಯಾ ಕೊರಿನಾ ಮಚಾದೊ ಅವರಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ಆಶ್ಚರ್ಯಚಕಿತರಾಗಿದ್ದಾರೆ. ಆದರೆ, ಇದನ್ನು ಗಂಭೀರವಾಗಿ ಅವಲೋಕಿಸಿದಾಗ, ನೊಬೆಲ್ ಶಾಂತಿ ಪುರಸ್ಕಾರ ಸೂಕ್ತವಾದವರಿಗೇ ಲಭಿಸಿದೆ ಎನ್ನುವುದು ಅರಿವಿಗೆ ಬರುತ್ತದೆ. ನೊಬೆಲ್ ಸಮಿತಿ ಎನ್ನುವುದು ಯಾವುದೋ ಜನಪ್ರಿಯತೆಯ ಸ್ಪರ್ಧೆಯಾಗಲಿ, ಅಥವಾ ಸ್ವಯಂ ಪ್ರಚಾರದ ವೇದಿಕೆಯಾಗಲಿ ಅಲ್ಲ. ಅದು ಶಾಂತಿ, ನ್ಯಾಯ ಮತ್ತು ಮಾನವ ಗೌರವಕ್ಕಾಗಿ ನಿರಂತರವಾದ, ಧೈರ್ಯಶಾಲಿಯಾದ ಮತ್ತು ನೈತಿಕ ಹೋರಾಟಗಳನ್ನು ಗೌರವಿಸುವ ಪುರಸ್ಕಾರವಾಗಿದೆ.
ಮರಿಯಾ ಕೊರಿನಾ ಮಚಾದೊ ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಯಾವುದೇ ಪ್ರಚಾರ ಕಾರ್ಯ ನಡೆಸಿಲ್ಲ. ಬದಲಿಗೆ, ಆಕೆ ಶಾಂತಿಯ ಮೌಲ್ಯಗಳನ್ನೇ ಬೆಂಕಿಯ ಮಳೆಯಲ್ಲೂ ಜೀವಿಸಿದ್ದಾರೆ. ವೆನೆಜುವೆಲಾದಲ್ಲಿ ಮರಿಯಾ ಕೊರಿನಾ ಮಚಾದೊ ಅವರು ಸಾಕಷ್ಟು ವೈಯಕ್ತಿಕ ಅಪಾಯಗಳು, ರಾಜಕೀಯ ನಿಷೇಧಗಳು, ಬಲವಂತದ ಬಚ್ಚಿಟ್ಟುಕೊಳ್ಳುವಿಕೆಗಳನ್ನು ಎದುರಿಸಿದ್ದಾರೆ. ಇಷ್ಟಾದರೂ ಅವರು ತನ್ನ ದೇಶವಾದ ವೆನೆಜುವೆಲಾದಲ್ಲೇ ಉಳಿದುಕೊಂಡಿದ್ದಾರೆ. ಸರ್ವಾಧಿಕಾರ ಆಕೆಯನ್ನು ಬೆದರಿಸಿದಾಗಲೂ ಮರಿಯಾ ಹೆದರಿ ಓಡಿ ಹೋಗಲಿಲ್ಲ. ಬದಲಿಗೆ ತನ್ನ ದೇಶದಲ್ಲೇ ಉಳಿದುಕೊಂಡು, ವೆನೆಜುವೆಲಾದ ಜನರಿಗೆ ನಿರಂತರವಾಗಿ ತನ್ನ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಆಕೆಯ ಹೋರಾಟ ವೆನೆಜುವೆಲಾದ ನಾಗರಿಕರ ಸಬಲೀಕರಣದತ್ತ, ಪ್ರಜಾಪ್ರಭುತ್ವದ ಹಕ್ಕುಗಳನ್ನು ರಕ್ಷಿಸುವತ್ತ, ಮತ್ತು ಸರ್ವಾಧಿಕಾರಿ ಆಡಳಿತದಿಂದ ಶಾಂತಿಯುತವಾಗಿ ಪ್ರಜಾಪ್ರಭುತ್ವದ ಆಡಳಿತದತ್ತ ಸಾಗುವುದಕ್ಕೆ ಕೇಂದ್ರಿತವಾಗಿದೆ. ಮರಿಯಾರ ಕಥೆ ಪ್ರಚಾರಕ್ಕೆ ಮೀಸಲಲ್ಲ. ಆಕೆಯ ಜೀವನಗಾಥೆ ಅತ್ಯಂತ ಭೀಕರವಾದ ವಾತಾವರಣದಲ್ಲೂ ತ್ಯಾಗ, ನಿರಂತರ ಹೋರಾಟ, ಮತ್ತು ನೈತಿಕ ಸಾಕ್ಷಿಯದ್ದಾಗಿದೆ. ಇಂತಹ ಅಸಾಧಾರಣ ಧೈರ್ಯವಂತರನ್ನೇ ನೊಬೆಲ್ ಶಾಂತಿ ಪ್ರಶಸ್ತಿ ಐತಿಹಾಸಿಕವಾಗಿಯೂ ಅರಸಿ ಹೋಗಿದೆ.
