ಸಮುದ್ರ ಮಂಥನ ಯೋಜನೆ (ಸಾಂಕೇತಿಕ ಚಿತ್ರ) online desk
ಅಂಕಣಗಳು

ಭಾರತದ ಅವಿತಿರುವ ತೈಲ ಸಂಪತ್ತು ಪತ್ತೆಗೆ ನೂತನ ಸಮುದ್ರ ಮಂಥನ! (ಜಾಗತಿಕ ಜಗಲಿ)

ಈ ಯೋಜನೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಡಿಯಲ್ಲಿ ಬರಲಿದ್ದು, ಇದಕ್ಕೆ 84,084 ಕೋಟಿ ರೂಪಾಯಿಗಳ ಬರೋಬ್ಬರಿ ಹೂಡಿಕೆ ಮಾಡಲಾಗಿದೆ. ಈ ಯೋಜನೆ 2030-31ರ ಹಣಕಾಸು ವರ್ಷದ ತನಕ ಕಾರ್ಯಾಚರಿಸಲಿದೆ.

ಪ್ರತಿಯೊಂದು ಆರ್ಥಿಕತೆಯೂ ಇಂಧನದ ಆಧಾರದಲ್ಲೇ ಚಲಿಸುತ್ತದೆ. ಕಾರ್ಖಾನೆಗಳು, ಸಾಗಾಣಿಕಾ ವ್ಯವಸ್ಥೆ, ಕೃಷಿ, ವಿದ್ಯುತ್, ಅಷ್ಟೇ ಏಕೆ, ಅಡುಗೆ ಮನೆಗಳ ಸ್ಟವ್, ಯಾವುದೂ ಇಂಧನವಿಲ್ಲದೆ ಕಾರ್ಯಾಚರಿಸಲು ಸಾಧ್ಯವಿಲ್ಲ. ಯಾವಾಗ ಒಂದು ದೇಶ ತನ್ನ ಬಹುಪಾಲು ಇಂಧನವನ್ನು ಹೊರ ದೇಶಗಳಿಂದ ಆಮದು ಮಾಡಬೇಕಾಗಿ ಬರುತ್ತದೋ, ಆಗ ಸಮಸ್ಯೆ ಆರಂಭಗೊಳ್ಳುತ್ತದೆ. ಇಂದು ಭಾರತ ಅಕ್ಷರಶಃ ಅದೇ ಪರಿಸ್ಥಿತಿಯಲ್ಲಿ ಸಿಲುಕಿದೆ.

ನಮ್ಮ ಅವಶ್ಯಕತೆಯ ಕಚ್ಚಾ ತೈಲದ ಬಹುತೇಕ 88ರಿಂದ 89% ಮತ್ತು ನಮ್ಮ ಅವಶ್ಯಕತೆಯ ಸುಮಾರು ಅರ್ಧದಷ್ಟು ನೈಸರ್ಗಿಕ ಅನಿಲ ವಿದೇಶಗಳಿಂದಲೇ ಆಮದಾಗುತ್ತದೆ. ಈ ಒಂದು ವಾಸ್ತವ ವಿಚಾರವೇ ಮೌನವಾಗಿ ನಮ್ಮ ತೈಲ ಬೆಲೆಗಳು, ರಾಷ್ಟ್ರೀಯ ಬಜೆಟ್, ಮತ್ತು ಇತರ ದೇಶಗಳೊಡನೆ ನಾವು ವ್ಯವಹರಿಸುವ ರೀತಿಯನ್ನೂ ರೂಪಿಸುತ್ತವೆ.

ಇಂತಹ ಅಪಾರ ಅವಲಂಬನೆ ಏಕೆ ಅಪಾಯಕಾರಿ?