ನೊಬೆಲ್ ಪ್ರಶಸ್ತಿಗೆ ಟ್ರಂಪ್ ನಡೆಸಿರುವ ಪ್ರಯತ್ನಗಳು ಬಹುತೇಕ ಒಪ್ಪಂದಗಳು, ಘೋಷಣೆಗಳು, ಶಾಂತಿ ಒಪ್ಪಂದಗಳು, ಕದನ ವಿರಾಮ ಪ್ರಸ್ತಾವನೆಗಳು ಮತ್ತು ವ್ಯಾವಹಾರಿಕ ರಾಜತಾಂತ್ರಿಕತೆಯ ಮೇಲೆ ಆಧಾರಿತವಾಗಿದ್ದವು. ಆದರೆ, ಶಾಂತಿ ಕೇವಲ ವ್ಯಾಪಾರ ಒಪ್ಪಂದಗಳ ಮೇಲೆ ಅವಲಂಬಿತವಾಗಲು ಸಾಧ್ಯವಿಲ್ಲ. ಅದು ನ್ಯಾಯದ ತಳಹದಿಯ ಮೇಲೆ, ಸಂಸ್ಥೆಗಳ ಮೇಲೆ, ಮಾನವ ಹಕ್ಕುಗಳಿಗೆ ತಕ್ಕ ಗೌರವದ ಮೇಲೆ ಮತ್ತು ಶೋಷಣೆಗೊಳಗಾದವರ ಕಣ್ಣಿನಲ್ಲಿ ಗೌರವ ಸಂಪಾದಿಸಿದವರ ಮೇಲೆ ಅವಲಂಬಿಸಿರುತ್ತದೆ.
ಮಚಾದೊ ಅವರ ಕಾರ್ಯಗಳು ಸಾಂಸ್ಥಿಕ ಬದಲಾವಣೆಯ ಆಧಾರಿತವಾಗಿದ್ದು, ಚುನಾವಣೆಗಳನ್ನು ತಮಗೆ ಬೇಕಾದಂತೆ ನಡೆಸುವ, ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ, ಮತ್ತು ವಿರೋಧಿಸುವವರನ್ನು ಅಪರಾಧಿಗಳಂತೆ ಬಿಂಬಿಸುವ ವ್ಯವಸ್ಥೆಗೆ ಮಚಾದೊ ಸವಾಲೊಡ್ಡಿದ್ದಾರೆ. ಅವರು ಅಧಿಕಾರಸ್ಥರೊಡನೆ ಒಪ್ಪಂದ ನಡೆಸಲು ಪ್ರಯತ್ನಿಸಿಲ್ಲ. ಬದಲಿಗೆ, ಅಧಿಕಾರ ಜನರಿಂದ ಬರಬೇಕೇ ಹೊರತು ಬಲಪ್ರಯೋಗದಿಂದಲ್ಲ ಎಂಬ ಸ್ಪಷ್ಟ ಬದಲಾವಣೆಯನ್ನು ವೆನೆಜುವೆಲಾದಲ್ಲಿ ತರಲು ಪ್ರಯತ್ನ ನಡೆಸಿದ್ದಾರೆ.