  • ಮೊದಲನೆಯದಾಗಿ, ಮೂರು ಸಾಮಾನ್ಯವಾದ ಪರಿಸ್ಥಿತಿಗಳನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಒಂದು, ಜಾಗತಿಕ ತೈಲ ದರಗಳು ಯಾವಾಗಲೂ ಏರುತ್ತಾ ಇಳಿಯುತ್ತಾ ಇರುತ್ತವೆ. ಜಾಗತಿಕ ತೈಲ ದರ ಹೆಚ್ಚಾದಾಗ, ನಮ್ಮ ಆಮದು ವೆಚ್ಚವೂ ಏರಿಕೆಯಾಗಿ, ನಾವು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ.

  • ಎರಡನೆಯದು, ಕೆಲವು ಬಾರಿ ತೈಲ ಲಭ್ಯವಿದ್ದರೂ ಅದು ನಮ್ಮನ್ನು ತಲುಪುವುದಿಲ್ಲ. ಹೊರ್ಮುಸ್ ಜಲಸಂಧಿಯಂತಹ ಕಿರಿದಾದ ಸಮುದ್ರ ಮಾರ್ಗದಲ್ಲಿ ಉದ್ವಿಗ್ನತೆ ಉಂಟಾದರೆ, ಆಗ ತೈಲ ಪೂರೈಕೆಗೆ ತಡೆ ಉಂಟಾಗಿ, ದರಗಳು ಇನ್ನೂ ಹೆಚ್ಚಾಗುತ್ತವೆ.

  • ಮೂರನೆಯದಾಗಿ, ಬೇರೆಲ್ಲೋ ಉಂಟಾಗುವ ಯುದ್ಧ ಮತ್ತು ವೈಷಮ್ಯಗಳು, ಅಂದರೆ ರಷ್ಯಾ - ಉಕ್ರೇನ್ ಕದನ ಅಥವಾ ಇಸ್ರೇಲ್ - ಇರಾನ್ ಯುದ್ಧಗಳು ಇಂಧನ ಸಾಗಾಟದ ಮೇಲೆ ಪರಿಣಾಮ ಬೀರುತ್ತವೆ. ಭಾರತ ಇದರಲ್ಲಿ ಯಾವುದೇ ಪಾತ್ರ ಹೊಂದಿರದಿದ್ದರೂ ಭಾರತದ ಮೇಲೆ ಇದರ ಪ್ರಭಾವ ಇರುತ್ತದೆ.

ಇಂತಹ ಮೂರು ಪ್ರಕರಣಗಳಲ್ಲೂ ನಮಗೆ ಸಿಗುವ ಫಲಿತಾಂಶ ಸಮಾನವಾಗಿರುತ್ತದೆ. ಅದೇನೆಂದರೆ, ದುಬಾರಿ ತೈಲ, ಹೆಚ್ಚಿನ ಅನಿಶ್ಚಿತತೆ, ಮತ್ತು ಅತ್ಯಂತ ಕನಿಷ್ಠ ಪ್ರಮಾಣದ ನಿಯಂತ್ರಣ. ಇದಕ್ಕೆ ಒಂದು ಶಾಶ್ವತ ಪರಿಹಾರ ಎಂದರೆ ನಮ್ಮದೇ ಸ್ವಂತ ತೈಲದ ಉತ್ಪಾದನೆ.