ಅಲ್ಫ್ರೆಡ್ ನೊಬೆಲ್ ತನ್ನ ಉಯಿಲಿನಲ್ಲಿ, ನೊಬೆಲ್ ಶಾಂತಿ ಪ್ರಶಸ್ತಿ ದೇಶಗಳ ನಡುವೆ ಸೋದರತ್ವ ತರಲು ಶ್ರಮಿಸಿದ, ಸೇನೆಗಳನ್ನು ಇಲ್ಲವಾಗಿಸಲು ಅಥವಾ ಕಡಿಮೆಗೊಳಿಸಲು ಪ್ರಯತ್ನಿಸಿದ, ಶಾಂತಿ ಸಭೆಗಳನ್ನು ಆಯೋಜಿಸಿದ ಅಥವಾ ಪ್ರಚುರಪಡಿಸಿದ ವ್ಯಕ್ತಿಗಳನ್ನು ಗುರುತಿಸಲು ನೀಡುವಂತದ್ದು ಎಂದು ವಿವರಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ವಿದೇಶಾಂಗ ನೀತಿ ಮತ್ತು ಶಾಂತಿ ಸ್ಥಾಪನಾ ಪ್ರಯತ್ನಗಳು ಸಾಕಷ್ಟು ಗಮನ ಸೆಳೆದಿದ್ದರೂ, ಅವರ ಬಹಳಷ್ಟು ಕ್ರಮಗಳು ವಿಭಜಕ, ಏಕಪಕ್ಷೀಯ, ಮತ್ತು ಕೆಲವು ಸಂದರ್ಭಗಳಲ್ಲಿ ದುರ್ಬಲವಾದ ಬಹುಪಕ್ಷೀಯವಾದವು ಎಂದು ಟ್ರಂಪ್ ಟೀಕಾಕಾರರು ವಾದಿಸಿದ್ದಾರೆ. ಅವರ ಬಹಳಷ್ಟು ಕ್ರಮಗಳು ಇನ್ನೂ ಪೂರ್ಣಗೊಂಡಿಲ್ಲ, ಅಥವಾ ಅವುಗಳನ್ನು ಪ್ರಶ್ನಿಸಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಮಚಾದೊ ಅವರ ಕಾರ್ಯಗಳನ್ನು ಅವರು ಪ್ರತಿನಿಧಿಸುವ ಜನರಿಂದ ಮತ್ತು ಅವರು ರಕ್ಷಿಸಲು ಬಯಸುವ ದುರ್ಬಲ ಪ್ರಜಾಪ್ರಭುತ್ವದಿಂದ ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಅವರ ಪ್ರಯತ್ನಗಳು ಆಂತರಿಕ ಅಧಿಕಾರದ ಹೋರಾಟವನ್ನು ಆಧರಿಸಿದ್ದು, ವಿದೇಶಾಂಗ ರಾಜತಾಂತ್ರಿಕತೆಯ ಮೇಲಲ್ಲ.
ಮಚಾದೊ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸುವ ಮೂಲಕ, ನೊಬೆಲ್ ಸಮಿತಿ ಒಂದು ಸಾಂಕೇತಿಕ ನಿಲುವನ್ನು ಪ್ರದರ್ಶಿಸಿದೆ. ಅಂದರೆ, ಸರ್ವಾಧಿಕಾರವನ್ನು ದೇಶದ ಒಳಗೇ ಇದ್ದು, ವೈಯಕ್ತಿಕ ಅಪಾಯದ ಸಾಧ್ಯತೆಗಳ ನಡುವೆಯೂ ಎದುರಿಸುವುದಕ್ಕೆ ಶಕ್ತಿಶಾಲಿ ಬಂಡವಾಳಶಾಹಿಗಳ ನಡುವೆ ನಿಂತು ಸಂದೇಶ ನೀಡುವುದಕ್ಕಿಂತ ಹೆಚ್ಚು ಮೌಲ್ಯವಿದೆ ಎಂದು ಸಮಿತಿ ಸೂಚಿಸಿದೆ. ಇದರಿಂದ ಒಂದು ಸ್ಪಷ್ಟ ಸಂದೇಶ ಲಭಿಸಿದೆ. ಅದೇನೆಂದರೆ: ನೊಬೆಲ್ ಪ್ರಶಸ್ತಿ ನಿಜಕ್ಕೂ ಶಾಂತಿಗಾಗಿ ಶ್ರಮಿಸಿದವರಿಗೆ, ಹೋರಾಡಿದವರಿಗೇ ಹೊರತು, ಶಾಂತಿ ಸ್ಥಾಪನೆಗೆ ಮಧ್ಯಸ್ಥಿಕೆ ವಹಿಸಿದ್ದೇನೆ ಎಂದು ಘೋಷಿಸಿಕೊಳ್ಳುವವರಿಗಲ್ಲ.
ಈ ಪ್ರಶಸ್ತಿ ವರ್ಷಗಳಿಂದ ದಮನಕಾರಿ ಆಡಳಿತ, ಹಣದುಬ್ಬರ, ಕೊರತೆಗಳು, ಮತ್ತು ಅಜ್ಞಾತವಾಸವನ್ನು ಅನುಭಬಿಸುತ್ತಿರುವ ವೆನೆಜುವೆಲಾದ ಜನರ ಧ್ವನಿಗೆ ಇನ್ನಷ್ಟು ಶಕ್ತಿ ನೀಡಿದೆ. ಸಾಮಾನ್ಯವಾಗಿ ಇಂತಹ ಧ್ವನಿಗಳು ರಾಜತಾಂತ್ರಿಕತೆಯ ಮಾರ್ಗಗಳಲ್ಲಿ, ಅಥವಾ ಪಕ್ಷಪಾತಿ ಮಾಧ್ಯಮ ಪ್ರಚಾರಗಳಲ್ಲಿ ಎಲ್ಲೋ ಕಳೆದುಹೋಗುತ್ತವೆ.