ಕೇಂದ್ರ ಸಚಿವ ಸಂಪುಟ ಅನುಮೋದಿಸಿರುವ ಭಾರತದ ಸಮುದ್ರ ಮಂಥನ ಎನ್ನುವ ಆಳ ಸಮುದ್ರ ಅನ್ವೇಷಣಾ ಯೋಜನೆಯ (ನ್ಯಾಷನಲ್ ಆಫ್ ಶೋರ್ ಎಕ್ಸ್‌ಪ್ಲೋರೇಶನ್ ಸ್ಕೀಮ್) ಹಿಂದಿರುವ ಆಲೋಚನೆಯೂ ಇದೇ ಆಗಿದೆ. ಇದೊಂದು ಕೇಂದ್ರ ವಲಯದ ಯೋಜನೆಯಾಗಿದೆ. ಅಂದರೆ, ಯೋಜನೆಯ ಸಂಪೂರ್ಣ ವೆಚ್ಚವನ್ನು ಸ್ವತಃ ಕೇಂದ್ರ ಸರ್ಕಾರವೇ ವಹಿಸಲಿದ್ದು, ಯೋಜನೆಯನ್ನು ತಾನೇ ಕಾರ್ಯರೂಪಕ್ಕೆ ತರುತ್ತದೆ. ಈ ಯೋಜನೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಡಿಯಲ್ಲಿ ಬರಲಿದ್ದು, ಇದಕ್ಕೆ 84,084 ಕೋಟಿ ರೂಪಾಯಿಗಳ ಬರೋಬ್ಬರಿ ಹೂಡಿಕೆ ಮಾಡಲಾಗಿದೆ. ಈ ಯೋಜನೆ 2030-31ರ ಹಣಕಾಸು ವರ್ಷದ ತನಕ ಕಾರ್ಯಾಚರಿಸಲಿದೆ.

ಈ ಯೋಜನೆಗೆ ಸುಂದರವಾದ ಹೆಸರನ್ನೂ ಆಯ್ಕೆ ಮಾಡಲಾಗಿದೆ. ನಮ್ಮ ಪುರಾಣಗಳಲ್ಲಿ, ಸಮುದ್ರ ಮಂಥನ ಎನ್ನುವುದು ಕ್ಷೀರ ಸಾಗರವನ್ನು ಕಡೆಯುವ ಪ್ರಕ್ರಿಯೆಯಾಗಿದೆ. ದೇವತೆಗಳು ಮತ್ತು ಅಸುರರು ಜೊತೆಯಾಗಿ ನಡೆಸಿದ ಈ ಪ್ರಕ್ರಿಯೆಯಲ್ಲಿ ಅಮೃತವೂ ಸೇರಿದಂತೆ ಹಲವಾರು ನಿಧಿಗಳು ಲಭಿಸಿದ್ದವು ಎನ್ನಲಾಗುತ್ತದೆ. ಈಗಲೂ ಇಂತಹದ್ದೇ ಒಂದು ಪ್ರಯತ್ನ ನಡೆಸಲಾಗುತ್ತಿದ್ದು, ಇದರಲ್ಲಿ ಲಭಿಸುವ ನಿಧಿ ಮಾತ್ರ ಪುರಾಣಕ್ಕಿಂತ ಭಿನ್ನವಾಗಿದೆ.

ಇಲ್ಲಿನ ನಿಧಿ ಸಮುದ್ರದ ನೆಲದಾಳದಲ್ಲಿ ಬಚ್ಚಿಟ್ಟುಕೊಂಡಿರುವ ತೈಲ ಮತ್ತು ಅನಿಲವಾಗಿದೆ. ಇದನ್ನು ಅರ್ಥ ಮಾಡಿಕೊಳ್ಳಲು ಒಂದು ಸಣ್ಣ ವಿವರಣೆ ನೆರವಾಗುತ್ತದೆ. ಇಲ್ಲಿ ಆನ್ ಶೋರ್ ಎಂದರೆ ಭೂಮಿಯ ಮೇಲೆ ಅಥವಾ ಕರಾವಳಿ ತೀರಕ್ಕೆ ಹತ್ತಿರದಲ್ಲಿ ನಡೆಸುವ ಕೆಲವಾಗಿದೆ. ಆದರೆ, ಆಫ್ ಶೋರ್ ಎಂದರೆ ಆಳ ಸಮುದ್ರದ ಒಳಗೆ ನಡೆಸುವ ಕೆಲಸವಾಗಿದ್ದು, ಇಲ್ಲಿ ಕೊರೆಯುವಿಕೆ ಸಮುದ್ರದ ತಳದಲ್ಲಿ ಅಥವಾ ಅದಕ್ಕೂ ಕೆಳಭಾಗದಲ್ಲಿ ನಡೆಯುತ್ತದೆ. ಈ ಯೋಜನೆ ಸಂಪೂರ್ಣವಾಗಿ ಆಫ್ ಶೋರ್ ಆಗಿದೆ. ಅಂದರೆ, ಭಾರತದ ಸುತ್ತಲಿನ ಆಳ ಸಮುದ್ರದಲ್ಲಿ ಕೊರೆಯುವಿಕೆ ನಡೆಯುತ್ತದೆ.

ಈ ಕಾರ್ಯವನ್ನು ಕೈಗೊಳ್ಳುವುದು ಹೇಗೆ? ವಿಜ್ಞಾನಿಗಳು ಮೊದಲಿಗೆ ಒಂದು ಬೃಹತ್ ಪ್ರಮಾಣದ ಸೀಸ್ಮಿಕ್ ಸರ್ವೆಗಳು ಮತ್ತು ಭೂವೈಜ್ಞಾನಿಕ ಮ್ಯಾಪಿಂಗ್ ನಡೆಸಲಿದ್ದಾರೆ. ಇದನ್ನು ಸರಳವಾಗಿ ವಿವರಿಸುವುದಾದರೆ, ಸಮುದ್ರದ ಕೆಳಗೆ ಭೂಮಿಯೊಳಗೆ ಶಬ್ದದ ಅಲೆಗಳನ್ನು ಕಳುಹಿಸಿ, ಅವು ಹೇಗೆ ಪ್ರತಿಫಲಿಸುತ್ತವೆ ಎನ್ನುವುದನ್ನು ಅಧ್ಯಯನ ಮಾಡುವುದು. ಇದು ನೆಲದಾಳದಲ್ಲಿ ಅವಿತಿರುವ ತೈಲ ಅಥವಾ ಅನಿಲವನ್ನು ತೋರಿಸುತ್ತದೆ. ಇದರ ಜೊತೆಗೆ, ಈಗಾಗಲೇ ಕಲೆ ಹಾಕಿರುವ ಅಪಾರ ಪ್ರಮಾಣದ ಭೂವೈಜ್ಞಾನಿಕ ಮಾಹಿತಿಗಳನ್ನು ಸಂಸ್ಕರಿಸಿ, ಅರ್ಥ ಮಾಡಿಕೊಳ್ಳಲಾಗುತ್ತದೆ.

ಇದರ ಆಧಾರದಲ್ಲಿ ತಜ್ಞರು ಕೊರೆಯಲು ಹೆಚ್ಚು ಸೂಕ್ತವಾದ ಸ್ಥಳಗಳನ್ನು ಆಯ್ಕೆ ಮಾಡುತ್ತಾರೆ. ಇದಾದ ಬಳಿಕ, ಆಳ ಸಮುದ್ರ ಮತ್ತು ಅತಿ ಆಳ ಸಮುದ್ರ ಅನ್ವೇಷಣಾ ಕೊರೆಯುವಿಕೆ ನಡೆಯುತ್ತದೆ. ಇದರೊಡನೆ, ಹಿಂದೆಂದೂ ಸಮರ್ಪಕವಾಗಿ ಅನ್ವೇಷಿಸಿರದ ಸಮುದ್ರ ಪ್ರದೇಶಗಳಲ್ಲೂ ಅನ್ವೇಷಣೆ ನಡೆಸಲಾಗುತ್ತದೆ. ಆದರೆ, ಇದು ಕೇವಲ ಅರ್ಧ ಕೆಲಸವನ್ನಷ್ಟೇ ನಡೆಸಿದಂತಾಗುತ್ತದೆ. ಒಂದು ಬಾರಿ ತೈಲ ಮತ್ತು ಅನಿಲವನ್ನು ಪತ್ತೆಹಚ್ಚಿದ ಬಳಿಕ, ಆಳ ಸಮುದ್ರ ತೈಲ ಉತ್ಪಾದನೆ ಮತ್ತು ಸಂಗ್ರಹಿಸುವ ಮೂಲಭೂತ ವ್ಯವಸ್ಥೆಗಳನ್ನು ನಿರ್ಮಿಸಲಾಗುತ್ತದೆ.