ನೊಬೆಲ್ ಪ್ರಶಸ್ತಿ ಘೋಷಣೆ ರಾಜತಾಂತ್ರಿಕತೆ ಅಥವಾ ಒಪ್ಪಂದಗಳು ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಎಂಬ ಸಂದೇಶವನ್ನು ನೀಡಿಲ್ಲ. ಇಂತಹ ಒಪ್ಪಂದಗಳೂ ಪರಿಣಾಮಕಾರಿಯಾಗುತ್ತವೆ. ಆದರೆ, ಮಚಾದೊ ಅವರಿಗೆ ನೊಬೆಲ್ ಪ್ರಶಸ್ತಿ ನೀಡುವ ಮೂಲಕ, ರಾಜತಾಂತ್ರಿಕತೆ ನ್ಯಾಯದ ತಳಹದಿ ಹೊಂದಿರಬೇಕು, ಮತ್ತು ಸ್ವಾತಂತ್ರ್ಯವಿಲ್ಲದ ಶಾಂತಿ ನೈಜ ಶಾಂತಿಯಲ್ಲ ಎಂದು ಸಾರಲಾಗಿದೆ. ಮಚಾದೊ ಅವರಿಗೆ ಪ್ರಶಸ್ತಿ ನೀಡುವ ಮೂಲಕ ಪ್ರಶಸ್ತಿಯ ಗುಣಮಟ್ಟವನ್ನೂ ಹೆಚ್ಚಿಸಲಾಗಿದ್ದು, ಶಾಂತಿಯನ್ನು ಕೇವಲ ಮಾತಿಗೆ ಹೇಳುವುದಲ್ಲ. ಬದಲಿಗೆ, ಶಾಂತಿಗಾಗಿ ಪ್ರತಿಕೂಲ ಸನ್ನಿವೇಶವನ್ನೂ ಎದುರಿಸಬೇಕು, ದುರ್ಬಲ ಜನರಿಗಾಗಿ ಧ್ವನಿ ಎತ್ತಬೇಕು.
ಸರಳವಾಗಿ ಹೇಳುವುದಾದರೆ, ಮರಿಯಾ ಕೊರಿನಾ ಮಚಾದೊ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಯಾಕೆ ಲಭಿಸಿದೆ ಎಂದರೆ, ಅವರ ಜೀವನ ನೊಬೆಲ್ ಶಾಂತಿ ಪುರಸ್ಕಾರ ಏನನ್ನು ಗೌರವಿಸುವ ಉದ್ದೇಶ ಹೊಂದಿದೆಯೋ, ಅದರ ಪ್ರತಿರೂಪದಂತಿದೆ. ಮಾನವ ಹಕ್ಕುಗಳ ರಕ್ಷಣೆಗಾಗಿ ಅವಿಶ್ರಾಂತ, ಧೈರ್ಯಯುತ ಹೋರಾಟ, ಎಲ್ಲರನ್ನೂ ಒಳಗೊಂಡ ಪ್ರಜಾಪ್ರಭುತ್ವ ಸ್ಥಾಪನೆಗಾಗಿ ಅಹಿಂಸಾತ್ಮಕ ಬದಲಾವಣೆಗೆ ಆಗ್ರಹ, ವೈಯಕ್ತಿಕ ಅಪಾಯವನ್ನೂ ಲೆಕ್ಕಿಸದೆ ಉದ್ದೇಶಕ್ಕಾಗಿ ಹೋರಾಡುವುದು ಮಚಾದೊ ಅವರ ಜೀವನವೇ ಆಗಿದೆ. ಜೀವನ ಪೂರ್ತಿ ಶಾಂತಿಗಾಗಿ ಹೋರಾಡುವುದಕ್ಕೆ ಎಷ್ಟೇ ಸಂಖ್ಯೆಯ ಒಪ್ಪಂದಗಳೂ ಸಮನಾಗಲಾರದ ಕಾರಣದಿಂದ ಡೊನಾಲ್ಡ್ ಟ್ರಂಪ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಲಭ್ಯವಾಗಿಲ್ಲ. ಅದರಲ್ಲೂ, ಐತಿಹಾಸಿಕವಾಗಿ ನೈತಿಕ ನ್ಯಾಯಪರತೆ ಯಾರು ದಬ್ಬಾಳಿಕೆಯನ್ನು ವಿರೋಧಿಸುವವರ ಪರ ಇದೆಯೇ ಹೊರತು, ಅಧಿಕಾರದಲ್ಲಿ ಕುಳಿತು ಶಾಂತಿಗಾಗಿ ಚರ್ಚೆ ನಡೆಸುವವರ ಪರ ಅಲ್ಲ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com