ಇದರಿಂದ, ಎಲ್ಲ ಕಂಪನಿಗಳೂ ತಮ್ಮ ಪೈಪ್‌ಲೈನ್ ಅಳವಡಿಸುವ ಬದಲು ಒಂದೇ ಸಾಮಾನ್ಯ ವ್ಯವಸ್ಥೆಯನ್ನು ಹೊಂದಲಾಗುತ್ತದೆ. ಈ ಪ್ರಯತ್ನವನ್ನು ಬೆಂಬಲಿಸಲು ಸಂಯೋಜಿತ ತೈಲ ಮತ್ತು ಅನಿಲ ಉತ್ಪಾದನೆ ಮತ್ತು ಸರ್ವಿಸ್ ವಲಯಗಳು ನಿರ್ಮಾಣಗೊಳ್ಳುತ್ತವೆ. ಈ ಸಂಪೂರ್ಣ ಕಾರ್ಯವನ್ನು ಯೋಜನೆ ಮತ್ತು ನಿರ್ವಹಣಾ ಡಿಜಿಟಲ್ ವ್ಯವಸ್ಥೆಯಡಿ ಗಮನಿಸಲಾಗುತ್ತದೆ. ಇದಕ್ಕಾಗಿ ಆಧುನಿಕ ತಂತ್ರಜ್ಞಾನ, ಕೌಶಲ್ಯ ತರಬೇತಿ ಹಾಗೂ ಅಂತಾರಾಷ್ಟ್ರೀಯ ಸಹಕಾರಕ್ಕೆ ಗಮನ ನೀಡಲಾಗುತ್ತದೆ. ಇದರ ಪರಿಣಾಮವಾಗಿ ನಾವು ಶೂನ್ಯದಿಂದ ಕೆಲಸ ಆರಂಭಿಸುವ ಬದಲು, ಜಾಗತಿಕ ತಜ್ಞರಿಂದಲೂ ಕಲಿಯಲು ಸಾಧ್ಯವಾಗುತ್ತದೆ.

ಇವೆಲ್ಲದರಿಂದ ನಮಗೆ ಏನು ಪ್ರಯೋಜನ ಲಭಿಸಲಿದೆ? ಸಮುದ್ರ ಮಂಥನ ಯೋಜನೆ ಭಾರತದ ಹೈಡ್ರೋಕಾರ್ಬನ್ ಸಂಗ್ರಹಕ್ಕೆ 600 ಮಿಲಿಯನ್ ಮೆಟ್ರಿಕ್ ಟನ್‌ಗೂ ಹೆಚ್ಚು ತೈಲವನ್ನು ಸೇರ್ಪಡೆಗೊಳಿಸುವ ಮಹತ್ವದ ಗುರಿಯನ್ನು ಹೊಂದಿದೆ. ದೇಶೀಯ ಉತ್ಪಾದನೆ ಹೆಚ್ಚಳವಾಗಿ, ಆಮದು ಅವಲಂಬನೆ ಕಡಿಮೆಯಾಗಿ, ದೀರ್ಘಾವಧಿಯಲ್ಲಿ ಇಂಧನ ಸ್ವಾವಲಂಬನೆ ಸುಧಾರಿಸಬೇಕು. ಹಾಗಾದಾಗ ನಾವು ಇಂಧನ ಭದ್ರತೆಯಲ್ಲಿ ನಮ್ಮ ಕಾಲ ಮೇಲೆ ನಿಲ್ಲಲು ಸಾಧ್ಯವಾಗುತ್ತದೆ ಎನ್ನುವುದು ಈ ಯೋಜನೆಯ ಗುರಿ. ಇಷ್ಟೊಂದು ಬೃಹತ್ ಪ್ರಮಾಣದ ಹೊಸ ಉದ್ಯಮ ಸಹಜವಾಗಿಯೇ ಭಾರೀ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯನ್ನೂ ಮಾಡುತ್ತದೆ.

ಇದು ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಯೋಜನೆಯಡಿ ದೇಶೀಯ ಉತ್ಪಾದನೆಯನ್ನೂ ಹೆಚ್ಚಿಸಿ, ಸಂಪೂರ್ಣ ತೈಲ ಮತ್ತು ಅನಿಲ ವ್ಯವಸ್ಥೆಗೆ ಹೂಡಿಕೆಯನ್ನು ಆಕರ್ಷಿಸಿ, ಭಾರತಕ್ಕೆ ಆಫ್ ಶೋರ್ ತಂತ್ರಜ್ಞಾನ ವೃದ್ಧಿಸಲು ಮತ್ತು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಒದಗಿಸಲು ನೆರವಾಗುತ್ತದೆ. ಇಲ್ಲಿ ಗಮನಿಸಬೇಕಾದ ಇನ್ನೂ ಒಂದು ಪ್ರಯೋಜನವೂ ಇದೆ. ಭಾರತದ ನೀಲಿ ಆರ್ಥಿಕತೆ, ಅಂದರೆ ಸಮುದ್ರದ ವಾತಾವರಣವನ್ನು ರಕ್ಷಿಸುತ್ತಲೇ, ಸಮುದ್ರ ಸಂಪನ್ಮೂಲಗಳನ್ನು ರಕ್ಷಿಸುವ ವ್ಯವಸ್ಥೆ ಇಲ್ಲಿಯ ತನಕ ಕೇವಲ ಮೀನುಗಾರಿಕೆ, ಬಂದರು ಮತ್ತು ಸಾಗಾಣಿಕಾ ವ್ಯವಸ್ಥೆಗೆ ಮಾತ್ರವೇ ಸೀಮಿತವಾಗಿತ್ತು. ಸುಸ್ಥಿರ ಆಫ್ ಶೋರ್ ಇಂಧನ ವ್ಯವಸ್ಥೆ ಈ ಸಾಮರ್ಥ್ಯವನ್ನು ಇನ್ನಷ್ಟು ವೃದ್ಧಿಸಲಿದೆ.

ಆದರೂ, ನಾವು ಈ ಯೋಜನೆಯ ಕಷ್ಟಗಳನ್ನೂ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ಆಳ ಸಮುದ್ರದ ಕೆಲಸಗಳಿಗೆ ಅತ್ಯಂತ ಹೆಚ್ಚಿನ ಬಂಡವಾಳ ಹೂಡಿಕೆ ಬೇಕಾಗುತ್ತದೆ. ಇಷ್ಟು ಅಪಾರ ಹಣವನ್ನು ಹೂಡಿಕೆ ಮಾಡಿದರೂ, ಸಾಕಷ್ಟು ತೈಲ ಮತ್ತು ಅನಿಲ ಸಿಗುತ್ತದೆ ಎನ್ನಲು ಖಾತ್ರಿಯಿಲ್ಲ. ಈ ಅನ್ವೇಷಣಾ ಆಪತ್ತೂ ಅಷ್ಟೇ ವಾಸ್ತವವಾಗಿದೆ. ಆದರೆ, ಈ ಪ್ರಮಾಣದ ಡ್ರಿಲ್ಲಿಂಗ್ ಪ್ರಕ್ರಿಯೆಗೆ ಬೇಕಾದ ಅತ್ಯಾಧುನಿಕ ತಂತ್ರಜ್ಞಾನಗಳು ಇನ್ನೂ ನಮ್ಮ ಬಳಿ ಇಲ್ಲ. ಆದ್ದರಿಂದ, ಆಧುನಿಕ ವಿದೇಶೀ ತಂತ್ರಜ್ಞಾನಗಳ ಮೇಲೆ ಅವಲಂಬಿಸುವುದು ಒಂದು ಅಡೆತಡೆಯಾಗಿದೆ. ಆದರೆ, ಮೊದಲ ಸಮೀಕ್ಷೆ ಮತ್ತು ಮೊದಲ ಬ್ಯಾರಲ್ ತೈಲ ಹೊರತೆಗೆಯುವುದರ ನಡುವೆ ಇರುವ ಸಮಯ ವರ್ಷಗಟ್ಟಲೆ ಕಾಲ ಹಿಡಿಯುತ್ತದೆ. ಇದಕ್ಕಾಗಿ ನೈಜ ವಾತಾವರಣದ ಕಳವಳಗಳಿವೆ. ಆಳ ಸಮುದ್ರದ ಕೊರೆಯುವಿಕೆ ತೈಲ ಹೊರಚೆಲ್ಲುವಿಕೆ ಮತ್ತು ಸಮುದ್ರದ ಪರಿಸರಕ್ಕೆ ತೊಂದರೆ ಉಂಟುಮಾಡುವ ಅಪಾಯಗಳೂ ಇವೆ.

ಸಮುದ್ರ ಮಂಥನ ಯೋಜನೆ ನಿಜಕ್ಕೂ ಒಂದು ದಿಟ್ಟವಾದ, ಅವಶ್ಯಕವಾದ ಯೋಜನೆ. ಪುರಾಣದ ಸಮುದ್ರ ಮಥನದ ಕಥೆಯಲ್ಲಿ ಸಾಕಷ್ಟು ತಾಳ್ಮೆಯಿಂದ ಕಾದ ಬಳಿಕವೇ ನೈಜ ನಿಧಿ ಲಭಿಸಿದ್ದರಿಂದ, ನಿರಂತರ ಪ್ರಯತ್ನ ಮತ್ತು ಯೋಜನೆಯ ನಡುವೆ ಉಂಟಾಗುವ ಯಾವುದೇ ಸಮಸ್ಯೆಯ ಜಾಗರೂಕ ನಿರ್ವಹಣೆ ಅತ್ಯಂತ ಮುಖ್ಯವಾಗಿದೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಂಪುಟ ವಿಸ್ತರಣೆಯಲ್ಲಿ ಬಿಗ್ ಟ್ವಿಸ್ಟ್: ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 19 ಶಾಸಕರು; ಕೊನೆ ಕ್ಷಣದಲ್ಲಿ ಒಬ್ಬರಿಗೆ ಕೊಕ್!

ಕಾಂಗ್ರೆಸ್‌ ಲೆಟರ್‌ಹೆಡ್‌ನಲ್ಲಿ ಸ್ಪೀಕರ್‌ ಹೆಸರು; ಮತ್ತೊಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ: ಸುರೇಶ್‌ ಕುಮಾರ್‌ ಕಿಡಿ

Bigg Boss ಖ್ಯಾತಿಯ Aravind KP- Divya uruduga ಬ್ರೇಕಪ್​!; ಜಾಲತಾಣದಲ್ಲಿ ಪರಸ್ಪರ Unfollow; ನಿಜವಾಯ್ತಾ ಜೋತಿಷ್ಯ?

ಸಚಿವ ಸ್ಥಾನ ಸಿಗದಿದ್ದಕ್ಕೆ ರಾಜೀನಾಮೆ ನಿರ್ಧಾರ ಪ್ರಕಟಿಸಿದ ಕಾಂಗ್ರೆಸ್ ಶಾಸಕರಿಗೆ ಹೈಕಮಾಂಡ್ ಬಿಗ್ ಶಾಕ್

ಆಂತರಿಕ ಅಸಮಾಧಾನ: ನೂತನ ಸಚಿವರ ಪದಗ್ರಹಣ ಕಾರ್ಯಕ್ರಮಕ್ಕೆ CM ಸಿಎಂ ಸಿದ್ದರಾಮಯ್ಯ ಗೈರಾಗಿದ್ದೇಕೆ?